ಕಿಮ್ಮತ್ತು

ಚಿಕ್ಕಂದಿನಲ್ಲಿ, ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪಾಠಗಳ ಅಧ್ಯಾಯಗಳಲ್ಲಿ, ನಮ್ಮ ದೇಶ ಬೇರೆ ದೇಶಗಳಿಗಿಂತ ಏಕೆ ವಿಭಿನ್ನ ಎಂಬ ವಿಷಯ ಬಂದಾಗ ಮೊದಲು ಬಿಂಬಿಸುತ್ತಿದ್ದ ವಿಚಾರವೆಂದರೆ, ನಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ದೇಶ ಏಕತೆಯಿಂದ ಹೇಗೆ ಮುನ್ನಡೆಯುತ್ತಿದೆ ಎಂಬುವುದು. ಬಹುಶಃ ನಮ್ಮನ್ನು ಹೊಗಳಿಕೊಳ್ಳಲು ಬೇರೆ ಯಾವ ಮಹತ್ತರ ಸಾಧನೆ ಕೂಡ ನಮ್ಮ ದೇಶ ಆಗ ಮಾಡಿರಲಿಲ್ಲವೋ ಅಥವಾ ನಿಜವಾಗಿಯೂ ವೈವಿಧ್ಯದೊಳಗೆ ಏಕತೆ ಇತ್ತೋ ತಿಳಿಯದು. ಅಂದು ನಮಗೆ ಏಕತೆಯ ಪಾಠ ಮಾಡಿದ ಅಧ್ಯಾಪಕರೇ ಅಥವಾ ಅವರ ಸ್ಥಾನದಲ್ಲಿ ಇದ್ದವರೇ ಇಂದು ಹಠಾತ್ತನೆ ಹುಣಸೆ ಮರದಡಿ ಕುಳಿತು ಜ್ಞಾನೋದಯವಾದವರಂತೆ, ವಿಭಜನೆಯನ್ನು ವೈಭವೀಕರಿಸುವ, ಆ ಮೂಲಕ, ತಕ್ಕ ಮಟ್ಟಿಗೆ ತಟಸ್ಥ, ಉದಾಸೀನದಲ್ಲೇ ನಡೆಯುತ್ತಿರುವ ದೇಶವನ್ನು ಅಗೋಚರ ಶಕ್ತಿಗಳ ಆತಂಕಗಳಿಂದ ‘ರಕ್ಷಿಸುವ’ ಹೊಣೆ ಹೊತ್ತು, ಮತ್ತಷ್ಟು ವಿಭಜಿಸುವ ಸಂದೇಶಗಳನ್ನು ಸಿಕ್ಕ ಸಿಕ್ಕಲ್ಲಿ ಕಾರುತ್ತಾ ಬರುತ್ತಿರುವುದು ಸೋಜಿಗದ ಹಾಗೂ ವಿಪರ್ಯಾಸದ ಸಂಗತಿ.

ಆದರೆ ಇಲ್ಲಿ ಈಗ ಹೇಳ ಹೊರಟಿರುವ ಏಕತೆಯ ವಿಚಾರ ಜಾತಿಗಳ ಅಥವಾ ಸಂಸ್ಕೃತಿಗಳ ಬಗ್ಗೆಯಾಗಲಿ ಸಂಬಂಧಿಸಿದ್ದು ಅಲ್ಲ. ಇಲ್ಲಿ ಈಗ ಪ್ರಸ್ತಾಪಿಸುತ್ತಿರುವುದು, ದೇಶದ ವಿಚಾರಧಾರೆಯ ಏಕತೆಯ ಬಗ್ಗೆ. ನಮ್ಮ ದೇಶ, ವಿವಿಧ ಸನ್ನಿವೇಶಗಳಲ್ಲಿ ಸ್ಥಿರವಾದ, ಏಕರೂಪದ ಒಂದು ಆಲೋಚನಾಕ್ರಮಕ್ಕೆ ಬದ್ಧವಾಗಿರುವಲ್ಲಿ ಹೇಗೆ ಸೋತಿದೆ ಎಂಬುದರ ಬಗ್ಗೆ ಒಂದು ಅನಾವಶ್ಯಕ ಚಿಂತನೆ ಅಷ್ಟೇ.

ದಿನಬೆಳಿಗ್ಗೆ ದಿನಪತ್ರಿಕೆ ತೆರೆದೊಡನೆಯೇ ಜಾಹೀರಾತುಗಳ ಮಧ್ಯೆ ಹುಡುಕಿ ಕಂಡರೆ ಕೆಲ ಅಚ್ಚರಿಯ ಸಂಗತಿಗಳು ಗೋಚರವಾಗುತ್ತವೆ. ಎಲ್ಲೋ ಒಂದು ಕಡೆ, ಯಾವನೋ ಸ್ವಾಮೀಜಿಯ ದರ್ಶನಕ್ಕೆ ಹೋಗಿ, ಆತನ ಕಾಲಿನ ಧೂಳನ್ನು ಸಂಗ್ರಹಿಸುವ ಮೂಲಕ ಪುಣ್ಯಸಂಪಾದನೆಯ ವ್ಯರ್ಥ ಪ್ರಯತ್ನದಲ್ಲಿ, ನೂರಾರು ಮಹಿಳೆಯರು ಕಾಲ್ತುಳಿತಕ್ಕೆ ಸಿಕ್ಕಿ ಸಾಯುತ್ತಾರೆ. ಇನ್ನೆಲ್ಲೋ, ಸರಿಯಾಗಿ ವೈದ್ಯಕೀಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸದ ಔಷಧಿ ಸೇವಿಸಿ, ಹಲವಾರು ಬಾಣಂತಿಯರು ಅಸುನೀಗುತ್ತಾರೆ. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಆಮ್ಲಜನಕವಿಲ್ಲದೆ ನೂರಾರು ಮಕ್ಕಳು ಪ್ರಪಂಚ ನೋಡುವ ಮೊದಲೇ ಕೊನೆ ಉಸಿರೆಳೆದಿರುತ್ತವೆ. ಈ ದೇಶದಲ್ಲಿ ಜೀವಗಳಿಗೆ ಮೂರು ಕಾಸಿನ ಬೆಲೆಯಿಲ್ಲ ಎಂದು ಪದೇ ಪದೇ ಸ್ಪಷ್ಟೀಕರಿಸುವ ಸುದ್ದಿಗಳನ್ನು, ಕಾಫಿಯ ಜೊತೆ ಅದ್ದಿದ ಬಿಸ್ಕತ್ತಿನಂತೆ ನುಂಗಿ ನಿರಾಸೆಗೊಳ್ಳುವ ಹೊತ್ತಲ್ಲೇ ಮಾಯಕವೆಂಬಂತೆ ಕೆಲವು ಆಶಾದಾಯಕವೆನಿಸುವ ವಾರ್ತೆಗಳು ಸಹ ಅಲ್ಲಲ್ಲಿ ತೆರೆಗಳಂತೆ ಅಪ್ಪಳಿಸುತ್ತವೆ. ಯಾವುದೋ ಒಂದು ಅಗೋಚರ ಭರವಸೆ ಮತ್ತೆ ಕುಪ್ಪಳಿಸುತ್ತದೆ.

