ಅವಧಾನರಹಿತನ ಗೊಣಗಾಟಗಳು

YouTube ನಲ್ಲಿ ಒಂದು ವಿಷಯ ಹುಡುಕಲು ಹೋಗಿ ಇನ್ನ್ಯಾವುದೋ ಸಿಕ್ಕಿ ಕೂತಲ್ಲಿಯೇ ಒಂದೆರಡು ಗಂಟೆ ಕರಗುವ ಅನುಭವ ಎಲ್ಲರಿಗೂ ಇರಬಹುದು. ಅಂಥದ್ದೇ ಒಂದು ಸಂದರ್ಭದಲ್ಲಿ, ಕನ್ನಡದ ಪ್ರಭಾವಿ ಲೇಖಕರ, ಸಂಪನ್ಮೂಲ ವ್ಯಕ್ತಿಗಳ ಸಂದರ್ಶನ ಹುಡುಕಲು ಹೋದಾಗ ಶತಾವಧಾನಿ ಆರ್. ಗಣೇಶ್ ಅವರ ಕಾರ್ಯಕ್ರಮ ಕಣ್ಣಿಗೆ ಬಿದ್ದದ್ದು. ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮದ ಶೀರ್ಷಿಕೆ — “ಆಚರಣೆಗಳಲ್ಲಿ ತರ್ಕ ಹುಡುಕುವುದು ಹೇಗೆ.”
ಶತಾವಧಾನಿಗಳ ಬಗ್ಗೆ ಸಾಕಷ್ಟು ಕೇಳಿದ್ದೆ, ಅವರ ಮಾತುಗಳನ್ನು ನೋಡುವ ಸಂದರ್ಭ ಬಂದಿರಲಿಲ್ಲ. ಧಾರ್ಮಿಕ ಆಚರಣೆಗಳ ಬಗ್ಗೆ ಯಾವತ್ತಿನಿಂದ ಉಳಿದುಕೊಂಡಿರುವ ಹಲವಾರು ಪ್ರಶ್ನೆಗಳಿಗೆ ಕಡೆಗಾದರೂ ಉತ್ತರ ಸಿಗಬಹುದೆಂಬ ನಿರೀಕ್ಷೆಯಿಂದ ಕಾರ್ಯಕ್ರಮವನ್ನು ವೀಕ್ಷಿಸಿದೆ. ಸಂಪ್ರದಾಯಯಗಳ, ಆಚರಣೆಗಳ ಹಿಂದಿನ ಉದ್ದೇಶಗಳ ಬಗೆಗಾಗಲಿ, ಇಂದಿನ ಸಮಾಜದಲ್ಲಿ ಅವುಗಳ ಪ್ರಸ್ತುತತೆ ಬಗೆಗಾಗಲಿ ಅಷ್ಟೊಂದು ವಿಚಾರಗಳು ಹೊರಬಾರದಿದ್ದರೂ, ಶತಾವಧಾನಿಗಳು ಆಡಿದ ಕೆಲವು ಮಾತುಗಳು, ಇದ್ದ ಪ್ರಶ್ನೆಗಳಿಗೆ ಉತ್ತರ ಸೂಚಿಸುವ ಬದಲು ಅನೇಕ ಹೊಸ ಪ್ರಶ್ನೆಗಳನ್ನು ಮೂಡಿಸಿದವು. ಈ ಲೇಖನ, ಆ ಪ್ರಶ್ನೆಗಳನ್ನೇ ಕಲೆ ಹಾಕಿ, ಬರೆದು, ನನ್ನ ಸ್ವಂತ ಅಭಿಪ್ರಾಯದೊಂದಿಗೆ ಎಲ್ಲರ ಮುಂದಿಟ್ಟು ಉತ್ತರ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಬರೆದುದಷ್ಟೇ.

ತಾವು ಇವೆಲ್ಲವುಗಳನ್ನು ತಮ್ಮ ತಿಳುವಳಿಕೆಗಳಿಗೆ ಹೋಲಿಸಿಕೊಂಡು ಸುಸಂಸ್ಕೃತರ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಅಥವಾ ಇಡೀ ಲೇಖನವೇ ಒಬ್ಬ ಅವಧಾನರಹಿತನ ಗೊಣಗಾಟಗಳೆಂದುಕೊಂಡು ತಳ್ಳಿ ಹಾಕಬಹುದು. ಆಯ್ಕೆ ನಿಮ್ಮದು.

Video Link


ಶತಾವಧಾನಿಗಳು ಹೇಳುತ್ತಾರೆ,

ತರ್ಕ ಬೇಕು. ಎಲ್ಲಿವರೆಗೂ?
ನನ್ನ ಕೈಗೆ ಅನುಭವಕ್ಕೆ ಬರದಿರುವಂಥ ಸೂಕ್ಷ್ಮವಾದದ್ದು, ನನ್ನ ನಾಲಿಗೆಗೆ ಅನುಭವಕ್ಕೆ ಬರದೆ ಇರತಕ್ಕಂಥ ಸೂಕ್ಷ್ಮವಾದ ರುಚಿಗಳು , ನನ್ನ ಮೂಗಿನ ಅನುಭವಕ್ಕೆ ಬರದೆ ಇರತಕ್ಕಂಥ ಸೂಕ್ಷ್ಮವಾದ ಪರಿಮಳಗಳು ಯಾಕೆ ಬೇಕು
ನಮ್ಮ ಅನುಭವ ನಮಗೆ ಸಾಕು. ಹಾಗಾಗಿ ಒಂದು ಮಟ್ಟದ ತರ್ಕ ಬೇಕು ಅದು ಸಾಮಾನ್ಯಕ್ಕೆ ಸಾಕು.

ಈ ಚಾಣಾಕ್ಷ ಮಧ್ಯಮ ಮಾರ್ಗದ ಹೇಳಿಕೆಯ ಮೂಲಕ ಅವರು ಏಕಕಾಲದಲ್ಲಿ ಸನಾತನ ಧರ್ಮದ ಪ್ರತಿಯೊಂದು ಆಚರಣೆಯಲ್ಲೂ ವಿಜ್ಞಾನದ ಮೊಹರು ಹೊಡೆಯಲು ಹೊರಡುವ ಅತಿರೇಕಿಗಳನ್ನು ಹಾಗು ಮತ್ತೊಂದು ಕಡೆ ಆ ಆಚರಣೆಗಳಲ್ಲಿರುವ ಎಲ್ಲವನ್ನೂ ಗೇಲಿ ಮಾಡಿ ತಳ್ಳಿ ಹಾಕುವ ಅವಿವೇಕಿಗಳ ಗುಂಪನ್ನೂ ನಿರಾಕರಿಸುತ್ತಾರೆ.

ಅದಕ್ಕೆ ಉದಾಹರಣೆಯಾಗಿ ಬ್ರಾಹ್ಮಣರು ಊಟ ಮಾಡುವ ಮೊದಲು ಎಲೆಯ ಸುತ್ತ ನೀರು ಸಿಂಪಡಿಸಿ ಮಾಡುವ ಪರಿಷೇಚನೆಯ ಹಿಂದಿನ ಅರ್ಥವನ್ನು ಅವರು ಹೀಗೆ ವಿವರಿಸುತ್ತಾರೆ.

ಅದು ಇರುವೆ ಅಥವಾ ಕತ್ತೆ ಬರಬಾರದು ಎಂಬ ಕಾರಣಕ್ಕಾಗಿ ಮಾಡುವ ಕ್ರಿಯೆಯಲ್ಲ; ಆಹಾರ ದೊರಕಿಸಿದ ಜಗತ್ತಿಗೆ ನಾನು ಋಣಿಯಾಗಿದ್ದೇನೆ ಎಂದು ಒಪ್ಪಿಕೊಳ್ಳುವ ಸಂಕೇತಾತ್ಮಕ ಕ್ರಿಯೆ.

ಕೇಳಲು ಸರಿ ಹೌದು ಎನಿಸಿದರೂ ಕೂಡ ಮೂಡುವ ಮೊದಲ ಪ್ರಶ್ನೆಯೆಂದರೆ, ಈ ಋಣಭಾವದ ಆಚರಣೆ ಯಾಕೆ ಕೇವಲ ಸನಾತನ ಧರ್ಮದ ಒಂದು ವರ್ಗಕ್ಕಷ್ಟೇ ಸೀಮಿತವಾಯಿತು? ಅದೇ ಅಡುಗೆಯ ಹಿಂದೆ ಶ್ರಮ ಪಟ್ಟ ಮನೆ ಒಡತಿಗಾಗಲಿ ಇತರ ವರ್ಗದ ಸಹಧರ್ಮೀಯರಿಗಾಗಲಿ ಯಾಕೆ ಈ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸುವ ಹಕ್ಕನ್ನು ಕೈಗೆಟುಕದಂತೆ ಮಾಡಲಾಯಿತು? ವರ್ಗ ಹಾಗು ಲಿಂಗ ತಾರತಮ್ಯಗಳು ಈ ಚಿಕ್ಕ ಆಚರಣೆಯಲ್ಲೂ ಕೂಡ ವ್ಯಕ್ತವಾಗುವುದು ಎಷ್ಟು ಸರಿ? ಒಂದು ಧರ್ಮ ಪಾಲನೆ ಮಾಡುವ ಸರ್ವರಿಗೂ ಕನಿಷ್ಠ ಪಕ್ಷ ಕೃತಜ್ಞತಾ ಭಾವವನ್ನು ವ್ಯಕ್ತ ಪಡಿಸುವ ವಿಷಯದಲ್ಲಾದರೂ ಸಮಾನ ಹಕ್ಕು ಇರಬೇಡವೇ?


