ಮೃಗಶಿರ: ಮೂಲ

ಅಧ್ಯಾಯ ೨: ಮೂಲ – ಕಲಿಕಾರಂಭ

ವಿದ್ಯೆ ನಿಜಕ್ಕೂ ನಮಗೆ ಕಲಿಸುವುದು ಹೆಚ್ಚೋ ಅಥವಾ ಕಸಿದುಕೊಳ್ಳುವುದು ಹೆಚ್ಚೋ?
ಮಗು ಪ್ರಪಂಚವನ್ನು ಅಚ್ಚರಿಯಿಂದ ಏಕೆ ನೋಡುತ್ತದೆ? ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿಯನ್ನು ಹೇಗೆ ಹುಡುಕುತ್ತದೆ?

ಒಬ್ಬ ಸಂಗೀತ ವಿದ್ವಾಂಸ, ಇನ್ನೊಬ್ಬ ಸಾಮಾನ್ಯ ಮನುಷ್ಯನಂತೆ ಮಾಮೂಲಾದ ಸಂಗೀತವನ್ನು ಆಸ್ವಾದಿಸಬಲ್ಲನೇ? ತಾಳ ಲಯ ಎಲ್ಲಿ ತಪ್ಪಿದರೂ ಕೂಡಲೇ ಕಂಡು ಹಿಡಿಯುವ ಚಾತುರ್ಯತೆ ಆತನಿಗಿದೆ. ಆ ಚಾತುರ್ಯವೇ ಆತನಿಗೆ ಮುಳು. ಖುಷಿ ಪಟ್ಟು ಕೇಳಲು ಸಾಧ್ಯವಾಗುವ ಸಂಗೀತದ ಆಯ್ಕೆಯನ್ನು ಪಂಡಿತನಿಗೆ ಸಾಮಾನ್ಯ ಮನುಷ್ಯನಿಗಿಂತ ಎಷ್ಟೋ ಪಟ್ಟು ಕಡಿಮೆಗೊಳಿಸುವುದು ಕೂಡ ಅದೇ ಪಾಂಡಿತ್ಯವೇ. ಕಿವಿಗೆ ಕರ್ಕಶವೆನಿಸುವ ಸಂಗೀತ ಹೊರತು ಪಡಿಸಿ ಉಳಿದೆಲ್ಲ ಅತಿ ಸಾಧಾರಣವಾದ ಸಂಗೀತವನ್ನು ಆಸ್ವಾದಿಸುವ ಶಕ್ತಿ ಇರುವುದು ಸಂಗೀತದ ಪರಿಪೂರ್ಣ ಜ್ಞಾನವಿಲ್ಲದ ಸಾಮಾನ್ಯನಿಗೆ ಮಾತ್ರ.
ಪ್ರಸಿದ್ಧ ಪಾಕಶಾಸ್ತ್ರ ಪ್ರವೀಣನೊಬ್ಬ ಸಾಮಾನ್ಯ ಮಟ್ಟದ ಗೃಹಿಣಿಯ ಅಡುಗೆಯನ್ನು ಯಾವುದೇ ಪೂರ್ವಾಪರ ವಿಶ್ಲೇಷಣೆ ಟೀಕೆಗಳಿಲ್ಲದೆ ಸವಿಯಬಲ್ಲನೇ? ಸ್ವಲ್ಪ ಹೆಚ್ಚು ಕಡಿಮೆಯಾಗಿರುವ ಉಪ್ಪು ಹುಳಿ ಖಾರಗಳ ಸರಿಯಾದ ಸಂಯೋಜನಯನ್ನೇ ವಿಶ್ಲೇಷಿಸುತ್ತಾ ಇರುವ ಆತನ ನಾಲಿಗೆ, ಅಡುಗೆ ಮಾಡಿದ ಹೆಂಡತಿಯ ಅಕ್ಕರೆಯನ್ನು ಮರೆಮಾಚಲಿಕ್ಕಿಲ್ಲವೇ? ಇದೇ ಸಂದಿಗ್ಧತೆ ಪರಿಣಿತ ಚಿತ್ರಕಾರನಿಗೆ. ಇನ್ನೊಬ್ಬ ಚಿತ್ರಕಾರನ ಚಿತ್ರದ ಯಾವುದೋ ಮೂಲೆಯಲ್ಲಿ ತಪ್ಪಿದ ಬಣ್ಣ ಸಂಯೋಜನೆ ಆತನ ಕಣ್ಣು ಕುಕ್ಕುತ್ತದೆ. ಪಳಗಿದ ನಟನಿಗೆ ಕಿರಿಯ ನಟನ ಹಾವಭಾವ ಅತಿ ಕೃತ್ರಿಮವಾಗಿ ತೋರುವುದು ಇದೇ ಕಾರಣಕ್ಕಲ್ಲವೇ?

