ಪರಿಸರ(ವಾದಿ)ಗಳ ಬಣ್ಣ

ಮೊನ್ನೆ ಮೊನ್ನೆಯಷ್ಟೇ ನಾವೆಲ್ಲಾ ಸಂಭ್ರಮದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಮನೆಯ ಹತ್ತಿರವೇ ಇದ್ದ ಪಾರ್ಕಿನಲ್ಲಿ ವಿಕಸಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೋದ ವರ್ಷ ಇದೇ ದಿನ ನೆಟ್ಟು, ನೀರು ಹಾಕುವವರಿಲ್ಲದೆ, ಕೆಲವೇ ದಿನಗಳಲ್ಲಿ ಕರಟಿ ಹೋದ ಸಸಿ ನೆಟ್ಟಿದ್ದ ಜಾಗದಲ್ಲೇ ಮತ್ತೊಮ್ಮೆ ಚಂದದ ಹಸುರಿನ ಸಸಿ ನೆಟ್ಟು, ನೀರು ಪ್ರೋಕ್ಷಿಸಿ, ಕೈ, ಬಟ್ಟೆ ಹೆಚ್ಚೇನೂ ಕೊಳೆಯಾಗದಂತೆ ನೋಡಿಕೊಂಡು, ಹೆಂಡತಿ ತೆಗೆದ ಫೋಟೋಗೆ ಹಲ್ಲು ಕಿರಿದು, ಅಲ್ಲೇ ಕೊಟ್ಟ ಶರಬತ್ತನ್ನು ಪರಿಸರ ಸ್ನೇಹಿ ಕಾಗದದ ಲೋಟದಲ್ಲಿ ಕುಡಿದು, ಅದನ್ನು ಕಸದ ಬುಟ್ಟಿಯೊಳೆಗೆ ಬಲು ಸೌಜನ್ಯದಿಂದ ಎಸೆದು, ಬಿಸಿಲೇರುತ್ತಿದ್ದಂತೆ ಮನೆ ಸೇರಿ ಉಶ್ಶಪ್ಪ ಎಂದು ಸೋಫಕ್ಕೊರಗಿ ಹವಾನಿಯಂತ್ರಕವನ್ನು ಚಾಲು ಮಾಡಿದ್ದಾಯ್ತು. ಬೆಳಗ್ಗೆ ತಿಂಡಿ ಹತ್ತಿರದ ಹೋಟೆಲ್ಲಿನಿಂದ ಕೂತಲ್ಲಿಯೇ ಆರ್ಡರ್ ಮಾಡಿ, ಅಸಹನೆಯಿಂದಲೇ ಕಾದು, ಸ್ವಲ್ಪ ಸಮಯದಲ್ಲೇ ತಿಂಡಿಯನ್ನು ಪ್ಲಾಸ್ಟಿಕ್ ಡಬ್ಬಿಯೊಳಗೆ ಹಾಕಿ, ಪ್ಲಾಸ್ಟಿಕ್ ಚೀಲದಲ್ಲಿ ನೇತಾಡಿಸಿಕೊಂಡು ಬಂದವನಿಂದ ಸ್ವೀಕರಿಸಿ, ೩೦ ರೂಪಾಯಿಯನ್ನು ಆತನಿಗೆ ಭಕ್ಷೀಸು ನೀಡಿ, ಅವನ ಜೀವನವನ್ನು ಉದ್ಧರಿಸಿದ ಬಗೆಗೆ ಹೆಮ್ಮೆಪಡುತ್ತಾ ತಿಂಡಿಯನ್ನು ಹೊಟ್ಟೆಗಿಳಿಸಿಕೊಂಡದ್ದೂ ಆಯಿತು.

