Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ಮೃಗಶಿರ: ಆಶ್ಲೇಷ - ಬೀಣೆ ಚೀಲ

ಮೃಗಶಿರ: ಆಶ್ಲೇಷ

ನನ್ನ ಹೆಸರು ಅಚ್ಯುತ. ಬೆಳ್ಯಾಡಿಯ ಗೋಪಾಲಭಟ್ಟರ ಎರಡನೇ ಸುಪುತ್ರ. ಜೀವನ ಒಂದು ಮಹತ್ತರ ಘಟ್ಟದಲ್ಲಿ ಬಂದು ನಿಂತಿರುವಂತಹ ಸಮಯದಲ್ಲಿ, ನನಗೆ ನೆನಪಿರುವ ಮಟ್ಟಿಗೆ ನನ್ನ ಜೀವನದಲ್ಲಿ ಇದುವರೆಗೂ ನಡೆದಿರುವಂತಹ ದಾಖಲಾರ್ಹ ಘಟನೆಗಳನ್ನು ದಾಖಲಿಸುವ ಪ್ರಯತ್ನವಿದು. ಪ್ರಯೋಜನವೇನು? ನನಗೂ ಗೊತ್ತಿಲ್ಲ. ಇದರಿಂದ ಯಾರೂ ಕಲಿಯುವಂಥದ್ದು ಏನೂ ಇಲ್ಲ. ಹೆಚ್ಚೆಂದರೆ ಮುಂದೊಂದು ದಿನ ಎಲ್ಲದಕ್ಕೂ ಕಾರಣ ಹುಡುಕುವ, ಪರರ ಭಾವನೆಗಳನ್ನು, ಜೀವನವನ್ನು ಕೆದಕಿ, ಬಗೆದು ನೋಡುವ ಸಮಾಜದ ಅಸಹ್ಯವಾದ ಕುತೂಹಲದ ದಾಹವನ್ನು ತೀರಿಸಬಲ್ಲಂತಹ ಒಂದು ಮಾಧ್ಯಮವಾಗಬಹುದು ಇದು ಅಷ್ಟೇ. ಅದಕ್ಕಿಂತ ಹೆಚ್ಚೇನಿಲ್ಲ.

ಅಧ್ಯಾಯ ೧: ಆಶ್ಲೇಷ – ದೇವರೂಪಿ ಸರ್ಪ

ಅರ್ಚಕನ ವೃತ್ತಿಯನ್ನು ನಾನು ಆರಿಸಿಕೊಂಡಿರಲಿಲ್ಲ. ಅದರಲ್ಲಿ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನನ್ನ ತಂದೆ ಗೋಪಾಲಭಟ್ಟರೆಂಬ ಬೆಳ್ಯಾಡಿಯ ಸಾಮಾನ್ಯ ಅರ್ಚಕರು ನನ್ನ ಹಣೆಯ ಮೇಲೆ ಮಾಸಿದ ಮಸಿಯಿಂದ ಗೀಚಿದ ಹಣೆಬರಹವಾಗಿತ್ತಷ್ಟೆ ಅದು.
ಅಪ್ಪ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯಾವುದೋ ಅನಾದಿ ಕಾಲದಿಂದಲೂ ಅರ್ಚಕರಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಬದುಕು ಸಾಗಿಸಿದವರು. ಹಾಗೆಂದು ನನ್ನನ್ನಾಗಲಿ ಅಣ್ಣನನ್ನಾಗಲಿ ತಮ್ಮ ಉತ್ತರಾಧಿಕಾರಿಯಾಗಬೇಕೆಂದು ಬಯಕೆಯನ್ನಿರಿಸಿಕೊಂಡವರಲ್ಲ. ಅವರ ಜೀವನ ಬೆಳ್ಯಾಡಿಯ ಗೋಡೆಗಳಾಚೆಗೆ ದಾಟದಿದ್ದರ ಬಗ್ಗೆ ಅವರಿಗೂ ಖೇದವಿತ್ತೋ ಏನೋ. ಮಕ್ಕಳಾದ ನಮ್ಮನ್ನು ಹತ್ತಿರದಲ್ಲೇ ಇದ್ದ ಕನ್ನಡ ಶಾಲೆಗೆ ಸೇರಿಸಿದ್ದರು. ಆದರೆ ನಾನು ಓದುತ್ತಿದ್ದ ಶಾಲೆಯಲ್ಲಿ ನಾನಾಗಿಯೇ ಒಂದು ಅವಾಂತರವನ್ನು ಸೃಷ್ಟಿಸಿದ್ದೆ. ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ತಪ್ಪು ಮಾಡಿದವರು ಮಾನ ಮುಚ್ಚಿಕೊಳ್ಳಲು ಅವಾಂತರವನ್ನು ನನ್ನ ಮೇಲೆ ಹೇರಿದ್ದರಷ್ಟೇ.