ವಿದ್ಯೆಯಿಂದ ಪಾಂಡಿತ್ಯ ಪ್ರಾಪ್ತಿಯಾಗುತ್ತದೆ. ಪಾಂಡಿತ್ಯ ಸೂಕ್ಷ್ಮ ವಿಶ್ಲೇಷಣಾ ಭಾವವನ್ನು ಬೆಳೆಸುತ್ತದೆ. ವಿಶ್ಲೇಷಣೆ ಮಾಡುವ ಶಕ್ತಿಯೇ ಮಾನವನಿಗಿರುವ ಅತಿ ದೊಡ್ಡ ಶಾಪವಿರಬಹುದೇ?

ವಿದ್ಯೆ ಸಮಾಜದಲ್ಲಿ ಸ್ಥರ ವಿಂಗಡಣೆ ಮಾಡಿಕೊಳ್ಳಲು ಇರುವ ಒಂದು ವ್ಯವಸ್ಥೆಯಷ್ಟೇ. ಈ ವ್ಯವಸ್ಥೆಯನ್ನು ಪೋಷಿಸಿರುವುದು ಕೂಡ ಸಮಾಜವೇ. ವಿದ್ಯೆ ಬರಿಯ ಒಂದು ಹಣೆಪಟ್ಟಿ. ಪದವಿ ಮುಗಿದಿದೆ, ವಿದ್ಯಾವಂತ. ಸ್ನಾತಕೋತ್ತರ ಪದವಿ ಮುಗಿದಿದೆಯಾದರೆ ಇನ್ನು ಜಾಸ್ತಿ ಬುದ್ಧಿವಂತ. ಹೊರದೇಶದಲ್ಲಿ ವಿದ್ಯೆ ಮುಗಿದಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ವಿದ್ಯಾವಂತ ಹಾಗೂ ಸ್ಥಿತಿವಂತ. ಗುಣವಂತನ ಗೊತ್ತಿಲ್ಲ. ಬೇಕಿಲ್ಲ.

ಅಂತರಾಳವನ್ನು ಬೇಯಿಸುವಂಥ ಕೆಲವು ಸನ್ನಿವೇಶಗಳಲ್ಲೇ ಮನುಷ್ಯನ ಕೃತಕತೆ ಕಳಚುವುದು, ನಿಜ ರೂಪ ಹೊರಬರುವುದು. ವಿದ್ಯೆ ಬರೀ ಸಮಾಜದ ಎದುರು ಧರಿಸಬೇಕಾಗಿರುವ ಮೇಣದ ಪದರವಷ್ಟೇ.

ಅಂಗಡಿಯಲ್ಲಿ ಸಿಗುವ ಮೇಣ ಹಚ್ಚಿ ಹೊಳಪು ಮಾಡಿ ಚೀಟಿ ಅಂಟಿಸಿರುವ ಹಾಗೂ ದೂರದ ಕಾಡಲ್ಲೆಲ್ಲೋ ಬೆಳೆದು ಪ್ರಾಣಿ ಪಕ್ಷಿಗಳ ಆಹಾರವಾಗಿ ಕರಗುವ ತಾಜಾ ಸೇಬು ಹಣ್ಣಿಗಿರುವ ವ್ಯತ್ಯಾಸವೂ ಕೂಡ ಇದೇ ತರಹದ್ದು. ಹೊಳೆಯುವುದಕ್ಕೆ ಕ್ರಯ ಜಾಸ್ತಿ. ರುಚಿ, ಖರೀದಿಸಿದ ಮೇಲೆ ತಾನೇ ತಿಳಿಯುವುದು. ರುಚಿಯಿಲ್ಲದಿದ್ದರೂ ಸಮಾಧಾನ ಪಟ್ಟುಕೊಳ್ಳುವುದೊಂದೇ ಉಳಿದಿರುವ ದಾರಿ. ಬಿಸಿ ನೀರಲ್ಲಿ ಹಣ್ಣನ್ನು ತೊಳೆದಾಗಲೇ ಗೊತ್ತಾಗುವುದು ಹೊರಗಿದ್ದದ್ದು ಬರಿ ಮೇಣದ ಪದರವೆಂದು.

ಚಿಕ್ಕಂದಿನಲ್ಲಿ ಊಟ ಮಾಡಬೇಕಾದರೆ ಒಮ್ಮೆ ಅಮ್ಮನನ್ನು ಪ್ರಶ್ನೆ ಕೇಳಿದ ನೆನಪು.
“ಊಟ ಮಾಡಿದರೇನು ಪ್ರಯೋಜನ? “
“ಊಟ ಮಾಡಿದರೆ ಮಾತ್ರ ಬೆಳವಣಿಗೆ ಸಾಧ್ಯ. ಬೆಳವಣಿಗೆ ಆದರೆ ಮಾತ್ರ ಮುಂದೆ ದೊಡ್ಡ ಮನುಷ್ಯನಾಗುತ್ತೀಯ ” ಅಮ್ಮ ಉತ್ತರಿಸಿದ್ದಳು.
ನಾವು ಮಾಡುತ್ತಿದ್ದ ಊಟದ ಬಹುಪಾಲು ಅನ್ನವೇ ಆಗಿತ್ತು. ಅನ್ನ ಬರುವುದು ಅಕ್ಕಿಯಿಂದ, ಅಕ್ಕಿ ಭತ್ತದಿಂದ. ಅಪ್ಪ ಇಡೀ ದಿನ ದೇವಸ್ಥಾನದಲ್ಲಿ ದುಡಿಯುತ್ತಿದ್ದರು. ಹಣ ಸಂಪಾದಿಸಲು. ಸಂಪಾದಿಸಿದ ಹಣದಿಂದ ಅಕ್ಕಿ ಕೊಳ್ಳಲು. ಅಂದರೆ ಎಲ್ಲರೂ ದುಡಿಯುವುದು ಅಕ್ಕಿಗಾಗಿ ಎಂದಷ್ಟೇ ಅರ್ಥೈಸಿಕೊಂಡಿದ್ದೆ.
ಇನ್ನೊಮ್ಮೆ ಅಮ್ಮನನ್ನು ಕೇಳಿದ್ದೆ,
“ಶಾಲೆಗೆ ಯಾಕೆ ಹೋಗಬೇಕು ನಾನು?”
“ಕಲಿತು ಬುದ್ಧಿವಂತನಾಗಲು. ಮುಂದೆ ದೊಡ್ಡ ಮನುಷ್ಯನಾಗಲು.” ಅಮ್ಮನದ್ದು ಮತ್ತೆ ಅಂಥದ್ದೇ ಉತ್ತರ.
“ಆದರೆ ನೀನೇ ಮೊನ್ನೆ ಹೇಳಿದ್ದೆ ಅಲ್ಲವೇ ಊಟ ಮಾಡಿದರೆ ದೊಡ್ಡ ಮನುಷ್ಯನಾಗುತ್ತೇನೆ ನಾನು ಎಂದು?”
ಅಮ್ಮ ಜೋರಾಗಿ ನಕ್ಕು ಅಡುಗೆ ಮನೆಯೊಳಗೇ ತನ್ನ ಕೆಲಸ ಮುಂದುವರೆಸಲು ಹೋಗಿದ್ದಳು.
ನಾನು ಅಂದೇ ನಿರ್ಣಯಿಸಿದ್ದೆ ನಾನು ದೊಡ್ಡ ಮನುಷ್ಯನಾಗಬೇಕಾದರೆ ಭತ್ತ ಬೆಳೆಯಬೇಕು ಅಂದು. ಆದರೆ ಶಾಲೆಯಲ್ಲಿ ಕಲಿಸಿ ಕೊಡುತ್ತಿದ್ದ ಯಾವ ವಿಷಯಗಳೂ ಕೂಡ ಭತ್ತ ಬೆಳೆಯುವುದರ ಸಂಬಂಧವಾಗಿ ಇರುತ್ತಲೇ ಇರಲಿಲ್ಲ. ಬಹುಶಃ ಅದೇ ಕಾರಣದಿಂದ ನನಗೆ ಅಲ್ಲಿ ಕಲಿಸಿಕೊಡುತ್ತಿದ್ದದ್ದರಲ್ಲಿ ಆಸಕ್ತಿ ಕೂಡ ಇರಲಿಲ್ಲವೆಂದೆನಿಸುತ್ತದೆ.

