ಅವಳು – ಅವನು

ಈಗಷ್ಟೇ ಮುಳುಗುತ್ತಿರುವ ಸೂರ್ಯ. ಜಿರಿ ಜಿರಿ ಸದ್ದು ಮಾಡುತ್ತಿರುವ ಜೀರುಂಡೆ ನಾದ. ಎನೋ ರಹಸ್ಯವನ್ನು ಬಚ್ಚಿಟ್ಟ ಹಾಗೆ ತನ್ನೊಳಗೆ ಮರುಗುತ್ತಿರುವ ಕಾಡು. ಹಾಳಾಗಿ ನಿಂತಿರುವ ಬಸ್ಸು. ಇಬ್ಬರೇ ಪ್ರಯಾಣಿಕರಾದ ನಾನು ಮತ್ತು ಅವನು. ನಿರಂಜನ, ೪ ವರ್ಷಗಳ ಕಾಲ ಅತೀ ಸನಿಹವಾಗಿದ್ದು, ಸುಳಿವಿಲ್ಲದೆ ದೂರವಾದ ಗೆಳೆಯ. ಕೆಲವೊಮ್ಮೆ ಅತಿಯಾಗಿ ಭಾವುಕ, ಹೆಚ್ಚಿನ ಸಲ ಕಲ್ಲು ಬಂಡೆಯಂತೆ ನಿಶ್ಚಲ. ಹೆಚ್ಚಾಗಿ ಪ್ರಬುದ್ಧ, ಕೆಲವೊಮ್ಮೆ ಆಶ್ಚರ್ಯ ಹುಟ್ಟಿಸುವಷ್ಟು ಎಳಸು. ಮುಂಗೋಪಿ, ತಣ್ಣಗಾದ ಮೇಲೆ ತಾನು ಆಡಿದ ಮಾತಿಗೆ ಮರುಗುವ ಪ್ರಾಣಿ. ಎಲ್ಲದರ ಬಗ್ಗೆಯೂ ಉಡಾಫೆ. ತಾನೇ ಸರಿ, ಉಳಿದದ್ದೆಲ್ಲವೂ ತಪ್ಪು ಎಂದೇ ನಂಬಿಕೊಂಡು ಬೆಳೆದವ. ಆದರೆ ನನ್ನೆಡೆಗೆ ಮಾತ್ರ ಅತಿಯಾದ ಕಾಳಜಿ. ಮೊದ ಮೊದಲು ಚಿಟ್ಟು ಹಿಡಿಯುವಷ್ಟು ಕಿರಿ ಕಿರಿಯಾದರು ಆಮೇಲೆ ಅನ್ನಿಸಿತ್ತು ತನ್ನೆಡೆಗಿನ ನಿಜವಾದ ಕಾಳಜಿ ಅದು ಅಂತ. ಬೇರೆ ಹುಡುಗಿಯರ ಬಗ್ಗೆ ಆತ ತೋರುತ್ತಿದ್ದ ನಿರ್ಲಕ್ಷ್ಯ ನನ್ನ ಮೇಲೆ ನನಗೆ ಇನ್ನು ಜಾಸ್ತಿ ಗೌರವ ಹುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ದೇವರನ್ನು ನಂಬದವರಂತೆ ನಟಿಸುತ್ತಿದ್ದ. ಕೈಯಲ್ಲಿ ಒಂದು ರುದ್ರಾಕ್ಷಿ ಮಣಿ ರಾಖಿಯ ಹಾಗೆ ಯಾವತ್ತು ನೇತಾಡುತ್ತಿತ್ತು. ದೇವರನ್ನು ನಂಬದವನು ಇದನ್ನ್ಯಾಕೆ ಹಾಕೋತ್ತಿಯ ಕೇಳಿದರೆ ಮತ್ತೆ ಉಡಾಫೆ. ನಿನಗೆ ಎಲ್ಲ ವಿಚಾರಿಸುವ ಅಧಿಕಾರವಿಲ್ಲ, ನನಗೆ ಎಲ್ಲ ಹೇಳಬೇಕಾದ ಅಗತ್ಯ ಇಲ್ಲ ಎಂದು. ಚುಚ್ಚೋಲ್ವ ಅದು ಕೇಳಿದರೆ, ಅದಕ್ಕೋಸ್ಕರನೇ ಹಾಕೊಳ್ಳುದು ಅನ್ನುವವನು. ಹೇಳಲಿಕ್ಕೆ ಮಾತ್ರ ೪ ವರ್ಷ ಜೊತೆಗಿದ್ದೇನ ನಾನು? ಆತ ನಿಜವಾಗಿ ಅರ್ಥವಾಗಿದ್ದನ ನನಗೆ. ತುಂಬಾ ಸಲ ಕೇಳಿಕೊಂಡಿದ್ದೇನೆ ನನ್ನನ್ನೇ. ಅರ್ಥವಾಗಿದ್ದರೆ ದೂರವಾಗಲು ತಾನು ಬಿಡುತ್ತಿದ್ದೇನ? ಅಹಂಕಾರ ಅಡ್ಡ ಬರುತ್ತಿತ್ತ ಆಗ? ಬಹುಶ ಇಲ್ಲ. ಅಹಂಕಾರ ಆತನಿಗೂ ಇದೆ. ಆತನು ಕೂಡ ಮತ್ತೆ ಮಾತಾಡಿಸಬಹುದಿತ್ತಲ್ಲವೇ. ಅಷ್ಟಕ್ಕೂ ನಮ್ಮಿಬ್ಬರ ಮಧ್ಯೆ ಇದ್ದದ್ದು ಏನು? ಸ್ನೇಹಾನ? ಅಥವ ಅದಕ್ಕಿಂತ ಜಾಸ್ತಿನ? ಆತ ಯಾವತ್ತು ಏನು ಹೇಳಿದವನನಲ್ಲ. ನಾನು ಕೂಡ ಏನು ಕೇಳಲು ಹೋಗಲಿಲ್ಲ. ಭಯ ಇತ್ತು ಅನ್ನಿಸುತ್ತದೆ ಇಬ್ಬರಿಗೂ. ದೂರವಾಗುವ ಭಯ. ಕೊನೆಗೆ ಆಗಿದ್ದು ಅದೇ. ಒಂದುವರೆ ವರ್ಷದ ನಂತರ ಇವತ್ತು ಮತ್ತೆ ಸಿಕ್ಕಿದ್ದಾನೆ ಅಚಾನಕ್ಕಾಗಿ. ಮಾತಾಡಿಸಲ.  ಕೇಳಿ ಬಿಡಲ  ಯಾಕೆ ದೂರ ಹೋದೆ ಅಂತ. ಇನ್ನು ಗೊಂದಲ.

