ಮಧ್ಯಾಹ್ನದ ಕನಸು

“ಒಂದು ನಿದ್ರೆ ವಿವೇಕವನ್ನು ಮರುಕಳಿಸುತ್ತದೆ. ಕತ್ತಲಿನ ಕೋಪ ಬೆಳಕಿನಲ್ಲಿ ತಿಳಿಯಾಗುತ್ತದೆ.”

  • ರಾಯಕೊಂಡ ಕಾದಂಬರಿ, ಕರಣಂ ಪವನ್ ಪ್ರಸಾದ್

ಕನ್ನಡದ ‘ತಿಥಿ’ ಚಲನಚಿತ್ರದ ನಂತರ ಮನಸ್ಸಿನಲ್ಲಿ ತೀವ್ರವಾಗಿ ಉಳಿದಂಥ ಮಲಯಾಳಂ ಭಾಷೆ ಚಿತ್ರ : Nanpakal Nerathu Mayakkam (ಮಧ್ಯಾಹ್ನದ ಕನಸಿನಂತೆ). ಹೆಸರು ಬಲು ಕ್ಲಿಷ್ಟಕರ. ಹಾಗೆಯೇ ಚಿತ್ರದ ಕಥೆಯ ಗ್ರಹಿಕೆಯು ಕೂಡ. ಬರಿ ಚಲನಚಿತ್ರವೆಂದರೆ ತಪ್ಪಾದೀತು. ಮತ್ತೆ ಮತ್ತೆ ನೆನಪಿಗೆ ಬಂದು, ಮನಸ್ಸನ್ನು ವಿಚಿತ್ರ ರೀತಿಯಲ್ಲಿ ಕಳೆದು ಹೋಗುವಂತೆ ಮಾಡುವ ಸುಂದರ ಕೃತಿ ಇದು.

ಆತ ಜೇಮ್ಸ್.
ಎಲ್ಲರ ಮೇಲೂ ಹದವಾದ ಸಿಡುಕು, ಸಂಶಯ ಇಟ್ಟುಕೊಂಡಿದ್ದರೂ, ತನ್ನ ಖರ್ಚಿನಲ್ಲೇ ಹತ್ತಿರದ ಸಂಬಂಧಿಗಳನ್ನು ವೆಲಂಕಣಿ ಯಾತ್ರೆಗೆ ಕರೆದುಕೊಂಡು ಬಂದಿದ್ದಾನೆ. ಬಂದವರಲ್ಲಿ ಹದಿಹರೆಯದ ಅವನ ಮಗನಿದ್ದಾನೆ, ಅವನ ಹೆಂಡತಿಯಿದ್ದಾಳೆ; ಮಧ್ಯವಯಸ್ಕ ಗಂಡಸರಿದ್ದಾರೆ, ಇಳಿವಯಸ್ಸಿನ ಹೆಂಗಸರಿದ್ದಾರೆ; ಚಿಕ್ಕ ಮಗುವಿನ ತಾಯಿ, ಖಿನ್ನ ಮನಸ್ಸಿನ ಯುವಕನೂ ಇದ್ದಾನೆ.

ಇನ್ನೇನು ಯಾತ್ರೆ ಮುಗಿದಿದೆ.
ತಮ್ಮ ಯಾಂತ್ರಿಕ ನಿತ್ಯಜೀವನಕ್ಕೆ ಮರಳುವ ಗುಂಗಿನಲ್ಲಿ ಎಲ್ಲರೂ ಮಿನಿ ಬಸ್ಸು ಹತ್ತಿ, ವಾಪಸ್ಸು ತಮ್ಮೂರಿನತ್ತ ಹೊರಟಿದ್ದಾರೆ. ಮಧ್ಯಾಹ್ನದ ಊಟ ಮುಗಿದಿದೆ; ಎಲ್ಲರ ಕಣ್ಣಲ್ಲೂ ನಿದ್ದೆಯ ಮಬ್ಬು. ಆಚೀಚೆ ಸರಿಯುವ ವಾಹನಗಳ ಸದ್ದು, ಕಟಕಟ ಎನ್ನುವ ಬಸ್ಸಿನ ಕಿಟಕಿಯ ಗಾಜಿನ ಶಬ್ದ… ಚಿಕ್ಕ ಗೂಡಿನಂತಿರುವ ಆ ಬಸ್ಸಿನಲ್ಲಿ, ನಿಧಾನವಾಗಿ ಎಲ್ಲರೂ ನಿದ್ದೆಗೆ ಜಾರಿದ್ದಾರೆ.

ಒಮ್ಮೆಯೇ ಜೇಮ್ಸ್ ಎಚ್ಚರಗೊಳ್ಳುತ್ತಾನೆ.
ಸುತ್ತಲೂ ವಿಶಾಲವಾದ ಜೋಳದ ಗದ್ದೆ. ಬಸ್ ನಿಲ್ಲುತ್ತದೆ. ಜೇಮ್ಸ್ ಸರಸರನೆ ಕೆಳಗಿಳಿದು, ಬಲಿತ ಫಸಲಿನ ಗದ್ದೆಯ ಮಧ್ಯೆ ನಡೆದು ಹೋಗಿ ಮಾಯವಾಗುತ್ತಾನೆ. ಹಾಗೆ ದೃಢ ವಿಶ್ವಾಸದಿಂದ ನಡೆದು, ನಡೆದು ಒಂದು ಅಜ್ಞಾತ ಹಳ್ಳಿಯನ್ನು ತಲುಪುತ್ತಾನೆ.

ಆ ಹಳ್ಳಿಯಲ್ಲೋ ಮಧ್ಯಾಹ್ನದ ಜೋಂಪು ಆಗಲೇ ಕವಿದಿದೆ. ಇಡೀ ಹಳ್ಳಿ ಸುಡು ಬಿಸಿಲಿನ ಅರ್ಧ ನಿದ್ರೆಯಲ್ಲಿ ಓಲಾಡುತ್ತಿದೆ. ಈತ ಯಾರೊಂದಿಗೂ ಮಾತನಾಡದೆ ಸರ ಸರನೆ ನಡೆದು , ಓಣಿ ಓಣಿಗಳನ್ನು ದಾಟಿ, ಆಗೋ ಆ ಮನೆಯ ಮುಂದೆ ನಿಂತು, ತಾನು ಇಲ್ಲಿಯವರೆಗೆ ಉಟ್ಟುಕೊಂಡಿದ್ದ ಪಂಚೆಯನ್ನು ಕಳಚಿಟ್ಟು, ಅಲ್ಲೇ ಒಣಗಿಸಲು ನೇತಾಡಿಸಿಟ್ಟ ಲುಂಗಿ ತೊಟ್ಟುಕೊಳ್ಳುತ್ತಾನೆ. ಮನೆಯನ್ನು ಪ್ರವೇಶಿಸುತ್ತಾನೆ. ಎಲ್ಲವೂ ಸ್ವಾಭಾವಿಕವೆಂಬಂತೆ.

