ಆಯ್ಕೆ – ಸ್ವಾತಂತ್ರ್ಯ
|ದೂರದ ಮರಳುಗಾಡಿನಲ್ಲೊಂದು ಹಳ್ಳಿ. ಹಳ್ಳಿಯಲ್ಲೊಂದು ಚಿಕ್ಕದಾದ ಚೊಕ್ಕ ಸಂಸಾರ. ಯಜಮಾನ, ಆತನ ಹೆಂಡತಿ, ೩ ಮಕ್ಕಳು. ಮೂವರೂ ಹುಡುಗ ಮಕ್ಕಳು. ಚಿಕ್ಕ ಮಗು ಇನ್ನು ಬರಿ ೪ ವರ್ಷದ ಮುದ್ದು ಹುಡುಗ. ಅಪ್ಪನಿಗೆ ಈ ಮಗುವಿನ ಮೇಲೆ ಯಾಕೋ ಅತಿಯಾದ ಪ್ರೀತಿ. ಹಳ್ಳಿಗೆ ಅಂಟಿದೆ ಒಂದು ಶಾಪ. ಆಗಾಗ ಯಾವುದೋ ಕೆಟ್ಟ ದಿನದಂದು ಅದೇ ಹಳ್ಳಿಯ ದಾರಿಯಿಂದಾಗಿ ಸಾಗುವ ರಾಕ್ಷಸ. ರಾಕ್ಷಸ ಬಂದಾಗಲೆಲ್ಲ ಆತ ಬಾಗಿಲು ತಟ್ಟಿದ ಮನೆ ಯಜಮಾನ ಮನೆಯಲ್ಲಿರುವ ಒಂದು ಮಗುವನ್ನು ಆತನ ವಶ ಕೊಡಬೇಕು. ಕೊಡದೆ ಹೋದಲ್ಲಿ, ಎಲ್ಲ ಮಕ್ಕಳನ್ನು ಕೊಂಡಯ್ಯುವ ರಾಕ್ಷಸ ಆತ. ಇಂದು ಇದೇ ಮನೆ ಬಾಗಿಲು ತಟ್ಟುತ್ತಿದ್ದಾನೆ. ಚಿಕ್ಕ ಮಗನನ್ನು ಬಿಟ್ಟರೆ ಉಳಿದಿಬ್ಬ ಮಕ್ಕಳು ಕೂಡ ದೂರದ ಊರಿಗೆ ಕೆಲಸಕ್ಕೆ ಹೋಗಿದ್ದಾರೆ. ಈಗ ಈ ಮಗನನ್ನ ರಾಕ್ಷಸನ ವಶ ಮಾಡದೇ ಇದ್ದಲ್ಲಿ ಉಳಿದಿಬ್ಬರನ್ನು ಕೂಡ ಕಳೆದುಕೊಳ್ಳುವ ಭಯ ಆತನಿಗೆ. ಭಾರವಾದ ಹೃದಯದಿಂದ ಮಗುವನ್ನು ರಾಕ್ಷಸನ ಕೈಗೆ ಇಡುತ್ತಾನೆ ಯಜಮಾನ. ರಾಕ್ಷಸ ದೂರದ ಬೆಟ್ಟದಲ್ಲಿರುವ ತನ್ನ ವಾಸ ಸ್ಥಳಕ್ಕೆ ಮರಳುತ್ತಾನೆ ಮಗುವಿನ ಜೊತೆ. ಹಳ್ಳಿ ನಿರಾಳ.
ಅಪ್ಪನಿಗೆ ನಿದ್ರೆ ದೂರ ಆಗಿದೆ ಈಗ. ಹಗಲು ಇರುಳು ಮಗನದ್ದೇ ನೆನಪು. ತಾನು ಮಾಡಿದ್ದು ಸರಿಯೇ ತಪ್ಪೇ ಎಂದು ತನ್ನೊಳಗೆ ವಿಮರ್ಶಿಸುತ್ತಾ , ಮರುಗುತ್ತಾ ಕಾಲ ಕಳೆಯುತ್ತಾನೆ. ಊರಿನ ಜನ ಆತನಿಗೆ ಹುಚ್ಚು ಎಂದು ಆಡಿಕೊಳ್ಳುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಆತ ಬೆಟ್ಟದೆಡೆ ಹೊರಟು ಬಿಡುತ್ತಾನೆ, ತಾನಾಗಿ ಬಲಿ ಕೊಟ್ಟ ಮಗುವಿನ ಹುಡುಕಾಟದಲ್ಲಿ. ಮನಸ್ಸಿನ ಮೂಲೆಯಲ್ಲಿ ಚಿಕ್ಕ ಆಸೆ, ತನ್ನ ಮಗ ಬದುಕಿರಬಹುದೆಂದು. ಊರವರು ಮತ್ತೆ ನಗುತ್ತಾರೆ. ಹುಚ್ಚುತನದ ಪರಮಾವಧಿ ಇದು ಎಂದು. ಬೆಟ್ಟದ ಕಡೆ ಹೋಗುವ ಪ್ರಯತ್ನ ಯಾರೂ ಮಾಡಿಲ್ಲ. ಹೋದವರು ವಾಪಸು ಬಂದಿಲ್ಲ ಎಂದು ಹಳೆ ಕಾಲದಿಂದ ಕೇಳಿ ಬಂದ ಭಯ.
