ತಾದಾತ್ಮ್ಯ

ಕೊತ ಕೊತ ಕುದಿಯುತ್ತಿರುವ ತಾಜಾ ಚಹದ ಘಮವು, ಮುಂಜಾನೆಯ ನಸುಕಿನ ಇಬ್ಬನಿಯ ಹನಿಯೊಂದಿಗೆ ಬೆರೆತು, ತಡರಾತ್ರಿಯವರೆಗೆ ದುಡಿದು ದಣಿದು ಮಲಗಿದಂತಿರುವ ಆಸ್ಪತ್ರೆಯ ಆವರಣವನ್ನೆಲ್ಲಾ ಹರಡಿ, ಯಾವುದೋ ನೋವಿಗೆ ತತ್ತರಿಸಿ, ಹತಾಶರಾಗಿ ಮಲಗಿರುವ ಜೀವಗಳಲ್ಲಿ ಚೈತನ್ಯ ತುಂಬುವುದರ ಜೊತೆಗೆ ಕಲ್ಪನಾಳ ದಿನ ಪ್ರಾರಂಭವಾಗುವುದು. ಹೇಗೆ ಊರಿನ ಎಲ್ಲಾ ದೇವರುಗಳಿಗೆ ಹರಕೆ ಸಲ್ಲಿಸಿದ ನಂತರವೂ ಕೂಡ ಫಲ ಸಿಗದೇ ದೂರದ ಧರ್ಮಸ್ಥಳಕ್ಕೋ, ಸುಬ್ರಹ್ಮಣ್ಯಕ್ಕೋ ಅಥವಾ ಮಲೆ ಮಹದೇಶ್ವರ ಬೆಟ್ಟಕ್ಕೋ ಕೊನೆಯ ಆಸೆಯನ್ನಿಟ್ಟುಕೊಂಡು ಜನ, ರಾಜ್ಯದ ಮೂಲೆ ಮೂಲೆಯಿಂದ ಬಂದು ತಾಸುಗಟ್ಟಲೆ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗಿ ಹೋಗುವರೋ ಹಾಗೆಯೇ, ತಮ್ಮೂರಿನ ಯಾವ ಅಸ್ಪತ್ರೆಯಲ್ಲೂ ಗುಣಪಡಿಸಲಾಗದ ಕಾಯಿಲೆಯ ಉಪಚಾರಕ್ಕಾಗಿ ಕೊನೆಯದೊಂದು ಪ್ರಯತ್ನವೆಂಬಂತೆ ಈ ಆಸ್ಪತ್ರೆಗೆ ಜನ ದೂರದ ಊರುಗಳಿಂದ ಬಂದು ಜಮಾಯಿಸುತ್ತಾರೆ. ಈ ಊರಿನ ಸ್ವಂತ ಸಂಸ್ಕೃತಿ, ಹೀಗೆ ಬಂದು ಸೇರುವ ಜನರ ಆಚಾರ ವಿಚಾರದಲ್ಲಿ ಬೆರೆತು, ಮರೆತು ಹೋಗಿದೆ. ಈ ಆಸ್ಪತ್ರೆಯೇ ಈ ಊರಿನ ಪ್ರಮುಖವಾದ ಪ್ರತ್ಯಕ್ಷ ಹಾಗೂ ಪರೋಕ್ಷ ಆದಾಯದ ಮೂಲ ಕೂಡ ಆಗಿದೆ. ಪರವೂರಿಂದ ಬರುವ ಜನಗಳ ಅನುಕೂಲಕ್ಕೆ ತಕ್ಕಂತೆ ಆಹಾರ, ವಸತಿ ಒದಗಿಸಲೆಂದೇ ಎಷ್ಟೊಂದು ವ್ಯಾಪಾರಗಳು ಇಲ್ಲಿ ತಲೆಯೆತ್ತಿವೆ. ಅಂತಹದ್ದೇ ಒಂದು ವ್ಯಾಪಾರದ ಭಾಗ ಕಲ್ಪನಾಳ ಚಹಾ ಅಂಗಡಿ. ಆಸ್ಪತ್ರೆಗೆ ಅತೀ ಸನಿಹದಲ್ಲಿರುವ ಚಹಾ ಕಾಫಿಯಂಗಡಿ ಇದೇ. ಅದೇ ಕಾರಣಕ್ಕೆ ಕಲ್ಪನಾಳ ಚಹಾಕ್ಕೆ ಬೇಡಿಕೆ ಜಾಸ್ತಿ. ಚಹಾ, ಕಾಫಿ ಮತ್ತು ಬಿಸ್ಕತ್ತು ಬಿಟ್ಟರೆ ಮತ್ತೇನು ಇಡಲು ಸಾಲದಾಗಷ್ಟು ಚಿಕ್ಕ ಅಂಗಡಿ ಆಕೆಯದ್ದು. ಬೆಳ ಬೆಳಗ್ಗೆದ್ದು ಕೆಲಸಕ್ಕೆ ಶುರು ಹಚ್ಚಿಕೊಳ್ಳುವ ಕಲ್ಪನಾಳನ್ನು ನೋಡಿದರೆ ಆಸ್ಪತ್ರೆಯ ದೊಡ್ಡ ದೊಡ್ಡ ವೈದ್ಯರಿಂದ ಹಿಡಿದು, ದಾದಿಯರು, ಪರಿಚಾರಕಿಯರು, ವೈದ್ಯಕೀಯ ವಿದ್ಯಾರ್ಥಿಗಳು ಎಲ್ಲರಿಗೂ ಅಚ್ಚುಮೆಚ್ಚು. ಆಕೆ ಕೂಡ ಮುಂಜಾವಿನಿಂದ ಮಧ್ಯರಾತ್ರಿಯ ತನಕ ಸ್ವಂತ ವೈಯುಕ್ತಿಕ ಜೀವನವೇ ಇಲ್ಲವೇನೋ ಎಂಬಂತೆ ಚಹಾದಂಗಡಿಯಲ್ಲಿ ದುಡಿಯುತ್ತಾಳೆ. ಸುತ್ತಮುತ್ತಲೆಲ್ಲ ಬೆಳಗ್ಗೆ ಬೇಗ ತೆರೆದು, ರಾತ್ರಿ ತಡವಾಗಿ ಮುಚ್ಚುವ ಅಂಗಡಿ ಆಕೆಯದ್ದೇ.

taadatmya2ಆಕೆಗಾದರೂ ಅಷ್ಟೇ, ದಿನ ಬೆಳಗ್ಗಿನಿಂದ ಹಿಡಿದು ರಾತ್ರಿಯ ತನಕ, ತನ್ನ ಸ್ವಂತ ಕಥೆಯೇ ಮರೆತು ಹೋಗುವಂತೆ ಕೇಳಲು ಸಾವಿರ ಕಥೆಗಳು. ಮುಂಜಾವಿಗೆ ಅಂಗಡಿಗೆ ಹಾಲು ಹಾಕಲು ಬರುವ ಹುಡುಗನ ತಾಯಿಗೆ ಹುಷಾರಿಲ್ಲ. ಕೂಲಿಗೆ ಹೋಗುವ ಅಪ್ಪನ ಸಂಬಳ ಆಕೆಯ ಔಷಧಿಗೆ ಸಾಲುವುದಿಲ್ಲ. ಈತ ದುಡಿಯದಿದ್ದರೆ ಮನೆಯಲ್ಲಿ ಊಟವಿಲ್ಲ. ಆದರೂ ಆತನ ಮುಖದಲ್ಲಿ ನೋವಿಲ್ಲ. ಆತ ಎಲ್ಲ ಕಡೆ ಹಾಲು ಹಾಕಿ ಮುಗಿಸಿ ಬರುವಷ್ಟರಲ್ಲಿ ಕಲ್ಪನಾ ಆತನಿಗೆಂದೇ ಮೊದಲ ಚಹಾ ತಯಾರಿಸಿಟ್ಟಿರುತ್ತಾಳೆ. ಖುಷಿಯಿಂದ ಕುಡಿಯುವ ಆತನ ಬಳಿ ಆಕೆ ಹಣ ಕೇಳುವುದಿಲ್ಲ. ಆತ ಧನ್ಯವಾದವನ್ನು ಬಾಯಿ ಬಿಟ್ಟು ಹೇಳುವುದಿಲ್ಲ.

