ಬರೆಯುವುದ್ಯಾಕೆ?
|ಹೊಸ ಮನೆ ಖರೀದಿಸುವಾಗ, ಮನೆಯ ನೆಲಕ್ಕೆ ಹಾಸಿರುವ ಬಿಲ್ಲೆಯನ್ನು (tiles) ಪರೀಕ್ಷಿಸುವ ಸಲುವಾಗಿ, ಅಲ್ಲಲ್ಲಿ ಹದವಾಗಿ ಕುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಯಾವ ಭಾಗದಲ್ಲಿ ಸರಿಯಾಗಿ ಕಾಂಕ್ರೀಟ್ ತುಂಬಿ ಬಿಲ್ಲೆಯನ್ನು ಕೂಡಿಸಿರುವುದಿಲ್ಲವೋ, ಆ ಜಾಗ ಟೊಳ್ಳು ಶಬ್ದ ಮಾಡುತ್ತಿರುತ್ತದೆ. ಟೊಳ್ಳು ಮುಂದೆ ಬಿರುಕು ಬಿಟ್ಟು ಅಧ್ವಾನವಾಗುವ ಸಾಧ್ಯತೆ ಜಾಸ್ತಿ. ಮನೆ ಸಂಪೂರ್ಣ ರೂಪ ಪಡೆದ ಮೇಲೆ ರಿಪೇರಿ ಮಾಡುವುದು ಕೂಡ ಕಷ್ಟವೇ.
ಬರೆಯುವುದು ಕೂಡ ಅಂಥದ್ದೇ ಒಂದು ಪ್ರಯತ್ನ. ನಿಮಗೆ ಅರ್ಥ ಮಾಡಿಸುವ ಉದ್ದೇಶವಿಲ್ಲ. ನಾನು ನನಗೆ ತಿಳಿದಿರುವುದನ್ನು, ತಿಳಿಯಬಯಸುವುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಷ್ಟೇ. ಈ ಮೂಲಕ ಮನಸ್ಸಿನ ಮೂಲೆಗಳಲ್ಲಿ ಅವಿತಿರಬಹುದಾದ ಟೊಳ್ಳುಗಳನ್ನು ಪರೀಕ್ಷಿಸುವ, ಸಾಧ್ಯವಾದಲ್ಲಿ ಸರಿಪಡಿಸಿ, ಹೆಚ್ಚು ಸದ್ದು ಬಾರದಂತೆ ಮಾಡುವ ಉದ್ದೇಶವಷ್ಟೇ…
ಸಂತೆಯಲ್ಲಿ ಬೇಕಿದ್ದದ್ದು, ಬೇಡದ್ದು, ಬಣ್ಣದ್ದು, ಹೊಳೆದದ್ದು, ರುಚಿಯೆನಿಸಿದ್ದು, ಆಸೆಪೆಟ್ಟದ್ದು, ನಿರೀಕ್ಷಿಸಿದ್ದು, ದಕ್ಕಿದ್ದು ಎಲ್ಲಾ ಥರೇವಾರಿ ಸಾಮಾನು ಸರಂಜಾಮುಗಳಿಂದ ತುಂಬಿಸಿಕೊಂಡು ಬಂದ ಬೀಣೆ ಚೀಲವನ್ನು, ಒಂದು ಮಧ್ಯಾಹ್ನದ ನಿದ್ದೆಯ ನಂತರ ಬಿಚ್ಚಿ, ನಾನಾಗಿ ಖರೀದಿಸಿದ ಕೆಲವನ್ನು, ಇತರರು ಬಲವಂತವಾಗಿ ತುಂಬಿಸಿದ ಹಲವನ್ನು, ಒಂದೊಂದಾಗಿ ನೆಲದ ಮೇಲೆ ಹರಡಿ, ತೊಳೆದು, ತಿಕ್ಕಿ, ಮೂಸಿ, ಅಗತ್ಯ, ಅನಗತ್ಯಗಳನ್ನು ವಿಶ್ಲೇಷಿಸುವ ನನ್ನದೇ ಸ್ವಂತ ಪ್ರಯತ್ನವಷ್ಟೇ ಇದು.