ಬಣ್ಣದ ಬಕೆಟ್

Image coutesy: thecoloradohiker.blogspot.com ಈ ಕಥೆ ಬಾಲಕೃಷ್ಣ ರಾಯರದ್ದು. ವಯಸ್ಸು ಸುಮಾರು ೮೦ ರ ಆಸುಪಾಸು. ಹೆಂಡತಿ ಮಕ್ಕಳಿಲ್ಲದೆ, ಸಂಸಾರ ತಾಪತ್ರಯವಿಲ್ಲದೆ ಬ್ರಹ್ಮಚಾರಿಯಾಗಿ ಕಾಲ ಸವೆಸಿದ ಜೀವ. ಬ್ರಹ್ಮಚಾರಿಯಾಗಲು ಕಾರಣ ಕಥೆಗೆ ಅನಾವಶ್ಯಕ. ಆದರೂ ಕಾರಣ ಹೀಗಿದೆ. ಚಿಕ್ಕಂದಿನಲ್ಲೇ ಮನೆಯ ಬಡತನಕ್ಕೆ ಬೇಸತ್ತು ಕಿನ್ನಿಗೋಳಿಯ ಪಕ್ಕದ ಚಿಕ್ಕ ಹಳ್ಳಿಯಿಂದ ಬೆಂಗಳೂರಿಗೆ ಓಡಿಬಂದು ಯಾವುದೋ ಹೋಟೆಲ್ ಅಲ್ಲಿ ಮಾಣಿ ಆಗಿ ಸೇರಿ, ಆಮೇಲೆ ಅದೇ ಉದ್ಯೋಗದಲ್ಲಿ ಹಂತ ಹಂತ ವಾಗಿ ಮೇಲೇರಿ ವ್ಯವಹಾರದ ಒಳಗುಟ್ಟುಗಳನ್ನು ಅರಿತು ಮುಂದೆ ತಾನೇ ಸ್ವಂತ ಹೋಟೆಲ್ ಪ್ರಾರಂಭಿಸಿ ಕೈಯಲ್ಲಿ ಕಾಸು ಆಡುವಾಗ ನೋಡಿದರೆ ಮದುವೆ ಪ್ರಾಯ ಮೀರಿ ಹೋಗಿತ್ತು. ಸರಿಯಾದ ಪ್ರಾಯದಲ್ಲಿ ಮದುವೆ ಆಗಲು ಆಸೆ ಇರಲಿಲ್ಲವೆಂದಲ್ಲ, ಆದರೆ ಒತ್ತಾಯ ಮಾಡಿ ಮುಂದೆ ನಿಂತು ಮದುವೆ ಮಾಡಿಸುವಷ್ಟು ಆಪ್ತರು ಯಾರು ರಾಯರ ಬಳಗದಲ್ಲಿ ಇರಲಿಲ್ಲ. ಈಗ ಅವರ ಬಳಿ ಇರಲು ಸ್ವಂತ ಐಶಾರಾಮಿ ಅಲ್ಲದೆ ಇದ್ದರು ಚೊಕ್ಕದಾದ ಒಂದು ಮನೆ ಇದೆ. ಓಡಾಡಲು ವಾಹನವಿದೆ. ಅಕ್ಕಪಕ್ಕದ ಜನರ ಮನಸ್ಸಿನಲ್ಲಿ ರಾಯರು ಕೂಡಿಟ್ಟ ಹಣದ ಬಗ್ಗೆ ದೊಡ್ಡ ದೊಡ್ಡ ಊಹೆಗಳಿವೆ. ಇಳಿವಯಸ್ಸಿನ ಜನರಿಗೆ ರಾಯರ ಬ್ರಹ್ಮಚರ್ಯದ ಬಗ್ಗೆ ಗೌರವವಿದೆ, ಯುವಕರಿಗೆ ಒಂದು ಬಗೆಯ ಆಶ್ಚರ್ಯ ಮತ್ತು ಹುಡುಗಿಯರಿಗೆ ಒಂದು ತೆರನಾದ ಭೀತಿ ಮತ್ತು ಸಂಶಯವಿದೆ.ರಾಯರಿಗೆ ಒಳಗೆ ಕೊರಗಿದ್ದರೂ ಅದನ್ನು ಹೊರಗಡೆ ತೋರಿಸಿಕೊಳ್ಳದೆ ಈ ಬ್ರಹ್ಮಚರ್ಯ ತಮ್ಮ ಸಾಧನೆಯ ಒಂದು ರೂಪವೆಂಬ ಕಲೆಯನ್ನು ಸದಾ ತನ್ನ ಮುಖದಲ್ಲಿ ತೋರ್ಪಡಿಸುತ್ತಾರೆ. ಇತ್ತೀಚೆಗಷ್ಟೇ ದೇಹಕ್ಕೆ ಕೂಡುವುದಿಲ್ಲ ಎಂಬ ಕಾರಣಕ್ಕೆ ವ್ಯವಹಾರವನ್ನು ಪರರಿಗೆ ವಹಿಸಿ ಮನೆಯಲ್ಲೇ ಆರಾಮವಾಗಿ ವಿಶ್ರಾಂತಿಯ ಜೀವನ ಕಳೆಯುತ್ತಿದ್ದಾರೆ. ಇವಿಷ್ಟು ಬಾಲಕೃಷ್ಣ ರಾಯರ ಭೂತ ಮತ್ತು ವರ್ತಮಾನಗಳ ಸಂಕ್ಷಿಪ್ತ ವಿವರ.