ಬೆಳಕಾದ ಮೇಲೆ ಬರುವ ಸೀತಮ್ಮನ ಕಥೆ ಅವರ ಬಾಯಿಂದ ಕೇಳುವುದೇ ಕಲ್ಪನಳಿಗೆ ಖುಷಿ. ಸೀತಮ್ಮ ಆಸ್ಪತ್ರೆಯ ಎಲ್ಲಾ ಕೊಠಡಿಯ ನೆಲ ಗುಡಿಸಿ ಒರೆಸಿ ಸ್ವಚ್ಚವಾಗಿರಿಸುವವರು. ಆದರೇನಂತೆ ಆಸ್ಪತ್ರೆಯ ಒಳಗಿರುವವರ ಮನಸ್ಸು ಆಕೆ ಒರೆಸಿದ ನೆಲದಷ್ಟು ಶುಭ್ರವಾಗಿಲ್ಲ. ದೊಡ್ಡ ಮನುಷ್ಯರ ಸಣ್ಣತನದ ಕಥೆಗಳು ದಿನಕ್ಕೊಂದು ಎಂಬಂತೆ  ಆಕೆ ಹೇಳುತ್ತಾಳೆ. ಎಲ್ಲಕ್ಕಿಂತ ಮಜವಾಗಿದ್ದದ್ದು ಆಕೆ ಮೊನ್ನೆ ಹೇಳಿದ ಚಪಲ ಚನ್ನಿಗ ಬ್ರಹ್ಮಚಾರಿ ಮುದುಕನೊಬ್ಬನ ಕಥೆ. ನಿಶ್ಯಕ್ತಿಯಿಂದ ಎದ್ದೇಳಲೂ ಕೂಡ ಆಗದ ಪರಿಸ್ಥಿತಿಯಲ್ಲಿ ಬಂದು ಆಸ್ಪತ್ರೆ ಸೇರಿದ್ದ ಆ ಮುದುಕನ ಶಕ್ತಿ ಎಲ್ಲಿ ಅಡಗಿತ್ತೋ ಗೊತ್ತಿಲ್ಲ, ಬೆಳ ಬೆಳಗ್ಗೆ ನೆಲ ಒರೆಸಲು ಬಂದ ಸೀತಮ್ಮನನ್ನು ನೋಡಿ ಆಕೆಯ ಕೈ ಹಿಡಿದು ಜಗ್ಗಾಡಿದ. ಏಳಲಾಗದ ಮುದುಕನ ಪ್ರಲಾಪವನ್ನು ನೋಡಿ ಗಾಬರಿಯಿಂದ ಸೀತಮ್ಮ ಕೈಗೆ ಸಿಕ್ಕಿದ ಯಾವುದೋ ಸ್ಟೀಲ್ ಚೊಂಬಿನಿಂದ ಆತನ ತಲೆಗೊಂದು ಬಲವಾದ ಪೆಟ್ಟು ಕೊಟ್ಟು, ಆತ ಹಾಸಿಗೆಯ ಮೇಲೆ ಅಲ್ಲೇ ಕುಸಿದು ಬಿದ್ದದ್ದು ನೋಡಿ ಎಲ್ಲಿ ಸತ್ತು ಹೋದನೋ ಎಂದು ಮತ್ತಷ್ಟು ಗಾಬರಿಯಾಗಿ ಅಲ್ಲಿಂದ ಪರಾರಿಯಾದರಂತೆ. ಆ ದಿನ ಮಧ್ಯಾಹ್ನ ದಾದಿಯರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡದ್ದನ್ನು ಕೇಳಿಸಿಕೊಂಡು ನಗು ತಡೆಯಲಾರದೆ ಕಲ್ಪನಾಳ ಬಳಿ ಬಂದು ಹೇಳಿಕೊಂಡಿದ್ದರು. ಆ ಬೆಳಗ್ಗೆ ಮುದುಕನ ತಪಾಸಣೆಗೆ ಹೋದ ವೈದ್ಯರಿಗೆ, ಮುದುಕನ ಹಣೆ ಮೇಲೆ ಇಷ್ಟೊಂದು ದೊಡ್ಡ ಗುಳ್ಳೆ ನೋಡಿ ಆಶ್ಚರ್ಯ. ಹೇಗಾಯಿತು ಕೇಳಿದರೆ ಆತ ಬಾಯಿ ಬಿಡುತ್ತಿಲ್ಲವಂತೆ. ಎದ್ದೇಳಲು ಸಾಧ್ಯವಾಗದ ಮುದುಕ, ನಡೆದಾಡಿ ಬಿದ್ದು ಗಾಯ ಮಾಡಿಕೊಂಡಿರುವ ಸಾಧ್ಯತೆ ಇಲ್ಲವೆಂದು ವೈದ್ಯರ ಖಚಿತ ನಂಬಿಕೆ. ಹೀಗೆ ಎಲ್ಲರ ಕುತೂಹಲಕ್ಕೆ ಕಾರಣವಾದ ಆ ಮುದುಕ ಮರುದಿನದಿಂದ ಸೀತಮ್ಮನ ತಂಟೆಗೆ ಬರಲಿಲ್ಲವಂತೆ. ಈಗಲೂ ಅದನ್ನು ನೆನೆದು ಸೀತಮ್ಮ ಮತ್ತು ಕಲ್ಪನಾ  ಜೋರಾಗಿ ನಗುವುದಿದೆ.

ಬೆಳಗ್ಗೆ ತಮ್ಮ ರಂಗು ರಂಗಿನ ಪ್ರಪಂಚವನ್ನು ಬಿಳಿ ಕೋಟಿನಡಿ ಮುಚ್ಚಿಟ್ಟು, ಸಂಜೆಯಾಗುತ್ತಿದ್ದಂತೆ ತಮ್ಮ ಸಹಪಾಠಿ ಸಂಗಾತಿಗಳೊಂದಿಗೆ ಸ್ವಚ್ಛಂದ ಜಗತ್ತಿನಲ್ಲಿ ವಿಹರಿಸುವ ವೈದ್ಯಕೀಯ ವಿದ್ಯಾರ್ಥಿಗಳನ್ನು ನೋಡಿ ಕಲ್ಪನಾಳಿಗೆ ತನಗೂ ಕೂಡ ಒಬ್ಬ ಜೀವದ ಗೆಳಯನಿದ್ದರೆ ಚಂದಗಿತ್ತು ಅನ್ನಿಸುವುದಿದೆ.
ಚಿನ್ನದಂತಹ ಹೆಂಡತಿ ಕಾಯಿಲೆ ಬಿದ್ದಾಗ, ಅತಿ ಅಕ್ಕರೆಯಿಂದ, ಇಡೀ ಊರು ಅಸೂಯೆ ಪಡುವಂತೆ ಪ್ರೀತಿ ತೋರಿಸಿ ಆಸ್ಪತ್ರೆ ಸೇರಿಸಿ, ಸಂಜೆ ಆಕೆ ನೋವಿನಲ್ಲಿ ನರಳುತ್ತಾ ಮಲಗಿರುವಾಗ ಚಹಾ ಹೀರುತ್ತಾ, ಗೆಳೆಯನ ಜೊತೆ ಫೋನಿನಲ್ಲಿ ಆಸ್ಪತ್ರೆಯರ ದಾದಿಯರ ಬಗೆಗೆ ಜೊಲ್ಲು ಸುರಿಸುತ್ತಾ ಗಂಡ ಮಾಡುವ ಟೀಕೆ ನೋಡಿ, ಮದುವೆಯ ವ್ಯವಸ್ಥೆ ಮೇಲೆ ಕಲ್ಪನಾಳಿಗೆ ವಾಕರಿಕೆ ಮೂಡುತ್ತದೆ.
ಅಪಘಾತದಲ್ಲಿ ಕೈಯ್ಯೋ ಕಾಲೋ ಮುರಿದುಕೊಂಡ ಸ್ನೇಹಿತನ ಜೊತೆ ಅತೀ ಉತ್ಸಾಹದಿಂದ ದಂಡು ದಂಡಾಗಿ ಆಸ್ಪತ್ರೆಗೆ ಬಂದು, ಸ್ವಲ್ಪ ಹೊತ್ತಿನಲ್ಲೇ ಬೇಸರವೆನಿಸಿ, ಚಹಾ ಕುಡಿಯಲು ಬಂದು ಕಲ್ಪನಾಳ ಜೊತೆ ಚೆಲ್ಲಾಟದ ಹರಟೆ ಹೊಡೆಯಲು ಯತ್ನಿಸುವ ಪಡ್ಡೆಗಳಿಗೂ ಕಡಿಮೆಯಿಲ್ಲ.

