ಶಾಸ್ತ್ರೋಕ್ತ..

ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋ ಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ  ಹೋಗುವ ಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ. ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಜಡಿ ಮಳೆ ತಪ್ಪಿಲ್ಲದೇ ಹಾಜರು. ಉದ್ದನೆಯ ನಿಲುವಂಗಿ ತರದ, ಮೇಲೊಂದು ಟೊಪ್ಪಿ ಸಿಕ್ಕಿಸಿಕೊಂಡಿರುವ ಬಣ್ಣದ ರೈನ್ ಕೋಟ್ ಹಾಕಿಕೊಂಡು ಶಾಲೆಯಿಂದ ಹೊರಟರೆ ಮನೆಗೆ ತಲುಪುವಾಗ ಮಳೆಯ ರಭಸಕ್ಕೆ ಮುಖ ಮಾತ್ರ ಒದ್ದೆಯಾಗಿ ಬಾಯಿಯ ಒಳಗೆ ಹನಿ ಹನಿ ಉಪ್ಪು ನೀರಿನ ರುಚಿ. ಉಪ್ಪು ರುಚಿಗೆ ಕಾರಣ ಮೂಗಿನಿಂದ ಸುರಿದ ನೀರೋ ಅಥವಾ ಮಳೆಗೆ ತೊಯ್ದ ಮುಖದಲ್ಲಿದ್ದ ಬೆವರು ಕಾರಣವೋ ಇಂದಿಗೂ ತಿಳಿದಿಲ್ಲ. ಇನ್ನು ಕಾಲೇಜ್ ಸಮಯದಲ್ಲಿ ಕೊಡೆ ಹಿಡಿದುಕೊಂಡು ಸೈಕಲ್ ಹತ್ತಿ ಮನೆ ಹೊರಟರೆ, ತಲುಪುವ ಸಮಯದಲ್ಲಿ ಕುತ್ತಿಗೆಯ ಕೆಳಗಿನ ಎಲ್ಲ ಭಾಗಗಳು ಓದ್ದೆಯೇ. ಈಗ ಕೆಲಸಕ್ಕೆ ಸೇರಿದ ಮೇಲೆ ಸೈಕಲ್ ಜಾಗಕ್ಕೆ ಬೈಕ್ ಬಂದಿದೆ, ಕೊಡೆಯ ಜಾಗಕ್ಕೆ ಹೆಲ್ಮೆಟ್ ಬಂದಿದೆ ಅಷ್ಟೇ. ಮಳೆ ತನ್ನ ಸಮಯವನ್ನು, ಕಿಲಾಡಿತನವನ್ನು ಎಂದೂ ಬಿಟ್ಟುಕೊಟ್ಟಿಲ್ಲ.
ಬೆಂಗಳೂರಿನ ಅತೀ ಚಟುವಟಿಕೆಯ ಪ್ರಯಾಸದ ಜೀವನದಿಂದ ಸ್ವಲ್ಪ ದಿನ ವಿಶ್ರಾಮ ತಗೊಳ್ಳುವ ಆಲೋಚನೆಯಿಂದ ೧ ವಾರದ ಉದ್ದದ ರಜೆ ಹಾಕಿ ಊರಿಗೆ ಬಂದರೆ ಸರಿಯಾಗಿ ಇಲ್ಲಿ ಕೂಡ ಕುಂಭ ದ್ರೋಣ ಮಳೆ. ಬೇಕಾದ ಕೆಲವು ದಿನಸಿ ಸಾಮಾನು ತರಲು ಸಂಜೆ ಅಪ್ಪನ ಬೈಕನ್ನೇರಿ ಮನೆ ಬಿಟ್ಟವನಿಗೆ ಪೇಟೆಯಲ್ಲಿ ಹಳೆಯ ಗೆಳೆಯ ಸಿಕ್ಕಿ ಹರಟುತ್ತ ಹರಟುತ್ತ ಸಮಯ ನೋಡಲು ಆಗಲೇ ರಾತ್ರಿ ೮ ಗಂಟೆ. ಮೊಬೈಲ್ ಫೋನ್ ಕೂಡ ಮನೆಯಲ್ಲೇ ಬಿಟ್ಟು ಬಂದಿದ್ದೇನೆ. ಅಮ್ಮ ಅಪ್ಪನ ಆತಂಕ ತಾರಕಕ್ಕೆ ಏರಿರುತ್ತದೆ ಈಗಾಗಲೇ ಎಂದು ಯೋಚಿಸುತ್ತ, ಬೈಕಿನ ಮೇಲೆ ಕುಳಿತುಕೊಳ್ಳಲು ಸರಿಯಾಗಿ, ಮೇಲಿಂದ ಯಾರೋ ಬಕೆಟ್ಟಿನಲ್ಲಿ ನೀರು ಸುರಿದಂತೆ ಧೋ ಎಂದು ಮತ್ತೆ ಮಳೆ ಶುರು. ಗೊತ್ತಿದ್ದ ಹಳೇ ಬೈಗುಳಗಳನ್ನೆಲ್ಲ ಮಳೆಯ ಮೇಲೆ ಪ್ರಯೋಗಿಸಿ ಹಾಗಾದರೂ ಮಳೆ ನಿಂತಿತೇ ಎಂದು ನಿರೀಕ್ಷಿಸುತ್ತಾ ಮತ್ತರ್ಧ ಗಂಟೆ ಹಾಗೇ ಕಳೆದು ಹೋಯಿತು. ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದ ಹಾಗೆ ಇನ್ನು ಕಾದು ಪ್ರಯೋಜನವಿಲ್ಲವೆಂದು ಅಲ್ಲೇ ಶ್ಯಾಮಣ್ಣನ ಬಸ್ ಸ್ಟಾಂಡ್ ಅಂಗಡಿಯಿಂದ ಒಂದು ಪ್ಲಾಸ್ಟಿಕ್ ಕವರ್ ತಲೆಗೆ ಸಿಕ್ಕಿಸಿಕೊಂಡು ಹೊರಟೇ ಬಿಟ್ಟೆ. RainyNight.jpeg
ಪೇಟೆ ದಾಟುವ ತನಕ ಬೀದಿ ದೀಪ, ದಾಟಿದ ನಂತರ ಎದುರು ಬರುವ ವಾಹನಗಳ ಬೆಳಕು ಅಷ್ಟಿಷ್ಟು ಧೈರ್ಯ ತುಂಬಿದರೂ ಬೆಳ್ಯಾಡಿಯ ಕಡೆಗೆ ಮುಖ್ಯ ರಸ್ತೆಯಿಂದ ಬಲಕ್ಕೆ ತಿರುಗಿದ ನಂತರದ ದಾರಿ ನಿಜಕ್ಕೂ ಭಯ ಹುಟ್ಟಿಸ ತೊಡಗಿತು. ಜಿಟಿ ಪಿಟಿ ಮಳೆ, ಬೈಕಿನ ಹೆಡ್ ಲೈಟಿನ ೫ ಅಡಿಯ ತನಕ ಚಾಚಿದ ಬೆಳಕು ಬಿಟ್ಟರೆ ನೀರವ ಕತ್ತಲೆ. ಮನುಷ್ಯ ಪ್ರಾಣಿಯ ಸುಳಿವೇ ಇಲ್ಲ. ದೂರದಲ್ಲೆಲ್ಲೋ ನಾಯಿ ಬೊಗಳುವ ಸದ್ದು. ವೇಗವಾಗಿ ಓಡಿಸೋಣವೆಂದರೆ ರಸ್ತೆಯಲ್ಲಿರುವ ಹೊಂಡಗಳು ಪೂರ್ತಿ ಅಪರಿಚಿತವಾಗಿ ಬಿಟ್ಟಿವೆ ಊರು ಬಿಟ್ಟ ಈ ವರ್ಷಗಳಲ್ಲಿ. ಈ ಥರದ ಭಯ ನನಗೇನು ಹೊಸತಲ್ಲ. ಚಿಕ್ಕಂದಿನಲ್ಲಿ ಮನೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲು ಕೂಡ ಯಾರಾದರು ಜನ ಜೊತೆಗೆ ಬೇಕಿತ್ತು ನನಗೆ. ಬೆಳೆಯುತ್ತಾ ಬಂದಂತೆ ಭಯ ನಿಧಾನಕ್ಕೆ ಮಾಯವಾಗಿ, ಕಾಲೇಜು ಸಮಯದಲ್ಲಿ ರಾತ್ರಿ ಊಟದ ನಂತರ ಹಾಸ್ಟೆಲ್ಲಿನ ಪಕ್ಕದ ಚರ್ಚ್ ಸ್ಮಶಾನದ ಹತ್ತಿರ ಗೆಳೆಯರ ಜೊತೆ ಹರಟುತ್ತಾ  ನಡೆದಾಡುವಷ್ಟರ ಮಟ್ಟಿಗೆ ಧೈರ್ಯ ಬೆಳೆದಿತ್ತು. ಇನ್ನು ಬೆಂಗಳೂರಿನಲ್ಲಂತೂ ಪ್ರೇತಗಳೇ ಮನುಷ್ಯರಿಗೆ ಹೆದರಿ ಬದುಕಬೇಕಾದ ಪರಿಸ್ಥಿತಿ. ಹೀಗಾಗಿ ಈಗ ಮೂಡುತ್ತಿರುವ ಅಳುಕು ಕೂಡಾ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿ ಒಂದು ತೆರನಾದ ಮಜವನ್ನೇ ಕೊಡತೊಡಗಿತು.