ಇಂತಹದೆ ಒಂದು ಸೋಮಾರಿ ಮಧ್ಯಾಹ್ನದ ಸಮಯ ರಾಯರು ಅರೆನಿದ್ರೆಯಲ್ಲಿ ತಮ್ಮ ಮನೆಯ ಹಾಲ್ ಅಲ್ಲಿ ಕೂತಿರಬೇಕಾದರೆ ಹೊರಗಡೆ ಯಾರೋ ಕೂಗಿದ ಸದ್ದಾಗುತ್ತದೆ. ರಾಯರು ಮೆಲು ನಡಿಗೆಯಲ್ಲಿ ಬಾಗಿಲಿನ ಹತ್ತಿರ ಹೋಗಿ ತೆರೆದು ನೋಡಿದರೆ ಯಾರೋ ಒಬ್ಬ ಬಣ್ಣ ಬಣ್ಣದ ಬಕೆಟ್ ಗಳನ್ನು ತಲೆ ಮೇಲೆ ಹೊತ್ತುಕೊಂಡು ಏನೋ ಹೇಳುತ್ತಿದ್ದಾನೆ. ಅರೆಮನಸ್ಸಿನಿಂದ ರಾಯರು ಬಾಗಿಲು ಮುಚ್ಚಲು ಹೋಗುವಾಗ ಆತ ಮತ್ತೆ ಕೂಗುತ್ತಾನೆ. “ಸಾರ್ ನಿಮ್ಮ ಹತ್ತಿರ ಇರೋ ಹಳೆ ಹಾಳಾದ ನಲ್ಲಿ ಕೊಡಿ ನಂಗೆ. ನಾನು ನಿಮಗೆ ಒಂದು ಬಕೆಟ್ ಕೊಡ್ತೇನೆ.” ಒಹ್ ಇದು ಹೊಸ ಬಗೆಯ ತಂತ್ರ. ವ್ಯಾಪಾರಕ್ಕೋಸ್ಕರ ಜನ ಯಾವ ಯಾವ ದಾರಿ ಎಲ್ಲ ಹಿಡಿತಾರೆ ಅಂತ ಮನಸ್ಸಿನಲ್ಲೇ ನಗುತ್ತ ತನ್ನ ಬಳಿ ಯಾವುದೇ ಹಳೆಯ ನಲ್ಲಿ ಇಲ್ಲದೆ ಇರುವುದನ್ನ ನೆನಪಿಸಿಕೊಳ್ಳುತ್ತಾ ಆತನಿಗೆ ಬೇಡವೆನ್ನುತ್ತ ಬಾಗಿಲು ಮುಚ್ಚುತ್ತಾರೆ. ಬಂದು ಮಲಗಿದವರಿಗೆ ಗಾಢವಾದ ನಿದ್ರೆ ಆವರಿಸಿಕೊಂಡು ಬಿಡುತ್ತದೆ. ನಿದ್ರೆ ಇಡೀ ಬರಿ ಬಣ್ಣದ ಬಕೆಟ್ ಗಳದ್ದೇ ಕನಸು. ಬಕೆಟ್ ನೀರಲ್ಲಿ ತಾನು ಚಿಕ್ಕ ಮಗುವಾಗಿದ್ದಾಗ ಆಡುತ್ತಿರುವುದು, ಇಲ್ಲದೆ ಇರುವ ಮೊಮ್ಮಗುವನ್ನು ತಾನು ಬಕೆಟ್ ಒಳಗೆ ಕೂರಿಸಿ ಸ್ನಾನ ಮಾಡಿಸುತ್ತಿರುವುದು, ತಾನು ಮತ್ತು ತನ್ನ ಹೆಂಡತಿ ಮನೆಯ ಬಣ್ಣದ ಗಿಡಗಳಿಗೆ ಬಣ್ಣದ ಬಕೆಟ್ಇಂದ ನೀರು ಕೊಡುತ್ತಿರುವುದು. ಹೀಗೆ ಅಸಂಬದ್ದ ಅರ್ಥಹೀನ ಕನಸುಗಳು. ಕನಸಿನಿಂದ ಎಚ್ಚರವಾದ ಬ್ರಹ್ಮಚಾರಿ ರಾಯರಿಗೆ ಸಂಸಾರದ ಕನಸು ತುಂಬಾ ಹಿತವೆನಿಸಿತು. ನಿದ್ರೆಯಿಂದ ಎಚ್ಚರವಾಗಿ ಕನಸು ಮುರಿದು ಬಿದ್ದುದರ ಬಗ್ಗೆ ಬೇಸರವೆನಿಸಿತು.lonely-old-man

ಊಟ ಮಾಡಿ, ಮತ್ತೆ ಬೆಳಗ್ಗಿನ ಪೇಪರ್ ಓದಿ ಆಯ್ತು, ಟಿವಿ ಹಾಕಿ ಅತ್ತೆ ಸೊಸೆ ಜಗಳ ನೋಡಿದ್ದಾಯಿತು, ಸಂಜೆ ಹತ್ತಿರದ ಪಾರ್ಕ್ ಅಲ್ಲಿ ವಾಕ್ ಮಾಡಿದ್ದಾಯಿತು, ರಾತ್ರಿ ಊಟಕ್ಕೆ ಅಡಿಗೆ ಮಾಡಿದ್ದಾಯಿತು, ಊಟ ಮಾಡಿಯೂ ಆಯಿತು. ಆದರೆ ಬೆಳಗ್ಗೆ ಬಿದ್ದ ಕನಸಿನ ಮಂಪರು ರಾಯರ ತಲೆಯಿಂದ ಹೊರ ಹೋಗುತ್ತಿಲ್ಲ, ರಾತ್ರಿ ಕಣ್ಣಿಗೆ ನಿದ್ರೆ ಹತ್ತುತ್ತಿಲ್ಲ. ಅಂತೂ ಇಂತೂ ಸ್ವಲ್ಪ ನಿದ್ರೆ ಬಂದಂತೆ ಆದಾಗ ಮತ್ತೆ ಅದೇ ಥರದ ಕನಸು ಬೀಳ ಹತ್ತಿದಾಗ ರಾಯರು ನಿಜವಾಗಿ ಕಂಗಾಲಾದರು. ರಾತ್ರಿಯಿಡೀ ಕೂತು ಪರಿಹಾರ ಯೋಚಿಸಿದರು. ಎಲ್ಲ ಶುರು ಆಗಿದ್ದು ಬಣ್ಣದ ಬಕೆಟ್ ನೋಡಿದ ಮೇಲೆಯೇ. ಅಷ್ಟಕ್ಕೂ ಈ ಕನಸುಗಳು ತನಗೆ ಒಂದು ಥರದ ಖುಶಿಯನ್ನೆ ಕೊಡುತ್ತಿವೆ. ಏನೇ ಆಗಲಿ ಬೆಳಗ್ಗೆ ಎದ್ದ ಕೂಡಲೇ ಆ ಬಕೆಟ್ ಮಾರುವವನನ್ನು ಹುಡುಕಿ ಒಂದೆರಡು ಬಕೆಟ್ ತೆಗೆದುಕೊಳ್ಳಲೇ ಬೇಕು. ಆಗಲೇ ಸಮಾಧಾನ ನನಗೆ ಅಂತ ರಾಯರು ಒಂದು ತೀರ್ಮಾನಕ್ಕೆ ಬಂದರು.