ಮೊನ್ನೆಯಷ್ಟೇ ಹುಟ್ಟಿದ ಮಗುವನ್ನು ಸಂಭ್ರಮದಿಂದ ಎತ್ತಿ ಆಡಿಸುವ ಅಪ್ಪನ ಮುಖದಲ್ಲಿರುವ ಕಾಳಜಿ ಆಕೆಯಲ್ಲಿ ಜೀವನೋತ್ಸಾಹ ತುಂಬಿದರೆ, ಅಪ್ಪ ಆಸ್ಪತ್ರೆಯ ಹಾಸಿಗೆಯಲ್ಲಿ ಕೊನೆಯುಸಿರುಗಳನ್ನು ಎಣಿಸುತ್ತಿರಬೇಕಾದರೆ, ಮಕ್ಕಳೆಲ್ಲ ಜೊತೆಗೂಡಿ, ವಕೀಲರನ್ನು ಕರೆಸಿ ಆಸ್ತಿ ಪಾಸ್ತಿ ಪಾಲು ಪಟ್ಟಿಯನ್ನು ಹರಡಿ ತನ್ನ ಅಂಗಡಿಯ ಆವರಣದಲ್ಲೇ ತಮ್ಮ ತಮ್ಮೊಳಗೆ ಚರ್ಚಿಸುತ್ತಾ, ಹಸಿದ ತೋಳಗಳಂತೆ ವರ್ತಿಸುವ ರೀತಿ ಆಕೆಯಲ್ಲಿ ಜೀವನದ ಬಗ್ಗೆ ನಕಾರಾತ್ಮಕ ಭಾವನೆ ತುಂಬುತ್ತದೆ.
ಮನಸ್ಸಿನ ಮೂಲೆಯಲ್ಲಿ ಆಕೆಗೂ ಕೂಡ ಸಂಗಾತಿಯ ಕೊರತೆ ಕಾಡುವಂತೆ ತೋರಿದರೂ, ತನ್ನದೇ ಬಿಡುವಿಲ್ಲದ ಕೆಲಸದಲ್ಲಿ ಬಿಡುವು ಮಾಡಿಕೊಳ್ಳಲೊಪ್ಪದೇ, ಅಂಗಡಿಗೆ ಬರುವ ಜನರೊಂದಿಗೆ ಕಷ್ಟ ಸುಖ ಮಾತನಾಡಿಕೊಂಡು, ಅವರ ಪ್ರಪಂಚವನ್ನು ತನ್ನದೇ ಆದ ಚಿಕ್ಕ ಕಿಟಕಿಯ ಮೂಲಕ ಕೌತುಕದಿಂದ ನೋಡುವ ಪ್ರಯತ್ನ ಮಾಡುತ್ತಾಳೆ. ಎಲ್ಲಿ ಓದಿದ್ದು ಎಂದು ನೆನಪಾಗದಿದ್ದರೂ ಕೂಡ, ರೂಮಿ ಕವಿಯ ಪದವೊಂದು ಆಕೆಯ ಮನಸ್ಸನ್ನು ಆಗಾಗ್ಗೆ ಹಾದು ಹೋಗುತ್ತಲೇ ಇರುತ್ತದೆ.
ಎಲ್ಲಿಯವರೆಗೆ ನಮ್ಮ ಹೃದಯ, ಬೇರೆಯವರ ಹೃದಯವನ್ನು ಅನುಕೂಲಿಸಿ ಹೊಂದಿಸಿಕೊಳ್ಳಬಲ್ಲ ಅಚ್ಚಾಗಲು ಸಾಧ್ಯವಾಗದೋ ಅಲ್ಲಿಯವರೆಗೆ ಇತರರಲ್ಲಿ ನಮಗೆ ವ್ಯತ್ಯಾಸಗಳೇ ತೋರುತ್ತವೆ.

ಕಳೆದ ಕೆಲವು ದಿನಗಳಿಂದ ಮಧ್ಯಾಹ್ನದ ಹೊತ್ತಿಗೆ ಒಬ್ಬ ನೀಲಿ ಕಣ್ಣಿನ ಪ್ರೌಢ ಯುವಕ ಚಹಾ ಕುಡಿಯಲು ಬರುತ್ತಾನೆ. ಹೆಚ್ಚೇನು ಮಾತನಾಡದ ಆತನ ದೃಷ್ಟಿ ಚಹಾ ಕುಡಿಯುತ್ತಿರಬೇಕಾದರೆ ದಿಗಂತದೆಡೆ ನೆಟ್ಟಿರುತ್ತದೆ. ಒಮ್ಮೊಮ್ಮೆ ಯಾವುದೋ ಸ್ವಪ್ನದಿಂದ ಬೆಚ್ಚಿ ಬಿದ್ದವನಂತೆ ಕಲ್ಪನಾಳನ್ನೇ ಬೆರಗುಗಣ್ಣಿನಿಂದ ನೋಡುತ್ತಾನೆ. ಆಕೆಯನ್ನು ಸೆಳೆಯುತ್ತಿರುವುದು ಆತನ ಮುಖದಲ್ಲಿ ಎದ್ದು ತೋರುವ ಪರಿಚಿತ ಕಳೆ. ಎಷ್ಟೋ ವರ್ಷಗಳಿಂದ ಪರಿಚಿತನಂತೆ ವರ್ತಿಸುವ ಆತನ ಬಗೆಗೆ ದಿನ ದಿನಕ್ಕೂ ಮನಸ್ಸಿನ ಮೂಲೆಯಲ್ಲಿ ಕಲ್ಪನಾಳಿಗೆ ಹೇಳಲಾರದ ಭಾವನೆ ನಿಧಾನಕ್ಕೆ ಮೂಡತೊಡಗಿದೆ. ದಿನ ಕಳೆದಂತೆ ಆಕೆ ಆತನ ಹಾದಿ ಕಾಯತೊಡಗುತ್ತಾಳೆ. ಆತ ಎದುರಿಗಿದ್ದಾಗ ಮಾತನಾಡಲು ಹಾತೊರೆಯುತ್ತಾಳೆ. ಆದರೆ ಆತ ಬಲು ಮಿತಭಾಷಿ. ಆತನ ಹೆಸರು ಕೇಳಬೇಕು, ಆತನ ಜೊತೆ ಕುಳಿತು ತಾನೂ ಕೂಡ ಚಹಾ ಕುಡಿಯಬೇಕು, ಆತ ಆಸ್ಪತ್ರೆಗೆ ಬರುತ್ತಿರುವ ಕಾರಣ ಕೇಳಬೇಕು. ತನ್ನೆಲ್ಲ ಜಂಜಾಟಗಳನ್ನೂ ಆತನ ಜೊತೆ ಹಂಚಿಕೊಳ್ಳಬೇಕು ಎಂಬೆಲ್ಲ ವಿಚಿತ್ರ ಆಸೆಗಳು ಆಕೆಗೆ ಮೂಡಿದರೂ, ಆತನ ಮುಖ ನೋಡಿದಾಕ್ಷಣ ಹೇಳಬೇಕೆಂದಿರುವುದೆಲ್ಲಾ ಮರೆತು, ಆತ ಇನ್ನಷ್ಟು ಪರಿಚಿತನೆಂದೆನಿಸಿ, ಹೇಗೆ ಆತ ಮೊದಲಿನಿಂದ ಪರಿಚಿತನಿರಬಹುದೆಂಬ ಗೊಂದಲಕ್ಕೆ ಸಿಲುಕುತ್ತಾಳೆ.