ಸಂಜೆ ಮತ್ತೆ ಆಫೀಸಿನವರು ಪರಿಸರದ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವರ್ತೂರು ಕೆರೆ ಸ್ವಚ್ಛತೆಯ ಸ್ವಯಂ ಸೇವಾ ಕಾರ್ಯಕ್ರಮದ ನೆನಪಾಗಿ, ಬೇಸರವೆನಿಸಿತು. ನಿನ್ನೆಯಷ್ಟೇ ಆ ಚಂದದ HR ಬಂದು ಪರಿಸರಕ್ಕೋಸ್ಕರ ಇಷ್ಟಾದರೂ ಮಾಡಬೇಕು ಎಲ್ಲರೂ ಅಂದಾಗ, ಎದೆಯುಬ್ಬಿಸಿ ಹೌದಪ್ಪ, ನಾನಂತೂ ರೆಡಿ ಅಂದ ಕೂಡಲೇ ಆಕೆ ನನ್ನ ಹೆಸರು ದಾಖಲಿಸಿಕೊಂಡದ್ದು ಕೂಡ ಕಹಿ ನೆನಪಿನಂತೆ ವಕ್ಕರಿಸಿತು. ಕಣ್ಣು ಹಾಗೆ ಮುಚ್ಚಿದವನಿಗೆ ಅಲ್ಲೇ ನಿದ್ರೆ.

ಸಂಜೆ ಅದೇನು ಸಂಭ್ರಮ !! ಆಫೀಸಿನವರೇ ಕೊಟ್ಟ ಬಿಳಿಯ ಬಣ್ಣದ ಚಿಕ್ಕ ಗಾತ್ರದ ಟಿ ಶರ್ಟನ್ನು, ಮೊದಲೇ ಹಾಕಿದ್ದ ಅಂಗಿಯ ಮೇಲೆ ಅಡಾಳಾಗಿ ಏರಿಸಿಕೊಂಡು, ಕೈಗೆ ಕೈಚೀಲ, ಮುಖಕ್ಕೆ ಮಾಸ್ಕ್, ತಲೆಗೆ ಕಂಪೆನಿಯದ್ದೇ ಚಿತ್ರವಿರುವ ಟೋಪಿ ಧರಿಸಿ, ಸ್ವಚ್ಛತಾ ಅಭಿಯಾನದ ಬೋರ್ಡುಗಳನ್ನು ಹಿಡಿದು ಕೆರೆಯವರಿಗೂ ಮೆರವಣಿಗೆಯಲ್ಲಿ ನಡೆದುಕೊಂಡು, ಹಳ್ಳಿಗರಿಗೆ ಸ್ವಚ್ಛತೆಯ ಜಾಗ್ರತಿ ಮೂಡಿಸಿ, ಫೋಟೋಗಳಿಗೆ ಪೋಸ್ ಕೊಡುವ ಹೊತ್ತಿಗೆ ದೇಶದ ಜವಾಬ್ದಾರಿಯುತ ನಾಗರಿಕರಾದ ಸಂತೃಪ್ತಿ ನಮ್ಮೆಲ್ಲರ ಮುಖದಲ್ಲಿ. ಕಸ ಹೆಕ್ಕುವ ಸಮಯ ಬಂದಾಗ ಮಾತ್ರ ಚಿಕ್ಕ ಪುಟ್ಟ ಕಸ ಕಡ್ಡಿಗಳನ್ನು ಹೆಕ್ಕಿ, ಹೆಚ್ಚು ಗಲೀಜಿನಂತೆ ತೋರುವ ವಸ್ತುಗಳನ್ನೆಲ್ಲ ದೂರದಿಂದಲೇ ನೋಡಿಯೂ ನೋಡದಂತೆಯೇ ಆಚೀಚೆ ಓಡಿ ತಲೆ ತಪ್ಪಿಸಿಕೊಂಡು, ಅಂತೂ ಇಂತೂ ಆಫೀಸಿನವರು ತಂದಿದ್ದ ಕಸದ ಚೀಲವನ್ನು, ನಾವೇ ತಿಂದು-ಕುಡಿದ ಕಸಗಳಿಂದ ತುಂಬಿಸಿದಲ್ಲಿಗೆ ಕಾರ್ಯಕ್ರಮ ಮುಕ್ತಾಯ. ದೂರದಿಂದ, ಸೂರ್ಯನ ಸಂಜೆ ಕಿರಣದ ಹಿಮ್ಮೇಳದಲ್ಲಿ ಕಂಗೊಳಿಸುತ್ತಾ ಹಾರಿ ಬರುತ್ತಿದ್ದ ನೊರೆಯ ದಂಡು ನಮ್ಮನ್ನು ತಲುಪುವಷ್ಟರಲ್ಲಿ ನಾವೆಲ್ಲಾ ಜಾಗ ಖಾಲಿ ಮಾಡಿಯಾಗಿತ್ತು. ಮನೆಯ ದಾರಿಯಲ್ಲಿ ದೊಡ್ಡ ಕಾರನ್ನು ಒಬ್ಬನೇ ಚಲಾಯಿಸಿಕೊಂಡು, ಪೆಟ್ರೋಲು ತುಂಬಿಸಿಕೊಂಡು, ಹೆಚ್ಚಿದ ಕ್ರಯ ನೋಡಿ ಮೋದಿಗೆ ಮನದಲ್ಲೇ ಶಪಿಸುತ್ತಾ, ಶಪಿಸಿದ್ದು ಎಲ್ಲಿ ಹೊರಗಿನ ದೇಶಪ್ರೇಮಿಗಳಿಗೆ ಕೇಳಿಸಿತೇನೋ ಎಂದು ಹೆದರುತ್ತಾ ಹಾಗೆ ಮನೆ ತಲುಪುವಲ್ಲಿ ರಾತ್ರಿ ೮ ಗಂಟೆ.

ಇದ್ದ ಬದ್ದ ಹ್ಯಾಂಡ್ ವಾಶ್, ಫೇಸ್ ವಾಶ್ ಮತ್ತೊಂದು ಇನ್ನೊಂದು ಬಳಸಿ, ಬೇಕಾಬಿಟ್ಟಿ ನೀರು ಹರಿಸಿ, ಮೈ ಮುಖದ ಚರ್ಮ ಇನ್ನೇನು ಕಿತ್ತೇ ಹೋಗುವಂತೆ ತೊಳೆದುಕೊಂಡು ಬಂದು ಬೆಳಗ್ಗಿನಿಂದ ಸಂಜೆ ತನಕ ತೆಗೆದ ಎಲ್ಲ ಫೋಟೋಗಳನ್ನು ನೋಡಿ, ಪಾರ್ಕಿನ ಹಸಿರನ್ನು ಇನ್ನಷ್ಟು ಹಸಿರುಗೊಳಿಸಿ, ಕೆರೆಯ ಕಸವನ್ನು ಇನ್ನಷ್ಟು ಗಲೀಜುಗೊಳಿಸಿ, ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ಸಿಗೆ ಹಾಕಿ, ಇನ್ನೇನು ಬರಲಿರುವ ಪ್ರಶಂಸೆಗಳ ನಿರೀಕ್ಷೆಯಲ್ಲಿ ಕಾಯತೊಡಗಿದೆ. ಹಾಗೆ ಬೇರೆಯವರ ಸಪ್ಪೆ ಜೀವನದ ನಸುನೋಟವನ್ನು ನೋಡಲೆಂಬಂತೆ ಅವರ ಸ್ಟೇಟುಸ್ಸುಗಳ ಮೇಲೆ ಕಣ್ಣು ಹಾಯಿಸಿದಾಗಲೇ ತಿಳಿದದ್ದು, ನನ್ನಂತೆಯೇ ಎಲ್ಲರೂ ಫೋನಿನ ತುಂಬಾ ಹಸಿರು ಚಿತ್ರಗಳ ಮೆರವಣಿಗೆಯನ್ನೇ ಹೊರಡಿಸಿದ್ದಾರೆಂದು. ಅವತ್ತಿನ ಮಟ್ಟಿಗಂತೂ ಎಲ್ಲರ ಫೋನಿನ ಪರದೆಗಳು, ಮರೆತು ಬಂದಿರುವ ತಮ್ಮ ಊರಿನ ಮನೆಗಳ ಪಕ್ಕದ ಕಾಡಿಗಿಂತ ಹಸಿರು, ಸುಂದರ ನಳನಳ. ಒಂದೇ ಒಂದು ಪ್ರಶಂಸೆಯ ಮಾತು ಕೂಡ ಬರದಿದ್ದಾಗ, ಇತರರು ಕೂಡ ನನ್ನಂತೆಯೇ ಪ್ರಶಂಸೆಗೆ ಕಾಯುತ್ತಿರಬಹುದೆಂದು ಸಮಾಧಾನ ಪಡಿಸಿಕೊಂಡು, ಹಾಗೆ ಸಿಗರೇಟಿನ ತುದಿಗೆ ಬೆಂಕಿ ಹಚ್ಚಿ ಬಾಲ್ಕನಿಯಲ್ಲಿ ನಿಂತು, ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತಾ, ಮೇಲಿನ ಮನೆಯ ಅಜ್ಜಿ ಕೆಮ್ಮಿ ಶಾಪಹಾಕಿದ್ದು ಕೇಳಿ ಒಳ ನಡೆದೆ. ಅಲ್ಲಿಗೆ ಈ ವರ್ಷದ ಪರಿಸರ ದಿನ ಮುಗಿದಿತ್ತು.


ಪ್ರಕೃತಿ, ಪರಿಸರದ ಬಗ್ಗೆ ನನ್ನ ಕಾಳಜಿ ವಿಪರೀತವಾದದ್ದು. ಹಸುರಿನ ಮಲೆನಾಡಿನ, ಪಶಿಮಘಟ್ಟಗಳ ನಡುವಿನ ದಟ್ಟ ಕಾಡಿನ ವಾಸ ನನಗೆ ಬಹುಪ್ರಿಯ. ನಗರಗಳಲ್ಲಿ ನಡೆಯುವ ‘ಗಿಡ ಮರ ಉಳಿಸಿ’ ಅಭಿಯಾನಗಳಲ್ಲಿ ನಾನು ಯಾವತ್ತಿದ್ದರೂ ಸಕ್ರಿಯ. ಫಾಸಿಲ್ ಇಂಧನಗಳಿಂದ ಚಲಿಸುವ ವಾಹನಗಳಿಂದಲೇ ವಾಯುಮಾಲಿನ್ಯವಾಗುತ್ತಿರುವ ಕಾರಣದಿಂದ ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಶಕ್ತಿಯಿಂದ ಚಲಿಸುವ ಗಾಡಿಯನ್ನು ಹೆಂಡತಿಗೆ ಉಡುಗೊರೆಯಾಗಿ ನೀಡಿ ಬೀಗಿದ್ದೇನೆ. ನಾನು ಪರಿಸರವಾದಿ, ಜಗತ್ತನ್ನು ಉಳಿಸಲು ಛಲ ತೊಟ್ಟಿರುವ ಪ್ರವಾದಿ.


