ದೇಜಾ ವು

ಮೆದುವಾದ ಸೀಟುಗಳು, ತಂಪಾದ ಗಾಳಿ, ಹೊರಗಿನ ಪ್ರಪಂಚದ ಎಲ್ಲಾ ಸದ್ದುಗಳನ್ನು ಸಂಪೂರ್ಣವಾಗಿ  ಇಲ್ಲವಾಗಿಸಿ ತನ್ನದೇ ಬೇರೆಯೇ ದೃಷ್ಟಿಯಿಂದ ಹೊರ ಲೋಕವನ್ನು ನೋಡುವಂತೆ ಮಾಡುವ ಬೆಂಗಳೂರಿನ ಈ  ವೋಲ್ವೋ ಬಸ್, ಖಂಡಿತವಾಗಿಯೂ ಬಡವರ ಪ್ರಯಾಣಕ್ಕೆಂದು ಅಲ್ಲ. ಇದರೊಳಗೆ ಕೂತಾಗ ಹೊರಗಿನ  ಬಿಸಿಲಿನ ಧಗೆ ತಾಕುವುದಿಲ್ಲ, ದಾರಿಯಲ್ಲಿರುವ ಅಲ್ಲೊಂದು ಕೊಳೆಗೇರಿಯ ಮನೆಯ ಹೊರಗೆ ಕೊಳಕು ಬಟ್ಟೆ ಹಾಕಿಕೊಂಡು ಆಡುತ್ತಾ ಕೂತ  ಮಗುವಿನ ಮೂಗಿಗೆ ಅಡರುವ ಕೊಳಕು ಚರಂಡಿಯ ವಾಸನೆ ಇದರೊಳಗೆ  ನುಸುಳುವುದಿಲ್ಲ, ರಸ್ತೆಯ ಮೇಲಿರುವ ಇತರ ಸವಾರರು ಬೀಡಿ ಸೇದಲು, ಚಹಾ ಕುಡಿಯಲು ವ್ಯಯಿಸುವ ೫ ನಿಮಿಷವನ್ನು ಉಳಿಸಲು ಜೀವವನ್ನೇ ಪಣಕ್ಕಿಟ್ಟಂತೆ ವಾಹನ ಚಲಾಯಿಸುತ್ತಾ ಪಡುವ ಪರದಾಟ, ತೀಕಲಾಟಗಳು ಈ ಬಸ್ಸಿನ ಒಳಗೆ ಕೂತವರ ಅನುಭವಕ್ಕೆ ಬರುವುದೇ ಇಲ್ಲ. ಇದರೊಳಗೆ ತೋರುವುದು, ದುಬಾರಿಯಾದ ಆದರೂ ಮಾಸಿರುವ ಬಣ್ಣದ ಬಟ್ಟೆಯನ್ನು ಧರಿಸಿ, ಕಿವಿಗಳಿಗೆ ವೈರ್  ಸಿಕ್ಕಿಸಿಕೊಂಡು ನಿದ್ರೆ ಮಾಡುತ್ತಿರುವ ತರುಣ ತರುಣಿಯರು ಇಲ್ಲವೇ, ಆಗಲೇ ಒಂದೆರಡು ಮನೆಗಳನ್ನು ಖರೀದಿಸಿ ಇನ್ನೂ ಕೂಡ ಹೇಗೆ ಹೆಚ್ಚು ಸಂಪಾದಿಸಬಹುದು ಎಂದು ತಮ್ಮ ತಮ್ಮಲ್ಲೇ ಚರ್ಚೆ ನಡೆಸುತ್ತಿರುವ ಅರೆ ಬಕ್ಕ ತಲೆಯ  ಮಧ್ಯವಯಸ್ಕರು, ಅವರ ಚರ್ಚೆಯನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಿರುವ ಕೆಲ ಯುವಕರು, ಎಲ್ಲೋ ಅಪ್ಪಿ ತಪ್ಪಿ ಗೊತ್ತಾಗದೆ ಬಸ್ ಹತ್ತಿಕೊಂಡ ಸಾಮಾನ್ಯ ಕೂಲಿ ಕಾರ್ಮಿಕನನ್ನೋ ಅಥವಾ ಹಳ್ಳಿಗನನ್ನೋ ವಿಚಿತ್ರವಾಗಿ ಗಮನಿಸುವ ಕರುಣಾಮಯಿಗಳು, ಅಪರೂಪಕ್ಕೊಮ್ಮೆ ವೃದ್ಧರು ನಿಂತಿರುವಾಗ ತನ್ನ ಸೀಟ್ ಬಿಟ್ಟುಕೊಟ್ಟು ವರ್ಷಕ್ಕಾಗುವಷ್ಟು ಪುಣ್ಯ ಸಂಪಾದಿಸಿದ ಭಾವನೆಯನ್ನು ಮುಖದಲ್ಲಿ ವ್ಯಕ್ತ ಪಡಿಸಿಕೊಂಡು ನಿಂತಿರುವ, ಮಣಭಾರ ಮೇಕಪ್ ಹೊತ್ತಿರುವ ಯುವತಿ ಹಾಗು ಇವರೆಲ್ಲರ ಮಧ್ಯೆ ಕನ್ನಡದಲ್ಲಿ ಆಗಾಗ ನಿಲ್ದಾಣಗಳ ಹೆಸರನ್ನು ಕಿರಿಚುತ್ತ, ಚಿಲ್ಲರೆ ಕೊಡದ ಪ್ರಯಾಣಿಕರಿಗೆ ಅವರಿಗೆ ಅರ್ಥವಾಗದ ಭಾಷೆಯಲ್ಲಿ ಬಯ್ಯುತ್ತ ಬಸ್ಸಿನಲ್ಲಿ ಅತ್ತಿಂದಿತ್ತ ಸಂಚಾರಿಸುವ ನಿರ್ವಾಹಕ. ಇಷ್ಟೇ.

manPhoneಇವೆಲ್ಲವುಗಳ ಹೊರತಾಗಿಯೂ ಮನೆಯಿಂದ ಆಫೀಸ್ ತನಕದ ದಿನದ ಬಸ್ಸಿನ ಪ್ರಯಾಣದಲ್ಲಿ ಮನರಂಜನೆ ಒದಗಿಸುವ ಒಂದೆರಡು ನಮೂನೆಗಳು ಇದ್ದೇ ಇರುತ್ತವೆ. ಹಾಗೆಯೇ ಇವತ್ತಿನ ಸರದಿ ಯಾರದ್ದಪ್ಪಾ ಎಂದು ಆಚೀಚೆ ನೋಡುತ್ತಿರುವಾಗಲೇ ತೋರಿದ್ದು ಆತ. ನೋಡಲು ನೀಟಾಗಿಯೇ ಆಫೀಸಿಗೆ ಹೋಗುವ ಯಾವುದೇ ಗಂಡಸು ಧರಿಸುವ ಉಡುಗೆಯನ್ನೇ ತೊಟ್ಟಿದ್ದಾನೆ. ಎಲ್ಲರಂತೆಯೇ ಆತನ ತೊಡೆಯ ಮೇಲೆ ಕೂಡ ಒಂದು ಬ್ಯಾಗ್. ಆತನ ಕೈಯಲ್ಲೂ ಕೂಡ ದೊಡ್ಡ ಪರದೆಯ, ಅಂಗೈಯ್ಯಲ್ಲಿ ಕಷ್ಟದಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ಒಂದು