ಮುಂದೆ ಅವರು ಗ್ರಹಣದ ಆಚರಣೆಯ ವಿಷಯದಲ್ಲಿ ಹೇಳುತ್ತಾರೆ,

ಜಗತ್ಸಾಕ್ಷಿ ಕರ್ಮಸಾಕ್ಷಿಯಾದ ಸೂರ್ಯನನ್ನ ಕತ್ತಲೆ ಕ್ಷಣಕಾಲವಾದರೂ ಆವರಿಸತಲ್ಲ, ಸೂರ್ಯನ ಸಂಕಷ್ಟಕ್ಕೆ ನಾವು ಸ್ಪಂದಿಸಬೇಕು ಅನ್ನುವಂತದ್ದು ಗ್ರಹಣದ ಆಚರಣೆ. ಸೂರ್ಯ ಕತ್ತಲಲ್ಲಿ ಇದ್ದಾಗ ನಾನು ಮಜಾ ಉಡಾಯಿಸಬಾರದು ಅನ್ನುವ ಭಾವ ಇದು. ನಮಗೆ ಆತ್ಮೀಯರು, ಬೇಕಾದವರು ಮಂಕಾಗಿದ್ದಾಗ ಯಾಕೆ? ಏನು? ಎತ್ತ ಅಂತ ವಿಚಾರಿಸದೆ, ಕಾಳಜಿ ಮಾಡಿದೆ ನಾವು ಹಬ್ಬ ಮಾಡಬೇಕು ಮೋಜು ಮೇಜವಾನಿ ಮಾಡ್ತಾ ಇದ್ರೆ ಈ ಆತ್ಮವಿಸ್ತರಣ ಭಾವ ಜಗತ್ತಿನಲ್ಲಿ ಯಾವುದು?

ಇಲ್ಲಿ ರೂಪಕದ ಬಳಕೆ ಗಮನಿಸಿ.
ಹಲವು ವಾಗ್ಮಿಗಳಲ್ಲಿ ಕಂಡುಬರುವ ಸಾಮಾನ್ಯ ತಂತ್ರವೆಂದರೆ, ಒಂದು ವಿಚಾರವನ್ನು ಅದಕ್ಕೆ ಹೋಲುವ ಮತ್ತೊಂದು ರೂಪಕದ ಮೂಲಕ ಸರಳೀಕರಿಸುವುದು. ಕ್ಲಿಷ್ಟಕರವಾದ ವಿಚಾರಗಳನ್ನು ರೂಪಕಗಳ ಮೂಲಕ ವಿವರಿಸಿ ಸಾಮಾನ್ಯ ಜನರಿಗೆ ಅರ್ಥ ಮಾಡಿಸುವುದು ಸಾಮಾನ್ಯ ತಂತ್ರ. ಇಂತಹ ರೂಪಕಗಳಿಗಿರುವ ಮುಖ್ಯ ಅಪಾಯಗಳೆಂದರೆ, ಕೆಲವು ಬಾರಿ ಅವುಗಳ ಬಳಕೆ ಸ್ವಲ್ಪ ಆಚೆ ಈಚೆ ಆದರೂ ಕೂಡ, ಹೆಚ್ಚು ಆಳವಾಗಿ ವಿಚಾರ ಮಾಡದೆ ಇದ್ದಲ್ಲಿ ಶ್ರೋತೃಗಳ ಮೂಲ ವಿಚಾರದ ದಿಕ್ಕನ್ನೇ ತಪ್ಪಿಸಿಬಿಡುತ್ತವೆ.

ಗ್ರಹಣದ ಉದಾಹರಣೆಯನ್ನೇ ತೆಗೆದುಕೊಂಡರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ನಡೆಯುವ ಖಗೋಳಿಕ ಪ್ರಕ್ರಿಯೆಗೂ, ಮನೆಯ ಹಿರಿಯ ವ್ಯಕ್ತಿಯ ಅನಾರೋಗ್ಯಕ್ಕೂ ಇಂದಿನ ಕಾಲದಲ್ಲಿ ಯಾವ ಸಂಬಂಧವಿದೆ?

ವಿಜ್ಞಾನ, ಗ್ರಹಣದ ಪ್ರಕ್ರಿಯೆಯನ್ನು ವಿವರಿಸಿದ್ದಕ್ಕಿಂತ ಮೊದಲಿನ ಕಾಲದಲ್ಲಾಗಿದ್ದರೆ ಇಂತಹ ಆಚರಣೆಗಳಿಗೆ ಅಜ್ಞಾನದ ಒಂದು ಕಾರಣವನ್ನಾದರೂ ನೀಡಬಹುದಿತ್ತು. ಆದರೆ ಇಂದು ಸೂರ್ಯನಿಗೆ ಅಡ್ಡ ಬಂದ ಚಂದ್ರನ ಮೇಲೆಯೇ ಇಳಿದು, ಅಧ್ಯಯನ ಮಾಡಿರುವಂತಹ ಸಮಯದಲ್ಲಿ, ಗ್ರಹಣವೆಂದರೆ ಸೂರ್ಯನ ಸಂಕಷ್ಟವೆಂದು ಭಾವಿಸುವುದು, ಮಧ್ಯಾಹ್ನ ಹೊಟ್ಟೆತುಂಬಾ ಊಟ ಮಾಡಿ ಮಲಗಿದ ಮನೆ ಹಿರಿಯನನ್ನು ನೋಡಿ , ಆತ ನಿದ್ರಿಸುತ್ತಿರುವುದು ಗೊತ್ತಿದ್ದೂ ಕೂಡ “ಸತ್ತೇ ಹೋದ” ಎಂದು ಶೋಕಾಚರಣೆ ಮಾಡುವಷ್ಟೇ ವಿಚಿತ್ರವಾದ ಮೌಢ್ಯವಾಗುತ್ತದೆ.

ಶತಾವಧಾನಿಗಳೇ ಹೇಳುವಂತೆ,

ಆಚರಣೆಯ ಸಂಕೇತ ಮುಖ್ಯ

ಹೌದು. ಆ ಸಂಕೇತ ಇಂದಿನ ಜ್ಞಾನಕ್ಕೆ ಅನುಗುಣವಾಗಿ ಹೊಸ ರೂಪ ಪಡೆದರೆ ಮಾತ್ರ ಅದಕ್ಕೆ ಗೌರವ. ಇಲ್ಲವಾದರೆ ಅದು ನಿಂತ ಗಡಿಯಾರ ಅಷ್ಟೇ. ಈ ದ್ವಂದ್ವ ಅವರ ಮಾತಿನ ತುಂಬ ಹರಡಿಕೊಂಡಿದೆ.

ಗ್ರಹಣದ ಪ್ರಕ್ರಿಯೆಯ ಹಿನ್ನೆಲೆ ತಿಳಿದು ಕೂಡ ಹಳೆಯ ಸಂಪ್ರದಾಯವನ್ನೇ ಆಚರಿಸಿಕೊಂಡು ಬರಬೇಕೆಂದು ನಿರೀಕ್ಷಿಸುವುದನ್ನು ರೂಪಕ ಪ್ರಿಯರಿಗೆ ಅರ್ಥವಾಗುವಂತೆ ಹೇಳಬೇಕೆಂದರೆ, ತೀರಿ ಹೋದ ಹಿರಿಯರು, ಮನೆಯಲ್ಲಿ ನೇತು ಹಾಕಿರುವ ಫೋಟೋದಲ್ಲಿ ಇರುವುದೇ ಸೂಕ್ತ. ತೀರಿ ಹೋದರೆಂದು ತಿಳಿದು ಕೂಡ ಒಪ್ಪಿಕೊಳ್ಳಲು ತಯಾರಿಲ್ಲದೆ, ಅವರ ನಿಜ ರೂಪವನ್ನೇ ಹೋಲುವ ಮೂರ್ತಿಗಳನ್ನು ರಚಿಸಿ ಮನೆಯ ವಿವಿಧ ಕೋಣೆಗಳಲ್ಲಿ ಇರಿಸಿ, ಅವರು ಇನ್ನೂ ನಮ್ಮ ಮಧ್ಯೆಯೇ ಬದುಕಿದ್ದಾರೆ ಎಂದು ಭ್ರಮಿಸಿಕೊಳ್ಳುವುದು ಅಷ್ಟೇ ಆಭಾಸವಷ್ಟೇ.

ಇನ್ನೊಂದು ಕಡೆ ಅವರು,

ಪ್ರಾಚೀನ ಭಾರತದಲ್ಲಿ ವರ್ಷಪೂರ್ತಿ ಹಬ್ಬಗಳಿದ್ದವು,
ನಾವು ಅವನ್ನು ಕಳೆದುಕೊಂಡಿದ್ದೇವೆ .

ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಆದರೆ ಪ್ರಾಚೀನ ಕಾಲದ ಸಂಪೂರ್ಣ ಆಯಾಮ ಹೇಗಿತ್ತು?
ಮನುಷ್ಯನು ಯಾವತ್ತಿಗೂ ಸಮಾಜಜೀವಿ. ತನ್ನಂಥವರ ಜೊತೆ ಬೆರೆಯುವುದು, ಬೇರೆಯವರ ಜೀವನದ ಜೊತೆ ತನ್ನನ್ನು ಹೋಲಿಸಿಕೊಳ್ಳುವುದು, ಸಮಾಜದ ಆಗುಹೋಗುಗಳ ಬಗ್ಗೆ ಒಂದು ಥರದ ವಿಚಿತ್ರ ಆಸಕ್ತಿ ಇಟ್ಟುಕೊಳ್ಳುವುದು. ಇತರರ ಜೊತೆ ತಾನು ಸಂಪಾದಿಸಿದ ಜ್ಞಾನದ ಬಗ್ಗೆ ಕಾಡು ಹರಟೆ ಹೊಡೆಯುವುದು, ಇವೆಲ್ಲವೂ ಒಂದು ರೀತಿಯ ಮನರಂಜನೆಯ ರೂಪಗಳೇ. ಅಂದಿಗೂ, ಇಂದಿಗೂ ಮನರಂಜನೆ ಮನುಷ್ಯನ ಮೂಲ ಅವಶ್ಯಕತೆ. ಹಿಂದಿನ ಕಾಲದ ಹೆಚ್ಚಿನ ಹಬ್ಬಗಳ ಆಚರಣೆಗಳ ಉದ್ದೇಶವೇ ಸಮಾಜದೊಡನೆ ಬೆರೆಯುವುದು ಆಗಿದ್ದಿರಬಹುದು, ಆ ಮೂಲಕ ವೈವಿಧ್ಯರಹಿತ ಜೀವನಕ್ರಮದಲ್ಲಿ ಸ್ವಲ್ಪವಾದರೂ ಬದಲಾವಣೆಯ, ರಂಜನೆಯ ಗಾಳಿ ತರಿಸುವ ಉದ್ದೇಶವಿರಬಹುದು. ಮನೆಯವರೆಲ್ಲ ಒಟ್ಟು ಸೇರಿ ಸಮಯ ಕಳೆಯುವ ಅವಕಾಶಗಳು ಕೂಡ ಆಗಿದ್ದಿರಬಹುದು.

ಇಂದು ಅಂತಹ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಹೊಸ ದಾರಿಗಳು ಹುಟ್ಟಿಕೊಂಡಿವೆ. ಹಬ್ಬ ಹರಿದಿನಗಳ ಆಚರಣೆಗಳು ಕಡಿಮೆಯಾದರೂ, ಕುಟುಂಬ ಬೆಸೆಯುವ ಬೇರೆ ಹೊಸ ಆಚರಣೆಗಳು ಹುಟ್ಟಿವೆ. ಇಂದಿನ ಜನಾಂಗ ಗೆಳೆಯರ, ಮನೆಯವರ ಜೊತೆ ಪ್ರವಾಸ ಹೋಗುತ್ತದೆ, ವಾರಾಂತ್ಯದಲ್ಲಿ ಯಾವುದೋ ಹೋಟೆಲಿಗೆ ಊಟಕ್ಕೆ ಹೋಗುತ್ತದೆ. ಇವುಗಳಿಗೆಲ್ಲ ಹಳೆಯ ತಲೆಗಳು ’ಮೋಜು ಮಸ್ತಿ’ ಎಂದು ಹಣೆಪಟ್ಟಿ ಅಂಟಿಸಿ ಮೂಗು ಮುರಿಯುತ್ತವೆ.

ಇನ್ನು ವೈಯುಕ್ತಿಕ ಮನರಂಜನೆಯ ವಿಚಾರದಲ್ಲಿ ತಂತ್ರಜ್ಞಾನ ಅಂಗೈಯಲ್ಲಿ ವಿಶ್ವ ತೋರಿಸುವ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ಪ್ರಶಂಸೆ ಕೂಡ ಮಾಡಬೇಕಲ್ಲವೇ. ಹಠಾತ್ತನೆ ಕುಟುಂಬದವರ ಆರೋಗ್ಯ ತಪ್ಪಿದಾಗ ಕೈ ಕಾಲು ಬಿಡುವ ಪರಿಸ್ಥಿತಿ ಈಗಿಲ್ಲ. ಎಷ್ಟೋ ಮಾಹಿತಿಗಳ ವಿಚಾರ ತಿಳಿಯಲಾಗಲಿ, ಕೆಲಸ ಮಾಡಿಸಿಕೊಳ್ಳಲಾಗಲಿ ಇತರರ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಈಗಿಲ್ಲ. ತಂತ್ರಜ್ಞಾನ ಹೆಚ್ಚಿನ ಸವಲತ್ತುಗಳನ್ನು ಒದಗಿಸಿ ಕೊಟ್ಟು ಜೀವನವನ್ನು ಸರಳೀಕರಿಸಿದೆ. ಪರಾವಲಂಬನೆ ಕಡಿಮೆಯಾದಂತೆ, ಸ್ವತಂತ್ರನಾದಂತೆ, ಅವಶ್ಯಕತೆಗಳಿಗೆ ಅನುಗುಣವಾಗಿ ಮನುಷ್ಯನ ಸಾಮಾಜಿಕ ವರ್ತುಲ ಕೂಡ ಸಹಜವಾಗಿ ಕಡಿಮೆಯಾಗಿದೆ. ಆ ಆವಿಷ್ಕಾರಗಳು ನಾವು ಮಾಡಿಲ್ಲವೆಂದ ಮಾತ್ರಕ್ಕೆ ಅವುಗಳನ್ನೆಲ್ಲ ಪೊಳ್ಳು ಎಂದು ಹೀನಾಯವಾಗಿ ಹೇಳುವುದು ಎಷ್ಟು ಸರಿ? ಶತಾವಧಾನಿಗಳ ಈ ಚರ್ಚೆಯನ್ನು ಇಂದು ವಿಶ್ವದಾದ್ಯಂತ ಜನರು ನೋಡಲು ಸಾಧ್ಯವಾಗಿರುವುದೇ ಅಂತಹ ಆಧುನಿಕ ಆವಿಷ್ಕಾರಗಳ ಕಾರಣದಿಂದಲೇ ಅಲ್ಲವೇ?

ಒಮ್ಮೆ ಕದಂಬ ಹೂವುಗಳಿಂದ ಒಬ್ಬರನ್ನೊಬ್ಬರು ಹೊಡೆದುಕೊಂಡು ಹಬ್ಬದ ಹೆಸರು ಕೊಟ್ಟು ಆಚರಿಸುತ್ತಿದ್ದವರು,
ಇಂದು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಆಟಗಳಲ್ಲಿ ಕಾಲ್ಪನಿಕವಾಗಿ ಹೊಡೆದಾಡುತ್ತಾರೆ. ಆದ ಮಾತ್ರಕ್ಕೆ ಹಬ್ಬದ ಹೆಸರಿನಲ್ಲಿ ಕದಂಬ ಹೂವುಗಳಿಂದ ಹೊಡೆದಾಡುವುದು ಉನ್ನತ ಸಂಸ್ಕೃತಿ ಮತ್ತು ಇಂದು ಹಬ್ಬವೆಂಬ ಹೆಸರು ಕೊಡದೆ ಮನರಂಜನೆ ಹುಡುಕುವುದು ಹೀನ ಸಂಸ್ಕೃತಿ ಎಂದು ಹೇಳುವುದು ಎಷ್ಟು ಅರ್ಥಪೂರ್ಣ? ಇಲ್ಲಿ ಎರಡು ಕ್ರಿಯೆಗಳ ಮೂಲ ಉದ್ದೇಶ ಒಂದೇ, ಮನರಂಜನೆ. ಇಂದು ಹಿರಿಯರು, ಮಕ್ಕಳು ಫೋನ್ ಹಿಡಿದುಕೊಂಡು ಸಾಮಾಜಿಕ ಜಾಲತಾಣಗಲ್ಲಿ ಮುಳುಗಿರುವುದರ ಬಗ್ಗೆ ಆಕ್ಷೇಪವೆತ್ತುತ್ತಾರೆ. ಆದರೆ ತಾವು ಬೆಳಗ್ಗೆದ್ದು ಎರಡು ಗಂಟೆ ದೈನಂದಿನ ಸುದ್ದಿಗಳನ್ನು ದಿನಪತ್ರಿಕೆಗಳಲ್ಲಿ ಓದುವ ಹವ್ಯಾಸವಿಟ್ಟುಕೊಂಡವರೇ. ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ೮೦% ಸಂಗತಿಗಳಿಂದ ನಮಗೆ ಯಾವುದೇ ಪ್ರಯೋಜನವಿರುವುದಿಲ್ಲವೋ, ದಿನಪತ್ರಿಕೆಯ ೮೦% ಸಮಾಚಾರಗಳು ಕೂಡ ನಿರುಪಯೋಗಿಯೇ. ಆದರೆ ದಿನಪತ್ರಿಕೆಗಳನ್ನು ಓದುವುದನ್ನು ಮಾತ್ರ ಉತ್ತಮ ಹವ್ಯಾಸಗಳ ಪಟ್ಟಿಗೆ ಯಾರೋ ಮಹಾತ್ಮರು ಸೇರಿಸಿಬಿಟ್ಟಿದ್ದಾರೆ.

ಯಾವುದೇ ಆಚರಣೆ ಕಾಲಕ್ರಮೇಣ ಮಸುಕಾಗಿ ಅಳಿದು ಹೋಗಿದ್ದರೆ. ಅದು ಸಮಾಜಕ್ಕೆ ಕ್ಷುಲ್ಲಕವಾಗಿ ತೋರಿದ್ದೇ ಇರಬಹುದಲ್ಲವೇ? ಸೌದೆಯಲ್ಲಿ ಅಡುಗೆ ಮಾಡುತ್ತಿದ್ದ ನಾವು ಯಾಕೆ ಗ್ಯಾಸ್ ಅಡುಗೆಗೆ ಬದಲಾಗಿದ್ದೇವೆ? ಮಡಿಕೆಯ ಪಾತ್ರೆಗಳಿಂದ ಯಾಕೆ ಸ್ಟೀಲ್ ಪಾತ್ರೆಗಳಿಗೆ ಹೊಂದಿಕೊಂಡಿದ್ದೇವೆ?
ಉತ್ತರ ಸರಳ : ಅನುಕೂಲ.

