ದಂತಭಗ್ನ

ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು ನಾನು ನೋಡಿಲ್ಲವೆಂದಲ್ಲ. ಯಾವಾಗಾದರೂ ಮಳೆ ಬಂದಾಗ ಹುಚ್ಚೇಳುವ ಟ್ರಾಫಿಕ್ ನಡುವೆ ಮಳೆಯಲ್ಲಿ ನೆನೆಯುತ್ತಾ ಬೈಕ್ ನಿಲ್ಲಿಸಿಕೊಂಡಿದ್ದಾಗಲೋ ಅಥವಾ ಬಸ್ಸಿನಲ್ಲಿ ಕುಳಿತು, ಬೆಳಗ್ಗೆ ತಿಂದ ತಿಂಡಿಯ ತುಣುಕುಗಳನ್ನು ಹಲ್ಲಿನ ತೂತಿನ ಮಧ್ಯದಿಂದ ಕಡ್ಡಿ ತುರುಕಿಸಿ ತೆಗೆಯುತ್ತಾ ಕುಳಿತ್ತಿರಬೇಕಾದರೋ ಆ ಖಾಲಿ ಜಾಗದ ಬಗ್ಗೆ ಹೀಗೆಯೇ ಕೆಲವೊಮ್ಮೆ ಆಲೋಚನೆ ಹಾದು ಹೋಗಿದ್ದಿದೆ. ದಿನಕ್ಕೊಂದೆಂಬಂತೆ ನಾಯಿಕೊಡೆಗಳಂತೆ ತಲೆಯೇಳುತ್ತಿರುವ ಕಟ್ಟಡಗಳ ಮಧ್ಯ ಅದು ಹೇಗೆ ಈ ಖಾಲಿ ಜಾಗ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆಯೋ, ಇನ್ಯಾವ ಥರದ ಕಟ್ಟಡ ಇಲ್ಲಿ ಬರಲಿದೆಯೋ, ಯಾವಾಗ ಅಂಥದ್ದೇ ಒಂದು ಕಟ್ಟಡದಲ್ಲಿ ನನ್ನ ಒಂದು ಸ್ವಂತ ಮನೆ ತೆಗೆದುಕೊಳ್ಳುವುದೋ, ಈ ಉಸಿರುಗಟ್ಟಿಸುವ ಊರಿನಲ್ಲಿ ಮನೆ ಖರೀದಿಸಲೋ ಬೇಡವೋ? ಇಲ್ಲಿ ತಲೆಯೇಳುತ್ತಿರುವ ಮನೆಗಳು ತನ್ನ ಹೊಳೆಯುವ ಹಲ್ಲಿನಂತೆ ಹೊರಗೆ ಮಾತ್ರ ಚಂದಗೆ ತೋರಿ ಒಳಗೆಲ್ಲ ಹುಳುಕಿರಬಹುದೋ, ದಿನ ಹೋದಂತೆ ಹದಗೆಡುತ್ತಿರುವ ಹಲ್ಲಿನ ತೂತು ಇನ್ನಷ್ಟು ದೊಡ್ಡದಾಗಿದೆಯೋ ಅಥವಾ ತಾನೇ ಕಡ್ಡಿ ಹಾಕಿ ಹಾಕಿ ಅದನ್ನು ದೊಡ್ಡದು ಮಾಡಿಕೊಳ್ಳುತ್ತಿದ್ದೇನೋ, ಹಲ್ಲು ನೋವು ಶುರು ಆದರೆ ಇನ್ನೆಷ್ಟು ನೋವು ಅನುಭವಿಸಬೇಕೋ, ವೈದ್ಯರ ಹತ್ತಿರ ಹೋಗಿ ತೋರಿಸಿ ರೂಟ್ ಕ್ಯಾನಲ್ ಚಿಕಿತ್ಸೆ ಪಡೆಯುವುದೋ ಹೀಗೆ ನೂರೆಂಟು ಸಂಬಂಧವಿಲ್ಲದ ವಿಚಾರಗಳು. Courtesy: tohaitiwithlove.squarespace.com

ಅಷ್ಟಕ್ಕೂ ಈ ದುರ್ಬಲ ಹಲ್ಲು ನನಗೆ ಮೊದಲಿನಿಂದಲೂ ತೊಂದರೆ ಕೊಟ್ಟುಕೊಂಡೇ ಬಂದಿದೆ. ಬಾಯಿ ತುಂಬಾ ಹುಳುಕು ಹಲ್ಲು ನನಗೆ. ಯಾವಾಗ ಯಾವ ಹಲ್ಲಿನ ಭಾಗ ತುಂಡಾಗಿ ಹೊಟ್ಟೆ ಸೇರುವುದೆಂಬ ಭಯ ಯಾವಾಗಲೂ ಇದ್ದದ್ದೇ. ಹುಳುಕು ಹಲ್ಲುಗಳ ಸಮಸ್ಯೆ ಬರೀ ಆಹಾರವನ್ನು ಸೇವಿಸುವುದಕ್ಕೆ ಮಾತ್ರ ಸೀಮಿತವಲ್ಲ. ಸಾಮಾಜಿಕವಾಗಿ ಕೂಡ ಇವುಗಳು ಕೊಡುವ ತೊಂದರೆ ಅಷ್ಟಿಷ್ಟಲ್ಲ. ಆಫೀಸಿನಲ್ಲಿ ಯಾರೊಂದಿಗೂ ಮುಖ ಕೊಟ್ಟು ಮಾತನಾಡಲು ಕೂಡ ಮುಜುಗರ. ಎಲ್ಲಿ ಹಳದಿ ಬಣ್ಣದ ಹಲ್ಲು ಎದುರಿನವರಿಗೆ ತೋರಿ ಬಿಡಬಹುದೇನೋ, ಎಲ್ಲಿ ಹುಳುಕು ಹಲ್ಲಿನ ಜೊತೆಗೆ ಉಚಿತವಾಗಿ ಬರುವ ದುರ್ಗಂಧ ಎದುರಿನವರ ಮೂಗಿನ ಹೊಳ್ಳೆಯನ್ನು ತಲುಪಿಬಿಟ್ಟು ಅವರು ತನ್ನ ಬಗ್ಗೆ ಅಸಹ್ಯಪಡಬಹುದೇನೋ ಎಂಬ ಆತಂಕ ಬೇರೆ. ಅದಕ್ಕೆ ನಾನು ಕಛೇರಿಯಲ್ಲಿ ಇತರರೊಡನೆ ಬೆರೆಯುವುದು ಕೂಡ ಕಡಿಮೆಯೇ. ಸಹೋದ್ಯೋಗಿಗಳೆಲ್ಲ ತನ್ನನ್ನು ಅಪಾರ್ಥ ಮಾಡಿಕೊಂಡು ಗರ್ವಿ ಗಂಗಾಧರ ಎಂದು ನನ್ನ ಬೆನ್ನ ಹಿಂದೆ ಛೇಡಿಸುವುದು ಕೂಡ ನನಗೆ ತಿಳಿದಿಲ್ಲವೆಂದಲ್ಲ. ನಿಜ ಕಾರಣ ಅವರಿಗೆ ತಿಳಿದಿಲ್ಲವಷ್ಟೆ.