ಫೋನ್. ಎಲ್ಲರಂತೆಯೇ ಇಡೀ ಪ್ರಪಂಚವೇ ತನ್ನ ಅಂಗೈಯಲ್ಲಿ ಅಡಗಿದೆ ಎಂಬಂತೆ ಹೊರಗಿನ ನಿಜ ಪ್ರಪಂಚವನ್ನು ಮರೆತು ಆತ ಕೂಡ ಫೋನ್ ನ ಪರದೆಯನ್ನೇ ದಿಟ್ಟಿಸುತ್ತಿದ್ದಾನೆ. ಆದರೆ ಬೇರೆಯವರು ಮತ್ತು ಈತನ ನಡುವಿನ ವ್ಯತ್ಯಾಸವೆಂದರೆ ಈತ ಇತರರಂತೆ ಅದರಲ್ಲಿ ಆಟವಾಡುವುದಾಗಲಿ, ಸಂದೇಶ ಕಳುಹಿಸುವುದಾಗಲೀ, ಅಂತರ್ಜಾಲ ಜಾಲಾಡುವುದಾಗಲಿ ಮಾಡುತ್ತಿಲ್ಲ. ಬರೀ ಪರದೆಯನ್ನು ದಿಟ್ಟಿಸುತ್ತಿದ್ದಾನೆ. ಅದು ಕೂಡ ಕಳೆದ ೧೦ ನಿಮಿಷದಿಂದ ಎವೆಯಿಕ್ಕದೆ ದಿಟ್ಟಿಸುತ್ತಿದ್ದಾನೆ. ಕುತೂಹಲ ತಡೆಯಲಾರದೆ ನನಗಿಂತ ೨ ಸೀಟು ಮುಂದೆ ಕೂತಿರುವ ಆತನ ಫೋನ್ ಪರದೆಯನ್ನು ಇಣುಕಿ ನೋಡಿದವನಿಗೆ ತೋರಿದ್ದು ಒಂದು ಬಗೆಯ ವಿಚಿತ್ರವಾದ ನಗು ಮುಖದ, ಸ್ವಲ್ಪ ಹೊತ್ತಿನ ಹಿಂದಷ್ಟೇ ಎಲೆ ಅಡಿಕೆ ಜಗಿದಂತಿರುವ, ದಿವ್ಯ ಕಳೆಯನ್ನು ಪ್ರಯತ್ನಪೂರ್ವಕವಾಗಿ ಮುಖದ ಮೇಲೆ ಮೂಡಿಸಿಕೊಂಡಂತೆ ಇರುವ, ಬಿಳಿಚು, ದಪ್ಪ ಮುಖದ ಇಳಿ ಮಧ್ಯ ವಯಸ್ಕ ಒಂದು ಹೆಂಗಸಿನ ಚಿತ್ರ. ಆ ಒಂದು ಕ್ಷಣಕ್ಕೆ ಆ ಹೆಂಗಸಿನ ಮುಖ ನೋಡಿ ವಿನಾಕಾರಣ ಒಂದು ನಗು ಮನಸ್ಸಿನಲ್ಲಿ ಮೂಡಿ ಹೋಯಿತು. ಬಹುಶಃ ಆತನ ತಾಯಿ ಇರಬಹುದು. ಊರಲ್ಲಿರುವ ಆಕೆಯ ನೆನಪಾಗಿರಬೇಕು ಎಂದು ಸುಮ್ಮನಾಗಿ ನನ್ನದೇ ಯೋಚನೆಯಲ್ಲಿ ಮುಳುಗಿ ಹೋದೆ. ಬಸ್ಸಿನಿಂದ ಇಳಿಯುವ ತನಕವೂ ಕೂಡ ಆತನ ಫೋನ್ ಪರದೆ ಮೇಲೆ ಅದೇ ಚಿತ್ರವಿತ್ತು. ಆತನ ಕಣ್ಣುಗಳು ಅಲ್ಲೇ ನೆಟ್ಟಿದ್ದವು.