ಆದರೆ ಹೀಗೆ ಮೂಡಿದ ಧೈರ್ಯ ಕ್ಷಣಮಾತ್ರದಲ್ಲಿ ಮಾಯವಾಗಿ ಎದೆ ಧಸಕ್ಕೆಂದಿದ್ದು ಸ್ವಲ್ಪವೇ ದೂರದಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತಿದ್ದ ಬಿಳಿ ಪಂಚೆಯನ್ನು ಮೇಲೆ ಕಟ್ಟಿ, ಎದೆಯ ಮೇಲೊಂದು ಬಿಳಿ ಶಾಲು ಧರಿಸಿಕೊಂಡು ನಿಂತಿದ್ದ ಹಣ್ಣು ಹಣ್ಣು ಮುದುಕನನ್ನು ನೋಡಿ. ಆತನ ಮುಖ ಕೂಡ ನೋಡುವ ಧೈರ್ಯ ಸಾಲದೇ, ಬೈಕಿನ ಕಿವಿಯನ್ನು ಇದ್ದ ಬಲವೆಲ್ಲ ಹಾಕಿ ಹಿಂಡಲು, ಕುರ್ರೋ ಎಂದು ಅದು ಮಾಡಿದ ಸದ್ದಿಗೆ ಹೆದರಿ ದೂರದಲ್ಲಿ ಬೊಗಳುತ್ತಿದ್ದ ನಾಯಿಗಳು ಕೂಡ ಸುಮ್ಮನಾಗಿ, ವಾತಾವರಣ ಮತ್ತಷ್ಟು ನೀರವವಾಗಿ, ಎದೆಯೊಳಗಿನ ಅಳುಕು ಮತ್ತಷ್ಟು ಜಾಸ್ತಿಯಾಗಿ ಭಯದಿಂದ ಕೈ ನಡುಗ ತೊಡಗಿತು. ಯಾರಿರಬಹುದು ಆತ? ಕಾಡಿನ ದಾರಿಯ ಮಧ್ಯೆ ಆತ ಹೇಗೆ, ಎಲ್ಲಿಂದ ಬಂದ? ದೂರದಿಂದ ತೋರಿದ್ದ ಪ್ರಕಾರ ಆತ ಹೆಚ್ಚು ದೂರ ನಡೆಯಲಾಗದಂಥ ಮುದುಕ. ಯಾರದ್ದಾದರೂ ಪ್ರೇತವಿರಬಹುದೇ? ಕಾಡುದಾರಿಯ ತಿರುವಿನಲ್ಲಿ ಆತನ ಅಪಘಾತವಾಗಿ ಅತೃಪ್ತ ಆತ್ಮ ಅಲ್ಲೇ ಸುತ್ತಾಡುತ್ತಿರಬಹುದೇ? ತಾನು ಬೈಕ್ ನಿಲ್ಲಿಸಿದ್ದರೆ ತನ್ನ ರಕ್ತ ಹೀರಿ ಸಾಯಿಸುತ್ತಿದ್ದಿರಬಹುದೇ? ಆದರೆ ಆ ಆಕೃತಿ ತನ್ನ ಬೈಕಿನ ಕಡೆ ಬರುವ ಯಾವ ಪ್ರಯತ್ನ ಕೂಡ ಮಾಡಲಿಲ್ಲ. ಹೀಗೇ ಯೋಚಿಸುತ್ತಿರಲು, ಹೈಸ್ಕೂಲಿನ ಗೆಳೆಯ ಗಿರೀಶನ ಅಜ್ಜನ ಕಥೆ ನೆನಪಿಗೆ ಬಂತು. ಅಂದು ಕರ್ಕಾಟಕ ಅಮಾವಾಸ್ಯೆ. ಕರ್ಕಾಟಕ ಅಮಾವಾಸ್ಯೆಯ ದಿನ ಹಾಳೆ ಕೆತ್ತೆ ಎಂಬ ಮರದ ತೊಗಟೆಯನ್ನು ಜಜ್ಜಿ ಒಂದು ಬಗೆಯ ಕೆಟ್ಟ ಕಹಿ ಕಷಾಯ ಮಾಡಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಪ್ರತೀತಿ ಇದೆ. ಆದರೆ ಮರದ ತೊಗಟೆಯನ್ನು ಸೂರ್ಯ ಮೂಡುವ ಮೊದಲೇ ಕೆತ್ತಿ ತರಬೇಕು. ಅದಕ್ಕೆಂದೇ ಗಿರೀಶನ ಅಜ್ಜ ಬೆಳಗ್ಗೆ ಕತ್ತಲು ಕತ್ತಲಿರುವಾಗಲೇ ಮನೆಯಿಂದ ಸ್ವಲ್ಪ ದೂರದ ಬಯಲಿನ ಇನ್ನೊಂದು ಕಡೆಯಲ್ಲಿರುವ ಹಾಳೆ ಕೆತ್ತೆ ಮರದ ಕಡೆ ಹೊರಟಿದ್ದರು. ಮರದ ಹತ್ತಿರ ಬಂದವರಿಗೆ ಮುಂಜಾವಿನ ಅಸ್ಪಷ್ಟ ಬೆಳಕಿನಲ್ಲಿ ತೋರಿದ್ದು ಮರದ ಕೆಳಗೆ ಉದ್ದಕ್ಕೆ ಕೂದಲು ಬಿಟ್ಟುಕೊಂಡು ತಲೆ ಬಾಚಿಕೊಳ್ಳುತ್ತಿರುವ ಬಿಳಿಬಣ್ಣದ ಸೀರೆಯನ್ನುಟ್ಟ ಮಹಿಳೆ. ಕೂಡಲೇ ಅಜ್ಜನ ಮನಸ್ಸಿಗೆ ಹೊಳೆದದ್ದು ಉಮಲ್ತಿ ಭೂತದ ಚಿತ್ರ. ಉಮಲ್ತಿ ಭೂತ ಕೂಡ ಹೀಗೆ ಬಿಳಿ ಸೀರೆಯುಟ್ಟು, ಮಾರುದ್ದದ ಕೂದಲು ಬಿಟ್ಟು ಗಂಡಸರ ಮನಸ್ಸು ವಶೀಕರಣ ಮಾಡಿಕೊಂಡು ರಕ್ತ ಕಾರಿಸಿ ಕೊಲ್ಲುವುದರಲ್ಲಿ ಹೆಸರುವಾಸಿ. ಆ ಆಲೋಚನೆ ಅಜ್ಜನ ಮನಸ್ಸಿಗೆ ಬಂದದ್ದೇ ತಡ, ಬಿದ್ದೆನೋ ಎದ್ದೆನೋ ಎಂದು ಕೈಯಲ್ಲಿದ್ದ ಕತ್ತಿಯನ್ನು ಅಲ್ಲೇ ಬಿಸಾಡಿ ಮನೆಯ ಕಡೆ ಓಡತೊಡಗಿದರು. ಸ್ವಲ್ಪ ಮುಂದೆ ಓಡಿ ಹಿಂದಿರುಗಿ ನೋಡಿದವರಿಗೆ ತೋರಿದ್ದು ಆ ಬಿಳಿ ಸೀರೆ ಉಟ್ಟ ಮಹಿಳೆ ಕೂಡ ತನ್ನನ್ನು ಹಿಂಬಾಲಿಸಿ ಓಡಿಕೊಂಡು ಬರುತ್ತಿರುವುದು. ಪ್ರಾಣವೇ ಬಾಯಿಗೆ ಬಂದಂತಾಗಿ ಅಜ್ಜ ಓಡಿ ಮನೆ ಸೇರಿ ಮಲಗಿದವರು, ಭಯದಿಂದ ಊಟ, ನೀರು ಬಿಟ್ಟು ೪ ನೇ ದಿನಕ್ಕೆ ಕೊನೆಯುಸಿರೆಳೆದರು. ಕಂಗಾಲಾದ ಮನೆಯವರು ಅಲ್ಲಿ ಇಲ್ಲಿ ವಿಚಾರಿಸಲು ತಿಳಿದದ್ದು ಅಂದು ತಲೆ ಬಾಚಿಕೊಳ್ಳುತ್ತಿದ್ದದ್ದು ಉಮಲ್ತಿ ಅಲ್ಲ, ಕೂಲಿ ಕೆಲಸ ಮಾಡುವ ಬಚ್ಚಿಯ ಮಗಳೆಂದು. ಅವಳ ಮನೆ ಆ ಮರದ ಪಕ್ಕದಲ್ಲೇ ಇದ್ದದ್ದು ಅಜ್ಜನಿಗೆ ಹೊಳೆದಿರಲಿಲ್ಲ. ಅಜ್ಜ ಬಿಸಾಡಿ ಹೋದ ಕತ್ತಿಯನ್ನು ಅವರಿಗೆ ಹಿಂದಿರುಗಿಸಲು ಆಕೆ ಅಜ್ಜನನ್ನು ಹಿಂಬಾಲಿಸಿದ್ದದ್ದು. ಈ ಕಥೆ ಹೇಳುವಾಗ ಅಜ್ಜ ತೀರಿದ ೧೦ನೆಯ ದಿನಕ್ಕೂ ಗಿರೀಶ ಬಿದ್ದು ಬಿದ್ದು ನಕ್ಕಿದ್ದ. ಹೀಗೆ ನೆನಪಾದ ಈ ಘಟನೆ, ದಾರಿಯಲ್ಲಿ ತೋರಿದ ಮುದುಕ ಆಕೃತಿಯ ಮೇಲೆ ಕರುಣೆ ಮೂಡಿಸಿತು. ಪಾಪ ಮೊದಲೇ ನಡೆಯಲು ತ್ರಾಣವಿಲ್ಲದ ಇಳಿಜೀವ. ಈ ರಾತ್ರಿಯಲ್ಲಿ ಬೇರೆ ವಾಹನಗಳು ಸಂಚರಿಸುವ ಸಾಧ್ಯತೆ ಕೂಡ ಕಡಿಮೆಯೇ. ಬಿಡದೆ ಸುರಿಯುತ್ತಿರುವ ಮಳೆ ಬೇರೆ. ಇಂಥ ಸಂಧರ್ಭದಲ್ಲಿ ತಾನು ಸಹಾಯ ಮಾಡದಿದ್ದರೆ ಆ ಮುದಿಜೀವದ ಸಾವಿನ ಪಾಪ ತನಗೂ ತಟ್ಟದೇ ಬಿಡುವುದಿಲ್ಲವೆಂದು ಹಾಗೆಯೇ ಬೈಕನ್ನು ಹಿಂದಕ್ಕೆ ತಿರುಗಿಸಿ ಆ ವ್ಯಕ್ತಿ ನಿಂತಿದ್ದ ಜಾಗದ ಕಡೆಗೆ ಓಡಿಸಿದೆ.
brahminಸ್ವಲ್ಪ ದೂರ ಹೋದ ನಂತರ ಆ ವ್ಯಕ್ತಿ ಅದೇ ಜಾಗದಲ್ಲಿ ನಿರಾಸೆಯಿಂದ ಕುಳಿತು ಬಿಟ್ಟಂತೆ ತೋರಿತು. ಸ್ವಲ್ಪ ಅಳುಕಿನಿಂದಲೇ ಪಕ್ಕದಲ್ಲೇ ಬೈಕ್ ನಿಲ್ಲಿಸಿದೆ. ಕೂಡಲೇ ಆ ವ್ಯಕ್ತಿ ಎದ್ದು ನಿಂತರು. ಎಲ್ಲದಕ್ಕಿಂತ ಮೊದಲು ನಾನು ಗಮನಿಸಿದ್ದು ಆ ವ್ಯಕ್ತಿಯ ಪಾದವನ್ನು. ಚಿಕ್ಕಂದಿನಲ್ಲಿ ಎಲ್ಲರೂ ಹೇಳುತ್ತಾ ಇದ್ದದ್ದು ಸರಿಯಾಗಿ ನೆನಪಿತ್ತು, ಭೂತ, ಪ್ರೇತಗಳ ಕಾಲು ಹಿಂಬದಿ ತಿರುಗಿರುತ್ತವೆ ಎಂದು. ಆ ವ್ಯಕ್ತಿಯ ಪಾದ ಸರಿಯಾಗಿಯೇ ಇದ್ದದ್ದು ನೋಡಿ ಅರ್ಧ ಜೀವ ವಾಪಾಸು ಬಂದಂತಾಯಿತು. ಈಗ ತಲೆಯೆತ್ತಿ ವ್ಯಕ್ತಿಯ ಮುಖ ಗಮನಿಸಲು, ನಿರೀಕ್ಷಿಸಿದಂತೆಯೇ ವಯೋವೃದ್ಧರೇ ಆಗಿದ್ದರು. ತಲೆಯ ಮೇಲೆ ಚಿಕ್ಕ ಜುಟ್ಟು, ಕಿರಿದಾದ ಹಣೆಯ ಮೇಲೆ ಉದ್ದನೆಯ ಕೆಂಪು ನಾಮ. ಸಾಮಾನ್ಯವಾಗಿ ವಯಸ್ಸಿನೊಂದಿಗೆ ಕೃಶವಾಗಿರುವ ದೇಹ. ಎದೆಯ ಮೇಲೆ ಇಡೀ ದೇಹವನ್ನು ಮುಚ್ಚುವಂತೆ ಹೊದ್ದ ಬಿಳಿ ಶಾಲಿನಿಂದ ಇಣುಕುತ್ತಿರುವ ಜನಿವಾರ. ಒಟ್ಟಾರೆ ೭೫ ರಿಂದ ೮೦ ರ ಆಸುಪಾಸಿನಲ್ಲಿರುವ ಪುರೋಹಿತ ಬ್ರಾಹ್ಮಣ ಎಂದು ನನ್ನ ಮನಸ್ಸು ಆಗಲೇ ಲೆಕ್ಕಾಚಾರ ಹಾಕಿತು. ಬೈಕ್ ನಿಲ್ಲಿಸಿದ್ದನ್ನು ನೋಡಿ ಅವರ ಮುಖ ಪ್ರಸನ್ನವಾಗಿದ್ದು ಬೈಕಿನ ಹೆಡ್ ಲೈಟಿನ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನಾನು ಏನನ್ನಾದರೂ ಕೇಳುವ ಮೊದಲೇ ಅವರೇ ಶುರು ಮಾಡಿದರು.
“ನಮಸ್ಕಾರ, ಯಾವ್ ಕಡೆಗೆ ಹೊರ್ಟಿದ್ರಿ ನೀವು?”
“ನಾನು ಬೆಳ್ಯಾಡಿ ಕಡಿಗೆ. ನಿಮ್ಗೆಲ್ಲಿ ಹೋಯ್ಕು?” ನಾನು ಉತ್ತರಿಸಿದೆ.
“ನಂಗ್ ಸಮೇತ ಬೆಳ್ಯಾಡಿ ಕಡೆಗೇ ಹೋಯ್ಕು. ಇಲ್ಲಿಂದ ನಡ್ಕಂಡು ಹೋಪುಕೆ ಸುಮಾರು ದೂರ ಆತ್ತು ಮಾರಾಯ್ರೆ. ಮಳೆ ಬೇರೆ ನಿಲ್ಲುದಿಲ್ಲೆ ಅನ್ನತ್ತ್. ಅಲ್ಲಿವರೆಗೆ ನನ್ನನ್ನ ಕರ್ಕಂಡು ಹೋಯಿ ಒಂದ್ ಉಪ್ಕಾರ ಮಾಡ್ತ್ರಿಯೆ?” ಕೈ ಮುಗಿಯುತ್ತ ಅವರು ಕೇಳಿಕೊಂಡರು.
ವೃದ್ಧ ವ್ಯಕ್ತಿ ನನಗೆ ಕೈ ಮುಗಿಯುತ್ತಿರುವುದನ್ನು ನೋಡಿ ಕಸಿವಿಸಿಯಾಗಿ ಹೇಳಿದೆ, “ಅಯ್ಯೋ ಅದ್ಕೆಲ್ಲ ಕೈ ಮುಗಿಬೇಡಿ ಮಾರಾಯ್ರೆ. ಬನ್ನಿ ಕೂತ್ಕಣಿ. ನಿಮ್ಮನೆ ಎಲ್ಲಿ ಬತ್ತೋ ಅಲ್ಲೇ ಬಿಡ್ತೆ ನಿಮ್ಮನ್ನ”.
ಅವರು ಹತ್ತಿ ಕುಳಿತ ಕೂಡಲೇ ತಡ ಮಾಡದೇ ಬೈಕ್ ಓಡಿಸಲು ಶುರು ಮಾಡಿದೆ. ಮನೆಗೆ ಹೋಗಿ ಅಪ್ಪ ಅಮ್ಮನ ಬೈಗುಳ ಕೇಳುವುದಂತೂ ಇಂದು ನಿಶ್ಚಿತವೆಂದು ಯೋಚಿಸುತ್ತಿರಲು ಹಿಂದೆ ಕುಳಿತ ವ್ಯಕ್ತಿ ಮಾತನಾಡಲು ಶುರುವಿಟ್ಟುಕೊಂಡರು.
“ಯಾರ್ ಮನೆ ಅಂದ್ರಿ ನೀವು ಬೆಳ್ಯಾಡಿಲಿ?”
“ಯಾರ್ ಮನೆ ಅಂತ ನೀವು ಕೇಣ್ಲು ಇಲ್ಲ, ನಾನೇನ್ ಹೇಳ್ಲು ಇಲ್ಲ”. ಬಿಡದೆ ಸುರಿಯುತ್ತಿರುವ ಮಳೆಯಿಂದ ರೇಗಿ ಉತ್ತರಿಸಿದೆ. ಕ್ಷಣಮಾತ್ರದಲ್ಲಿ ಕನಿಕರ ಮೂಡಿ ನಾನೇ ಮುಂದುವರೆಸಿದೆ. “ನಾನು ಬೆಳ್ಯಾಡಿಯ ರಾಘವೇಂದ್ರ ಹೊಳ್ಳರ ಮಗ. ನಿಮ್ಮ್ ಪರಿಚಯ ಹ್ಯಾಂಗೆ?”
“ರಾಘವೇಂದ್ರ ಹೊಳ್ಳರ ಮಗನ? ಮತ್ತೆ ಇಲ್ಲಿ ಊರಲ್ಲಿ ಕಂಡ ಹಾಂಗೆ ಇಲ್ಲ್ಯಲೇ ನಿಮ್ಮನ್ನ?” ನನ್ನ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಕೂಡ ಹೋಗದೆ ಮರುಪ್ರಶ್ನೆ ಹಾಕಿದರು.
“ನಾನು ಬೆಂಗಳೂರಲ್ಲೇ ಇಪ್ಪುದು. ಒಂದು ವಾರಕ್ಕೆ ಮನೆಗೆ ಬಂದದ್ದಷ್ಟೆ. ನಿಮಗೆ ಹೆಸ್ರು, ಮನೆ ಎಂತಾದರು ಇತ್ತ?” ನನ್ನ ಪ್ರಶ್ನೆಗೆ ಉತ್ತರ ಬರದಿದ್ದನ್ನು ನೋಡಿ ಕೆರಳಿ ಮತ್ತೆ ಅದೇ ಪ್ರಶ್ನೆ ಹಾಕಿದೆ.
“ಅಯ್ಯೋ ಮರ್ತೆ ಹೋಯ್ತು ಕಾಣಿ. ನನ್ನ ಹೆಸ್ರು ಈಶ್ವರ ಜೋಯ್ಸ ಅಂತ. ಬೆಳ್ಯಾಡಿ ಸುತ್ತ ಮುತ್ತ ಪುರೋಹಿತಿಕೆ ನಾನೇ ಮಾಡ್ಕೊಂಡಿದ್ದದ್ದು ಮೊದ್ಲು. ಈಗ ಎಡಿಯುದಿಲ್ಲ ಮಾರಾಯ್ರೆ. ಅಷ್ಟ್ಯಾಕೆ ನಿಮ್ಮ ಅಜ್ಜನ ಕಾಲದಲ್ಲಿ ನಿಮ್ಮನೆಲಿ ಏನೇ ಪೂಜೆ ಪುನಸ್ಕಾರ ಆದ್ರೂ ನನ್ನೇ ಕರಿತಿದ್ದದ್ದು. ನಿಮ್ಮ ಅಪ್ಪಂಗೆ ಮಾತ್ರ ನಾನು ಸಾಕಾಯಿಲ್ಲೆ ಅಂಬ್ರು ಕಾಣಿ, ಅಗ್ರಹಾರದ ಸುತ್ತದ ಇನ್ಯಾರನ್ನೋ ಕರಿತ್ರು ಪುರೋಹಿತಿಕೆಗೆ ಈಗ ನಿಮ್ಮನೆಲಿ”.
ಜೋಯ್ಸರ ಮಾತಿನಲ್ಲಿದ್ದ ಕೊಂಕು ನನಗೆ ಹೊಳೆಯಲಿಲ್ಲವೆಂದಲ್ಲ. ವಿಷಯ ಬೇರೆಡೆ ತಿರುಗಿಸಲು ನಾನು ಮಾತು ಮುಂದುವರೆಸಿದೆ.
“ಅಲ್ಲ ಜೋಯಿಸರೆ, ಈ ರಾತ್ರಿಲಿ, ಹೀಂಗೆ ಮಳೆ ಹೊಡಿತಾ ಇಪ್ಪು ಹೊತ್ತಿಗೆ ಮನೆಲ್ಲಿ ಹಪ್ಪಳ ತಿನ್ದ್ಕಂಡು, ಆರಾಮ ಆಯಿ ಬೆಚ್ಚಗೆ ಇಪ್ಪು ಬದ್ಲು ಅಲ್ಲಿ ಕಾಡಿನ ಮಧ್ಯೆ ಹ್ಯಾಂಗೆ ಬಂದ್ರಿ ನೀವು?”
ಸ್ವಲ್ಪ ಹೊತ್ತಿನ ನಂತರ ಉತ್ತರ ಬಂತು ಹಿಂದಿನ ಸೀಟಿನಿಂದ.
“ಅದೇ ನಂಗು ನೆನಪಾತ್ತಾ ಇಲ್ಲೆ ಕಾಣಿ. ಬೆಳಗ್ಗೆ ತಿಂಡಿ ತಿಂದು ಮಲ್ಕಂಡದ್ದು ನೆನಪಿತ್ತು. ಅಮೇಲೆ ಇಲ್ಲಿಗೆ ಹ್ಯಾಂಗೆ ಬಂದೆ ಅಂತ ಎಂತದು ನೆನಪೇ ಇಲ್ಲ ಮಾರಾಯ್ರೆ. ವರ್ಷ ಆಯ್ತು ಕಾಣಿ, ಎಲ್ಲ ಮರ್ತು ಹೋಪುಕೆ ಶುರು ಆಯ್ತು ಬತ್ತಾ ಬತ್ತಾ. ವಿಶ್ವೇಶ ಬಯ್ತಾ ಇರ್ತ ನಂಗೆ. ಏನ್ ಮಾಡ್ತಾ ಇದ್ರಿ ಅಂಬುದೇ ನಿಮಗೆ ಸ್ವಯ ಇಲ್ಲ್ಯ ಅಂತ. ನಾನೇನ್ ಬೇಕಂತ ಮಾಡುದ ಹೇಳಿ ಇದೆಲ್ಲ”. ಜೋಯಿಸರು ಮತ್ತೆ ಸುಮ್ಮನಾದರು.
ಮೊದಲಿಂದಲೂ ಮುಪ್ಪಿನ ಬಗ್ಗೆ ನನಗೆ ಭಯ ಇದ್ದೇ ಇದೆ. ಮುಪ್ಪಿನಲ್ಲಿ ಕಾಡುವ ಇಡೀ ಜೀವನದ ನೆನಪುಗಳ ಬಗ್ಗೆ. ಆದರೆ ಈ ಜೋಯಿಸರಿಗೆ ಇವತ್ತು ಬೆಳಗ್ಗೆ ತಿಂಡಿ ತಿಂದ ನಂತರದ್ದು ಕೂಡ ನೆನಪಿಲ್ಲ. ಮಾತು ಮುಂದುವರೆಸಲು ನಾನೇ ಕೇಳಿದೆ.
“ವಿಶ್ವೇಶ ಅಂದ್ರೆ ಯಾರು?”
“ವಿಶ್ವೇಶ ನನ್ನ ಮಗ. ಅವ್ನು ಸಮೇತ ಪುರೋಹಿತ್ಕೆ ಮಾಡ್ಕಂಡೆ ಇಪ್ಪುದು. ನಾನೇ ಕಲ್ಸಿ ಕೊಟ್ಟದ್ದು ಅವನಿಗೆ. ಅವನಿಗೆ ಯಾಕೋ ಮೊದಲಿಂದನೂ ಅಷ್ಟೇನೂ ಇಷ್ಟ ಇರ್ಲಿಲ್ಲ ಪೌರೋಹಿತ್ಯ. ನಾನೇ ಒತ್ತಾಯ ಮಾಡಿದ್ದು. ಈಗ ಅನ್ನಿಸ್ತ ಇತ್ತು ತಪ್ಪು ಮಾಡಿದೆ ನಾನು ಅಂತ”. ಜೋಯಿಸರ ಧ್ವನಿ ಕ್ಷೀಣವಾಯಿತು.
“ಯಾಕೆ ಜೋಯಿಸ್ರೆ? ಎಂತ ಆಯ್ತು ನಿಮ್ಮ ಮಗಂಗೆ?” ಕುತೂಹಲದಿಂದ ಕೇಳಿದೆ.
“ನೀವೇನು ಓದಿದ್ದು? ಬೆಂಗಳೂರಲ್ಲಿ ಎಂತ ಕೆಲಸ ನಿಮಗೆ?” ಪ್ರಶ್ನೆಗೆ ಪ್ರಶ್ನೆಯೇ ಉತ್ತರ ಜೋಯಿಸರದ್ದು.
“ಏನೋ ಒಂದು ಕೆಲಸ. ಹೊಟ್ಟೆಗೆ ಹಿಟ್ಟು ಬೀಳ್ಕಲ್ಲ”. ನನ್ನ ಪ್ರಶ್ನೆಗೆ ಮತ್ತೆ ಸರಿಯಾಗಿ ಉತ್ತರ ಬರದಿದ್ದಕ್ಕೆ ಬೇಕಂತನೆ ಕೊಂಕು ಮಾತಾಡಿದೆ.
“ಆಗ್ಳಿಂದ ಹೊಟ್ಟೆಯಿಂದ ಕಹಿ ತೇಗು ಬತ್ತಾ ಇತ್ತು. ನಿಮ್ಗೇನಾದ್ರು ಗೊತ್ತ ಯಾಕೆ ಹಿಂಗೆ ಅಂತ?”
“ಆಸಿಡಿಟಿ ಆಯಿತ್ತೇನೊ”. ಸುಮ್ಮನೆ ಆಸಕ್ತಿರಹಿತವಾಗಿ ಉತ್ತರಿಸಿದೆ.
“ಆಸಿಡಿಟಿ ಆದ್ರೆ ಹುಳಿ ತೇಗು ಬಪ್ಪುದಲ್ದೇ? ಕಹಿ ತೇಗು ಬತ್ತಾ?” ಅಂತ ಹೇಳಿ ಜೋಯ್ಸರು ಸಣ್ಣದಾಗಿ ನಕ್ಕರು.
ಕೂಡಲೇ ನನ್ನ ಉತ್ತರಕ್ಕೆ ನನಗೇ ಮುಜುಗರವಾಗಿ, ಜೋಯಿಸರ ಪ್ರತಿಕ್ರಿಯೆಗೆ ಕೋಪಗೊಂಡು ಉತ್ತರಿಸಿದೆ, “ನಂಗೇನು ಗೊತ್ತು ಮಾರಾಯ್ರೆ? ನಾನೇನು ಡಾಕ್ಟರ್ ಅಲ್ಲ ನಿಮ್ಮ ತೇಗಿನ ರುಚಿ ಕೇಳಿ ನಿಮಗೆ ಎಂತ ಆಯಿತ್ತು ಅಂತ ಹೇಳುಕೆ. ನಾನು ಇಂಜಿನಿಯರ್”.
“ಒಹ್ ದೊಡ್ಡ ದೊಡ್ಡ ಮನೆ ಎಲ್ಲ ಕಟ್ಟುಕೆ ನಿಮ್ಮನ್ನ ಕರೆಸ್ತ್ರಲ್ಲ?”
“ಹೌದು” ನನ್ನ ಕೆಲಸದ ಬಗ್ಗೆ ವಿವರಿಸಿ ಪ್ರಯೋಜನವಿಲ್ಲವೆಂದು ಸುಮ್ಮನೆ ಒಪ್ಪಿಕೊಂಡೆ.
