ರಾವಣಾಯಣ : ಭಾಗ ೩ – ಅಪಹರಣ
|ಈ ಬಾರಿ ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ವಿಶೇಷ ಸಂಭ್ರಮ. ಕಾರಣ ಇಂದಿನ ಬಾರಿಯ ಯಕ್ಷಗಾನ ವಿಶೇಷವಾಗಿ ಪಂಜಿನ ಬೆಳಕಿನಲ್ಲೇ ನಡೆಸುವುದೆಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮೇಳದವರು ನಿರ್ಧರಿಸಿರುವುದು. ಈ ಮೂಲಕ ದೇವಸ್ಥಾನಕ್ಕೆ ಪ್ರಚಾರ ಒದಗಿಸುವುದು ಹಾಗೂ ದೇವಸ್ಥಾನದ ಮುಂದಿನ ಜೀರ್ಣೋದ್ಧಾರಕ್ಕೆ ಹೆಚ್ಚಿನ ದೇಣಿಗೆಯನ್ನು ಸುತ್ತ ಮುತ್ತಲಿನ ಊರಿನ ಪ್ರಮುಖರಿಂದ ಸಂಗ್ರಹಿಸುವುದು ಆಡಳಿತ ಮಂಡಳಿಯ ಉದ್ದೇಶ. ಇದೇ ಕಾರಣಕ್ಕೆ ಆಸು ಪಾಸಿನ ಎಲ್ಲಾ ಗಣ್ಯಾತಿಗಣ್ಯರಿಗೆ ಉತ್ಸವ ಹಾಗೂ ಯಕ್ಷಗಾನದ ವಿಶೇಷ ಆಮಂತ್ರಣ ಆಗಲೇ ತಲುಪಿಯಾಗಿದೆ. ಇನ್ನೂ ವಿಶೇಷದ ವಿಷಯವೆಂದರೆ ಈ ಬಾರಿಯ ಯಕ್ಷಗಾನ ಪ್ರಸಂಗ ‘ಸೀತಾಪಹರಣ’ ಹಾಗೂ ಇದರಲ್ಲಿ ರಾವಣನ ಪಾತ್ರ ವಹಿಸುತ್ತಿರುವವನು ಶ್ರೀರಾಮ ಸೋಮಯಾಜಿ. ನಡೆದದ್ದು ಇಷ್ಟು, ಈ ಬಾರಿ ಉತ್ಸವಕ್ಕೆ ಮೇಳದವರು ಸೀತಾಪಹರಣ ಪ್ರಸಂಗ ಮಾಡುತ್ತಿರುವ ವಿಷಯ ತಿಳಿದಂತೆ ಶ್ರೀರಾಮನ ಮನಸ್ಸಿನಲ್ಲಿ ಎಲ್ಲಾ ಲೆಕ್ಕಾಚಾರಗಳು ಓಡಿದವು. ಆತನಿಗೆ ಹೇಗಿದ್ದರೂ ಮೇಳದವರ ಪರಿಚಯ ಚೆನ್ನಾಗಿಯೇ ಇತ್ತು, ಇದೇ ಕಾರಣದಿಂದ ಮೇಳದ ಮುಖ್ಯಸ್ಥರಾದ ರತ್ನಾಕರ ಶೆಟ್ಟರನ್ನು ಮನೆಗೆ ಆಹ್ವಾನಿಸಿ, ಈ ಸಲ ಯಕ್ಷಗಾನದಲ್ಲಿ ರಾವಣನ ಪಾತ್ರ ತನಗೇ ಅಭಿನಯಿಸಲು ಅವಕಾಶ ನೀಡುವಂತೆ ವಿನಂತಿಸಿಕೊಳ್ಳುತ್ತಾನೆ. ಊರಿನಲ್ಲಿ ಶ್ರೀರಾಮನ ಬಗೆಗೆ ಎದ್ದಿರುವ ಗುಲ್ಲು ರತ್ನಾಕರ ಶೆಟ್ಟರಿಗೆ ತಿಳಿದಿಲ್ಲವೆಂದಲ್ಲ. ಆದರೆ ಶ್ರೀರಾಮನ ತಂದೆ ನರಸಿಂಹ ಸೋಮಯಾಜಿಗಳ ಮೇಲಿರುವ ಅಭಿಮಾನ ಅವರ ಬಾಯನ್ನು ಕಟ್ಟಿಹಾಕಿ ಸಂಕೋಚದಿಂದ ಏನು ಉತ್ತರಿಸಬೇಕೆಂದು ತಡವರಿಸುತ್ತಿರುವಾಗಲೇ ಶ್ರೀರಾಮನು ಮನೆಯಲ್ಲಿ ತಾನೇ ತರಿಸಿಟ್ಟಿದ್ದ ರಾವಣನ ವೇಷಭೂಷಣಗಳನ್ನು ಕ್ಷಣಮಾತ್ರದಲ್ಲಿ ಧರಿಸಿ ರತ್ನಾಕರ ಶೆಟ್ಟರ ಎದುರು ರಾಮಾಯಣದ ಒಂದು ಸನ್ನಿವೇಶವನ್ನು ಆಡಿ ತೋರಿಸಿಯೇ ಬಿಡುತ್ತಾನೆ. ಸುಮಾರು ಅರ್ಧ ತಾಸಿನ ಕಾಲ ಶ್ರೀರಾಮನ ಅಮೋಘ ಅಭಿನಯವನ್ನು ಮೈಮರೆತು ನೋಡಿದ ರತ್ನಾಕರ ಶೆಟ್ಟರು, ಆನಂದದಿಂದ ಆತನ ಮನವಿಯನ್ನು ಒಪ್ಪಿಕೊಳ್ಳುತ್ತಾರೆ. ಅಲ್ಲಿಗೆ ಶ್ರೀರಾಮ ಮನಸ್ಸಿನಲ್ಲಿ ಹಾಕಿಕೊಂಡಿದ್ದ ಯೋಜನೆ ಒಂದು ಹಂತಕ್ಕೆ ಯಶಸ್ವಿಯಾಗುತ್ತದೆ.
ವಿಷ್ಣುಮೂರ್ತಿ ದೇವರ ಉತ್ಸವಕ್ಕೆ ಭಾರಿ ಸಿದ್ಧತೆ ನಡೆಯುತ್ತಿದೆ. ಇಂದು ಕಟ್ಟೆಪೂಜೆ, ಮಹಾರಂಗ ಪೂಜೆ ಹಾಗೂ ಬಹು ನಿರೀಕ್ಷಿತ ಪಂಜಿನ ಬೆಳಕಿನಲ್ಲಿ ಯಕ್ಷಗಾನ ಆಟ. ನಾಳೆ ಮಹಾಪೂಜೆ ಮತ್ತು ರಥೋತ್ಸವ. ಯಕ್ಷಗಾನ ಆಟಕ್ಕೆಂದು ಬೆಳ್ಯಾಡಿಯಲ್ಲಿ ಹಿಂದೆಂದೂ ಹಾಕಿರದಂಥ ವಿಶಾಲವಾದ ಚಪ್ಪರ ಹಾಕಲಾಗಿದೆ. ಈ ಸಲ ಬರುವ ವಿಶೇಷ ಗಣ್ಯರಿಗೆಂದೇ ಮೊದಲಿನ ಸಾಲಿನಲ್ಲಿ ಮೆದುವಾದ ಆಸನದ ವ್ಯವಸ್ಥೆ ಮಾಡಲಾಗಿದೆ.ಎಲ್ಲೆಲ್ಲೂ ಅದ್ದೂರಿತನ ಎದ್ದು ತೋರುತ್ತಿದೆ. ಇತ್ತ ಶ್ರೀರಾಮ ಸೋಮಯಾಜಿ ಬೆಳಗ್ಗಿನ ಜಾವದಿಂದಲೇ ತಾನು ಮಾಡಲಿರುವ ರಾವಣ ಪಾತ್ರದ ಅಭಿನಯವನ್ನು ಮತ್ತೆ ಮತ್ತೆ ತನ್ನ ಮನೆಯ ವಿಶಾಲವಾದ ಕನ್ನಡಿಯ ಮುಂದೆ ಅಭಿನಯಿಸಿ ಮನನ ಮಾಡಿಕೊಳ್ಳುತ್ತಿದ್ದಾನೆ. ಅತ್ತ ಕಡೆ ಶ್ರೀಧರ ಹೆಗ್ಡೆ, ಬಹು ನಿರೀಕ್ಷಿತ ಯಕ್ಷಗಾನ ಆಟದಲ್ಲಿ, ತನ್ನ ಅಪ್ಪ ಶಂಕರ ಹೆಗ್ಡೆಯವರು ನಿರ್ವಹಿಸುತ್ತಿದ್ದ ರಾವಣನ ಪಾತ್ರ ತನ್ನ ಕಡು ವೈರಿ ಶ್ರೀರಾಮನ ಪಾಲಾದುದ್ದಕ್ಕೆ ಸಿಟ್ಟಿನಲ್ಲಿ ಧಗಧಗಿಸುತ್ತಿದ್ದಾನೆ. ಅದೇ ಕಾರಣಕ್ಕೆ ಇಂದಿನ ಪ್ರಸಂಗವನ್ನು ಕೆಡಿಸುವ ದುರಾಲೋಚನೆ ಆತನ ಮನ ಹೊಕ್ಕಿದೆ. ಆದರೆ ಯಾವುದೇ ಉಪಾಯ ಹೊಳೆಯದೇ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಆತನಿಗೆ ಎದುರಾಗಿದೆ. ಆದರೂ ಯಾವುದಕ್ಕೂ ಇರಲಿ ಎಂದು ತನ್ನ ಗುಂಪಿನ ಎಲ್ಲ ಪಡ್ಡೆಗಳನ್ನು ಇಂದಿನ ರಾತ್ರಿಯ ಯಕ್ಷಗಾನದ ಸ್ಥಳದಲ್ಲಿ ಹಾಜರಿರಬೇಕೆಂದು ಕಡ್ಡಾಯವಾಗಿ ಸೂಚಿಸಿದ್ದಾನೆ.
ಹೀಗೆ ಎರಡೂ ಕಡೆಯಲ್ಲೂ ಭರದಿಂದ ಸಿದ್ಧತೆ ನೆಡೆಯುತ್ತಿರಲು, ನೋಡು ನೋಡುತ್ತಿರುವಂತೆ ಸಾಯಂಕಾಲವಾಗಿಯೇ ಬಿಟ್ಟಿತು. ನಿಧಾನಕ್ಕೆ ಯಕ್ಷಗಾನ ನಡೆಯುವ ಚಪ್ಪರ ಜನರಿಂದ ತುಂಬ ತೊಡಗಿತು. ಊರು ಪರವೂರಿನ ಗಣ್ಯರೆಲ್ಲ ಮುಂದಿನ ಸಾಲಿನಲ್ಲಿ ಆಸೀನರಾದರು. ಪಂಜುಗಳು ಹೊತ್ತಿಕೊಂಡವು. ಚಂಡೆ ತಾಳಗಳ ಹಿಮ್ಮೇಳದಲ್ಲಿ ಭಾಗವತರ ಕಂಚಿನ ಕಂಠದ ಭಾಗವತಿಕೆಯ ಜೊತೆಗೆ ಸೀತಾಪಹರಣದ ಪ್ರಸಂಗ ಶುರುವಾಗಿಯೇ ಬಿಟ್ಟಿತು. ಮೊದಲಿಗೆ ಶ್ರೀರಾಮನ ಅಯೋಧ್ಯೆಯ ರಾಜವೈಭವ ತೊರೆದು ಅರಣ್ಯವಾಸದ ಪ್ರಾರಂಭದ ದೃಶ್ಯ ಮುಗಿಯುತ್ತಿದ್ದಂತೆ ರಾವಣನ ಲಂಕೆಯ ದರ್ಬಾರಿನ ದೃಶ್ಯ. ರಾವಣನ ಘನ ಗಂಭೀರ ಹೊತ್ತ ನೃತ್ಯ ಅಭಿನಯಗಳು ಎಲ್ಲ ಪ್ರೇಕ್ಷಕರನ್ನು ಕ್ಷಣಕಾಲಕ್ಕೆ ಸ್ಥಂಭೀಭೂತಗೊಳಿಸಿದವು. ವರುಷಗಳ ಹಿಂದೆ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದ ಶಂಕರ ಹೆಗ್ದೆಯರೇ ಮತ್ತೆ ಶ್ರೀರಾಮನ ಮೈಯ್ಯೊಳಗೆ ಹೊಕ್ಕಿದ್ದರೋ ಎಂಬಂಥ ಅದ್ಭುತ ಅಭಿನಯದಿಂದ ತಮ್ಮ ಕಣ್ಣುಗಳನ್ನೇ ಅವರು ನಂಬದಾದರು. ಅದೇ ಗಡಸು ಧ್ವನಿ, ಅದೇ ನಡಿಗೆ, ಅದೇ ಶೈಲಿ. ಅಲ್ಲೇ ಹಾಜರಿದ್ದ ಶ್ರೀಧರ ಹೆಗ್ದೆಯ ಕಣ್ಣುಗಳಲ್ಲಿ ಕೂಡ ಭಯಮಿಶ್ರಿತ ಭಾವ ತೋರಿಕೊಂಡಿತು. ಎಲ್ಲಿ ಅಪ್ಪನ ಭೂತ ಈತನ ಮೈ ಹೊಕ್ಕಿ ಹೀಗೆಲ್ಲ ಆಟವಾಡಿಸುತ್ತಿರಬಹುದೇನೋ ಎಂಬ ಅನುಮಾನ ಆತನನ್ನು ಕಾಡತೊಡಗಿತು. ಹೀಗೇ ಎಲ್ಲ ಪ್ರೇಕ್ಷಕರು ಕಣ್ ಕಣ್ ಬಿಟ್ಟು ಆಟವನ್ನು ನೋಡುತ್ತಿರುವಂತೆಯೇ ರಾವಣ ಸೀತೆಯನ್ನು ಅಪಹರಿಸುವುದು, ರಾಮ, ಲಕ್ಷ್ಮಣ, ಹನುಮಂತರು ಸೀತಾನ್ವೇಷಣೆಯಲ್ಲಿ ಲಂಕೆಯನ್ನು ಬಂದು ತಲುಪುವುದು ಮುಗಿದೇ ಹೋಯಿತು. ಇಡೀ ಪ್ರಸಂಗದಲ್ಲಿ ರಾವಣನ ವೈಭವಯುತ ಅಭಿನಯದ ಎದುರು ರಾಮನ ಅಭಿನಯ ಸಂಪೂರ್ಣ ಪೆಚ್ಚಾಗಿ ತೋರತೊಡಗಿತು. ಇದೇ ಸಮಯದಲ್ಲಿ ರತ್ನಾಕರ ಶೆಟ್ಟರು ಗಮನಿಸಿದ ಅಂಶವೆಂದರೆ ಇಡೀ ಪ್ರಸಂಗದಲ್ಲಿ ಎಲ್ಲಿ ಕೂಡ ರಾವಣ ಸೀತೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡದೇ ಇರುವುದು. ಯಾಕೋ ಶ್ರೀರಾಮ ಏನನ್ನೋ ಮರೆಯುತ್ತಿದ್ದಾನೆ ಎಂಬ ಆತಂಕ ಅವರನ್ನು ಕಾಡಿತು. ಆದರೆ ರಾವಣನ ಪ್ರವೇಶವಾಗುತ್ತಿದ್ದಂತೆ ಏರುತ್ತಿದ್ದ ಪ್ರೇಕ್ಷಕರ ಕರತಾಡತನದ ಸದ್ದು ಅವರ ಬಾಯಿ ಮುಚ್ಚಿಸಿದವು.