ವಿಕಾಸದ ಮೂಲ ಉದ್ದೇಶವೇ ಬದುಕಲು ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು. ಆ ಮೂಲಕ ಬದುಕುವ ಪ್ರಕ್ರಿಯೆಯಲ್ಲಿ ಎದುರಾಗುವ ಚಿಕ್ಕ ಚಿಕ್ಕ ಘರ್ಷಣೆಗಳನ್ನು ನಿವಾರಿಸಿ, ಸರಳೀಕರಿಸಿಕೊಳ್ಳುವುದು. ಅಡುಗೆ ಮಾಡುವಾಗ ಹೊಗೆಯಲ್ಲಿ ಕಣ್ಣು ಉರಿಯಬಾರದು, ಪಾತ್ರೆ ತೊಳೆಯುವಾಗ ಕಷ್ಟವಾಗಬಾರದು. ಸರಳ ಅಗತ್ಯಗಳಿಂದಲೇ ಆವಿಷ್ಕಾರಗಳು ಹುಟ್ಟುತ್ತವೆ. ಗ್ಯಾಸ್ ಸ್ಟವ್ ಆಗಲಿ, ಸ್ಟೀಲ್ ಪಾತ್ರೆಯಾಗಲಿ ಆ ದಿಕ್ಕಿನ ಒಂದು ಹಂತ ಮಾತ್ರ.

ಅದು ಬಿಟ್ಟು, ಸೌದೆಯಲ್ಲಿ ಮಾಡಿದ ಅಡುಗೆಯ ಸುವಾಸನೆಯೇ ಬೇರೆ, ಮಡಿಕೆ ಪಾತ್ರೆಯಲ್ಲಿ ಬೇಯಿಸಿದ ಪದಾರ್ಥದ ರುಚಿಯೇ ಬೇರೆ ಎನ್ನುವ ಮೂಲಕ ಹಳೆಯದೆಲ್ಲವೂ ಶ್ರೇಷ್ಠ ಹಾಗೂ ಹಳೆಯದು ಮಾತ್ರ ಶ್ರೇಷ್ಠವೆನ್ನುವ ಭ್ರಾಂತಿಯ ಮಂದಿಗೆ, ಸೌದೆ ಓಲೆ ಉಗುಳುವ ಹೊಗೆಯನ್ನು ವರ್ಷಗಳ ಕಾಲ ಉಸಿರಾಡಿ ಅಸ್ತಮಾ ಬಂದಾಗ, ಮಡಿಕೆ ಪಾತ್ರೆಗಳನ್ನು ತೊಳೆಯುವ ವಿಧಾನದ ಕಷ್ಟ ತಿಳಿದಾಗ ಆವಿಷ್ಕಾರಗಳು ಯಾಕೆ ಜನಪ್ರಿಯವಾಗುತ್ತವೆ ಎಂಬುದು ನಿಧಾನವಾಗಿ ಅರ್ಥವಾಗುತ್ತದೆ.

ಸೌದೆ ಒಲೆಗಳು, ಮಡಿಕೆ ಪಾತ್ರೆಗಳು, ಕೆಲವು ಹಳೆಯ ಹಬ್ಬಗಳು ಇವೆಲ್ಲವನ್ನೂ ನಾವು ಕಳೆದುಕೊಂಡಿರುವುದಲ್ಲ, ಅವುಗಳು ಈಗಿನ ಸಮಾಜದ ಆಗುಹೋಗುಗಳಿಗೆ ಅನುಗುಣವಾಗಿ , ಅಪ್ರಸ್ತುತವಾಗಿ , ಅನಾವಶ್ಯಕವಾಗಿ ತೋರಿ ಅಳಿಸಿ ಹೋಗಿರುವುದು ಅಷ್ಟೇ. ಆ ಕಾರಣಕ್ಕೆ ವಿಷಾದಗೊಳ್ಳುವ ಅವಶ್ಯಕತೆ ಇಲ್ಲ.


ವಾಲೆಂಟೈನ್ಸ್ ಡೇ ಫೆಬ್ರವರಿ ಚಳಿನಲ್ಲಿ ನಮಗೆ ಯಾತಕ್ಕೆ ಬೇಕು? ವಸಂತೋತ್ಸವ ಮದನೋತ್ಸವ ಮಾಡಿ, ಕಾಮನ ಹಬ್ಬನ ಮಾಡಿ. ನಾವು ಇಲ್ಲದ ಸಂಯಮ ವಿಕ್ಟೋರಿಯನ್ ಕಾಲದ ಮಡಿವಂತಿಕೆ ಬಿಟ್ಟುಬಿಡಬೇಕು. ನಮ್ಮ ಪರಂಪರೆ ಚೆನ್ನಾಗಿ ಸೊಗಸಾಗಿ ಸಂತೋಷ ಪಡುವುದಿತ್ತು. ಮಜಾ ಮಾಡುವಂತದ್ದು ಆದರೆ ಧಾರ್ಮಿಕವಾಗಿ. ಧಾರ್ಮಿಕ ಅಂತಂದ್ರೆ ಮಡಿ ಅಂತಲ್ಲ, ಮರ್ಯಾದೆ ಅಂತ ಅರ್ಥ. ಮರ್ಯಾದೆಯಿಂದ ಇದನ್ನ ಆಚರಿಸತಕಂತದ್ದು.

ಕಾಮವನ್ನು, ಪ್ರಣಯವನ್ನು ಸಾಮಾಜಿಕವಾಗಿ ಯಾವತ್ತೂ ವಕ್ರದೃಷ್ಟಿಯಿಂದಲೇ ನೋಡುವ ನಮ್ಮಂಥ ದೇಶದಲ್ಲಿ, ಮರ್ಯಾದೆಯಿಂದ ಕಾಮನ ಹಬ್ಬವನ್ನು ಆಚರಿಸುವ ಬಗೆ ಹೇಗೆ ಸಾಧ್ಯ? ಅದರ ರೂಪ ಏನು? ಅದರ ಮಿತಿ ಯಾವುದು? ಈಗ ಜನತೆ ಆಚರಿಸುತ್ತಿರುವ ವ್ಯಾಲಂಟೈನ್ಸ್ ಡೇಗಿಂತ ಅದು ಹೇಗೆ ಭಿನ್ನವಾಗಿ ಸಭ್ಯವಾಗಿ ಇರಬಹುದೆಂಬ ಬಗ್ಗೆ ಶತಾವಧಾನಿಗಳು ಯಾವುದೇ ಸ್ಪಷ್ಟ ವಿವರಣೆಯನ್ನು ನೀಡುವುದಿಲ್ಲ.


ಈಗ ಕಾರ್ನಿವಲ್, ಫೆಸ್ಟಿವಲ್ ಅಂತೀವಿ. ಯಾವುದೋ ದೇಶದಲ್ಲಿ ಟೊಮೆಟೊ ತುಳಿದಾಡಿಕೊಂಡಿದ್ದು ಜಗತ್ತಿಗೆಲ್ಲ ಬೇಕಾಯಿತು. ಸ್ಪೈನ್ನಲ್ಲಿ ಎಂತದ್ದು ಅದು ಕೆಸರಲ್ಲಾಟ ನಮ್ಮ ಕಂಬಳ ಅದಕ್ಕಿಂತ ತುಂಬಾ ತ್ರಿಲ್ಲಿಂಗ್ ಆಗಿ ಚೆನ್ನಾಗಿರುತ್ತದೆ. ಅಂತಂದ್ರೆ ನಮ್ಮ ಪರಂಪರೆಯ ಈ ಸ್ವಾರಸ್ಯಗಳನ್ನ ನಾವು ಬಿಟ್ಟುಕೊಟ್ಟು ಅದನ್ನ ಎಷ್ಟು ರೀತಿಯಾಗಿ ಬಳಸಬಹುದು ನೀವು ಟೂರಿಸಂ ಆಗಿ ಬಳಸಬಹುದು. ಕಲ್ಚರಲ್ ಟೂರಿಸಂ ಆಗಿ ಬಳಸಬಹುದು. ನ್ಯಾಷನಲ್ ಐಡೆಂಟಿಟಿ ಅಂತ ಮಾಡಬಹುದು ಮತ್ತೆ ಟ್ರೆಡಿಷನ್ಸ್ನ ರಿವೈವಲ್ ಅಂತ ಮಾಡಬಹುದು.

ಸ್ಪೈನಿನ ಲಾ ಟೊಮ್ಯಾಟಿನ ಹಾಗು ನಮ್ಮ ಕಂಬಳ ಯಾವ ವಿಧದಲ್ಲೂ ಸಮಾನವಲ್ಲ. ಕಂಬಳದಲ್ಲಿ ನಾವು ಪ್ರೇಕ್ಷಕರು ಮಾತ್ರ. ಅಷ್ಟಕ್ಕೂ ಹೋಲಿಕೆ ಮಾಡಿಕೊಳ್ಳಬೇಕಿದ್ದ ಅನಿವಾರ್ಯತೆಯಿದ್ದರೆ, ಟೊಮೇಟೊ ಹಬ್ಬವನ್ನು ನಮ್ಮ ಪ್ರಾಂತ್ಯದ ಗೋರೆಹಬ್ಬಕ್ಕೆ ಹೋಲಿಸಬೇಕು. ಒಂದೇ ವ್ಯತ್ಯಾಸವೆಂದರೆ ಇಲ್ಲಿ ಟೊಮೇಟೊ ಬದಲು ಸಗಣಿಯನ್ನು ಒಬ್ಬರ ಮೇಲೊಬ್ಬರು ಎರೆಚುತ್ತಾರಷ್ಟೆ. ಹೇಗಿದ್ದರೂ ನಮ್ಮ ಮೈಯೆಲ್ಲಾ ಕೊಳೆಯಾಗಿದ್ದರೂ, ಇತರರ ಮೇಲೆ ಸಗಣಿ ಎರೆಚುವುದರಲ್ಲಿ ನಮ್ಮದು ಎತ್ತಿದ ಕೈಯ್ಯಲ್ಲವೇ?

