Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ದೇವಿ : ಭಾಗ ೧ - ಬೀಣೆ ಚೀಲ

ದೇವಿ : ಭಾಗ ೧

ಸುಮಾರು ೧೫ ಕಿಲೋ ಮೀಟರಿನಷ್ಟು ವಿಶಾಲವಾಗಿ ಹಬ್ಬಿರುವ ಬೆಳ್ಯಾಡಿಯ ಜನಸಂಖ್ಯೆ ಹೇಳಿಕೊಳ್ಳುವಷ್ಟಿಲ್ಲವಾದರೂ, ಇರುವ ಕೆಲವೇ ಮನೆಗಳ ಜನ ಸಮೂಹ, ಹಲವು ವರ್ಗಗಳಾಗಿ ವಿಂಗಡಣೆಗೊಂಡಿವೆ. ಮೇಲಿಂದ ನೋಡಿದಾಗ ತೋರುವುದು ಒಂದು ಊರಿನ ಜನಸಂಖ್ಯೆಯ ಬಹುಪಾಲನ್ನು ಹಂಚಿಕೊಂಡಿರುವ ಬ್ರಾಹ್ಮಣ ವರ್ಗ, ಇನ್ನೊಂದು ಬ್ರಾಹ್ಮಣೇತರ ವರ್ಗ. ಆದರೆ ಬ್ರಾಹ್ಮಣ ವರ್ಗದಲ್ಲಿರುವ ಒಗ್ಗಟ್ಟು ಬ್ರಾಹ್ಮಣೇತರ ವರ್ಗದಲ್ಲಿಲ್ಲ. ಕಾರಣ ಬ್ರಾಹ್ಮಣೇತರ ವರ್ಗವು ತಮ್ಮ ಅಂತಸ್ತಿಗೆ ಅನುಗುಣವಾಗಿ, ತಮ್ಮೊಳಗೇ ಹಲವು ಉಪವರ್ಗಗಳಾಗಿ ವಿಂಗಡಣೆಗೊಂಡು ತಮ್ಮ ತಮ್ಮೊಳಗೇ ಮೇಲು ಕೆಳಗೆನ್ನುವ ಹಲವು ಸ್ಥರಗಳಾಗಿ ಮಾನಸಿಕ ವಿಭಜನೆ ಹೊಂದಿದವುಗಳಾಗಿವೆ.

ಬೆಳ್ಯಾಡಿಯ ಊರುದೇವರಾದ ವಿಷ್ಣುಮೂರ್ತಿಯು ಪ್ರಶ್ನಾತೀತವಾಗಿ ಇಲ್ಲಿನ ಎಲ್ಲ ವರ್ಗಗಳ ಆರಾಧ್ಯ ದೈವ. ಹಾಗೆಯೇ ವಿಷ್ಣುಮೂರ್ತಿಯನ್ನು ಪೂಜಿಸುವ ಬ್ರಾಹ್ಮಣ ವರ್ಗ, ದೇವರ ಮತ್ತು ಸಾಮಾನ್ಯ ವರ್ಗದ ಕೊಂಡಿಯೆಂಬ  ಭಾವನೆ ಮೂಡಿಸಿಕೊಂಡು, ನಂಬಿಕೆ ಹಬ್ಬಿಸಿಕೊಂಡು ಸಮಾಜದಲ್ಲಿ ಉಚ್ಚ ಸ್ಥಾನದ ಗೌರವ, ಸೌಕರ್ಯಗಳನ್ನು ಅನುಭವಿಸುತ್ತಾ ಬಂದಿದೆ. ಆದರೆ ಬದಲಾಗುತ್ತಿರುವ ಸಮಯದ ಜೊತೆ ನಿಧಾನವಾಗಿ ವರ್ಗಗಳ ನಡುವಿನ ಬಿರುಸಾದ ಅಂತರ ಕಡಿಮೆಯಾಗುತ್ತ ಬಂದರೂ ಅದು ಪೂರ್ಣವಾಗಿ ಮಾಸಿಲ್ಲ.