ಆದರೂ ಯಾಕೋ ಒಂದೆರಡು ದಿನಗಳು, ಅಬ್ಬಬ್ಬಾ ಎಂದರೆ ಒಂದು ವಾರವಷ್ಟೇ ಕಾಡಿನ ಮಧ್ಯ ಇರಲು ನನ್ನಿಂದ ಸಾಧ್ಯ. ಎರಡನೇ ವಾರಕ್ಕಾಗಲೇ ಜೀರುಂಡೆಗಳು ತಲೆ ಚಿಟ್ಟು ಹಿಡಿಸಿರುತ್ತವೆ, ಜಿಗಣೆಗಳು ರಕ್ತ ಹೀರಿರುತ್ತವೆ, ಮೌನ ನೀರವತೆಗಳಿಂದ ಆಗಲೇ ಖಿನ್ನತೆ ಆವರಿಸಿರುತ್ತದೆ. ಸಿಗದ ಇಂಟರ್ನೆಟ್ ಸಿಗ್ನಲ್ಲಿಗಾಗಿ ಮನಸ್ಸು ತುಡಿಯುತ್ತಿರುತ್ತದೆ. ಕೈ ಬೆರಳುಗಳು ಆಗಲೇ ಫೋನಿನ ಪರದಯೆಯನ್ನು ಉಜ್ಜುತ್ತಿರುತ್ತವೆ. ನನ್ನಂಥ ಪರಿಸರ ಪ್ರೇಮಿಗಳ ಸೌಕರ್ಯಕ್ಕೆಂದೇ ಕಾಡು ಕಡಿದು, ರೋಡು ಮಾಡಿ, ಅಸಂಖ್ಯಾತ ಮನೆ, ರೆಸಾರ್ಟುಗಳನ್ನು ನಿರ್ಮಿಸಲಾಗುತ್ತದೆ. ಗುಡ್ಡ ಕುಸಿಯುತ್ತದೆ, ನದಿ ದಿಕ್ಕು ಬದಲಿಸುತ್ತದೆ, ಪರಿಸರ ಬದಲಾಗುತ್ತದೆ, ಸಮತೋಲನ ತಪ್ಪುತ್ತದೆ.

ನಗರಗಳ ಪರಿಸರ ಚಳುವಳಿಗಳಲ್ಲಿ ಭಾಗವಹಿಸಿ ಪರಿಸರ ಪ್ರೇಮಿಯೆಂದೇ ಗುರುತಿಸಲ್ಪಡುವ ನಾನು, ಹುಟ್ಟೂರಿನಲ್ಲಿ ಎಕರೆಗಟ್ಟಲೆ ಕಾಡು ಕಡಿದು ಕಾಫಿ ತೋಟ ಬೆಳೆಸಿ, ಮಹಾ ಪ್ರಮಾಣದಲ್ಲಿ ಜೀವ ವೈವಿಧ್ಯಗಳನ್ನು ಕೊನೆಗೊಳಿಸಿದ ಕಾರಣಕರ್ತನಾದರೂ, ಜಗತ್ತಿನ ಕಣ್ಣಿಗೆ ನಾನು ಅಲ್ಲೂ ಬೆಳೆಸಿರುವುದು ಹಸಿರೇ.

ದೇಶದ ಸುಮಾರು ೬೦% ವಿದ್ಯುತ್ ಉತ್ಪಾದನೆಯಾಗುವುದು ಉಷ್ಣ ವಿದ್ಯುತ್ ಸ್ಥಾವರಗಳಲ್ಲೇ. ವಿದ್ಯುತ್ ಚಾಲಿತ ಕಾರುಗಳ ಬ್ಯಾಟರಿ ತಯಾರಿಸಲು ಬೇಕಾಗುವ ಮೂಲವಸ್ತುಗಳಾದ ಕೋಬಾಲ್ಟ್, ಲೀಥಿಯಂ ಹಾಗು ಮ್ಯಾಂಗನೀಸ್ ಗಣಿಗಾರಿಕೆಗೆ ಅಗಾಧ ಪ್ರಮಾಣದ ಶಕ್ತಿಯ ಅವಶ್ಯಕತೆಯಿದೆ. ಹಾಗಾಗಿ ನನ್ನ ಹೆಂಡತಿಯು ಕಾರು ಚಲಾಯಿಸುವುದರಿಂದ ವಾಯುಮಾಲಿನ್ಯವು ಪ್ರತ್ಯಕ್ಷವಾಗಿ ನನ್ನ ನಗರದಲ್ಲಿ ಆಗದಿದ್ದರೂ ಬೇರೆ ಯಾವುದೋ ಅಮಾಯಕ ಜನರ ಊರಿನ ಗಾಳಿಯನ್ನು ಕಲುಷಿತಗೊಳಿಸುವಲ್ಲಿ ನನ್ನ ಪಾಲೂ ಇದೆ ಎನ್ನುವುದು ಹೆಚ್ಚೇನೂ ಬಹಿರಂಗಪಡಿಸದ ವಿಚಾರ. ಆದರೇನಂತೆ ಆ ಕಾರಿನ ನಂಬರ್ ಪ್ಲೇಟ್ ಇರುವುದು ಹಸಿರು ಬಣ್ಣದಲ್ಲಿ, ಹಾಗಾಗಿ ನಾನು ಕೂಡ ಪರಿಸರ ಪಾಲಕನೇ.


