ಹಾರಾಟ

(ಬರ್ಡ್ ಮ್ಯಾನ್ ಚಿತ್ರ ಮೂಡಿಸುವ ಅನುಭವ )

ತಂದೆ ಸಿಟ್ಟಿನಿಂದ ಆರ್ಭಟಿಸುತ್ತಾನೆ, “ಏನಿದು?”birdmanposter1.jpg.pagespeed.ce.wTnp8Z8zYDrZn8HRP5Ml
ಮಗಳು ಅಷ್ಟೇ ನಿರ್ವಿಣ್ಣವಾಗಿ ಉತ್ತರಿಸುತ್ತಾಳೆ “ಮಾದಕ ಡ್ರಗ್ಸ್”.
ಆಶ್ಚರ್ಯಭರಿತ ಸಿಟ್ಟಿನಿಂದ ಆತ ಮತ್ತೆ ಕಿರುಚುತ್ತಾನೆ “ಏನು ಮಾಡ್ತಾ ಇದ್ದೀಯ ಅಂತ ಗೊತ್ತಿದೆಯ ನಿಂಗೆ?”
ಆಕೆಯದ್ದು ಮತ್ತೆ ಅದೇ ಕುಹಕದ ಉತ್ತರ “ಮಂದ ದೃಷ್ಟಿಯಿಂದ ನನ್ನನ್ನು ರಕ್ಷಿಸಿಕೊಳ್ಳುತ್ತಾ ಇದ್ದೇನೆ.”
“ನನ್ನ ಜೊತೆ ನೀನು ಹೀಗೆ ಹೇಗೆ ವರ್ತಿಸಲು ಸಾಧ್ಯ?”
“ನಿನ್ನ ಜೊತೆ?”
“ಬಾಯ್ಮುಚ್ಚು, ನಿಂಗೆ ಗೊತ್ತಿದೆ ನಾನು ಯಾವ ವಿಚಾರವಾಗಿ ಮಾತಾಡ್ತಾ ಇದ್ದೇನೆ ಅಂತ.”
“ಹೌದು ಗೊತ್ತಿದೆ. ನೀನು ನಿನ್ನ ವಿಚಾರವಾಗಿಯೇ ಮಾತಾಡ್ತಾ ಇದ್ದೀಯ. ಇದರಲ್ಲಿ ಹೊಸತೇನಿದೆ?”
“ಇದೆಲ್ಲ ಮಾಡುವುದರ ಬಗ್ಗೆ ಕನಸು ಕೂಡ ಕಾಣಬೇಡ!”
“ಯಾವುದರ ಬಗ್ಗೆ ಕನಸು? ನೀನು ನನ್ನ ವಿಚಾರವಾಗಿ ಕೂಡ ಒಂದು ದಿನ ಮಾತಾಡ್ತೀಯ ಅಂತಾನ? ಅದು ಎಂದಿಗೂ
ಸಾಧ್ಯವಿಲ್ಲವೆಂದು ನಂಗೂ ಗೊತ್ತಿದೆ.” ಅಲಕ್ಷ್ಯದಿಂದ ಆಕೆ ದೃಷ್ಟಿ ಸರಿಸುತ್ತಾಳೆ.
“ನೋಡು, ಅರ್ಥ ಮಾಡ್ಕೋ, ನಾನು ಏನನ್ನೋ ಸಾಧಿಸಲು ಹೊರಟಿದ್ದೇನೆ…ತುಂಬಾ ಮಹತ್ವಪೂರ್ಣವಾದದ್ದು..”
“ಇದು ಮಹತ್ವಪೂರ್ಣವಾದದ್ದು ಅಲ್ಲ.”
“ನಿಂಗೆ ಅಲ್ಲದೇ ಇರಬಹುದು. ಆದರೆ ನಂಗೆ ಇದು ಮಹತ್ವಪೂರ್ಣವಾದದ್ದೇ. ನಿನಗೆ ಮತ್ತು ನಿನ್ನ ಸಿನಿಕ ಗೆಳೆಯರಿಗೆ ಸುಲಭವಾಗಿ ಚಿಟಿಕೆಯೊಳಗೆ ಸಿಗುವ ಪ್ರಚಾರವೇ ಮಹತ್ವದಿದ್ದಿರಬಹುದು. ಭವಿಷ್ಯಕಾಲ ನಿಮ್ಮನ್ನು ಗುರುತಿಸುವುದು, ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುವುದು ನಿಲ್ಲಿಸಿದ ಜನಾಂಗವೆಂದು. ಇದನ್ನ ನೆನಪಿಟ್ಟುಕೋ. ಆದರೆ ನನಗೆ.. ನನಗೆ
ಇದೇ ದೇವರು. ಇದೇ ಪರಮೋದ್ದೇಶ. ಏನಾದರು ಅರ್ಥಪೂರ್ಣವಾದದ್ದು ಮಾಡಲು ನನಗಿದು ಕೊನೆಯ ಅವಕಾಶ.”
“ಯಾರಿಗೆ ಅರ್ಥಪೂರ್ಣವಾದದ್ದು? ನಿನ್ನ ಆ ೩ನೆಯ ಕಾಮಿಕ್ಸ್ ಕಥೆಯ ಚಲನಚಿತ್ರ ಬರುವ ತನಕವೂ, ಹಕ್ಕಿಯ ವೇಷದ ಹಿಂದೆ ನಾಯಕನಾಗಿ ಯಾರಿದ್ದಾನೆ ಎಂದು ಜನಗಳು ಮರೆಯುವ ಮೊದಲು, ನಿನಗೂ ಕೂಡ ಗೌರವ, ಗುರುತುಗಳು ಇದ್ದವು. ನೀನು ಈಗ ಮಾಡುತ್ತಿರುವ ನಾಟಕ ೬೦ ವರ್ಷಗಳ ಹಿಂದಿನ ಕಥೆಯ ಮೇಲೆ ಆಧಾರಿತವಾಗಿರುವುದು. ಇದನ್ನು ಕೂಡ ಯಾರನ್ನು
ಮೆಚ್ಚಿಸಲು ಮಾಡುತ್ತಿದ್ದೀಯ? ನಾಟಕ ಮುಗಿದ ನಂತರ ಎಲ್ಲಿ ಕಾಫಿ ತಿಂಡಿ ಮಾಡುವುದು ಎನ್ನುವುದೇ ಮುಖ್ಯ ಉದ್ದೇಶವೆಂಬಂತೆ ಕುಳಿತುಕೊಳ್ಳುವ ೧೦೦೦ ಮುದಿ ಬಿಳಿ ಮುಖಗಳ ಹುಲು ಮಾನವರಿಗಾಗಿ. ನಿನಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಅವರ ಪ್ರಪಂಚದಲ್ಲಿ. ಅಪ್ಪ, ಸುಮ್ಮನೆ ಒಪ್ಪಿಕೊಂಡು ಬಿಡು, ನೀನು ಇದೆಲ್ಲ ಮಾಡುತ್ತಿರುವುದು ಕಲೆಯ ಸಲುವಾಗಿ ಖಂಡಿತ
ಅಲ್ಲ. ಇದೆಲ್ಲ, ಕಳೆದು ಹೋಗಿರುವ ನಿನ್ನ ಪ್ರಾಮುಖ್ಯತೆಯನ್ನು ಮರಳಿ ಪಡೆಯುವ ಪ್ರಯತ್ನ ಅಷ್ಟೇ. ಹೊರಗೆ ಒಂದು ದೊಡ್ಡ ಪ್ರಪಂಚವೇ ಇದೆ. ಅಲ್ಲಿ ನಿನ್ನ ಥರವೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿಕ್ಕೋಸ್ಕರ ಜನಗಳು ದಿನ ದಿನವೂ ಹೋರಾಡುತ್ತಿದ್ದಾರೆ, ಹೊಡೆದಾಡಿಕೊಳ್ಳುತ್ತಿದ್ದಾರೆ. ಯಾವ ಪ್ರಪಂಚವನ್ನು ನೀನು ಈ ರೀತಿಯಾಗಿ ನಿರ್ಲಕ್ಷಿಸುತ್ತಿದ್ದೀಯೋ, ಆ