ಅಪ್ಪ ಸಿಕ್ಕಾಪಟ್ಟೆ ಸಿಟ್ಟಾಗಿದ್ದರು. ನನ್ನದಲ್ಲದ ತಪ್ಪಿಗೆ ನನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಅಪ್ಪ, ದೂರದ ಕಲ್ಲಳ್ಳಿಯಲ್ಲಿ ವಾಸವಾಗಿರುವ ಅಮ್ಮನ ತಮ್ಮ, ವಿಶ್ವೇಶ್ವರ ಹಂದೆಯವರಲ್ಲಿ ನನ್ನನ್ನು ಕೆಡವಿದ್ದರು. ಸಂಬಂಧದಲ್ಲಿ ಸೋದರ ಮಾವನೆನಿಸಿಕೊಂಡರೂ ನನ್ನ ಪಾಲಿಗೆ ಕೇವಲ ದುರುಳನಂತಿದ್ದ ಈ ಹಂದೆ ಕೂಡ ಕಲ್ಲಳ್ಳಿಯಂಥ ದುರ್ಗಮ ಕಾಡಿನ ಮಧ್ಯದಲ್ಲೊಂದು ಅಮ್ಮನವರ ದೇವಸ್ಥಾನದಲ್ಲಿ ಅರ್ಚಕನಾಗಿದ್ದ. ಕಾಡಿನಂಥ ಊರಿನಲ್ಲಿ ವಾಸವಾಗಿದ್ದ ಆತ ಕೂಡ ಕಾಡುಮನುಷ್ಯನಿಗಿಂತ ಕಡಿಮೆಯೇನೂ ಇರಲಿಲ್ಲ. ಅತಿ ಚಿಕ್ಕ ಊರಿನ ಅತಿ ಸಾಮಾನ್ಯ ದೇವಸ್ಥಾನದ ಅರ್ಚಕನಾಗಿದ್ದು ಕೂಡ ಇಡೀ ಊರಿನ ಕಣ್ಣು ಕುಕ್ಕುವಂತೆ ಬಾಳುತ್ತಿದ್ದ ಆತನ ವ್ಯವಹಾರದ ಬಗ್ಗೆ ಕಲ್ಲಳ್ಳಿಯ ತುಂಬಾ ಗುಲ್ಲಿತ್ತು. ದೇವರ ಗುಡಿಯಿಂದ ಮೈಲು ದೂರದಲ್ಲಿ, ಇನ್ನೂ ದುರ್ಗಮವಾದ ಕಾಡಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಆತ ಏನೋ ಬೆಳೆಯುತ್ತಿದ್ದ ಎಂದು ಊರಿಗೆಲ್ಲಾ ಗೊತ್ತಿದ್ದೂ ಕೂಡ ಪೊಲೀಸರಿಗೆ ಯಾರೂ ದೂರು ಕೊಡದಂತೆ ತಡೆಯುತ್ತಿದ್ದ ಶಕ್ತಿ ಇದ್ದದ್ದು ಆತ ಪೂಜೆ ಮಾಡುತ್ತಿದ್ದ ಅದೇ ದುರ್ಗಮ್ಮನಿಗೆ ಮಾತ್ರ. ದುರ್ಗಮ್ಮ ಅವನಿಗೆ ಕೇವಲ ಇಡೀ ಊರನ್ನು ಭಯದ ಮುಷ್ಠಿಯಲ್ಲಿ ಇಡುವ ಸಾಧನವಾಗಿತ್ತೇ ಹೊರತು ಭಕ್ತಿ, ಶೃದ್ಧೆ ಹಾಗು ಸಾಧನೆಯ ಮಾರ್ಗವಂತೂ ಖಂಡಿತವಾಗಿ ಆಗಿರಲಿಲ್ಲ.