ಯಾರೋ ಇಳಿವಯಸ್ಸಿನ ಮುದುಕನ ಜೀವ ಉಳಿಸುವ ಸಲುವಾಗಿ, ಎಲ್ಲಿಂದಲೋ ಹೃದಯವನ್ನು ತಂದು ಜೋಡಿಸಿ ಕಸಿ ಮಾಡಲಾಗುತ್ತದೆ. ಈ ಪ್ರಕ್ರಿಯೆ ಸರಾಗವಾಗಿ ಸಾಗಲಿ ಎಂದು, ಬಿಸಿಲಿನ ಬೇಗೆಯಲ್ಲಿ, ಹೊಗೆ ನುಂಗಿಕೊಂಡು ರಸ್ತೆಯ ಮೇಲೆ ಜಾತ್ರೆಯಂತೆ ನೆರೆದಿರುವ ಸಾವಿರಾರು ಜನ ಸವಾರರನ್ನು ತಡೆ ಹಿಡಿದು, ambulance ತುರ್ತಾಗಿ ಓಡಲು ಅನುವು ಮಾಡಿ ಕೊಡಲಾಗುತ್ತದೆ. ಇನ್ಯಾವುದೋ ದೇಶದಲ್ಲಿ ಮಾಲೀಕನನ್ನೇ ಕೊಂದ ಭಾರತೀಯ ಮಹಿಳೆಗೆ ವಿಧಿಸಿರುವ ಮರಣದಂಡನೆಯಿಂದ ಆಕೆಯನ್ನು ರಕ್ಷಿಸಲು ಸರಕಾರ ಎಲ್ಲಾ ರಾಜತಾಂತ್ರಿಕ ಸಾಧ್ಯತೆಗಳನ್ನೂ ಅವಲೋಕಿಸುತ್ತಿರುತ್ತದೆ. ಬೋರ್ವೆಲ್ ಗುಂಡಿಯ ಒಳಗೆ ಬಿದ್ದ, ಅಲೆಮಾರಿ ಕೆಲಸಗಾರನ ಮಗುವನ್ನು ಹತ್ತಾರು ದಿನಗಳ ಕಾಲ ಹರಸಾಹಸ ಪಟ್ಟು ರಕ್ಷಿಸಲಾಗುತ್ತದೆ… ಹೀಗೆ ದಿನಕ್ಕೊಂದು ಅಚ್ಚರಿ… ದಿನಾ ಗೊಡ್ಡುಸುದ್ದಿಗಳ ನಡುವೆ ನೆಚ್ಚಿಕೊಳ್ಳಲು ಇರಲಿ ಎಂಬ ಉಪ್ಪಿನಕಾಯಿಯಂತೆ.

ಇಲ್ಲಿ ಸುದ್ದಿಗಳ ಹಾಗು ಜನರ ಪ್ರತಿಕ್ರಿಯೆಗಳ ವೈರುಧ್ಯ ಗಮನಿಸಿ. ಸಾವಿರಾರು ಜನ ಸತ್ತಿರುವಂಥ ಘಟನೆಗಳಲ್ಲಿ ನಾವು ಬರೀ ಸಂಖ್ಯೆಗಳನ್ನು ಮಾತ್ರ ಗಮನಿಸಿ ನಿಟ್ಟುಸಿರು ಬಿಟ್ಟಿರುತ್ತೇವೆ. ಅಬ್ಬಾ ೨೩೨ ಮಹಿಳೆಯರು ಸ್ಥಳದಲ್ಲೇ ಸಾವು ಎಂದು ಅಚ್ಚರಿ ಪಟ್ಟು ಸುಮ್ಮನಾಗುತ್ತೇವೆ. ಪಕ್ಕದಲ್ಲೇ ಪ್ರಕಟಗೊಂಡಿರುವ, ‘ರಸ್ತೆ ಅಪಘಾತದಲ್ಲಿ 12 ಮಂದಿಯ ಮರಣ’ ಎಂಬ ಸುದ್ದಿ ಸಪ್ಪೆಯಾಗಿ ತೋರುತ್ತದೆ. ಆದರೂ ಇರಲಿ ಎಂಬಂತೆ ಜೀವನದ ನಶ್ವರತೆಯ ಬಗ್ಗೆ ವೈರಾಗ್ಯ ತಾಳುತ್ತೇವೆ. ಮರುಕ್ಷಣದಲ್ಲಿ ತರಕಾರಿ ಮಾರುವವನ ಜೊತೆ ಕೊತ್ತಂಬರಿ ಸೊಪ್ಪನ್ನು ವಾದಮಾಡಿ ಉಚಿತವಾಗಿ ಗಿಟ್ಟಿಸಿಕೊಳ್ಳುತ್ತೇವೆ. ಒಳಬಂದು instagram reelsನಲ್ಲಿ ಕುಣಿಯುತ್ತಿರುವ ಹುಡುಗಿಯ ಸೊಂಟ ನೋಡಿ ನಮ್ಮ ಬಗೆಗೆ ಕೊಂಚ ಕೊರಗಿಕೊಳ್ಳುತ್ತೇವೆ.