ಪ್ರಪಂಚ ನಿನ್ನನ್ನು ಯಾವತ್ತೋ ನಿರ್ಲಕ್ಷಿಸಿಯಾಗಿದೆ. ಅಷ್ಟಕ್ಕೂ ಯಾರು ನೀನು? ಬ್ಲಾಗ್ ಬರೆಯುವವರನ್ನ ದ್ವೇಷಿಸುತ್ತೀಯ, ಟ್ವಿಟ್ಟರ್ ನ ಹೀಯಾಳಿಸುತ್ತೀಯ. ನಿನಗೊಂದು ಫೇಸ್ಬುಕ್ ಪೇಜ್ ಕೂಡ ಇಲ್ಲ. ಇಂದಿನ ಪ್ರಪಂಚದಲ್ಲಿ ನಿನ್ನ ಅಸ್ತಿತ್ವವೇ ಇಲ್ಲ. ಈ ನಾಟಕದ ಉಸ್ತುವಾರಿಯೆಲ್ಲ ಯಾಕೆಂದರೆ ನೀನು ಸಾವಿನಷ್ಟು ಹೆದರಿದ್ದೀಯ, ನಮ್ಮೆಲ್ಲರಂತೆ. ಪ್ರಾಮುಖ್ಯತೆ ಕಳೆದುಕೊಳ್ಳುವ
ಭಯ ನಿನಗೆ. ಈ ದೆಸೆಯಲ್ಲಿ ನೀನು ಯೋಚಿಸಿರುವುದು ಸರಿಯಾಗಿಯೇ ಇದೆ. ನಿಜವಾಗಿ ಕೂಡ ಇಂದಿನ ಜಗತ್ತಿನಲ್ಲಿ ಪ್ರಾಮುಖ್ಯತೆ ಕಳೆದುಕೊಂಡಿದ್ದೀಯ ನೀನು. ಅದನ್ನು ಅರ್ಥ ಮಾಡಿಕೊಂಡು, ಅದರೊಂದಿಗೆ ಬದುಕುವುದನ್ನು ಕಲಿಯುವುದೊಂದೇ ನಿನಗುಳಿದಿರುವ ದಾರಿ.”

———————————————————————————

ಆತ ಸುಮಾರು ೫೦ ರ ಮಧ್ಯವಯಸ್ಕ. ದಶಕಗಳ ಹಿಂದೆ ಬರ್ಡ್ ಮ್ಯಾನ್ ಎಂಬ ಕಾಮಿಕ್ಸ್ ಕಥೆ ಆಧಾರಿತ ಸೂಪರ್ ಹೀರೋ ಚಲನಚಿತ್ರ ಸರಣಿಗಳಲ್ಲಿ ಸ್ವತಃ ಬರ್ಡ್ ಮ್ಯಾನ್ ಆಗಿ ನಟಿಸಿ ಮನೆಮಾತಾದವ. ಆದರೆ ಮುಂದಿನ ದಿನಗಳಲ್ಲಿ ಹೊಸ ಅಲೆಗೆ, ಹೊಸ ತಲೆಮಾರಿಗೆ ಆತ ಸಂಪೂರ್ಣವಾಗಿ ಅಪ್ರಸ್ತುತನೆನಿಸಿ ಬಿಡುತ್ತಾನೆ. ಈಗ ಜನ ಆತನನ್ನು ಕೇವಲ ಬರ್ಡ್ ಮ್ಯಾನ್
ಹೀರೋ ಅಂದು ಮಾತ್ರ ಗುರುತಿಸುತ್ತಾರೆ. ಆ ಗುರುತಿಸುವಿಕೆಯಲ್ಲೂ ಜನರಿಗೆ ತನ್ನೆಡೆಗಿರುವ ತೆಳುವಾದ ಕುಹಕವನ್ನು ಆತ ಭ್ರಮಿಸುತ್ತಾನೆ. ಬರ್ಡ್ ಮ್ಯಾನ್ ವೇಷದ ಹಿಂದಿದ್ದ ತನ್ನಲ್ಲಿದ್ದ ಪ್ರತಿಭೆಯನ್ನು ಜನ ಗುರುತಿಸಲಿಲ್ಲವೆಂದೂ, ತನ್ನನ್ನು ಒಬ್ಬ ಕಲಾವಿದನೆಂದು ಪರಿಗಣಿಸಲಿಲ್ಲವೆಂದೂ ಒಳಗೊಳಗೇ ಕೊರಗುತ್ತಾನೆ. ಇದೇ ಕೊರಗನ್ನು, ಕೊರತೆಯನ್ನು ನೀಗಿಸಲೆಂದು; ತನ್ನ
