ಬದಲಾವಣೆಯ ಚಿತ್ರ

ನಮ್ಮೆಲ್ಲರ ಮೆಚ್ಚಿನ ಲೇಖಕ ಜೋಗಿಯವರು ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲದಲ್ಲಿ ಹರಿ ಬಿಟ್ಟಿದ್ದಾರೆ.
“ಕನ್ನಡ ಚಿತ್ರಗಳಿಗೆ ನಿಜಕ್ಕೂ ಚೈತ್ರಕಾಲ ಬಂದಿದೆಯಾ? ಬಂದಿದ್ದರೆ ಕಾರಣ ಏನು? ಹೀರೋಯಿಸಮ್ಮು ಕಡಿಮೆಯಾಗಿ ಅರ್ಥಪೂರ್ಣ ಚಿತ್ರಗಳು ಜಾಸ್ತಿ ಆಗಿರುವುದೇ? ಹೊಸ ತಲೆಮಾರು ಬಂದಿರುವುದೇ?”

ಇದರ ಸಲುವಾಗಿ ನನ್ನ ಅನಿಸಿಕೆ ಹೀಗಿದೆ.

ಕನ್ನಡ ಚಿತ್ರರಂಗದಲ್ಲಿ ಚೈತ್ರಕಾಲ ಬಂದಿದೆಯಾ ಅನ್ನುವ ಪ್ರಶ್ನೆಗಿಂತ ಮೊದಲು ಚೈತ್ರಕಾಲವೆಂದರೇನು ಎಂದು ಆಲೋಚಿಸಬೇಕು. ಚಿತ್ರರಂಗ ಸಮೃದ್ಧಿಯತ್ತ ಹೊರಳುತ್ತಿದೆ ಎನ್ನಬೇಕಾದರೆ, ಒಂದು ಭಾಷೆಯ ಚಿತ್ರರಂಗದಲ್ಲಿ ಬರುತ್ತಿರುವ ಚಿತ್ರಗಳ ಆದಾಯವನ್ನು ಆಧಾರವಾಗಿಡಬೇಕೋ ಅಥವಾ ಸದಭಿರುಚಿಯ ಚಿತ್ರಗಳು ಹೊರಬರುತ್ತಿವೆಯೆಂಬ ಆಧಾರವಿಡಬೇಕೋ? ಮತ್ತೆ ಸದಭಿರುಚಿ ಎಂದರೇನು ಎಂಬ ಪ್ರಶ್ನೆ ಏಳುತ್ತದೆ. ಅಭಿರುಚಿ ಮನುಷ್ಯನಿಂದ ಮನುಷ್ಯನಿಗೆ ಬದಲಾಗುವಂತಹ ವಿಷಯ. ಒಬ್ಬ ವ್ಯಕ್ತಿಯ ಅಭಿರುಚಿಯನ್ನು ಸದಭಿರುಚಿ ಅಥವಾ ದುರಭಿರುಚಿ ಎಂದು ವಿಂಗಡಿಸುವುದು ಆತನ ವ್ಯಕ್ತಿತ್ವವನ್ನು ಅಳೆದಂತೆಯೇ ಸರಿ. ಇನ್ನು ಪೂರ್ತಿ ಕುಟುಂಬ ಸಮೇತರಾಗಿ ನೋಡಬಲ್ಲಂತಹ ಚಿತ್ರಗಳನ್ನು ಸದಭಿರುಚಿಯ ಚಿತ್ರಗಳೆಂದರೆ ಹುಡುಗ ಪಡ್ಡೆಗಳಿಗೆ ನೋವಾಗದೇ? ಹಾಗೆ ನೋಡಿದರೆ ಕಾಲಕಾಲಕ್ಕೆ ಕನ್ನಡ ಚಿತ್ರರಂಗ ಉತ್ತಮ ಆದಾಯ ಗಳಿಸಿರುವ ಚಿತ್ರಗಳನ್ನು ಹೊರಬಿಡುತ್ತಲೇ ಬಂದಿದೆ. ಸಾಲು ಸಾಲಾಗಿ ಹಿಟ್ ಚಿತ್ರಗಳನ್ನೇ ನೀಡಿ ಬಿರುದು ಸಂಪಾದಿಸಿರುವ ನಟರೂ ನಮ್ಮಲ್ಲಿದ್ದಾರೆ. ಎಲ್ಲೋ ಒಂದು ಕಡೆ ಏಕತಾನತೆಯ ಜಾಲದಲ್ಲಿ ಸಿಲುಕುತ್ತಿದೆಯೇನೋ ಎಂದೆನಿಸಹತ್ತಿದಾಗ  ಮುಂಗಾರು ಮಳೆಯಂತ ಹೊಸ ಕಂಪಿನ ಚಿತ್ರಗಳು ಬಂದು ತದನಂತರ ಅದೇ ಚಿತ್ರದ ಗುಂಗಿನಲ್ಲಿ ಹಲವು ವರ್ಷಗಳ ಕಾಲ ಬರೀ ಮಳೆ ಸುರಿಸುವ ಚಿತ್ರಗಳೇ ಬಂದು ಯಾವಾಗ ಮಳೆ ನಿಲ್ಲುತ್ತಪ್ಪ ಎಂದು ನಮ್ಮ ಕಣ್ಣಲ್ಲೂ ನೀರು ಹರಿದದ್ದು ಸುಳ್ಳಲ್ಲ.