ಹೀಗೆ ಹದವಾಗಿಯೇ ಜೀವನ ಸಾಗಿಸುತ್ತಿದ್ದ ಹಂದೆಯ ಜೀವನ ಅಚಾನಕ್ಕಾಗಿ ಕೆಲವು ವರ್ಷಗಳ ಹಿಂದೆ ಒಂದೇ ಸಮನೆ ಉತ್ತುಂಗಕ್ಕೇರತೊಡಗಿತು. ಹೇಗೋ ಏನೋ ಕಲ್ಲಳ್ಳಿಯ ಅಮ್ಮನ ಕೀರ್ತಿ, ಬೆಂಗಳೂರಿನಂಥ ಮಹಾನಗರದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ, ಪ್ರತಿ ವರ್ಷವೂ ನವರಾತ್ರಿಯ ಸಂದರ್ಭದಲ್ಲಿ ಕಲ್ಲಳ್ಳಿಗೆ ತಂಡೋಪತಂಡವಾಗಿ ಜನಸಾಗರ ಹರಿಯತೊಡಗಿತು. ಊರಿನ ದಾರಿಗಳು ಅಗಲಗೊಂಡವು, ಯಾವ ಯಾವುದೋ ಊರಿನ ಸಣ್ಣ ವ್ಯಾಪಾರಿಗಳೆಲ್ಲ ಕಲ್ಲಳ್ಳಿಯಲ್ಲಿ ಜಮೀನು ಖರೀದಿಸಿ ವಾಸ್ತವ್ಯ ಹೂಡ ತೊಡಗಿದರು. ನಿಧಾನಕ್ಕೆ ಕಲ್ಲಳ್ಳಿ ಎಂಬ ಕೊಂಪೆ, ಶ್ರೀ ಕ್ಷೇತ್ರ ಕಲ್ಲಳ್ಳಿಯಾಗಿ, ಊರು ಪರವೂರಿನಾದ್ಯಂತ ಕೀರ್ತಿ ಪಡೆಯತೊಡಗಿತು. ಇಂಥ ಅತಿ ಉದ್ವೇಗದ ಪ್ರಗತಿಯ ಸಂದರ್ಭದಲ್ಲೇ ಅಪ್ಪ ನನ್ನನ್ನು ಊರಿನಿಂದ ಸಾಗ ಹಾಕುವ ಆಲೋಚನೆ ಮಾಡುತ್ತಿದ್ದ ಹಾಗು ಈ ದುರುಳ ಹಂದೆ ತನ್ನ ಪೂಜೆಗೊಬ್ಬ ಸಹಾಯಕನನ್ನು ಹುಡುಕುತ್ತಿದ್ದ. ಸಂದರ್ಭಗಳು ಕೂಡಿ ಬಂದವು. ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ಬದಲಾಗಿ ನಾನು ಕಲ್ಲಳ್ಳಿಯ ದುರ್ಗಮ ಕಾಡಿನ ಅಮ್ಮನ ಗುಡಿಯ ಪಾಲಾದೆ.

ಬೆಳ್ಯಾಡಿ ನನಗೆ ಬಹು ಪ್ರಿಯವಾದದ್ದು ಅಂತೇನಲ್ಲ. ಅಲ್ಲಿನ ಜನರ ಸಂಕುಚಿತ ಮನಸ್ಸು ನನಗೆ ಅರಿವಿಲ್ಲದಂತೆ ನನ್ನಲ್ಲಿ ಹೇಸಿಗೆ ಹುಟ್ಟಿಸಿತ್ತು. ಆದರೆ ಬೆಳ್ಯಾಡಿಯಿಂದ ಕಲ್ಲಳ್ಳಿಗೆ ಬಂದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು.
ಊರಲ್ಲಿ ಅಮ್ಮನ ಮುದ್ದಿನ ಮಗನಾಗಿ ಬೆಳೆದಿದ್ದ ನನಗೆ ಮನೆಗೆಲಸಗಳ ಬಗ್ಗೆ ಕಿಂಚಿತ್ತೂ ಅರಿವಿರಲಿಲ್ಲ. ಕಲ್ಲಳ್ಳಿಯ ಕಾಡು ಪರಿಸರ ಮೊದಲೆರಡು ದಿನ ಮನಸ್ಸನ್ನು ಮುದಗೊಳಿಸಿದ್ದು ಸುಳ್ಳಲ್ಲ. ಮೊದಮೊದಲಿಗೆ ಮಾವ ಹಂದೆ ಕೂಡ ಅಕ್ಕರೆಯಿಂದೆಂಬಂತೆ ನೋಡಿಕೊಂಡ. ದಿನಾ ನನ್ನನ್ನು ದೇವಸ್ಥಾನಕ್ಕೆ ಕರೆದೊಯ್ದು, ನಾನು ಮಾಡಬೇಕಾದ ಸಹಾಯದ ಕೆಲಸಗಳನ್ನೆಲ್ಲ ವಿವರಿಸುತ್ತಿದ್ದ. ದೇವಿಯ ಅಭಿಷೇಕಕ್ಕೆಂದು ಬಾವಿಯಿಂದ ನೀರು ಸೇದುವುದು, ದೇವಸ್ಥಾನದ ಪ್ರಾಂಗಣ ಶುಚಿಗೊಳಿಸುವುದು, ಭಕ್ತರು ತರುವ ಪದಾರ್ಥಗಳನ್ನೆಲ್ಲ ಜೋಡಿಸಿಟ್ಟು ಪೂಜೆಯ ಸಮಯದಲ್ಲಿ ಗರ್ಭಗುಡಿಯಲ್ಲಿಡುವುದು, ಮೂರ್ತಿಯ ಪುಷ್ಪಾಲಂಕಾರ ಮಾಡುವುದು, ಮಂಗಳಾರತಿಯ ದೀಪಗಳನ್ನೆಲ್ಲ ಶುಚಿಗೊಳಿಸಿ, ಎಣ್ಣೆ ತುಂಬಿ, ಬತ್ತಿ ಹಾಕಿ ಸಿದ್ಧಪಡಿಸಿ, ಒಂದಾದ ಮೇಲೊಂದು ಆರತಿಗಳನ್ನು ಮಾವನ ಕೈಗೆ ಹಸ್ತಾಂತರಿಸುವುದು, ಪೂಜೆಯ ಸಮಯವನ್ನು ಹೊರತು ಪಡಿಸಿ ಇಡೀ ದಿನ ಪೌಳಿಯಲ್ಲಿ ಕೂತು ಆಗೊಮ್ಮೆ ಈಗೊಮ್ಮೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ಕೊಡುವುದೇ ಇತ್ಯಾದಿ ಕೆಲಸಗಳನ್ನು ಮಾವ ನನಗೆ ವರ್ಗಾಯಿಸಿದ್ದ. ಬೆಳಗ್ಗೆ, ಮಧ್ಯಾಹ್ನ ಹಾಗು ಸಂಜೆ ಮಂಗಳಾರತಿ ಸಮಯ ಹೊರತು ಪಡಿಸಿ ಮಾವ ಇಡೀ ದಿನ ಮನೆಯಲ್ಲೇ ಇಲ್ಲವೇ ಆತನ ರಹಸ್ಯದ ವ್ಯವಸಾಯದ ಗದ್ದೆಯಲ್ಲೇ ಕಳೆಯುತ್ತಿದ್ದ.

ಹೀಗೆ ಆರಂಭದ ಕೆಲವು ದಿನಗಳು ಸಾಗುತ್ತ ಹೋದವು. ಮಾವನ ಹೆಂಡತಿಗೆ ಮೊದಲಿನಿಂದಲೂ ನನ್ನ ಮೇಲೆ ಅಷ್ಟೇನೂ ಆಸ್ಥೆಯಿರಲಿಲ್ಲ. ಆದರೆ ದಿನ ಕಳೆದಂತೆ ಆಕೆಗೆ ನನ್ನೆಡೆಗೆ ಸಿಡಿಮಿಡಿ ಕೂಡ ಜಾಸ್ತಿಯಾಗುತ್ತಲಿರುವುದು ನನ್ನ ಗಮನಕ್ಕೆ ಬಂದಿತ್ತು. ಮಾವ ನನ್ನನ್ನು ತನ್ನ ಮನೆಯಲ್ಲಿರಿಸಿ ಬಿಟ್ಟಿ ಕೂಳು ಹಾಕುವುದು ಆಕೆಗೆ ಸರಿ ಬಂದಿರಲಿಲ್ಲ. ದೇವಸ್ಥಾನದ ಕೆಲಸಗಳ ಜೊತೆಗೆ ನಿಧಾನಕ್ಕೆ ಒಂದೊಂದೇ ಮನೆ ಕೆಲಸಗಳು ನನ್ನ ಪಾಲಾದವು. ಬೆಳಗ್ಗೆ ಬೇಗ ಎದ್ದು ಹಟ್ಟಿಯನ್ನು ತೊಳೆದು, ಹಾಲು ಕರೆಯುವುದು ನನ್ನ ಬೆಳಗ್ಗಿನ ದಿನಚರಿಯ ಭಾಗವಾಯಿತು. ದನಗಳನ್ನು ಹಟ್ಟಿಯಿಂದ ಬಯಲಿಗೆ ಎಬ್ಬಿಕೊಂಡು, ಅಲ್ಲಿ ಹುಲ್ಲಿರುವ ಜಾಗದಲ್ಲಿ ಕಟ್ಟಿ ಬಂದರೆ ಮಾತ್ರ ಬೆಳಗ್ಗಿನ ತಿಂಡಿ ಸಿಗುತ್ತಿತ್ತು. ಅತ್ತ ಮಾವನ ವರ್ತನೆ ಕೂಡ ನಿಧಾನಕ್ಕೆ ಬದಲಾಗುತ್ತಿತ್ತು. ದೇವಸ್ಥಾನದಲ್ಲಿ ಕಿಂಚಿತ್ತೂ ಮರ್ಯಾದೆ ಕೊಡದೆ, ಬಂದ ಪರವೂರಿನ ಭಕ್ತಾದಿಗಳ ಮುಂದೆಯೇ ನಾಯಿಯಂತೆ ನನ್ನನ್ನು ನಡೆಸಿಕೊಳ್ಳುತ್ತಾ, ತನ್ನ ದುರುಳ ಮುಖದ ಪರಿಚಯವನ್ನು ನನಗೆ ಇಂಚಿಂಚಾಗಿ ಮಾಡಿಸತೊಡಗಿದ್ದ. ಇವೆಲ್ಲ ವೇದನೆಗಳನ್ನು ಹೇಳಿಕೊಳ್ಳಲು ಗೆಳೆಯರಾಗಲೀ, ತಂದೆ ತಾಯಿಯಾಗಲೀ, ಅಣ್ಣನಾಗಲೀ ಜೊತೆಗಿರಲಿಲ್ಲ. ಆಗಾಗ ಉಮ್ಮಳಿಸಿ ಬರುತ್ತಿದ್ದ ಬೆಳ್ಯಾಡಿಯ ನೆನಪು, ದುಃಖಗಳನ್ನು ಮರೆಯಲೆಂದು ಅಲ್ಲೇ ದೇವಸ್ಥಾನದ ಯಾವುದೊ ಮೂಲೆಯಲ್ಲಿ ಅನಾಥವಾಗಿ ಬಿದ್ದಿದ್ದ ಪೂಜೆ ವಿಧಿವಿಧಾನಗಳ ದೊಡ್ಡ ಗ್ರಂಥವನ್ನು ಕೈಗೆತ್ತಿಕೊಂಡು ಅಭ್ಯಾಸವನ್ನು ಪ್ರಾರಂಭಿಸಿದೆ. ಓದುತ್ತ ಹೋದಂತೆ ಪೂಜೆ ಮಂತ್ರಗಳ ವಿಧಾನದ ಹಿಂದಿರುವ ನಿಜಾರ್ಥ, ಮಂತ್ರೋಚ್ಛಾರಣೆಯ ಸರಿಯಾದ ಕ್ರಮ ಹಾಗು ಹಂದೆ ಮಾಡುತ್ತಿದ್ದ ವಿಧಾನಗಳ ಹುಳುಕುಗಳು ಕಣ್ಣಿಗೆ ರಾಚತೊಡಗಿದವು. ಯಾವ ನರಮನುಷ್ಯನ ಸಾಂಗತ್ಯ ಕೂಡ ಅಗತ್ಯವಾಗಿ ಬೇಕೇ ಬೇಕೆನಿಸದಷ್ಟು ಸಮಾಜದಿಂದ ಬೇರ್ಪಡುವ ಕಲೆ ಕರಗತವಾಗುತ್ತಿತ್ತು.

ಹೀಗಿರಬೇಕಾದರೆ ಒಂದು ದಿನ ಎಂದಿನಂತೆ ಬೆಳಗ್ಗೆ ದನ ಎಬ್ಬಿಕೊಂಡು ಗದ್ದೆಗಳ ಕಡೆಗೆ ಹೊರಟಿದ್ದೆ. ಅದೇನಾಯಿತೋ ಗೊತ್ತಿಲ್ಲ ಒಂದು ದನಕ್ಕೆ ಅಚಾನಕ್ಕಾಗಿ ಚುಂಗು ಬಂದಂತಾಗಿ ಬೇಕಾಬಿಟ್ಟಿ ಓಡತೊಡಗಿತು. ನಾನು ಕೂಡ ಅದನ್ನ ಬೆನ್ನಟ್ಟಿ ಛಲ ಬಿಡದೆ ಓಡತೊಡಗಿದೆ. ದನ ದಿನಾಲು ನಾನು ಮೇಯಲು ಬಿಡುವ ಬಯಲು ಪ್ರದೇಶವನ್ನು ದಾಟಿ ಅದರಾಚೆಯ ದಟ್ಟ ಕಾಡಿನ ಪ್ರದೇಶದ ಒಳಗೆ ಹೊಕ್ಕಿ ಬಿಟ್ಟಿತು. ಕಲ್ಲಳ್ಳಿಗೆ ಬಂದು ಇಷ್ಟೊಂದು ದಿನಗಳಾದರೂ ಬಯಲಾಚೆಯ ಕಾಡು ಪ್ರದೇಶಕ್ಕೆ ಹೊಕ್ಕುವ ಸಾಹಸ ನಾನೆಂದೂ ಮಾಡಿರಲಿಲ್ಲ. ಒಂದೊಮ್ಮೆ ಮಾವನೆದುರು ಆ ಕಾಡಿನ ಬಗ್ಗೆ ಹಾಗೆ ಸುಮ್ಮನೆ ವಿವರಗಳನ್ನು ಕೇಳಲು ಹೊರಟಿದ್ದೆ. ಅಂದು ಆತ ಕಣ್ಣು ಕೆಕ್ಕರಿಸಿ ಅದರ ವಿಷಯ ಯಾರ ಜೊತೆ ಮಾತನಾಡುವುದಾಗಲಿ ಅಥವಾ ಅದನ್ನು ಪ್ರವೇಶಿಸಲು ಯತ್ನಿಸುವುದಾಗಲೀ ಮಾಡಿದರೆ ಹುಷಾರ್ ಅಂತ ಗದರಿಸಿಬಿಟ್ಟಿದ್ದು ಇನ್ನೂ ಕಣ್ಣಿಗೆ ಕಟ್ಟುವಂತೆ ನೆನಪಿದೆ. ಕಣ್ಣಲ್ಲೇ ತಣ್ಣನೆಯ ಕ್ರೌರ್ಯವನ್ನು ಮೈಗೂಡಿಸಿಕೊಂಡಿದ್ದ ಆತನ ಮಾತನ್ನು ಮೀರುವ ಧೈರ್ಯವಂತೂ ಪುಕ್ಕಲನಂತಿದ್ದ ನನ್ನಲ್ಲಿ ಇರಲಿಲ್ಲ. ಆದರೆ ಅಂದು ಓಡಿದ ದನವನ್ನು ಬೆನ್ನಟ್ಟಿ ಓಡಿದ ನನಗೆ ಆ ಕಾಡನ್ನು ಪ್ರವೇಶಿಸಿದ ಅರಿವಾಗಿದ್ದು ಸ್ವಲ್ಪ ಸಮಯದ ನಂತರವೇ. ಅದೊಂದು ದುರ್ಗಮ ಅರಣ್ಯವೇ ಸರಿ. ಎಲ್ಲೆಲ್ಲೂ ಗಿಡ, ಬಿಳಲುಗಳು ಹಬ್ಬಿದ್ದವು. ನೂರಾರು ವರ್ಷಗಳಿಂದ ಧ್ಯಾನಾವಸ್ಥೆಯಲ್ಲಿರುವಂತ ಅತೀ ಎತ್ತರದ ಬೃಹದಾಕಾರದ ಮರಗಳು. ಬಯಲಿನಿಂದ ಸ್ವಲ್ಪವೇ ದೂರದಲ್ಲಿ ಶುರುವಾಗಿದ್ದ ಈ ಕಾಡಿನೊಳಗೆ ಆಗಲೇ ಮುಂದೆ ಸಾಗಲು ಸಾಧ್ಯವೇ ಇಲ್ಲ ಎಂಬಂತೆ ಬೀಳುಗಳು ಮುಳ್ಳು ಮರಗಳು ಆವರಿಸಿಕೊಂಡು ಬಿಟ್ಟಿದ್ದವು. ಆಚೀಚೆ ಕಣ್ಣು ಹಾಯಿಸಿದವನಿಗೆ ತೋರಿದ್ದು ಗಿಡಗಂಟಿಗಳ ನಡುವೆ ಒಬ್ಬನೇ ಮನುಷ್ಯನಿಗೆ ಹೋಗಲು ಸಾಧ್ಯವಾಗುವಂತಿದ್ದ ಗಿಡಮರಗಳ ಎಡೆಯಲ್ಲೇ ನಿರ್ಮಾಣವಾಗಿದ್ದಂಥ ಸುರಂಗ ಮಾರ್ಗದಂತ ಒಂದು ಕಾಲುದಾರಿ. ದನ ಒಳಗೆ ಹೋಗಿದ್ದರೆ ಅಲ್ಲಿಂದಲೇ ಸಾಗಿರಬೇಕು. ನಾನು ಕೂಡ ಸಾಗಿದೆ. ಎದೆಯೊಳಗೆ ನಡುಕ ಅದಾಗಲೇ ಹುಟ್ಟಿಕೊಂಡಿತ್ತು. ಹೊರಗಡೆ ಅದಾಗಲೇ ಸಾಕಷ್ಟು ಬೆಳಕು ಹರಿದಿದ್ದರೂ, ಈ ಮಾರ್ಗದಲ್ಲಿ ಮಾತ್ರ ಕಪ್ಪಾದ ಮುಸ್ಸಂಜೆಯ ಬೆಳಕಿತ್ತು. ಕೆಟ್ಟ ಯೋಚನೆಗಳು ತಲೆ ಹೊಕ್ಕತೊಡಗಿದ್ದವು. ಸ್ವಲ್ಪ ದೂರ ಸಾಗಿದ್ದೆನೋ ಇಲ್ಲವೋ ಸುರಂಗದಂತಿದ್ದ ಮಾರ್ಗದ ಬೆಳಕಿನ ಕೊನೆ ತೋರತೊಡಗಿತ್ತು. ಆಶ್ಚರ್ಯವೆಂಬಂತೆ ಆ ಮಾರ್ಗವನ್ನು ಮುಗಿಸಿದಂತೆಯೇ ಕಣ್ಣೆದುರಿಗೆ ಇದ್ದದ್ದು ಕಾಡನ್ನು ಸಪಾಟು ಮಾಡಿ ವ್ಯವಸಾಯದ ಭೂಮಿಯಂತೆ ಸಿದ್ದಪಡಿಸಿ, ವಿಚಿತ್ರವಾದ ಬೇಲಿಯನ್ನು ಹಾಕಿದಂಥ ಒಂದು ತೆರೆದ ಪ್ರದೇಶ. ಬೇಲಿಯ ಒಳಗೆ ನಾನು ಹಿಂದೆದೂ ಕಾಣದಂಥ, ಆ ಕಾಡಿನ ಸಸ್ಯ ಸಂಕುಲಕ್ಕೆ ಹೊಂದಿಕೊಳ್ಳದ ಜಾತಿಯ ಗಿಡಗಳನ್ನು ವ್ಯವಸ್ಥಿತವಾಗಿ ಬೆಳೆಸಲಾಗಿತ್ತು. ಬೇಲಿಯಲ್ಲಿ ಅಲ್ಲಲ್ಲಿ ಅಪಾಯ ಎಂದು ಬರೆದಿದ್ದಂಥ ಚಿಕ್ಕ ಚಿಕ್ಕ ಕೆಂಪು ಬಣ್ಣದ ಹಲಗೆಗಳು.