ಮರುದಿನ ಬಸ್ಸಲ್ಲಿ ಕೂತು ಟಿಕೆಟ್ ತೆಗೆದುಕೊಂಡು ಆಚೀಚೆ ನೋಡಹತ್ತಿದವನಿಗೆ ತೋರಿದ್ದು ಅದೇ ಪರಿಚಿತ ಮುಖ. ಪರಿಚಿತ ಅನ್ನಿಸಿದ್ದು ಆತನ ರೂಪದಿಂದಲ್ಲ ಆತನ ವರ್ತನೆಯಿಂದ. ಕೈಯಲ್ಲಿ ಫೋನ್. ಫೋನ್ ಪರದೆಯನ್ನೇ ದಿತ್ತಿಸುತ್ತಿರುವ ಆತನ ಕಣ್ಣುಗಳು. ಆದರೆ ತಾನು ಇಂದು ಆತನ ಪಕ್ಕದ ಸಾಲಿನ ಸೀಟ್ ಅಲ್ಲಿ ಕೂತಿದ್ದೇನೆ. ಮತ್ತೆ ಇಣುಕಿ ನೋಡಿದವನಿಗೆ ಫೋನ್ ಪರದೆಯಲ್ಲಿ ತೋರಿದ್ದು ಅದೇ ಹೆಂಗಸಿನ ಮುಖ. ಆದರೆ ಫೋಟೋ ಮಾತ್ರ ಬೇರೆ. ಇದೇನಿದು ಆಶ್ಚರ್ಯವೆಂದು ಯೋಚಿಸುತ್ತಿರುವಾಗಲೇ ಗಮನಿಸಿದ್ದು, ತನ್ನನ್ನು ಹೊರತು ಪಡಿಸಿ ಆ ವ್ಯಕ್ತಿಯ ಹಿಂದಿನ ಸೀಟ್ ಅಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಅವನನ್ನು ಗಮನಿಸುತ್ತಿದ್ದಾನೆ ಎಂದು. ತಾನು ಕೂಡ ಆತನನ್ನು ದಿಟ್ಟಿಸುತ್ತಿದ್ದನ್ನು ನೋಡಿ ಹಿಂದೆ ಕೂತವ ಹಾಸ್ಯಭರಿತ ನಗು ಬೀರಿ ತನ್ನ ಕೆಲಸದಲ್ಲಿ ಮಗ್ನನಾದನು. ಯಾರಿರಬಹುದು ಈ ಮಹಿಳೆ. ಯಾಕೆ ಈತ ಒಂದು ಗಂಟೆಯ ಪೂರ್ತಿ ಪ್ರಯಾಣದುದ್ದಕ್ಕೂ ಆಕೆಯ ಚಿತ್ರವನ್ನೇ ದಿಟ್ಟಿಸುತ್ತಾನೆ? ಆತನನ್ನು ನೋಡಿದರೆ ಹುಚ್ಚನ ಥರ ತೋರುತ್ತಿಲ್ಲ. ಆಕೆ ಆತನ ಹೆಂಡತಿಯಂತೂ ಅಲ್ಲ. ಅಮ್ಮ ಇರಬಹುದೇ? ಅಮ್ಮನ ಚಿತ್ರವನ್ನು ದಿನಾ ಗಂಟೆಗಟ್ಟಲೆ ಬಸ್ಸಿನಲ್ಲಿ ನೋಡುವಂಥ ಅವಶ್ಯಕತೆ ಏನಿದೆ? ಯಾರೋ ಸಂತ ಮಾತೆಯಿರಬಹುದೇ? ಆದರೂ ಆ ಚಿತ್ರದಲ್ಲಿ ಅಂಥದ್ದೇನು ಆಕರ್ಷಣೆ ಇರಬಹುದು.ಇವೆಲ್ಲ ಪ್ರಶ್ನೆಗಳು ತಲೆಯಲ್ಲಿ ಮೂಡುತ್ತಿರುವಾಗಲೇ ನನ್ನ ನಿಲ್ದಾಣ ಬಂದು ಇಳಿದುಕೊಂಡೆ. ಮುಂದೆ ಕೆಲವು ದಿನಗಳ ಕಾಲ ಗೆಳೆಯನ ಕಾರಿನಲ್ಲಿ ಆಫೀಸ್ ಗೆ ಹೋಗುಬರುವುದಾಗಿ ಬಸ್ ಪ್ರಯಾಣ ತಪ್ಪಿತು. ಆ ನಿಗೂಢ ವ್ಯಕ್ತಿಯ ನೆನಪು ಕೂಡ ಮಾಸಿತ್ತು.

ಇಂದು ಮತ್ತೆ ಬಸ್ಸಿನಲ್ಲಿ ಹೋಗುವ ಪ್ರಸಂಗ ಎದುರಾಗಿ ಬಸ್ ಹತ್ತಿ ಟಿಕೆಟ್ ತೆಗೆದುಕೊಂಡು ಕೂತವನಿಗೆ ನಂಬಲಸಾಧ್ಯವೆಂಬಂತೆ ಆ ವ್ಯಕ್ತಿ ಮತ್ತೆ ತೋರಿದ. ಈ ಬಾರಿ ಆತನ ಮುಖ ಚೆನ್ನಾಗಿ ನೆನಪಿದ್ದುದರಿಂದ two-headsಗುರುತಿಸುವುದು ಕಷ್ಟವಾಗಲಿಲ್ಲ. ಇಂದು ತನಗಿಂದ ತುಂಬಾ ಮುಂದಿನ ಸೀಟಿನಲ್ಲಿ ಆತ  ಕುಳಿತಿದ್ದಾನೆ. ಇಂದು ಕೂಡ ಅವನ ದೃಷ್ಟಿ ಎಂದಿನಂತೆ ಫೋನಿನ ಪರದೆ ಮೇಲೆಯೇ ನೆಟ್ಟಿದೆ. ಏನನ್ನು ನೋಡುತ್ತಿದ್ದಾನೆ ಎಂದು ತನಗೆ ತೋರುತ್ತಿಲ್ಲವಾದರೂ ,ಆತ ಅದೇ ಮಹಿಳೆಯ ಫೋಟೊ ದಿಟ್ಟಿಸುತ್ತಿದ್ದಾನೆ ಎಂದು ಊಹಿಸುವುದು ಕಷ್ಟವಾಗಲಿಲ್ಲ. ಇನ್ನೂ ಆಶ್ಚರ್ಯದ ವಿಚಾರವೆಂದರೆ ಅಂದು ಆತನ ಹಿಂದಿನ ಸೀಟಿನಲ್ಲಿ ಕುಳಿತು ಗೇಲಿ ಮಾಡುವಂತೆ ನಕ್ಕಿದ್ದ ಇನ್ನೊಬ್ಬ ವ್ಯಕ್ತಿ ಇಂದು ಕೂಡ ಆತನ ಹಿಂದಿನ ಸೀಟಿನಲ್ಲೇ ಕೂತಿದ್ದಾನೆ.ಇಂದು ಆತನಿಗೆ ನಗು ತಾಳಲಾಗುತ್ತಿಲ್ಲ. ಯಾರಿಗೋ ಫೋನ್ ಮಾಡಿ ಇದೇ ವಿಷಯದ ಸಲುವಾಗಿ ಗಟ್ಟಿಯಾಗಿ ನಗುತ್ತ ಕನ್ನಡದಲ್ಲಿ ಎನೋ ಮಾತಾಡುತ್ತಿದ್ದಾನೆ. ಬಸ್ಸಿನಲ್ಲಿ ಕನ್ನಡ ಅರ್ಥವಾಗುವವರು ಯಾರು ಇರಲಿಕ್ಕಿಲ್ಲವೆಂದು ಅಷ್ಟೊಂದು ವಿಶ್ವಾಸ ಆತನಿಗೆ. ಇಂದು ಮಾತ್ರ ಆ ನಿಗೂಢ ವ್ಯಕ್ತಿ ಇಳಿದು ಹೋಗುವಾಗ ಹಿಂದಿನ ಸೀಟಿನಲ್ಲಿ ಕುಳಿತು ತನ್ನನ್ನು ಗೇಲಿ ಮಾಡುತ್ತಿದ್ದ ವ್ಯಕ್ತಿಯನ್ನು ಒಮ್ಮೆ ದುರುಗುಟ್ಟಿ ನೋಡಿ ಇಳಿದು ಹೋದ. ಬಹುಶಃ ಈತನ ಫೋನಿನಲ್ಲಿ ತನ್ನ ಬಗ್ಗೆ ಆಡಿಕೊಳ್ಳುತ್ತಿದ್ದದ್ದು ಆತನಿಗೆ ಅರ್ಥವಾಗಿರಬೇಕು. ಹಿಂದಿನ ಸೀಟಿನ ವ್ಯಕ್ತಿಯ ಮುಖ ಕ್ಷಣಕಾಲ ಪೆಚ್ಚಾಯಿತು. ಆದರೆ ಇಂದು ಮಾತ್ರ ಆ ಫೋಟೋದಲ್ಲಿರುವ ಮಹಿಳೆಯ ಬಗ್ಗೆ ಕುತೂಹಲ ತಡೆಯಲಾಗುತ್ತಿಲ್ಲ.