ಇನ್ನೊಂದೆಡೆ ಒಬ್ಬ ಮನುಷ್ಯನ ಹೃದಯ ಉಳಿದ ಬಗ್ಗೆ ಸಂಭ್ರಮಿಸುತ್ತೇವೆ, ಹುಡುಗಿಯನ್ನು ಅತ್ಯಾಚಾರ ಮಾಡಿದ ಆರೋಪಿಗಳನ್ನು ದಾರಿ ಮಧ್ಯ ಗುಂಡಿಕ್ಕಿ ಸಾಯಿಸಿದಾಗ ಡೋಲು ಬಾರಿಸಿ ಸಂಭ್ರಮಿಸುತ್ತೇವೆ. ಆ ಮೂಲಕ ಇನ್ನೂ ಜೀವಂತವಿದ್ದಿರಬಹುದಾದ ಮಾನವೀಯತೆಯ ಹರಿಕಾರರಾಗುವ ಕನಸು ಕಾಣುತ್ತೇವೆ. ಇಲ್ಲಿ ನಿಜವಾಗಿ ನಾವು ಯಾರು? ನಿರ್ಭಾವುಕವಾಗಿ ಜೀವನ ಸವೆಸುತ್ತಿರುವ ಕುರಿಗಳ ಮಂದೆಯೇ ಅಥವಾ ನಮ್ಮ ಸುತ್ತಲಿನವರು ಅನುಭವಿಸುವ ಚಿಕ್ಕ ಚಿಕ್ಕ ನೋವುಗಳಿಗೆ ಸ್ಪಂದಿಸುವ ಭಾವನಾತ್ಮಕ ಮಂದಿಯೇ? ಒಬ್ಬನ ಜೀವ ಉಳಿದಾಗ ಸಂಭ್ರಮಿಸುವ ಮನಸ್ಸು ನಿಜವಾಗಿ ಹುಡುಕುತ್ತಿರುವುದು 160 ಕೋಟಿ ಸಮಜೀವಿಗಳ ನಡುವೆ ತನ್ನದೆಂಬ ಅಸ್ಮಿತೆಯನ್ನೇ? ತನಗೆ ಕೆಡುಕಾದಾಗ ರಕ್ಷಿಸಲ್ಪಡುವೆ ಎಂಬ ಸುಳ್ಳು ಭರವಸೆಯನ್ನೇ?

ಹೆಚ್ಚಿನ ಬಾರಿ ಇಂಥ ಸುದ್ದಿಗಳು ವೈಭವೀಕರಣಗೊಂಡಾಗ ಅದರ ಹಿಂದಿನ ಮೂಲ ಉದ್ದೇಶವನ್ನು ಗಮನಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. 10 ದಿನಗಳ ಕಾಲ ಕಾರ್ಯಾಚರಣೆ ಮಾಡಿ ಬೋರ್ವೆಲ್ ಕೊಳವೆಯಿಂದ ಮಗುವನ್ನು ಉಳಿಸುವ ಮೂಲಕ ಸರ್ಕಾರ, ಪ್ರಜೆಗಳ ಬಗ್ಗೆ ತನಗಿಲ್ಲದ ಹುಸಿ ಕಾಳಜಿ ಪ್ರದರ್ಶಿಸುತ್ತಿರಬಹುದು. ಆ ಘಟನೆಯ ಹಿಂದಿನ ಕಾರಣ, ಸಂಬಂಧಪಟ್ಟವರ ನಿರ್ಲಕ್ಷ್ಯಗಳನ್ನು ಮರೆಮಾಚಲಾಗುತ್ತಿರಬಹದು. ಅಷ್ಟೊಂದು ಕಾಲ ಹಾಗು ಧನ ವ್ಯಯಿಸಿ ರಕ್ಷಿಸಿದ ಮಗುವಿನ ಭವಿಷ್ಯ ಏನಾಗಬಹುದು ಎಂಬ ಆಸಕ್ತಿ ನಮಗ್ಯಾರಿಗಂತೂ ಮೊದಲೇ ಇಲ್ಲ. ಹೊಸ ಹೃದಯ ಕೊಟ್ಟು ಪುನಃ ಜೀವನವನ್ನು ವೃದ್ಧಿಸಿಕೊಂಡಿರುವಾತನ ಆಸ್ಪತ್ರೆಗೆ ಒಂದು ಪ್ರಶಂಸೆಯ ಪದಕ ದೊರೆತಿರುತ್ತದೆ. ಸ್ಪೆಷಲ್ ವಾರ್ಡಿನ ಬಾಡಿಗೆ ಇನ್ನೆರಡು ಸಾವಿರ ಜಾಸ್ತಿಯಾಗಿರುತ್ತದೆ. ಮನೆಗೆ ಮರಳಿದ ಆತ ಸಮಾಜಕ್ಕೆ ಉಪಯೋಗಿಯಾಗಿ ಹೊಸ ರೀತಿಯಲ್ಲಿ ಬದುಕುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂದು ತಿಳಿಯುವ ಆಸಕ್ತಿ ನಮಗಿದೆಯೇ? ಇಲ್ಲದಿದ್ದಲ್ಲಿ ನಾವು ಇಂತಹ ಘಟನೆಗಳಿಂದ ಸುಖಾ ಸುಮ್ಮನೆ ಸಂಭ್ರಮಿಸುವ ಹಿಂದಿನ ಕಾರಣವಾದರು ಏನು?