ಆಗ ಮಲಗಿದವರಿಗೆ ಎಚ್ಚರವಾಗಿದ್ದು ಮರುದಿನ ಮಧ್ಯಾಹ್ನ ೧೨-೩೦ ಸುಮಾರಿಗೆ. ನಿನ್ನೆ ಬಂದ ಬಕೆಟ್ ಮಾರುವವನು ಇನ್ನು ಇಲ್ಲೇ ಎಲ್ಲಾದರೂ ತಿರುಗಾಡುತ್ತಿರಬಹುದು ಎಂಬ ನೀರಿಕ್ಷೆಯೊಂದಿಗೆ ಮನೆಯಿಂದ ಹೊರಟ ರಾಯರು ಅಕ್ಕ ಪಕ್ಕದ ಎಲ್ಲ ಬೀದಿಗಳನ್ನು ಸುತ್ತಿದರೂ ಆತನ ಪತ್ತೆಯಿಲ್ಲ. ಸರಿ ವಾಪಾಸ್ ಮನೆಗೆ ಬಂದು ಸ್ಕೂಟರ್ ಹತ್ತಿ ಅಕ್ಕ ಪಕ್ಕದ ಬಡಾವಣೆ ಸುತ್ತಲು ಹೊರಟರು. ಸಂಜೆವರೆಗೆ ಸುತ್ತಮುತ್ತಲಿನ ಎಲ್ಲ ಬಡಾವಣೆಗಳನ್ನು ಸುತ್ತಿ, ಅಲ್ಲಲ್ಲಿ ವಿಚಾರಿಸಿದರೂ ಮಾರುವವನ ಪತ್ತೆಯಿಲ್ಲ. ಬೆಳಗ್ಗೆಯಿಂದ ಬರಿ ಹೊಟ್ಟೆಯಲ್ಲಿ ತಿರುಗಿದರ ಫಲವಾಗಿ ತಲೆ ಸುತ್ತು ಬಂದಂತಾಗಿ ಅಲ್ಲೇ ಎಲ್ಲೋ ಪಕ್ಕದ ಬಸ್ ಸ್ಟಾಂಡ್ ಬೆಂಚ್ ಮೇಲೆ ಕೂತವರಿಗೆ ಮತ್ತೆ ಗಾಢವಾದ ನಿದ್ರೆ. ನಿದ್ರೆಯಲ್ಲಿ ಮತ್ತೆ ಅವೇ ಕನಸುಗಳು. ಕನಸಿನಿಂದ ಎಚ್ಚರವಾದವರಿಗೆ ಕೂಡಲೇ ವಾಸ್ತವದ ಪರಿಚಯವಾಯಿತು. ಉಟ್ಟ ಬಟ್ಟೆ ಬಿಟ್ಟರೆ , ಕಿಸೆಯಲ್ಲಿದ್ದ ದುಡ್ಡು, ಸ್ಕೂಟರ್ ಕೀ, ಸ್ಕೂಟರ್ ಎಲ್ಲವು ಮಾಯ. ಆಗಲೇ ಮನೆಯಿಂದ ೮ ರಿಂದ ೯ ಕಿಲೋಮೀಟರು ದೂರ ಬಂದವರಿಗೆ ಈಗ ಕಾಲ್ನಡಿಗೆಯಲ್ಲಿ ಮನೆ ತಲುಪದೇ ಬೇರೆ ದಾರಿಯಿಲ್ಲ. ಬೇರೆಯವರಲ್ಲಿ ಹಣ ಕೇಳಲು ಸ್ವಾಭಿಮಾನ ಒಪ್ಪದು. ರಾತ್ರಿವರೆಗೆ ನಡೆದವರಿಗೆ ಸುಸ್ತಾಗಿ ಇನ್ನು ನಡೆಯಲು ಸಾಧ್ಯವಿಲ್ಲವೆನಿಸಿ ಮತ್ತೆ ಅಲ್ಲೇ ಒಂದು ಬಸ್ ಸ್ಟಾಂಡ್ ನ ಸೂರಿನ ಅಡಿಯಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಅಲ್ಲಿ ಕುಳಿತವರಿಗೆ ಆಗಲೇ ಹೊಳೆದದ್ದು, ಕಳವಾದುದ್ದರ ಬಗ್ಗೆ ತಾನು ಪೋಲಿಸ್ ಹತ್ತಿರ ಕಂಪ್ಲೇಂಟ್ ಕೂಡ ಬರೆಸಿಲ್ಲ ಎಂದು. ಹಾಗೆ ಮಾಡಿದ್ದರೆ ಅವರೇ ತನ್ನನ್ನು ಮನೆವರೆಗೆ ತಲುಪಲು ಸಹಕರಿಸುತ್ತಿದ್ದರೋ ಏನೋ. ಈಗಂತೂ ಹತ್ತಿರದ ಪೋಲಿಸ್ ಸ್ಟೇಷನ್ ಹುಡುಕಲು ಶಕ್ತಿಯಿಲ್ಲ. ಆಚೀಚೆ ನಡೆದಾಡುತ್ತಿರುವ ಮಂದಿ ಎದುರು ತನ್ನ ಕಥೆ ಹೇಳಲು ನಾಚಿಕೆ. ತನ್ನ ಮೂರ್ಖತನಕ್ಕೆ ತಾನೇ ಶಪಿಸುತ್ತ ಅಲ್ಲೇ ಬೆಂಚಿನ ಮೇಲೆ ತಲೆ ಒರಗಿಸಿದರು. ಆಗಲೇ ಶುರು ಆಗಿದ್ದು ರಾಯರಿಗೆ ಅನುಮಾನ. ಜನ ತನ್ನ ಹತ್ತಿರ ಬಕೇಟು ಮಾರುವವನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು. ಆತ ಯಾವ ಬೀದಿಗೂ ಹೋಗದೆ ಬರಿ ತನ್ನ ಮನೆಗೆ ಮಾತ್ರ ಬರಲು ಹೇಗೆ ಸಾಧ್ಯ? ಅಷ್ಟಕ್ಕೂ ಸುಳ್ಳು ಹೇಳಿ ಜನಕ್ಕೇನು ಲಾಭ? ಗೊಂದಲದಲ್ಲೇ ಮುಳುಗಿದ ರಾಯರಿಗೆ ಹಾಗೆ ನಿದ್ರೆ ಹತ್ತಿತು.

thelonelyoldmanಬೆಳಗ್ಗೆ ಎಚ್ಚರವಾದವರೇ ತಡ ಮಾಡದೆ ಮತ್ತೆ ಮನೆ ಕಡೆ ತಮ್ಮ ನಡಿಗೆ ಮುಂದುವರೆಸಿದರು. ತಮ್ಮ ಮನೆ ಬೀದಿ ತಲುಪಿದವರೇ ಮೊದಲು ಮಾಡಿದ ಕೆಲಸ ಪಕ್ಕದ ಮನೆಯ ಗೀತಕ್ಕನವರ ಬಾಗಿಲು ಬಡಿದದ್ದು . ಬಾಗಿಲು ತೆಗೆದ ಗೀತಕ್ಕನಿಗೆ ರಾಯರ ಮುಖ ನೋಡಿ ಒಮ್ಮೆಗೆ ದಿಗಿಲಾಯಿತು. ಯಾವತ್ತೂ ತುಂಬಾ ಶಿಸ್ತಿನಿಂದ ಶೋಭಿಸುತ್ತಿದ್ದ ರಾಯರ ಮುಖ ಇವತ್ತು ಸುಸ್ತಾಗಿ ಕಳೆಗುಂದಿ, ಪ್ರೇತಕಳೆ ಸೂಸುತ್ತಿದೆ. ಕೂದಲು ಮುಖವೆಲ್ಲ ಅಂಟಂಟು ಆದ ಹಾಗಿದೆ. ಏನೆಂದು ವಿಚಾರಿಸುವ ಮೊದಲೇ ರಾಯರು ಬಕೆಟ್ ಮಾರಲು ಬಂದವನ ಬಗ್ಗೆ ವಿಚಾರಿಸಿದರು. ಗೀತಕ್ಕ ಹಾಗೆ ಯಾರನ್ನು ತಾನು ನೋಡಿಲ್ಲವೆಂದು ಹೇಳಲು ಮೊದಲೇ ಸುಸ್ತಾಗಿ ಹೋಗಿದ್ದ ರಾಯರು ರೇಗಿ , ಕೋಪ ನೆತ್ತಿಗೇರಿ ಗೀತಕ್ಕನಿಗೆ ಹಿಗ್ಗಾ ಮುಗ್ಗವಾಗಿ ಬಯ್ದು ಮನೆ ಸೇರಿದರು. ಶಾಂತಮೂರ್ತಿಯಂತೆ ಇದ್ದ ರಾಯರ ಉಗ್ರ ರೂಪ ನೋಡಿ ಗೀತಕ್ಕ ಎಷ್ಟು ಹೊತ್ತು ಹಾಗೆ ಅಚ್ಚರಿಯಿಂದ ನಿಂತರೋ ಗೊತ್ತಿಲ್ಲ ಆದರೆ ಅದಾಗಲೇ ಸುತ್ತ ಮುತ್ತಲಿನ ಮನೆಗಳ ಕಿಟಕಿಯಿಂದ ಒಂದೊಂದೇ ಮುಖಗಳು ನಡೆಯುತ್ತಿದ್ದ ನಾಟಕವನ್ನು ಕುತೂಹಲದಿಂದ ನೋಡುತ್ತಿದ್ದವು.