ಕಳೆದ ಒಂದೆರಡು ದಿನಗಳಿಂದ ಆತ ಅದೇ ಆಸ್ಪತ್ರೆಯ ಒಬ್ಬ ಹಿರಿಯ ವೈದ್ಯರ ಜೊತೆ ಬರುತ್ತಿದ್ದಾನೆ. ಆ ಹಿರಿಯ ವೈದ್ಯರನ್ನು ನೋಡಿದರೆ ಕಲ್ಪನಳಿಗೆ ಯಾಕೋ ಅಷ್ಟಕ್ಕಷ್ಟೇ. ಇತರ ವೈದ್ಯರಿಗಿರುವ ಸೌಜನ್ಯ ಇವರಿಗಿಲ್ಲ. ಭಾರಿ ನಿಷ್ಠುರ, ನೇರ ಸ್ವಭಾವದ ವ್ಯಕ್ತಿ. ಆತ ಅವರೊಂದಿಗೆ ಬಂದಾಗ ಕಲ್ಪನಾಳಿಗೆ ಆತನ ಜೊತೆ, ಏನೇನೋ ಚರ್ಚಿಸಬೇಕೆಂದುಕೊಂಡಿರುವ ವಿಷಯಗಳ ಬಗ್ಗೆ ಮಾತನಾಡುವ ಅವಕಾಶವೂ ಕೂಡ ಸಿಗುವುದಿಲ್ಲವಾದರಿಂದ  ಆ ವೈದ್ಯರ ಮೇಲೆ ಆಕೆಗೆ ಆಕ್ರೋಶ ಇನ್ನು ಸ್ವಲ್ಪ ಜಾಸ್ತಿ. ಆತ ಅವರ ಜೊತೆ ಬಂದಾಗೆಲ್ಲ, ಚಹಾ ತಗೆದುಕೊಂಡು ದೂರ ನಿಂತು ಏನೋ ಗಹನವಾದ ಚರ್ಚೆ ನಡೆಸುತ್ತಾನೆ. ಆದರೆ ಚರ್ಚೆಯ ಮಧ್ಯೆಯೂ ಪದೇ ಪದೇ ಕಲ್ಪನಾಳ ಕಡೆ ತಿರುಗುವ ಆ ವೈದ್ಯರ  ದೃಷ್ಟಿಯನ್ನು ಗಮನಿಸಿರುವ ಕಲ್ಪನಾಳಿಗೆ ಅವರ ಮೇಲೆ ಇನ್ನಷ್ಟು ರೇಜಿಗೆ ಹುಟ್ಟಿದೆ. ಈಗೀಗಂತೂ ಆ ವೈದ್ಯರ ಮುಖ ನೋಡಿದ ಕೂಡಲೇ ಆಕೆಗೆ ಸೀತಕ್ಕನ ಕಥೆಯ ಚಪಲ ಚನ್ನಿಗ ಮುದುಕನ ನೆನಪಾಗಿ ಇವರೂ ಕೂಡ ಅದೇ ಜಾತಿಗೆ ಸೇರಿದವರೆಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದಾಳೆ.