ಪರಿಸರ ಎಂದರೆ ಏನು? ನಮ್ಮ ಸುತ್ತಮುತ್ತಲಿನ ಪ್ರಪಂಚ. ಗಿಡಗಳು, ಮರಗಳು, ಪ್ರಾಣಿಗಳು, ಪಕ್ಷಿಗಳು, ಹವಾಮಾನ, ಬೆಳಕು, ಮಣ್ಣು, ಭೂಮಿ, ತೇವಾಂಶ, ಉಷ್ಣಾಂಶ, ಗೆಳೆಯರು, ಶತ್ರುಗಳು, ಬೀದಿಗಳು, ಕೀಟಗಳು, ಕೆರೆ, ನದಿ, ಬಂಡೆ, ಬಯಲು, ಗದ್ದೆ, ಆಕಾಶ ಹಾಗು ಇನ್ನೆಷ್ಟೋ ಅಸಂಖ್ಯಾತ ಇರುವಿಕೆಗಳು ಜೊತೆ ಸೇರಿ ಸಮ್ಮಿಶ್ರವಾಗಿ ರೂಪುಗೊಳ್ಳುವುದೇ ಪರಿಸರ. ಸಮುದ್ರ ತೀರದ ಪರಿಸರ, ಮಲೆನಾಡಿನ ಪರಿಸರ, ಮರುಭೂಮಿಯ ಪರಿಸರ, ಬಯಲು ಸೀಮೆಯ ಪರಿಸರ, ಪರ್ವತ ಶ್ರೇಣಿಗಳ ಪರಿಸರ, ಬೆಟ್ಟದ ತಪ್ಪಲಿನ ಪರಿಸರ, ನದಿ ತೀರದ ಪರಿಸರ, ಶುಷ್ಕ ಭೂಮಿಯ ಪರಿಸರ, ಜೌಗು ಪ್ರದೇಶದ ಪರಿಸರ, ನಗರ ಪ್ರದೇಶದ ಪರಿಸರ, ಹಳ್ಳಿಗಳ ಪರಿಸರ, ಹೀಗೆ ಪರಿಸರವು ಭೌಗೋಳಿಕ ಶ್ರೇಣಿಯ ಮೇಲೆ, ಜನರ ಜೀವನ ಶೈಲಿಗಳ ಮೇಲೆ ಅಗಾಧವಾಗಿ ಅವಲಂಬಿತವಾಗಿರುತ್ತದೆ, ವೈವಿಧ್ಯಮಯವಾಗಿರುತ್ತದೆ ಹಾಗು ಸತತವಾಗಿ ಬದಲಾಗುತ್ತಿರುತ್ತದೆ.