ಉಪ್ಪು, ಹುಳಿ, ಖಾರ, ಲಿಂಬೆ, ಬೇವು, ಲವಂಗ ಎಲ್ಲಾ ಇರುವ ಟೂತ್ ಪೇಸ್ಟ್ ಬಳಸಿಯಾಯಿತು. ಯಾರೋ ಹೇಳಿದ್ದರು ಅಂತ ಆಯಿಲ್ ಪುಲ್ಲಿಂಗ್ ಎಂದು, ವಾಕರಿಕೆ ಬರುವ ತನಕ ಬಾಯಿಯಲ್ಲಿ ಎಣ್ಣೆ ಹಾಕಿ ಮುಕ್ಕಳಿಸಿದ್ದಾಯಿತು, ಬಾಯಿ ತೆರೆದು ಮಲಗಿಕೊಂಡು ನಿದ್ರೆ ಮಾಡಿದರೆ ರಾತ್ರಿ ಕ್ರಿಮಿ ಕೀಟ ಹೋಗಿ ಹಲ್ಲು ಹಾಳಾಗುವುದೆಂದು ಯಾರೋ ಹೇಳಿದರೆಂದು ಬಾಯಿ ತೆರೆಯದಂತೆ ಮುಖಕ್ಕೆ ಬಟ್ಟೆ ಕಟ್ಟಿ ಮಲಗಿ ನಿದ್ರೆಯಿಲ್ಲದೆ ಹೊರಳಾಡಿದ್ದಾಯಿತು. ಯಾವುದೂ ಫಲ ಕೊಡದಿದ್ದರೂ ವೈದ್ಯರ ಬಳಿ ಹೋಗಲು ಮಾತ್ರ ಮುಜುಗರ. ಎಲ್ಲಿ ನನ್ನ ಹಲ್ಲುಗಳನ್ನು ನೋಡಿ ನನ್ನ ವ್ಯಕ್ತಿತ್ವವನ್ನೇ ಅಳೆದು ಬಿಡುವರೋ ಎಂಬ ಆತಂಕ. ಎಲ್ಲಿ ನನಗೆ ಯಾವುದೋ ಭಯಾನಕ ಖಾಯಿಲೆ ಇರುವುದರಿಂದ ಹಲ್ಲು ಹೀಗಾಗಿದೆ ಎಂದು ಹೇಳಿಬಿಡಬಹುದೇನೋ ಎಂಬ ಭಯ ಬೇರೆ. ವೈದ್ಯರ ಬಳಿ ಹೋಗಿ ತೋರಿಸೋಣವೆಂದು ಅಂದುಕೊಂಡಾಗಲೆಲ್ಲಾ, ಪ್ರೌಢ ಶಾಲೆಯ ಯಾವುದೋ ತರಗತಿಯಲ್ಲಿ ಓದಿದ Ogden Nash ಬರೆದ ಹಾಸ್ಯಮಯ ಕವನ ‘This is Going to Hurt Just a Little Bit’ ನೆನಪಾಗುತ್ತದೆ. ಆತ ದಂತವೈದ್ಯರ ಬಳಿ ಹೋದಾಗ ಆಗುವ ಶೋಷಣೆಯನ್ನು ವಿವರಿಸದಷ್ಟು ಸೂಕ್ತವಾಗಿ ಬೇರೆ ಯಾರೂ ವಿವರಿಸಲಾರರೇನೋ. ಹೊಂಡಗಳ ಮಧ್ಯೆ ಕಳೆದು ಹೋಗಿರುವ ಬೆಂಗಳೂರಿನ ಒಳ ರಸ್ತೆಗಳನ್ನು ನೋಡಿದಾಗೆಲ್ಲ ಪ್ರತಿ ಬಾರಿ ತನ್ನ ಹಲ್ಲಿನ ಬಗ್ಗೆ ನೆನಪಾಗಿದ್ದಿದೆ. ಇಂದು ರಿಪೇರಿಯಾದ ರಸ್ತೆ ಮೊದಲ ದಿನ ನಳನಳಿಸಿ, ಮರುದಿನ ಹೊಸ ಹೊಂಡ ದರ್ಶನ ಮಾಡಿಸಿ, ವಾರ ಮುಗಿಯುವುದರೊಳಗೆ ರಿಪೇರಿಯ ಮೊದಲಿಗಿಂತ ಅಸಹ್ಯವಾಗಿ ಕಂಗೊಳಿಸುವುದನ್ನು ನೋಡಿಯೇ ತಾನು ಹಲ್ಲಿನ ರಿಪೇರಿ ಮಾಡಿಸುವ ಯೋಜನೆ ಕೈಬಿಟ್ಟದ್ದು. ಅದಕ್ಕೆಂದೇ ನಾನು ನಿರ್ಧಾರ ಮಾಡಿ ಬಿಟ್ಟಿದ್ದೇನೆ, ಬಾಯಲ್ಲಿರುವ ಹಲ್ಲುಗಳೆಲ್ಲ ಹಾಳಾಗಿ ಮುರಿದು ತಾವಾಗಿ ಬೀಳುವ ತನಕ ಸುಮ್ಮನಿದ್ದು ಆಮೇಲೆ ಅಳಿದುಳಿದ ಎಲ್ಲಾ ಹಲ್ಲುಗಳನ್ನು ಕಿತ್ತು ನಕಲಿ ಹಲ್ಲುಗಳನ್ನು ಹಾಕಿಕೊಂಡು ಕಿಸಿಯಬೇಕೆಂದು.

————————————————————————————————————–

ಅಂದು ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿತ್ತು. ಹನಿ ಹನಿ ಸೋನೆ ಮಳೆ. ಎಂದಿನಂತೆ ಬೈಕಿನಲ್ಲಿ ಕಛೇರಿಗೆ ಹೋಗುವುದು ಸಾಧ್ಯವಿಲ್ಲವೆಂದು ಅನಿವಾರ್ಯವಾಗಿ ಬಸ್ ಹತ್ತಿದೆ. ತೆವಳುತ್ತಾ ಸಾಗಿದ ಬಸ್ ಆವತ್ತು ಅದೇ ಖಾಲಿ ಜಾಗದ ಹತ್ತಿರ ಬಂದು ನಿಂತು ಬಿಟ್ಟಿತು. ಮುಂದೆ ನೋಡಿದರೆ ಕಿಲೋಮೀಟರುಗಟ್ಟಲೆ ಸಾಲುಗಟ್ಟಿ ವಾಹನಗಳು ಆಕಳಿಸುತ್ತಾ ನಿಂತಿವೆ. ಮೈಯಲ್ಲಿ ಉಳಿದಿರುವ ಚೈತನ್ಯವೆಲ್ಲ ಈ ಮಳೆಯಲ್ಲೇ ಸೋರಿ ಹೋಗುತ್ತಿದೆಯೇನೋ ಎಂದೆನಿಸಿ, ಮಹಾನಗರದ ಬಗ್ಗೆ ವಾಕರಿಕೆ ಬಂದಂತಾಗಿ, ಆಗಲೇ ಗಿಜಿಗುಟ್ಟುತ್ತಿದ್ದ ಬಸ್ಸಿನಲ್ಲೇ ಕಣ್ಣು ಮುಚ್ಚಿ ಒರಗಿಕೊಂಡು ನಿದ್ರೆಗೆ ಶರಣಾಗುವ ವ್ಯರ್ಥ ಪ್ರಯತ್ನ ಮಾಡಹತ್ತಿದ್ದೆ. ಆಗಲೇ ಕಿವಿಗಪ್ಪಳಿಸಿದ್ದು ಹಳೆಯ ಮಹಾಭಾರತ ಧಾರಾವಾಹಿಯಲ್ಲಿ ಬರುತ್ತಿದ್ದ ಅಶರೀರವಾಣಿಯಂತಹ ಧ್ವನಿ.