cultural tourism, national identity, tradition revival ಕೇಳಲು ಎಲ್ಲ ರೋಮಾಂಚನಗೊಳಿಸುವ ಶಬ್ದಗಳೇ. ಒಂದು ಕ್ಷಣಕ್ಕೆ ಹೌದಲ್ಲವೇ ಎನಿಸುವುದು ಸಹಜ. ಇದರ ಬಗ್ಗೆಯೆಲ್ಲ ಮಾತನಾಡುವ ನಾವುಗಳು ಮರೆಯುತ್ತಿರುವ ಮೂಲ ಅಂಶವೆಂದರೆ ಇದನ್ನು ಬೆಳೆಸಬೇಕಿರುವ ಸಮಾಜದ ಬಗೆಗಿದ್ದು. ನಮ್ಮಲ್ಲಿ ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ದೊಡ್ಡದಾಗಿ ಆಚರಣೆ ಮಾಡುತ್ತಾರೆ. ಕಲ್ಚರಲ್ ಟೂರಿಸಂ ಎಂಬ ಕಾರಣಕ್ಕೆ ಆದೆಷ್ಟೋ ವಿದೇಶಿಗರು ಕೂಡ ಹೋಳಿ ಆಚರಿಸಲೆಂದೇ ಬರುತ್ತಾರೆ. ಹಾಗೆ ಬಂದವರನ್ನು ದೇಶದ ಜನತೆ ಹೇಗೆ ನೆಡೆಸಿಕೊಳ್ಳುತ್ತದೆ? ವಿದೇಶಿಗರು ನಮ್ಮ ದೇಶದ ಕಾಮುಕ ವರ್ಗಕ್ಕೆ ಭಾವರಹಿತವಾದ ಒಂದು ಪುತ್ಥಳಿಗಳಷ್ಟೇ. ವಿದೇಶಿಗರನ್ನು ಬದಿಗಿಡಿ, ಹೋಳಿಯ ಸಮಯದಲ್ಲಿ, ಅದೆಷ್ಟು ಬಾರಿ ಎಲ್ಲೆ ಮೀರಿ ಅತಿರೇಕದ ವರ್ತನೆ ತೋರುವ ನಮ್ಮ ಅವಿವೇಕಿ ಗಂಡಸರು, ನಮ್ಮದೇ ದೇಶದ ಹೆಂಗಸರ ದೈಹಿಕ ದುರ್ಬಲತೆಯ ಲಾಭ ಉಡಾಯಿಸುದಿಲ್ಲ? ಅತಿಥಿ ಸತ್ಕಾರ ಉಳಿದಿಕೊಂಡಿರುವುದು ಸಂಸ್ಕೃತಿಯ ಮೇಲೆ ಮಾಡುವ ಭಾಷಣಗಳಲ್ಲಷ್ಟೇ. ನಾಗರಿಕ ಪ್ರಜ್ಞೆಯನ್ನು ಕಳೆದುಕೊಂಡಿರುವ ಭಾರತೀಯರು ಹೊರ ದೇಶಕ್ಕೂ ಹೋಗಿ ತಮ್ಮ ಅನಾಗರಿಕತೆಯ ವಿಷ ಹಬ್ಬಿ ದೇಶಕ್ಕೆ ಕಳಂಕ ತರುತ್ತಿರುವ ಹೊತ್ತಲ್ಲಿ ನಮ್ಮ ದೇಶವನ್ನು ಕಲ್ಚರಲ್ ಟೂರಿಸಂ ಮಾಡುವ ಕನಸು ಕನಸಾಗಿಯೇ ಉಳಿಯುವುದು ಸಂದೇಹವಿಲ್ಲ. ಇಲ್ಲಿ ನಾವು ಗಮನ ನೀಡಬೇಕಾಗಿರುವದು ಗಾಳಿಪಟದ ಮೇಲಲ್ಲ. ಗಾಳಿಪಟವನ್ನು ಹಾರಿಸುವ ನೂಲು ಎಷ್ಟು ದೃಢವಾಗಿದೆ ಎಂಬುದನ್ನ.


ವ್ಯಸನಗಳನ್ನ ಯಾರು ಸಂಪೂರ್ಣ ನಾಶ ಮಾಡೋಕೆ ಆಗೋಲ್ಲ, ನಿಯಂತ್ರಣ ಮಾಡಬಹುದು ಅಂತ ಮಾನವನ ಸ್ವಭಾವ ದೌರ್ಬಲ್ಯ ಕಂಡುಕೊಂಡ ಋಷಿಗಳು ಅದಕ್ಕೂ ಒಂದು ಅವಕಾಶ ಇಟ್ಟಿದ್ದಾರೆ. ಪೋಲಿ ಮಾತಿಗೊಂದು ದಿವಸ ಇಟ್ಟಿದ್ದಾರೆ. ಕಾಮನ ಹಬ್ಬ .
ಮನೆಗೊಂದು ಬಚ್ಚಲ ಮನೆ ಇಲ್ಲದೆ ಇದ್ರೆ ಮನೆಯೆಲ್ಲ ಬಚ್ಚಲ ಮನೆ ಆಗುತ್ತೆ .

ವರ್ಷದಲ್ಲಿ ಒಂದು ದಿನ ಪೋಲಿ ಮಾತನಾಡುವ, ಅಸಭ್ಯ ಬೈಗುಳದ ಮಾತನಾಡುವ ಮನುಷ್ಯನ ಮನಸ್ಸಿನಲ್ಲಿ ಅಂತಹ ಭಾವನೆಗಳು ಬರಿ ಒಂದು ದಿನ ಮಾತ್ರ ಮೂಡಿರುತ್ತವೆಯೇ? ಆ ಶಬ್ದಭಂಡಾರವೂ ಅಂದೇ ಹುಟ್ಟಿಬಿಡುತ್ತದೆಯೇ? ನಿನ್ನೆಯವರೆಗೂ ನಾನು ಯಾರನ್ನು ಪೂಜ್ಯನೀಯರು, ಗುರುಗಳು, ಆದರ್ಶಪ್ರಾಯರೆಂದು ಆರಾಧಿಸಿಕೊಂಡು ಬಂದಿದ್ದೇನೋ, ಇಂದು ಅವರು ಕಾಮನ ಹಬ್ಬದ ದಿನ ಅಸಭ್ಯವಾಗಿ ಮಾತನಾಡಿದ್ದನ್ನು ಕೇಳಿಸಿಕೊಂಡ ಮೇಲೆ ನಾಳೆ ಕೂಡ ಅದೇ ಪೂಜ್ಯ ಭಾವನೆ ನನ್ನಲ್ಲಿ ಉಳಿಯುತ್ತದೆಯೇ? ಸಭ್ಯತೆ ಅಸಭ್ಯತೆಗಳು, ಮಾನವನ ಗುಣಗಳು, ಮನುಷ್ಯ ಬೆಳೆದು ಬಂದಿರುವ ರೀತಿ, ಆತ ತನ್ನ ಅರಿವಿಗೆ ಹುಟ್ಟಿದಾಗಿಂದ ಉಣಿಸಿಕೊಂಡು ಬಂದಿರುವ ಪ್ರಾಪಂಚಿಕ ಅಂಶಗಳ ಮೇಲೆ ನಿರ್ಧರಿತವಾಗುವಂಥವು. ಬಚ್ಚಲು ಮನೆ ವಾಸನೆ ಹೊಡೆಯುತ್ತದೆ ಎಂದ ಮಾತ್ರಕ್ಕೆ ಮೂತ್ರವಿಸರ್ಜನೆ ಮಾಡಲು ಹೋಗದೆ ದಿನಕ್ಕೊಮ್ಮೆ ಮಾತ್ರ ಹೋಗಿ ಬರುತ್ತೇನೆಂದು ಕೂಡಲು ಸಾಧ್ಯವಿಲ್ಲ. ಮೂತ್ರ ಬಂದಾಗ ಬಚ್ಚಲುಮನೆಗೆ ಹೋಗಲೇ ಬೇಕು. ನೀವು ಸೇವಿಸಿದ ಆಹಾರಕ್ಕೆ ಅನುಗುಣವಾಗಿ ಬರುವ ಮೂತ್ರದ ವಾಸನೆಯನ್ನು ನೀವು ಹಾಗು ಇತರರು ಸಹಿಸಿಕೊಳ್ಳಲೇ ಬೇಕು.
ಕಾಮನ ಹಬ್ಬದ ದಿನ ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿ ಇತರ ದಿನಗಳಲ್ಲಿ ಸಭ್ಯನಾಗಿ ಇರುವುದು ಅಸಾಧ್ಯ. ಬಚ್ಚಲು ಮನೆಯನ್ನು ರೂಪಕವಾಗಿ ತೆಗೆದುಕೊಳ್ಳುವುದಾದರೆ, ಕಾಮನ ಹಬ್ಬದಲ್ಲಿ ಅಸಭ್ಯ ಮಾತನಾಡುವ ವ್ಯಕ್ತಿಯ ಹೋಲಿಕೆಯನ್ನು, ಇತರ ದಿನಗಳಲ್ಲಿ ಬಚ್ಚಲು ಮನೆಯಲ್ಲಿ ವಿಸರ್ಜಿಸುತ್ತಿದ್ದ ವ್ಯಕ್ತಿ ವರ್ಷದ ಒಂದು ದಿನ ಊರಿನ ಬಯಲಿನಲ್ಲಿ ಬಂದು ವಿಸರ್ಜಿಸಿದ ಎನ್ನಬಹುದಷ್ಟೆ..