T_Studio-20

………………………………………………………………..

ಯಾವತ್ತಿನ ಆಸೆ ನನಗೆ ಇದು. ಕಾಡಿನ ಮಧ್ಯ ಬಸ್ ಹಾಳಾಗಲಿ ಎಂದು. ಕಾಡಿನ ರಹಸ್ಯದ ಮಧ್ಯ ಅದು ಹೊರಡಿಸುವ ಸ್ವರಗಳ ಮಧ್ಯೆ ತಾನು ಕೂಡ ಒಂದಾಗಿ ಕೂರಬೇಕು ಸ್ವಲ್ಪ ಹೊತ್ತು. ಎಲ್ಲ ಮರೆತು. ಬೆಂಗಳೂರು, ಅಲ್ಲಿನ ಗಡಿಬಿಡಿತನ, ಗೊಂದಲ, ಆತಂಕ, ಸುಳ್ಳು ಸುಳ್ಳೇ ಖುಷಿಗಳು ಮತ್ತು ಆಕೆ. ಲಿಪಿ, ತುಂಬಾ ವರ್ಷಗಳ ಕಾಲ ಜೊತೆಗಿದ್ದು, ಬಹು ಬೇಗ ದೂರವಾದ ಗೆಳತಿ. ಕಾರಣ ತನ್ನ ಅಹಂಕಾರ, ಅಥವಾ ಆಕೆಯದ್ದೋ. ಒಟ್ಟಾರೆ ಕಾರಣ ಅಹಂಕಾರ. ನಗರದ ನಕಲಿ ಮುಖಗಳ ನಡುವೆ ಸಾಚ ಆಗಿ ತೋರಿದ ಏಕೈಕ ಹುಡುಗಿ ಆಕೆ. ಯಾವತ್ತು ಅನಿಸಿದ್ದೇ ಇಲ್ಲ ಆಕೆ ಸುಳ್ಳು ಅಂತ. ಇದ್ದದ್ದನ್ನ ಇದ್ದ ಹಾಗೆ ಹೇಳುವವಳು. ಬೇಕಾದಷ್ಟು ಸಲ ನನ್ನ ಇಗೋ ಹರ್ಟ್ ಮಾಡಿದವಳು. ಅದ್ಕೆ ಇಷ್ಟ ಆದ್ಲ . ಗೊತ್ತಿಲ್ಲ. ನನ್ನ ಮೆಚ್ಚಿಸಲಿಕ್ಕೆ ಏನು ಕೂಡ ಮಾಡಿದವಳಲ್ಲ.ಅವಳಾಯಿತು ಅವಳ ಕೆಲಸವಾಯಿತು ಅಂತ ಇದ್ದವಳು.

ಯಾಕೆ ದೂರವಾದದ್ದು ನಾವು? ನಾನೇ ಕಾರಣವ? ಯಾರೊಂದಿಗೂ attachment ಬೇಡ ಅಂತ ಇದ್ದವನು ನಾನು. ಇವಳು ಹತ್ತಿರವಾಗುತ್ತಿದ್ದಾಳೆ ಎಂದು ಭಯ ಕಾಡಿತೆ? ಅವಳನ್ನು ಮೆಚ್ಚಿಸಲು ನಾನು ಏನು ಅಲ್ಲವೋ ಅದು ಆಗುತ್ತಿದ್ದೇನೆ ಅನ್ನಿಸಿತೆ ಗೊತ್ತಿಲ್ಲ. ಮಾತು ಬಿಟ್ಟದ್ದು ನಾನೇ, ಅದನ್ನೇ ಮುಂದುವರೆಸಿದ್ದು ಅವಳು.