ಮನೆಯೊಳಗೆ ಅರೆಹುಚ್ಚಿಯಂತಿರುವ ಕುರುಡು ಮುದುಕಿಯೊಬ್ಬಳು ಗಟ್ಟಿಯಾದ ಧ್ವನಿಯ ಟಿವಿ ನೋಡುತ್ತಿರುತ್ತಾಳೆ. ಆಕೆಯ ಗಂಡನೆಂಬವನಂತೆ ಕಾಣುವ ನಿದ್ದೆಯಲ್ಲಿದ್ದ ವ್ಯಕ್ತಿ, ಹಠಾತ್ ಬಂದವನನ್ನು, ಎಚ್ಚತ್ತು ಅವಾಕ್ಕಾಗಿ ನೋಡುತ್ತಾನೆ. ಮನೆಯ ಒಡತಿಯಂತಿರುವ, ಹತಾಶೆಯಲ್ಲಿ ಮುಳುಗೆದ್ದ ಹಾಗೆ ತೋರುವ ಮೂವತ್ತರ ಆಸುಪಾಸಿನ ಹೆಂಗಸು ಏನು ನಡೆಯುತ್ತಿದೆ ಎಂದು ಯೋಚಿಸುವಷ್ಟರಲ್ಲೇ, ಜೇಮ್ಸ್ ಆ ಮನೆಯ ಹಲವು ವರ್ಷಗಳ ಹಿಂದೆ ನಾಪತ್ತೆಯಾಗಿರುವ ಯಜಮಾನ ಸುಂದರಂನ ಪಾತ್ರವನ್ನು ವಹಿಸಿಕೊಂಡುಬಿಟ್ಟಿದ್ದಾನೆ.

ಅತ್ತ ಬಸ್ಸಿನಲ್ಲಿದ್ದ ಒಬ್ಬೊಬ್ಬರಿಗೆ ಎಚ್ಚರವಾಗುತ್ತಾ, ಜೇಮ್ಸ್ ಕಾಣಿಸದಿರುವುದು ಗೊತ್ತಾಗಿ, ಕಾದು ಕಾದು ಸಾಕಾಗಿ ಒಬ್ಬೊಬ್ಬರಾಗಿ ಹಳ್ಳಿಯನ್ನು ಪ್ರವೇಶಿಸುತ್ತಾರೆ. ಹಳ್ಳಿಯೊಳಗೆ ಸುಂದರಂ ರೂಪ ಪಡೆದಿರುವ ಜೇಮ್ಸನ್ನು ನೋಡಿ, ಆತನನ್ನು ತಡೆದು ವಿಚಾರಿಸಲು ಬೆನ್ನಟ್ಟಿ ಸುಸ್ತಾಗಿ, ಆತನ ಮನೆಯ ಮುಂದೆ ಜಮಾಯಿಸುತ್ತಾರೆ. ದಿನ ಮುಗಿಯುವ ಹೊತ್ತಿಗೆ ಇಡೀ ಊರೇ ಅಚ್ಚರಿಪಟ್ಟು ಮನೆಯ ಅಂಗಳದಲ್ಲಿ ನೆರೆದಿದೆ. ಸಂಜೆ ಮರಳಿದ ಸುಂದರಂ, ಏನಾಗುತ್ತಿದೆ ಎಂಬ ಅರಿವಿಲ್ಲದೆ, ತನ್ನನ್ನು ವಾಪಸು ಕರೆದೊಯ್ಯಲು ಬಸ್ಸಿನಲ್ಲಿ ಬಂದ ಜನರಿಗೆ ಹಿಗ್ಗಾಮುಗ್ಗ ಬೈದು, ತನ್ನ ಪಾಡಿಗೆ ತಾನು ಅದೇ ಮನೆಗೆ ಸೇರಿದವನಂತೆ ಮಲಗಿ ಬಿಡುತ್ತಾನೆ.

ಬಸ್ಸಿನವರೂ, ಊರಿನ ಹಿರಿಯರೂ ಸೇರಿ, ಕಾದು ನೋಡಿ ಬೆಳಗ್ಗಾದ ಮೇಲೆ ಆತನನ್ನು ಒಲಿಸಿ ಬಸ್ಸಿನಲ್ಲಿ ಕರೆದುಕೊಂಡು ಹೋಗುವ ತೀರ್ಮಾನ ಮಾಡುತ್ತಾರೆ.
ಸುಂದರಂನ ಹೆಂಡತಿಗೆ ಮಾತ್ರ ಸಂಧಿಗ್ಧ. ವರ್ಷಗಳ ಹಿಂದೆ ಬಿಟ್ಟು ಹೋದ ಗಂಡನಿಗೆ ಕಾದು ಕಾದು ಬರಡಾದ ಆಕೆಯ ಬದುಕಿಗೆ, ಈ ವಿಚಿತ್ರ ಸನ್ನಿವೇಶ ಮರಳುಗಾಡಿನ ಮರೀಚಿಕೆಯಂತೆ ತೋರುತ್ತದೆ. ಅದರ ಬೆನ್ನಟ್ಟಿ ಮುಂದೆ ಮುಂದೆ ಹೋಗಬೇಕೆ? ಅಥವಾ ಇನ್ನಷ್ಟು ಬಸವಳಿಯದಂತೆ ಇದ್ದಲ್ಲೇ ನಿಂತು ಬಿಡಬೇಕೆ ಅನ್ನುವ ಗೊಂದಲದಲ್ಲೇ ಆಕೆ ಮುಳುಗಿದ್ದಾಳೆ. ಈತ ದೈಹಿಕವಾಗಿ ತನ್ನ ಗಂಡನಂತೂ ಅಲ್ಲವೇ ಅಲ್ಲ. ಆದರೆ ಆತನ ಪ್ರತಿಯೊಂದು ಸ್ವಭಾವವನ್ನೂ ಈತ ತೋರುತ್ತಿದ್ದಾನೆ. ಒಪ್ಪಿಕೊಳ್ಳಬೇಕೆ, ತಿರಸ್ಕರಿಸಬೇಕೆ?
ಅತ್ತ ಜೇಮ್ಸ್ ಹೆಂಡತಿಯದ್ದು ಇನ್ನೊಂದು ಪಾಡು. ಮಧ್ಯಾಹ್ನದ ತನಕ ಯಾರ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದಳೋ, ಆ ಗಂಡ ಈಗ ಇಲ್ಲ. ಕಣ್ಣೆದುರಿಗೆ ಇದ್ದರೂ ಅದು ಆತನಲ್ಲ. ಆತ ಸತ್ತಿಲ್ಲ. ಆದರೆ ಬದುಕಿಯೂ ಇಲ್ಲ.
ಊರಿನವರಿಗೆ, ಬಸ್ಸಿನ ಸಂಬಂಧಿಕರಿಗೆಲ್ಲ ಸಂಶಯ, ದ್ವಂದ್ವ, ಆಶ್ಚರ್ಯ, ಆತಂಕ. ಈಗ ಮುಂದೇನು? ದಾರಿ ಕಾಣದೆ ರಾತ್ರಿ ಮಲಗುತ್ತಾರೆ, ಬೆಳಗ್ಗಿನ ಕಾತರದಲ್ಲಿ.