ಇತ್ತ ಮನೆ ಸೇರಿದ ರಾಯರಿಗೆ ಯಾವುದೂ ಪಥ್ಯವಾಗುತ್ತಿಲ್ಲ. ಮನಸ್ಸಿನ ನೆಮ್ಮದಿಯೇ ಹಾಳಾಗಿ ಹೋಗಿದೆ. ಬಕೆಟ್ ಮಾರುವವನು ಸಿಗುವವರೆಗೂ ಅವರಿಗೆ ಶಾಂತಿಯಿಲ್ಲ. ಅಕ್ಕ ಪಕ್ಕದ ಮನೆಯವರ ಮೇಲೆ ಅಪನಂಬಿಕೆ ಹುಟ್ಟಿ ಬಿಟ್ಟಿದೆ. ಎಲ್ಲರು ತನ್ನಿಂದ ಏನೋ ಮುಚ್ಚಿ ಇಟ್ಟಿದ್ದಾರೆ ಎನ್ನುವ ಅನುಮಾನ. ರಾತ್ರಿಯಾದಂತೆ ಹೊಸ ಯೋಚನೆಯೊಂದು ರಾಯರ ಮನಸ್ಸಿಗೆ ಹೊಳೆದಿದೆ. ಹೇಗೋ ತಾನು ಕಷ್ಟಪಟ್ಟು ಬಕೆಟ್ ಮಾರುವವನನ್ನು ಹುಡುಕಿಯೇ ಬಿಟ್ಟರೂ, ಒಂದು ವೇಳೆ ಆತ ಹಣಕ್ಕೆ ಬಕೆಟ್ ಕೊಡುವುದಿಲ್ಲ , ಹಾಳಾದ ನಲ್ಲಿ ಕೊಟ್ಟರೆ ಮಾತ್ರ ಬಕೆಟ್ ಕೊಡುವುದು ಅಂದು ಬಿಟ್ಟರೆ ಏನು ಮಾಡುವುದು? ತನ್ನಲ್ಲಿ ಯಾವುದೇ ಹಾಳಾದ ನಲ್ಲಿ ಇಲ್ಲ. ಆದರೆ ಬಕೆಟ್ ಕೊಂಡುಕೊಳ್ಳದೆ ತನ್ನ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಹೊಸ ನಲ್ಲಿಯನ್ನು ಅಂಗಡಿಯಿಂದ ಖರೀದಿಸಿದರೆ ಹೇಗೆ? ಉಪಾಯ ಹೊಳೆಯುತ್ತಲೇ ಸಮಾಧಾನವಾಗಿ ರಾಯರಿಗೆ ನಿದ್ರೆ ಹತ್ತಿತು. ಬೆಳಗ್ಗೆ ಎದ್ದವರೇ ಹಲ್ಲುಜ್ಜಿ ಸ್ನಾನ ಕೂಡ ಮಾಡದೆ ನಲ್ಲಿ ಅಂಗಡಿಗೆ ಹೋಗಿ ಸುಮಾರು ೧೦ ರಿಂದ ೧೫ ನಲ್ಲಿಗಳನ್ನು ಕೊಂಡರು. ಪರಿಚಯಸ್ಥನೆ ಆದ ಅಂಗಡಿಯವ ರಾಯರನ್ನು ಯಾಕೆ ಇಷ್ಟೊಂದು ನಲ್ಲಿ ತಮಗೆ ಬೇಕು ಎಂದು ವಿಚಾರಿಸಲು ರಾಯರು ಉಡಾಫೆಯ ಉತ್ತರ ಕೊಟ್ಟು ಅಲ್ಲಿಂದ ಹೊರ ನಡೆದರು. ರಾಯರ ಹುಚ್ಚರಂತಿರುವ ಅವತಾರ ಮತ್ತು ಬದಲಾದ ಅವರ ಮಾತಿನ ಶೈಲಿ ಅಂಗಡಿಯವನಿಗೆ ಆಶ್ಚರ್ಯ ಉಂಟುಮಾಡಿತು.