ಹೀಗೆ ಆದಾಯ , ಅಭಿರುಚಿ, ಚೈತ್ರಕಾಲ, ಮಳೆ, ನೀರನ್ನೆಲ್ಲ ಬದಿಗಿಟ್ಟು ಹೇಳುವುದಾದರೆ ನಮ್ಮ ಚಿತ್ರರಂಗದಲ್ಲಿ ಹೊಸ ಅಲೆ ಬಂದಿರುವುದಂತೂ ನಿಜ. ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞನೆಂಬಂತೆ ಇಂದು ಚಿತ್ರರಂಗಕ್ಕೆ ಕಾಲಿಡುತ್ತಿರುವ ಹುಡುಗರು, ಹೊಸ ಹೊಸ ಸಾಧ್ಯತೆಗಳ ಬಗ್ಗೆ ತೆರೆದ ಮನಸ್ಸಿನಿಂದ ನೋಡುತ್ತಿದ್ದಾರೆ. ಅಂಗೈಯೊಳಗೆ ಪ್ರಪಂಚವನ್ನೇ ತಂದಿಟ್ಟಿರುವ ಅಂತರ್ಜಾಲದ ಮೂಲಕ ಹೊಸ ಹೊಸ ತಂತ್ರಜಾನವನ್ನು ಕಲಿಯುತ್ತಿದ್ದಾರೆ. ಕಲಾವಿದರ, ತಂತ್ರಜ್ನರ, ಕನಸುಗಾರರ ಹದವಾದ ತಂಡಗಳು ರೂಪಗೊಳ್ಳುತ್ತಿವೆ. ಇಂದಿನ ಚಿತ್ರಗಳು,  ಬರೀ ನಾಯಕನ ಸುತ್ತಲೇ ಗಿರಕಿ ಹೊಡೆಯದೆ ಸಹ ಕಲಾವಿದರ, ನಿರ್ದೇಶಕರ, ಹಾಗೂ ಇಡೀ ಚಿತ್ರ ತಂಡದ ಪ್ರಯೋಗಶಾಲೆಯಂತೆ ತೋರುತ್ತವೆ. ಹಿರೋಯಿಸಂಗಿಂತ ಚಿತ್ರದ ಸತ್ತ್ವ ಅದನ್ನು ಗೆಲ್ಲಿಸುತ್ತಿದೆ. ಹೀಗೆ ಹುಟ್ಟಿಕೊಂಡಿರುವ ಪ್ರತಿಭಾವಂತರ ಜೊತೆಗೆಯೇ, ಚಿತ್ರದ ಪ್ರತೀ ಚೌಕಟ್ಟನ್ನೂ ವಿಮರ್ಶೆ ಮಾಡಬಲ್ಲಂತಹ ಅತೀ ಬುದ್ದಿವಂತ ವಿಮರ್ಶಕರ ಬಳಗ ಕೂಡ ಹುಟ್ಟಿಕೊಂಡಿದೆ. ಮಾಡಿದ ಕೃತಿಯನ್ನು ಹೇಗೆ ಮಾರುಕಟ್ಟೆಯಲ್ಲಿ ಪ್ರಚಾರಪಡಿಸಬೇಕೆಂಬ ಚತುರತೆ ಗೊತ್ತಿರುವ ನಿರ್ದೇಶಕರೂ, ನಿರ್ಮಾಪಕರೂ ಬಂದಿದ್ದಾರೆ. ಸಾಮಾಜಿಕ ತಾಣಗಳ ಸದ್ಬಳಕೆಯನ್ನು ಮಾಡಿಕೊಂಡು ಪ್ರೇಕ್ಷಕನನ್ನು ತಲುಪುವ ಪ್ರಯತ್ನಗಳು ನಡೆಯುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಬರೀ ಗಳಿಕೆಯನ್ನು ಮಾತ್ರ ಗಮನದಲ್ಲಿರಿಸಿಕೊಳ್ಳದೇ ಚಿತ್ರವನ್ನು ಒಂದು ಕೃತಿಯಂತೆ ಪ್ರೀತಿಯಿಂದ ತಯಾರಿಸಿ ಕೊಡುವ ಪ್ರತಿಭಾವಂತರು ತಲೆಯೆತ್ತುತ್ತಿದ್ದಾರೆ ಎಂದು ನಿಶ್ಯಂಕೆಯಿಂದ  ಹೇಳಬಹುದು.

Facebooktwittergoogle_plusrssby feather

Add a Comment

Your email address will not be published. Required fields are marked *

 

 

Get all the Updates on BeeneCheela by Liking our Facebook page

ಬೀಣೆ ಚೀಲದ ಸಾಮಗ್ರಿಗಳು ಇಷ್ಟವಾದಲ್ಲಿ ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಲು ಮರೆಯದಿರಿ

 

Powered by WordPress Popup