🔻

ಬೆಳಗ್ಗೆದ್ದು ನಿತ್ಯಕರ್ಮಗಳಲ್ಲಿ ತೊಡಗುವ ಸುಂದರಂನನ್ನು ಮನೆಯವರು ಅರೆಮನಸ್ಸಿನ ಗೊಂದಲದಲ್ಲೇ ಒಪ್ಪಿಕೊಂಡಂತೆ ತೋರಿಸಿದರೂ, ಊರು ಆತನನ್ನು ತಿರಸ್ಕರಿಸುತ್ತದೆ. ನಿನ್ನೆ ತನಕ ಖಾಲಿಯಾಗಿದ್ದ ಜಾಗದಲ್ಲಿ ಇಂದು ದೇವಸ್ಥಾನ ತಲೆಯೆತ್ತಿ ನಿಂತಿದೆ. ಅವನ ಪ್ರಕಾರ, ನಿನ್ನೆ ತನಕ ತನ್ನಿಂದ ಹಾಲು ಖರೀದಿಸುತ್ತಿದ್ದ ಜನರೆಲ್ಲಾ, ಇವತ್ತು ಬೆಳಗ್ಗಿನಿಂದ ಇನ್ನೊಬ್ಬನ ಮೇಲೆ ಅವಲಂಬಿತರಾಗಿದ್ದಾರೆ. ಮೊನ್ನೆಯವರೆಗೆ ಚೌರ ಮಾಡುತ್ತಿದ್ದ ಕ್ಷೌರಿಕ ಸತ್ತು ೩ ವರ್ಷವಾಗಿದೆ. ಮಧ್ಯಾಹ್ನದ ಹೊತ್ತಿಗೆ ಆತನ ತಲೆ ಗೊಂದಲದ ಗೂಡಾಗಿದೆ. ಕುರುಡು ಅಮ್ಮನ ಬಳಿಗೆ ಬಂದು ಮಲಗಿ ಅಳುತ್ತಾನೆ; ಬೇಸರದಲ್ಲೇ ಊಟ ಮಾಡಿ ಮಲಗುತ್ತಾನೆ. ಮಧ್ಯಾಹ್ನದ ನಿದ್ದೆ ಮತ್ತೆ ಎಲ್ಲರನ್ನೂ ಆವರಿಸುತ್ತದೆ.
ಎದ್ದವನೇ, ವಿಚಿತ್ರವೆಂಬಂತೆ, ಆತ ಜೇಮ್ಸ್ ಆಗಿ ಮತ್ತೆ ಬದಲಾಗಿದ್ದಾನೆ. ಲುಂಗಿಯನ್ನು ಕಳಚಿ ಪಂಚೆ ಉಟ್ಟು, ಎಲ್ಲರನ್ನು ಕರೆದುಕೊಂಡು ಬಸ್ ಏರಿ ಊರಿನತ್ತ ವಾಪಸ್ಸು ಹೊರಟಿದ್ದಾನೆ.

🔺


ಎಲ್ಲವೂ ಮುಗಿದ ಮೇಲೆ, ಕೊನೆಯ ದೃಶ್ಯದಲ್ಲಿ, ಸುಂದರಂನ ನಾಯಿ ಬಸ್ಸಿನ ಬೆನ್ನಟ್ಟಿ ಓಡುತ್ತದೆ.


ಇಲ್ಲಿಯ ತನಕ ನೋಡಿದ ಚಿತ್ರಗಳಲ್ಲಿ ಅತಿ ವಿಚಿತ್ರ ಕಥಾವಸ್ತು ಹೊಂದಿರುವ ಚಿತ್ರ ಇದು ಎಂದರೆ, ಅದರಲ್ಲಿ ಯಾವುದೇ ಅತಿಶಯವಿಲ್ಲ.
ಕಥೆ ತನ್ನದೇ ವೇಗದಲ್ಲಿ ಸಾಗುತ್ತದೆ ಎಲ್ಲಿಯೂ ಅವಸರವಿಲ್ಲದೆ. ಹಳ್ಳಿ ಮನೆಯ ಜಗುಲಿಯಲ್ಲಿ ಉಂಡು ಮಲಗಿದವನಿಗೆ ಮಧ್ಯಾಹ್ನದ ನಿದ್ರೆಯಲ್ಲಿ ಬಂದ ಕನಸಿನಂತೆ.