ಅಸ್ತಿತ್ವವನ್ನು, ತನ್ನ ಪ್ರಸ್ತುತತೆಯನ್ನು, ತನ್ನೊಳಗಿರುವ ಕಲೆಯನ್ನು ಸಾಬೀತು ಪಡಿಸಲೆಂದು ೬೦ ವರ್ಷಗಳ ಹಿಂದೆ ತನ್ನ ಮೆಚ್ಚಿನ ಲೇಖಕ ಬರೆದ ಒಂದು ನಾಟಕವನ್ನು ನಿರ್ದೇಶಿಸಿ, ಅದರಲ್ಲಿ ನಟಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ಈ ಪ್ರಕ್ರಿಯೆಯ ಉದ್ದಕ್ಕೂ, ಯೌವ್ವನದ ಮಾನಸಿಕ ಖಿನ್ನತೆಯಿಂದ ಆಗಷ್ಟೇ ಹೊರಬರುತ್ತಿರುವ ತನ್ನದೇ ಮಗಳಿಂದ ಛೀಮಾರಿ
ಹಾಕಿಸಿಕೊಳ್ಳುತ್ತಾನೆ. ಸಹಕಲಾವಿದನ ಅಸಡ್ಡೆಗೆ, ಯಾವತ್ತೋ ಬಿಟ್ಟುಹೋದ ಹೆಂಡತಿಯ ಕರುಣೆಗೆ, ನಾಟಕ ವಿಮರ್ಶಕಿಯ ದ್ವೇಷಕ್ಕೆ ಗುರಿಯಾಗುತ್ತಾನೆ. ತನ್ನದೇ ಮನಸ್ಸಿನ ದ್ವಂದ್ವದ ರೂಪದಂತೆ ಆಗಾಗ ಪ್ರತ್ಯಕ್ಷವಾಗುವ ಬರ್ಡ್ ಮ್ಯಾನ್ ಆಕೃತಿಯ ಮಾತುಗಳಿಂದ ಮತ್ತಷ್ಟು ಗೊಂದಲಕ್ಕೀಡಾಗುತ್ತಾನೆ. ಆದರೂ ಎಲ್ಲವನ್ನೂ ಮೀರಿ, ಗುರಿಯ ಮೂಲ ಉದ್ದೇಶವನ್ನೇ ಮರೆತು,
ಯಾವುದೋ ಹಠ ಸಾಧನೆಗೆ ಎಂಬಂತೆ, ಮರೆತ ಗುರಿಯೆಡೆಗೆ ಮುನ್ನುಗ್ಗುತ್ತಾನೆ.

———————————————————————————

ಮಧ್ಯವಯಸ್ಸಿನಲ್ಲಿ ಖಿನ್ನತೆ ಎಲ್ಲರನ್ನೂ ನಿಜವಾಗಿಯೂ ಕಾಡುತ್ತದೆಯೇ? ಮೊದಲ ಹತ್ತು ವರ್ಷಗಳು ಬಾಲ್ಯದ ಚೇಷ್ಟೆಗಳಲ್ಲಿ, ನಂತರದ ಹತ್ತು ವರ್ಷಗಳು ಹರೆಯದ ತಲ್ಲಣದಲ್ಲಿ, ಮುಂದಿನ ಹತ್ತು ಹದಿನೈದು ವರ್ಷ ಸಂಸಾರ ಕಟ್ಟುವುದರಲ್ಲಿ, ಆಮೇಲೆ ಮಕ್ಕಳ ಭವಿಷ್ಯ ರೂಪಿಸುವುದರಲ್ಲೇ ಕಳೆದು ೪೫, ೫೦ ರ ಹೊಸ್ತಿಲಲ್ಲಿ ಇರುವಾಗ ಒಂದು ತೆರನಾದ ಭಯ
ಆವರಿಸಿಕೊಳ್ಳುತ್ತದೆಯೇ? ಭೂತ ಕಾಲದಲ್ಲಿ ಮಾಡಿದ ಸಾಧನೆಗಳು, ಮಾಡಲು ಸಾಧ್ಯವಿದ್ದು ಕೂಡ ಉಳಿದು ಹೋದ ಕೆಲಸಗಳು, ಮಾಡಿದ ತಪ್ಪುಗಳು, ಮುರಿದ ಸಂಬಂಧಗಳು, lonelymanಕಳೆದುಕೊಂಡದ್ದು, ಉಳಿದುಕೊಂಡದ್ದೆಲ್ಲ ಒಮ್ಮೆಲೇ ಎದುರಿಗೆ ಬಂದು ಮನಸ್ಸನ್ನು ಸ್ವಅವಲೋಕನೆಗೆ ಹಚ್ಚುತ್ತವೆಯೇ? ಭವಿಷ್ಯದ ಅನಿರ್ದಿಷ್ಟತೆ, ಒಗ್ಗಿಕೊಳ್ಳಲು ಕಷ್ಟವಾಗುತ್ತ ಬರುವ ಅತಿ ವೇಗದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ, ಅಷ್ಟೇ ವೇಗದಲ್ಲಿ ಯಾಂತ್ರಿಕವಾಗುವ ಜೀವನ ಆತಂಕ ಮೂಡಿಸುತ್ತದೆಯೋ ಅಥವಾ ಕಳೆದ ಅರ್ಧ ಆಯಸ್ಸು ಜೀವನದ ನಶ್ವರತೆಯನ್ನು ಸಾಬೀತುಪಡಿಸಿ ಮನಸ್ಸನ್ನು ವೈರಾಗ್ಯದ ಕಡೆ ಸೆಳೆಯುತ್ತದೆಯೋ? ತಾನೇ ಕಲಿಸಿದ, ಈಗ ತಾನು ನಿವೃತ್ತಿಯಾಗುವಾಗ ಪಡೆಯುತ್ತಿರುವ ಸಂಬಳಕ್ಕಿಂತ ಜಾಸ್ತಿ ಸಂಪಾದಿಸುತ್ತಿರುವ ಹಾಗೂ ತನ್ನನ್ನು ಯಾವತ್ತೋ ಮರೆತಂತಿರುವ ಹುಡುಗನನ್ನು ನೋಡಿದಾಗ ಒಬ್ಬ ಪ್ರೈಮರಿ ಶಾಲೆ ಮಾಸ್ತರರ ಮನಸ್ಸು ಏನು ಯೋಚಿಸುತ್ತದೆ? ತನ್ನದೇ ಆಟೋದಲ್ಲಿ ಪ್ರಯಾಣಿಸಿ, ಹಣ ಕೊಡುವಾಗ ಸಂಶಯದಿಂದ ಅಸಹ್ಯ ದೃಷ್ಟಿ ಬೀರುವ ಮಗಳ ಪ್ರಾಯದ, ಅರ್ಹತೆಗಿಂದ ಜಾಸ್ತಿ ಸಂಪಾದಿಸುವ ಹುಡುಗಿಯ ವರ್ತನೆ ಬಕ್ಕ ತಲೆಯ ಡ್ರೈವರ್ ಮೇಲೆ ಯಾವ ಪ್ರಭಾವ ಬೀರುತ್ತದೆ? ಜೀವಮಾನವಿಡೀ ಗುಮಾಸ್ತನಾಗಿ ದುಡಿದು, ಗುಮಾಸ್ತನಾಗಿಯೇ ನಿವೃತ್ತಿ ಹೊಂದುವ ಮನುಷ್ಯ, ಯಾವುದೋ ಕಾಲದಿಂದ ಬಸ್ ಸ್ಟಾಂಡ್ ಪಕ್ಕದ ಚಿಕ್ಕ ಅಂಗಡಿಯಲ್ಲಿ ಪೇಪರ್, ಬಾಳೆಹಣ್ಣು, ಬಿಸ್ಕಿಟ್, ನೀರು ಮಾರುವ ಬಿಳಿಗಡ್ಡದ ಅಜ್ಜ ಇವರೆಲ್ಲರಿಗೂ ಅಸಾರ್ಥಕತೆಯ ಭಾವ ಕಾಡುತ್ತದೆಯೇ? ಅಷ್ಟಕ್ಕೂ ಸಾರ್ಥಕತೆ, ಸಾಧನೆ ಮತ್ತು ಸಂಪಾದನೆಗಳ ನಡುವಿನ ಗೆರೆ ಎಂಥದ್ದು? ಸಾರ್ಥಕತೆ ಪಡೆಯಲು ಏನಾದರೂ ಸಾಧಿಸುವುದು ಅಷ್ಟೊಂದು ಅವಶ್ಯಕವೇ? ಸಂಪಾದನೆಯನ್ನೇ ಸಾಧನೆ ಎನ್ನಬಹುದೇ? ಧನ ಸಂಪಾದನೆಗೂ ಹೊರತಾದ ವಿಧ ವಿಧವಾದ ಸಂಪಾದನೆಗಳನ್ನು ಅರಿತಾಗಲೇ ಸಾಧನೆಯ ವಿಧಗಳು ಬದಲಾಗುತ್ತವೆ, ಅಂತೆಯೇ ಸಾರ್ಥಕತೆ ಕೂಡ. ಬದುಕಿರುವ ಕೆಲ ವರ್ಷಗಳ ಕಾಲ ನಿಜವಾಗಿ ಬದುಕನ್ನು ಕಲಿತು, ನಾಳೆ ಮಾಡಬೇಕಾಗಿರುವ ಸಾಧನೆಯ ಚಿಂತೆಯನ್ನು ಬದಿಗಿಟ್ಟು, ಇಂದಿನ ಸಂತೋಷಕ್ಕಾಗಿ ಬದುಕುವುದರಲ್ಲೇ ಸಾರ್ಥಕತೆ ಇರಬಹುದೇ?

