Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ಪವಾಡಗಳು - ಬೀಣೆ ಚೀಲ । Kannada Article

ಪವಾಡಗಳು

ಮೊನ್ನೆ ಕನ್ನಡದ ಚಾರ್ಲಿ ಸಿನಿಮಾ ನೋಡಲು ಹೋಗಿದ್ದೆವು. ಪಕ್ಕದ ಸೀಟಿನಲ್ಲಿ ಒಬ್ಬ ಚಿಕ್ಕ ಹುಡುಗ ಕುಳಿತಿದ್ದ. ಚಿತ್ರದಲ್ಲಿ ನಾಯಿ ಹಿಮದ ರಾಶಿಯನ್ನು ಕಂಡು, ಅದರ ಮೇಲೆ ಕುಪ್ಪಳಿಸುವ ದೃಶ್ಯ ಬಂದ ಕೂಡಲೇ ಆತ ಅಪ್ಪನನ್ನುಕೇಳಿದ, “ಅಪ್ಪ, ಅದು ಫೇಕ್ ಸ್ನೋ ಅಲ್ವ?” ಅಂತ. ಅಪ್ಪನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ ಅನಿಸುತ್ತದೆ. ಸುಮ್ಮನೆ ಇದ್ದ. ಆ ಹುಡುಗನಿಗೆ ಹುಟ್ಟಿದ ಸಂದೇಹವು, ಆ ದೃಶ್ಯದಿಂದ ಹುಟ್ಟಬಹುದಾಗಿದ್ದ ಅಚ್ಚರಿಯನ್ನು ಅಲ್ಲೇ ತಡೆಹಿಡಿದಿತ್ತು. ಇದೊಂದು ಉದಾಹರಣೆಯಷ್ಟೇ. ಈಗಿನ ಮಕ್ಕಳು ಅಚ್ಚರಿ ಪಡುವುದನ್ನೇ ಮರೆತಿದ್ದಾರೆ. ದೊಡ್ಡವರ ಥರ ಅತಿಯಾದ ಮಾಹಿತಿಯ ಕೊಳಚೆ ಅವರ ತಲೆಯೊಳಗೂ ತುಂಬಿ, ಅಚ್ಚರಿಗಳನ್ನು ಹೊಡೆದೋಡಿಸಿದ್ದಾವೋ ಅಥವಾ ಅವರು ಅಚ್ಚರಿ ಪಡುವಂಥ ವಿಷಯಗಳು ನಮಗ್ಯಾರಿಗೂ ಅರ್ಥವಾಗದಂತೆ ನಿಗೂಢವಾಗುತ್ತಿದೆಯೋ?