ಹೀಗಿರುವ ಊರಿನಲ್ಲಿ ನಮ್ಮ ಕಥಾನಾಯಕಿ ದುಗ್ಗಿ ಸುಮಾರು ೪೫ ವರ್ಷದ ಸಣ್ಣ ಆಕಾರದ, ಕಪ್ಪು ಬಣ್ಣದ, ಉಬ್ಬು ಹಲ್ಲಿನ, ಸಣಕಲು ಶರೀರದ, ಸ್ವಂತ ವ್ಯಕ್ತಿತ್ವವೇ ಮರೆತು ಹೋದಂತಿರುವ, ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಅತೀ ಕೆಳ ಸ್ಥರದಲ್ಲಿ ಗುರುತಿಸಲ್ಪಡುವ ಒಬ್ಬ ಸಾಮಾನ್ಯ ಮಹಿಳೆ. ಆಕೆ ಜೀವನ ಸಾಗಿಸುತ್ತಿರುವುದು ಬೆಳ್ಯಾಡಿಯ ಜಮೀನ್ದಾರ ಮನೆತನದ ಶಂಭು Devi2ಶೆಟ್ಟಿಯವರ ಮನೆ ಕೆಲಸದ ಆಳಾಗಿ. ದುಡಿಯುವುದು ಆಕೆಗೆ ಅನಿವಾರ್ಯವಾಗಿರುವುದು ಆಕೆಯ ಮಹಾ ಕುಡುಕ ಗಂಡ ಸೀನನಿಂದಾಗಿ. ಆಕೆಯ ಹಲವು ಹರಕೆಗಳ ನಂತರ ಆಕೆ ನಂಬಿರುವಂತೆ ವಿಷ್ಣುಮೂರ್ತಿ ದೇವರು ಆಕೆಗೆ ಕರುಣಿಸಿದ ಮಗಳು ಸುಗುಣ. ಸುಗುಣಳನ್ನು ಹಾಗು ಸೀನನನ್ನು ಸಾಕುವ ಜವಾಬ್ದಾರಿ ಆಕೆಯ ಮೇಲೆಯೇ ಸಂಪೂರ್ಣವಾಗಿ ನಿಂತಿದೆ. ಸುಗುಣ ಪ್ರಾಯಕ್ಕೆ ಬಂದು ನಿಂತಿರುವ, ತಕ್ಕ ಮಟ್ಟಿಗೆ ಸುಂದರವಾಗಿರುವ ಹೆಣ್ಣುಮಗಳು. ತಾಯಿಗೆ ಸಹಾಯವಾಗಲೆಂದು ಆಕೆಯು ಕೂಡ ಮನೆಯಲ್ಲಿ ಬೀಡಿ ಕಟ್ಟಿ ಅಷ್ಟಿಷ್ಟು ಸಂಪಾದಿಸುತ್ತಾಳೆ. ಶಂಭು ಶೆಟ್ಟರು ಸುಗುಣಳನ್ನು ಕೂಡ ತನ್ನ ಮನೆ ಕೆಲಸದಾಳಾಗಿ ನೇಮಿಸುವ ಸಲುವಾಗಿ, ಒಳ್ಳೆಯ ಸಂಬಳದ ಆಮಿಷ ತೋರಿಸಿದರೂ ದುಗ್ಗಿ, ಏನೇನೋ ಸುಳ್ಳು ನೆಪ ಹೇಳಿ, ಸುಗುಣಳನ್ನು ಶೆಟ್ಟರ ಮನೆಯಿಂದ ದೂರವೇ ಇರುವಂತೆ ನಿಗಾ ವಹಿಸಿದ್ದಳು.

ದುಗ್ಗಿ, ಸುಗುಣ ಹಾಗೂ ಸೀನ ವಾಸವಾಗಿರುವ ಮನೆಗಿಂತ ಶಂಭು ಶೆಟ್ಟರ ಮನೆಯ ದನದ ಹಟ್ಟಿ ಸುಸ್ಥಿತಿಯಲ್ಲಿದೆ. ಮಣ್ಣಿನ ಗೋಡೆಯ, ಹುಲ್ಲಿನ ಮಾಡಿನ ಮನೆಯಲ್ಲಿ ರಾತ್ರಿ ಮಲಗಿರುವಾಗ ಮೈ ಮುಖದ ಮೇಲೆ ಏನೋ ಹರಿದಾಡಿದಂತಾಗಿ ಕಿಟಾರನೆ ಕಿರುಚಿ, ಕನಸೇನೋ ಎಂದು ತಮಗೆ ತಾವೇ ಸಮಾಧಾನಿಸಿಕೊಳ್ಳುವುದು ಸುಗುಣ ಹಾಗು ದುಗ್ಗಿಗೆ ಕರಗತವಾಗಿದೆ. ಇನ್ನು ಸೀನ ಕಂಠಪೂರ್ತಿ ಕುಡಿದು, ರಸ್ತೆ ಅಳೆದು ಮನೆ ಸೇರಿ ಮಲಗಿದವನನ್ನು ನೋಡಿದರೆ ಸತ್ತೇ ಹೋದನೇನೋ ಎಂಬಂತೆ ದುಗ್ಗಿಗೆ ಆತಂಕವೂ, ಎಲ್ಲೋ ಮನಸ್ಸಿನ ಮೂಲೆಯಲ್ಲಿ ಆನಂದವೂ  ಆಗಿ ಬೆಳಗಾದಾಗ ಆತನ ಹಸಿದ ಹಳಸಿದ ಮುಖ ನೋಡಿ ಶಪಿಸುತ್ತ ಗಂಜಿ ಬೇಯಿಸಿ ಶೆಟ್ಟರ ಮನೆಗೆ ಕೆಲಸಕ್ಕೆ ನಡೆಯುವುದು ದುಗ್ಗಿಯ ದಿನಚರಿ.

ಸುಗುಣನನ್ನು ಶೆಟ್ಟರ ಮನೆ ಹತ್ತಿರ ಸುಳಿಯದಂತೆ ನೋಡಿಕೊಳ್ಳುವುದಕ್ಕೆ ದುಗ್ಗಿಗೆ ಕಾರಣವಿಲ್ಲವೆಂದಲ್ಲ. ಶಂಭು ಶೆಟ್ಟರು ಊರಿನ ಪ್ರಮುಖರಲ್ಲಿ ಗುರುತಿಸಲ್ಪಡುವವರು. ಸಹಾಯ ಕೇಳಿ ಅವರಲ್ಲಿಗೆ ಹೋದವರು ಬರಿಗೈಯ್ಯಲ್ಲಿ ಮರಳಿದ್ದು ವಿರಳ. ಮುಂದಿನ ಪಂಚಾಯತ್ ಚುನಾವಣೆಗೆ ಕೂಡ ಅವರನ್ನು ಕಣಕ್ಕಿಳಿಸಲು ಹಲವು ಪಕ್ಷಗಳು ಹಾತೊರೆಯುತ್ತಿವೆ. ಆದರೆ ಎಲ್ಲ ನರಮಾನವರಿಗಿರುವಂತೆ ಶೆಟ್ಟರಿಗೆ ಕೂಡ ಕೆಲವು ದೌರ್ಬಲ್ಯಗಳಿವೆ. ಮುಖ್ಯವಾದದ್ದು ಹೆಂಗಸರ ಚಪಲ ಎಂಬುದು ಊರಲ್ಲೆಲ್ಲ ಗುಲ್ಲು. ಯಾರಿಗೂ ಬಾಯಿ ಬಿಟ್ಟು ಹೇಳಲು ಧೈರ್ಯ ಸಾಲದು. ಶೆಟ್ಟರ ವೈರಿಗಳೇ ಇದನ್ನು ಹುಟ್ಟುಹಾಕಿದ್ದೋ ಅಥವಾ ನಿಜ ವಿಷಯವೋ ಎಂಬುದು ಯಾರಿಗೂ ಗೊತ್ತಿಲ್ಲ. ಕಳೆದ ಬಾರಿ ವಿಷ್ಣುಮೂರ್ತಿ ದೇವರ ಜಾತ್ರೆಯಲ್ಲಿ, ಗುಲಾಬಿ, ಶೆಟ್ಟರನ್ನು ನೋಡಿ ನಕ್ಕ ರೀತಿ, ಅದಕ್ಕೆ ಶೆಟ್ಟರು ಪ್ರತಿಕ್ರಿಯಿಸಿದ ರೀತಿಯನ್ನು ಬಹುಶ: ದುಗ್ಗಿಯನ್ನು ಹೊರತು ಪಡಿಸಿ ಬೇರೆ ಯಾರೂ ಗಮನಿಸಿರಲಿಕ್ಕಿಲ್ಲ. ಗುಲಾಬಿ ಎಂಬವಳು ಇತ್ತೀಚೆಗಷ್ಟೇ ಮುಂಬೈಯಿಂದ ಬೆಳ್ಯಾಡಿಗೆ ಬಂದು ನೆಲೆಸಿದವಳು. ಹೆಸರಿಗೊಬ್ಬ ಗಂಡನಿದ್ದರೂ, ಊರವರಿಗೆಲ್ಲ ಆಕೆಯ ಮೇಲೆ ಇಲ್ಲ ಸಲ್ಲದ ಗುಮಾನಿಗಳಿವೆ. ಒಟ್ಟಾರೆ ದುಗ್ಗಿಯಂತೂ ಶೆಟ್ಟರ ಚಾರಿತ್ರ್ಯವನ್ನು ಹೀಗೀಗೆ ಅಳೆದು ಬಿಟ್ಟಿದ್ದಾಳೆ.

