Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ದೇವಿ : ಭಾಗ ೨ - ಬೀಣೆ ಚೀಲ

ದೇವಿ : ಭಾಗ ೨

ಅಂದು ದುಗ್ಗಿಯ ಗ್ರಹ ಗತಿಗಳು ಬದಲಾಗುವುದರಲ್ಲಿದ್ದವು. ದೇವರು ಆಕೆಯ ಮೇಲೆ ದಯೆ ತೋರಿಸಿದ್ದನೋ ಗೊತ್ತಿಲ್ಲ ಆದರೆ ಶಂಭು ಶೆಟ್ಟಿಯವರು ಸಿರಿ ದರ್ಶನದ ನಂತರ ದುಗ್ಗಿಯ ಮೇಲೆ ತಮ್ಮ ಕೃಪಾಕಟಾಕ್ಷದ ಹೊಳೆಯನ್ನೇ ಹರಿಸಿದರು. ಸಿರಿ ಜಾತ್ರೆಯ ಮರುದಿನ ನಂದಳಿಕೆಯಿಂದ ಬೆಳ್ಯಾಡಿಗೆ ವಾಪಾಸಾಗುವಾಗ ದುಗ್ಗಿ ಜೀಪಿನ ಮುಂದಿನ ಸೀಟಿಗೆ ಬಡ್ತಿ ಪಡೆದಾಗಿತ್ತು. ರಾತ್ರಿ ನಡೆದ ಘಟನೆಗಳು ದುಗ್ಗಿಗೆ ಅಸ್ಪಷ್ಟವಾಗಿ ನೆನಪಿದ್ದರೂ ಕೂಡ ತನ್ನಿಂದ ಏನೋ ಅಚಾತುರ್ಯ ನಡೆದು ಹೋಗಿದೆ ಎಂಬ ಭಯ ಆಕೆಯನ್ನು ಒಳಗೊಳಗೇ ಕಾಡುತ್ತಿತ್ತು. ಅದರ ಮೇಲೆ ಶಂಭು ಶೆಟ್ಟರ, ತನ್ನ ಬಗೆಗಿನ ವಿಚಿತ್ರ ವರ್ತನೆ, ಪರಿಸ್ಥಿತಿಯನ್ನು ಆಕೆಗೆ ಇನ್ನಷ್ಟು ಗೋಜಲಾಗಿಸಿತು. ಬೆಳ್ಯಾಡಿ ತಲುಪಿದ ಮೇಲೆ ಕೂಡ ಕಾವೇರಮ್ಮ ದುಗ್ಗಿಗೆ ಕೆಲಸ ಹೇಳಿದರೆ ಶಂಭು ಶೆಟ್ಟರು ಅಸಮಾಧಾನ ವ್ಯಕ್ತ ಪಡಿಸುವುದನ್ನು ದುಗ್ಗಿ ಅರಿತಳಾದರೂ, ಈ ವಿಚಿತ್ರ ಗೋಜಲಿನಿಂದ ಹೊರಬರುವ ಸಲುವಾಗಿ ತನ್ನ ಪಾಡಿಗೆ ತಾನು ಮೊದಲಿನಂತೆ ಕೆಲಸ ಮಾಡಿಕೊಂಡು ಇದ್ದು ಬಿಟ್ಟಳು.