“ತಲೆ ಕೂದಲು ಉದುರುತ್ತಿದೆಯೇ? ನರದೌರ್ಬಲ್ಯವೇ? ಕಣ್ಣುನೋವೆ? ಮೂಲವ್ಯಾಧಿಯಿಂದ ಬಳಲುತ್ತಿರುವಿರಾ? ನಿಶ್ಶಕ್ತಿಯೇ? ನಿದ್ರಾಹೀನತೆಯೇ? ದುರ್ಬಲ ಹಲ್ಲುಗಳ ಸಮಸ್ಯೆಯೇ? ಭಯಪಡುವ ಅವಶ್ಯಕತೆಯಿಲ್ಲ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ. ಹಲವಾರು ವರುಷಗಳ ಕಾಲ ಉತ್ತರದ ಹಿಮಾಲಯ ಗಿರಿಗಳಲ್ಲಿ ತಪಸ್ಸಿನಿಂದ ಸಿದ್ಧಿ ಸಾಧಿಸಿರುವ ವೈದ್ಯ ಮಹೋತ್ತಮ ಪಂಡಿತ ಭೈರವೇಶ್ವರ ಸ್ವಾಮೀಜಿಯವರು ಖುದ್ದಾಗಿ ಅಭೇದ್ಯ ಕಾಡುಗಳಲ್ಲಿ ಅಲೆದು ವೇದಗಳಲ್ಲಿ ಉಲ್ಲೇಖಿಸಿರುವ ಗಿಡ ಮೂಲಿಕೆಗಳನ್ನು ಹುಡುಕಿ ತೆಗೆದು ತಯಾರಿಸಿರುವ ಬಗೆ ಬಗೆಯ ಚೂರ್ಣ, ಎಣ್ಣೆ, ಕಷಾಯಗಳನ್ನು ಬಳಸಿ ಶೀಘ್ರದಲ್ಲಿ ತಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.” ಎಲ್ಲಿಂದ ಬರುತ್ತಿದೆ ಎಂದು ಕಣ್ಣೆತ್ತಿ ಸುತ್ತ ನೋಡಿದರೆ ಏನಾಶ್ಚರ್ಯ, ಯಾವತ್ತೂ ತಾನು ನೋಡುತ್ತಿದ್ದ ಖಾಲಿ ಜಾಗದ ನಡುವೆ ಒಂದು ಚಿಕ್ಕ ಜೋಪಡಿಯಂತಹ ಬಣ್ಣ ಬಣ್ಣದ ಬಟ್ಟೆ ಹೊದಿಸಿದ ವಿಚಿತ್ರವಾದ ಡೇರೆ ಬಂದಿದೆ. ಡೇರೆಯ ಮಧ್ಯದಲ್ಲಿ ಒಂದು ಕೋಲಿಗೆ ಸಿಕ್ಕಿಸಿದ ಧ್ವನಿವರ್ಧಕ. ಅದರಿಂದ ಅತ್ತ ಹೆಚ್ಚು ಕರ್ಕಶವೂ ಅಲ್ಲದ, ಇತ್ತ ಕಿವಿಗೆ ಕೇಳದೆ ಇರುವಂತೆಯೂ ಇಲ್ಲದ ಒಂದು ಧ್ವನಿ, ಮೇಲೆ ಹೇಳಿದ ವಾಕ್ಯವನ್ನೇ ಪದೇ ಪದೇ ಉಚ್ಛರಿಸುತ್ತಿದೆ. ಡೇರೆಯ ಹೊರಗೊಂದು ಮಾಸಿದ ಆರಾಮ ಕುರ್ಚಿ. ಒಳಗೇನಿದೆಯೆಂದು ಇಣುಕಿ ನೋಡಲು ಸಾಧ್ಯವಾಗಂತೆ ಒಂದು ರಾಡಿ ಬಣ್ಣದ ಪರದೆ. ಒಟ್ಟಾರೆ ಆ ಡೇರೆಯಿಂದಾಗಿ ಆ ಜಾಗಕ್ಕೆ ಒಂದು ವಿಚಿತ್ರ ಕಳೆ ಬಂದು ಬಿಟ್ಟಿತ್ತು.
ದಿನವಿಡೀ ತಲೆಯಲ್ಲಿ ಆ ಡೇರೆಯಿಂದ ಬರುತ್ತಿದ್ದ ಅದೇ ವಾಕ್ಯಗಳು ಗುಂಯ್ ಗುಡುತ್ತಿದ್ದವು. ರಾತ್ರಿ ಮಲಗುವ ಮುಂಚೆ ಅಂತೂ ಒಂದು ನಿರ್ಧಾರಕ್ಕೆ ಬಂದೇ ಬಿಟ್ಟಿದ್ದೆ. ಆದದ್ದಾಗಲಿ ಹಲ್ಲು ನೋವಿಗೆ ಏನು ಔಷಧಿ ಸಿಗುತ್ತದೆ ಅಲ್ಲಿ ಎಂದು ವಿಚಾರಿಸಿಯೇ ಬಿಡುತ್ತೇನೆ ನಾಳೆ ಅಲ್ಲಿಗೆ ಹೋಗಿ ಎಂದು ವಿಚಾರ ಮಾಡುತ್ತಿದ್ದಂತೆ ನಿದ್ದೆ ಕಣ್ಣಿಗೆ ಹತ್ತಿತು.