ಪರಿಸರ ದಿನದ ಹೆಸರಿನಲ್ಲಿ ಕಾಡನ್ನು ಮಾತ್ರವೇ ವೈಭವೀಕರಿಸುವುದು, ಪರಿಸರದ ಪ್ರತಿನಿಧಿಯಾಗಿ ಕೇವಲ ಹಸಿರು ಬಣ್ಣವನ್ನು ಬಿಂಬಿಸುವುದು ಅಸಂಬದ್ಧ ಹಾಗು ಬಾಲಿಶ. ಬೇರೆ ಬೇರೆ ಪರಿಸರಗಳ ಬಣ್ಣಗಳೂ ಬೇರೆಯೇ. ಮಲೆನಾಡಿನ ದಟ್ಟ ಕಾಡುಗಳಲ್ಲಿ ವಾಸಿಸುವವನಿಗೆ ಪರಿಸರದಲ್ಲಿ ಹಸಿರು ಅಗಾಧವಾಗಿ ತೋರಿದರೆ, ಮರುಭೂಮಿವಾಸಿಗೆ ಆತನ ಪರಿಸರದ ಬಣ್ಣ ಹಳದಿ ಮಿಶ್ರಿತ ಕಂದು. ಬಳ್ಳಾರಿಯಂಥ ಗಣಿ ಪ್ರದೇಶದ ಜನಗಳಿಗೆ ಅದು ನಸುಗೆಂಪು. ಕಾಡುಗಳು, ಬೆಟ್ಟ ಗುಡ್ಡಗಳು, ನದಿಗಳು, ಸಮುದ್ರಗಳು, ಬಟಾ ಬಯಲುಗಳು ಎಲ್ಲವು ಪ್ರಕೃತಿಯ ಹೊಂದಾಣಿಕೆಯ ತಂತ್ರಗಳೇ. ಎಲ್ಲೋ ಕಡಿದ ಬೆಟ್ಟದಿಂದಾಗಿ ಯಾವುದೋ ಮಾರುತದ ದಿಕ್ಕು ಬದಲಾಗಿ ಎಲ್ಲೋ ಮಳೆ ಸುರಿದು ಅಲ್ಲಿನ ಪರಿಸರದ ರೂಪು ರೇಷೆಗಳನ್ನು ಬದಲಾಯಿಸಿರುತ್ತದೆ. ಕಾಡು ಬೆಳೆಸುವ ಉದ್ದೇಶದಿಂದ ಎಕರೆಗಟ್ಟಲೆ ಭೂಮಿಯಲ್ಲಿ ಸರಕಾರ ನೆಡಿಸಿದ ಮ್ಯಾಂಜಿಯಂ, ಅಕೇಶಿಯಾ ಗಿಡಗಳು ಅಂತರ್ಜಲವನ್ನೆಲ್ಲ ಹೀರಿ ಭೂಮಿಯನ್ನು ಬರಡಾಗಿಸುತ್ತವೆ. ಒಳನಾಡಿನ ಬಯಲು ಸೀಮೆಗಳು ಬೇಸಿಗೆಯಲ್ಲಿ ಕಾದು, ವಾಯುಭಾರ ಕುಸಿದು, ಅರಬ್ಬಿ ಸಮುದ್ರದ ಮೂಲಕ ಗಾಳಿ ಬೀಸಿ, ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಭಾರಿ ಮಳೆಯಾಗುತ್ತದೆ. ಕಾಡು ಇನ್ನಷ್ಟು ಹಸಿರಾಗುತ್ತದೆ. ಹೀಗೆ ವಿವಿಧ ಪರಿಸರಗಳು ಜೊತೆಗೂಡಿ ಭೂಮಿಯ ಮೇಲಿನ ಜನ ಜೀವನದ ಸಮತೋಲನವನ್ನು ಕಾಪಾಡುವಂತಹ ಸನ್ನಿವೇಶದಲ್ಲಿ, ಪರಿಸರವನ್ನು, ಪ್ರಕೃತಿಯನ್ನು ಕಾಡಿಗೆ ಮಾತ್ರ ಹೋಲಿಸಿ ಹಸಿರು ಬಣ್ಣವನ್ನು ಮಾತ್ರ ಅದಕ್ಕೆ ತೇಪುವುದು ಎಲ್ಲಿಯ ಮಟ್ಟಿಗೆ ಸರಿ?


error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)