“ಬಹುಷಃ ವಿಶ್ವೇಶಂಗೂ ನಿಮ್ ಥರನೇ ಆಯ್ಕು ಅಂತ ಆಸೆ ಇತ್ತೇನೋ”.
ಈ ಸಲ ನಾನು ಏನು ಪ್ರತಿಕ್ರಿಯೆ ತೋರಿಸುವ ಗೋಜಿಗೆ ಹೋಗಲಿಲ್ಲ. ಜೊಯಿಸರೇ ಮುಂದುವರೆಸಿದರು.
“ಅವ್ನು ಸಣ್ಣದಿರುವಾಗ್ಲೇ ನನ್ ಥರನೇ ಪುರೋಹಿತನನ್ನಾಗಿ ಮಾಡುವುದು ಅಂತ ನಾನೇ ತೀರ್ಮಾನ ಮಾಡಿ ಬಿಟ್ಟಿದ್ದೆ. ಅವ್ನ ಹತ್ರ ಆಗ ಎಂತ ಕೇಣ್ಳು ಇಲ್ಲ, ಕೇಂಡಿದ್ರು ಸಮೇತ ತನಗೆ ಮುಂದೆ ಏನಾಯ್ಕು ಅಂತ ತೀರ್ಮಾನ ಮಾಡುವಷ್ಟು ಪ್ರಾಯ ಕೂಡ ಆಯಿರ್ಲಿಲ್ಲೆ ಅವನಿಗೆ. ದೊಡ್ಡವ್ನಾತಿದ್ದ ಹಾಂಗೆ ಅವನಿಗೆ ಆಸಕ್ತಿ ಹೋಯ್ತು ಅನ್ಸತ್ತು  ಪೌರೋಹಿತ್ಯದ ಮೇಲೆ. ಅವ್ನದ್ದೇ ಪ್ರಾಯದ ಮಕ್ಳು ದೂರದ ಊರಿಗೆ ಹೋಯಿ ಒಳ್ಳೆ ಒಳ್ಳೆ ಕೆಲಸ ಸೇರಿದರು. ಇವ್ನು ಸುಮ್ನೆ ಕರುಬ್ತಾ ಕೂತ್ಕಂಡ”.
ಸ್ವಲ್ಪ ಹೊತ್ತು ಜೋಯಿಸರು ಸುಮ್ಮನಾದರು. ಮತ್ತೆ ಮಾತು ಮುಂದುವರೆಯಿತು.
“ಯಾಕೆ ಅರ್ಥ ಆತ್ತಿಲ್ಲೇ ಈಗಿನ ಮಕ್ಳಿಗೆ? ಸಾಯುವಾಗ ದುಡ್ಡು ನಮ್ಮೊಟ್ಟಿಗೆ ಬತ್ತಿಲ್ಲೆ ಅಂತ. ಮನೆ ಇಪ್ಪುದು ಆಶ್ರಯಕ್ಕೆ, ಬಟ್ಟೆ ಇಪ್ಪುದು ಮಾನ ಮುಚ್ಚುಕೆ, ಊಟ ಮಾಡುದು ಹಸಿವೆ ನೀಗಿಸುಕೆ, ವಾಹನ ಇಪ್ಪುದು ಓಡಾಡುಕೆ ಅಂತ. ಮನೆ, ಬಟ್ಟೆ, ವಾಹನ, ಆಹಾರದ ಮೇಲೆ ಜನರನ್ನ ಯಾಕೆ ಅಳಿಯುದು? ದೇವ್ರು ಕೊಟ್ಟ ಈ ಜನಮನ್ನ ಸಾರ್ಥಕ ಆಯಿ ಕಳೆದರೆ ಸಾಕು ಅಂತ ಯಾಕೆ ಅರ್ಥ ಆತ್ತಿಲ್ಲೆ ಯಾರಿಗೂ?”
ಜೋಯಿಸರ ಮಾತು ನನಗೇ ತಾಕಿದಂತಾಗಿ ಏನು ಮಾತಾಡುದು ಅಂತ ಗೊತ್ತಾಗದೆ ಕೇಳಿದೆ, “ಮದ್ವೆ ಆಯಿತ್ತ ನಿಮ್ಮ ಮಗಂಗೆ?”
“ಅದ್ರ ಕಥೆ ಕೇಣ್ಬೇಡಿ ಮಾರಾಯ್ರೆ. ಅದ್ಕೊಂದು ಒದ್ದಾಡಿದ್ದು ಸ್ವಲ್ಪ ಅಲ್ಲ ನಾವು. ಈಗ ಬ್ರಾಹ್ಮಣರ ಹುಡುಗಿಯರು ಮದ್ವೆಗೆ ಸಿಕ್ಕುದೇ ಕಷ್ಟ. ಇಪ್ಪು ಕೆಲವರಿಗೂ ನಿಮ್ಮ ಹಾಂಗೆ ಒಳ್ಳೆ ಕೆಲಸದಲ್ಲಿ ಇಪ್ಪುವವ್ರೇ ಬೇಕು. ನೀವು ಫಾರಿನ್ನಿಗೆ ಹೋಯಿದ್ರಿಯೇ?” ಅನಿರೀಕ್ಷಿತವಾಗಿ ಜೋಯಿಸರಿಂದ ಬಂದ ಪ್ರಶ್ನೆ ಕ್ಷಣಕಾಲ ನನ್ನ ತಬ್ಬಿಬ್ಬುಗೊಳಿಸಿತು.
ಅವರಿಂದ ಏನು ಉತ್ತರ ಬರಬಹುದೆಂಬ ಕುತೂಹಲದಲ್ಲಿ ಉತ್ತರಿಸಿದೆ “ಇಲ್ಲ ಮಾರಾಯ್ರೆ”.
“ಒಹ್ ಹಾಂಗದ್ರೆ ನಿಮ್ಗೂ ಮದ್ವೆ ಆಪುದು ಕಷ್ಟ ಇತ್ತು ಕಾಣಿ. ಈಗ ಬ್ರಾಹ್ಮಣರ ಹುಡುಗಿಯರದ್ದೆಲ್ಲ ಬೇಡಿಕೆಗಳು ಜಾಸ್ತಿ ಆಯಿತ್ತು ಮಾರಾಯ್ರೆ. ಹುಡುಗ ಒಳ್ಳೆ ಕೆಲಸದಲ್ಲಿ ಇರ್ಕು, ಫಾರಿನ್ನಿಗೆ ಹೋಯಿರ್ಕು, ಅಪ್ಪ ಅಮ್ಮ ಇಲ್ದೇ ಇದ್ರೆ ಒಳ್ಳೆದು, ಇದ್ರೂ ಸಮೇತ ಮದ್ವೆ ಆದ್ಮೇಲೆ ಮಗನ ಒಟ್ಟಿಗೆ ಇಪ್ಪುಕಾಗ ಹೀಂಗೆ ಎಲ್ಲ. ಹೀಂಗಿಪ್ಪುವಾಗ ಊರಲ್ಲಿಪ್ಪುವ ಹುಡುಗರಿಗೆ ಹೆಣ್ಣು ಕೊಡುಕೆ ತಯ್ಯಾರೇ ಇಲ್ಲ ಜನಗಳು. ಅದ್ರಲ್ಲಿ ಪುರೋಹಿತ್ರದ್ದು ಮತ್ತೆ ಅಡುಗೆ ಭಟ್ಟರ ಪಾಡು ಕೇಣ್ಬೇಡಿ ನೀವು. ಮನೇಲ್ಲಿ ಏನಾದ್ರೂ ಪೂಜೆ ಅಯ್ಕಿದ್ರೆ, ಸಭೆ ಸಮಾರಂಭಕ್ಕೆ ಅಡುಗೆ ಆಯ್ಕಿದ್ರೆ ಮಾತ್ರ ನೆನಪಾಪುದು ಜನಕ್ಕೆ ಪುರೋಹಿತರು ಮತ್ತೆ ಅಡುಗೆ ಭಟ್ರು. ಇಲ್ದೆ ಇದ್ರೆ ಬರೀ ಸಸಾರವೇ”. ಜೋಯಿಸರ ಧ್ವನಿ ಕೋಪದ ಕಡೆ ವಾಲುತ್ತಿರುವುದು ಸ್ಪಷ್ಟವಾಗುತ್ತಿತ್ತು.
“ಹಾಂಗದ್ರೆ ಇನ್ನೂ ಮದ್ವೆ ಹೆಣ್ಣು ಹುಡುಕ್ತಾ ಇದ್ರಿ ಕಾಣತ್ತು ಅಲ್ದಾ?” ನಾನು ಮಾತು ಮುಂದುವೆರೆಸಲು ಕೇಳಿದೆ.
“ಇಲ್ಲಪ್ಪ. ವಿಶ್ವೇಶಂಗೆ ಒಂಥರಾ ಬೇಜಾರು ಆಯ್ತು ಇಲ್ಲಿ ಜನ ಎಲ್ಲ ಮಾಡುದು ಕಂಡು. ಒಂದಿನ ಮಧ್ಯಾಹ್ನ ಇದ್ದಕ್ಕಿದ್ದ ಹಾಂಗೆ ಒಂದು ಹುಡುಗಿನ್ನ ಕರ್ಕಂಡು ಬಂದು, ಅಪ್ಪ ಇವಳೇ ನಿಮ್ ಸೊಸೆ. ನಿನ್ನೆ ಇವಳನ್ನ ಮದ್ವೆ ಆದೆ ಅಂತ ಹೇಳಿದ. ಮದ್ವೆಗೆ ಅಂತ ಅಂಬ ಹಾಂಗೆ ಇಬ್ರ ಕುತ್ತಿಗೆಲ್ಲು ಒಂದು ಹೂವಿನ ಹಾರ, ಹುಡುಗಿ ಕುತ್ತಿಗೆಲ್ಲಿ ಒಂದು ದಾರದಲ್ಲಿ ಕಟ್ಟಿದ್ದ ತಾಳಿ ಬಿಟ್ರೆ ಮತ್ತೆಂತ ಇರ್ಲಿಲ್ಲ. ಹುಡ್ಗಿನ್ನ ಕಂಡ ಕೂಡ್ಲೆ ಗೊತ್ತಾಯ್ತು ಇದು ಬ್ರಾಹ್ಮಣ ಹುಡ್ಗಿ ಅಲ್ಲ ಅಂತ. ಯಾವ್ದೋ ಘಟ್ಟದ ಮೇಲಿನ ಹುಡುಗಿ ಥರ ಇತ್ತು. ವಿಶ್ವೇಶನಿಗೆ ಎದ್ರು ಮಾತಾಡು ಧೈರ್ಯ ನಂಗೆ ಸಾಕಾಯಿಲ್ಲೆ. ಹೋಗ್ಲಿ ಒಂದು ಹುಡುಗಿಯಾದ್ರು ಸಿಕ್ಕಿತಲ್ಲ ವಿಶ್ವೇಶನ ಸಂಸಾರ ಸಾಗಿಸುಕೆ ಅಂತ ನಾನು ಸಮೇತ ಸುಮ್ನೆ ಆದೆ. ಅಗಾ ಆ ತಿರುವಲ್ಲಿ ಎಡಕ್ಕೆ ಹೋಪ. ಅಲ್ಲೇ ಆ ಇಳಿಜಾರು ರಸ್ತೆಲ್ಲಿ ಒಂದೆರಡು ಕಿಲೋಮೀಟರ್ ಮುಂದೆ ಹೋದ್ರೆ ನಮ್ಮನೆ. ಇಳಿಜಾರಲ್ಲಿ ಇಪ್ಪುದ್ರಿಂದ ಅದನ್ನ ಕೆಳಮನೆ ಅಂತ ಜನ ಮೊದಲಿಂದ ಕರಿಯುದು. ಕೆಳಮನೆ ಜೋಯಿಸರು ಅಂದ್ರೆ ನಿಮ್ಮ ಅಪ್ಪಂಗೆ ಗುರ್ತ ಆತ್ತು ಕಾಣಿ. ರಸ್ತೆ ಒಂಚೂರು ಹಾಳಾಯಿತ್ತು, ಸ್ವಲ್ಪ ಜಾಗ್ರತೆ ಅಕ್ಕಾ..”
“ಹಂಗಾದ್ರೆ ಈಗ ನಿಮಗೆ ಆರಾಮ ಅನ್ನಿ. ಮನೆ ಕೆಲಸ ಎಲ್ಲ ಕಂಡ್ಕಂಬುಕೆ ಸೊಸೆ ಇದ್ಲಲೇ. ಅದ್ಕೆ ಹಿಂಗೆ ರಾತ್ರಿ ಆದ್ರೂ ಊರು ಊರು ಸುತ್ತುತ್ತಾ ಇದ್ರಿಯ ಎಂತ ಕಥೆ?” ಬೈಕನ್ನ ಎಡಕ್ಕೆ ತಿರುಗಿಸುತ್ತಾ ನಗುತ್ತ ಕೇಳಿದೆ.
“ಎಂಥ ಆರಾಮವು ಇಲ್ಲ ಮಾರಾಯ್ರೆ. ಬಂದವಳೇನು ಮನೆ ಕೆಲಸ ಮಾಡ್ತ್ಳು ಅನ್ದ್ಕಂಡಿದ್ರಿಯ ನೀವು? ಒಳ್ಳೆ ಮಹಾರಾಣಿ ಥರ ಟಿವಿ ಮುಂದೆ ಪ್ರತಿಷ್ಠಾಪನೆ ಆದ್ರೆ ಇಡೀ ದಿನ ಅಲ್ಲೇ. ಅಡುಗೆ ಸಮೇತ ನಾನೇ ಮಾಡ್ಕು.  ನನ್ ಕರ್ಮ. ಯಾರಿಗೆ ಬೈದು ಏನ್ ಪ್ರಯೋಜನ ಹೇಳಿ?”
“ವಿಶ್ವೇಶ ಅವ್ರು ಎಂತ ಹೇಳುದಿಲ್ಯ ಹೆಂಡತಿಗೆ?”
“ಹೇಳುದೆಂತ? ಅವನಿಗೂ ಬೇಜಾರತ್ತು ಅನ್ಸತ್ತು. ಮದ್ವೆ ಹೊಸತಲ್ಲ ಸುಮ್ನೆ ಯಾಕೆ ಜಗಳ ಅಂತ ಸುಮ್ನಿದ್ನೇನೋ? ಹಾಂ.. ಇಲ್ಲೇ ನಿಲ್ಸಿ ಮಾರಾಯ್ರೆ. ಅಗಾ ಅಲ್ಲೇ ತೋರತ್ತು ಕಾಣಿ ಅದೇ ನಮ್ಮನೆ”. ಸ್ವಲ್ಪ ದೂರಕ್ಕೆ ಕೈ ಮಾಡಿ ಜೋಯಿಸರು ತೋರಿಸಿದರು. ಕವಿದಿದ್ದ ಗಾಢ ಕತ್ತಲೆಯಲ್ಲಿ ಕಪ್ಪಾದ ಮನೆ ಆಕೃತಿ ಬಿಟ್ರೆ ಮತ್ತೇನು ತೋರಲಿಲ್ಲ.
“ಮನೆ ಒಳಗೆ ದೀಪನೆ ತೋರ್ತ ಇಲ್ಲ ಅಲ್ಲ ಜೋಯಿಸರೆ?” ಸ್ವಲ್ಪ ಅನುಮಾನದಿಂದಲೇ ಕೇಳಿದೆ.mane
“ಇಷ್ಟು ಹೊತ್ತಿಗೆಲ್ಲ ಮಲ್ಕಂಡು ಆಯಿರತ್ತು ನಮ್ಮನೆಲ್ಲಿ. ಬತ್ತೆ ಅಕ್ಕಾ. ತುಂಬಾ ಉಪಕಾರ ಆಯ್ತು ನಿಮ್ಮಿಂದ”. ಅಷ್ಟು ಹೇಳಿ ಕೈ ಮುಗಿದು ಜೋಯಿಸರು ಮನೆ ಕಡೆಗೆ ನಡೆಯತೊಡಗಿದರು.
“ಮತ್ತೆ ನಿಮ್ ಊಟ?” ಎಂದು ನಾನು ಕೂಗಿದೆ.
“ಎಂತಾದರು ವ್ಯವಸ್ಥೆ ಆತ್ತು ಬಿಡಿ. ನೀವು ಹೊರಡಿ, ಮಳೆ ಜಾಸ್ತಿ ಆಪು ಮುಂಚೆ ಮನೆ ಸೇರ್ಕಂಡು ಬಿಡಿ” ಎಂದು ಹೇಳಿ ಜೋಯಿಸರು ಕತ್ತಲೆಯಲ್ಲಿ ಮರೆಯಾದರು.
ಅಲ್ಲಿಂದ ಬೈಕ್ ತಿರುಗಿಸುವಷ್ಟರಲ್ಲಿ ಎಲ್ಲಿಂದಲೋ ಗಾಳಿಗೆ ಒಂದು ಕಾಗದದ ತುಂಡು ಹಾರಿ ಬಂದು ನನ್ನ ಬೈಕಿನ ಹೆಡ್ ಲೈಟಿಗೆ ಅಡ್ಡವಾಗಿ ಅಂಟಿಕೊಂಡಿತು. ಅದನ್ನ ಸರಿಸಿ ಬಿಸಾಡಲೆಂದು ಹೊರಟಾಗ ಅದರಲ್ಲಿ ತೋರಿದ್ದು ಮುದ್ರಿಸಿದಂತೆ ಇದ್ದ ಯಾರದೋ ಕೈ ಬರಹ. ಇರಲಿ ಬೆಳಗ್ಗೆ ಓದೋಣವೆಂದು ಹಾಗೆ ಮಡಚಿ ಬೈಕಿನ ಬಾಕ್ಸಿನ ಒಳಗೆ ಅದನ್ನ ತುರುಕಿ, ಮನೆ ಕಡೆ ಪ್ರಯಾಣ ಮುಂದುವರೆಸಿದೆ. ದಾರಿಯುದ್ದಕ್ಕೂ ಜೋಯಿಸರ ಮನೆಯ ಕಥೆಯೇ ನೆನಪಾಗುತ್ತಿತ್ತು. ಒಬ್ಬೊಬ್ಬರ ಮನೆದ್ದು ಒಂದೊದು ಕಥೆ ಈ ಊರಿನಲ್ಲಿ. ಬೆಂಗಳೂರಿಗೆ ಸೇರಿದವರ ಮನೆದ್ದೆಲ್ಲ ಸಾಧರಣ ಒಂದೇ ಕಥೆ. ಬರಿ ವ್ಯಥೆ ಅಷ್ಟೇ. ಎಂದು ಮನಸ್ಸಿನಲ್ಲೇ ನಗುತ್ತ ಮನೆ ಗೇಟ್ ಸರಿಸಿ ಬೈಕನ್ನ ಪಕ್ಕಕ್ಕೆ ನಿಲ್ಲಿಸಿ, ಹೆಚ್ಚೇನು ಮಾತನಾಡದೇ, ಅಮ್ಮ ಅಪ್ಪನ ಪ್ರಶ್ನೆಗಷ್ಟೇ  ಉತ್ತರಿಸಿ ಊಟ ಮಾಡಿ ಹಾಸಿಗೆಗೆ ಬಿದ್ದವನಿಗೆ ಅತಿ ಗಾಢ ನಿದ್ರೆ.

——————————————————————————————————————–

ಬೆಳಗಾದದ್ದು ತಿಳಿಯದಷ್ಟು ಮೋಡಭರಿತವಾದ ಬೆಳಗು. ರಾತ್ರಿಯಿಂದೆಂಬಂತೆ ಬಿಡದೆ ಸುರಿಯುತ್ತಿರುವ ಮಳೆಯ ಸದ್ದಿನ ಲಾಲಿ. ಕೇಳುವವರಿಲ್ಲದಿದ್ದರೆ ಇಡೀ ದಿನ ಹೊದಿಕೆಯಡಿ ಅಡಗಿ ಬಿಡಬಹುದು. ಆದರೆ ನಮ್ಮೂರಿನ ಮಳೆಗಾಲದ ಮುಂಜಾವಿನ ಸೌಂದರ್ಯ ಸವಿಯದಿದ್ದರೆ ರಜೆ ಹಾಕಿ ಇಲ್ಲಿಗೆ ಬಂದದ್ದೆ ವ್ಯರ್ಥ. ಹಾಗೆಂದುಕೊಂಡೇ ಹಾಸಿಗೆಯಿಂದೆದ್ದು, ಹಲ್ಲುಜ್ಜಿ, ಅಮ್ಮ ಮಾಡಿದ ಫಿಲ್ಟರ್ ಕಾಫಿ ಕುಡಿದು, ಕೊಡೆಯನ್ನು ಹಿಡಿದು ಮನೆಯ ಅಂಗಳಕ್ಕೆ ಬಂದಾಗ ಆಗಲೇ ಎಲ್ಲೋ ಹೊರಗೆ ಹೋಗಿದ್ದ ಅಪ್ಪನ ಸವಾರಿ ಗೇಟಿನ ಬಳಿ ಬರುತ್ತಿರುವುದು ತೋರಿತು. ಹಾಗೆ ರಾತ್ರಿ ಅಲ್ಲೇ ಬದಿಯಲ್ಲಿ ನಿಲ್ಲಿಸಿದ್ದ ಬೈಕಿಗೆ ಮೆತ್ತಿದ್ದ ಕೆಸರಿನ ಕಡೆ ಗಮನ ಹೋಯಿತು. ಕೂಡಲೇ ರಾತ್ರಿ ಬೈಕಿನ ಬಾಕ್ಸಿನೊಳಗೆ ತುರುಕಿದ್ದ ಜೋಯಿಸರ ಮನೆಯ ಬಳಿ ಹಾರಿ ಬಂದ ಪತ್ರದ ನೆನಪಾಗಿ, ಬಾಕ್ಸಿನ ಮುಚ್ಚಳ ತೆರೆದು ಸ್ವಲ್ಪ ನೀರಿನ ಪಸೆಯಿಂದಾಗಿ ಒದ್ದೆಯಾದಂತಿದ್ದ ಪತ್ರವನ್ನು ಬಿಡಿಸಿದೆ. ಪತ್ರ ನೆನೆದಂತಿದ್ದರೂ ಅಕ್ಷರಗಳು ಸ್ಪಷ್ಟವಾಗಿದ್ದದ್ದು ಸಮಾಧಾನ ತಂದಿತು.
ಹಾಗೆ ಜಾಗರೂಕತೆಯಿಂದ ಬಿಡಿಸಿ ಪತ್ರವನ್ನು ಓದಲು ಶುರುವಿಟ್ಟುಕೊಂಡೆ.
“ನಮಸ್ಕಾರಗಳು… ನನ್ನ ಹೆಸರು”
“ಏ ರಾತ್ರಿ ಬೈಕ್ ಹಿಡ್ಕಂಡು ಕಂಬಳಕ್ಕೆ ಹೋಯಿದ್ಯನ? ಎಂತ ಇದು ಈ ಥರ ಕೆಸರು ಮಾರಾಯ ಇದ್ರಲ್ಲಿ?” ಪತ್ರ ಓದಲು ಶುರು ಮಾಡುತ್ತ ಇದ್ದ ಹಾಗೆ ಗೇಟಿನ ಒಳಗೆ ಬಂದ ಅಪ್ಪ, ಅವರ ಬೈಕಿನ ಅವಸ್ಥೆಯನ್ನು ನೋಡಿ  ಆಕ್ರೋಶದಿಂದ ಕೇಳಿದರು.
“ಇಲ್ಲ ಅಪ್ಪ, ನಿನ್ನೆ ರಾತ್ರಿ ಬಪ್ಪುವಾಗ ಜೋರು ಮಳೆ ಬಂದು ಹೋಯಿತ್ತಲ್ಲ, ರಸ್ತೆ ತುಂಬಾ ಕೆಸರು. ಅದು ಕೂಡ ಆ ಕೆಳಮನೆ ಕಡೆ ಹೋಪು ದಾರಿಯಂತೂ ಒಳ್ಳೆ ತೋಡಿನ ಥರ ಆಯಿ ಹೋಯಿತ್ತು”.
“ಎಂತ? ಕೆಳಮನೆ ದಾರಿಯ? ರಾತ್ರಿ ಹೊತ್ತಿಗೆ ಅಲ್ಲಿಗೆ ಹೋಯಿದ್ಯ ನೀನು?” ಅಪ್ಪನ ಮುಖದಲ್ಲಿ ಭಯಭೀತ ಆತಂಕ ವ್ಯಕ್ತವಾಯಿತು.
“ಯಾಕಪ್ಪಾ ಕೆಳಮನೆ ಹತ್ರ ಹೋದ್ರೆ ಏನಾಯ್ತು?” ಆಶ್ಚರ್ಯದಿಂದ ಕೇಳಿದೆ.
ಅಪ್ಪ ಮುಂದುವರೆಸಿದರು. “ಅದೊಂದು ಕಥೆ ಮರೆ. ಅದು ಕೂಡ ನಮ್ಮೂರು ಬೆಳ್ಯಾಡಿಯಲ್ಲಿ ಕೇಣ್ಕ ನೀನು, ಇಂಥದ್ದೆಲ್ಲ ದೊಡ್ಡ ವಿಷಯ ಆಯಿ ಬಿಡುತ್ತು.”