ಹೀಗೆ ಪ್ರಸಂಗದ ಕಡೆಯ ಹಂತವಾದ ರಾಮ ರಾವಣ ಕಾಳಗದ ಸನ್ನಿವೇಶ ಶುರುವಾಗುತ್ತದೆ. ಇನ್ನೇನು ರಾಮ ಬಿಲ್ಲನ್ನೆತ್ತಿ ಯುದ್ಧ ಶುರು ಮಾಡಬೇಕೆಂಬುವಷ್ಟರಲ್ಲಿ ನೆರೆದಿದ್ದ ಎಲ್ಲ ಜನರಿಗೆ ಆಶ್ಚರ್ಯವಾಗುವಂತೆ ರಾವಣ ಆತನನ್ನು ತಡೆಯುತ್ತಾನೆ. ಕೇಳುತ್ತಾನೆ, “ಹೇ ರಾಮನೇ, ಜಗದುದ್ದಕ್ಕೂ ಮರ್ಯಾದಾ ಪುರುಷೋತ್ತಮನೆನಿಸಿಕೊಂಡಿರುವ ನೀನು ಯಾವ ಕಾರಣದ ಮೇಲೆ ಯುದ್ಧ ಸಾರುತ್ತಿರುವೆ ಹೇಳು. ನನ್ನ ಮಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ನನ್ನ ಮನೆಯಲ್ಲಿರಿಸಿಕೊಳ್ಳುವುದು ನಿನ್ನ ಪ್ರಕಾರ ತಪ್ಪೇ?”. ಮೊದಲೇ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಮನ್ನಣೆಯಿಂದ ಕುದಿಯುತ್ತಿದ್ದ, ಕುಗ್ಗಿ ಹೋಗಿದ್ದ ರಾಮನ ಪಾತ್ರಧಾರಿ ರಾವಣನ ಈ ಪ್ರಶ್ನೆಯಿಂದ ಮತ್ತಷ್ಟು ಗೊಂದಲಕ್ಕೀಡಗುತ್ತಾನೆ. ಆದರೂ ಸುಧಾರಿಸಿಕೊಂಡು, ಶ್ರೀರಾಮನಿಗೆ ನೆನಪಿಸಲೆಂಬಂತೆ ಮತ್ತೆ, ಸೀತೆಯು ತನ್ನ ಪತ್ನಿಯೆಂದೂ ರಾವಣನಾದ ನೀನು ಆಕೆಯನ್ನು ತಾನಿಲ್ಲದಿರುವಾಗ ಮೋಹಕ್ಕೆ ಬಲಿಯಾಗಿ ಅಪಹರಿಸಿಕೊಂಡು ಬಂದಿರುವುದಾಗಿಯೂ ನೆನಪಿಸುತ್ತಾನೆ. ಇದನ್ನು ಕೇಳಿ ಮತ್ತೆ ವಿಕಾರವಾಗಿ ಗಹಗಹಿಸಿ ನಕ್ಕ ರಾವಣ ಮುಂದುವರೆಸುತ್ತಾನೆ, “ಯಾವ ಸೀಮೆಯ ಪತ್ನಿ ನಿನಗೆ. ಮದುವೆಯಾಗಿ ಯಾವ ಸುಖ ನೀಡಿದ್ದೀಯ ನೀನು ಆಕೆಗೆ? ಅರಣ್ಯವಾಸವೇ? ನಾನು ಆಕೆಯ ಮೋಹಕ್ಕೆ ಬಲಿಯಾಗಿ ಅಪಹರಿಸಿಕೊಂಡು ಬಂದೆನೇ? ಅಪ್ಪ ಮಗಳ ಮಧ್ಯೆ ಅಂಥದ್ದೊಂದು ಸಂಬಂಧ ಕಲ್ಪಿಸಲು ದೈವ ಸಮಾನನಾದ ನಿನಗೆ ನಾಚಿಕೆಯಾಗುವುದಿಲ್ಲವೇ? ಅಷ್ಟಕ್ಕೂ ಆ ಕಾರಣಕ್ಕಾಗಿ ನಾನು ಆಕೆಯನ್ನು ಅಪಹರಿಸಿಕೊಂಡು ಬಂದಿದ್ದರೆ, ಬಲವಂತವಾಗಿ ದೌರ್ಜನ್ಯದಿಂದ ಆಕೆಯನ್ನು