ಇನ್ನು ಶೆಟ್ಟರ ಹೆಂಡತಿ ಕಾವೇರಮ್ಮನ ಬಗ್ಗೆ ಹೇಳುವುದಾದರೆ, ಆಕೆಯೇನು ದುಗ್ಗಿಯ ಮೇಲೆ ಕರುಣೆ ತೋರಿಸುವ ಜಾತಿಯವಳಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮೆ ಆಕೆ ತನ್ನ ಸ್ವಭಾವಕ್ಕೆ ವಿರುದ್ಧವಾಗಿ ದುಗ್ಗಿಗೆ ಸಹಾಯ ಮಾಡಿದ್ದನ್ನು ಬಿಟ್ಟರೆ ಕೊಡುವ ಸಂಬಳ ಪೂರ್ತಿ ವಸೂಲಿಯಾಗುವಷ್ಟು ಕೆಲಸ ದುಗ್ಗಿಯಿಂದ ಮಾಡಿಸಿಕೊಳ್ಳುತ್ತಾರೆ. ಬೆಳಗ್ಗೆ ಬಂಗಲೆಯಂತಿರುವ ಮನೆಯ ಕಸ ಗುಡಿಸಿ ಒರೆಸಿ, ಹಿಂದಿನ ದಿನದ ಪಾತ್ರೆಯೆಲ್ಲ ತೊಳೆದು, ಅಂಗಳ ಗುಡಿಸಿ, ಹಟ್ಟಿ ತೊಳೆದು, ಸಗಣಿ ಹೊತ್ತು ಗೊಬ್ಬರ ಗುಂಡಿಗೆ ಹಾಕುವುದು, ಹಾಲು ಕರೆಯುವುದು, ಶೆಟ್ಟರ ಮನೆಗೆ ಬೇಕಾದಷ್ಟು ಹಾಲನ್ನು ತೆಗೆದಿಟ್ಟು ಉಳಿದದ್ದಕ್ಕೆ ಸ್ವಲ್ಪ ನೀರು ಬೆರೆಸಿ ಡೈರಿಗೆ ಹೋಗಿ ಕೊಟ್ಟು ಬರುವುದು, ದನ ಕರುಗಳನ್ನು ಬಯಲಿಗೆ ಅಟ್ಟಿಕೊಂಡು ಹೋಗಿ, ಹುಲ್ಲು ಹರಿದುಕೊಂಡು ಮನೆಗೆ ವಾಪಾಸಾಗಿ ಬಂದು ಕುಳಿತು ನೀರು ಕುಡಿಯುವಾಗ ದುಗ್ಗಿ ಅರ್ಧ ಜೀವವಾಗಿರುತ್ತಾಳೆ. ಹೀಗೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಬೇಗ ಬಂದರೆ ಮಧ್ಯಾಹ್ನ ಊಟ ತಯಾರಿಗೆಂದು ಕಾವೇರಮ್ಮನ ಜೊತೆ ದುಗ್ಗಿಯು ಕೂಡಾ ಕೈ ಜೋಡಿಸಬೇಕು. ಮನೆಯವರೆಲ್ಲರ ಊಟವಾಗುವ ತನಕ ದುಗ್ಗಿ ಹಟ್ಟಿಯ ಪಕ್ಕವೇ ನೆರಳಲ್ಲಿ ಕೂತು ಕಾಯಬೇಕು. ಸುಮಾರು ಮಧ್ಯಾಹ್ನ ೩ ಗಂಟೆಯ ಸಮಯದ ಹೊತ್ತಿಗೆ ಕಾವೇರಮ್ಮ ದುಗ್ಗಿಗೆ ಊಟ ಹಾಕಿ ಮನೆ ಕಳುಹಿಸಿ ಕೊಡುತ್ತಾರೆ. ಮನೆಗೆ ಬಂದು ಕೂಡ ಆಕೆಗೆ ಸುಖವೆಂದೇನಿಲ್ಲ. ಸಂಜೆ ಮನೆಯವರ ಸ್ನಾನಕ್ಕೆ ಬಿಸಿನೀರು ಕಾಯಿಸಲು ಸೌದೆ ಹೆಕ್ಕಲು ಮತ್ತೆ ಹಾಡಿಯ ಕಡೆಗೆ ಆಕೆ ಹೋಗಬೇಕು. ಸುಗುಣ ಬೀಡಿ ಕಟ್ಟುವುದು, ತನಗೂ ಅಪ್ಪನಿಗೂ ಮಧ್ಯಾಹ್ನ ಊಟ ಸಿದ್ಧಪಡಿಸುವುದು ಬಿಟ್ಟರೆ ಮತ್ತೇನನ್ನೂ ಮಾಡಳು. ದುಗ್ಗಿಯ ಗಂಡನಂತೂ ಹಗಲೆಲ್ಲ ಊರ ಯಾವುದೋ ಕಟ್ಟೆಯೋ ಅಥವಾ ಅಂಗಡಿಯ ಮುಂದೋ ನಿಂತು ಕಾಡು ಹರಟೆ ಹೊಡೆಯುವುದನ್ನು ಬಿಟ್ಟಿನ್ನೇನೂ ಮಾಡ. ಸಂಜೆಯ ನಂತರ ಆತ ಸಿಗುವುದು ಬೆಳ್ಯಾಡಿಯ ಅಂಚಿನಲ್ಲಿರುವ ಶೇಂದಿ ಅಂಗಡಿಯಲ್ಲೇ.