ಅಂದು ಆತ ಒಬ್ಬನೇ ಬಂದ. ಮುಖ ಸಪ್ಪಗಾಗಿತ್ತು. ಎಂದಿನಂತೆ ಒಂದು ಚಹಾ ತಗೆದುಕೊಂಡು ಕಲ್ಪನಾ ತನ್ನ ಬೇಸರದ ಕಾರಣ ಕೇಳಲೆಂಬಂತೆ ಆಕೆಯ ಮುಂದೆಯೇ ಚಹಾ ಹಿಡಿದುಕೊಂಡು ಸುಮ್ಮನೆ ನಿಂತು ದೂರದೆಡೆದೆ ದಿಟ್ಟಿಸತೊಡಗಿದ.
‘ಯಾಕೆ ಸಪ್ಪಗಿದ್ದೀರ? ಮನೆಯವರು ಹುಶಾರಿಲ್ಲವೇನೋ?’. ಬೇರೆ ಗಿರಾಕಿಗಳಂತೂ ಹೇಗೂ ಇಲ್ಲ. ಇದೇ ತಕ್ಕ ಸಮಯ ಆತನನ್ನು ಮಾತನಾಡಿಸಲೆಂಬಂತೆ ಕಲ್ಪನಾ ಕೇಳಿದಳು,
ಆತ ಯಾರ ಸಲುವಾಗಿ ಆಸ್ಪತ್ರೆಗೆ ಬರುತ್ತಿದ್ದನೆಂಬುದು ತಿಳಿಯದೇ ಇರುವ ಆಕೆಗೆ, ಹಾಗಾದ್ರೂ ಆ ವಿಷಯ ತಿಳಿಯಬಹುದೇನೋ ಎಂಬ ನಿರೀಕ್ಷೆ.
‘ಇಲ್ಲ ಹಾಗೇನಿಲ್ಲ.’ ಎಂದಷ್ಟೇ ಉತ್ತರಿಸಿ ಆತ ಮತ್ತೆ ದೂರದ ಕಡೆ ದಿಟ್ಟಿಸಿದ.
ಕುತೂಹಲ ತಡೆಯಲಾರದೆ ಅಸಹನೆಯಿಂದ ಕಲ್ಪನಾ ಕೇಳಿಯೇ ಬಿಟ್ಟಳು, “ಯಾರ ಸಲುವಾಗಿ ನೀವು ಆಸ್ಪತ್ರೆಗೆ ಬರುವುದು? ತಂದೆ ಅಥವಾ ತಾಯಿಗೆ ಹುಶಾರಿಲ್ಲವೇ?”.
ಆತ ಒಂದು ಕ್ಷಣ ಆಕೆಯನ್ನೇ ದಿಟ್ಟಿಸಿ ಉತ್ತರಿಸಿದ, “ಅವೆರೆಲ್ಲರೂ ಆರೋಗ್ಯವಾಗಿಯೇ ಇದ್ದಾರೆ. ಹೆಂಡತಿಗೆ ಹುಷಾರಿಲ್ಲ.”
ಆತನ ಉತ್ತರ ಕೇಳಿ ಕಲ್ಪನಾಳಿಗೆ ಅತೀವ ನಿರಾಸೆಯಾಗಿ ಮುಖ ಬಾಡಿ ಹೋಯಿತು. ಆಕೆ ಇತ್ತೀಚೆಗೆ ಯಾವ ಹುಡುಗನನ್ನು ಕೂಡ ಈತನಷ್ಟು ಕಾರಣವಿಲ್ಲದೆ ಮೆಚ್ಚಿಕೊಂಡಿರಲಿಲ್ಲ. ಆತನ ಜೊತೆ ಮಾತನಾಡುವ ಆಸೆಯಿಂದ ಮಾತನಾಡಿಸಿದ ಮೊದಲ ದಿನವೇ ಆಕೆಯ ಕನಸುಗಳು ಭಗ್ನವಾಗಿದ್ದವು.ಆದರೂ ಬೇಸರವನ್ನು ಮುಖದ ಮೇಲೆ ತರಿಸದೇ, ಮತ್ತೆ ಅಂಗಡಿಯ ಕೆಲಸದಲ್ಲಿ ಮಗ್ನಳಾಗಿ ನಿರುತ್ಸಾಹದಿಂದಲೇ ಮತ್ತೆ ಕೇಳಿದಳು, “ಏನಾಗಿದೆ ಅವರಿಗೆ?”.
ಒಂದು ದೀರ್ಘ ನಿಟ್ಟುಸಿರು ಬಿಡುತ್ತಾ ಆತ ತನ್ನ ಹೆಂಡತಿಯ ಕಥೆ ಬಿಚ್ಚಿಡಲು ಶುರುವಿಟ್ಟುಕೊಂಡ, “ನಂಗೆ ಆಕೆ ಪರಿಚಯವಾದದ್ದು ಬೆಂಗಳೂರಿನ ಒಂದು ಹೆಸರಾಂತ ನಾಟಕ ಶಾಲೆಯಲ್ಲಿ. ನನ್ನಂತೆಯೇ ಆಕೆಗೂ ಕೂಡ ನಟನೆಯಲ್ಲಿ ಬಹು ಆಸಕ್ತಿ. ಯಾವುದಾದರೂ ಪಾತ್ರದ ಅಭಿನಯ ಆಕೆ ಮಾಡುತ್ತಿದ್ದರೆ ಆ ಪಾತ್ರವೇ ನಮ್ಮೆದುರಿಗೆ ಜೀವ ತಳೆದು ಮಾತನಾಡುತ್ತಿದೆಯೇನೋ ಎನ್ನುವಷ್ಟು ಸಹಜತೆ ತುಂಬುವ ಸಾಮರ್ಥ್ಯ ಆಕೆಯಲ್ಲಿತ್ತು. ನಾಟಕ ಜಗತ್ತಿನ ದಿಗ್ಗಜರೆಲ್ಲ ಆಕೆಯನ್ನು ಪ್ರಶಂಸಿಸುವವರೇ. ಅದು ಹೇಗೋ, ಯಾಕೋ ಗೊತ್ತಿಲ್ಲ, ಅಂತಹ ಅದ್ಭುತ ಯುವ ನಟಿಗೆ ನನ್ನಂಥ ಸಾಮಾನ್ಯ ನಟನ ಮೇಲೆ ಪ್ರೀತಿ ಹುಟ್ಟಿತು. ಮುಂದೆ ಆಕೆ ನನ್ನ ಮೆಚ್ಚಿಕೊಳ್ಳಲು ಕಾರಣ ನನ್ನ ನೀಲಿ ಕಣ್ಣು ಎಂದು ಹೇಳಿ ನಕ್ಕಿದ್ದಳು. ಇಷ್ಟು ಅಗಾಧವಾದ ಪ್ರತಿಭೆಯಿದ್ದರೂ ಅಹಂಕಾರದ ಲವಲೇಶವೂ ಇಲ್ಲದ ಆಕೆಯ ಮೇಲೆ ಯಾರಿಗೆ ತಾನೇ ಪ್ರೀತಿ ಹುಟ್ಟದೇ ಇರಲು ಸಾಧ್ಯ ಹೇಳಿ. ಹೀಗೆ ಒಂದು ಸುದಿನ ಅಷ್ಟೇನೂ ಇಷ್ಟವಿಲ್ಲದೆ ಒಪ್ಪಿಗೆ ಸೂಚಿಸಿದ ನಮ್ಮಿಬ್ಬರ ಮನೆಯವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದೆವು.  ಮದುವೆಯಾದ ಸ್ವಲ್ಪ ದಿನಗಳಲ್ಲೇ ಆಕೆಯ ಬಗ್ಗೆ ಗೊತ್ತಿಲ್ಲದ ವಿಚಾರಗಳು ನನಗೆ ತಿಳಿಯತೊಡಗಿದವು. ಸಾಮಾನ್ಯವಾಗಿ ಮಾಮೂಲಾಗೇ ವರ್ತಿಸುತ್ತಿದ್ದ ಆಕೆ ಕೆಲವೊಂದು ದಿನ ನನಗೆ ಸಂಪೂರ್ಣ ಪರಕೀಯ ಎಂಬಂತೆ ವರ್ತಿಸತೊಡಗಿದಳು. ಆಮೇಲೆ ತಿಳಿಯಿತು, ಆಕೆ ನಿಜ ಜೀವನದಲ್ಲಿ ದಿನಂಪ್ರತಿ ನೋಡುವ ವ್ಯಕ್ತಿಗಳಲ್ಲಿ ಯಾರದಾರೂ ಆಕೆಯ ಮೇಲೆ ಬಹುವಾಗಿ ವರ್ಚಸ್ಸು ಬೀರಿದರೆ, ಒಂದೆರಡು ದಿನಗಳ ಬಳಿಕ ಆಕೆ ಆ ವ್ಯಕ್ತಿಯ ವ್ಯಕ್ತಿತ್ವವನ್ನೇ ತನ್ನ ಮೇಲೆ ಅಳವಡಿಸಿಕೊಳ್ಳುತ್ತಿದ್ದಳು. ಒಂದು ದಿನ ಆಕೆ ನನ್ನ ಕಾರಿನ ಚಾಲಕಳಾಗಿ, ಇನ್ನೊಮ್ಮೆ ಮನೆ ಕಾಯುವ ಕಾವಲುಗಾರನಂತೆ, ಕೆಲವೊಮ್ಮೆ ಕಾಲೇಜಿಗೆ ಹೋಗುವ ಹುಡುಗಿಯಂತೆ ಚೆಲ್ಲು ಚೆಲ್ಲಾಗಿ ವರ್ತಿಸಿದರೆ ಕೆಲವೊಮ್ಮೆ ಅತೀ ಪ್ರೌಢ ಲೇಖಕಿಯಂತೆ. ಒಮ್ಮೆಯಂತೂ ನಮ್ಮ ಮನೆ ಕೆಲಸದ ಹೆಂಗಸಿನಂತೆ ತನ್ನನ್ನು ಭಾವಿಸಿಕೊಂಡು ಸಂಜೆ ನಾನು ಮನೆಗೆ ಮರಳುವುದರೊಳಗೆ ಇಡೀ ಮನೆಯನ್ನು ಒಬ್ಬಳೇ ಹೊಳೆಯುವಂತೆ ಸ್ವಚ್ಚಗೊಳಿಸಿ, ದಣಿದು ನೆಲದ ಮೇಲೆ ತಲೆತಿರುಗಿ ಬಿದ್ದಿದ್ದಳು. ಬಾಗಿಲು ಬಡಿದು ಸಾಕಾಗಿ ನನ್ನ ಬಳಿಯಿದ್ದ ಇನ್ನೊಂದು ಕೀಲಿ ಬಳಸಿ ಮನೆ ಒಳಗೆ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಯಾಕೆ ಹೀಗೆಂದು ತಿಳಿಯದೇ, ಕಷ್ಟ ಪಟ್ಟು ಆಕೆಯನ್ನು ಒಲಿಸಿ ಬೆಂಗಳೂರಿನ ಒಬ್ಬ ಖ್ಯಾತ ಮನಶ್ಯಾಸ್ತ್ರಜ್ಞರ ಬಳಿ ತೋರಿಸಿದಾಗ ಸತ್ಯ ಹೊರ ಬಿತ್ತು. ಮದುವೆಯಾದ ಮೇಲೆ ಆಕೆ ಸ್ವಇಚ್ಚೆಯಿಂದ ನಾಟಕಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿ ಸಂಪೂರ್ಣ ಗೃಹಿಣಿಯಾಗಿ ಮಾರ್ಪಾಡಾಗಿದ್ದಳು. ಆದರೂ ಆಕೆಯ ಅಚ್ಚುಮೆಚ್ಚಿನ ಹವ್ಯಾಸವಾದ ನಟನೆಯು, ಆಕೆಯ ಮನದ ಮೂಲೆಯಲ್ಲಿ ಹೆಮ್ಮರವಾಗಿ ಬೆಳೆಯುತ್ತಲೇ ಇತ್ತು. ಆದರೆ ಆಕೆಯ ಈ ಹಂಬಲ ಅವಕಾಶವಿಲ್ಲದೇ ಮನಸ್ಸಿನಾಳದಲ್ಲೇ ಹಿಂಡಿ ಹಿಪ್ಪೆಯಾಗಿ ಹೋಗುತ್ತಿತ್ತು. ಇಂತಹ ವಾಂಛೆ ಅದುಮಿಡಲಾಗದಶ್ಟು ತೀವ್ರವಾಗಿ ಬೆಳೆದಾಗ ಆಕೆ ತನಗೆ ಗೊತ್ತಿಲ್ಲದಂತೆಯೇ ತನ್ನನ್ನು ತೀವ್ರವಾಗಿ ಬಾಧಿಸುವ ಯಾವುದಾದರೊಂದು ಪಾತ್ರವಾಗಿ ಬದಲಾಗಿ ಬಿಡುತ್ತಿದ್ದಳು. ಹಾಗೆಂದು ಅದೇನು ಶಾಶ್ವತವೆಂದಲ್ಲ. ಹೆಚ್ಚೆಂದರೆ ಒಂದು ವಾರ ಆಕೆ ಆ ಪಾತ್ರದ ಗುಂಗಲ್ಲಿರುತ್ತಿದ್ದಳಷ್ಟೇ. ಬೇರೆ ಯಾವುದೇ ಪಾತ್ರ ಆಕೆಯನ್ನು ಹೊಕ್ಕಿದಾಗ ನಾನೆಷ್ಟೇ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಿದರೂ ಅವಳ ನಿಜ ವ್ಯಕ್ತಿತ್ವವನ್ನು ಒಪ್ಪಲು ಆಕೆ ತಯಾರಾಗಿರುವುದಿಲ್ಲ. ಆಕೆ ಸಹಜ ಸ್ಥಿತಿಗೆ ಮರಳಿದ ಮೇಲೆ ನಡೆದದ್ದನ್ನ ತಿಳಿಸಿದರೆ ನಾನೇ ಸುಳ್ಳು ಹೇಳುತ್ತಿರುವೆನೇನೋ ಎಂಬಂತೆ ನನ್ನನ್ನ ಅನುಮಾನದ ದೃಷ್ಟಿಯಿಂದ ನೋಡುತ್ತಾಳೆ. ನಡೆದ ಯಾವುದೇ ಘಟನೆ ಆಕೆಗೆ ನೆನಪಿರುವುದಿಲ್ಲ. ಹಾಗಂತ ನಾನು ಸುಮ್ಮನಿರುವಂತಿಲ್ಲ. ಆಕೆಯನ್ನು ಈ ಬಾಧೆಯಿಂದ ರಕ್ಷಿಸುವ ಹೊಣೆ ನನ್ನ ಮೇಲಿದೆ. ಅದಕ್ಕೆಂದೇ ಬೆಂಗಳೂರಿನ ವೈದ್ಯರ ಸೂಚನೆ ಮೇರೆಗೆ ಇಲ್ಲಿ ಆಕೆಗೆ ಹೆಚ್ಚೇನು ತಿಳಿಸದೇ ಕರೆತಂದಿರುವುದು. ಒಂದೆರಡು ದಿನಗಳಿಂದ ಆಕೆಯ ವರ್ತನೆಯನ್ನು ವಿಶ್ಲೇಶಿಸುತ್ತಿರುವ ಇಲ್ಲಿನ ತಜ್ಞ ವೈದ್ಯರ ಪ್ರಕಾರ ಆಕೆಯನ್ನು ಗುಣಪಡಿಸಲಿರುವ ಒಂದೇ ದಾರಿಯೆಂದರೆ ಆಕೆಯಲ್ಲಿ ಪರವ್ಯಕ್ತಿತ್ವ ಪ್ರವೇಶವಾಗಿರುವಾಗಲೇ ಆಕೆಯ ನಿಜ ವ್ಯಕ್ತಿತ್ವವನ್ನು ನೆನಪಿಸುವಂಥಾ  ಯಾವುದಾದರೊಂದು ಕ್ರಿಯೆಯನ್ನು ನಡೆಸಬೇಕು. ಆ ಘಟನೆ ಆಕೆಯ ನಿಜ ವ್ಯಕ್ತಿತ್ವ ಹಾಗೂ ಆಕೆಯಲ್ಲಿ ಪ್ರವೇಶವಾಗಿರುವ ಮಿಥ್ಯವ್ಯಕ್ತಿತ್ವದ ನಡುವಿನ ಕೊಂಡಿಯಂತಿರಬೇಕು.” ಇಷ್ಟು ಹೇಳಿ ತಣ್ಣಗಾಗಿದ್ದ ಚಹಾವನ್ನು ಒಂದೇ ಗುಟುಕಿಗೆ ಹೀರಿ, ಮತ್ತೊಮ್ಮೆ ಕಲ್ಪನಾಳ ಕಣ್ಣನ್ನೇ ದಿಟ್ಟಿಸಿ ಆತ ಹೊರಟು ಹೋದ. ಮುಖ ತಿರುಗಿಸಿದವನ ಕಣ್ಣಲ್ಲಿ ನೀರು ಮೂಡುತ್ತಿತ್ತೇನೋ ಎಂಬ ಅನುಮಾನ ಕಲ್ಪನಾಳಿಗಾಯಿತು. ಆತ ಕಡೆಯಲ್ಲಿ ಹೇಳಿದ ಪರಿಹಾರದ ವಾಕ್ಯ ಅರ್ಥವಾಗದಿದ್ದರೂ ಕೂಡ, ಇಲ್ಲಿಯ ತನಕ ತಾನು ಯಾರಿಂದಲೂ ಕೇಳದ ಆತನ ವಿಚಿತ್ರವಾದ ಕಥೆ ಕೇಳಿ, ಪ್ರೀತಿಸಿ ಬಂದವಳಿಗಾಗಿ ಇಷ್ಟೆಲ್ಲಾ ಅಕ್ಕರೆಯಿಂದ ಆರೈಕೆ ಮಾಡುತ್ತಿರುವ ಆತನ ಮೇಲೆ ಗೌರವ ಮೂಡಿತು.

