ವಿರೂಪ
|ದೇವಸ್ಥಾನಗಳ ಗರ್ಭಗುಡಿಯ ಸುತ್ತಲಿನ ಪ್ರಾಂಗಣದಲ್ಲಿ ಹಾಕುವ ಫಲಕಗಳ ಮೇಲೆ, ಮಂತ್ರಗಳ ತುಣುಕುಗಳನ್ನೋ, ಧರ್ಮಗ್ರಂಥಗಳ ಸಾರಗಳನ್ನೋ, ಹಿತವಚನಗಳ ಉಲ್ಲೇಖಗಳನ್ನೋ ನಾವೆಲ್ಲಾ ಗಮನಿಸಿರುತ್ತೇವೆ. ಹಾಗೆ ಎಲ್ಲೋ ಒಂದು ನೋಡಿದ ಸಾಲು:
“ಬೆಂಕಿಗೆ ಬಿದ್ದ ಸೌದೆಯು, ಶಾಖದ ಉರಿಗೆ ತಾನೂ ಹೇಗೆ ಪವಿತ್ರ ಅಗ್ನಿಯ ರೂಪ ಪಡೆಯುವುದೋ ಹಾಗೆಯೇ ಧರ್ಮ, ನಿಷ್ಠೆ, ಭಕ್ತಿಯ ಮಾರ್ಗ ಹಿಡಿದ ಮಾನವನು ಕೂಡ ದೇವ ಸಮಾನನಾಗುತ್ತಾನೆ.”
ಮೇಲ್ನೋಟಕ್ಕೆ ಇಂಥ ರೂಪಕಗಳನ್ನು ನೋಡಿ ಮೆಚ್ಚಬಹುದು. ಅದರಲ್ಲಿ ಹೇಳಿದಂತೆಯೇ ವೇದ, ಪುರಾಣಗಳನ್ನು ಓದಿ, ನೇಮ, ಭಕ್ತಿಗಳನ್ನು ತಿಳಿದಿರುವ ಮಾನವನಿಗೆ, ಸ್ವಾಮೀಜಿಯ ಪಟ್ಟ ಕಟ್ಟಿ ದೇವರ ಸ್ಥಾನಕ್ಕೇರಿಸುವ ಪದ್ಧತಿ ಹುಟ್ಟಿಕೊಂಡಿರಬಹುದು. ಆದರೆ ಈ ವಾಕ್ಯದಲ್ಲಿರುವ ವೈರುಧ್ಯಗಳನ್ನು ಗುರುತಿಸುವುದು ಕೂಡ ಮುಖ್ಯ. ಸೌದೆಯು ಸ್ವಇಚ್ಚೆಯಿಂದಂತೂ ಬೆಂಕಿಗೆ ಬಿದ್ದಿರಲಾರದು. ಸುತ್ತಲಿನ ಮಂದಿ ಚಳಿ ಕಾಯಿಸಲೋಸುಗ ಸೌದಿಯನ್ನು ಬೆಂಕಿಗೆ ನೂಕಿರುತ್ತಾರೆ. ಬೆಂಕಿಯ ಶಾಖದ ಸುಖದಲ್ಲಿ ಇಂಥ ಹಿತವಚನಗಳು ಹೊಳೆದಿರುತ್ತವೆ.