“ಅಲ್ಲ ಅಪ್ಪ, ಎಂಥ ವಿಷಯ ಮಾರಾಯ್ರೆ. ಕುತೂಹಲ ಸೃಷ್ಟಿಸಿದ್ದು ಸಾಕು. ಬೇಗ ಬೇಗ ವಿಷಯಕ್ಕೆ ಬನ್ನಿ.” ಸಂಯಮ ಕಳೆದುಕೊಂಡಂತೆ ನಾನು ಉತ್ತರಿಸಿದೆ.
“ಕೆಳಮನೆ ಈಶ್ವರ ಜೋಯಿಸರು ನಿಂಗೆ ನೆನಪಿತ್ತೋ ಇಲ್ವೋ. ನೀನು ತುಂಬಾ ಸಣ್ಣವ ಇದ್ದಾಗ ನಮ್ಮನೆಗೆ ನಿನ್ ಅಜ್ಜನ ತಿಥಿಗೆ, ಅಥವಾ ಎಂಥಾದ್ರು ಪೂಜೆ, ಹೋಮ ಹವನ ಇದ್ರೆ ಅವರನ್ನೇ ಕರಿತಾ ಇತ್ತು ನಾವು. ಆದ್ರೆ ಅವರದ್ದು ಮಂತ್ರ ಉಚ್ಛಾರ ಅಷ್ಟು ಸ್ಪಷ್ಟ ಇಲ್ಲೆ ಕಾಣು, ಅದ್ಕೆ ನಂಗೆ ಅಷ್ಟೊಂದು ಇಷ್ಟ ಆತಿರ್ಲಿಲ್ಲೆ ಅವ್ರು. ಕಡೆಗೆ ಸ್ವಲ್ಪ ಸಮಯದ ನಂತರ ಇನ್ನು ದಾಕ್ಷಿಣ್ಯ ಮಾಡಿದ್ರೆ ಆಯಿಲ್ಲೆ  ಅಂತ ಜೋಯಿಸರನ್ನ ಬಿಟ್ಟು ನಮ್ಮ ಅಡಿಗರಿಗೆ ಪುರೋಹಿತಿಕೆಗೆ ಕರಿಯುಕೆ ಶುರು ಮಾಡಿದ್ದು ನಾವು. ಜೋಯಿಸರಿಗೆ ಒಬ್ಬ ಮಗ ಇದ್ದ. ವಿಶ್ವೇಶ ಅಂತ. ಅವ್ನು ಹುಟ್ಟಿ ಒಂದು ವರ್ಷದಲ್ಲೇ ಎಂಥದೋ ಖಾಯಿಲೆ ಬಂದು ಜೋಯಿಸರ ಹೆಂಡತಿ ತೀರಿ ಹೋದರು. ಅಲ್ಲಿಂದ ಆ ಕೆಳಮನೆಲ್ಲಿ ಅಪ್ಪ ಮಗ ಇಬ್ರೆ ಇದ್ರು. ಜೋಯಿಸರು ಮಗ ವಿಶ್ವೇಶನ್ನ ಸಮೇತ ಪುರೊಹಿತನನ್ನಾಯೇ ಮಾಡಿದ್ರು. ಅವ್ನು ಬಗ್ಗೆ ತುಂಬಾ ಒಳ್ಳೆ ಮಾತಿತ್ತು ಬೆಳ್ಯಾಡಿಯಲ್ಲೆಲ್ಲ. ಕಂಚಿನ ಕಂಠ ಅವನದ್ದು ಮಂತ್ರ ಉಚ್ಛಾರ ಅಂದ್ರೆ ಅಷ್ಟು ಸ್ಪಷ್ಟ. ಆದ್ರೆ ನಮ್ಮನ್ನ ಕಂಡ್ರೆ ಅವನಿಗೆ ಅಷ್ಟಕ್ಕಷ್ಟೇ. ಅವ್ನ ಅಪ್ಪನನ್ನ ಪುರೋಹಿತಿಕೆಗೆ ನಾವು ಕರಿಯುದು ನಿಲ್ಲಿಸ್ತು ಅಂತನೋ ಏನೋ. ಆದ್ರೆ ಅವ್ನ ಪಾಂಡಿತ್ಯದ ಬಗ್ಗೆ ಎಲ್ಲ ಹೊಗಳುವವ್ರೆ ಇಲ್ಲಿ ಸುತ್ತ ಮುತ್ತ. ಕಳೆದ ವರ್ಷ ಜೋಯಿಸರು ವಿಶ್ವೇಶಂಗೆ ಹೆಣ್ಣು ಹುಡ್ಕುಕೆ ಶುರು ಮಾಡಿದ್ರು. ಈಗ ಈಗ ಒಂದು ಹೊಸ ವಿಚಿತ್ರ ಶುರು ಆಯಿತ್ತು ಮಾರಾಯ ನಮ್ ಬ್ರಾಹ್ಮಣರ ಒಳಗೆ. ಹುಡುಗಿಯರೇ ಸಿಕ್ಕುದಿಲ್ಲೆ ಮದ್ವೆ ಮಾಡ್ಕಂಬುಕೆ. ಹೆಣ್ಮಕ್ಳಿಗೆ ಭಾರಿ ಡಿಮಾಂಡ್ ಈಗ. ಅದರಲ್ಲೂ ಪುರೋಹಿತರು, ಅಡುಗೆ ಭಟ್ರು, ಮತ್ತೆ ಊರಲ್ಲಿ ಸಣ್ಣ ಪುಟ್ಟ ಕೆಲಸ ಮಾಡ್ಕಂಡಿಪ್ಪುವವ್ರಿಗೆಲ್ಲ  ಅಂತು ಕೇಂಬುದೆ ಬೇಡ”. ಅಪ್ಪ ನಿಟ್ಟುಸಿರಿಟ್ಟರು.
ಇದೆಲ್ಲ ಕಥೆ ಜೋಯಿಸರಿಂದ ನಂಗೆ ನಿನ್ನೆನೇ ಗೊತ್ತಾಗಿದ್ದರೂ ಕೂಡ ಅಪ್ಪನ ಬಾಯಿಂದನೇ ಕೇಳುವ ಅಂತ ಸುಮ್ಮನೆ ತಲೆ ಆಡಿಸುತ್ತಾ ಕುಳಿತೆ.Fear
ಅಪ್ಪ ಮತ್ತೆ ಮುಂದುವರೆಸಿದರು, “ಹೀಂಗಿಪ್ಪುವಾಗ ವಿಶ್ವೇಶಂಗೆ ತುಂಬಾ ಹುಡ್ಕಿದ್ರು, ಆದ್ರೆ ಯಾರು ಹೆಣ್ಣು ಕೊಡುಕೆ ತಯಾರಿಲ್ಲೆ. ಇನ್ನು ಆಪುದಲ್ಲ ಅಂತ ಜೋಯಿಸರು ಸುಮ್ನೆ ಆದರು. ದೇವ್ರು ಹ್ಯಾಂಗೆ ಹಣೆಲ್ಲಿ ಬರ್ದಿದ್ದಾನೋ ಹಾಂಗೆ ಆಯ್ಲಿ ಅಂತ. ಆದ್ರೆ ವಿಶ್ವೇಶ ಒಂದು ದಿನ ಒಂದು ಹುಡುಗಿನ್ನ ಮದ್ವೆ ಮಾಡ್ಕಂಡು ಬಂದೆ ಬಿಟ್ಟ. ಊರಿನ ಹುಡುಗಿ ಅಲ್ಲ. ಭಾಷೆಲ್ಲೇ ಗೊತ್ತಾತಿತ್ತು ಯಾವ್ದೋ ಘಟ್ಟದ ಮೇಲಿನ ಹುಡುಗಿ ಅಂತ. ಈ ಊರಿನ ಜನ ಕೇಣ್ಕ, ಎಲ್ಲರಿಗೆ ಮಾತಾಡುಕೆ ಒಂದ್ ವಿಷಯ ಸಿಗ್ತು. ತಲೆಗೆ ಒಂದೊಂದು ಮಾತಾಡುಕೆ ಶುರು ಮಾಡಿದ್ರು ಜನ. ವಿಶ್ವೇಶಂಗೆ ಪರವೂರಲ್ಲಿ ಮೊದ್ಲೇ ಈ ಹುಡುಗಿ ಒಟ್ಟಿಗೆ ಸಂಬಂಧ ಇತ್ತಂತ ಹೇಳುವವರು ಕೆಲವರು, ಬಡ ಹುಡುಗಿ ಮನೆಯವರಿಗೆ ತುಂಬಾ ದುಡ್ಡು ಕೊಟ್ಟು ಮದ್ವೆಗೆ ಒಪ್ಪಿಸಿ ಕರ್ಕಂಡು ಬಂದಿದ್ದ ಅಂತ ಹೇಳುವವರು ಕೆಲವರು. ಮತ್ತೆ ಕೆಲವರು ಹುಡುಗಿ ಮೇಲೆ ಮೋಡಿ ಮಾಡಿ ಕರ್ಕಂಡು ಬಂದಿದ್ದ ಅಂತ ಹೇಳು ಮಟ್ಟಕ್ಕೆ ಗಾಳಿಮಾತುಗಳು ಶುರು ಆಯ್ತು. ವಿಶ್ವೇಶ ಇದಕೆಲ್ಲ ಕ್ಯಾರೇ ಮಾಡ್ಲಿಲ್ಲ. ಆದ್ರು ಅವನನ್ನ ಪುರೋಹಿತಿಕೆಗೆ ಕರಿಯು ಜನ ಏನು ಕಡಮೆ ಆಯ್ಲಿಲ್ಲೆ. ಹೀಂಗೆ ಸ್ವಲ್ಪ ದಿನ ಹೋದವು. ಜೋಯಿಸರ ಕೆಳಮನೆ ಬೆಳ್ಯಾಡಿಯಿಂದ  ಸ್ವಲ್ಪ ಆಚೆ ಇಪ್ಪುಕೆ ಹೋಯಿ ಅವ್ರ ಮನೆ ಸುದ್ದಿ ಇಲ್ಲಿಗೆ ಬಪ್ಪುದು ಸ್ವಲ್ಪ ಕಡಮೆಯೇ. ಆದ್ರು ಆ ಕಡೆಗೆ ಕೆಲ್ಸಕ್ಕೆ ಹೋತಿದ್ದ ಕೆಲವು ಹೆಂಗಸರು ಹೇಳು ಪ್ರಕಾರ ಜೋಯಿಸರ ಹೊಸ ಸೊಸೆ ಭಾರಿ ರಾಟಾಳಿ, ಜೋಯಿಸರ ಕೈಯಲ್ಲೇ ಎಲ್ಲ ಕೆಲಸ ಮಾಡಿಸ್ಕಂತ್ಲು ಅಂತ.