ಹಗಲು ರಾತ್ರಿ, ಚಳಿ ಬಿಸಿಲು ಲೆಕ್ಕಿಸದೆ ನಡೆದ ತಂದೆಗೆ ಕಡೆಯಲ್ಲಿ, ಬೆಟ್ಟದ ತುದಿಯಲ್ಲಿ ದೊಡ್ಡದಾದ ಬಾಗಿಲು ತೋರುತ್ತದೆ. ಬಾಗಿಲು ಬಡಿದವನಿಗೆ ಕೇಳುವುದು ಅದೇ ರಾಕ್ಷಸನ ಧ್ವನಿ. ಅಂದು ಆತ ತನ್ನ ಮನೆ ಬಾಗಿಲು ಬಡಿದದ್ದು, ಇಂದು ತಾನು ಆತನ ಕೋಟೆ ಬಾಗಿಲು ಬಡಿಯುತ್ತ ಇದ್ದೇನೆ. ವಿಕಾರವಾದ ಧ್ವನಿಯಲ್ಲಿ ರಾಕ್ಷಸ ಆರ್ಭಟಿಸುತ್ತಾನೆ ಯಾರದು ಎಂದು. ತಂದೆ ನೆನಪಿಸುತ್ತಾನೆ ತಾನು ಯಾರೆಂದು. ರಾಕ್ಷಸ ಕರೆದೊಯ್ದ ತನ್ನ ಪ್ರೀತಿಯ ಮಗನ್ನನ್ನು ತನಗೆ ಮರಳಿ ಒಪ್ಪಿಸು ಅಂದು ಆಜ್ಞಾಪಿಸುತ್ತಾನೆ. ರಾಕ್ಷಸನದ್ದು ಅದೇ ವಿತಂಡ ನಗು. ಪರಿ ಪರಿಯಾಗಿ ಬೇಡುತ್ತಾನೆ ತಂದೆ. ಹಗಲು ರಾತ್ರಿ ಕೋಟೆ ಬಾಗಿಲಿನಲ್ಲೇ ಕಳೆಯುತ್ತಾನೆ. ಕೊನೆಗೊಂದು ದಿನ ಕೋಟೆ ಬಾಗಿಲು ತೆರೆಯುತ್ತದೆ. ರಾಕ್ಷಸನ ಕಾಲುಗಳು ತೋರುತ್ತವೆ. ಈ ಬಾರಿ ತಂದೆ ತಲೆಯೆತ್ತಿ ರಾಕ್ಷಸನ ಮುಖ ನೋಡುವ ಪ್ರಯತ್ನ ಮಾಡುತ್ತಾನೆ. ಅದೆಂಥ ಅವರ್ಣನೀಯ ಶಾಂತ ಕಳೆ ರಾಕ್ಷಸನ ಮುಖದಲ್ಲಿ. ಗೊಂದಲದಲ್ಲಿ ಬೀಳುವ ಸರದಿ ತಂದೆಯದ್ದು. ರಾಕ್ಷಸನೇ ಮಾತು ಮುಂದುವರೆಸುತ್ತಾನೆ.
“ಇಲ್ಲಿಯ ದಿನದವರೆಗೆ ಮಗನಿಗೆಂದು ನನ್ನ ಕೋಟೆಯ ಬಾಗಿಲು ಬಡಿಯುವ ಪ್ರಯತ್ನ ಮಾಡಿದ ಏಕೈಕ ಗಂಡಸು ನೀನೆ. ನಿನ್ನ ಧೈರ್ಯಕ್ಕೆ ಮೆಚ್ಚಿದೆ. ನಿನ್ನ ಮಗನನ್ನು ನಿನಗೆ ಹಿಂದಿರುಗಿಸುವೆ. ಆದರೆ ಅದರ ಮೊದಲು ನಿನಗೆ ನನ್ನ ಕೋಟೆಯ ಒಳಗಿನ ಚಿತ್ರಣ ತೋರಿಸಬೇಕು. ಬಾ ಜೊತೆಗೆ.”
ರಾಕ್ಷಸನ ಹಿಂಬಾಲಿಸಿದ ತಂದೆಗೆ ಭಾರಿ ಆಶ್ಚರ್ಯ ಕಾದಿದೆ. ಕೋಟೆಯ ಒಳಗೊಂದು ಸುಂದರವಾದ ಫಲಭರಿತ ಹಸಿರು ತೋಟ. ತೋಟದ ತುಂಬಾ ಹೊಸ ಶುಭ್ರ ಬಟ್ಟೆ ತೊಟ್ಟು ಆಟವಾಡುತ್ತಿರುವ ಮಕ್ಕಳು. ಎಲ್ಲ ಮಕ್ಕಳ ಮುಖದಲ್ಲೂ ಚಿಮ್ಮುತ್ತಿರುವ ಸಂತೋಷ. ಅಗೋ ಅಲ್ಲಿ ಅದು ಯಾರು ತನ್ನ ಮಗನಂತೆ ತೋರುತ್ತಿರುವುದು? ಅವನೇ ಅಲ್ಲವೇ. ಈ ಸಂತಸ ಅವನ ಮುಖದಲ್ಲಿ ಮೊದಲು ಯಾವತ್ತು ನೋಡದೆ ಇರುವುದರಿಂದ ಗುರುತು ಹಿಡಿಯುವುದು ಕೂಡ ಕಷ್ಟ ಆಗುತ್ತಿದೆ. ಹಾಗಾದರೆ ತಾನು ಮಾತ್ರ ಆತನ ನೆನಪಲ್ಲೇ ದಿನ ಕಳೆದೆನೇ? ಮನೆ ಮಂದಿಯನ್ನೆಲ್ಲ ತೊರೆದು ಬಂದ ದುಃಖ ಸ್ವಲ್ಪ ಕೂಡ ಕಾಡುತ್ತಿಲ್ಲವೇ ನನ್ನ ಮಗನಿಗೆ? ತಾನು ಈಗ ಖುಷಿ ಪಡಲೇ ಅಥವಾ ದುಃಖ ಪಡಲೇ ಎಂದು ಕೂಡ ತಿಳಿಯದ ಸ್ಥಿತಿ ತಂದೆಯದ್ದು.
ಪರಿಸ್ಥಿತಿ ಅರಿತವನಂತೆ ರಾಕ್ಷಸನೇ ಮಾತು ಮುಂದುವರೆಸುತ್ತಾನೆ. ” ಈ ಎಲ್ಲ ಮಕ್ಕಳು ನಿನ್ನ ಹಳ್ಳಿಯವರೇ. ಆದರೆ ಅವರಿಗೆ ತಮ್ಮ ಹಳೆಯ ನೆನಪುಗಳು ಯಾವುದೂ ಇಲ್ಲದಂತೆ ನಾನು ಮೋಡಿ ಮಾಡಿ ಮರೆಸಿದ್ದೇನೆ. ಅಗೋ ಅಲ್ಲಿ ನಿನ್ನ ಮಗ.ಈಗ ಆತ ನಿನ್ನ ಗುರುತಿಸಲಾರ. ಆದರೆ ನೀನು ಕರೆದುಕೊಂಡು ಹೋಗಲು ಬಂದಿರುವುದರಿಂದ ಆತನ ನೆನಪುಗಳನ್ನು ನಾನು ಮರುಕಳಿಸಬಲ್ಲೆ. ಆದರೆ ಅದರ ಮೊದಲು ನೀನು ಯೋಚಿಸು. ಇಲ್ಲಿನ ವೈಭವ ನೋಡಿದ ಮೇಲೆ ಕೂಡ ನಿನಗೆ ನಿನ್ನ ಮಗನನ್ನ ವಾಪಸು ಕರೆದುಕೊಂಡು ಹೋಗ ಬೇಕೆನಿಸುತ್ತಿದೆಯೆ? ಇಷ್ಟೊಂದು ಸುಖ ನಿನ್ನ ಮಗನಿಗೆ ನೀನು ಕೊಡಬಲ್ಲೆ ಅಂತ ನಿನಗೆ ಅನ್ನಿಸುತ್ತಿದೆಯೇ? ನಿನ್ನ ಮರಳುಗಾಡಿನ ಹಳ್ಳಿಯಲ್ಲಿ ಹಸಿರು ಬೆಳೆಯಬಲ್ಲೆಯ ನೀನು? ಯೋಚಿಸು.”
ತಂದೆ ಅತಿ ಗೊಂದಲಕ್ಕೆ ಒಳಗಾಗುತ್ತಾನೆ. ರಾಕ್ಷಸ ಹೇಳುತ್ತಿರುವ ಮಾತಿನಲ್ಲಿ ಸತ್ಯವಿದೆ. ತಾನು ತನ್ನ ಮಗನಿಗೆ ಯಾವತ್ತು ಇಷ್ಟೊಂದು ಸುಖ ಸಂಪತ್ತು ನೀಡಲು ಸಾಧ್ಯವಿಲ್ಲ.ತನ್ನ ಸ್ವಾರ್ಥಕ್ಕಾಗಿ ಅನಾವಶ್ಯಕವಾಗಿ ಮಗನ ಸುಖಕ್ಕೆ ತಾನು ಅಡ್ಡ ಬಂದಂತಾಗುವುದಿಲ್ಲವೇ? ಮಗ ಕೂಡ ಹಾಗೆ ಎಣಿಸಬಹುದಲ್ಲವೇ, ಖುಷಿಯಿಂದ ಇದ್ದ ತನ್ನನ್ನು ಅಪ್ಪ ಮತ್ತೆ ಬಡತನದ ಕೂಪಕ್ಕೆ ತಳ್ಳಿದ ಎಂದು. ಹೆಂಡತಿ ಏನು ಎಣಿಸಬಹುದು? ಕೈಲಾಗದ ಗಂಡ ರಾಕ್ಷಸನನ್ನು ಹುಡುಕಲಾಗದೇ, ಭಯದಿಂದ ಓಡಿ ಬಂದು ಮಗನನ್ನು ಕರೆ ತರದೇ ಇರುವುದಕ್ಕೆ ಸುಳ್ಳು ಕಾರಣ ನೀಡುತ್ತಿದ್ದಾನೆ ಎಂದುಕೊಳ್ಳಬಹುದೇ? ಊರಿನವರು ಹೇಗಿದ್ದರೂ ಮಗನ್ನನ್ನ ಕರೆದುಕೊಂಡು ಹೋದರೂ , ಹೋಗದಿದ್ದರೂ ಹೀಯಾಳಿಸಿಯೇ ಸಿದ್ಧ.ಏನು ಮಾಡಲಿ ಈಗ?
ಆಯ್ಕೆ ನೀಡಿದ್ದೇ ರಾಕ್ಷಸನ ತಪ್ಪೇ? ಮಗನನ್ನು ಹಿಂದಿರುಗಿಸುವುದಿಲ್ಲ ಎಂದು ಆತ ಖಡಾಖಂಡಿತ ಆಗಿ ಹೇಳಿದ್ದರೆ ಈ ಸಂಧಿಗ್ಧ ಯಾವತ್ತೂ ಬರುತ್ತಿರಲಿಲ್ಲ. ರಾಕ್ಷಸನಿಗೆ ಶಾಪ ಹಾಕಿ, ಆತನ ಮೇಲೆ ಎಲ್ಲ ತಪ್ಪು ಹೊರಿಸಿ ಈ ಗೊಂದಲದಿಂದ ಪಾರಾಗಿ ಬಿಡಬಹುದಿತ್ತು.
ತಂದೆ ಯೋಚಿಸುತ್ತಲೇ ಇದ್ದಾನೆ, ಆಯ್ಕೆಯ ರಾಕ್ಷಸ ಅಟ್ಟಹಾಸದಿಂದ ನಗುತ್ತಲೇ ಇದ್ದಾನೆ. ಮಗು ಕೋಟೆಯೊಳಗೆ ಆಡುತ್ತಾ ಬೆಳೆಯುತ್ತಲೇ ಇದೆ.