ಮುಟ್ಟಲು ಭಯವಾಗಿ ಅದೇ ಬೇಲಿಯ ಸುತ್ತಲೂ ದನವನ್ನು ಹುಡುಕತೊಡಗಿದೆ. ಸ್ವಲ್ಪವೇ ದೂರದಲ್ಲಿ ದನ ಸತ್ತಂತೆ ಭೀಕರವಾಗಿ ಬಿದ್ದಿತ್ತು. ಅದಕ್ಕಿಂತ ಭೀಕರವಾಗಿ ಮಾವ ಕೈಯಲ್ಲಿ ಕತ್ತಿ ಹಿಡಿದುಕೊಂಡು ಉಗ್ರ ದೃಷ್ಟಿಯಲ್ಲಿ ಕೆಕ್ಕರಿಸಿ ನನ್ನನ್ನೇ ನೋಡುತ್ತಿದ್ದ. ಏನಾಯಿತೋ ಗೊತ್ತಿಲ್ಲ ಅಲ್ಲಿಂದ ಒಂದೇ ಸಮನೆ ಸತ್ತೆನೋ ಎಂಬಂತೆ ಉಸಿರು ಬಿಗಿ ಹಿಡಿದು ಬಂದ ದಾರಿಯಲ್ಲೇ ಓಡಿದೆ. ಓಡಿ ಓಡಿ ನೇರವಾಗಿ ಅಮ್ಮನ ಗುಡಿಯನ್ನು ಸೇರಿದೆ. ಹತ್ತಾರು ಕೊಡಪಾನ ನೀರನ್ನು ಸೇದಿ ಸೇದಿ ಮೈ ಮೇಲೆ ಸುರಿದುಕೊಂಡಿದ್ದೆ. ಮೈ ಮೇಲೆ ಹತ್ತಿದ್ದ ಭೂತ ಬಿಟ್ಟಿತೆಂಬಂತೆ ಆದಾಗ ಏನು ಆಗಿಲ್ಲವೆಂಬಂತೆ ಸುಮ್ಮನೆ ಹೋಗಿ ಪೂಜೆಗೆ ಕುಳಿತು ಬಿಟ್ಟೆ. ಮಾವನನ್ನು ಎದುರಿಸುವ ಆಲೋಚನೆ ಕೂಡ ನಡುಕ ಹುಟ್ಟಿಸುತ್ತಿತ್ತು. ಸಂಜೆಯ ತನಕ ಮಾವ ದೇವಸ್ಥಾನಕ್ಕೆ ಪೂಜೆಗೆ ಬರಲಿಲ್ಲ. ಹೊಟ್ಟೆ ಹಸಿವೆಯಿಂದ ಕಂಗಾಲಾಗಿತ್ತು. ವಿಧಿಯಿಲ್ಲದೇ, ಅಳುಕಿನಿಂದಲೇ ಮನೆಯ ಕಡೆ ಹೊರಟಿದ್ದೆ. ಮನೆಯಲ್ಲಿ ಅಸಾಧ್ಯ ಮೌನದ ವಾತಾವರಣವಿತ್ತು. ಬಾಗಿಲಿನಲ್ಲೇ ಎದುರಾದ ಅತ್ತೆ ಒಮ್ಮೆ ನನ್ನನ್ನು ಮೇಲಿಂದ ಕೆಳಗಿನ ತನಕ ವಿಚಿತ್ರ ಮರುಕದಿಂದ ನೋಡಿ ಅಡುಗೆ ಮನೆ ಹೊಕ್ಕಳು. ಮಾವ ಅಲ್ಲೆಲ್ಲೂ ತೋರುತ್ತಿರಲಿಲ್ಲ. ನಿಧಾನಕ್ಕೆ ಕೊಟ್ಟಿಗೆಯ ಸಮೀಪವಿದ್ದ ಹಾಳು ಬಿದ್ದ ನನ್ನ ಕೋಣೆಯ ಕಡೆಗೆ ಹೊರಟೆ. ಕೋಣೆಯ ತುಂಬಾ ಆಗಲೇ ನಸುಗತ್ತಲೆ. ಕೋಣೆಯ ಒಳ ಹೊಕ್ಕ ಕೂಡಲೇ ಕೋಣೆಯ ಬಾಗಿಲು ಧಡಾಕೆಂದು ಬಿದ್ದ ಶಬ್ದ ಕೇಳಿತು. ಚಿಲಕ ಹಾಕಿದ ಸದ್ದು ಕೂಡ ಅದನ್ನು ಹಿಂಬಾಲಿಸಿತು.