ಪ್ರತಿಯೊಂದು ಜಾನಪದ ಆರಾಧನೆಯು ವೇದಮೂಲದಲ್ಲಿ, ಪುರಾಣ ಮೂಲದಲ್ಲಿ ,ಆಗಮ ಮೂಲದಲ್ಲಿ ಇರುವಂತದ್ದನ್ನ ನಾವು ನೋಡ್ತೀವಿ. ಇವೆರಡರಿಂದ ಬೇರೆಯಾಗಿ ಕಾಣುವಂತದ್ದೇ ಅಲ್ಲ. ತುಂಬಾ ಬೇರೆಯಾಗಿ ಕಾಣಿಸುವ ಪ್ರಯತ್ನವನ್ನು ಮಾಡಿದವರು ಕ್ರಿಶ್ಚಿಯನ್ ಮಿಷನರಿಗಳು.

ಪ್ರತಿಯೊಂದು ಆರಾಧನೆಯು ವೇದಮೂಲದಲ್ಲಿ ಇದ್ದಾಗ ಜಾನಪದ ಹುಟ್ಟಿಕೊಳ್ಳುವ ಅವಶ್ಯಕತೆ ಏಕೆ ಬಂತು? ವೇದಗಳನ್ನು ಸಾಮಾನ್ಯ ಜನರಿಂದ ದೂರವಿಟ್ಟು ಯಾಕೆ ಕೇವಲ ಒಂದು ವರ್ಗಕ್ಕೆ ಮಾತ್ರ ಅದರ ಅಧ್ಯಯನದ ಅವಕಾಶ ಮಾಡಿಕೊಡಲಾಯಿತು? ವಿಷ್ಣು,ಮಹೇಶ್ವರರಂಥ ಮುಖ್ಯ ದೇವರುಗಳೇ ಇದ್ದಾಗ, ಅವರ ಗಣಗಳನ್ನು, ದೈವಗಳನ್ನು ಆರಾಧಿಸುವ ವರ್ಗವು ಯಾಕೆ ಅನಿವಾರ್ಯವಾಗ ಹುಟ್ಟಿಕೊಂಡಿತು? ಯಾಕೆ ಆ ವರ್ಗವನ್ನು ಕೇವಲ ದೈವಾರಾಧನೆಗೆ ಸೀಮಿತಗೊಳಿಸಿ ದೇವಾರಾಧನೆಯಿಂದ ದೂರವಿಡಲಾಯಿತು? ಕ್ರಿಶ್ಚಿಯನ್ ಮಿಷನರಿಗಳು ಪ್ರಾಚ್ಯ ಭಾರತಕ್ಕೆ ಕಾಲಿಟ್ಟ ಕಾಲಮಾನ ಯಾವುದು? ಜಾತಿ ವರ್ಗ ವ್ಯವಸ್ಥೆಗಳು ಇಲ್ಲಿ ಹುಟ್ಟಿಕೊಂಡ ಕಾಲಮಾನ ಯಾವುದು? ಮತಾಂತರ ಮಾಡಲು ಮಿಷನರಿಗಳಿಗೆ ಅವಕಾಶ ಮಾಡಿಕೊಟ್ಟ ಸನಾತನ ಧರ್ಮದ ಕಿಂಡಿಗಳು ಯಾವವು? ಇವೆಲ್ಲದರ ಮೇಲೆ ಆಳವಾದ ಚರ್ಚೆ ನಡೆಯಿವುದು ಬಹು ಮುಖ್ಯ. ಶತಾವಧಾನಿಗಳು ಜಗನ್ನಾಥ ದೇವಸ್ಥಾನದಲ್ಲಿ ಶಬರರಿಗೆ ನೀಡಲಾಗುವ ಪ್ರಾಮುಖ್ಯತೆಯ ಒಂದು ಉದಾಹರಣೆಯನ್ನು ನೀಡುತ್ತಾರೆ. ಆದರೆ ಯಾರೂ ಈ ವ್ಯವಸ್ಥೆ ದೇಶದ ಇತರ ಕೋಟ್ಯಾ0ತರ ದೇವಸ್ಥಾನಗಳಲ್ಲೂ ಯಾಕಿಲ್ಲ ಎಂದು ಪ್ರಶ್ನೆ ಮಾಡುವುದಿಲ್ಲ. ಎಲ್ಲೋ ಒಂದು ಪೂಜಾ ಸ್ಥಾನದಲ್ಲಿ ಪರಿಶಿಷ್ಟ ವರ್ಗ ಎನಿಸಿಕೊಂಡವರಿಗೆ ನೀಡುವ ಪ್ರಾಮುಖ್ಯತೆಯನ್ನು ಸ್ವಾರಸ್ಯಕರವಾಗಿ ವಿವರಿಸುವ, ವೈಭವೀಕರಿಸುವ ಕ್ರಿಯೆಯಲ್ಲೇ ಜಾತಿ ವ್ಯವಸ್ಥೆಯ ಹುಳುಕುಗಳು ಎದ್ದು ಕಾಣುವುದಿಲ್ಲವೇ?


ಒಂದು ಗಾದೆ ಇದೆ ಎಂಟು ಎಮ್ಮೆ ತೊಳೆದೇನು ಆದರೆ ಒಂದು ಸಾಲಿಗ್ರಾಮ ತೊಳೆಯಲು ಆಗುವುದಿಲ್ಲ ಅಂತ. ಎಮ್ಮೆ ತೊಳೆಯುವಾಗ ನಾನು ಸಿನಿಮಾ ಹಾಡು ಹಾಡಿಕೊಂಡು, ಊರಕೇರಿ ಜನರನ್ನ ಬೈಕೊಂಡು, ಗಾಸಿಪ್ ಮಾಡಿಕೊಂಡು ಎಮ್ಮೆ ತೊಳೆದ್ರು ಎಮ್ಮೆ ಮೈ ಚೊಕ್ಕಟ ಆಗುತ್ತೆ. ಅದರೆ ಒಂದು ಶಾಲಿಗ್ರಾಮಕ್ಕೂ, ಒಂದು ಶಿವಲಿಂಗಕ್ಕೂ ಅಭಿಷೇಕ ಮಾಡಬೇಕಾದರೆ ಮನಸ್ಸು ನಿರ್ಮಲವಾಗದೆ ಇದ್ದರೆ ಏನು ತೊಳ್ಕೊಳ್ಳಕೆ ಆಗುತ್ತೆ ?

ಎಂಟು ಎಮ್ಮೆ ತೊಳೆಯುವವನ ಮನಸ್ಸು ನಿರ್ಮಲವಾಗಿರಲಾರದು ಅಂತ ಯಾರು ಹೇಗೆ ನಿರ್ಧರಿಸಿದರು? ಅಷ್ಟಕ್ಕೂ ಸಾಲಿಗ್ರಾಮ ತೊಳೆಯುವವನ ಮನಸ್ಸು ನಿರ್ಮಲವಾಗಿದೆಯೆಂದು ಅಳೆಯುವವರು ಯಾರು? ಕಾಮನ ದಿನಂದಂದು ಸಾಲಿಗ್ರಾಮ ತೊಳೆದವನು ಕೂಡ ಪೋಲಿ ಮಾತನಾಡುವವನು ತಾನೇ? ಆತನ ಮನಸ್ಸಿನ ಮೂಲೆಯಲ್ಲೂ ಪೋಲಿತನವಿದೆ. ಸಾಲಿಗ್ರಾಮ ತೊಳೆಯುವವನು ಮತ್ತು ಎಮ್ಮೆ ತೊಳೆಯುವವನನ್ನು ಸಮಾಜ ಆಳೆಯುವುದು ತೋರದ ಆತನ ಮನಸ್ಸಿನ ನೈರ್ಮಲ್ಯದಿಂದ ಅಲ್ಲ. ಬದಲಿಗೆ ಕಣ್ಣಿಗೆ ಅಸಹ್ಯವಾಗಿ ರಾಚುವ ಜಾತಿ ವ್ಯವಸ್ಥೆಯ ಮೂಲಕ. ಅದೇ ವ್ಯವಸ್ಥೆ ಆತನನ್ನು ಜ್ಞಾನ ವೃದ್ಧಿಯ ಎಲ್ಲ ಮಾರ್ಗಗಳಿಂದ ಮೊದಲಿನಿಂದ ದೂರವಿಟ್ಟು ಎಮ್ಮೆ ತೊಳೆಯುವುದಕ್ಕೆ ಮಾತ್ರ ನೀನು ಸೀಮಿತ ಎಂದು ಪದೇ ಪದೇ ನೆನಪಿಸಿ ಆತನನ್ನು ಒಪ್ಪಿಸಿರುತ್ತದೆ. ವಿದ್ಯಾರ್ಜನೆಯಿಂದ ಆತನನ್ನು ವಂಚಿತಗಳಿಸಿ ಕೂಪ ಮಂಡೂಕನನ್ನಾಗಿರಿಸುತ್ತದೆ. ಈ ಇಡೀ ಚರ್ಚೆಯಲ್ಲಿ ಶತಾವಧಾನಿಗಳು ಸಮಾಜದ ವರ್ಗ ವ್ಯವಸ್ಥೆಯ ಹುಳುಕುಗಳನ್ನು ಎಲ್ಲೂ ಕೆಣಕಲು ಹೋಗುವುದಿಲ್ಲ. ಅದನ್ನು ಸನಾತನ ಧರ್ಮದ ಬಚ್ಚಲು ಮನೆಯಲ್ಲೇ ಭದ್ರಗೊಳಿಸಿ, ಮಿರ ಮಿರ ಹೊಳೆಯುವ ಮನೆಯ ಹೊರಗಿನ ಭಾಗವನ್ನಷ್ಟೇ ತೋರಿಸುತ್ತಾರೆ.