ಕಾವೇರಮ್ಮನ ತವರು ಮನೆ ಕಾರ್ಕಳ ಸಮೀಪದ ನಂದಳಿಕೆ ಎಂಬ ಊರು. ಮದುವೆಯಾದಾವಾಗಿನಿಂದ ಶೆಟ್ಟರು ನಂದಳಿಕೆಯ ಸಿರಿ ಜಾತ್ರೆ ಮತ್ತು ಆಯನೋತ್ಸವವನ್ನು ತಪ್ಪಿಸಿಕೊಂಡವರಲ್ಲ. ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷ ನಡೆಯುವ ಸಿರಿಜಾತ್ರೆಗೆ ಶೆಟ್ಟರು ಕಾವೇರಮ್ಮನ ಸಮೇತ ಹೋಗಿ ದೇವರ ಆಶೀರ್ವಾದ ಪಡೆದುಕೊಂಡು ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ದುಗ್ಗಿಗೆ ಸಿರಿ ಜಾತ್ರೆಯ ಬಗ್ಗೆ ಅದೇನೋ ಕುತೂಹಲ. ಆಕೆ ಸಿರಿ ಜಾತ್ರೆಯ ಬಗ್ಗೆ ಬಹಳ ಕೇಳಿದ್ದಾಳೆ. ಜಾತ್ರೆಯ ರಾತ್ರಿ ನಡೆಯುವ ಸಿರಿ ದರ್ಶನದಲ್ಲಿ ಆಸು ಪಾಸಿನ ಊರಿನ ಹೆಂಗಸರ ಮೈ ಮೇಲೆ ಸಿರಿ ದೈವದ ದರ್ಶನ ಬರುವುದರ ಬಗ್ಗೆ ಆಕೆ ಕಾವೇರಮ್ಮನ ಬಾಯಿಯಿಂದ ವರ್ಣರಂಜಿತವಾಗಿ ಕೇಳಿಸಿಕೊಂಡು ಮನಸ್ಸಿನಲ್ಲಿಯೇ ಭಯ ಭಕ್ತಿಯಿಂದ ನಮಿಸಿದ್ದಾಳೆ. ತಾನೂ ಕೂಡಾ ಎಂದಾದರೊಮ್ಮೆ ಕಣ್ಣಾರೆ ಅದನ್ನ ನೋಡಬೇಕೆಂಬುದು ಆಕೆಯ ಬಹುದಿನದ ಆಸೆ.