ನಲ್ಲಿ ಸಿಕ್ಕಿದ ಸಮಾಧಾನದಿಂದ ಮನೆಗೆ ಬಂದ ರಾಯರಿಗೆ ಆ ಸಮಾಧಾನ ಹೆಚ್ಚು ಕಾಲ ಉಳಿಯಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಯೋಚನೆ ಅವರ ತಲೆ ಕೊರೆಯತೊಡಗಿತು. ಬಕೆಟ್ ಮಾರುವವನ ಮಾತುಗಳು ಅವರಿಗೆ ನೆನಪಾದವು. ಆತ ಕೇಳಿದ್ದು ಹಾಳಾದ ಹಳೆ ನಲ್ಲಿ. ತಾನು ಖರೀದಿ ಮಾಡಿರುವುದು ಹೊಚ್ಚ ಹೊಸ ಹೊಳೆಯುವ ನಲ್ಲಿಗಳನ್ನು. ಆತ ಇವಗಳನ್ನು ತೆಗೆದುಕೊಳ್ಳದೆ ಹೋದರೆ ಏನು ಮಾಡುವುದು? ಮತ್ತೆ ರಾಯರಿಗೆ ಪೇಚಿಗೆ ಇಟ್ಟುಕೊಂಡಿತು.ಸಂಜೆವರೆಗೆ ಯೋಚಿಸುತ್ತ ಕುಳಿತವರಿಗೆ ಹೊಸ ಉಪಾಯ ಹೊಳೆಯಿತು. ತನ್ನ ಹತ್ತಿರ ಹಳೆ ನಲ್ಲಿ ಇಲ್ಲದಿದ್ದರೆ ಏನಾಯ್ತು ಹಳೆ ಬಕೆಟ್ ಗಳು ಬೇಕಾದಷ್ಟಿವೆ. ತಾನು ಹತ್ತಿರದ ಎಲ್ಲ ಬೀದಿ ಸುತ್ತಿ ಎಲ್ಲ ಮನೆಗಳಲ್ಲಿ ತನ್ನ ಹಳೆ ಬಕೆಟ್ ಗಳ ಬದಲಾಗಿ ಹಳೆ ನಲ್ಲಿ ಕೇಳಿ ಪಡೆಯಬಹುದು. ಈ ಯೋಚನೆ ತಲೆಗೆ ಹೊಳೆದದ್ದೇ ತಡ ಕೂಡಲೇ ರಾಯರು ಮನೆಯಲ್ಲಿದ್ದ ಎಲ್ಲ ಬಕೆಟ್ ಗಳನ್ನೂ ತಲೆಯ ಮೇಲೆ ಹೊತ್ತು ಕೊಂಡು ಮುಸ್ಸಂಜೆಯ ಸಮಯದಲ್ಲಿ ಮನೆಯಿಂದ ಹೊರ ನಡೆದೇ ಬಿಟ್ಟರು. ಬೀದಿಯಲ್ಲಿ ಆಡುತ್ತಿದ್ದ ಮಕ್ಕಳು ರಾಯರ ಹೊಸ ವೇಷ ನೋಡಿ ದಂಗಾಗಿ ಸ್ವಲ್ಪ ಹೊತ್ತು ಅಲ್ಲೇ ನಿಂತು ನೋಡಿ ಆಮೇಲೆ ಭಯದಿಂದ ಓಡಿ ಮನೆ ಸೇರಿಕೊಂಡವು. ೨ ದಿನದಿಂದ ಊಟ ಮಾಡದೆ, ಸ್ನಾನ ಮಾಡದೆ ಇದ್ದ ರಾಯರ ವೇಷಕ್ಕೆ ತಲೆ ಮೇಲಿನ ಬಕೆಟ್ ರಾಶಿ ವಿಚಿತ್ರವಾದ ಹುಚ್ಚು ಕಳೆ ನೀಡಿದ್ದವು. ರಾಯರು ಹಳೆ ನಲ್ಲಿ ವಿಚಾರಿಸುತ್ತಾ ಮನೆ ಮನೆಗೆ ಸುತ್ತಲು, ಎಲ್ಲ ಮನೆಯವರು ರಾಯರ ಹೊಸ ಆಟಕ್ಕೆ ನಗುವುದೋ ಅಳುವುದೋ ತಿಳಿಯದೆ ಹೊರ ಬಂದು ನೋಡತೊಡಗಿದರು. ಯಾವ ಮನೆ ಅಲೆದರೂ ಒಂದೇ ಒಂದು ಹಾಳಾದ ನಲ್ಲಿ ಸಿಗದೇ ಹೋದದ್ದರಿಂದ ರಾಯರು ಮತ್ತೆ ರೇಗಿ, ಒಂದು ಮನೆಯ ಒಳ ನುಗ್ಗಿ ತಾನೇ ಹಳೆ ನಲ್ಲಿ ಹುಡುಕ ತೊಡಗಿದರು. ಸಿಗದೇ ಹೋದಾಗ ಆ ಮನೆಯ ಒಂದು ನಲ್ಲಿಯನ್ನು ಕಿತ್ತೆ ಬಿಟ್ಟರು. ನಲ್ಲಿ ಒಡೆದು ಮನೆ ತುಂಬಾ ನೀರು ತುಂಬತೊಡಗಿತು. ಮನೆಯ ಯಜಮಾನ ರಾಯರ ಹುಚ್ಚಾಟ ಸಹಿಸಲಾಗದೆ ಪೊಲೀಸರಿಗೆ ದೂರು ನೀಡುವುದೂ, ಸ್ಥಳಕ್ಕೆ ಬಂದ ಪೊಲೀಸರು ರಾಯರ ಅವಸ್ಥೆ ನೋಡಿ ಸರಕಾರೀ ಹುಚ್ಚಾಸ್ಪತ್ರೆಗೆ ಅವರನ್ನು ಸೇರಿಸುವುದು ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಹೋದವು.

ಕಳೆದ 5 ತಿಂಗಳಿಂದ ಸದಾ ಕಾಲ ಆಸ್ಪತ್ರೆಯಲ್ಲಿ ಕೊಡುವ ಮದ್ದಿನ ಮಂಪರಿನಲ್ಲೇ ಇರುವ ರಾಯರಿಗೆ ಈಗ ಹೆಚ್ಚು ಬಣ್ಣಗಳು ನೋಡ ಸಿಗುವುದಿಲ್ಲ. ಆಗಾಗ ಎಲ್ಲಾದರೂ ಒಂದೊಂದು ಬಣ್ಣದ ಬಕೆಟ್ ಕಣ್ಣಿಗೆ ತೋರಿದಂತಾಗಿ ಮತ್ತೆ ಹಳೆ ಕನಸು, ನೆನಪುಗಳೆಲ್ಲ ಬಂದು ರಾಯರು ಮತ್ತೆ ಚಿಗುರಿದಂತಾಗಲು ಮತ್ತೆ ಅದೇ ಆಸ್ಪತ್ರೆ ಸಿಬ್ಬಂದಿ ಅವರಿಗೆ ಯಾವುದೋ ಚುಚ್ಚು ಮದ್ದನ್ನು ನೀಡಿ
ನಿದ್ರೆಗೆ ತಳ್ಳುತ್ತಾರೆ. ಆ ನಿದ್ರೆಯಲ್ಲಿ ಮಾತ್ರ ರಾಯರಿಗೆ ಯಾವ ಥರದ ಕನಸು ಬೀಳುತ್ತದೆ ಎಂದು ಯಾರಿಗೂ ತಿಳಿದಿಲ್ಲ.

10 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)