ಆ ವ್ಯಕ್ತಿಯನ್ನು ಈ ಪರಿಯಾಗಿ ಸೆಳೆಯುವ ಯಾವ ಶಕ್ತಿ ಇರಬಹುದು ಆ ಮಹಿಳೆಗೆ. ಸುಮಾರು ಒಂದು ಗಂಟೆಯ ಕಾಲ ಅದು ಹೇಗೆ ತದೇಕ ಚಿತ್ತದಿಂದ ಆತ ಅದೇ ಚಿತ್ರವನ್ನು ನೋಡಲು ಸಾಧ್ಯ?  ಅಷ್ಟಕ್ಕೂ ಯಾರು ಆ ಮಹಿಳೆ? ಯಾರೆಂದು ಆಕೆಯನ್ನು ಹೇಗೆ ಹುಡುಕಲಿ? ಹೆಸರು ಕೂಡ ತನಗೆ ತಿಳಿದಿಲ್ಲ. ಆತನ ಬಳಿಯೇ ಕೇಳಬಹುದಿತ್ತು. ನಾಳೆಯ ನಂತರ ಆತ ಬಸ್ಸಿನಲ್ಲಿ ಸಿಗದೇ ಹೋದರೆ ಅದನ್ನು ತಿಳಿಯುವ ಯಾವ ಮಾರ್ಗವೂ ಉಳಿಯುವುದಿಲ್ಲ. ಅಂದು ಇಡೀ ದಿನ ಕೆಲಸದ ಮೇಲೆ ಏಕಾಗ್ರತೆ ತಪ್ಪಿತ್ತು. ಮನಸ್ಸಿನಲ್ಲಿ ಬರಿ ಅದೇ ಮಹಿಳೆಯ ಚಿತ್ರ ಓಡುತ್ತಿತ್ತು. ಸಂಜೆ ಮನೆಗೆ ಬಂದು ಊಟ, ತಿಂಡಿ ಎಲ್ಲ ಬಿಟ್ಟು ಅಂತರ್ಜಾಲದಲ್ಲಿ ಹುಡುಕುವ ಎಲ್ಲ ಪ್ರಯತ್ನವನ್ನೂ ಮಾಡಿದವನ ಮುಖದಲ್ಲಿ ಮಧ್ಯ ರಾತ್ರಿಯ ಹೊತ್ತಿಗೆ ಒಂದು ತರನಾದ ಸಮಾಧಾನ ತೋರಿತು. ಕಣ್ಣಿಗೆ ಹಾಗೇ ನಿದ್ರೆ ಹತ್ತಿತು.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಲೋ ಲೋಕೇಶ, ನೋಡೋ ಜನರಿಗೆ ಎಂಥೆಂಥ ಹುಚ್ಚು ಇರ್ತದೆ ಅಂತ. ಇಲ್ಲೊಬ್ಬ ಈ ಬಸ್ಸಿನಲ್ಲಿ ನಂಗೆ ಪ್ರತಿದಿನ ಸಿಗ್ತಾನೆ. ಅದೇನು ಕರ್ಮನೋ ಗೊತ್ತಿಲ್ಲ ನಂಗೆ ದಿನ ಅವನ ಹಿಂದೆಯೇ ಸೀಟು ಸಿಗ್ತದೆ. ಮೊದಲ ದಿನ ವಿಚಿತ್ರ ಅನ್ನಿಸ್ತು. ಈಗ ಒಂಥರಾ ಅವನ ಅವಸ್ಥೆ ನೋಡೋದಕ್ಕೆ ಮಜಾ ಬರ್ತದೆ. ದಿನಾ ಯಾರೋ ಒಂದು ಹೆಂಗಸಿನ ಫೊಟೊ ಇಟ್ಕೊಂಡು ನೋಡ್ತಾ ಇರ್ತದೆ ಕಣೊ ಈ ಪ್ರಾಣಿ. ಯಾರೋ ಗುರು ಮಾತೆ ಇರಬೇಕು. ಇಲ್ಲಿಯವಳ ಹಾಗಂತೂ ಕಾಣುತ್ತಿಲ್ಲ. ಹೇಳಿರಬಹುದು ಆಕೆ, ದಿನ ನನ್ನ ಚಿತ್ರ ನೋಡು, ನಿನ್ನ ದಿನವಿಡೀ ಉಲ್ಲಾಸಮಯವಾಗಿರುತ್ತದೆ ಅಂತ ಹಾ ಹಾ..ಇಲ್ಲಿ ಆಗಲೇ ಇರುವವರು ಸಾಲದಂತ ಈ ಉತ್ತರ ಭಾರತದ ಜನಗಳು ತಮ್ಮ ಕಡೆಯ ಇಂಥ ಟೋಪಿ ಗುರುಗಳನ್ನು ಕೂಡ ಇಲ್ಲಿಗೆ ಬಂದು ಪ್ರಸಿದ್ಧಿಗೊಳಿಸುತ್ತಾರೆ.ನೋಡು ಇದೇ ಕರ್ಮ ನಮ್ಮ ಕೆಲಸದ್ದು. ಹಣದೊಂದಿಗೆ ಮಾನಸಿಕ ಒತ್ತಡ ಕೂಡ ಉಚಿತವಾಗಿ ದೊರೆಯುತ್ತದೆ. ಒತ್ತಡ ಕರಗಿಸುವ ನೆಪದೊಂದಿಗೆ ಇಂಥ ಕಳ್ಳ ಗುರುಗಳು ಹುಟ್ಟಿಕೊಂಡು ನಾವು ಸಂಪಾದಿಸಿದ ಹಣ ಕರಗಿಸುತ್ತಾರೆ. ಇವತ್ತು ಇವನ ಹೊಸ ರೀತಿ ನೋಡಿ ಬಸ್ಸಿನಲ್ಲಿರುವ ಇನ್ನೊಬ್ಬ ಯಾರೋ ಪ್ರೇರೇಪಿತನಾಗಿ ಆಕೆಯ ಅನುಯಾಯಿಯಾಗುತ್ತಾನೆ. ಎಲ್ಲಿಯವೆರೆಗೆ ಜನರ ಬೌದ್ಧಿಕತೆ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಇಂಥ ಟೋಪಿ ಗುರುಗಳಿಗೆ ಅಪಾಯವಿಲ್ಲ. ಜನ ಹೀಗೆ ಬಣ್ಣ ಬಣ್ಣದ ಟೋಪಿ ಹಾಕಿಕೊಂಡೇ ಬದುಕುತ್ತಾರೆ.”  ಸಂದೇಹವೇ ಇಲ್ಲ. ಹಿಂದಿನ ಸೀಟಿನಲ್ಲಿ ಕೂತವ ಫೋನಿನಲ್ಲಿ ಮಾತನಾಡುತ್ತಿರುವುದು ತನ್ನ ಬಗ್ಗೆಯೇ. ಬಸ್ಸಿನಲ್ಲಿರುವ ಹೆಚ್ಚಿನವರಂತೆ ತನಗೆ ಕನ್ನಡ ಭಾಷೆ ಬರುವುದಿಲ್ಲವೆಂಬ ಆತ್ಮವಿಶ್ವಾಸ ಆತನಿಗೆ. ಮೊದಲೇ ನಿನ್ನೆ ಮಧ್ಯ ರಾತ್ರಿ ತನಕ ನಿದ್ರೆ ಬಿಟ್ಟುದರ ಪರಿಣಾಮವಾಗಿ ಸಣ್ಣಗೆ ತಲೆನೋವು ಬೇರೆ. ಅದರ ಮೇಲೆ ಈ ಹಿಂದಿನ ಸೀಟಿನವನು ತನ್ನೆದುರಿಗೆ ತನ್ನ ಬಗ್ಗೆಯೇ ಟೀಕೆ ಮಾಡುತ್ತ ಆಡಿಕೊಳ್ಳುತ್ತಿರುವುದು ಸಿಟ್ಟು ಕೆರಳುವಂತೆ ಮಾಡುತ್ತಿದೆ. ಎದ್ದು ಬೈದು ಬಿಡಲೇ ನಿನಗೂ ಇದಕ್ಕೂ ಸಂಬಂಧವಿಲ್ಲವೆಂದು? ಹಾಗೆ ಮಾಡಿದರೆ ಹೋಗುವುದು ತನ್ನ ಮರ್ಯಾದೆಯೇ. ಇತರರಿಗೆ ತಾನೇ ಅನಾಗರಿಕನತೆ ತೋರಬಹುದು. ಹೋಗಲಿ, ಹೇಗಿದ್ದರೂ ನನ್ನ ನಿಲ್ದಾಣ ಬಂದೆ ಬಿಟ್ಟಿತು. ಸೀಟಿನಿಂದ ಎದ್ದು ಆತನನ್ನು ಒಮ್ಮೆ ಸಿಟ್ಟಿನಿಂದ ಕೆಕ್ಕರಿಸಿ ನೋಡಿದೆ, ಆತನಿಗೆ ಅರಿವಾಗಲಿ ಅವನು ಇಷ್ಟು ಹೊತ್ತು ಮಾತಾಡಿದ್ದು ತನಗೆ ಅರ್ಥವಾಯಿತೆಂದು. ತಾನು ಕೆಕ್ಕರಿಸಿದ್ದು ನೋಡಿ ಆತನ ಮುಖ ಪೆಚ್ಚಾದದ್ದು ಸುಳ್ಳಲ್ಲ. ಇಷ್ಟೇ ಸಾಕು ಆತನಿಗೆ. ಆತನು ಇಷ್ಟು ಹೊತ್ತು ಮಾತಾಡಿ ತನ್ನನ್ನು ಹೀಯಾಳಿಸಿದ ಪ್ರತೀಕಾರವಾಗಿ ನನ್ನ ಒಂದು ದೃಷ್ಟಿ ಆತನ ಮೇಲೆ ಕೆಲಸ ಮಾಡಿದೆ ಎಂಬ ತೃಪ್ತಿಯಿಂದ ಬಸ್ಸಿನಿಂದ ಹೆಜ್ಜೆ ಹೊರಕ್ಕಿತ್ತು ಆಫೀಸಿನ ಕಡೆ ಮುಂದುವರೆಯತೊಡಗಿದೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
deja-vu-anxiety(ದೇಜಾ ವು (Déjà vu) ಎಂಬುದು ಫ್ರೆಂಚ್ ಭಾಷೆಯ ಒಂದು ಪದ. ಅದರ ಅರ್ಥ “ಮೊದಲೇ ನೋಡಿದ್ದು” ಎಂದು. ಈಗ ವರ್ತಮಾನದಲ್ಲಿ ನಡೆಯುತ್ತಿರುವ ಅಥವಾ ಈಗಷ್ಟೇ ಘಟಿಸಿದ ಒಂದು ಸನ್ನಿವೇಶವು ಮೊದಲೇ ಹಿಂದೊಮ್ಮೆ ನಡೆದಂತೆ ಅನುಭವವಾಗುವ ಒಂದು ಪ್ರಕ್ರಿಯೆಗೆ ದೇಜಾ ವು ಎನ್ನಲಾಗುವುದು)