ಹೀಗೊಂದು ಸಾಮಾನ್ಯವಾದ ದಿನ ಆಕೆಯ ಆಸೆಯ ವಿಷಯ ದೇವರಿಗೆ ತಿಳಿಯಿತೇನೋ ಎಂಬಂತೆ ಕಾವೇರಮ್ಮ, ನಂದಳಿಕೆ ಜಾತ್ರೆಗೆ ಮುಂದಿನ ವಾರ ಹೊರಡುತ್ತಿರುವುದಾಗಿಯೂ, ಈ ಬಾರಿ ವಿಶೇಷ ಪೂಜೆಯನ್ನು ಮಾಡುವುದಾಗಿ ತಾವು ಹರಕೆಯನ್ನು ಹೊತ್ತಿರುವುದಾಗಿಯೂ ಅದರ ಸಲುವಾಗಿ ಸಾಮಾನು ಸರಂಜಾಮು ವ್ಯವಸ್ಥೆ ಮಾಡಲು ದುಗ್ಗಿಯ ಸಹಾಯ ಬೇಕಾಗುವುದರಿಂದ ಆಕೆಯನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುವುದಾಗಿಯೂ ತಿಳಿಸಿದರು. ದುಗ್ಗಿಯ ಆನಂದಕ್ಕೆ ಪಾರವಿಲ್ಲದಂತಾಗಿ  ಮುಂದೊಂದು ವಾರ ಕಾವೇರಮ್ಮನ ಮನೆಯಲ್ಲಿ ಅತೀ ಉತ್ಸಾಹದಿಂದ ಹೆಚ್ಚಿನ ಸಮಯ ದುಡಿದಳು. ಅಂತೂ ಇಂತೂ ಜಾತ್ರೆಗೆ ಹೊರಡುವ ದಿನ ದುಗ್ಗಿ ಮುಂಜಾವಿಗೆನೇ ಕಾವೇರಮ್ಮನ ಮನೆಗೆ ಇದ್ದುದರಲ್ಲಿ ಹೊಸ ಸೀರೆ ಉಟ್ಟು, ಶೆಟ್ಟರ ಮನೆಯಲ್ಲಿ ಕೆಲಸಗಳನ್ನೆಲ್ಲ ಮುಗಿಸಿ, ಸೂರ್ಯೋದಯದ ಸಮಯದಲ್ಲಿ ಸಂಭ್ರಮದಿಂದಲೇ ಶಂಭು ಶೆಟ್ಟರ ಜೀಪಿನ ಕೊನೆಯ ಸೀಟಿನಲ್ಲಿ ಸಾಮಾನು ಸರಂಜಾಮುಗಳ ಜೊತೆಯಲ್ಲಿ ಒಂದಾಗಿ ನಂದಳಿಕೆಯ ಕಡೆಗೆ ಪ್ರಯಾಣ ಬೆಳೆಸಿದಳು. ಇನ್ನೇನು ನಂದಳಿಕೆ ಸಮೀಪದಲ್ಲಿದೆ ಎನ್ನುವಾಗ ಶೆಟ್ಟರ ಜೀಪ್ ಗುಟರ್ ಗುಟರ್ ಎನ್ನುತ್ತಾ ಕಾಡು ದಾರಿ ಮಧ್ಯದಲ್ಲೇ ನಿಂತು ಬಿಟ್ಟಿತು. ಎಲ್ಲಿ ಮಧ್ಯಾಹ್ನದ ಸೇವಾ ಪೂಜೆ ತಪ್ಪುವುದೋ ಎಂಬ ಗಾಬರಿಯಿಂದ ಕಾವೇರಮ್ಮ ಬಡಬಡಿಸ ತೊಡಗಿದರು. ಬೆಳ ಬೆಳಗ್ಗೆ ಯಾವ ಶನಿಯ ಮುಖದರ್ಶನವಾಯಿತೋ ಎಂದು ವಟಗುಟ್ಟುತ್ತಾ ದುಗ್ಗಿಯ ಮುಖವನ್ನೊಮ್ಮೆ ಕೆಕ್ಕರಿಸಿ ನೋಡಿದರು. ಕಾವೇರಮ್ಮನ ರಗಳೆ ತಡೆಯಲಾಗದೇ ದಾರಿಯಲ್ಲೇ ಹೋಗುತ್ತಿದ್ದ ಎತ್ತಿನಗಾಡಿಯನ್ನು ಅಡ್ಡ ಹಾಕಿ, ಗಾಡಿಯವನ ಸಹಾಯದಿಂದ ಜೀಪನ್ನು ರಸ್ತೆಯ ಬದಿಗೆಳೆದು, ಸೇವಾ ಪೂಜೆಗೆ ತುರ್ತಾಗಿ ಅಗತ್ಯವಿರುವ ಸಾಮಾನುಗಳನ್ನು ಮಾತ್ರ ಗಾಡಿಗೆ ತುಂಬಿಸಿ, ದೇವಸ್ಥಾನ ತಲುಪಿದ ಕೂಡಲೇ ಜೀಪಿನ ರಿಪೇರಿಗೆ ಯಾರನ್ನಾದರೂ ಕಳುಹಿಸಿವುದಾಗಿಯೂ, ಅಲ್ಲಿಯ ತನಕ ದುಗ್ಗಿ ಜೀಪಿನಲ್ಲೆ ಕುಳಿತು ಕಾಯಬೇಕಾಗಿಯೂ ಆದೇಶಿಸಿ ಕಾವೇರಮ್ಮನ ಜೊತೆ ಶೆಟ್ಟರು ಗಾಡಿ ಹತ್ತಿ ನಂದಳಿಕೆಗೆ ಹೊರಟೇಬಿಟ್ಟರು.

ಆಗೊಮ್ಮೆ ಈಗೊಮ್ಮೆ ಹೋಗುವ ಒಂದೊಂದು ಗಾಡಿ ಬಿಟ್ಟರೆ ಆ ರಸ್ತೆಯಲ್ಲಿ ಜನ ಸಂಚಾರ ಕಡಿಮೆಯೇ. ಒಂದೆರಡು ಗಂಟೆಗಳ ನಂತರ ದುಗ್ಗಿಗೆ ಜೀಪಿನಲ್ಲಿ ಕುಳಿತು ಬೇಸರವೆನಿಸತೊಡಗಿತು. ಸೂರ್ಯ ಆಗಲೇ ನೆತ್ತಿಯ ಮೇಲೇರಾಗಿತ್ತು. ಬೆಳಗ್ಗೆ ಅತಿ ಉತ್ಸಾಹದಿಂದ ಖಾಲಿ ಹೊಟ್ಟೆಯಲ್ಲೇ ಹೊರಟು ಬಂದ ಸಿಟ್ಟಿನಿಂದ ಹಸಿವು ಆಗಲೇ ದುಗ್ಗಿಯ ಮೇಲೆ ಸೇಡು ತೀರಿಸಕೊಳ್ಳತೊಡಗಿತು. ಜೀಪಿಡೀ ತಡಕಾಡಿದರೂ ತಿನ್ನಲು, ಕುಡಿಯಲು ಏನು ಉಳಿಸದೆ ಹೊರಟು ಹೋದ ಶೆಟ್ಟರು ಹಾಗೂ ಕಾವೇರಮ್ಮನ ಮೇಲೆ ದುಗ್ಗಿಗೆ ಸಿಟ್ಟು ನೆತ್ತಿಗೇರಿತು. ಹಸಿವು, ಕೋಪ, ಬಿಸಿಲಿನ ತಾಪ ಎಲ್ಲ ಜೊತೆಗೂಡಿ  ಜೀಪಿನೊಳಗೆ ಕುಳಿತ ದುಗ್ಗಿಗೆ ಹತ್ತಿದ ನಿದ್ರೆಯಿಂದ ಎಚ್ಚರವಾದದ್ದು ಜೀಪಿನ ರಿಪೇರಿಗೆಂದು ಬಂದ ಇಬ್ಬರು ಜನ ಮಾಡುತ್ತಿದ್ದ ಶಬ್ದದಿಂದಾಗಿಯೇ. ಅಂತೂ ಇಂತೂ ಸೂರ್ಯ ಮುಳುಗುವ ವೇಳೆಗೆ ಜೀಪು ರಿಪೇರಿಯಾಗಿ ಬಂದ ಇಬ್ಬರು ಮಂದಿ ಅದನ್ನು ಚಲಾಯಿಸಿಕೊಂಡು ಬಂದು ದುಗ್ಗಿಯನ್ನು ನಂದಳಿಕೆ ದೇವಸ್ಥಾನಕ್ಕೆ ಬಂದು ಇಳಿಸಿದರು.