ಮೊದಲೆಲ್ಲಾ ತಡರಾತ್ರಿ ಬಂದವರು, ಊರ ಹೊರಗಿನ ಹುಣಸೆ ಮರದ ಮೇಲೆ ದೆವ್ವದ ನೆರಳು ತೋರಿ, ಮರುದಿನ ಜ್ವರದಿಂದ ಹಾಸಿಗೆ ಹಿಡಿಯುತ್ತಿದ್ದರು. ಗ್ರಹಣದ ದಿನ ಮನೆಯಿಂದ ಹೊರಗೆ ಕಾಲಿಟ್ಟರೆ ಅನಾಹುತ ತಪ್ಪುತ್ತಿರಲಿಲ್ಲ. ನಾಗದರ್ಶನ ಪಾತ್ರಿಯ ಮೈ ಮೇಲೆ ಬರುತ್ತಿದ್ದ ನಾಗನ ದೈವಕ್ಕೆ ಹೆದರದವರ ಮನೆ ಸುತ್ತ ನಾಗರಹಾವು ಸುಳಿಯದೆ ಇರುತ್ತಿರಲಿಲ್ಲ. ಊರ ದೈವಗಳ ಬಗ್ಗೆ ಹೀನವಾಗಿ ಮಾತಾಡಿದವರ ಊಟದ ಪಾತ್ರೆಗೆ ಕಕ್ಕಸು ಬೀಳುತ್ತಿತ್ತು. ಕೈ ನೋಡಿ ಭೂತ, ಭವಿಷ್ಯ ಹೇಳಬಲ್ಲವರಿದ್ದರು. ಟೊಪ್ಪಿ ಒಳಗಿಂದ ಮೊಲ ತೆಗೆದು, ಪೆಟ್ಟಿಗೆಯೊಳಗಿನ ಸುಂದರ ಯುವತಿಯ ಹೊಟ್ಟೆ ಬಗೆದು ಗಾಬರಿ ಹುಟ್ಟಿಸುತ್ತಿದ್ದ ಜಾದೂಗಾರರಿದ್ದರು. ಶಬರಿಮಲೆಯಲ್ಲಿ ಮಕರಸಂಕ್ರಾಂತಿಯಂದು ಬೆಟ್ಟದಾಚೆ ಜ್ಯೋತಿ ತೋರಿ ಭಕ್ತರನ್ನು ಪುಳಕಿತಗೊಳಿಸುತ್ತಿತ್ತು. ಯಕ್ಷಗಾನದ ಆಟ ಮುಗಿಸಿ ಮನೆ ಮರಳುವ ದಾರಿಯಲ್ಲಿ ಸಿಗುತ್ತಿದ್ದ ಭೂತಗಳಿಗೇನು ಕಡಿಮೆಯೇ? ಇನ್ನೆಲ್ಲೋ ಹುಟ್ಟು ಕುರುಡ ಸಾಯಿ ಬಾಬಾ ಭಕ್ತನಿಗೆ ದೃಷ್ಟಿ ಬಂದಿತ್ತು. ನಾಟಿ ವೈದ್ಯ ಅರೆದು ಕೊಡುತ್ತಿದ್ದ ಯಾವುದೋ ಲೇಹ್ಯದಿಂದ ಎಂಥೆಂಥದೋ ಖಾಯಿಲೆಗಳು ಗುಣವಾಗುತ್ತಿದ್ದವು. ಪುಸ್ತಕದೊಳಗಿಟ್ಟ ನವಿಲುಗರಿ ಮರಿ ಹಾಕುತ್ತಿದ್ದವು. ದೂರದ ಊರಲ್ಲೆಲ್ಲೋ ಎಣ್ಣೆಯಿಲ್ಲದೆ ದೇವರ ದೀಪ ನಿರಂತರವಾಗಿ ಉರಿಯುತ್ತಿತ್ತು. ನಿಗೂಢ ಕಳ್ಳ ಚಂದ್ರನ್, ಕಾಲಲ್ಲಿ ಸ್ಪ್ರಿಂಗ್ ಧರಿಸಿ, ಕುಪ್ಪಳಿಸುತ್ತಲೇ ತಪ್ಪಿಸಿಕೊಳ್ಳುತ್ತಿದ್ದ.