ಬೆಳಗ್ಗೆ ಎದ್ದವನೇ ಬಲು ಹುಮ್ಮಸ್ಸಿನಿಂದ ಹೆಂಡತಿ ಮಾಡಿ ಕೊಟ್ಟ ಯಾವುದೋ ತಿಂಡಿ ತಿಂದು, ಮಳೆ ನಿಂತಿದ್ದಕ್ಕೆ ದೇವರಿಗೆ ಮನಸ್ಸಿನಲ್ಲಿಯೇ ವಂದಿಸುತ್ತಾ ಬೈಕ್ ಚಾಲು ಮಾಡಿ ತಡಮಾಡದೆ ಆ ಖಾಲಿ ಜಾಗದ ಡೇರೆಯೆದುರು ತಂದು ನಿಲ್ಲಿಸಿದೆ. ನಿನ್ನೆ ಹೊರಗೆ ತೋರಿದ್ದ ಕುರ್ಚಿ ಇಂದು ತೋರುತ್ತಿಲ್ಲ. ಧ್ವನಿವರ್ಧಕದಿಂದ ಘೋಷಣೆ ಕೂಡ ಕೇಳಿ ಬರುತ್ತಿಲ್ಲ. ಸಂಶಯದಿಂದಲೇ ಡೇರೆಯ ಪರದೆ ಸರಿಸಲೂ, ಕಿರ್ರೆಂದು ಧ್ವನಿವರ್ಧಕ ಕಿರುಚಿಕೊಳ್ಳಲು ಪ್ರಾರಂಭಿಸಲು ಸರಿ ಹೋಗಿ, ಮೈಯೆಲ್ಲಾ ಒಮ್ಮೆ ನಡುಗಿ, ಹಣೆಯ ಮೇಲೆ ಬೆವರ ಹನಿಗಳು ಮೂಡಿದವು. ಧೈರ್ಯ ಮಾಡಿ ಪರದೆ ಸರಿಸಿ ಒಳ ನುಗ್ಗಿದವನಿಗೆ ತೋರಿದ್ದು ಧ್ವನಿವರ್ಧಕದ ನಿಯಂತ್ರಕದ ಬಳಿ ಕುಳಿತು ಏನೋ ಸರಿಪಡಿಸಲು ಪ್ರಯತ್ನ ಪಡುತ್ತಿದ್ದ, ಮಾಸಿದ ಬಣ್ಣದ ತಲೆಕೂದಲಿನ, ಕಾವಿ ಲುಂಗಿ ಮಾತ್ರ ಧರಿಸಿ ಬರಿ ಮೈಯ್ಯಲ್ಲಿ ಕುಳಿತಿದ್ದ ಒಬ್ಬ ಮಧ್ಯವಯಸ್ಕ. ಆಚೆ ಕಣ್ಣು ಹಾಯಿಸಿದರೆ ದಟ್ಟವಾದ ಉದ್ದ ಗಡ್ಡ ಬಿಟ್ಟಿರುವ ಯಾವುದೋ ಸ್ವಾಮೀಜಿಯಂತೆ ಕಳೆ ಹೊತ್ತಿರುವ ಒಬ್ಬ ಇಳಿವಯಸ್ಕ ಆರಾಮ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಕುಳಿತಿದ್ದಾನೆ. ಯಾರನ್ನು ಮಾತನಾಡಿಸಬೇಕೆಂದು ತಿಳಿಯದೆ ಗೊಂದಲದಲ್ಲಿ ನಿಂತಿದ್ದ ನನ್ನನ್ನು ಬಣ್ಣ ಮಾಸಿದ ತಲೆ ಕೂದಲಿನ ವ್ಯಕ್ತಿ ಕರೆದು ಇನ್ನೊಂದು ಪ್ಲಾಸ್ಟಿಕ್ ಕುರ್ಚಿಯ ಕಡೆ ಬೊಟ್ಟು ಮಾಡಿ ಕೂರಲು ಹೇಳಿ ತನ್ನ ಹಳೆ ಕೆಲಸದಲ್ಲೇ ಮಗ್ನನಾದ. ಅತ್ತಿತ್ತ ಕಣ್ಣು ಹಾಯಿಸುತ್ತ ಕುಳಿತ ನನಗೆ ಯಾವುದೋ ಭಿಕ್ಷುಕನ ಮನೆ ಹೊಕ್ಕಿದಂಥ ಅನುಭವವಾಯಿತು. ಎಲ್ಲಿ ನೋಡಿದರಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ http://images.fineartamerica.comಹರಕು ಮುರುಕು ವಸ್ತುಗಳು. ಕಂಡು ಕೇಳರಿಯದ ಯಾವ್ಯಾವುದೋ ವಿಚಿತ್ರ ದೇವರುಗಳಂತೆ ತೋರುವ ಚಿತ್ರಗಳು. ಬಣ್ಣ ಬಣ್ಣದ ದ್ರವಗಳನ್ನು ತುಂಬಿಕೊಂಡು ಸಜ್ಜಾಗಿರುವ, ಜೋಡಿಸಿಟ್ಟ ಚಿಕ್ಕ ಚಿಕ್ಕ ಬಾಟಲುಗಳು. ಯಾವುದೋ ದರಿದ್ರ ಹಿಡಿದಿರುವಂಥ ಜಾಗಕ್ಕೆ ಬಂದಂತೆ ಅನಿಸಿತು. ಆದರೇನು ಮಾಡುವುದು? ಹಸಿದವನಿಗೆ ರುಚಿಯ ಪರಿವೆಯಿರುದಿಲ್ಲ. ತನಗೆ ಬೇಕಾಗಿರುವುದು ಹುಳುಕು ಹಿಡಿದು ಹಳದಿಯಾಗಿರುವ ತನ್ನ ಹಲ್ಲಿಗೆ ಪರಿಹಾರ ಅಷ್ಟೇ. ಹೀಗೆ ಯೋಚನೆ ಹರಿಯುತ್ತಾ ಸಾಗಿರಬೇಕಾದರೆ ಬಣ್ಣ ಮಾಸಿದ ತಲೆ ಕೂದಲಿನ ವ್ಯಕ್ತಿ ತನ್ನೆಡೆ ಬಂದು ಒಮ್ಮೆ ಮೇಲಿಂದ ಕೆಳಗಿನ ತನಕ ವಿಚಿತ್ರವಾಗಿ ನೋಡಿ ಏನು ಬೇಕೆಂದು ಕೈಸನ್ನೆಯಿಂದಲೇ ಕೇಳಿದ. ನನ್ನ ಸಮಸ್ಯೆ ವಿವರಿಸಿದ ಕೂಡಲೇ ಆತ ಬಾಟಲಿಗಳನ್ನು ಇಟ್ಟ ಜಾಗದೆಡೆ ನಡೆದು ಅವುಗಳ ಮಧ್ಯದಿಂದ ಕೆಂಪು ಬಣ್ಣದ ದ್ರವ ತುಂಬಿರುವ ಒಂದು ಬಾಟಲಿಯನ್ನೆತ್ತಿಕೊಂಡು ಕೈಗಿತ್ತು, ಬೆಳಗ್ಗೆ ಹಲ್ಲುಜ್ಜಿದ ಕೂಡಲೇ ಈ ದ್ರವವನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸಬೇಕು ಎಲ್ಲ ಸರಿ ಹೋಗುತ್ತದೆ ಎಂದ. ಇಷ್ಟು ಚಿಕ್ಕ ಬಾಟಲಿ, ಒಂದು ವಾರಕ್ಕೆ ಸಾಕಾಗುವಷ್ಟು ಮಾತ್ರವೇ ಇದೆ ಇದರಲ್ಲಿ, ಖಾಲಿಯಾದ ಮೇಲೇನು ಮಾಡಲಿ ಎಂದಿದ್ದಕ್ಕೆ, ಆತ ಒಮ್ಮೆ ನಕ್ಕು ಅದರ ಅವಶ್ಯಕತೆ ಬೀಳುವುದಿಲ್ಲ ಎಂದಷ್ಟೇ ಹೇಳಿ ನಾನಿನ್ನು ಹೊರಡಬೇಕೆಂಬಂತೆ, ಮಾತನಾಡದೆ ಮುಖದಿಂದಲೇ ಭಾವನೆ ತೋರಿಸಿದ. ಹಣವೆಷ್ಟು ಎಂದು ಕೇಳಿದೆ. 500 ರೂಪಾಯಿಯಂದ. ಅಷ್ಟೊಂದು ದುಬಾರಿಯೇ ಎಂದು ಕೇಳಬೇಕೆನಿಸಿದರೂ, ಹಾಗೆ ಕೇಳುವುದು ತನ್ನ ಅಂತಸ್ತಿಗೆ ಕಡಿಮೆಯೆಂದೂ, ಅದೂ ಅಲ್ಲದೆ ಈ ಉರಿ ಮುಖದ ಮನುಷ್ಯ ಎಲ್ಲಿ ತನಗೆ ಉಗಿದೇ ಬಿಡಬಹುದೇನೋ ಎಂಬ ಆತಂಕದಿಂದ ಸುಮ್ಮನೆ 500 ರೂಪಾಯಿ ನೋಟನ್ನು ಆತನ ಕೈಗಿತ್ತು ಹೊರನಡೆದೆ.