ಅಂದು ಹಂದೆ ನನಗೆ ಉಚ್ಚೆ ಹೊಯ್ದುಕೊಳ್ಳುವಂತೆ ಬೆತ್ತದಲ್ಲಿ ಬಾರಿಸಿದ್ದ. ಅಲ್ಲಿಯ ತನಕ ಯಾವತ್ತೂ ನಾನು ಅಂತಹ ಅವಮಾನವನ್ನು, ಯಾತನೆಯನ್ನು ಅನುಭವಿಸಿರಲಿಲ್ಲ. ಮೈ ಮೇಲೆ ಎಲ್ಲ ಬಾಸುಂಡೆಗಳು ಎದ್ದಿದ್ದವು. ಅಮ್ಮನ ನೆನಪು ತೀವ್ರವಾಗಿ ಕಾಡಿತ್ತು. ರಾತ್ರಿಯಿಡೀ ಮೂತ್ರದ ವಾಸನೆಯ ನಡುವೆ ಅಳುತ್ತಿದ್ದೆ. ಆ ರಾತ್ರಿ ಭೀಕರವಾಗಿತ್ತು. ಮುಂಜಾವಿಗೆ ಆವರಿಸಿದ ನಿದ್ರೆಯ ಕನಸಿನಲ್ಲಿ ಅಂದು ಬೆಳ್ಯಾಡಿಯ ನನ್ನ ಶಾಲೆಯ ಒಂದು ಚಿತ್ರಣ ಗೋಚರಿಸಿತ್ತು.
ನಾನು ಮುಖ್ಯೋಪಾಧ್ಯಾಯರ ಕೊಠಡಿಯ ಒಳಗೆ ಅಪರಾಧಿಯಂತೆ ಕಿಟಕಿಯ ಸರಳುಗಳ ಮೂಲಕ ಹೊರಗೆ ನೋಡುತ್ತಿದ್ದೆ. ಹೊರಗೆ ಸುಲಕ್ಷಣಾ ಟೀಚರ್ ಹಾಗೂ ಮುಖ್ಯೋಪಾಧ್ಯಾಯರು ಅರೆ ಬೆತ್ತಲಾಗಿ ನಿಂತಿದ್ದರು. ಅವರ ಸುತ್ತಲೂ ಊರ ಜನ. ಅವರಿಬ್ಬರಿಗೆ ಗೇಲಿ ಮಾಡಬೇಕಿದ್ದ ಜನ ಆಶ್ಚರ್ಯವೆಂಬಂತೆ ನನ್ನನ್ನು ನೋಡಿ ಹೀಯಾಳಿಸುವಂತೆ ನಗುತ್ತಿದ್ದರು.

ಬಾಹ್ಯ ಪ್ರಪಂಚಕ್ಕೆ ಸಂತ್ರಸ್ತ ಭಕ್ತರ ಮೊರೆಯನ್ನು ದೇವರಿಗೆ ತಲುಪಿಸುವ ಮಾಧ್ಯಮದಂತಿದ್ದ ಅರ್ಚಕ ಹಂದೆ, ಅಂತರಂಗದಲ್ಲಿ ಕಾರ್ಕೋಟಕ ಸರ್ಪದ ವಿಷವನ್ನೇ ತುಂಬಿಕೊಂಡಿದ್ದ. ದುರುಳ ಜಗತ್ತಿನ ದೋಷಗಳು ವಿಷ ಸರ್ಪದಂತೆ ನನ್ನ ಮುಗ್ಧ ಮನಸ್ಸನ್ನು ಹಂತ ಹಂತವಾಗಿ ಆವರಿಸತೊಡಗಿದ್ದವು.

ಮುಂದುವರೆಯುವುದು…

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)