ಅಥವಾ ತನ್ನನ್ನು ಕಾಡಿದ್ದು ಅನುಮಾನವೇ. ತುಂಬಾ ನಿಯತ್ತಿನ ಹುಡುಗಿಯರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಅಂದುಕೊಂಡಿದ್ದ ನನ್ನ ತಪ್ಪು ಅಂತ ಅವಳು ತೋರಿಸಿ ಕೊಟ್ಟದ್ದಕ್ಕೆ ನನ್ನೊಳಗೆ ಆದ ಅವಮಾನವೇ. ಯಾರ ಜೊತೆಗೂ ಮಾತಾಡಲು ವಿಷಯವೇ ಇರುತ್ತಿರಲಿಲ್ಲ. ಅವಳ ಜೊತೆ ವಿಷಯಗಳು ಮುಗಿಯುವುದೇ ಇಲ್ಲವೇನೋ ಅನ್ನಿಸುತ್ತಿತ್ತು. ಇದೆಲ್ಲ ಪ್ರಶ್ನೆಗಳಿಂದ ದೂರವಾಗಲು ತೋರಿದ ಒಂದೇ ದಾರಿ ಆಕೆಯಿಂದ ದೂರವಾಗುವುದು. ಅದನ್ನೇ ಮಾಡಿದೆ. ಬಹುಶ ಅವಳಿಗೆ ಕೂಡ ಬೇಕಾಗಿತ್ತೇನೋ ಏಕಾಂತ. ಆದರೆ ತಾನು ನಿಜವಾಗಿ ದೂರವಾದೆ ಅನ್ನುವುದು ಶುದ್ದ ಸುಳ್ಳು. ಸಾಕು ಗೊಂದಲ. ಇವತ್ತು ಮತ್ತೆ ಮಾತಾಡಿಸುತ್ತೇನೆ. ತಾನು ಗಂಡಸು, ಅವಳು ಮೊದಲು ಮಾತನಾಡಲಿ ಎಂದು ಬಯಸುವುದು ತಪ್ಪು. ಕಷ್ಟ ಅನುಭವಿಸುತ್ತಿರುವುದು ಕೂಡ ನಾನೇ. ಸ್ವಾರ್ಥ ನನ್ನದೇ.

………………………………………………………………..

ನಿರಂಜನ ಲಿಪಿ, ಈಗ ದಂಪತಿಗಳು. ಮಗು ಬೇರೆ ಇದೆ. ಆದರೆ ಮೊದಲಿನ ಸಲಿಗೆ ಇಲ್ಲ. ಇಬ್ಬರು ಇಬ್ಬರಿಗೆ ಸಂಪೂರ್ಣ ಅರ್ಥವಾಗಿ ಹೋಗಿದ್ದಾರೆ. ಅವರ ಮಧ್ಯೆ ಆತಂಕ ಇಲ್ಲ, ರಹಸ್ಯಗಳು ಇಲ್ಲ, ನಿರೀಕ್ಷೆ ಇಲ್ಲ, ಜಗಳ ಇಲ್ಲ, ಪ್ರೀತಿ ಮೊದಲೇ ಇಲ್ಲ.ಇಬ್ಬರಿಗೂ ಏನೋ ಭ್ರಮೆ ನಿರಸನ ಆದಂತಿದೆ.ನಗರ ಜೀವನ ಎಲ್ಲ ನುಂಗಿ ಹಾಕಿದೆ. ಯಾರೋ ಬರೆದಿಟ್ಟ ಒಪ್ಪಂದದ ಥರ ಜೊತೆ ಜೊತೆಗೆ ದಿನ ಕಳೆಯುತ್ತಾರೆ. ಮಗುವಿನ ಭವಿಷ್ಯವೇ ತಮ್ಮ ಜೀವನದ ಏಕೈಕ ಗುರಿ ಎಂಬಂತೆ ಬದುಕುತ್ತಿದ್ದಾರೆ. ಮುಂದೆ ಮಗು ದೊಡ್ಡದಾಗಿ  ಅದರ ಹಾದಿ ಹಿಡಿದಾಗ ಅದೇ ಗೋಳು ಹಲುಬುತ್ತಾರೆ, ತಮ್ಮೆಲ್ಲ ಖುಷಿ, ಸಂತೋಷ  ಮರೆತು ಸಾಕಿದ್ದಕೆ ಈ ದಿನ ನೋಡಬೇಕಾಯಿತೆಂದು.ತಮ್ಮ ತಪ್ಪಿಗೆ ಮಗು ದೋಷಿ. ಮಗು ಕೂಡ ಗೊಂದಲಕ್ಕೆ ಸಿಕ್ಕ ಪ್ರಾಣಿಯಂತೆ ದಿನ ಸಾಗಿಸುತ್ತದೆ.

Tags:,
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)