ಭಾರತೀಯ ಸಿನಿಮಾರಂಗದಲ್ಲಿ ಇಂಥ slow-burning ಚಿತ್ರಗಳು ಬಂದಿರುವುದು ಅಪರೂಪ. ಪ್ರಯತ್ನಗಳೇ ನಡೆದಿಲ್ಲವೆಂದಲ್ಲ; ಆದರೆ ಗುರಿ ಸಾಧಿಸಿದವುಗಳು ಅತಿ ವಿರಳ. ಇಲ್ಲಿ ಪ್ರೇಕ್ಷಕ ಬೆಳಗ್ಗೆದ್ದು ಲಾಡ್ಜಿನ ಹೊರವರಾಂಡದಲ್ಲಿ ಬೇಗ ಹೊರಟು ಕುಳಿತ ಸಂಬಂಧಿಯಾಗುತ್ತಾನೆ; ವಾಪಸಾಗುವ ಮೊದಲು ವೆಲಂಕಣಿ ಬೀದಿಯಲ್ಲಿ ಕೆಲ ವಸ್ತುಗಳನ್ನು ಮನೆಯವರಿಗೆಂದು ಖರೀದಿಸ ಹೋಗುವ ಪ್ರಯಾಣಿಕನಾಗುತ್ತಾನೆ; ಬಸ್ಸಿನಲ್ಲಿ ಜೇಮ್ಸ್ ವಿಶ್ವಾಸಕ್ಕೆಂದು ಬಂದ ಸಂಬಂಧಿಯಾಗುತ್ತಾನೆ. ಕಡೆಗೆ, ಖುದ್ದಾಗಿ ಸುಂದರಂ ರೂಪ ತಾಳಿದ ಜೇಮ್ಸ್ ಆಗುತ್ತಾನೆ; ನಿರಾಶೆಯಲ್ಲೂ ಬರಿದೆ ಆಸೆ ಕಂಡ ಸುಂದರಂನ ಹೆಂಡತಿಯಾಗುತ್ತಾನೆ; ಅಚಾನಕ್ಕಾಗಿ ಬಂದೊದಗಿದ ಸನ್ನಿವೇಶದಿಂದ ದಿಕ್ಕೆಟ್ಟ ಜೇಮ್ಸ್ ಹೆಂಡತಿಯಾಗುತ್ತಾನೆ. ಚಿತ್ರದ ಪ್ರತಿಯೊಂದು ಸನ್ನಿವೇಶದ ಭಾಗವಾಗುತ್ತಾನೆ. ನಮ್ಮಲ್ಲಿ ಎಷ್ಟು ನಿರ್ದೇಶಕರಿಗೆ ಹೀಗೆ ಕಥೆಯನ್ನು ಹೆಣೆಯಲು, ಅದನ್ನು ಅಷ್ಟೇ ನಿಖರವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯ?

ಈ ಕೃತಿಯ ಚಿತ್ರೀಕರಣವೂ ಚಿತ್ರದಷ್ಟೇ ವಿಭಿನ್ನ. ಹೆಚ್ಚಿನ ಫ್ರೇಮ್‌ಗಳಲ್ಲಿ ಕ್ಯಾಮೆರಾ ಚಲಿಸುವುದಿಲ್ಲ. ಇಲ್ಲಿ ಯಾವುದೇ ಒಂದು ಪಾತ್ರ ಮುಖ್ಯವಲ್ಲ; ಇಡೀ ಪರಿಸರವೇ ಮುಖ್ಯ. ಅದೇ ಕಾರಣಕ್ಕಾಗಿ ಚಿತ್ರದ ಹೆಚ್ಚಿನ ಫ್ರೇಮ್‌ಗಳು ವಿಶಾಲವಾಗಿವೆ. ನಾಯಕನೇ ಅಲ್ಲಿನ ಕೇಂದ್ರವಲ್ಲ. ಅವನು ಬರಿ ಒಂದು ಅಂಶವಷ್ಟೇ.


ಒಂದು ಸಂದರ್ಶನದಲ್ಲಿ ಕನ್ನಡದ ಮೇಧಾವಿ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಬಹಳ ಸುಂದರವಾಗಿ ಹೇಳುತ್ತಾರೆ: ಚಿತ್ರ ನೋಡುವುದು ಕೇವಲ ಒಂದು entertainment process ಆಗಬಾರದು; ಅದು ಒಂದು enlightenment ಆಗಬೇಕು ಎಂದು.
ಚಲನಚಿತ್ರದ ಮೂಲಕವೂ ಕೂಡ ಜ್ಞಾನೋದಯ ಸಾಧ್ಯವೆಂಬುದನ್ನು ಈ ಚಿತ್ರ ತೋರಿಸಿಕೊಡುತ್ತದೆ.