ಒಲಿಸಿಕೊಳ್ಳುವುದು ನನಗೆ ಅಸಾಧ್ಯವಾದ ಕೆಲಸವೆಂದು ನೀನು ತಿಳಿದಿರುವೆಯ? ಕೇಳು ಆಕೆಯನ್ನೇ, ಇಷ್ಟು ದಿನದಲ್ಲಿ ಒಮ್ಮೆಯಾದರೂ ನಾನು ಆಕೆಯ ಮೈ ಮುಟ್ಟುವ ಪ್ರಯತ್ನ ಮಾಡಿದ್ದೇನೆಯೇ ಎಂದು. ಸತ್ಯ ನಿನಗೂ ಗೊತ್ತು ರಾಮ. ನೀನು ಬಂದಿರುವುದು ನಿನ್ನ ಹೆಂಡತಿಯನ್ನು ಬಿಡಿಸಿಕೊಂಡು ಹೋಗಲಿಕ್ಕೆಂದು ಖಂಡಿತ ಅಲ್ಲ. ಸಾಮ್ರಾಜ್ಯಶಾಹಿಯಾದ ನಿನಗೆ ವೈಭವದಿಂದ ಕಂಗೊಳಿಸುತ್ತಿರುವ ಲಂಕೆ ಕಣ್ಣು ಕುಕ್ಕಿದೆ. ನಿನಗೆ ಬೇಕಾಗಿರುವುದು ಲಂಕೆ. ಸೀತೆಯಲ್ಲ.” ಕ್ಷಣಕಾಲಕ್ಕೆ ರಾಮನ ಪಾತ್ರಧಾರಿ, ಭಾಗವತರು ಸೇರಿದಂತೆ ಇಡೀ ಪ್ರೇಕ್ಷಕ ಸಮೂಹವೇ ಸ್ಥಬ್ಧವಾಗಿ ಬಿಡುತ್ತದೆ. ರತ್ನಾಕರ ಶೆಟ್ಟರಿಗೆ ನಿಧಾನವಾಗಿ, ಶ್ರೀರಾಮನಿಗೆ ಅಭಿನಯಿಸಲು ಅವಕಾಶ ಕೊಟ್ಟು ತಾನು ಮಾಡಿದ ತಪ್ಪಿನ ಭಾಸವಾಗುತ್ತದೆ. ಅಷ್ಟರಲ್ಲಿ ನೆರೆದ ಜನರ ಮಧ್ಯೆ ಗುಸು ಗುಸು ಸದ್ದುಗಳು ಪ್ರಾರಂಭವಾಗಿ, ಕೆಲವರ ಮುಖದಲ್ಲಿ ಹಾಸ್ಯ ಹಾಗೂ ಕೆಲವರ ಮುಖದಲ್ಲಿ ಗೊಂದಲ, ಕೆಲವರ ಮುಖದಲ್ಲಿ ಕುತೂಹಲದ ಭಾವನೆಗಳು ತೋರಿ ಅಲ್ಲಲ್ಲಿ ರಾವಣನ ಪರ, ವಿರೋಧಿ ಚರ್ಚೆಗಳು ಪ್ರಾರಂಭವಾಗುತ್ತದೆ. ಆದರೆ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಶ್ರೀಧರ, ಕೂಡಲೇ ತನ್ನ ಗುಂಪಿನವರನ್ನೊಡಗೂಡಿ ಹಿಗ್ಗ ಮುಗ್ಗವಾಗಿ ಶ್ರೀರಾಮನನ್ನು ಹೀಯಾಳಿಸಲು ಶುರು ಹಚ್ಚಿಕೊಳ್ಳುತ್ತಾನೆ.” ಹೋಗಿ ಹೋಗಿ ಈ ಹುಚ್ಚನಿಗೆ ಪಾತ್ರ ಕೊಡುವ ಮುಂಚೆ ಸ್ವಲ್ಪವಾದರೂ ಯೋಚನೆ ಮಾಡಬೇಕಿತ್ತು ರತ್ನಾಕರ ಶೆಟ್ಟರೆ. ನೋಡಿ ಈಗ ಈತನಿಂದಾಗಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಈ ಯಕ್ಷಗಾನ ಪ್ರಸಂಗ ಅಪಹಾಸ್ಯಕ್ಕೀಡಾಗಿ ಬಿಟ್ಟಿತು. ಪರವೂರಿನಿಂದ ಬಂದ ಗಣ್ಯರ ಎದುರು ಬೆಳ್ಯಾಡಿಯ ಮರ್ಯಾದೆ ಹರಾಜಾಯಿತು. ಈತನನ್ನು ಹೀಗೆಯೇ ಬಿಟ್ಟರೆ ಈತನ ಹುಚ್ಚುತನದ ಪರಮಾವಧಿಯನ್ನು ನಾವು ಅನುಭವಿಸಬೇಕಾಗುತ್ತದೆ.” ಎಂದಿಷ್ಟು ಶ್ರೀಧರ ಗಟ್ಟಿಯಾಗಿ ನೆರೆದಿರುವವರಿಗೆ ಕೇಳಿಸುವಂತೆ ಹೇಳಿ ತನ್ನ ಗುಂಪಿನ ಹುಡುಗರಿಗೆ ಹಿಂದಿನಿಂದ ಕೈ ಸನ್ನೆ ಮಾಡುತ್ತಾನೆ. ಅಷ್ಟಕ್ಕೂ, ಆ ಎಲ್ಲ ಪೋಲಿ ಹುಡುಗರು ಜೊತೆಯಾಗಿ ಹೌದು ಹೌದು ಈ ಬಡ್ಡಿಮಗನಿಗೆ ಬುದ್ಧಿ ಕಲಿಸಬೇಕು ಎಂದು ಕಿರಿಚುತ್ತ, ವೇದಿಕೆಯತ್ತ ಕಲ್ಲುತೂರಾಟ ನಡೆಸುತ್ತಾರೆ. ರಾವಣನ ವೇಷ ಧರಿಸಿದ ಶ್ರೀರಾಮನ ಮೇಲೆ ಕಲ್ಲು, ಚಪ್ಪಲಿಗಳ ಸುರಿಮಳೆಯಾಗುತ್ತದೆ. ನೋಡು ನೋಡುತ್ತಲೇ ಗಲಭೆ ತೀವ್ರವಾಗಿ ಪ್ರೇಕ್ಷಕರೆಲ್ಲರೂ ಎದ್ದೆವೋ ಬಿದ್ದೆವೋ ಎಂದು ಕಾಲ್ಕಿತ್ತು ಕ್ಷಣಮಾತ್ರದಲ್ಲಿ, ಯಕ್ಷಗಾನ ಚಪ್ಪರದಲ್ಲಿ ಸ್ಮಶಾನ ಕಳೆ ಆವರಿಸುತ್ತದೆ. ಇನ್ನೂ ಅಲ್ಲೇ ಉಳಿದಿರುವುದು ಮೈ ತುಂಬಾ ಗಾಯಗೊಂಡಿರುವ ಶ್ರೀರಾಮ ಹಾಗೂ ದೂರದಲ್ಲಿ ನಿಂತು ಶ್ರೀರಾಮನ ಅವಸ್ಥೆ ನೋಡಿ ಗಹಗಹಿಸಿ ನಗುತ್ತಿರುವ ಶ್ರೀಧರ ಹೆಗ್ಡೆ ಮಾತ್ರ. ಶ್ರೀರಾಮ, ರಾವಣ ವೇಷವನ್ನು ಧರಿಸಿ ಇನ್ನೂ ವೇದಿಕೆಯಲ್ಲೇ ಕುಳಿತುಬಿಟ್ಟಿದ್ದಾನೆ. ಮುಖದಲ್ಲಿ ರೋಷ ಉಕ್ಕುತ್ತಿದೆ. ಶ್ರೀಧರ ಹೆಗ್ಡೆ ಹೇಳಿದ ಒಂದೊಂದು ಮಾತೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ತನಗಾದ ಅವಮಾನಕ್ಕೆ ಪ್ರತೀಕಾರದ ಯೋಚನೆ ಆಗಲೇ ಶ್ರೀರಾಮನ ತಲೆಹತ್ತಿ ಕುಣಿಯುತ್ತಿದೆ.
ಅರ್ಧ ರಾತ್ರಿಯಲ್ಲಿ ಊಳಿಡುತ್ತಿರುವ ನಾಯಿಗಳ ಮಧ್ಯದಿಂದಲೇ ರಾವಣ ವೇಷವನ್ನು ಧರಿಸಿಯೇ, ಹಣೆಯಿಂದ ಸುರಿಯುತ್ತಿರುವ ರಕ್ತವನ್ನು ಒರೆಸಿಕೊಳ್ಳುವ ಗೋಜಿಗೆ ಕೂಡ ಹೋಗದೇ ಶ್ರೀರಾಮ ಮನೆಗೆ ಮರಳುತ್ತಾನೆ.