ಹಸಿವೆ ಬಾಯಾರಿಕೆಯಿಂದ ಬಳಲಿ ಹೋದ ದುಗ್ಗಿಯನ್ನು ವಿಚಾರಿಸುವ ಗೋಜಿಗೆ ಕೂಡ ಕಾವೇರಮ್ಮನಾಗಲೀ ಶೆಟ್ಟರಾಗಲೀ ಹೋಗಲಿಲ್ಲ. ಬದಲಿಗೆ ಜೀಪಿನಲ್ಲಿ ಉಳಿದಿರುವ ಸಾಮಾನುಗಳನ್ನು ದೇವಸ್ಥಾನದ ಪಕ್ಕದ ಕೋಣೆಗೆ ಸಾಗಿಸುವಂತೆ ದುಗ್ಗಿಗೆ ಆಜ್ಞಾಪಿಸಿ ಇಬ್ಬರು ಕೂಡ ತಮ್ಮ ತಮ್ಮ ಕೆಲಸಗಳಲ್ಲಿಯೇ ಮಗ್ನರಾದರು. ಸಾಮಾನುಗಳನ್ನೆಲ್ಲ ವಿಲೇವಾರಿ ಮಾಡಿ ಅಲ್ಲೇ ಒಂದು ಚೊಂಬು ನೀರು ಕುಡಿದು ಗೋಡೆಗೊರಗಿದ ದುಗ್ಗಿಗೆ ಮತ್ತೆ ನಿದ್ರೆ ಮಂಪರು ಹತ್ತಿತು. ಮತ್ತೆ ಎಚ್ಚರವಾಗಿದ್ದು ವಾಲಗದ ಭೀಕರ ಶಬ್ದ ಕಿವಿಗಪ್ಪಳಿಸಿದಾಗಲೇ.