ಇಂದು ಕೂಡ ಕಲ್ಪನಾ, ನೀಲಿ ಕಣ್ಣಿನ ಮನುಷ್ಯನ ನಿರೀಕ್ಷೆಯಲ್ಲಿ, ಆತನಿಂದ ಅವನ ಹೆಂಡತಿಯ ಬಗ್ಗೆ ಮತ್ತಷ್ಟು ವಿಷಯ ತಿಳಿಯುವ ಕುತೂಹಲದಿಂದ ಆತನ ದಾರಿ ಕಾಯುತ್ತಿದ್ದಾಳೆ. ಯಾವತ್ತಿಗಿಂತ ಸ್ವಲ್ಪ ಜಾಸ್ತಿಯೇ ವೈದ್ಯಕೀಯ ವಿದ್ಯಾರ್ಥಿಗಳು ಚಹಾದಂಗಡಿಯ ಸುತ್ತ ನೆರೆದಿದ್ದಾರೆ. ಮುಗಿಯದ ಮಾತುಕತೆ ಈ ಹುಡುಗ ಹುಡುಗಿಯರದ್ದು ಎಂದು ಮನದಲ್ಲಿಯೇ ನಗುವ ಕಲ್ಪನಾಳಿಗೆ, ಅವರೆಲ್ಲರೂ ಯಾರದ್ದೋ ದಾರಿ ಕಾಯುತ್ತಿರುವ ಹಾಗೆ ಭಾಸವಾಗುತ್ತಿದೆ. ಸ್ವಲ್ಪ ಹೊತ್ತಿನಲ್ಲೇ ಕಲ್ಪನಾ ದ್ವೇಷಿಸುವ ಆ ಹಿರಿಯ ವೈದ್ಯರು ಕೂಡ ಚಹಾದಂಗಡಿಯೆದುರು ಬಂದು ಕೈಕಟ್ಟಿ ನಿಂತುಕೊಂಡು ಆಕೆಯನ್ನೇ ಎಂದಿನಂತೆ ದಿಟ್ಟಿಸತೊಡಗಿದ್ದಾರೆ. ಇಷ್ಟೊಂದು ಉನ್ನತ ಹುದ್ದೆಯಲ್ಲಿರುವ ಈ ಮನುಷ್ಯನಿಗೆ ಒಬ್ಬ ಹುಡುಗಿಯ ಜೊತೆ ಹೇಗೆ ವರ್ತಿಸಬೇಕೆಂಬ ಜವಾಬ್ದಾರಿ ಇಲ್ಲವೇ? ಹೋಗಲಿ, ಸುತ್ತಲಿನ ಜನ ತನ್ನ ಚಪಲವನ್ನು ನೋಡಿ ನಗುತ್ತಾರೆಂಬ ಸಾಮಾನ್ಯ ಜ್ಞಾನ ಕೂಡ ಇವರಿಗೆ ಇಲ್ಲದೇ ಹೋಯಿತೇ ಎಂದು ಅವರನ್ನು ಮನದಲ್ಲಿಯೇ ಶಪಿಸುತ್ತಾ, ತನಗಾಗುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ಚಹಕ್ಕಾಗಿ ಮೊದಲೇ ಕಾಯಿಸಿಟ್ಟಿದ್ದ ಹಾಲನ್ನು ಮತ್ತೆ ಒಲೆಯ ಮೇಲೆ ಬಿಸಿಗಿಡುತ್ತಾ ಕೆಲಸದಲ್ಲಿ ಮಗ್ನಳಾಗಿರುವ ನಟನೆ ಮಾಡತೊಡಗಿದಳು. ಈ ನಡುವೆ ಸೃಷ್ಟಿಯಾಗಿರುವ ಸನ್ನಿವೇಶದಿಂದ ಸುತ್ತಲಿನ ಜನರೆಲ್ಲಾ ತನ್ನನ್ನೇ ಗಮನಿಸುತ್ತಿದ್ದಾರೇನೋ ಎಂಬ ಕಸಿವಿಸಿ ಆಕೆಯ ಮನದಲ್ಲಿ ಮೂಡತೊಡಗಿತು. ತನ್ನಿಂದ ಏನಾದರೂ ತಪ್ಪಾಗಿರಬಹುದೇ? ತಾನು ಮಾಡಿಕೊಟ್ಟ ಚಹಾ, ಕಾಫಿ ಕುಡಿದು ಯಾರಿಗಾದರೂ ಏನಾದರು ಆಗಿರಬಹುದೇ? ಅದರ ವಿಚಾರಣೆಗೆಂದೇ ಈ ಹಿರಿಯ ವೈದ್ಯ ಬಂದಿರಬಹುದೇ? ಯಾವತ್ತು ಇವರ ಜೊತೆಗಿರುವ ಆ ನೀಲಿ ಕಣ್ಣಿನ ಮನುಷ್ಯ ಯಾಕೆ ಬಂದಿಲ್ಲ? ಆತನಿಗೇನಾದರೂ ಆಗಿರಬಹುದೇ ಅಥವಾ ಆತನೇ ತನ್ನ ಹೆಂಡತಿಯ ಪರಿಸ್ಥಿತಿಯಿಂದ ಖಿನ್ನತೆಗೊಳಗಾಗಿ ತನಗೆ ಏನಾದರೂ ಹಾನಿ