ಮರುದಿನ ಬೆಳಗಾಗುತ್ತಲೇ ಬೆಳ್ಯಾಡಿಯ ಮನೆಮನೆಯಲ್ಲೂ ಬಿಸಿಬಿಸಿ ಕಾಫಿಯ ಜೊತೆ ಹಚ್ಚಿಕೊಂಡು ತಿನ್ನಲು ರಾತ್ರಿ ಯಕ್ಷಗಾನದಲ್ಲಿ ನಡೆದ ಘಟನೆಯ ವಿವರಗಳು ಹಾಗೂ ಬಗೆಬಗೆಯ ಗಾಳಿಮಾತುಗಳು. ಶ್ರೀಧರ ಹೆಗ್ದೆಯ ಮುಖದಲ್ಲಂತೂ ಹಿಂದೆಂದು ಕಂಡಿರದಂಥ ಆನಂದ ತುಳುಕುತ್ತಿದೆ. ಇದನ್ನೆಲ್ಲಾ ನೋಡಿ ಆತನ ತಂಗಿ ಅವನಿ ಅಸಹ್ಯ ಪಟ್ಟುಕೊಂಡೆ ಕಾಲೇಜ್ ಗೆ ಹೊರಡುತ್ತಾಳೆ. ಇಂದು ಬಸ್ ನಿಲ್ದಾಣದ ತನಕದ ೩ ಮೈಲಿಯ, ಕಾಡುಹಾದಿಯ ಪಯಣವನ್ನು ಆಕೆ ಒಬ್ಬಳೇ ನಡೆಯಬೇಕು. ಆಕೆಯ ಗೆಳತಿಯರೆಲ್ಲ ಹಬ್ಬದ ಪ್ರಯುಕ್ತ ರಜೆ ಹಾಕಿದ್ದಾರೆ, ಆದರೆ ಊರಿನ ಜನರ ಮನಸ್ಥಿತಿಯ ಬಗ್ಗೆ ಹೇಸಿಗೆಯ ಭಾವ ಬೆಳೆಸಿಕೊಂಡಿರುವ ಅವಳಿಗೆ ಹಬ್ಬದಲ್ಲಿ ಇದೇ ಜನರ ಜೊತೆ ಸೇರುವುದು ಅಸಾಧ್ಯವಾದ ವಿಷಯ. ಹೀಗೆ ಬೆಳಬೆಳಗ್ಗೆಯೇ ಮನೆ ಬಿಟ್ಟವಳಿಗೆ ಕಾಡುದಾರಿ ಶುರು ಆಗುತ್ತಲೇ ಒಳಗೊಳಗೇ ಅಳುಕು ಶುರುವಾಗಿದೆ. ಹೋಗು ಹೋಗುತ್ತಿದ್ದಂತೆ ಕಡಿದಾಗುತ್ತ ಹೋಗುವ ದಾರಿಯಲ್ಲಿ ಅವಸರವಾಗಿ ಸಾಗುತ್ತಿರುವ ಅವನಿಯ ಕಿವಿಗೆ ಪಕ್ಕದಲ್ಲೇ ತರಗಲೆಗಳ ಸದ್ದು ಕೂಡ ಕೇಳಿಸತೊಡಗುತ್ತದೆ. ಆಕೆ ವೇಗ ಹೆಚ್ಚಿಸ ತೊಡಗಿದಂತೆ ಹಿಂದಿನಿಂದ ಸದ್ದು ಕೂಡ ಹೆಚ್ಚಿ ಯಾರೋ ಆಕೆಯನ್ನು ಹಿಂಬಾಲಿಸುತ್ತಿರುವ ವಿಷಯ ಆಕೆಗೆ ಸ್ಪಷ್ಟವಾಗುತ್ತದೆ. ಆದರೂ ಹಿಂದುರಿಗಿ ನೋಡಲು ಆಕೆಗೆ ಧೈರ್ಯ ಸಾಕಾಗುತ್ತಿಲ್ಲ. ಮುಂಜಾವಿನ ಚಳಿಯಲ್ಲೂ ಹಣೆಯ ಮೇಲೆ ಮೂಡಿದ ಬೆವರನ್ನು ನಿರ್ಲಕ್ಷಿಸಿ ಆಕೆ ಓಡಲು ಸಿದ್ಧವಾಗುತ್ತಿದಂತೆ ಬಲವಾದ ಕೈಯ್ಯೊಂದು ಆಕೆಯ ಕೈಯ್ಯನ್ನು ಹಿಂದಿನಿದ ಹಿಡಿದು ತಡೆಯುತ್ತದೆ. ಭಯದಿಂದ ತತ್ತರಿಸಿ ಹಿಂದಿರುಗಿ ನೋಡಿದವಳಿಗೆ ಅಸ್ಪಷ್ಟವಾದ ವಿಚಿತ್ರ ರಾಕ್ಷಸ ವೇಷಭೂಷಣದ ಆಕೃತಿಯೊಂದು ತೋರಿದಂತಾಗಿ ಅಲ್ಲೇ ಮೂರ್ಛೆ ಬೀಳುತ್ತಾಳೆ.
(ಮುಂದುವರೆಯುತ್ತದೆ..)