ನಕರ್ಮಣ ಮನರಂಭ ನೈಷ್ಕರ್ಮಂ ಪುರುಷೋಷ್ಣುತೆ ಸರ್ವಾರಂಭಹಿದೋಷಣ ಧೂಮೇನ ಅಗ್ನಿವೃತ ಅಂತ ಕೃಷ್ಣ ಹೇಳ್ತಾನೆ. ಕರ್ಮ ಮಾಡದೆ ಇರುವುದರಿಂದಲೇ ಕರ್ಮತೀತ ಆಗೋದಿಲ್ಲ. ಎಲ್ಲ ಕರ್ಮದಲ್ಲೂ ಒಂದಲ್ಲ ಒಂದು ದೋಷ ಒಂದಲ್ಲ ಒಂದು ತಪ್ಪಿರುತ್ತೆ. ಆ ತಪ್ಪಿದೆ ಅಂತ ಬಿಟ್ರೆ, ಹೊಗೆ ಬರುತ್ತೆ ಅಂತ ಒಲೆ ಹಚ್ಚದೆ ಇರೋತರ ಆಗುತ್ತೆ ಅದು. ಅವಿವೇಕತೆಯಿಂದ ಕೊನೆಗೆ ಉಪವಾಸ ಬದುಕಬೇಕಾಗುತ್ತೆ.

ಎಲ್ಲ ಕರ್ಮದಲ್ಲೂ ಒಂದಲ್ಲ ಒಂದು ದೋಷ, ತಪ್ಪು ಇದ್ದಾಗ, ಆ ತಪ್ಪನ್ನು ತಿದ್ದಿ ಅದನ್ನು ಸರಿಪಡಿಸುವುದು ಧರ್ಮ ಅನುಯಾಯಿಗಳ ಹೊಣೆ. ಹೊಗೆ ಬರುತ್ತೆ ಅಂತ ಓಲೆ ಉರಿಸದೆ ಇರುವುದಲ್ಲ. ಹೊಸ ಅಧ್ಯಯನಗಳ ಮೂಲಕ ಹೊಸ ತಂತ್ರಜ್ಞಾನವನ್ನು ಅನುಸರಿಸಿ ಹೊಸ ಮಾರ್ಗಗಳನ್ನು ಹುಡುಕುವುದು. ಹೊಗೆ ಬರದಂತ ಅಡುಗೆಯ ಸಾಧನವನ್ನು ತಯಾರಿಸಿ ಅಡುಗೆ ಮಾಡಿ ಉಂಡು ಆರೋಗ್ಯಕರವಾಗಿ ಬದುಕುವುದು. ಹೊಗೆ ಬರುವುದು ಸಾಮಾನ್ಯ ಎಂದು ಅಲಕ್ಷಿಸಿ ಮುಂದುವರೆದಿದ್ದರೆ ತಿಂದು ಉಣ್ಣಲು ಹೆಚ್ಚು ಕಾಲ ಜನ ಬದುಕುತ್ತಿರಲಿಲ್ಲ ಅಷ್ಟೇ. ಹೇಗೆ ರೂಪಕಗಳನ್ನು ತಮ್ಮ ವಾದಗಳಿಗೆ ಪೂರಕವಾಗಿ ಬಳಸಿಕೊಳ್ಳಬಹುದೋ, ಹಾಗೆ ಅದೇ ರೂಪಕಗಳನ್ನೇ ಬಳಸಿ ಅವೇ ವಾದಗಳನ್ನು ಪೊಳ್ಳುಗೊಳಿಸಲು ಕೂಡ ಸಾಧ್ಯ.


ಬುದ್ಧ ಆಗಲಿ, ಮಹಾವೀರ ಆಗಲಿ, ಬಸವಣ್ಣನವರಾಗಲಿ ಸನಾತನ ಧರ್ಮದ ಒಳಗಿರತಕ್ಕಂತಹ ಓರೆ ಕೋರೆಗಳನ್ನ, ಸಣ್ಣ ಪುಟ್ಟದನ್ನ, ತಿದ್ದಿ ಅದನ್ನ ವ್ಯವಸ್ಥಾಪನೆ ಮಾಡಿಕೊಟ್ಟವರಷ್ಟೇ ಹೊರತು ಅವರು ಯಾರೂ ಇದಕ್ಕೆ ವಿರೋಧಿಗಳಲ್ಲ ಇದನ್ನ ಧಿಕ್ಕರಿಸಿದವರು ಅಲ್ಲ.

ಬುದ್ಹ ಮಹಾವೀರ ಬಸವಣ್ಣನವರು ಸನಾತನ ಧರ್ಮದ ಒಳಗಿರತಕ್ಕಂತಹ ಓರೆ ಕೋರೆಗಳನ್ನ, ಸಣ್ಣ ಪುಟ್ಟದನ್ನ ತಿದ್ದಿ ಅದನ್ನ ವ್ಯವಸ್ಥಾಪನೆ ಮಾಡಿ ಹೊಸ ಧರ್ಮವನ್ನು ಸಂಸ್ಥಾಪಿಸಿದವರು. ಹೊಸ ಧರ್ಮದ ಸ್ಥಾಪನೆ ಯಾಕೆ ಬೇಕಾಯಿತು ಎಂದರೆ ಬಹುಶ ಸನಾತನ ಧರ್ಮ ತನ್ನ ದೋಷವನ್ನು ತಿದ್ದಿಕೊಳ್ಳುವ ಬದಲು ಎಲ್ಲ ಕರ್ಮದಲ್ಲೂ ಒಂದಲ್ಲ ಒಂದು ದೋಷ ಇರುವುದು ಸಾಮಾನ್ಯ, ನೀನೆ ಅದಕ್ಕೆ ಹೊಂದಿಕೊಂಡು ನಡೆಯುವುದು ಸೂಕ್ತ ಎಂಬ ಉಡಾಫೆಯನ್ನು ವ್ಯಕ್ತಪಡಿಸಿದ್ದಿರಬಹುದು. ಆದರೆ ಬುದ್ಹ ಮಹಾವೀರ ಬಸವಣ್ಣನವರು ಹೊಗೆ ನುಂಗಿಕೊಂಡೇ ಅಡುಗೆ ಮಾಡುವ ಬದಲು, ಆಧುನಿಕತೆಯ ಹೊಸ ವಿಧಾನ ಕಂಡುಕೊಂಡರು. ಅಷ್ಟೇ ವ್ಯತ್ಯಾಸ.


ಪ್ರಾಚೀನ ಭಾರತ ಖಂಡದಲ್ಲಿ ಸಂಸ್ಕೃತ ಹೇಗೆ ಸಾಮಾನ್ಯರ ಭಾಷೆಯಾಗಿರುವ ಸಾಧ್ಯತೆಯಿತ್ತು ಹಾಗು ಅದರಿಂದ ಹುಟ್ಟಿರುವ ಹಿಂದಿ ಕೂಡ ಹೇಗೆ ದೇಶದ ಭಾಷೆಯಾಗಲು ಯೋಗ್ಯ ಎಂಬುದರ ಬಗ್ಗೆ ವಿವರಿಸುತ್ತಾ ಗಣೇಶ್ ಹೇಳುತ್ತಾರೆ,

ಯಾವುದೇ ಒಂದು ಸಹಜ ಭಾಷೆ, ನೈಸರ್ಗಿಕ ಭಾಷೆ, ಒಬ್ಬರ, ಒಂದು ಸಮುದಾಯದ ಸೊತ್ತಾಗೋಲ್ಲ. ಎಲ್ಲರೂ ಅದನ್ನ ಮಾತಾಡ್ತಾ ಇರ್ತಾರೆ ಉದಾಹರಣೆಗೆ ಸಂಸ್ಕೃತದಲ್ಲಿ ಸಾಕಷ್ಟು ಬೈಗುಳಗಳಿವೆ. ವೇದ ಓದುವರು, ಶಾಸ್ತ್ರ ಓದುವರು ಬೈಗುಳಗಳನ್ನ ಯಾಕೆ ಬಳಸುತ್ತಾರೆ? ಮತ್ತೆ ಕೃಷಿಗೆ ಸಂಬಂಧಪಟ್ಟದ್ದು, ಹೆಂಡ ಇಳಿಸುವುದಕ್ಕೆ ಸಂಬಂಧಪಟ್ಟಿದ್ದು, ಪ್ರಾಣಿಗಳನ್ನ ಬೇಟೆಯಾಡಿ ಚರ್ಮ ಸುಲಿತಕ್ಕೆ ಸಂಬಂಧಪಟ್ಟಿದ್ದು ಇತರ ಎಷ್ಟೋ ಬಗೆಯ ಕಸುಬುಗಳಿಗೆ ಸಂಬಂಧಪಟ್ಟಂತ ಸಾವಿರಾರು ಶಬ್ದಗಳು ಅದರೊಳಗಿವೆ.