ಮರುದಿನ ಶೆಟ್ಟರ ಮನೆ ಕೆಲಸ ಮುಗಿಸಿ ಮನೆಗೆ ವಾಪಾಸಾದ ದುಗ್ಗಿಯನ್ನು ಬರ ಮಾಡಿಕೊಳ್ಳಲು ಸುಗುಣ ಬಾಗಿಲಲ್ಲೇ ಕಾಯುತ್ತ, ದುಗ್ಗಿಯನ್ನು ನೋಡಿದ ಕೂಡಲೇ ಒಮ್ಮೆಲೇ ಬಡಬಡಿಸ ತೊಡಗಿದಳು. ಆದದ್ದಿಷ್ಟೇ ಎಂದಿನಂತೆ ಕಟ್ಟಿದ ಬೀಡಿ ಕಟ್ಟುಗಳನ್ನು ಬೀಡಿ ಬ್ರಾಂಚಿಗೆ ಕೊಡಲು ಹೋದ ಸುಗುಣನನ್ನು ಆವತ್ತು ಎಲ್ಲರು ವಿಚಿತ್ರ ದೃಷ್ಟಿಯಿಂದ ನೋಡತೊಡಗಿದ್ದರು. ಒಂದು ರೀತಿಯ ಮುಜುಗರಕ್ಕೊಳಗಾದ ಸುಗುಣ ಅಲ್ಲಲ್ಲಿ ವಿಚಾರಿಸಲು ತಿಳಿದದ್ದು ಏನೆಂದರೆ ಸಿರಿ ಜಾತ್ರೆಗೆ ಹೋದ ಸುಗುಣಳ ತಾಯಿ ದುಗ್ಗಿಯ ಮೇಲೆ ಸಿರಿ ದೈವ ದರ್ಶನ ಬಂದಿತ್ತೆಂದು. ಅಚಾನಕ್ಕಾಗಿ ಊರ ಹೆಂಗಸರ ಬಾಯಲ್ಲಿ ದುಗ್ಗಿಯ ಬಗ್ಗೆ ಭಯ ಗೌರವದ ಮಾತುಗಳನ್ನು ಕೇಳಿ ಸುಗುಣ ಒಳಗೊಳಗೇ ಸಂಭ್ರಮ ಪಟ್ಟು ಮನೆಗೆ ಮರಳಿ, ದುಗ್ಗಿ ಮನೆಗೆ ವಾಪಾಸಾಗುವುದನ್ನೇ ಕಾಯುತ್ತಿದ್ದಳು. ದುಗ್ಗಿಯನ್ನು ನೋಡಿದೊಡನೆಯೇ ಆಕೆಯ ಮೇಲೆ ಮುಗಿ ಬಿದ್ದು ಪ್ರಶ್ನೆಗಳ ಸುರಿಮಳೆಯನ್ನೇ ಬೀರಿ, ತನಗೆ ಇದರ ಬಗ್ಗೆ ಏನು ತಿಳಿಸದೇ ಇದ್ದುದರ ಹುಸಿ ಮುನಿಸು ತೋರಿದಳು. ತನಗೇ ತಿಳಿಯದ ವಿಚಾರ ಊರ ಜನರಿಗೆಲ್ಲ ತಿಳಿದಿರುವ ಬಗ್ಗೆ ದುಗ್ಗಿ ಆಶ್ಚರ್ಯ ವ್ಯಕ್ತ ಪಡಿಸುತ್ತಾ ಮೌನವಾಗಿ ಮನೆಯ ಮೂಲೆಯಲ್ಲಿ ಹೋಗಿ ಕುಳಿತು ಆಲೋಚಿಸ ತೊಡಗಿದಳು. ನಿಧಾನಕ್ಕೆ ಒಂದೊಂದೇ ವಿಷಯಗಳು ದುಗ್ಗಿಗೆ ಹೊಳೆಯತೊಡಗಿತು. ಆ ರಾತ್ರಿ ಕಿವಿಗಪ್ಪಳಿಸಿದ ವಾಲಗದ ಧ್ವನಿ, ಮೂಗಿಗೆ ಅಡರಿದ ಸಿಂಗಾರದ ಹೂವಿನ ಮತ್ತಿನ ಪರಿಮಳ, ಸುತ್ತಲೂ ಕೈಮುಗಿದು ಭಕ್ತಿಯಿಂದ ನೋಡುತ್ತಿದ್ದ ಜನ ಮುಂತಾದ ಘಟನೆಗಳು ಪಸರಿದ ಚಿತ್ರಗಳಂತೆ ಆಕೆಯ ಮನಸ್ಸಿನಲ್ಲಿ ಮೂಡತೊಡಗಿದವು. ಹಾಗಾದರೆ ಆ ರಾತ್ರಿ ನಿಜಕ್ಕೂ ಸಿರಿ ದೈವ ತನ್ನ ಮೈ ಮೇಲೆ ಬಂದಿತ್ತೆ? ತನ್ನಲ್ಲೇನು ವಿಶೇಷವಿದೆ ಎಂದು ದೈವ ತನ್ನನ್ನು ಆರಿಸಿರಬಹುದು? ಅಥವಾ ತಾನು ನಿಜಕ್ಕೂ ಅಸಾಮಾನ್ಯಳೇ? ಯೋಚನೆಗಳು ಹರಿದಂತೆ ದುಗ್ಗಿಯ ಸ್ಥೈರ್ಯ ಪುಗ್ಗದಂತೆ ಊದಿಕೊಳ್ಳತೊಡಗಿತು. ಯಾವುದಕ್ಕೂ ಒಮ್ಮೆ ಯಾರ ಜೊತೆಗಾದರೂ ಮಾತಾಡಿ ಖಚಿತಪಡಿಸಿಕೊಳ್ಳೋಣವೆಂದು ಹಾಗೇ ಬೆಳ್ಯಾಡಿಯ ಪ್ರಮುಖ ಬೀದಿಯ ಕಡೆಗೊಮ್ಮೆ ಹೊರಟಳು. ದಾರಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ದುಗ್ಗಿಯನ್ನು ನೋಡಿದೊಡನೆಯೇ ಓಡಿ ಹೋಗಿ ಅಡಗಿಕೊಂಡವು. ಎಂದೂ ಸಹ ತನ್ನೆಡೆ ದೃಷ್ಟಿ ಕೂಡ ಬೀರದಿದ್ದ ಬೀಡಿ ಬ್ರಾಂಚ್ ಮ್ಯಾನೇಜರ್ ಸುರೇಶಣ್ಣ, ಸೈಕಲ್ಲಿನಲ್ಲಿ ಹೋಗುತ್ತಾ ನಮಸ್ಕಾರ ದುಗ್ಗಿಯಕ್ಕ ಎಂದು ಮುನ್ನಡೆದ. ಎಲ್ಲಕ್ಕಿಂತ ಮಿಗಿಲಾಗಿ ತನ್ನನ್ನು ಹೀನಾಯವಾಗಿ ನೋಡುತ್ತಿದ್ದ ಅಗ್ರಹಾರದ ಮನೆಯ ಬ್ರಾಹ್ಮಣ ಹೆಂಗಸರು ಕೂಡ ನಯ ವಿನಯದಿಂದ ದುಗ್ಗಿಯನ್ನು ವಿಚಾರಿಸಿದರು. ದುಗ್ಗಿಗೆ ತನ್ನ ಮೇಲೆ ಸಿರಿ ದರ್ಶನ ಬಂದಿದ್ದರ ಮೇಲೆ ಯಾವುದೇ ಅನುಮಾನ ಉಳಿಯಲಿಲ್ಲ. ಮನೆಗೆ ವಾಪಾಸಾದ ದುಗ್ಗಿ ಮೊದಲಿನ ದುಗ್ಗಿಯಾಗಿ ಉಳಿಯಲಿಲ್ಲ. ಅಂದು ಅಪರಾತ್ರಿ ಮನೆಗೆ ಬಂದ ಸೀನನನ್ನು ಒಳಗೆ ಕರೆಯಿಸಿಕೊಳ್ಳಲಿಲ್ಲ. ಇನ್ಮುಂದೆ ಮದ್ಯಪಾನ ಮಾಡಿ ಬಂದರೆ ಮನೆಯೊಳಗೆ ಆತನಿಗೆ ಪ್ರವೇಶವಿಲ್ಲವೆಂದು ಘರ್ಜಿಸಿ ಆತನ ಹೊದೆಯುವ ಕಂಬಳಿಯನ್ನು ಅವನ ಮುಖಕ್ಕೆಸೆದು ಆತನನ್ನು ಮನೆಯಿಂದ ಹೊರಕ್ಕಟ್ಟಿದಳು.

ಮರುದಿನ ಸ್ವಲ್ಪ ಬಿಗುಮಾನದಿಂದಲೇ ಶೆಟ್ಟರ ಮನೆಗೆ ಕೆಲಸಕ್ಕೆಂದು ಹೊರಟ ದುಗ್ಗಿ ಮನೆಯೊಳಗೆ ಶೆಟ್ಟರು ಯಾರೊಂದಿಗೋ ಮಾತಾಡುತ್ತಿರುವುದು ಕೇಳಿಸಿಕೊಳ್ಳುತ್ತಾ ಹಾಗೇ ನಿಂತುಕೊಂಡಳು.