(ಮೂಲ ಕಥೆ: And the mountains echoed by Khaled Hosseini )
————————————————————————–
ಹೋದಷ್ಟು ಮುಗಿಯದ ಕಾಡು ದಾರಿ. ಏಕಾಂಗಿ ಪಯಣ. ಬಾಯಾರಿ ಮರದಡಿ ಮಲಗಿದವನಿಗೆ ಅಲ್ಲೇ ಗಾಢ ನಿದ್ರೆ. ನಿಧಾನಕ್ಕೆ ಕಣ್ಣು ಬಿಟ್ಟು ನೋಡಿದಾಗ ಎದುರಿಗೆ ಕಾಣುತ್ತಿರುವುದು ತನ್ನನ್ನೇ ದಿಟ್ಟಿಸಿ ನೋಡುತ್ತಿರುವ, ಹಿಂದೆಂದು ಕಾಣದ ವಿಕಾರ, ವಿಚಿತ್ರವಾದ ಭಾರಿ ದೈತ್ಯ ಪ್ರಾಣಿ. ದೃಷ್ಟಿ ಅಲುಗಿಸದೆ ಕಣ್ಣು ಮಿಟುಕಿಸದೆ ತನ್ನನ್ನೇ ನೋಡುತ್ತಿದೆ. ಏನು ಮಾಡಬೇಕು ಎಂದು ತೋಚದಾಗಿದೆ.ಆಯ್ಕೆಗಳು ಹಲವು. ಒಂದೋ ಹಿಂದೆ ನೋಡದೆ ಜೀವ ಕೈಯಲ್ಲಿ ಹಿಡಿದುಕೊಂಡು ಓಡುತ್ತ ಹೋಗಬೇಕು. ಈ ಪ್ರಾಣಿ ನಿಜವಾಗಿ ತನ್ನನ್ನು ಕೊಲ್ಲಲು ಬಯಸಿದ್ದೇ ಆದಲ್ಲಿ, ಪಾರಾಗುವ ಸಾಧ್ಯತೆ ತುಂಬಾ ಕಡಿಮೆಯೇ. ಆದರೆ ಇದು ಕೊಲ್ಲಲು ಬಯಸದೆ ಇದ್ದಲ್ಲಿ, ಓಡಿಕೊಂಡು ದೂರ ಹೋದರೆ ತಾನು ಭಯದಿಂದ ಪಾರಾಗಬಹುದು. ಅಥವಾ ತಾನು ಓಡುವುದರಿಂದ ಪ್ರಾಣಿ ಕೆರಳಿ, ಬೇಡದಿದ್ದರು ತನ್ನನ್ನು ಬೇಟೆ ಆಡಬಹುದೇ? ಹಾಗಾದರೆ ಎಲ್ಲಿಗೂ ಓಡದೇ ಸುಮ್ಮನೆ ಇದ್ದಲ್ಲೇ ಕಲ್ಲಿನಂತೆ ನಿಂತು ಬಿಡಲೇ? ಹಾಗೆ ನಿಂತರೆ ಪ್ರಾಣಿಗೆ ಸುಲಭ ತುತ್ತು ಆಗಬಹುದೇ ತಾನು? ಓಡುವ ಆಯ್ಕೆಯಿದ್ದು ಕೂಡ ಸುಮ್ಮನೆ ನಿಲ್ಲುವುದು ದಡ್ಡತನವೇ? ಅಥವಾ ನಿಲ್ಲುವ ಆಯ್ಕೆಯಿದ್ದೂ ಓಡುವುದು ದಡ್ಡತನವೇ? ಆಯ್ಕೆ ಮಾಡುವ ಸ್ವಾತಂತ್ರ್ಯ ತನ್ನನ್ನು ಕಟ್ಟಿಹಾಕುತ್ತಿದೆಯೇ ?
—————————————————————————
ಮಿಠಾಯಿ ಅಂಗಡಿಯ ಮುಂದೆ ನಿಂತ ಮಗುವಿನ ಮುಖದಲ್ಲಿರುವ ಗೊಂದಲ, ಮನೆಯಲ್ಲಿ ಉಳಿದ ಕೊನೆ ಉಂಡೆ ತಿನ್ನುವ ಮಗುವಿನ ಮುಖದಲ್ಲಿ ಇರುವುದಿಲ್ಲ. ಹೊರ ಪ್ರಪಂಚದಲ್ಲಿ ಸ್ವತಂತ್ರವಾಗಿರುವ ಮನುಷ್ಯನಿಗೆ ಇರುವ ಆಯ್ಕೆಗಳು ಜೈಲಿನಲ್ಲಿ ಕೂತ ಖೈದಿಗೆ ಇಲ್ಲ, ಹುಚ್ಚಾಸ್ಪತ್ರೆ ಸೇರಿರುವ ರೋಗಿಗೆ ಇಲ್ಲ. ಯಾರು ನಿಜವಾಗು ಸ್ವತಂತ್ರರು? ಆಯ್ಕೆಗಳಿಂದ? ಆಯ್ಕೆಗಳು ಸೃಷ್ಟಿಸುವ ಗೊಂದಲಗಳಿಂದ?