ಮಾಡಿಕೊಂಡಿರಬಹುದೇ? ನಿನ್ನೆ ಆತನನ್ನು ಕಡೆಯದಾಗಿ ಭೇಟಿ ಮಾಡಿದ್ದು ತಾನಿರಬಹುದೆಂದು ಎಲ್ಲರೂ ತನ್ನನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾರೆಯೇ? ಎಲ್ಲಿ ಈ ಅನುಭವಸ್ಥ ವೈದ್ಯರಿಗೆ ಮನಸ್ಸು ಓದಲು ಬರುತ್ತಿರಬಹುದೇ? ಗೃಹಸ್ಥ ಗಂಡಸಿನ ಮೇಲೆ ತನಗೆ ಒಲವು ಮೂಡಿದ್ದು ಈ ವೈದ್ಯರಿಗೆ ತಿಳಿದು ಅದರ ಬಗ್ಗೆ ವಿಚಾರಿಸಲು ಬಂದಿರಬಹುದೇ? ಕ್ಷಣಮಾತ್ರದಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ಸಾವಿರಾರು ಆಲೋಚನೆಗಳು ಕಲ್ಪನಾಳ ಮನಸ್ಸಿನಲ್ಲಿ ಹಾದು ಹೋಗಿ ವಿಚಿತ್ರವಾದ ಅಸೌಖ್ಯದಿಂದ ಬೆವರತೊಡಗಿದಳು. ಅಷ್ಟರಲ್ಲಿ ದೂರದಲ್ಲಿ ನಡೆದುಕೊಂಡು ಬರುತ್ತಿದ್ದ ನೀಲಿ ಕಣ್ಣಿನ ಆತನನ್ನು ನೋಡಿ ಆಕೆಗೆ ಅರ್ಧ ಜೀವ ಮರಳಿದಂತಾಯಿತು. ಯಾವತ್ತೂ  ಕೈ ಬೀಸಿಕೊಂಡೇ ಬರುತ್ತಿದ್ದ ಆತನ ಕೈಯಲ್ಲಿ ಇಂದು ಚಹಾ ತುಂಬಿಸಿಕೊಂಡು ಹೋಗುವಂಥ ಫ್ಲಾಸ್ಕ್ ಇದೆ. ಆತನ ಹೆಂಡತಿಗೋಸ್ಕರ ಚಹಾ ತಗೆದುಕೊಂಡು ಹೋಗಲು ತಂದಿರಬಹುದೆಂದು ಆಲೋಚಿಸುತ್ತ ಆಕೆ ಚಹಾ ತಯಾರಿಸಲು ಮುಂದುವರೆದಳು. ಹತ್ತಿರ ಬಂದು ನಿಂತ ಆತನನ್ನು ನೋಡಿ ಪರಿಚಯದ ನಗು ನಕ್ಕಳು. ಆದರೆ ಆತನ ಮುಖ ಯಾವುದೋ ಆತಂಕದಿಂದಿರುವಂತಿದೆ. ಇವಳು ಚಹಾ ಕೊಡಲು ಲೋಟ ತೆಗೆಯಲು ಮುಂದುವರೆಯುವ ಮುಂಚೆ ಆತನೇ ಆಕೆಯನ್ನು ತಡೆದು, ಅಲ್ಲಿದ್ದ ಒಂದು ಲೋಟವನ್ನೆತ್ತಿಕೊಂಡು ತಾನು ತಂದಿದ್ದ ಫ್ಲಾಸ್ಕನ್ನು ತೆರೆದು ಅದರಲ್ಲಿದ್ದ ಚಹಾವನ್ನು ಲೋಟಕ್ಕೆ ಸುರಿದು ಕಲ್ಪನಾಳ ಮುಂದಿರಿಸಿ ಬಿಕ್ಕುತ್ತಾ ಹೇಳುತ್ತಾನೆ, “ಚಹಾ ಕುಡಿ ಕಲ್ಪನಾ. ಮನೆಗೆ ಹೋಗೋಣ ನಾವು. ಸಾಕು ಇಲ್ಲಿದ್ದದ್ದು.” ಆತನ ನೀಲಿ ಕಣ್ಣು ತುಂಬಿ ಬಂದು ಹನಿ ನೀರು ಕೆನ್ನೆಯ ಮೇಲಿಂದ ಜಾರುತ್ತದೆ. ಕ್ಷಣಮಾತ್ರಕ್ಕೆ ಸುತ್ತಲಿನದ್ದಲ್ಲವೂ ಸ್ಥಬ್ಧವಾದಂತೆನಿಸಿ ಪೂರ್ಣ ಗಲಿಬಿಲಿ, ಗಾಬರಿಯಿಂದ ನಿಧಾನಕ್ಕೆ ಉಳಿದವರ ಕಡೆ ಕಲ್ಪನಾಳ ಗಮನ ಹಾಯುತ್ತದೆ. ಸುತ್ತಲೂ ನೆರೆದಿರುವ ವಿದ್ಯಾರ್ಥಿಗಳು, ಹಿರಿಯ ವೈದ್ಯರು ಮುಂದೇನಾಗುತ್ತದೋ ಎಂಬಂತೆ ತನ್ನನ್ನೇ ನೋಡುತ್ತಿದ್ದಾರೆ. ಅವರು ನಿಂತಿದ್ದ ಹಿನ್ನೆಲೆ ಮಾತ್ರ ಒಮ್ಮೆಗೆ ಬದಲಾಗಿ ಹಸುರಿನ ಮರ ಗಿಡಗಳು ತುಂಬಿದ್ದ ಆಸ್ಪತ್ರೆಯ ಹೊರ ಆವರಣದ ತನ್ನ ಚಹಾದಂಗಡಿಯ ಮುಂಭಾಗಕ್ಕೆ ಬದಲಾಗಿ ಮಬ್ಬು ಬಿಳಿಬಣ್ಡ ಗೋಡೆ ಬಂದು ಬಿಟ್ಟಿದೆ. ತಲೆಯ ಮೇಲೊಂದು ಹಳೆಯ ಶಬ್ದ ಮಾಡುತ್ತಾ ತಿರುಗುವ ಫ್ಯಾನ್. ಚಹಾ ಕಾಸುತ್ತಿದ್ದ ಒಲೆಯ ಕಡೆ ತಿರುಗಿದರೆ ಅಲ್ಲಿರುವುದು ಮಾತ್ರೆ, ಹಾಲು ಹಣ್ಣುಗಳು ತುಂಬಿಕೊಂಡಿರುವ ತುಕ್ಕು ಹಿಡಿದ ಕಾಲಿನ ಚಿಕ್ಕ ಮೇಜು. ಅನೀರೀಕ್ಷಿತವಾಗಿ ಬದಲಾದ ಸನ್ನಿವೇಶದಿಂದ ಹುಟ್ಟಿದ ಭಯದಿಂದ ಗಡಗಡನೆ ನಡುಗುತ್ತಾ, ಕೋಣೆಯ ಕಿಟಕಿಯಿಂದ ಹೊರ ದೃಷ್ಟಿ ಹಾಯಿಸಿದವಳಿಗೆ ತೋರಿದ್ದು ಅದೇ ಚಹಾದಂಗಡಿ. ಕ್ಷಣಮಾತ್ರಕ್ಕೆ ಆಕೆಗೆ ಅಸ್ಪಷ್ಟ ನೆನಪುಗಳು ಮೂಡಿ ಮರೆಯಾಗತೊಡಗಿದವು. ಕೆಲ ದಿನಗಳ ಹಿಂದೆ ಗಂಡನ ಸ್ನೇಹಿತನನ್ನು ದೂರದೂರಿನ ಆಸ್ಪತ್ರೆಗೆ ಸೇರಿಸಿರುವ ಸಲುವಾಗಿ ಆತನನ್ನು ನೋಡಿಕೊಂಡು ಬರಲು ಗಂಡ ಒತ್ತಾಯ ಮಾಡಿ ತನ್ನನ್ನು ಕೂಡ ಕರೆದುಕೊಂಡು ಬಂದದ್ದು, ದಣಿದು ಬಂದಿದ್ದ ತನಗೆ ಚಹದಂಗಡಿಯ ಹೆಂಗಸು ಮಾಡಿಕೊಟ್ಟ ಚಹಾ ಅಮೃತದಂತೆ ಭಾಸವಾಗಿ, ಆಕೆ ನಗು ನಗುತ್ತಾ ಎಲ್ಲರ ಜೊತೆ ಮಾತನಾಡುತ್ತ ವ್ಯವಹರಿಸುತ್ತಿದ್ದ ರೀತಿಯಿಂದ ತನಗಾದ ಸಂತಸ ಎಲ್ಲವೂ ಒಂದೊಂದಾಗಿ ನೆನಪಾಗತೊಡಗುತ್ತದೆ.