“ಅಲ್ಲ ಶೆಟ್ಟರೆ, ಇಷ್ಟು ದಿನ ಬೆಳ್ಯಾಡಿಯ ವಿಷ್ಣುಮೂರ್ತಿಯನ್ನೇ ಆರಾಧ್ಯ ದೈವವನ್ನಾಗಿ ಮಾಡಿಕೊಂಡಿರುವ ಇಲ್ಲಿನ ಜನರು ಈಗ ಅಚಾನಕ್ಕಾಗಿ ಬೇರೆ ದೇವರನ್ನು ನಂಬುವಂತೆ ಮಾಡುವುದು ಅಷ್ಟು ಸುಲಭವೇ?” ಅಪರಿಚಿತ ಧ್ವನಿ ಮಾತಾಡಿತು.
“ಯಾಕಿಲ್ಲ? ಬದಲಾವಣೆಯನ್ನು ಬಯಸುವುದು ಮಾನವ ಸಹಜ ದೌರ್ಬಲ್ಯ. ದೈವನಿಷ್ಠೆ ಕೂಡ ಇದಕ್ಕೆ ಹೊರತು ಪಡಿಸಿದ್ದಲ್ಲ. ನಂಬಿಕೆಯ ಪರಿವರ್ತನೆಗೆ ನಾಂದಿ ಹಾಡಬಲ್ಲಂತಹ ಉದಾಹರಣೆಯ ಅಗತ್ಯ ಮಾತ್ರ ಅನಿವಾರ್ಯ. ಅಂತಹದ್ದೇ ಒಂದು ಬಲಿಷ್ಠ ಉದಾಹರಣೆ ಈಗ ನಮ್ಮ ಮುಂದಿಲ್ಲವೇ? ವಿಷ್ಣುಮೂರ್ತಿಯ ಅರ್ಚಕರಾದ ಗುರುಮೂರ್ತಿ ಹಂದೆಯವರ ಮಗ ಉದಯನ ಕಥೆ ಏನಾಯಿತು? ದರೋಡೆಕೋರ ಚಂದ್ರನ್ ಆತನನ್ನು ಮೊನ್ನೆಯಷ್ಟೇ ಅಪಹರಿಸಲಿಲ್ಲವೇ? ತನ್ನ ಅರ್ಚಕರ ಕುಟುಂಬವನ್ನೇ ಕಾಪಾಡಿಕೊಳ್ಳಲಾಗದ ವಿಷ್ಣುಮೂರ್ತಿ ದೇವರ ಮೇಲೆ ಜನರ ನಂಬಿಕೆ, ನಿಷ್ಠೆ ನಿಧಾನಕ್ಕೆ ಬದಲಾಗುತ್ತಿರುವುದು ನಿಸ್ಸಂದೇಹವಾಗಿ ನಿಜವೇ. ಚಂದ್ರನ್ ನ ಭೀತಿಯ ನೆರಳಲ್ಲಿ ಬದುಕುತ್ತಿರುವ ಬೆಳ್ಯಾಡಿಯ ಜನತೆಗೆ ಸದ್ಯಕ್ಕೆ ಬೇಕಿರುವುದು ಯಾವುದಾದರು ಶಕ್ತಿ ದೇವತೆಯ ಆಶ್ರಯ. ಈ ಹಿನ್ನಲೆಯಲ್ಲಿ ನಾನು ಯೋಜಿಸಿರುವ ಹಂಚಿಕೆ ವಾಸ್ತವಿಕವಾಗಿಯೇ ಇದೆ.” ಶೆಟ್ಟರ ಘಟವಾಣಿ, ಹೊರಗಿನಿಂದ ಕದ್ದು ಕೇಳಿಸಿಕೊಳ್ಳುತ್ತಿದ್ದ ದುಗ್ಗಿಯ ಕಿವಿಗಪ್ಪಳಿಸಿತು.