ನಮ್ಮ ಮನೆ ಪಡುಬದಿಯ ಗೋಡೆ ಕುಸಿದು ಬಿದ್ದಾಗ ಮರುದಿನವೇ ಬಂದು ಹೊಸ ಗೋಡೆ ಕಟ್ಟಿ ಆಪತ್ತುಗಳಿಂದ ದೂರ ಮಾಡಿದ್ದ ಮೇಸ್ತ್ರಿ ಕೃಷ್ಣ ಶಾಲೆ ಮುಖ ನೋಡಿದವನಲ್ಲ. ಅವನಿಗೆ ಗಣಿತದ ಕ್ಲಿಷ್ಟಕರ ಪ್ರಮೇಯಗಳಾಗಲಿ, ತಾಳಿಕೋಟೆ ಕದನ ನಡೆದ ಇಸವಿಯ ಜ್ಞಾನವಾಗಲಿ ಇರಲಿಲ್ಲ.
ಬೆಳ್ಯಾಡಿಯ ದೊಡ್ಡ ಬೇಸಾಯಗಾರ ಸೀನ ಪೂಜಾರಿ ಬೆಳಗ್ಗೆದ್ದು ಗದ್ದೆ ಬಯಲಿನಲ್ಲಿ ತಾಜಾ ಹವೆ ಸೇವಿಸಿಕೊಂಡು, ಬೆವರು ಸುರಿಸಿ ಮೈ ಮುರಿದು ದುಡಿದು, ಕೃಷಿ ಮಾಡುತ್ತಲೇ ೧೦೦ ವರ್ಷಕ್ಕೂ ಹೆಚ್ಚು ಬದುಕಿದ. ೮೦-೮೫ ಪ್ರಾಯದವರೆಗೂ ಆತನ ಭುಜಗಳು ಕಟ್ಟು ಮಸ್ತಾಗಿದ್ದವು. ಆದರೆ ನನ್ನ ಚಿಕ್ಕಪ್ಪ ಪಟ್ಟಣದಲ್ಲಿ ವಿದ್ಯಾಭ್ಯಾಸ ನಡೆಸಿ ಬೆಂಗಳೂರಿನ ಯಾವುದೋ ಕಂಪೆನಿಯ ದೊಡ್ಡ ಹುದ್ದೆಯಲ್ಲಿ ಕೆಲಸಮಾಡುತ್ತಿದ್ದವ ಸುಮಾರು ೫೦ ವರ್ಷ ಪ್ರಾಯದಲ್ಲಿಯೇ ಅಸ್ತಮಾ, ಉಸಿರಾಟದ ತೊಂದರೆಯಿಂದ ತೀರಿ ಹೋದ. ನನ್ನ ದೃಷ್ಟಿಯಲ್ಲಿ ಸೀನ ಚಿಕ್ಕಪ್ಪನಿಗಿಂತ ಮಹಾ ಸಾಧಕನಾಗಿ ತೋರುತ್ತಿದ್ದ. ಆದರೆ ಗೊಂದಲವೆನಿಸುವಂತೆ ಚಿಕ್ಕಪ್ಪ ಬೆಳ್ಯಾಡಿಗೆ ಒಮ್ಮೊಮ್ಮೆ ಬಂದಾಗಲೆಲ್ಲ ಸೀನ ಆತನ ಎದುರು ಅತಿ ವಿಧೇಯನಾಗಿ ಕೈ ಕಟ್ಟಿ ಮೈ ಬಾಗಿಸಿ ಮಾತನಾಡುತ್ತಿದ್ದ. ಚಿಕ್ಕಪ್ಪ ದರ್ಪದಿಂದಲೇ ಉತ್ತರಿಸುತ್ತಿದ್ದ. ವಿದ್ಯೆ ಚಿಕ್ಕಪನಿಗೆ ಮಾನ್ಯತೆ ಕೊಡಿಸಿತ್ತು.

ವಿದ್ಯೆಯಿಂದ ಧನಪ್ರಾಪ್ತಿಯಾಗುತ್ತಿತ್ತು. ಶ್ರಮದಿಂದ ಧಾನ್ಯ ಪ್ರಾಪ್ತಿಯಾಗುತ್ತಿತ್ತು. ಧನ ಮೇಲೋ ಧಾನ್ಯ ಮೇಲೋ ಎನ್ನುವ ಗೊಂದಲ ಈ ಕೊನೆಯ ಕ್ಷಣದ ತನಕ ನನ್ನ ಜೊತೆಯೇ ಬೆಳೆದುಕೊಂಡೆ ಬಂದಿದೆ.

ನನ್ನ ಇವೆಲ್ಲ ಗೊಂದಲಗಳಿಗೆ ತದ್ವಿರುದ್ಧವಾಗಿ ಬೆಳೆದವನು ಕಲ್ಲಳ್ಳಿಯ ಈ ವಿಶ್ವೇಶ್ವರ ಹಂದೆ. ಆತ ಅಲ್ಪಸ್ವಲ್ಪ ವಿದ್ಯೆಯನ್ನು ಮೈಗೂಡಿಸಿಕೊಂಡಿದ್ದ, ಕಾಡಿನೊಳಗಿನ ನಿಗೂಢ ಹೊಲದಲ್ಲಿ ಏನೋ ತಿಳಿಯದಂತ ಕೃಷಿ ಕೂಡ ಮಾಡುತ್ತಿದ್ದ. ಇದೆ ಕಾರಣಕ್ಕೆ ಆತ ಮಾನಸಿಕವಾಗಿ ಹಾಗು ದೈಹಿಕವಾಗಿ ಕೂಡ ಮೊನಚಾಗಿದ್ದ.

ಅಂದು ಸಂಜೆ ಅವನಿಂದ ತಿಂದ ಬೆತ್ತದ ಹೊಡೆತದ ರುಚಿ ಮನಸ್ಸಿನಲ್ಲಿ ಮಾಸದಂತ ಗಾಯ ಮಾಡಿತ್ತು. ಅಮ್ಮ, ಅಪ್ಪ, ಈ ಹಂದೆ ಮಾವ, ಆತನ ಹೆಂಡತಿ ಎಲ್ಲರ ಮೇಲೆ ತಡೆಯಲಾರದ ಆಕ್ರೋಶ ಭುಗಿಲೇಳುತ್ತಿತ್ತು. ಮರುದಿನ ಮುಂಜಾವಿನ ಹೊತ್ತಿಗೆ ನಾನು ಕಲ್ಲಳ್ಳಿಯ ಗಡಿ ದಾಟಿ ಓಡಿದ್ದೆ. ಬೆಳಗ್ಗಿನ ಹೊತ್ತಿಗೆಲ್ಲ ಸುಸ್ತಾಗಿ ಯಾವುದೋ ಚಿಕ್ಕ ಹಳ್ಳಿಯ ಹೊರಗಿನ ಕಟ್ಟಡದ ಚಾವಡಿಯಲ್ಲಿ ನಿದ್ದೆ ಹೋಗಿದ್ದೆ. ನಾನು ಹಾಕಿದ್ದ ಜನಿವಾರಕ್ಕೆ ಹೆದರಿಯೋ, ಸುಸ್ತಾಗಿ ಮಲಗಿದ ನನ್ನ ಸ್ಥಿತಿಗೆ ಮರುಗಿಯೋ ಯಾರೋ ಪುಣ್ಯಾತ್ಮರು ೨ ಬಾಳೆಹಣ್ಣುಗಳನ್ನು ಪಕ್ಕದಲ್ಲಿಯೇ ಇಟ್ಟು ಹೋಗಿದ್ದರು. ಮುಂದಿನ ದಾರಿ ಏನೆಂದು ನಿಜಕ್ಕೂ ಹೊಳೆಯುತ್ತಿರಲಿಲ್ಲ. ಸಮವಸ್ತ್ರ ಧರಿಸಿದ ೨ ಹುಡುಗರು ನನ್ನನ್ನೇ ದುರುಗುಟ್ಟಿ ನೋಡಿಕೊಂಡು ನನ್ನ ಕಣ್ಣೆದುರಿಗೆ ನಡೆದು ಹೋದರು. ಅವರ ಬೆನ್ನಿಗಂಟಿಕೊಂಡಿದ್ದ ಪುಸ್ತಕಗಳ ಚೀಲವು ನನ್ನ ಕೈಯಲ್ಲಿರುವ ಬಾಳೆಹಣ್ಣಿನ ಸಿಪ್ಪೆಯನ್ನು ನೋಡಿ ಅಣಕಿಸಿದಂತೆ ಭಾಸವಾಯಿತು.

ಮುಂದುವರೆಯುವುದು…

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)