ಹಿರಿಯ ವೈದ್ಯರ ಗಂಟಿಕ್ಕಿದ ಮುಖದಲ್ಲಿ ಮೊದಲ ಬಾರಿಗೆ ಸಂತಸದ ನಗು ಆಕೆಗೆ ತೋರಿ ಹಿತವೆನಿಸುತ್ತದೆ. ಗಂಡನ ಮುಖವನ್ನು ನೋಡಿದವಳಿಗೆ ಆತನ ನೀಲಿ ಕಣ್ಣು ವಿಶಾಲ, ನಿರಂತರ ಸಾಗರದಂತೆ ತೋರಿ, ಹಾಗಾಗೇ ತಾನು ತೇಲುತ್ತಾ ದಡದಿಂದ ದೂರವಾದಂತೆ ಭಾಸವಾಗಿ, ಯುಗಗಳ ದಣಿವು ನಿವಾರಣೆಯಾಗುತ್ತಿರುವಂತೆ ಸುಖದಿಂದ ಹಾಗೇ ಹಾಸಿಗೆಗೆ ಒರಗುತ್ತಾಳೆ.

Facebooktwittergoogle_plusrssby feather
One Comment

Add a Comment

Your email address will not be published. Required fields are marked *

 

 

Get all the Updates on BeeneCheela by Liking our Facebook page

ಬೀಣೆ ಚೀಲದ ಸಾಮಗ್ರಿಗಳು ಇಷ್ಟವಾದಲ್ಲಿ ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಲು ಮರೆಯದಿರಿ

 

Powered by WordPress Popup