“ಸರಿ ಹಾಗಾದರೆ. ನೀವು ಹೇಳಿರುವ ವಿಚಾರಗಳೆಲ್ಲ ನನ್ನ ಮನಸ್ಸಿನಲ್ಲಿದೆ. ಎಲ್ಲವೂ ನೀವೆಣಿಸಿಕೊಂಡಂತೆಯೇ ನೆರವೇರಿಸುವುದು ನನ್ನ ಹೊಣೆ. ಬರ್ತೇನೆ ಹಾಗಾದ್ರೆ.” ಆ ಇನ್ನೊಂದು ಧ್ವನಿ ಉತ್ತರಿಸಿತು.
ಕೂಡಲೇ ಜಾಗ್ರತವಾದ ದುಗ್ಗಿ ಅಲ್ಲೇ ಬಿದ್ದಿದ್ದ ಕಸಪೊರಕೆಯನ್ನೆತ್ತಿ ಅಂಗಣ ಗುಡಿಸುವ ನಾಟಕವಾಡತೊಡಗಿದಳು. ಹಾಗೆಯೇ ಒಳಗೆ ಮಾತಾಡುತ್ತಿದ್ದ ಇನ್ನೊಂದು ವ್ಯಕ್ತಿ ಯಾರಿರಬಹುದು ಎಂದು ನಿಧಾನವಾಗಿ ಕಣ್ಣೆತ್ತಿ ನೋಡಿದವಳಿಗೆ ತೋರಿದ್ದು, ಬೆಳ್ಯಾಡಿಯ ಕಲ್ಲುಕುಟ್ಟಿಗ ದೈವದ ಗುಡಿಯಲ್ಲಿ ಪ್ರತಿ ವರ್ಷ ನಡೆಯುವ ಕೋಲ ಸೇವೆಯಲ್ಲಿ ವೇಷ ಹಾಕುವ ಅಣ್ಣಪ್ಪ. ಶೆಟ್ಟರ ಮನೆಯಿಂದ ಹೊರಬಂದ ಅಣ್ಣಪ್ಪ, ಅಂಗಣದಲ್ಲೇ ಎದುರಾದ ದುಗ್ಗಿಯನ್ನೊಮ್ಮೆ ದುರುಗುಟ್ಟಿ ನೋಡುತ್ತಾ ನಿಂತು, ಮನಸ್ಸಲ್ಲೇ ಏನೋ ಯೋಚಿಸುತ್ತಾ ಹಾಗೇ ಮುನ್ನಡೆದನು. ಅಣ್ಣಪ್ಪನನ್ನು ನೋಡಿದಾಕ್ಷಣ ದುಗ್ಗಿಗೆ ಮರುದಿನ ರಾತ್ರಿ ಕಲ್ಲುಕುಟ್ಟಿಗನ ಕೋಲ ಇರುವುದು ನೆನಪಾಗಿ ಮೈಯಲ್ಲಿ ಹುರುಪು ಮೂಡಿತು. ಕೋಲದ ಭಯಂಕರ ವೇಷ, ಕುಣಿತ, ಭಯ ಭಕ್ತಿಯ ಆ ವಾತಾವರಣವೇ ದುಗ್ಗಿಗೆ ರೋಮಾಂಚನ ತರುವ ವಿಚಾರ. ಮಗಳು ಸುಗುಣಳ ಜೊತೆ ನಾಳೆ ಕೋಲಕ್ಕೆ ಹೋಗುವ ವಿಚಾರವನ್ನು ದುಗ್ಗಿ ಮನದಲ್ಲಿಯೇ ನಿಶ್ಚಯಿಸಿದಳು.