ಅಂದಿನಿಂದ ಬೆಳಗ್ಗೆ ಹಲ್ಲುಜ್ಜಿ ಕೆಂಪು ದ್ರವದಲ್ಲಿ ಬಾಯಿ ಮುಕ್ಕಳಿಸಲು ಭಾರೀ ಉತ್ಸಾಹ. ಬಾಟಲಿ ಅರ್ಧ ಖಾಲಿಯಾದರೂ ಅಂಥದ್ದೇನು ಬದಲಾವಣೆ ತೋರಲಿಲ್ಲ. ಆದರೆ ಅದೊಂದು ದಿನ ಆಫೀಸಿನ ಗುಮಾಸ್ತ ಪಾಂಡುರಂಗ, “ಏನ್ಸಾರ್ ದಿನೇ ದಿನೇ ನಿಮ್ಮ ಹಲ್ಲು ಹೊಳಪು ಜಾಸ್ತಿ ಆಗ್ತಾನೆ ಹೋಗ್ತಾ ಇದೆ ಏನಿದ್ರ ಗುಟ್ಟು!!” ಎಂದು ಅವನ ಅರಸಿನ ಹಲ್ಲು ತೋರಿಸಿ ಕಿಚಾಯಿಸಿದ್ದಾಗಲೇ ತಿಳಿದದ್ದು, ಕೊನೆಗೂ ಡೇರೆಯಲ್ಲಿ ತೆಗೆದುಕೊಂಡ ದ್ರವ ಕೆಲಸ ಮಾಡುತ್ತಿದೆ ಎಂದು. ಆದರೆ ತಾನು ಹೇಗೆ ಮುಂಚಿನ ಸ್ಥಿತಿಯ ಜೊತೆ ಹೋಲಿಸಿ ನೋಡುವುದು ಎಂದು ಯೋಚಿಸುತ್ತಿರಬೇಕಾದರೆ ನೆನಪಾಗಿದ್ದು ಆಫೀಸಿಗೆ ಸೇರಬೇಕಾದರೆ ಅರ್ಜಿಯಲ್ಲಿ ಅಂಟಿಸಲು ತೆಗೆದ ಪಾಸ್ ಪೋರ್ಟ್ ಅಳತೆಯ ಫೋಟೋದಲ್ಲಿ ಅಸಹ್ಯವಾಗಿ ತಾನು ಹಲ್ಲು ತೋರಿಸಿ ನಕ್ಕದ್ದು. ಮನೆಗೆ ಬಂದು ಕಪಾಟೆಲ್ಲಾ ತಡಕಾಡಿದ ಮೇಲೆ ಅಂತೂ ಇಂತೂ ಬಣ್ಣ ಮಾಸಿ ಹೋದ ಒಂದು ಫೋಟೋ ಸಿಕ್ಕಿಯೇ ಬಿಟ್ಟಿತು. ಅದರಲ್ಲಿ ಹಲ್ಲು ಪೂರ್ತಿ ಹಳದಿ ಬಣ್ಣದಂತೆ ತೋರುತ್ತಿತ್ತು. ಬಣ್ಣ ಮಾಸಿ ಅದು ಹಳದಿಯಾಗಿದ್ದೆಂದು ತನ್ನನ್ನೇ ತಾನು ಸಮಾಧಾನ ಮಾಡಿಕೊಂಡು, ಈಗ ಅದೇ ಭಂಗಿಯಲ್ಲಿ ಹೊಸ ಹೊಳಪಿನ ಹಲ್ಲು ತೋರಿಸಿಕೊಂಡು ನಗುತ್ತ ಫೋಟೋ ತೆಗೆಯಲೆಂದು, ಒಂದು ನಿಮಿಷದಲ್ಲಿ ಭಾವಚಿತ್ರ ತೆಗೆದು ಕೊಡುವ ಮನೆಯ ಸಮೀಪದ ಒಂದು ಸ್ಟುಡಿಯೋ ನುಗ್ಗಿದೆ. ಹಲ್ಲು ಮುಚ್ಚಿ ಸಾರ್ ಎಂದು ಫೋಟೊಗ್ರಾಫರ್ ಎಷ್ಟು ಹೇಳಿದರೂ ಆತನ ಮೇಲೆ ರೇಗಿ, ಹೇಳಿದ ಹಾಗೆ ಫೋಟೋ ತೆಗಿಯಯ್ಯ ಎಂದು ದಬಾಯಿಸಿ ಹೊಸ ಫೋಟೋ ತೆಗೆಸಿಕೊಂಡದ್ದಾಯಿತು. ಹೋಲಿಸಿ ನೋಡಿದರೆ ಪಾಂಡುರಂಗ ಹೇಳಿದಂತೆಯೇ ವ್ಯತ್ಯಾಸ ಸ್ಪಷ್ಟವಾಗಿ ಕಂಡಿತು. ಮನಸು ಅಪಾರ ಸಂತಸದಲ್ಲಿ ತೇಲಿಹೋಯಿತು.

ಅಂದಿನಿಂದ ಆಫೀಸಿನಲ್ಲಿ ಹಾಗು ಮನೆಯಲ್ಲಿ ನನ್ನ ಖದರೇ ಬದಲಾಯಿತು. ಎಲ್ಲರ ಜೊತೆ ಅತಿಯಾಗಿ ಬೆರೆಯಲು ಶುರು ಮಾಡಿದೆ. ಟಿವಿಯಲ್ಲೋ, ಮೆಸೇಜಿನಲ್ಲೋ ಬಂದ ಹಳೆಯ ಜೋಕುಗಳನ್ನೇ ಆಫೀಸಿನಲ್ಲಿ ಎಲ್ಲರೆದುರಿಗೆ ಹೇಳಿ, ಬೇರೆ ಯಾರೂ ನಗದಿದ್ದರೂ ತಾನೇ ಗಹಗಹಿಸಿ ತನ್ನ ಬಿಳಿಪಿನ ಹಲ್ಲುಗಳನ್ನು ತೋರಿಸುತ್ತಾ ನಕ್ಕೆ. ಮೊದಲೇ ತನ್ನನ್ನು ಅಹಂಕಾರಿಯೆಂದು ಭಾವಿಸಿ ದೂರವಿಟ್ಟಿದ್ದ ಸಹೋದ್ಯೋಗಿಗಳು ಈಗ ಇನ್ನಷ್ಟು ದೂರವಾಗ ತೊಡಗಿದರು. ನನ್ನ ಚೆಲುವಿನ ಹಲ್ಲುಗಳನ್ನು ನೋಡಿ ಅವರಿಗಾಗುವ ಹೊಟ್ಟೆಕಿಚ್ಚಿನ ಪ್ರಭಾವವಿದೆಂದು ಒಳಗೊಳಗೇ ಇನ್ನಷ್ಟು ಖುಷಿಪಟ್ಟೆ. ಎಲ್ಲಿ ಕ್ಯಾಮರಾ ತೋರಿದರೂ ಸಾಧ್ಯವಾದಷ್ಟು ಹಲ್ಲು ತೋರಿಸಿ ನಕ್ಕು ಪೋಸ್ ಕೊಟ್ಟೆ. ಅಂತೂ ಇಂತೂ ದಿನಗಳು ಉಲ್ಲಾಸಮಯವಾಗಿ ಸಾಗತೊಡಗಿದವು. ಆದರೆ ಎಲ್ಲಾ ಖುಷಿಯ ದಿನಗಳು ಮುಂದೊಂದು ದಿನ ಕೊನೆಗೊಳ್ಳುವಂತೆ, ಮನೆಯಲ್ಲಿ ಆಟವಾಡಿಕೊಂಡಿದ್ದ 4 ವರ್ಷದ ಮಗನ ಕೈಗೆ ದ್ರವದ ಶೀಶೆ ಸಿಕ್ಕಿ ಕ್ಷಣಮಾತ್ರದಲ್ಲಿ ನೆಲಕ್ಕೆ ಬಿದ್ದು ಒಡೆದೇ ಹೋಯಿತು. ಸಮಾಧಾನದ ವಿಷಯವೆಂದರೆ ಅದರಲ್ಲಿ ಉಳಿದಿದ್ದದ್ದು 2, 3 ದಿನಕ್ಕಾಗುವಷ್ಟು ಪ್ರಮಾಣ ಮಾತ್ರ. ಹಾಗೆ ಒಡೆದು ಹೋದ ಬಾಟಲಿಯನ್ನು ಹೆಕ್ಕುತ್ತಾ ಚೂರುಗಳನ್ನು ಆರಿಸುತ್ತಿರಬೇಕಾದರೆ ಬಾಟಲಿಯ ಬುಡಭಾಗದ ಚೂರಿನತ್ತ ನನ್ನ ಗಮನ ಹೋಯಿತು. ಕಪ್ಪು ಅಕ್ಷರದಲ್ಲಿ ಚಿಕ್ಕದಾಗಿ ಬರೆದ ಅಕ್ಷರವನ್ನು ಕುತೂಹಲದಿಂದ, ಮನೆ ಹೊರಗೆ ಬಂದು, ಬಿಸಿಲಿಗೆ ಹಿಡಿದು ತ್ರಾಸಪಟ್ಟು ಓದಿದಾಗ ತೋರಿದ್ದು ಸೋಡಿಯಂ ಹೈಪೋ ಕ್ಲೋರೈಟ್ ಎಂಬ ಒಂದೇ ಪದ. ಅತ್ತಿತ್ತ ಇನ್ನು ಏನೋ ಬರೆದಿದ್ದವು ಅನ್ನಿಸುತ್ತದೆ ಆದರೆ ಒಡೆದ ಚೂರುಗಳಲ್ಲಿ ಅವುಗಳೆಲ್ಲ ಕಳೆದು ಹೋಗಿ ಇದೊಂದು ಪದ ಮಾತ್ರ ಉಳಿದುಕೊಂಡಿತ್ತು. ಹೇಗಿದ್ದರೂ ಈ ಬಾಟಲಿ ಮುಗಿದ ಮೇಲೆ ಇನ್ನು ಇದರ ಅವಶ್ಯಕತೆ ಬೀಳುವುದಿಲ್ಲವೆಂದು ಆ ಡೇರೆಯಲ್ಲಿ ಕುಳಿತಿದ್ದ ವ್ಯಕ್ತಿ ಹೇಳಿದ್ದು ನೆನಪಾಗಿ ಮನಸ್ಸಿಗೆ ಅಷ್ಟಿಷ್ಟು ಸಮಾಧಾನವಾಯಿತು.

ತಾನು ಭೇಟಿ ಕೊಟ್ಟ ಒಂದೆರಡು ದಿನದಲ್ಲೇ ಆ ಜಾಗದಿಂದ ಡೇರೆ ಕಾಣೆಯಾಗಿತ್ತು. ಅಲೆಮಾರಿ ಪಂಡಿತರಿರಬೇಕು ಎಂದು ತಾನು ಆ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಿದ್ದಿಲ್ಲ. ಇಂದು ಬೆಳಗ್ಗೆ ಆಫೀಸಿನಲ್ಲಿ ಲವೀನಾ ಮೇಡಂ ಊರಿಗೆ ಹೋಗಿದ್ದವರು, ಅವರಮ್ಮನೇ ಮಾಡಿದ್ದ ಕಡಲೇಕಾಯಿ ಚಿಕ್ಕಿ ತಂದಿದ್ದರು. ಲವೀನಾ ಮೇಡಂ ಅಂದರೆ ಆಫೀಸಿನ ಗಂಡಸರಿಗೆಲ್ಲ ಅತೀವ ಆಕರ್ಷಣೆ. ಆಕೆ ಮರುಭೂಮಿಯಂಥ ಆಫೀಸಿನಲ್ಲಿ ಓಯಸಿಸ್ ತರಹ. ಆಕೆಯ ಕೆಲಸದಲ್ಲಿ ಸಹಾಯ ಮಾಡಲು ಎಲ್ಲರೂ ನಾ ಮುಂದು ತಾ ಮುಂದು. ಹೀಗಿರುವಾಗ ಅವರಮ್ಮ ಮಾಡಿದ ಚಿಕ್ಕಿಯನ್ನು ತಿನ್ನಲಾಗದಿರಲಾದೀತೇ? ಸಮುದ್ರಮಥನ ಮಾಡಿ ಸಿಕ್ಕ ಅಮೃತದಂತೆ ಹಲ್ಲು ಕಿಸಿಯುತ್ತಾ ಎಲ್ಲರೂ ಕೈ ಚಾಚಿದ್ದೇ ಚಾಚಿದ್ದು. ತಾನು ಮಾತ್ರ ತನ್ನ ಆಕರ್ಷಕ ಬಿಳುಪಿನ ಹಲ್ಲನ್ನು ಹಿತವಾಗಿ ತೋರಿಸುತ್ತಾ ಅಷ್ಟಷ್ಟೇ ನಗುತ್ತಾ ಕೈ ಹಿಡಿದದ್ದು. ಚಿಕ್ಕಿಗಾಗಿ ಕೈ ಹಿಡಿದವರು ಅದನ್ನ ಬಾಯಿಗೆ ಹಾಕಿಕೊಂಡ ನಂತರವೇ ಸಂಕಷ್ಟ ತಿಳಿದದ್ದು. ಚಿಕ್ಕಿ ಎಂಬುದಕ್ಕಿಂತ ಅದನ್ನು ಬೆಲ್ಲದ ಶಿಲೆ ಕಲ್ಲು ಎನ್ನುವುದು ಸೂಕ್ತವೇನೋ, ಚಿಕ್ಕಿ ಆ ಮಟ್ಟಿಗೆ ಗಟ್ಟಿಯಾಗಿತ್ತು. ಆದರೇನು ಮಾಡುವುದು ಲವೀನಾ ಮೇಡಂ ಕೊಟ್ಟದ್ದನ್ನು ಉಗುಳುವಂತಿಲ್ಲ. ಎಷ್ಟೋ ಜನರು ಮುಂದೆ ಒಂದು ಗಂಟೆಗಳ ಕಾಲ ಅದನ್ನು ಹಾಗೆಯೇ ಬಾಯಿಯ ಮೂಲೆಯಲ್ಲಿರಿಸಿ ಮೆದುವಾದ ಮೇಲೆ ನುಂಗಿದರು. ಆದರೆ ತಾನು ಮಾತ್ರ ಈಗ ಅತಿ ಬಲಿಷ್ಠವಾಗಿರುವ ಹಲ್ಲುಗಳಿಂದ ಕಟಕಟನೇ ಶಬ್ದ ಮಾಡುತ್ತಾ ಜಗಿದು, ಲವೀನಾ ಮೇಡಂ ಅವರ ಪ್ರಶಂಸೆಯ ನಗುವಿನ ಜೊತೆಗೆ ಸಹೋದ್ಯೋಗಿಗಳ ಅಸೂಯೆಯ ದೃಷ್ಟಿಗೆ ಪಾತ್ರನಾಗಿದ್ದು. ಹೀಗೆ ಅತಿ ಲವಲವಿಕೆಯಿಂದ ದಿನದ ಕೆಲಸ ಮುಗಿಸಿ ಬೈಕು ಹತ್ತಿ ಮನೆಗೆ ಬರುತ್ತಿರಬೇಕಾದರೆ ಅರ್ಧ ದಾರಿಯಲ್ಲಿ ಮೇಡಂ ಕೊಟ್ಟಿದ್ದ ಚಿಕ್ಕಿ ಇನ್ನೂ ಒಂದು ತುಂಡು ಉಳಿದಿರುವುದನ್ನು ನೆನಪಿಸಿಕೊಂಡು, ತನ್ನ ಹಲ್ಲಿನ ದೃಢತೆಯ ಬಗ್ಗೆ ಮತ್ತೊಮ್ಮೆ DantaBhagna1ಹೆಮ್ಮೆ ಪಟ್ಟುಕೊಳ್ಳುತ್ತ ಉಳಿದಿರುವ ತುಂಡನ್ನು ಖಾಲಿ ಮಾಡಲು ಬೈಕನ್ನು ಅಲ್ಲೇ ದಾರಿ ಬದಿಯಲ್ಲಿ ನಿಲ್ಲಿಸಿದೆನು. ಆಗೇನು ಚಿಕ್ಕಿಯ ತುಂಡನ್ನು ಎದುರಿನ ಹಲ್ಲಿನಿಂದ ಅತಿ ವಿಶ್ವಾಸದಿಂದ ಜಗಿದೇನೋ ಅಷ್ಟಕ್ಕೂ ಬಾಯಿಯಿಂದ ಕಟಕ್ ಎಂದು ಬಲವಾದ ಶಬ್ದವೊಂದು ಹೊಮ್ಮಿ, ತಲೆಯೆಲ್ಲಾ ಸಂಚರಿಸಿ, ಮಿದುಳನ್ನು ತಲುಪಿದಂತಾಯಿತು. ಬೆಳಗ್ಗೆ ಚಿಕ್ಕಿ ತಿಂದಾಗ ಹೀಗೆ ಅನ್ನಿಸಲೇ ಇಲ್ಲವಲ್ಲ ಎಂದು ಆಲೋಚಿಸುತ್ತಿರುವಷ್ಟರಲ್ಲಿ ಬೈಕಿನ ಟ್ಯಾಂಕಿನ ಮೇಲೆ ಕಲ್ಲಿನ ಚಿಕ್ಕ ತುಣುಕೊಂದು ಬಿದ್ದಂತೆ ಶಬ್ದವಾಯಿತು. ಸಂಶಯಭರಿತ ಗಾಬರಿಯಿಂದ ಬೈಕಿನ ಕನ್ನಡಿಯಲ್ಲಿ ತನ್ನ ಬಾಯಿಯನ್ನು ಪರೀಕ್ಷಿಕೊಳ್ಳಲು ನೋಡಿದರೆ ಮೇಲ್ದವಡೆಯ ಮುಂದಿನ ಎರಡು ಹಲ್ಲುಗಳೇ ಮಾಯವಾಗಿವೆ. ಆ ಕ್ಷಣದಲ್ಲಿ ಆದ ಆಘಾತದಿಂದ ಸಾವರಿಸಿಕೊಳ್ಳಲು ಬಹಳ ಸಮಯವೇ ಹಿಡಿಯಿತು. ಹತ್ತಾರು ಕೋನಗಳಿಂದ ಕನ್ನಡಿಯಲ್ಲಿ ತನ್ನ ಮುಖವನ್ನು ಪರೀಕ್ಷಿಸಿಕೊಂಡದ್ದಾಯಿತು. ಎಲ್ಲ ಕೋನಗಳಲ್ಲಿಯೂ, ಆದಿಮಾನವನಂಥ ವಿಚಿತ್ರ ಕಳೆ ಮುಖವನ್ನಾವರಿಸಿಕೊಂಡಿತ್ತು. ಒಂದು ಕ್ಷಣ ಅಳುವೇ ಬಂದಂತಾದರೂ ಸಮಾಧಾನ ಮಾಡಿಕೊಂಡು ಹೇಗೋ ಮನೆ ತಲುಪಿ, ಎಷ್ಟು ಬಾಗಿಲು ಬಡಿದರೂ ಟಿವಿ ಧಾರಾವಾಹಿ ನೋಡುವದರಲ್ಲೇ ಮಗ್ನಳಾಗಿ, ಎರಡು ನಿಮಿಷದ ನಂತರ ಬಾಗಿಲು ತೆರೆದ ಹೆಂಡತಿಯನ್ನು ಬಯ್ಯಲೆಂಬಂತೆ ಬಾಯಿ ತೆರೆದರೆ, ಆಕೆ ನನ್ನ ವಿಚಿತ್ರ ರೂಪವನ್ನು ನೋಡಿ ತಡೆಯಲಾರದೆ ಗೊಳ್ಳೆಂದು ನಕ್ಕು ಬಿಟ್ಟಳು. ಸಿಟ್ಟು ಮತ್ತಷ್ಟು ನೆತ್ತಿಗೇರಿ, ಕೈ ಕಾಲು ಕೂಡ ತೊಳೆಯದೆ ಸೀದಾ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಹಾಸಿಗೆಯ ಮೇಲೆ ಉರುಳಿಕೊಂಡು ಬಿಟ್ಟೆ. ಕಛೇರಿಯಲ್ಲಿ ಎಲ್ಲರಿಗೂ ಹೇಗೆ ಮುಖ ತೋರಿಸಲಿ? ತನ್ನ ಬಗ್ಗೆ ಅಸೂಯೆಪಟ್ಟುಕೊಂಡವರೆಲ್ಲಾ ನಾಳೆ ಒಂದು ಲೋಟ ಪಾಯಸ ಕುಡಿಯುತ್ತಾರೆ. ಇವಳಿಗಾದರೂ ಎಷ್ಟು ಕೊಬ್ಬು!  ನನ್ನ ಅವಸ್ಥೆ ನೋಡಿ ಕಿಚಾಯಿಸಿದರೂ, ಪಾಪ ಗಂಡನ ಈ ಅವಸ್ಥೆಗೆ ಏನು ಕಾರಣವೆಂದು ಒಂದು ಮಾತು ಕೂಡ ಕೇಳಲಿಲ್ಲ. ಈಗ ತಾನು ಬಾಗಿಲು ಹಾಕಿಕೊಂಡಿದ್ದರು ಕೂಡ ಗಮನವೇ ಕೊಡದೆ ಆರಾಮವಾಗಲಿ ಹೊರ ಕೋಣೆಯಲ್ಲಿ ಕುಳಿತು ಯಾವುದೋ ದರಿದ್ರ ಧಾರಾವಾಹಿಯನ್ನೇ ನೋಡುತ್ತಿದ್ದಾಳೆ. ನನ್ನ ಪರಿಸ್ಥಿತಿಯನ್ನು ನೆನೆಸಿಕೊಂಡು ಸಿಟ್ಟು ನೆತ್ತಿಗೇರಿ ದವಡೆಯನ್ನು ಬಿಗಿಯಾಗಿ ಕಚ್ಚಿಕೊಳ್ಳಲು ಮತ್ತೆರಡು ಹಲ್ಲು ಮುರಿದ ಶಬ್ದ ಬಾಯಿಯಿಂದ ಬಂತು. ಆಕಾಶವೇ ಕಳಚಿ ಬಿದ್ದಂತಾಗಿ ಹಾಸಿಗೆಯ ಮೇಲೆ ಕುಸಿದೆ. ಶೂನ್ಯದತ್ತ ದೃಷ್ಟಿ ಬೀರಿ ಕುಳಿತಿದ್ದವನ ತಲೆಗೆ ಕೂಡಲೇ ಆ ಬಾಟಲಿಯಲ್ಲಿ ನೋಡಿದ್ದ ಕಪ್ಪು ಅಕ್ಷರದಲ್ಲಿ ಚಿಕ್ಕದಾಗಿ ಬರೆದಿದ್ದ ಹೆಸರು ನೆನಪಿಗೆ ಬಂತು. “ಸೋಡಿಯಂ ಹೈಪೋ ಕ್ಲೋರೈಟ್”. ಹೆಚ್ಚೇನೂ ತಡಮಾಡದೆ ಕಂಪ್ಯೂಟರ್ ತೆರೆದು ಅಂತರ್ಜಾಲದಲ್ಲಿ ಅದರ ಬಗ್ಗೆ ಜಾಲಾಡಿದಾಗ ತಿಳಿದಿದ್ದೇನೆಂದರೆ, ಈ ರಾಸಾಯನಿಕವನ್ನು ಹಲ್ಲಿನ ಕಲೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಬಳಸುವ ದ್ರವದಲ್ಲಿ ಅದರ ಪ್ರಮಾಣ 0.5 % ಗಿಂತ ಮೀರುತ್ತಾ ಹೋದಂತೆ ಅದು ವ್ಯತಿರಿಕ್ತ ಪರಿಣಾಮ ಬೀರಲು ತೊಡಗುತ್ತದೆ. ಹೆಚ್ಚು ಪ್ರಬಲವಾದ ಪ್ರಮಾಣದಲ್ಲಿ ಅದನ್ನು ಬಳಸಿದರೆ ಹಲ್ಲಿನ ಗಡಸುತನ ಜಾಸ್ತಿಯಾಗಿ, ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ನಿಧಾನಕ್ಕೆ ಕಳೆದುಕೊಳ್ಳುತ್ತದೆ ಎಂದು. ಹೆಚ್ಚೆಚ್ಚು ಓದುತ್ತ ಹೋದಂತೆ, ಆ ಡೇರೆಯ ಕಳ್ಳ ಪಂಡಿತ ತನಗೆ ಅತಿ ಬೇಗನೆ ಪರಿಣಾಮ ತೋರುವಂತೆ ಮಾಡಲು ಅವೈಜ್ಞಾನಿಕ ರೀತಿಯಲ್ಲಿ ಈ ದ್ರಾವಣವನ್ನು ತಯಾರಿಸಿಕೊಟ್ಟು ವಂಚಿಸಿದ್ದಾನೆ ಎಂದು ತಿಳಿದು ರಕ್ತ ಕೊತ ಕೊತನೆ ಕುದಿಯಹತ್ತಿತು.

————————————————————————————————————–

ಹೊರಗಿನ ಕೋಣೆಯಿಂದ ಟಿವಿ ಒಮ್ಮೆ ಧಾರಾವಾಹಿಯ ಹೆಸರನ್ನು ಗಟ್ಟಿಯಾಗಿ ಅರಚಿಕೊಂಡಿತು. “ಛೆ ಈ ಧಾರಾವಾಹಿಯಲ್ಲಿ ಜಾಹಿರಾತುಗಳ ಹಾವಳಿ ಅತಿಯಾಯಿತಪ್ಪ” ಆಕೆ ತನ್ನಲ್ಲೇ ವಟಗುಟ್ಟುತ್ತ ಅಡುಗೆಮನೆಯ ಕಡೆಗೆ ನಡೆದು ಹೋದಳು.
“ಶ್ರೀ ಭಗವಾನ್ ಪೆರುಮಾಳ್ ಜ್ಯೋತಿಷಿಗಳು.. ನಿಮ್ಮ ಹಸ್ತ ರೇಖೆ, ಜಾತಕ, ಫೋಟೋ ನೋಡಿ ನಿಮ್ಮ ಸಂಪೂರ್ಣ ಭವಿಷ್ಯವನ್ನು ತಿಳಿಸುತ್ತಾರೆ… ಅಷ್ಟಮಂಡಲ, ಅಷ್ಟ ದಿಗ್ಬಂಧನ ಇತ್ಯಾದಿ ಪೂಜಾವಿಧಾನಗಳಿಂದ ಶಕ್ತಿ ದೇವತೆಗಳನ್ನು ಒಲಿಸಿಕೊಂಡು ನಿಮ್ಮೆಲ್ಲ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರದಲ್ಲಿ ಲಾಭ ನಷ್ಟ, ಆರೋಗ್ಯ, ಸತಿ ಪತಿ ಕಲಹ, ಪ್ರೇಮ ವಿಚಾರ ಹಾಗು ಇನ್ಯಾವುದೇ ಗುಪ್ತ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು.. ವಿಶೇಷ ಸೂಚನೆ..” ಟಿವಿ ಪರದೆ ಮೇಲೆ ರೇಷ್ಮೆ ಸೀರೆಯುಟ್ಟುಕೊಂಡ ಮಹಿಳೆ ನಗುಮುಖದೊಂದಿಗೆ ಮಾತನಾಡುತ್ತ ಹೋಗುತ್ತಿದ್ದಳು.
ದಢಾರೆಂದು ಕೋಣೆಯ ಬಾಗಿಲು ತೆರೆದ ಶಬ್ದ ಕೇಳಿದ ಮರುಕ್ಷಣವೇ ಗಾಜು ಪುಡಿ ಪುಡಿಯಾದಂಥ ಭೀಕರ ಶಬ್ದ ಕೇಳಿ, ಒಂದು ಗಳಿಗೆಯಲ್ಲಿ ಮನೆಯಿಡೀ ನಿಶ್ಯಬ್ದವಾಯಿತು.
ಅಡುಗೆಮನೆಯಿಂದ ಓಡಿ ಹೊರಬಂದ ಆಕೆ, ಹೊರ ಕೋಣೆಯ ದೃಶ್ಯಾವಳಿಯಯನ್ನು ನೋಡಿ ದಿಗ್ಭ್ರಮೆಯಿಂದ ಅಲ್ಲೇ ನಿಂತು ಬಿಟ್ಟಳು.
ಸಿಟ್ಟು ತಾರಕಕ್ಕೇರಿ ಥರ ಥರನೇ ನಡುಗುತ್ತಿದ್ದ ಗಂಗಾಧರನ ಮುಂದೆ ಟಿವಿಯ ಪರದೆಯ ಗಾಜು ನುಚ್ಚು ನೂರಾಗಿ ಬಿದ್ದಿತ್ತು.
ಚೂರು ಚೂರಾಗಿ ಬಿದ್ದಿದ್ದ ಗಾಜಿನ ತುಂಡುಗಳು ಗಂಗಾಧರನ ಹಲ್ಲಿನ ತುಂಡಾದ ಚೂರಿನಂತೆ ತೋರಿ ಆತನನ್ನು ಮತ್ತಷ್ಟು ಕೆಣಕಿದವು.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)