ಮಹಾನಗರಗಳಲ್ಲಂತೂ ಮನಸ್ಸುಗಳು ತಲ್ಲಣಗೊಳ್ಳಲು ಕೂಡ ಸಮಯದ ಅಭಾವ. ಮಾಲಿನ ಮೂರನೇ ಮಹಡಿಯ ಮೇಲಿಂದ ಆತ್ಮಹತ್ಯೆ ಮಾಡಿಕೊಂಡವನು ಕಾರಿದ ರಕ್ತ ಸೋಕಿದ ನೆಲ, ಅರ್ಧ ಗಂಟೆಯೊಳಗೆ ಸಹಜ ಸ್ಥಿತಿಗೆ ಮರಳಿರುತ್ತದೆ, ಮತ್ತೆ ಹೊಳೆಯುತ್ತಿರುತ್ತದೆ. ಟ್ರಾಫಿಕ್ ಸಿಗ್ನಲ್ ಅಲ್ಲಿ ಸಿಕ್ಕಿ ಹಾಕಿಕೊಂಡ ಸವಾರನಿಗೆ ಹಿಂದೆ ದೂರದಲ್ಲೆಲ್ಲೋ ಕೇಳುವ ambulance ಸೈರನ್ ಬೇಗ ಬೇಗನೆ ಮನೆ ತಲುಪುವ ಒಂದು ಆಶಾಕಿರಣವಷ್ಟೇ. ಆ ಕ್ಷಣಕ್ಕೆ ಆತ, ಸಿಕ್ಕಿದ ಅವಕಾಶ ಮತ್ತೆಲ್ಲಿ ಕೈ ತಪ್ಪುವುದೇನೋ ಎಂಬಂತೆ ಅದರ ಹಿಂದೆಯೇ ಇನ್ನೇನು ಹೋಗಿ ಜಪ್ಪಿಯೇ ಬಿಡುತ್ತೇವೆ ಎಂಬಂತೆ ಚಲಾಯಿಸುವ ವೀರಾಣು ಅಷ್ಟೇ. ಇಲ್ಲಿ ಮನಸ್ಸುಗಳು ಸಾವಿಗೆ, ನೋವಿಗೆ ಮರುಗುವುದು ಕೂಡ ಬರೀ ಕ್ಷಣಿಕ. ಆಗಲೇ ಇನ್ನೊಂದು ಹೊಸ ಸವಾಲು ಹಿಂದಿನಿಂದ ನಮ್ಮನ್ನು ಅಪ್ರಯತ್ನಪೂರ್ವಕವಾಗಿ ಮುಂದಕ್ಕೆ ದಬ್ಬುತ್ತಿರುತ್ತದೆ. ಬೋಗಿ ಹತ್ತುವ ಸಲುವಾಗಿ ಲೋಕಲ್ ರೈಲಿನ ಬಾಗಿಲಿನ ಮುಂದೆ ಕ್ಷಣ ಮಾತ್ರ ನಿಂತು ಆಲೋಚಿಸುತ್ತಿರುವ, ಮುಂಬಯಿ ಶಹರಕ್ಕೆ ಹೊಸದಾದ ಅಮಾಯಕನನ್ನು ಒಳ ತಳ್ಳುವ, ಅವಿಶ್ರಾಂತ ಜನಸ್ತೋಮದ ಥರ.

Add a Comment

Your email address will not be published. Required fields are marked *

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)