Devi5ಅಂದು ದುಗ್ಗಿ ಕಾವೇರಮ್ಮನ ಎದುರು ತನಗೇ ಆಶ್ಚರ್ಯವಾಗುವಂತೆ ನಡೆದುಕೊಂಡಳು. ಬೆಳಗ್ಗೆ ಅವರ ಮುಖ ನೋಡಿದವಳೇ ಇಂದಿನಿಂದ ತಾನು ಮನೆಯ ಕಕ್ಕಸು ತೊಳೆಯುವುದು, ಮುಸುರೆ ತೊಳೆಯುವುದು ಹಾಗೂ ಗೊಬ್ಬರ ಹೊರುವ ಕೆಲಸವನ್ನೆಲ್ಲಾ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟಳು. ಎರಡು ದಿನಗಳ ಹಿಂದೆ ಸಿರಿಜಾತ್ರೆಯಲ್ಲಿ ನಡೆದ ಘಟನೆಗಳಿಂದ ಭಯಭೀತರಾಗಿದ್ದ ಕಾವೇರಮ್ಮ ಕೂಡ ಮರುಮಾತಾಡದೆ ದುಗ್ಗಿಯ ಷರತ್ತುಗಳಿಗೆಲ್ಲ ಸುಮ್ಮನೆ ತಲೆಯಾಡಿಸಿದರು. ಇದೆಲ್ಲವನ್ನೂ ಮನೆಯೊಳಗಿಂದಲೇ ಗಮನಿಸುತ್ತಿದ್ದ  ಶೆಟ್ಟರ ಮುಖದಲ್ಲೊಂದು ಕಿರು ಮಂದಹಾಸ ಮೂಡಿತು.

ಈ ಬಾರಿ ಕಲ್ಲುಕುಟ್ಟಿಗನ ಕೋಲಕ್ಕೆ ಶೆಟ್ಟರು ತಾವೇ ಮುಂದೆ ನಿಂತು ಮುತುವರ್ಜಿ ವಹಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅದ್ದೂರಿಯಾಗಿ ಆಯೋಜಿಸಿದರು. ಬೆಳ್ಯಾಡಿಯ ಹಲವು ಪ್ರಮುಖರು ಇಂದಿನ ಬಾರಿಯ ಕೋಲ ಸೇವೆಯಲ್ಲಿ ಶೆಟ್ಟರ ಖಾಸಾ ಆಹ್ವಾನದ ಮೇಲೆ ಪಾಲ್ಗೊಂಡಿದ್ದದ್ದು ಇನ್ನೊಂದು ವಿಶೇಷ. ಅಂತೂ ಇಂತೂ ಕೋಲ ಶುರುವಾಗಿ ಪಾತ್ರಧಾರಿ ಅಪ್ಪಣ್ಣ ರೋಷದಿಂದಲೇ ಕುಣಿತವನ್ನು ನಡೆಸಿ ದೈವದ ಸಮ್ಮುಖದಲ್ಲಿ ಪ್ರಶ್ನೆ ಕೇಳಲು ಜನ ಸಮುದಾಯ ಸುತ್ತಲೂ ನೆರೆದರು. ಒಬ್ಬೊಬ್ಬರಾಗಿ ಊರ ಜನ ತಮ್ಮ ಕೌಟುಂಬಿಕ, ವೈಯುಕ್ತಿಕ ಸಮಸ್ಯೆಗಳನ್ನು ಕಲ್ಲುಕುಟ್ಟಿಗ ದೈವದ ಮುಂದೆ ಹೇಳುತ್ತ, ಇತರರ ಮನೆ ಸಮಸ್ಯೆಗಳಿಗೆ ಕಿವಿಗೊಡುತ್ತಾ, ಕೋಲದ  ದೈವ ಪಾತ್ರಧಾರಿ ಅಪ್ಪಣ್ಣ ನುಡಿಯುತ್ತಿದ್ದ ಪರಿಹಾರಗಳಿಗೆಲ್ಲ ತಲೆಯಾಡಿಸುತ್ತಾ ಸನ್ನಿವೇಶವು ಸಾಗುತ್ತಿರಬೇಕಾದರೆ, ಜನರ ಮಧ್ಯದಿಂದ ಶೆಟ್ಟರು ಮುಂದೆ ಬಂದು ನಿಂತು ಪ್ರಶ್ನೆ ಕೇಳಲು ತಯಾರಾದರು.