ಕಾಲ ಬದಲಾಯಿತು. ಹುಣಸೆ ಮರದ ತೋಪಿನ ಸುತ್ತಮುತ್ತಲೆಲ್ಲ ಬೀದಿದೀಪಗಳು ಪ್ರಕಾಶಿಸಿದವು, ದೆವ್ವಗಳು ಕಾಲ್ಕಿತ್ತವು. ಗ್ರಹಣದ ದಿನ ಸೂರ್ಯ ಭೂಮಿಯ ಮಧ್ಯೆ ಬರುವ ಚಂದ್ರನನ್ನು, ಕಪ್ಪು ಗಾಜು ಧರಿಸಿಕೊಂಡು ಜನ ನೋಡಿ ಆನಂದಿಸಿದರು. ನಾಗ ದರ್ಶನ ಪಾತ್ರಿಯ ಗಮನ, ನೆರೆದಿದ್ದ ಮಂದಿಯ ಮಧ್ಯದಲ್ಲಿದ್ದ ಯುವತಿಯ ಮೇಲೆ ನೆಟ್ಟಿದ್ದು ಜನರೆಲ್ಲರೂ ಅರಿತರು. ಭೂತ ಕೋಲಗಳೆಲ್ಲ ನಮ್ಮ ಸಂಸ್ಕೃತಿಯನ್ನು ತೋರಿಸಿ ಮೆರೆಯುವ ಸಾಧನಗಳಷ್ಟಾಗಿಯೇ ಉಳಿದವು. ಪಾತ್ರಧಾರಿಯ ಅಬ್ಬರಕ್ಕೆ, ಕುಡಿದ ಕಳಪೆ ಮದ್ಯದ ನಶೆಯೇ ಕಾರಣವೆಂದು ಗೇಲಿ ಮಾಡಿದರು. ಕೈ ನೋಡಿ ಹೇಳುವ ಭವಿಷ್ಯ ಸುಳ್ಳೇ ಆಗತೊಡಗಿತು. ಯಾವನೋ ಒಬ್ಬ ಮುಖವಾಡ ಧರಿಸಿದ ಧೂರ್ತ, ಜಾದೂಗಾರನ ರಹಸ್ಯ ತಂತ್ರಗಳನ್ನೆಲ್ಲ ಟಿವಿ ಪರದೆಯ ಮೇಲೆ ಎಳೆ ಎಳೆಯಾಗಿ ಬಿಡಿಸಿಟ್ಟು ಮೆರೆದನು. ಶಬರಿಮಲೆಯ ಬೆಟ್ಟದಾಚೆ ನೆಲೆಸಿರುವ ಒಂದು ಬುಡಕಟ್ಟು ಜನಾಂಗ ಹಾಕುವ ಬೆಂಕಿಯ ಜ್ವಾಲೆಯೇ ಜ್ಯೋತಿಯಾಗಿ ತೋರುವುದೆಂದು ಜನರಿಗೆ ಅರಿವು ಮೂಡಿಸಲಾಯಿತು. ಅಂಧ ಸಾಯಿ ಬಾಬಾ ಭಕ್ತ, ದೇವಸ್ಥಾನದ ಜೊತೆ, ಕಣ್ಣಿನ ಆಸ್ಪತ್ರೆಗೆ ಕೂಡ ಭೇಟಿ ನೀಡುತ್ತಿದ್ದದ್ದು ತಡವಾಗಿ ತಿಳಿಯಿತು. ನಾಟಿ ವೈದ್ಯನನ್ನು ಅಲೋಪತಿ ನುಂಗಿತು. ನಿರಂತರವಾಗಿ ಉರಿಯುತ್ತಿದ್ದ ದೀಪಕ್ಕೆ ಗುಟ್ಟಾಗಿ ಎಣ್ಣೆ ಹಾಕುತ್ತಿದ್ದ ಮುದುಕಿಯ ಜೀವ ಹಾರಿತು, ದೀಪ ಆರಿತು. ಕಳ್ಳ ಚಂದ್ರನ್ನನ್ನು ಪೋಲೀಸರು ಸೆರೆಹಿಡಿದು ನೇಣಿಗೇರಿಸಿದರು. ಪವಾಡಗಳು ಜರುಗುವುದು ನಿಂತೇ ಹೋಯಿತು.

ನಾವು ಬೆಳೆಯುತ್ತಿದ್ದ ಕಾಲಕ್ಕೆಯೇ, ಹಳಬರು ಪವಾಡಗಳೆಂದು ನಂಬಿದ್ದಕ್ಕೆಲ್ಲದಕ್ಕೂ ಒಂದೊಂದಾಗಿ ವೈಜ್ಞಾನಿಕ ಹಿನ್ನೆಲೆ ಒದಗಿಸಿ ಅಚ್ಚರಿಗಳನ್ನು ಕೊಲ್ಲುವ ಪ್ರಕ್ರಿಯೆ ಆರಂಭವಾಗಿತ್ತು. ಇನ್ನು ನಾವೋ, ಜಗತ್ತಿನಲ್ಲಿ ನಡೆಯುವ ಪ್ರತಿಯೊಂದಕ್ಕೂ, ಅಲ್ಪ ಸ್ವಜ್ಞಾನದ ಮೂಲಕ, ಬೆರಳಂಚಿನಲ್ಲಿರುವ ಅಂತರ್ಜಾಲದಲ್ಲಿ ವೈಜ್ಞಾನಿಕ ಕಾರಣಗಳನ್ನು ಹುಡುಕಿ, ಪವಾಡಗಳನ್ನು ಬಗೆದು ಬಿಡಿಸಿ, ವಿಕಸಿಕರಿಗೆ ವಿವರಣೆ ನೀಡಿ ಸರ್ವಜ್ಞಾನಿಗಳಾದೆವು ಎಂಬ ಭ್ರಮೆಯಲ್ಲಿ ಮುಳುಗಿದೆವು. ಅಚ್ಚರಿಯನ್ನು ಕೊಂದೆವು. ಮತ್ತೆ ಅದನ್ನೇ ಹುಡುಕಿಕೊಂಡು ಊರೂರು ಅಲೆದೆವು. ಕಾಣದ ಕಡಲಿಗೆ ಹಂಬಲಿಸಿದೆವು.

2 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)