———————————————————————————

ನಾಟಕಕ್ಕೆ ಹೇಗಾದರೂ ಮಾಡಿ ಪ್ರಸಿದ್ಧಿ ತರಲೇ ಬೇಕೆಂದು ನಿರ್ಧರಿಸುವ ಆತ, ಕೊನೆಯ ದೃಶ್ಯದಲ್ಲಿ ತನ್ನ ಮೂಗಿಗೇ ಅಸಲಿ ಗುಂಡು ಹೊಡೆದುಕೊಂಡು, ಪ್ರೇಕ್ಷಕರ ಅಚ್ಚರಿಯ ಚಪ್ಪಾಳೆಯ ಧ್ವನಿ ಕೇಳಿಸಿಕೊಳ್ಳುತ್ತ ಪ್ರಜ್ಞೆ ತಪ್ಪುತ್ತಾನೆ. ಪ್ರಜ್ಞೆ ಮತ್ತೆ ವಾಪಾಸಾದಾಗ ಆಸ್ಪತ್ರೆಯಲ್ಲಿ ಮಲಗಿರುವ ಆತನ ಮುಖಕ್ಕೆ ಹಚ್ಚಿದ ಬ್ಯಾಂಡೇಜ್ ನಡುವಿನಿಂದ, ಹೂ ಗೊಂಚಲು ಹಿಡಿದುಕೊಂಡಿರುವ ಮಗಳನ್ನು ನೋಡುತ್ತಾನೆ. ಟೇಬಲ್ ಮೇಲೆ ಆಗಷ್ಟೇ ನಾಟಕ ನಿರ್ಮಾಪಕ ತಂದು ಇಟ್ಟಿದ್ದ, ನಾಟಕದ ಬಗ್ಗೆ ಅತ್ಯುತ್ತಮ ವಿಮರ್ಶೆ ಪ್ರಕಟಗೊಂಡಿರುವ ಹೆಸರಾಂತ ದಿನಪತ್ರಿಕೆ ಬಿದ್ದಿರುತ್ತದೆ. ಹೇಗೆ ರಾತ್ರಿ ಬೆಳಗಾಗುವುದರೊಳಗೆ ಅವಳೇ ನಿರ್ಮಿಸಿದ ತಂದೆಯ ಟ್ವಿಟ್ಟರ್ ಖಾತೆಗೆ ಸಾವಿರಾರು ಹಿಂಬಾಲಕರು ಸೇರ್ಪಡೆಯಾಗಿದ್ದಾರೆ ಎಂದು ಮಗಳು ತಂದೆಗೆ ಖುಷಿಯಿಂದ
ವಿವರಿಸುತ್ತಾಳೆ. ಆಕೆ ತಂದ ಹೂವಿನ ಪರಿಮಳ ತನಗೀಗ ಬರುತ್ತಿಲ್ಲವೆಂದು ಹೇಳಿ ಆತ ನಿರ್ಲಿಪ್ತ ಭಾವದಿಂದ ನಗುತ್ತಾನೆ. ಆಕೆ, ಅವನ ಹಣೆಗೊಂದು ಮುತ್ತಿಟ್ಟು ಕೋಣೆಯಿಂದ ಹೊರ ನಡೆಯುತ್ತಾಳೆ. ಕಷ್ಟ ಪಟ್ಟು ಹಾಸಿಗೆಯಿಂದ ಎದ್ದು ಬಾತ್ ರೂಮ್ ನ ಕಡೆ ಹೆಜ್ಜೆ ಹಾಕಿ, ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡು, ಹಾಕಿದ್ದ ಬ್ಯಾಂಡೇಜ್ ಬಿಚ್ಚುವ ಆತ ಹೊಸ ಮೂಗು ಜೋಡಿಸಿರುವುದನ್ನು ನಿರ್ಭಾವುಕನಾಗಿ ನೋಡುತ್ತಾನೆ. ತನ್ನದೇ ದ್ವಂದ್ವವಾದ ಬರ್ಡ್ ಮ್ಯಾನ್ ಆಕೃತಿ ಕೂಡ ಅಲ್ಲೇ ತೋರುತ್ತದೆ. ಆದರೆ ಈ ಬಾರಿ ಬರ್ಡ್ ಮ್ಯಾನ್ ಮತ್ತು ಈತ ಯಾವುದೇ ಮಾತನಾಡದೆ ಮುಖ ನೋಡಿಕೊಳ್ಳುತ್ತಾರೆ. ಯಾವುದೋ ಸ್ವತಂತ್ರ ಭಾವದಿಂದ ಹೊರ ಬಂದ ಆತ, ಮೇಜಿನ ಮೇಲೆ ಹಾರುತ್ತಿರುವ ತನ್ನ ನಾಟಕದ ಪ್ರಶಂಸೆಯ ವಿಮರ್ಶೆಯ ಮೇಲೆ ಆಗ ತಾನೇ ಮಗಳು ಪ್ರೀತಿಯಿಂದ ಕೊಟ್ಟು ಹೋದ ಹೂ ಗುಚ್ಛವನ್ನಿರಿಸಿ, ಕೋಣೆಯ ಕಿಟಕಿಯೆಡೆಗೆ ನಡೆಯುತ್ತಾನೆ. freebirdಕಿಟಕಿಯ ಬಾಗಿಲು ತೆರೆದು ಹೊರ ನೋಡಿದವನಿಗೆ, ನೀಲ ಶುಭ್ರ ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರುವ ಪಕ್ಷಿಗಳು ತೋರುತ್ತವೆ. ಹಾಗೆಯೇ ಮೈ ಮರೆತು, ಆ ಪಕ್ಷಿಗಳ ನಡುವೆ ತಾನು ಕೂಡ ಹಾರಾಡುವ ಹಂಬಲವೇನೋ ಎಂಬಂತೆ ಆತ ಆ ಬಹುಮಹಡಿ ಆಸ್ಪತ್ರೆಯ ಕಟ್ಟಡದ ಕಿಟಕಿಯಿಂದ ಹೊರ ಕಾಲಿಡುತ್ತಾನೆ.

ಸ್ವಲ್ಪ ಸಮಯದ ನಂತರ ಕೋಣೆಯೊಳಗೆ ಮತ್ತೆ ಪ್ರವೇಶ ಮಾಡುವ ಆತನ ಮಗಳು, ತಂದೆಯ ಸುಳಿವಿಲ್ಲದ್ದನ್ನು ತಿಳಿದು, ಕೊಣೆಯಿಡೀ ಹುಡುಕಾಡಿ, ಕಿಟಕಿ ಬಾಗಿಲು ತೆರೆದಿರುವುದನ್ನು ನೋಡುತ್ತಾಳೆ. ಕ್ಷಣ ಮಾತ್ರದಲ್ಲಿ ಏನೋ ಅರಿತಂತಾಗಿ, ಕಿಟಕಿಯಿಂದ ಆಕಾಶ ನೋಡಿದವಳ ಮುಖದಲ್ಲಿ ತನ್ನ ತಂದೆ, ಮನಸ್ಸಿನ ಎಲ್ಲ ಜಂಜಾಟ, ತೊಳಲಾಟಗಳಿಂದ ಸ್ವತಂತ್ರನಾದ ಅನುಭವ ಗೋಚರಿಸುತ್ತದೆ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)