“ಕಳೆದ ಎರಡು ಮೂರು ತಿಂಗಳಿನಿಂದ ಬೆಳ್ಯಾಡಿಯ ಜನ ಸಮಸ್ತರಿಗೆ ನೆಮ್ಮದಿ ಎಂಬುದು ದೂರವಾಗಿದೆ. ಯಾವನೋ ಚಂದ್ರನ್ ಎಂಬ ದರೋಡೆಕೋರನೊಬ್ಬ ನಮ್ಮೆಲ್ಲರ ನಿದ್ರೆ ಕೆಡಿಸಿದ್ದಾನೆ. ಊರ ದೇವತೆ ವಿಷ್ಣು ಮೂರ್ತಿಗೆ ಹೊತ್ತ ಹರಕೆಗಳು ಫಲ ಕಾಣುತ್ತಿಲ್ಲ. ಇಂತಹ ಸಮಯದಲ್ಲಿ ಇಲ್ಲಿಯ ತನಕ ನಮ್ಮೆಲ್ಲರನ್ನೂ ರಕ್ಷಿಸಿಕೊಂಡು ಬಂದಿರುವಂತ ದೈವವು ಒಂದು ಪರಿಹಾರದ ದಾರಿ ತೋರಿಸಬೇಕಾಗಿ ಕೈ ಮುಗಿದು, ಊರವರೆಲ್ಲರ ಸಲುವಾಗಿ ಪ್ರಾರ್ಥಿಸುತ್ತೇನೆ.” ಎಂದು ಹೇಳಿ ಶೆಟ್ಟರು ಅಪ್ಪಣ್ಣನ ಮುಂದೆ ವಿನೀತರಾಗಿ ಕೈ ಜೋಡಿಸಿ ನಿಂತರು.
ನೆರೆದಿದ್ದ ಜನಸ್ತೋಮ ಒಮ್ಮೆಲೇ ಸ್ತಬ್ಧವಾಯಿತು. ದೈವದ ಬಾಯಿಂದ ಯಾವ ಪರಿಹಾರ ದೊರಕಬಹುದೆಂಬ ಕಾತರ ಎಲ್ಲರಿಗೂ. ಶೆಟ್ಟರ ಆಮಂತ್ರಣದ ಮೇಲೆ ಬಂದಿದ್ದ ವಿಷ್ಣುಮೂರ್ತಿ ದೇವರ ಅರ್ಚಕ ಗುರುಮೂರ್ತಿ ಹಂದೆಯವರ ಕಣ್ಣು ಸಿಟ್ಟಿನಿಂದ ಕೆಂಪಾಗಿ, ಶೆಟ್ಟರು ತನ್ನನ್ನು ಅವಮಾನ ಮಾಡುವ ಸಲುವಾಗಿಯೇ ಇದನ್ನೆಲ್ಲಾ ಮಾಡುತ್ತಿರುವರೇನೋ ಎಂಬ ಆಕ್ರೋಶದಿಂದ ಸರ ಸರನೆ ಮನೆಯ ಕಡೆ ನಡೆದು ಹೋದರು.
ಸ್ವಲ್ಪ ಹೊತ್ತು ತನ್ನ ಸುತ್ತ ಮುತ್ತಿರುವ, ತನ್ನನ್ನೇ ನಿರೀಕ್ಷೆಯ ಕಣ್ಣುಗಳಿಂದ ಕಾಣುತ್ತಿರುವ ಬೆಳ್ಯಾಡಿಯ ಜನರನ್ನೆಲ್ಲ ದಿಟ್ಟಿಸಿ ನೋಡಿದ ದೈವ ಪರಿಹಾರ ಸೂಚಿಸಿತು.”ಸಾಧ್ಯವಿಲ್ಲ..ನನ್ನಿಂದ ಸಾಧ್ಯವಿಲ್ಲ… ಇದು ನನ್ನ ಕರ್ತವ್ಯವಲ್ಲ… ಹೋಗಿ.. ಆಕೆಯ ಮೊರೆ ಹೋಗಿ..ತಡ ಮಾಡಬೇಡಿ.. ಹೋಗಿ…” ಪಾತ್ರಧಾರಿ ಅಪ್ಪಣ್ಣ ಅಬ್ಬರಿಸಿದ. ಇನ್ನಷ್ಟು ಗೊಂದಲಕ್ಕೊಳಗಾದ ಜನ ತಮ್ಮ ತಮ್ಮಲ್ಲೇ ಗುಸು ಗುಸು ಮಾತನಾಡತೊಡಗಲು ಮತ್ತೆ ಜೋರಾದ ಧ್ವನಿಯಲ್ಲಿ, “ಸಿರಿ ದೇವಿಗೆ ಮಾತ್ರ ಇರುವುದು ಆ ಶಕ್ತಿ. ಆಕೆಯ ಕಾರ್ಣಿಕದ ಮೊರೆ ಹೋಗಿ ನೀವೆಲ್ಲ. ಸಿರಿಯನ್ನು ಪ್ರತಿಷ್ಠಾಪಿಸಿ  ಆರಾಧಿಸಿ. ಆಕೆಯೇ ನಿಮಗೆಲ್ಲಾ ದಾರಿ ತೋರುವಳು. ಈ ಕೂಡಲೇ ಊರಿನಲ್ಲಿ ಸಿರಿ ದೈವದ ಗುಡಿ ಸ್ಥಾಪಿಸಿ. ಯೋಗ್ಯ ವ್ಯಕ್ತಿಯಿಂದ ದೈವವನ್ನು ಉಪಚರಿಸಿ.” ಎಂದು ಆಜ್ಞಾಪಿಸಿದನು.