ಮಠ ಸಂಸ್ಥಾನಗಳು ಮುಂದಿನ ಉತ್ತರಾಧಿಕಾರಿಯನ್ನು ಸಿದ್ಧಪಡಿಸಲು, ಆರಿಸಿದ ಒಬ್ಬ ಬಾಲಕನಿಗೆ ದೀಕ್ಷೆ ಕೊಡುವುದು ಸಾಮಾನ್ಯ. ಆ ಪೋರ ಸನ್ಯಾಸದ ದೀಕ್ಷೆಯನ್ನು ಸ್ವಇಚ್ಛೆಯಿಂದ ತೆಗೆದುಕೊಂಡಿರುತ್ತಾನೆಯೇ? ೬ ಅಥವಾ ೮ ವರ್ಷದ ಚೆಲ್ಲಾಟದ ಪ್ರಾಯದಲ್ಲೇ ಮಠ ಸೇರಿಕೊಂಡು ಮುಂದಿನ 80 ವರ್ಷಗಳ ತನಕ ನಿಭಾಯಿಸಬೇಕಿರುವ ಜವಾಬ್ದಾರಿ, ಕಠಿಣ ಕ್ರಮಗಳ ಬಗ್ಗೆ ಎಳಸು ಬಾಲಕನಿಗೆ ಎಷ್ಟು ಜ್ಞಾನವಿರುತ್ತದೆ? ಮಠಾಧಿಕಾರಿಗಳಿಗೆ, ಹೆತ್ತವರಿಗೆ, ಕುಟುಂಬಸ್ಥರಿಗೆ, ಸ್ವಾಮೀಜಿಗಳಿಗಂತೂ ಇವೆಲ್ಲವೂ ತಿಳಿದಿರುವ ವಿಚಾರಗಳೇ. ಹೆಣ್ಣನ್ನು, ಹಸುವನ್ನು ಸ್ವಾರ್ಥಕ್ಕಾಗಿ ಅಧಿಕೃತವಾಗಿ ದುರುಪಯೋಗಗೊಳಿಸಿಕೊಂಡು, ವಿಕೃತಿಯನ್ನು ಮುಚ್ಚುವ, ತಪ್ಪಿತಸ್ಥ ಭಾವನೆಯಿಂದ ಪರಾರಿಯಾಗುವ ಮಾರ್ಗವಾಗಿ, ದೇವಿಯಾಗಿ, ಕಾಮಧೇನುವಾಗಿ ಪೂಜಿಸುವ ಸಂಪ್ರದಾಯವೇನು ನಮಗೆ ಹೊಸದಲ್ಲ.
ಧರ್ಮ, ನಿಷ್ಠೆಯ ಬೆಂಕಿಗೆ ಬಿದ್ದ ಬಾಲಕನಲ್ಲಿ ದೈವತ್ವದ ಅಗ್ನಿಯನ್ನು ಕಾಣುವ ಅದೇ ಮಂದಿ, ಸೌದಿ ಸುಟ್ಟಾಗ ಉಳಿಯುವ ಬೂದಿಯನ್ನು, ಕಪ್ಪು ಮರದ ಕೊರಡನ್ನು ಬೇಕಂತಲೇ ನಿರ್ಲಕ್ಷಿಸಿರುತ್ತಾರೆ. ಅಪರಿಮಿತ ಸಾಧ್ಯತೆಗಳಿಂದ ತುಂಬಿದ್ದ ಬಾಲಕನ ಭವಿಷ್ಯವನ್ನು ಸ್ವಾಮೀಜಿಯ ಪಟ್ಟಕ್ಕೆ ಸೀಮಿತಗೊಳಿಸಿದ ಇದೇ ಮಂದಿ ಆತನನ್ನು ದೇವರ ಸ್ಥಾನಕ್ಕೆ ಏರಿಸಿರುತ್ತಾರೆ. ಉರಿದು ಇಂಗಾಲದ ಅವಶೇಷವಾಗಿ ಉಳಿದ ಸೌದಿ ಮತ್ತೆಂದೂ ತನ್ನ ಮೊದಲಿನ ರೂಪವನ್ನು ಪಡೆಯದು. ದೇವರಾಗಲು, ದೈವತ್ವ ಪಡೆಯಲು ಹೊರಟ ಸತ್ಯವ್ರತನಿಗೆ ಕಡೆಗೂ ಸಿಕ್ಕಿದ್ದು ತ್ರಿಶಂಕು ಸ್ವರ್ಗವೇ. ವಿಶ್ವಾಮಿತ್ರ ಹಾಗೂ ದೇವತೆಗಳ ಪ್ರತಿಷ್ಠೆಯ ನಡುವಿನ ಕಾಳಗದಲ್ಲಿ, ಆತ ಇತ್ತಲೂ ಇಲ್ಲ, ಅತ್ತಲೂ ಸಲ್ಲ.
ಭ್ರಮೆ, ಭ್ರಾಂತಿಯಲ್ಲಿ ಬೀಳುವುದು ಸುಲಭ, ಬೀಳಿಸುವವರು ಬಹಳ. ಬಿದ್ದ ಮೇಲೆ ಎದ್ದು ಬರುವುದು ಮಾತ್ರ ಅಸಾಧ್ಯ. ಯಾಕೆಂದರೆ Ralph Waldo Emerson ಹೇಳಿದಂತೆ
ಒಂದು ಹೊಸ ವಿಚಾರದಿಂದ ಹೊಸ ರೂಪ ಪಡೆಯುವ ಮನಸ್ಸು ಮತ್ತೆಂದೂ ಮೊದಲಿನ ಆಯಾಮಕ್ಕೆ ಬರಲೊಪ್ಪದು.
Excellent post. Even I can relate. Keep it up.
ಧನ್ಯವಾದಗಳು