photo courtesy: Udupitoday.com೫ ಶತಮಾನಗಳ ಹಿಂದೆ ಪತಿಯ ಅನೈತಿಕ ಸಂಬಂಧವನ್ನು ವಿರೋಧಿಸಿ ಎರಡನೆ ಮದುವೆಯಾಗಿ ಅನಾಥ ಮಗುವನ್ನು ಸಲಹಿದ ಸಿರಿ ನಂದಳಿಕೆಯಲ್ಲಿ ಆರಾಧ್ಯ ದೈವ. ಸಿರಿಯ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಗಳ ಭೂತಗಳು ನೆರೆದ ಕೆಲ ಹೆಂಗಸರ ಹಾಗೂ ಗಂಡಸರ ಮೈ ಮೇಲೆ ಬಂದು ಚಂಡೆ ವಾಲಗದ ಶಬ್ದಗಳ ನಡುವೆ ರೌದ್ರ ವಾತಾವರಣದಲ್ಲಿ ಕೈಯಲ್ಲಿ ಸಿಂಗಾರದ ಹೂವನ್ನು ಹಿಡಿದು ಅದನ್ನು ಪದೇ ಪದೇ ಮುಖಕ್ಕೆ ಉಜ್ಜಿಕೊಳ್ಳುತ್ತ ತಮ್ಮ ತಮ್ಮಲ್ಲೇ ಸಂಭಾಷಣೆ ನಡೆಸುತ್ತಾ, ನಿಧಾನಕ್ಕೆ ಕಂಪಿಸುತ್ತ ಹೆಜ್ಜೆ ಹಾಕುತ್ತ ಕುಣಿಯುವುದು ಇಲ್ಲಿನ ಸಿರಿಜಾತ್ರೆಯ ಸಂಪ್ರದಾಯ.
ನಿದ್ರೆಯ ಜೋಂಪಿನಲ್ಲಿದ್ದ ದುಗ್ಗಿಯನ್ನು ಬಡಿದೆಬ್ಬಿಸಿದ್ದು ಕೂಡ ಇದೇ ವಾಲಗದ ಶಬ್ದ. ಆಗಷ್ಟೇ ಕೆಲ ಪುರುಷರು ಹಾಗೂ ಮಹಿಳೆಯರು ಸಿಂಗಾರದ ಹೂವನ್ನು ಉಜ್ಜಿಕೊಳ್ಳುತ್ತ ದೈವವನ್ನು ತಮ್ಮ ಮೇಲೆ ಆಹ್ವಾನಿಸಿಕೊಳ್ಳುತ್ತಾ ಆವೇಶದಿಂದ ಕುಣಿಯಲು ಶುರು ಮಾಡಿದ್ದರು. ದಡಬಡನೆ ಎದ್ದ ದುಗ್ಗಿ ಓಡಿ ಹೋಗಿ, ನಡೆಯುತ್ತಿರುವ ದೃಶ್ಯವನ್ನು ನೋಡಲು ನೆರೆದಿದ್ದ ಜನರ ಮಧ್ಯ ಹೋಗಿ ಸೇರಿಕೊಂಡಳು.

ಅಚಾನಕ್ಕಾಗಿ ಇಡೀ ದಿನ ಏನು ತಿನ್ನದಿದ್ದುರಿಂದ ಭುಗಿಲೆದ್ದಿದ್ದ ಹಸಿವು, ದಣಿವು, ಅಸಾಮಾನ್ಯ ವಾಲಗದ ಶಬ್ದ, ಸಿಂಗಾರ ಹೂವಿನ ಪರಿಮಳ ಎಲ್ಲ ಜೊತೆಗೂಡಿ, ದುಗ್ಗಿಗೆ ತಲೆ ಸುತ್ತಿದಂತಾಗಿ, ಅರೆ ಪ್ರಜ್ನ ಸ್ಥಿತಿಯಲ್ಲಿ, ಕಣ್ಣು ಗುಡ್ಡೆಗಳನ್ನು ಮೇಲೆ ಮಾಡಿಕೊಂಡು ತಾನೂ  ಕೂಡ ನಿಧಾನಕ್ಕೆ ತಾಳಕ್ಕೆ ಸರಿಯಾಗಿ ಎಂಬಂತೆ ಹೆಜ್ಜೆ ಹಾಕ ತೊಡಗಿದಳು. ಗುಂಪಿನಲ್ಲಿದ್ದ ಯಾರೋ ಆಕೆಯನ್ನು ಜನರ ಮಧ್ಯದಿಂದ ಎಳೆದು ಆಗಲೇ ಆವೇಶದಿಂದ ಕುಣಿಯುತ್ತಿದ್ದ ಹೆಂಗಸರ ನಡುವೆ ತಂದು ನಿಲ್ಲಿಸಿ ಆಕೆಯ ಕೈಗೂ ಒಂದು ಗೊಂಚಲು ಸಿಂಗಾರದ ಹೂವನ್ನಿತ್ತರು. ಅತ್ತಿತ್ತ ಕುಣಿಯುತ್ತಿದ್ದ ಹೆಂಗಸರನ್ನು ನೋಡಿಕೊಳ್ಳುತ್ತಾ, ಕಾವೇರಮ್ಮ, ಶೆಟ್ಟರ ಮೇಲೆ ಒಮ್ಮೆಲೇ ಆಕ್ರೋಶ ಬಂದಂತಾಗಿ, ಸಿಂಗಾರ ಹೂವನ್ನು ಮುಖಕ್ಕುಜ್ಜಿಕೊಳ್ಳುತ್ತಾ ಭೀಕರವಾಗಿ ಚೀರಿ ಅಲ್ಲೇ ತಲೆ ತಿರುಗಿ ನೆಲಕ್ಕುರುಳಿದಳು.

ನಡೆಯುತ್ತಿದ್ದ ಸನ್ನಿವೇಶವನ್ನೆಲ್ಲ ದೂರದಿಂದಲೇ ಗಮನಿಸುತ್ತಿದ್ದ ಶೆಟ್ಟರ ಕಣ್ಣಲ್ಲಿ ಹಾಗೇ ಒಂದು ಉಪಾಯ ಮಿಂಚಿನಂತೆ ಮೂಡಿ ಹೊಳೆಯತೊಡಗಿತು.

(ಮುಂದುವರೆಯುವುದು…)

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)