“ದೈವದ ಉಪಚಾರಕ್ಕೆ ಸೂಕ್ತ ವ್ಯಕ್ತಿಯನ್ನು ಕೂಡ ದೈವವೇ ಸೂಚಿಸಲಿ” ಶೆಟ್ಟರು ಮುಂದುವರೆದು ವಿನಂತಿಸಿದರು.
“ಅಂಗೈಯಲ್ಲಿ ಬೆಣ್ಣೆಯಿಟ್ಟು ಊರೆಲ್ಲ ಸುತ್ತಿದಂತಾಯಿತು ನಿಮ್ಮ ಅವಸ್ಥೆ. ಸಿರಿ ದೈವವೇ ಸೂಕ್ತ ವ್ಯಕ್ತಿಯನ್ನು ಆರಿಸಿಯಾಗಿದೆ ನಿಮ್ಮ ಮಧ್ಯದಿಂದ. ಗುರುತಿಸುವುದು ನಿಮಗೆ ಬಿಟ್ಟ ವಿಚಾರ” ಕಲ್ಲುಕುಟ್ಟಿಗ ಗಹಗಹಿಸಿದ.
ಸ್ವಲ್ಪ ಹೊತ್ತು ಆಲೋಚಿಸಿದಂತೆ ಮಾಡಿದ ಶೆಟ್ಟರು ಉತ್ತರಿಸಿದರು, “ಹಾಗಾದರೆ ನಮ್ಮ ದುಗ್ಗಿಯೇ ಆ ವ್ಯಕ್ತಿಯೆಂದು ದೈವದ ಅಪ್ಪಣೆಯೆ?”
ಹೌದು ಎಂಬಂತೆ ತಲೆಯಾಡಿಸಿ ಅಪ್ಪಣ್ಣ ಮತ್ತೆ ಕುಣಿತ ಶುರುವಿಟ್ಟುಕೊಂಡ. ವಾದ್ಯಗಳ ಧ್ವನಿ ಜೋರಾದವು. ಪ್ರಶ್ನೋತ್ತರ ಕಾರ್ಯಕ್ರಮ ಅಲ್ಲಿಗೇ ಮುಕ್ತಾಯವಾಯಿತು. ಬೆಳ್ಯಾಡಿಯ ಜನತೆಯಲ್ಲಿ ಹೊಸ ಆಶಾಕಿರಣ ಮೂಡಿದಂತಾಯಿತು.

ನಡೆದ ಸಂಗತಿಗಳನ್ನೆಲ್ಲ ಮೂಲೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ದುಗ್ಗಿ, ಅನೀರೀಕ್ಷಿತವಾಗಿ ಬಂದ ಮಹಾವಕಾಶಕ್ಕೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಗೊಂದಲದಿಂದ ಕಂಗಾಲಾಗಿ ಬಿದ್ದೆನೋ ಸತ್ತೆನೋ ಎಂಬಂತೆ ಒಂದೇ ಉಸಿರಿನಲ್ಲಿ ತನ್ನ ಗುಡಿಸಲಿನ ಕಡೆಗೆ ಓಟಕ್ಕಿತ್ತಳು.

(ಮುಂದುವರೆಯುವುದು…)

 

4 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)