ನಮ್ಮ ಸಾಮಾನ್ಯ ಬದುಕಿನಲ್ಲಿ ಎಲ್ಲ ತರಹದ ಬದುಕುಗಳನ್ನು ಬದುಕುವುದು ಅಸಾಧ್ಯ. ಕಥೆ, ಪುಸ್ತಕಗಳು ಅಂಥ ಒಂದು ಪ್ರಯತ್ನವನ್ನು ಸಮರ್ಥವಾಗಿ ಮಾಡುತ್ತವೆ. ಓದುಗ ಕಥೆಗೆ ಅನುಸಾರವಾಗಿ ತನ್ನದೇ ಒಂದು ಕಲ್ಪನೆಯ ಲೋಕವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಆತ ಕಟ್ಟಿದ ಲೋಕ ಇನ್ನೊಬ್ಬ ಓದುಗ ಕಟ್ಟಿರುವ ಲೋಕಕ್ಕಿಂತ ಭಿನ್ನವಾಗಿರುತ್ತದೆ. ಆದರೂ ಲೇಖಕ ಹೇಳ ಹೊರಟಿರುವ ಕಥೆಯ ಲೋಕವನ್ನು ತನ್ನದೇ ದೃಷ್ಟಿಕೋನದಲ್ಲಿ ಬದುಕುವ ಪ್ರಯತ್ನ ಅಲ್ಲಿ ನಡೆಯುತ್ತದೆ. ಓದುಗ ತನ್ನೊಳಗಿನ ವೈಚಾರಿಕ ಪಕ್ಷಪಾತ, ಒಲವುಗಳಿಂದ ಹೊರಬಂದು, ಹೊಸದೊಂದು ಪ್ರಪಂಚವನ್ನು ಕಥೆಯ ಮೂಲಕ ನೋಡಲು ಸಾಧ್ಯವಾದರೆ, ಅದನ್ನು ಸಾಧ್ಯಪಡಿಸಿದ ಲೇಖಕನ ಪ್ರಯತ್ನ ಸಫಲವಾದಂತೇ.

ಮಹಾಕವಿಯಾದ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯನ್ನು ಓದಿದಾಗ, ಅಲ್ಪಸ್ವಲ್ಪ ಮಲೆನಾಡು ತಿರುಗಾಡಿರುವ ಓದುಗನಿಗೂ ಕಾಡಿನ ಒಂದು ಹೊಸ ಚಿತ್ರಣ ಕಣ್ಣಿಗೆ ಕಟ್ಟಿದಂತಾಗುತ್ತದೆ. ಕಥೆಯಲ್ಲಿ ಬರುವ ಪರಿಸರದ, ಪಾತ್ರಗಳ ನಿರೂಪಣೆಯ ಮೂಲಕ ಹೊಸದೊಂದು ಜೀವನ ಶೈಲಿಯ, ಹೊಸ ಪ್ರಪಂಚದ ಕಲ್ಪನೆ ಓದುಗನಲ್ಲಿ ಗಾಢವಾಗಿ ನೆಲೆಸುತ್ತದೆ.

ಚಿತ್ರಗಳ ಉದ್ದೇಶವೂ ಅದೇ ಆಗಬೇಕು. ನಮಗೆ ಗೊತ್ತಿಲ್ಲದ ಹೊಸದೊಂದು ಪರಿಸರವನ್ನು, ಜನಜೀವನವನ್ನು, ಚಿಂತನೆಗಳನ್ನು ನೋಡುಗನಿಗೆ ಪರಿಚಯಿಸಬೇಕು. ಆತನನ್ನು ಚಿಂತನೆಗೆ ಹಚ್ಚಬೇಕು. ಚಿತ್ರ ನೋಡಿದ ಬಹುದಿನಗಳ ಬಳಿಕವೂ ಪ್ರೇಕ್ಷಕ ಅದನ್ನು ಮೆಲುಕು ಹಾಕುತ್ತಾ, ಚಿತ್ರದ ಜೊತೆಗೆ ತನ್ನನ್ನೂ ವಿಮರ್ಶೆಗೆ ಹಚ್ಚಿಕೊಳ್ಳುವಂತೆ ಮಾಡಬೇಕು.