ನಮ್ಮೂರಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ಸಮುದಾಯ ಕೊಂಕಣಿ ಮಾತನಾಡುತ್ತಾರೆ. ಅದು ಅವರ ಸಮುದಾಯಕ್ಕಷ್ಟೇ ಸೀಮಿತ. ಊರಿನ ಇತರ ಸಮುದಾಯದವರು ಯಾರು ಆ ಭಾಷೆ ಮಾತನಾಡುವುದಿಲ್ಲ. ಇದು ಒಂದು ಉದಾಹರಣೆ ಅಷ್ಟೇ. ಸಂಸ್ಕೃತದಲ್ಲಿ ಸಾಕಷ್ಟು ಬೈಗುಳದ ಪದಗಳಿವೆ, ವೇದ ಓದುವವರು ಬೈಗುಳನ್ನು ಯಾಕೆ ಬಳಸುತ್ತಾರೆ ಎನ್ನುವ ವಾದವೇ ಅತಿ ಬಾಲಿಶವಾದದ್ದು. ವೇದ ಓದುವವನಾಗಲೀ , ಎಮ್ಮೆ ತೊಳೆಯುವವನಾಗಲಿ ಮೊದಲಿಗೆ ಮನುಷ್ಯ ಎಂಬ ಪ್ರಾಣಿ. ಆತನ ಶರೀರದ ಭಾಗಗಳು ಒಂದೇ. ಇಬ್ಬರಿಗೂ ಒಂದೇ ತೆರನಾದ ಇಂದ್ರಿಯಗಳು, ಮೆದುಳು, ಹಾಗು ಜೀವ ವ್ಯವಸ್ಥೆಯಿದೆ. ಇಬ್ಬರಿಗೂ ಸಿಟ್ಟು ಬರುತ್ತದೆ, ಸಿಟ್ಟು ವ್ಯಕ್ತವಾಗುವುದು ಅವರಾಡುವ ಭಾಷೆಯ ಮೂಲಕವಷ್ಟೇ? ಅಷ್ಟಕ್ಕೂ ವೇದ ಓದುವವನಿಗೆ ಕಾಮನ ಹೋಳಿಯಂದು ಬೈಯ್ಯಲಾದರೂ ಬೈಗುಳಗಳು ಬೇಡವೇ? ನಾನು ಬೇಟೆಯಾಡಿ, ಪ್ರಾಣಿಯ ಚರ್ಮ ಸುಲಿಯುವುದಿಲ್ಲ ಎಂದ ಮಾತ್ರಕ್ಕೆ, ಆ ಕ್ರಿಯೆಯನ್ನು ವ್ಯಕ್ತಪಡಿಸಲು ನನ್ನ ಭಾಷೆಯಲ್ಲಿ ಶಬ್ದಗಳೇ ಇರುವುದಿಲ್ಲವೇ? ಕಪ್ಪು ಹಾಗು ಬಿಳುಪಿನ ನಡುವೆ ಹಲವಾರು ಬಣ್ಣಗಳ ಛಾಯೆಗಳು ಅಡಕವಾಗಿರುತ್ತವಲ್ಲವೆ ಶತಾವಧಾನಿಗಳೇ?


ತಾತ ಕಟ್ಟಿರುವ ಮನೆಗೆ ಕಾಲ ಕಾಲ ಸುಣ್ಣ ಬಣ್ಣ ಮಾಡ್ತಾರೆ. ಆಗೆಲ್ಲ ಟಿವಿ, ಇರಲಿಲ್ಲ ಟಿವಿ ನೋಡೋಕೆ ಒಂದು ಜಾಗ ಅಂತ ಮಾಡ್ತಾರೆ, ಆಗೆಲ್ಲ ಕಮೋಡ್ ಇರಲಿಲ್ಲ ಈ ಕಮೋಡ್ ತಂದು ಇಡ್ತಾರೆ, ಆಗೆಲ್ಲ ಬಾತ್ ಟಬ್ ಇರಲಿಲ್ಲ ಈಗೆಲ್ಲ ಮಾಡ್ತಾರೆ. ಆಗ ಮನೆ ಹಾಳು ಮಾಡಿದ್ರು ಅಂತ ಅರ್ಥವೇ? ಪರಿಷ್ಕರಣ ಮಾಡಿದ ಸನಾತನ ಧರ್ಮ ಅದನ್ನಷ್ಟು ಒಪ್ಪಿಕೊಂಡಿದೆ.

ಈಗ ಶತಾವಧಾನಿಗಳ ಮಾತುಗಳ್ಲಲಿ ವೈರುಧ್ಯ ತೋರುತ್ತದೆ. ಒಂದೊಮ್ಮೆ ಮೌಢ್ಯ ಆಚಾರಗಳ ಪರ ಮಾತನಾಡುತ್ತಾರೆ. ಮತ್ತೊಮ್ಮೆ ಕಾಲಕ್ಕೆ ತಕ್ಕಂತೆ ಸನಾತನ ಧರ್ಮ ಹೊಂದಿಕೊಂಡು ಪರಿಷ್ಕರಣೆ ಮಾಡಿಕೊಂಡಿದೆ ಎನ್ನುತ್ತಾರೆ. ಒಂದೊಮ್ಮೆ ಹೀಗೆ ನಡೆದ ಪರಿಷ್ಕರಣೆಯನ್ನೇ ಹೀಗೆಳೆಯುತ್ತಾರೆ. ಮತ್ತೊಮ್ಮೆ ಇಂಥ ಧರ್ಮವನ್ನು ಧಿಕ್ಕರಿಸಿ ಹುಟ್ಟಿಕೊಂಡ ಇತರ ಧರ್ಮಗಳು ಕೂಡ ಸನಾತನ ಧರ್ಮದ ಭಾಗವೇ ಎನ್ನುತ್ತಾರೆ. ಯಾವು ಸರಿ ಯಾವುದು ತಪ್ಪು?
ಚರ್ಚೆಯ ಕೊನೆಕೊನೆಗಂತೂ ವಿಷಯಗಳು ಸಂಪೂರ್ಣವಾಗಿ ಹಾದಿ ತಪ್ಪಿದಂತೆನಿಸಿ , ತಮಿಳುನಾಡಿನ ಸ್ಟಾಲಿನ್, ಸನಾತನ ಧರ್ಮವನ್ನು ಹೀಗೆಳೆದಿದ್ದರ ಬಗ್ಗೆ ವಿರೋಧಿಸುತ್ತಾ ಇತರೆ ಧರ್ಮಗಳ ಹುಳುಕುಗಳನ್ನು ಎತ್ತಿ ಹಿಡಿಯುತ್ತಾರೆ. ವಾದವನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಾರೆ. ನಾವ್ಯಾಕೆ ನಮ್ಮ ಬಚ್ಚಲು ಮನೆ ನಾರುತ್ತಿದೆ ಎಂದು ಒಪ್ಪಿಕೊಳ್ಳುವ ಬದಲು ಪಕ್ಕದ ಮನೆಯವನ ಬಚ್ಚಲು ಇನ್ನು ಜಾಸ್ತಿ ನಾರುತ್ತಿದೆ ಎಂದು ವಾದ ಮಾಡಬೇಕು?


ಧರ್ಮ ಎಂದರೇನು? ಧರ್ಮ ನನ್ನ ರಕ್ಷಣೆ ಮಾಡಬೇಕೆ? ಧರ್ಮದ ರಕ್ಷಣೆ ನಾನು ಮಾಡಬೇಕೆ?
ನನ್ನ ಪ್ರಕಾರ ಧರ್ಮವೆನ್ನುವುದು ವಿವಿಧ ಭಾಗದ ಜನಗಳು ತಮ್ಮ ಅನುಕೂಲಗಳಿಗೆ ಅನುಸಾರವಾಗಿ, ಜೀವನವನ್ನು ನಿರ್ದಿಷ್ಟ ರೀತಿಯಲ್ಲಿ, ಕನಿಷ್ಠ ಘರ್ಷಣೆಗಳ ಮೂಲಕ ಸಾಗಿಸಲು ರಚಿಸಿರುವ ನೀಲಿ ನಕ್ಷೆಗಳು ಅಷ್ಟೇ. ನಾವು ಹುಟ್ಟಿದ್ದಾಗ ನಮ್ಮ ಸಮಾಜ ಸೃಷ್ಟಿಸಿದ ಈ ನಕ್ಷೆಯನ್ನು ನಮ್ಮ ಮುಂದಿಡಲಾಗುತ್ತದೆ. ನಕ್ಷೆಯನ್ನು ರಚಿಸಿರುವ ಸಮಾಜದಲ್ಲಿ, ನಕ್ಷೆ ರಚಿಸಿರುವ ಕಾಲಘಟ್ಟದಲ್ಲಿ ಅದನ್ನು ಅನುಸರಿಸಿಕೊಂಡು ಹೋದರೆ, ಕನಿಷ್ಠ ಸಂಘರ್ಷಗಳು, ಕನಿಷ್ಠ ದ್ವಂದ್ವಗಳ ಮೂಲಕ ಜೀವನ ಸಾಗಿಸಬಹುದು.
ಹಾಗೆಯೇ ನಾವು ಬದುಕುವ ಕಾಲಘಟ್ಟಕ್ಕೆ, ಪರಿಸರಕ್ಕೆ ಅನುಕೂಲಕರವಾಗಿ ನಮ್ಮ ಹಿತಕ್ಕೆ ಅನುಗುಣವಾಗಿ ನಕ್ಷೆಯಲ್ಲಿ ಚಿಕ್ಕ ಪುಟ್ಟ ತಿದ್ದುಪಡಿಯನ್ನು ಮಾಡಿಕೊಂಡು ಬದುಕುವುದಾಗಲಿ, ಅಥವಾ ಸೂಕ್ತವೆನಿಸಿದಾಗ ಹೊಸ ನಕ್ಷೆಯನ್ನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಾಗಲೀ ಪ್ರತಿ ಮನುಷ್ಯ ಪ್ರಾಣಿಗೆ ಇರಬೇಕು. ಅದನ್ನು ಹೊರತುಪಡಿಸಿ, ಜೀವನಕ್ಕಾಗಲಿ, ನಕ್ಷೆಗಾಗಲಿ ಅತಿಯಾದ ಪ್ರಾಮುಖ್ಯತೆಯನ್ನು ನೀಡಿ, ನಕ್ಷೆಯ ಅಸ್ತಿತ್ವಕ್ಕೆ ಹೋರಾಟ ಮಾಡಿ, ನಕ್ಷೆಯನ್ನು ರಚಿಸಿದ್ದರ ಮೂಲ ಉದ್ದೇಶವಾದ ‘ಬದುಕನ್ನು ಸುಲಭಗೊಳಿಸುವುದನ್ನೇ’ ದುಸ್ತರಗೊಳಿಸುವುದು ಅತಿ ಮೂರ್ಖತನ.

Add a Comment

Your email address will not be published. Required fields are marked *

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)