ಈ ಚಿತ್ರವನ್ನು ಮೊದಲ ಬಾರಿಗೆ ನೋಡುವ ವೀಕ್ಷಕನಿಗೆ, ಸುಂದರಂನ ಆತ್ಮ ಜೇಮ್ಸ್ ಒಳಗೆ ಹೊಕ್ಕು ಮಾಡಿದ ಕಿತಾಪತಿಯೆಂದೇ ಭಾಸವಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ಚಾಲಾಕಿಯಾಗಿ, ಆ ವಾದವನ್ನು ನಿಧಾನವಾಗಿ ಅಲ್ಲಗಳೆಯುವಂತೆ, ಸಣ್ಣ ಸಣ್ಣ ಸುಳಿವುಗಳನ್ನು ಚಿತ್ರದುದ್ದಕ್ಕೂ ನಿರ್ದೇಶಕ ಅಡಕಿಸಿರುವುದೇ ಚಿತ್ರದ ಮತ್ತೊಂದು ವಿಶೇಷ. ಅವುಗಳನ್ನೆಲ್ಲ ಇಲ್ಲಿ ಬಯಲುಪಡಿಸಿದರೆ, ಚಿತ್ರವನ್ನು ನೋಡಿ ಕಥೆಯ ಸಂಕೀರ್ಣತೆಯನ್ನು ಸ್ವತಃ ಬೇಧಿಸಿದ ಆನಂದವೇ ಕಳೆದುಹೋಗುತ್ತದೆ.

ಕಥೆಯಾಗಲಿ, ಕವನವಾಗಲಿ, ಅಥವಾ ಚಲನಚಿತ್ರವಾಗಲಿ, ಇನ್ನೊಬ್ಬರಿಂದ ಅರ್ಥ ತಿಳಿದುಕೊಂಡು, ಯಾವುದೋ ಪೂರ್ವಾಗ್ರಹದೊಂದಿಗೆ ಅದನ್ನು ಗ್ರಹಿಸುವ ಪ್ರಯತ್ನ ಮಾಡಿದಾಗ, ಆ ಕೃತಿ ತೋರಿಸಬಹುದಾಗಿದ್ದ ಅಸಂಖ್ಯ ಸಾಧ್ಯತೆಗಳನ್ನು ನಾವೇ ಹೊಸಕಿ ಹಾಕಿಕೊಂಡಂತಾಗುತ್ತದೆ. ಓದುಗನಿಗಾಗಲಿ, ವೀಕ್ಷಕನಿಗಾಗಲಿ, ಬೆಳ್ಳಿಯ ಚಮಚದಲ್ಲಿ ಸತ್ವವನ್ನು ಅರೆದು ಕುಡಿಸುವ ಬದಲು, ಹೀಗೆ ಅಪರಿಮಿತ ಸಾಧ್ಯತೆಗಳನ್ನು, ವಿಭಿನ್ನ ದಾರಿಗಳನ್ನು ತೋರಿಸುವುದೇ ಒಂದು ಅತ್ಯುತ್ತಮ ಕೃತಿಯ ಲಕ್ಷಣ.

Nanpakal Nerathu Mayakkam (ಮಧ್ಯಾಹ್ನದ ಕನಸಿನಂತೆ) ಚಿತ್ರ ಈ ದೃಷ್ಟಿಯಲ್ಲಿ ಸಂಪೂರ್ಣವಾಗಿ ತನ್ನ ಗುರಿಯನ್ನು ಸಾಧಿಸುತ್ತದೆ.

Add a Comment

Your email address will not be published. Required fields are marked *

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)