ಹೀಂಗಿಪ್ಪುವಾಗ ಸ್ವಲ್ಪ ದಿನಗಳ ಹಿಂದೆ ವಿಶ್ವೇಶ ದೇವಸ್ಥಾನದ ಕಡೆಗೆ ಬಪ್ಪುದು ಕಡಿಮೆ ಆಯ್ತು. ಕಡೆಗೆ ಕಂಡ್ರೆ ಬರಿ ದೇವಸ್ಥಾನ ಅಲ್ಲ ಯಾರ ಮನೆಗೂ ಕೂಡ ಅವ್ನು ಹೋಯಿಲ್ಲೆ ಸ್ವಲ್ಪ ದಿನದಿಂದ ಅಂತ ಗೊತ್ತಾಯ್ತು. ಹೀಂಗಾದಾಗ  ಎಂತ ಆಯ್ತು ಅಂತ ಕಂಡ್ಕಂಡು ಬಪ್ಪ ಅಂತ ವಿಶ್ವೇಶನ ಒಂದಿಬ್ಬರು ಆಪ್ತರು ಮನೆ ಕಡೆ ಹೋದ್ರೆ ಕೆಟ್ಟ ಕೊಳೆತ ವಾಸನೆ ಅಂಬ್ರು. ಎಲ್ಲಿಂದ ಬತ್ತ ಇತ್ತಪ್ಪ ವಾಸನೆ ಅಂತ ಹುಡುಕ್ತ ಹುಡುಕ್ತ ಬಾವಿ ಹತ್ರ ಹೋದ್ರೆ, ಅದ್ರ ಒಳಗೆ ತೇಲ್ತಾ ಇದ್ದದ್ದು ಕೊಳೆತು ಬೀಗಿ ಹೋಗಿದ್ದ ಒಂದು ಶವ. ಮತ್ತೆ ಪೋಲಿಸ್ರೆಲ್ಲ ಬಂದು ಪೋಸ್ಟ್ ಮಾರ್ಟಂ ಅದೂ ಇದೂ ಅಂತೆಲ್ಲ ಆದ್ಮೇಲೆ ಗೊತ್ತಾದ್ದು ಅದು ವಿಶ್ವೇಶಂದೆ ಹೆಣ ಅಂತ. ಅದ್ರ ಮಧ್ಯೆ ಇನ್ನೊಂದು ವಿಚಾರ ಅಂದ್ರೆ ಅವತ್ತು ಮನೆ ಒಳಗೆ ಹುಡುಕಿದರೆ ಈಶ್ವರ ಜೋಯಿಸರು ಪತ್ತೆ ಇಲ್ಲೆ, ವಿಶ್ವೇಶನ ಹೆಂಡತಿಯೂ ಇಲ್ಲೆ. ಎರಡು ಮೂರು ದಿನ ಆದ್ರೂ ಇಬ್ರು ಪತ್ತೆ ಇಲ್ಲೆ ಅಂಬುವಾಗ ಮನೆ ಸುತ್ತ ಮುತ್ತ ಕೂಲಂಕಷ ಆಯಿ ಹುಡುಕಿದ ಪೋಲಿಸರಿಗೆ ಸಿಕ್ಕಿದ್ದು ಮನೆ ಹಿಂದೆ ಮಾವಿನ ಮರದ ಕೆಳಗೆ ನೆಲದಲ್ಲಿ ಹೂತಿಟ್ಟಿದ್ದ ಜೋಯಿಸರ ಶವ. ಅದು ಕೂಡ ಹ್ಯಾಂಗೆ ಗೊತ್ತಾದ್ದು ಅಂದ್ರೆ ಮೊದಲಿನ ದಿನ ಜೋರಾಗಿ ಮಳೆ ಸುರ್ದು, ಶವ ಹೂತಿಟ್ಟ ಜಾಗದಲ್ಲಿ ಮಣ್ಣು ಸ್ವಲ್ಪ ಅಡಿಗೆ ಹೋಯಿ ಜೋಯಿಸರ ಮೇಲೆ ಹೊದಿಸಿದ್ದ ಬಿಳಿ ಶಾಲು ಮಣ್ಣಿಂದ ಸ್ವಲ್ಪ ಹೊರಗೆ ಬಪ್ಪುಕೆ ಹೋಯಿ. ಆ ಪರವೂರಿನ ಹೆಣ್ಣಿನ ಪತ್ತೆ ಇನ್ನೂ ಆಯಿಲ್ಲೆ. ಎಲ್ಲ ಮಾತಾಡುದು ಎಂತ ಅಂದ್ರೆ ಇವರಿಬ್ರ ಸಾವಿನ ಹಿಂದೆ ಆ ಹುಡುಗಿದ್ದೇ ಕೈವಾಡ ಇತ್ತು ಅಂತ. ಎಲ್ಲ ಒಂಥರಾ ನಿಗೂಢ. ದನ ಎಬ್ಬುಕಂಡು ಗೊತ್ತಿಲ್ದೆ ಆಚೆ ಕಡೆ ಸಂಜೆ ಹೊತ್ತಿಗೆ ಹೋದವರಿಗೆ ಮನೆ ಒಳಗಿಂದ ವಿಶ್ವೇಶ ವಿಶ್ವೇಶ ಅಂತ ಒಂದು ಮುದಿ ಸ್ವರ ಕೂಗು ಶಬ್ದ ಕೇಂತ ಇತ್ತಂಬ್ರು. ಇದೆಲ್ಲ ಆದ್ಮೇಲೆ ಜನ ಕೆಳಮನೆ ಕಡೆ ತಲೆ ಹಾಕಿ ಮಲ್ಕಂಬುದು ಕೂಡ ಇಲ್ಲೆ. ಎಷ್ಟು ನಿಜನೋ ಎಷ್ಟು ಕಟ್ಟು ಕಥೆಯೋ ಗೊತ್ತಿಲ್ಲೆ. ಆದ್ರೂ ನೀನು ಅಲ್ಲೆಲ್ಲ ಬಳಿಯುದು ಬ್ಯಾಡ ಮಾರಾಯ. ಸುಮ್ನೆ ಇಲ್ಲದ್ದೆಲ್ಲ ತಲೆ ಮೇಲೆ ಹಾಕಂಬೇಡ ಇನ್ನು”. ಇಷ್ಟು ಹೇಳಿ ಅಪ್ಪ ಮನೆ ಒಳಗೆ ಹೋದ್ರು.
ಅಪ್ಪ ಇಷ್ಟು ಹೊತ್ತು ಹೇಳಿದ್ದನ್ನು ಕೇಳಿಸಿಕೊಂಡು ದೇಹದ ಒಳಗಿನಿಂದ ಭಯದ ಕಂಪನ ಎದ್ದು ಬಂದು ಕಾಲು ನಡುಗಿ, ತಲೆ ಸುತ್ತಿದಂತಾಗಿ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಸಿದುಬಿಟ್ಟೆ. ಹಾಗಾದರೆ ನಾನು ನಿನ್ನೆ ಬೈಕಿನ ಹಿಂದೆ ಕೂರಿಸಿಕೊಂಡು ಬಂದ ಜೋಯಿಸರು ಯಾರು? ಯಾರೋ ನನ್ನನ್ನು ಹೆದರಿಸಲು ಹೀಗೆ ನನ್ನ ಜೊತೆ ಆಟ ಆಡಿರಬಹುದೇ? ಹಾಗಿದ್ದರೆ ಹೀಗೆ ವಿಚಿತ್ರ ಸಾವುಗಳು ಸಂಭವಿಸಿರುವ ಆ ಮನೆಯ ಬಳಿ ಆ ಕತ್ತಲು ರಾತ್ರಿಯಲ್ಲಿ ಇಳಿದು ಹೋಗುವ ಧೈರ್ಯ ನಿಜವಾಗಿಯೂ ಈ ಊರಲ್ಲಿ ಯಾರಿಗಾದರೂ ಇದೆಯೇ? ಹಾಗಾದರೆ ನಾನು ನಿನ್ನೆ ರಾತ್ರಿ ಬೈಕಿನಲ್ಲಿ ಕೂಡಿಸಿ ಮಾತನಾಡಿಕೊಂಡು ಬಂದದ್ದು ಜೋಯಿಸರ ಪ್ರೇತವೇ? ಗಂಟಲು ಒಣಗಿದಂತಾಗಿ ಆಚೀಚೆ ನೋಡಲು ಕೈಯಲ್ಲಿದ್ದ, ಓದಲು ಶುರು ಹಚ್ಚಿದ್ದ ಕಾಗದದ ನೆನಪಾಯಿತು.
ನಡುಗುತ್ತಿರುವ ಕೈಯ್ಯನ್ನು ಕಷ್ಟ ಪಟ್ಟು ಸಂಭಾಳಿಸಿಕೊಂಡು ಓದ ತೊಡಗಿದೆ…

——————————————————————————————————————–
ನಮಸ್ಕಾರಗಳು…
ನನ್ನ ಹೆಸರು ವಿಶ್ವೇಶ ಜೋಯಿಸ. ಈಶ್ವರ ಜೋಯಿಸರ ಮಗ. ವೃತ್ತಿಯಲ್ಲಿ ಪುರೋಹಿತ ಇಲ್ಲಿಯತನಕ. ಆತ್ಮಹತ್ಯೆಗಿಂತ ಹೇಯ ಕೃತ್ಯ ಇನ್ನೊಂದಿಲ್ಲ ಎಂದು ನಾನು ಕೂಡ ಕೇಳಿದ್ದೆ, ನಂಬಿದ್ದೆ. ಆತ್ಮಹತ್ಯೆಗಯ್ಯುವವರಿಗಿಂತ ಹೇಡಿಗಳು ಬೇರಿಲ್ಲ ಎಂಬುದು ನನ್ನ ನಿಲುವಾಗಿತ್ತು ಕೂಡ. ಪುರೋಹಿತನಾಗಿ, ಜನರ ಮತ್ತು ದೇವರ ನಡುವಿನ ಮಧ್ಯಸ್ತಿಕನಾಗಿ ಕೆಲಸ ಮಾಡುವಂಥ ನನ್ನಂಥವರಿಗಂತೂ ಆತ್ಮಹತ್ಯೆ ಖಂಡಿತ ಸಲ್ಲದು. ಹಾಗೆ ನೋಡಲು ಹೋದರೆ ಈ ಮಧ್ಯಸ್ಥಿಕೆಯ ಕೆಲಸವೇನು ನಾನು ಸ್ವಂತ ಆಯ್ಕೆ ಮಾಡಿದ್ದಲ್ಲ. ನನಗೆ ಸರಿಯಾಗಿ ಬುದ್ಧಿ ಬೆಳೆಯುವ ಮುಂಚೆಯೇ, ನನ್ನ ಹಣೆಬರಹವನ್ನು ಅಪ್ಪನೇ ನಿರ್ಧರಿಸಿದ್ದರು. ನಾನು ಮಾಡಿದ ಸಾಮಾನ್ಯ ವಿದ್ಯಾಭ್ಯಾಸ ಬರೀ ಹತ್ತನೇ ತರಗತಿಯ ತನಕ ಮಾತ್ರ. ಆಮೇಲೆ ಅಪ್ಪ ಸಂಸ್ಕೃತ ಪಾಠಶಾಲೆಗೆ ನನ್ನನ್ನು ದಾಖಲಿಸಿದರು. ಓಡಿಸಿದ್ದನ್ನು ನಿಷ್ಠೆಯಿಂದ ಓದಿ ವಿದ್ವಾಂಸನಾದರೂ ಮನಸ್ಸಿನಲ್ಲಿ ಕೊರಗು ಇದ್ದೇ ಇತ್ತು. ಹತ್ತನೇ ತರಗತಿಯ ತನಕ ನನ್ನದೇ ಸಹಪಾಠಿಗಳಾಗಿದ್ದವರೆಲ್ಲ ಪಟ್ಟಣ ಸೇರಿ ಆಧುನಿಕ ಜೀವನ ಶೈಲಿಯನ್ನು ಮೈಗೂಡಿಸಿಕೊಂಡು ಸಾಗಿಸುತ್ತಿರುವ ಐಶಾರಾಮ ಜೀವನ ನನ್ನ ಕಣ್ಣು ಕುಕ್ಕುತ್ತದೆ. ನಾನು ಅಂತ ಜೀವನಕ್ಕೆ ಅವರೆಲ್ಲರಿಗಿಂತ ಜಾಸ್ತಿ ಅರ್ಹನಾಗಿದ್ದೆ. ಆದರೆ ಈ ಪೌರೋಹಿತ್ಯ ನನ್ನನ್ನ ಕೂಪ ಮಂಡೂಕನನ್ನಾಗಿ ಮಾಡಿತು ಎಂದು ಎಷ್ಟೋ ಸಲ ಅನ್ನಿಸಿದ್ದಿದೆ. ಇದಕ್ಕೆ ಕಾರಣ ಅಪ್ಪನೇ? ಸ್ವಲ್ಪ ಮಟ್ಟಿಗೆ ಹೌದಾದರೂ ಪೂರ್ತಿ ಆಪಾದನೆ ಅವರ ಮೇಲೆ ಹೊರಿಸಿದರೆ ಅದೂ ಕೂಡ ತಪ್ಪಾದೀತು. ಅಪ್ಪನ ಪ್ರಪಂಚ ಬೆಳ್ಯಾಡಿಯ ಸುತ್ತ ಮುತ್ತಕ್ಕೆ ಸೀಮಿತವಾಗಿತ್ತು. ಅವರ ಜ್ಞಾನ ಪೌರೋಹಿತ್ಯದ ಸಂಸ್ಕೃತ ಮಂತ್ರಗಳಿಗೆ ಸೀಮಿತವಾಗಿತ್ತು. ಅವರ ಕಾಲಕ್ಕೆ ಪುರೋಹಿತರು ಸಮಾಜದಲ್ಲಿ ಮೇಲಿನ ಸ್ತರದಲ್ಲಿದ್ದರು. ಸಾಮಾನ್ಯ ಜನರ ಆದರ, ಗೌರವ, ನಿಷ್ಠೆಗಳಿಗೆ ಪಾತ್ರರಾಗಿದ್ದರು. ಇಂದು ಕಾಲ ಬದಲಾಗಿದೆ. ಮಂತ್ರ, ಪೂಜೆ, ರೀತಿ ರಿವಾಜು ಗೊತ್ತಿಲ್ಲದ, ಯಾವುದೋ, ಮಾಡಿದ ಪಾಪ ನಿವಾರಣೆಗೋ ಅಥವಾ ಇನ್ನಷ್ಟು ಸಮೃದ್ಧಿಯ ಅಭಿಲಾಷೆಯಿಂದಲೋ ನಡೆಸಬೇಕಾದ ಆಚರಣೆಗೆ ಅವಶ್ಯಕವಾದ ಅನಿವಾರ್ಯ ಮಧ್ಯವರ್ತಿಗಳಾಗಿ ಮಾತ್ರ ನಾವು ಉಳಿದಿದ್ದೇವೆ. ಇಷ್ಟರ ಮೇಲೆ ನಮ್ಮ ಸಂಭಾವನೆಯ ಮೇಲೆ ಕೂಡ ಕೆಂಗಣ್ಣು ಜನರಿಗೆ. ಇಂದು ಕೂಡ ನೆನಪಿದೆ, ಚಿಕ್ಕಂದಿನಲ್ಲಿ ಅಪ್ಪನ ಜೊತೆಗೆ ದುರ್ಗಾ ಪೂಜೆಗೆಂದು ಹೋದ ರಾತ್ರಿ. ಯಾಕೋ ಅಪ್ಪ ಅವತ್ತು ಬಿಡಿಸಿದ್ದ ದುರ್ಗೆಯ ಚಿತ್ರ ಅಷ್ಟೊಂದು ಸುಂದರವಾಗಿ ಮೂಡಿ ಬಂದಿರಲಿಲ್ಲ. ಮನೆಯ ಯಜಮಾನನ ಮುಖದಲ್ಲಿ ಒಂದು ಬಗೆಯ ಅಸಮಾಧಾನ ತೋರುತ್ತಿತ್ತು. ಪೂಜೆಯ ಕೊನೆಯಲ್ಲಿ ಆ ಯಜಮಾನನ ತಾಯಿ ತನ್ನ ಸಂಬಂಧಿಕರಲ್ಲಿ ಅಪ್ಪನ ಮಂತ್ರೋಚ್ಚಾರದ ಬಗ್ಗೆ, ಅಷ್ಟಲ್ಲದೇ ಶಾಸ್ತ್ರದ ಬಗ್ಗೆ ಅಪ್ಪನಿಗಿರುವ ಜ್ಞಾನದ ಬಗ್ಗೆ ಗುಮಾನಿಯ ಗುಸು ಗುಸು ಮಾತನಾಡುತ್ತಿದ್ದದ್ದು ನನಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಅಂದಿನ ದಿನವೇ ಈ ಜನರ ಮೇಲೆ ಅಸಹ್ಯ ಹಾಗೂ ಇವರಿಗೆ ಸಾಧಿಸಿ ತೋರಿಸಬೇಕೆಂಬ ಛಲ ಮೂಡಿದ್ದು. ಇಂದು ನನ್ನ ಪೌರೋಹಿತ್ಯದ ಬಗ್ಗೆ, ಆಚರಣೆ, ಶಾಸ್ತ್ರಗಳ ಬಗ್ಗೆ, ನನ್ನ ಪಾಂಡಿತ್ಯದ ಬಗ್ಗೆ ಬೊಟ್ಟು ಮಾಡಿ ಠೀಕೆ ಮಾಡುವ ತಾಕತ್ತು ಇಡೀ ಬೆಳ್ಯಾಡಿಯ ಯಾವ ಬ್ರಾಹ್ಮಣನಿಗೂ ಇಲ್ಲ. ಸುತ್ತಮುತ್ತಲಿನ ಎಲ್ಲರೂ ನನ್ನನ್ನು ಕೊಂಡಾಡುವವರೇ. ಇವರೆಲ್ಲರ ಮನೆಗಳಲ್ಲಿ ಮದುವೆಯ ಪೌರೋಹಿತ್ಯ ನಾನೇ ವಹಿಸಬೇಕು ಆದರೆ ವಿಪರ್ಯಾಸವೆಂದರೆ ಯಾವಾಗ ಅಪ್ಪ ನನ್ನ ಮದುವೆ ಮಾಡುವ ಯೋಚನೆಯಿಂದ ಇದೇ ಎಲ್ಲ ಹೊಗಳುಭಟ್ಟರ ಮನೆ ಬಾಗಿಲು ತಟ್ಟಿದರೋ ಅಂದು ಪ್ರತಿಯೊಬ್ಬರ ಬಾಯಲ್ಲೂ ಹೊಸ ಹೊಸ ಕಾರಣಗಳು ರಾರಾಜಿಸಿದವು. ಆದರೆ ಇವರದೆಲ್ಲ ಕಾರಣಗಳ ಪರದೆಯನ್ನು ಸರಿಸಿ ಒಳ ನೋಡಿದರೆ ಸ್ಪಷ್ಟವಾಗಿ ತೋರುತ್ತಿದ್ದ ಕಹಿ, ಕರಿ ಸತ್ಯ ಒಂದೇ. ನನ್ನ ಅನಿರ್ದಿಷ್ಟ ಸಂಭಾವನೆಯ ನೌಕರಿ ಮತ್ತು ಮುಂದೊಂದು ದಿನ ಖಾಯಿಲೆ ಬೀಳಬಹುದಾಗಿದ್ದ ನನ್ನ ಅಪ್ಪ. ವಯಸ್ಸಿನ ಜೊತೆ ಕ್ಷೀಣಿಸಿ ಹೋಗುತ್ತಿರುವ ಅಪ್ಪನ ಜ್ಞಾಪಕ ಶಕ್ತಿಯ ಕಾರಣವನ್ನೇ ಮುಂದಿಟ್ಟುಕೊಂಡು  ಊರ ಜನರೆಲ್ಲಾ ಅಪ್ಪನ ಮಾನಸಿಕ ಸ್ವಾಸ್ಥ್ಯವನ್ನು ಆಗಲೇ ಸಂಶಯದ ದೃಷ್ಟಿಯಿಂದ ನೋಡಿ ಹಿಂದಿನಿಂದ ಗೇಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬರದೇ ಹೋಗಲಿಲ್ಲ. ಇವರೆಲ್ಲರಿಗೆ ತಕ್ಕ ಶಾಸ್ತಿ ಮಾಡಿಸಲೆಂದೇ ನಾನು ಆ ನಿರ್ಣಯ ತೆಗೆದುಕೊಂಡದ್ದು. ಅದೇ ನಿರ್ಣಯ ನನಗೆ ಮುಖವಾಡ ಧರಿಸಿದ ಈ ಸಮಾಜದ ಹಿಂದಿನ ನಿಜ ರೂಪವನ್ನು ಪರಿಚಯ ಮಾಡಿಸಿ ನನ್ನನ್ನು, ನನ್ನ ಈ ಜೀವನದ ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸಿದೆ. ?????????????????????????????????????????????????????????????????????????????????????????????????????????????????
ಅದೇನೋ ಸಮಾರಂಭದ ಪುರೋಹಿತಿಕೆಗೆಂದು ಘಟ್ಟದಾಚೆಯ ಆ ಊರಿಗೆ ಹೋಗಿದ್ದೆ. ಪೂಜೆಯ ನಂತರ ಒಬ್ಬ ಮಧ್ಯವಯಸ್ಕ ನನ್ನ ಬಳಿ ಬಂದು ಮಾತಿಗೆ ಶುರು ಹಚ್ಚಿಕೊಂಡ. ಆತನಿಗೆ ನನ್ನ ಪೂರ್ವಾಪರಗಳೆಲ್ಲ ತಿಳಿದಿದ್ದವು. ನನ್ನ ಮದುವೆಯ ಸಲುವಾಗಿ ಇನ್ನು ಬ್ರಾಹ್ಮಣ ಹುಡುಗಿಯನ್ನು ಕಾಯುವುದರಲ್ಲಿ ಅರ್ಥವಿಲ್ಲವೆಂದು ಹೇಗೋ ಆತ ನನ್ನನ್ನು ನಂಬಿಸುವುದರಲ್ಲಿ ಸಫಲನಾಗಿದ್ದ. ಅಲ್ಲೇ ಹತ್ತಿರದ ಆತನ ಊರಿನ ಪಕ್ಕದಲ್ಲೇ ಆತನ ಪರಿಚಯಸ್ಥರ ಅತೀ ಬಡ ಕುಟುಂಬದ, ಮದುವೆಯ ವಯಸ್ಸಿನ ಹುಡುಗಿಯೊಬ್ಬಳು ತಯಾರಿರುವುದಾಗಿಯೂ, ತಾನು ಆಕೆಯನ್ನು ಸರಳವಾಗಿ ವರಿಸಿ ಆಕೆಯ ಬಡ ಕುಟುಂಬದ ಮೇಲೆ ಕೃಪೆ ತೋರಿ ಪುಣ್ಯ ಸಂಪಾದಿಸಿಕೊಳ್ಳಬೇಕೆಂದು ಪರಿ ಪರಿಯಾಗಿ ವಿನಂತಿಸಿದ. ಅಂದು ರಾತ್ರಿ ನಾನೊಬ್ಬನೇ ಯೋಚಿಸಿದೆ. ಆಕೆಯನ್ನು ತಾನು ಯಾಕೆ ಮದುವೆಯಾಗಬಾರದು? ಆ ವ್ಯಕ್ತಿ ಹೇಳಿದಂತೆ ಹೇಗಿದ್ದರೂ ಆಕೆ ಸಸ್ಯಾಹಾರಿ. ಮದುವೆ ಆದ ಮೇಲೆ ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಆಕೆಯನ್ನು ಬದಲಾಯಿಸುವುದು ಕಷ್ಟವೇನಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನನ್ನನ್ನು ಪರೋಕ್ಷವಾಗಿ ಅವಮಾನಿಸಿದ ಊರ ಜನರಿಗೆ ನಾನು ಪ್ರತ್ಯಕ್ಷವಾಗಿ ಸಡ್ಡು ಹೊಡೆದಂತಾಗುತ್ತದೆ ಈ ನಿರ್ಣಯದಿಂದ. ನಾನು ಕೂಡ ನೋಡುತ್ತೇನೆ. ಹೊರ ಜಾತಿಯ ಹುಡುಗಿಯನ್ನು ಮದುವೆ ಆಗಿ ನಾನು ಬ್ರಾಹ್ಮಣತ್ವ ಕಳೆದುಕೊಂಡೆನೆಂದು ಊರ ಜನ ನಿರ್ಧರಿಸುವರೋ? ಹಾಗಾದಲ್ಲಿ ಅವರ ಮನೆಯ ಕಾರ್ಯಗಳಿಗೆ ಪುರೋಹಿತಿಕೆ ಮಾಡುವವರಾರು? ಅವರು ಆಕೆಯನ್ನು ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ ಎಂದೆಲ್ಲ ಲೆಕ್ಕಾಚಾರ ಹಾಕಿಯೇ ಮರುದಿನವೇ ಹಿಂದಿನ ದಿನ ಸಿಕ್ಕಿದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಿ ತನಗೆ ಮದುವೆ ಒಪ್ಪಿಗೆಯೆಂದೂ ಆದರೆ ಮದುವೆ ಮರುದಿನವೇ ನಡೆಯಬೇಕೆಂದು ಒತ್ತಾಯಿಸಿದೆ. ನಾನು ಆಕೆಯನ್ನು ನೋಡಿದ್ದು ಮದುವೆಯ ದಿನವೇ. ಆಕೆಯ ಕಡೆಯಿಂದ ಆಕೆಯ ಅಪ್ಪ ಅಮ್ಮ ಬಿಟ್ಟರೆ ಆ ವ್ಯಕ್ತಿ ಮಾತ್ರ ಹಾಜರಿದ್ದದ್ದು. ನನ್ನ ಕಡೆಯಿಂದ ನಾನೊಬ್ಬನೇ. ಅಪ್ಪನಿಗೆ ತಿಳಿಸುವ ಗೋಜಿಗೆ ನಾನು ಹೋಗಲಿಲ್ಲ. ಹುಡುಗಿಯ ಮನೆ ಕೂಡ ತಾನು ನೋಡಿರಲಿಲ್ಲ. ಅದರ ಅವಶ್ಯಕತೆ ಕೂಡ ತನಗಿರಲಿಲ್ಲ ಯಾಕೆಂದರೆ ಅಲ್ಲಿಗೆ ನಾನೆಂದು ಹೋಗುವುದಿಲ್ಲವೆಂದು ಮೊದಲೇ ನಿಶ್ಚಯಿಸಿದ್ದೆ. ಆಕೆ ನೋಡಲು ರೂಪವತಿಯಲ್ಲದಿದ್ದರೂ ಸಾಧಾರಣವಾಗಿ ಲಕ್ಷಣವಾಗಿದ್ದಳು. ಹೀಗೆ ಅದೇ ಊರಿನ ಒಂದು ದೇವಸ್ಥಾನದಲ್ಲಿ ನಮ್ಮ ಮದುವೆ ನಡೆದು ಹೋಯಿತು. ಅದೇ ದಿನ ರಾತ್ರಿ ಜೊತೆಗೆ ಹೆಚ್ಚೇನೂ ಸಾಮಾನುಗಳನ್ನು ತರದೇ ಆಕೆಯ ಆ ಊರಿಗೆ ವಿದಾಯ ಹೇಳಿ ಬೆಳ್ಯಾಡಿಯ ಕಡೆಗೆ ಪ್ರಯಾಣಿಸಿದೆವು. ಊರಿಗೆ ತಲುಪಿದ ಸಂಜೆಯ ಒಳಗೆ ಸುದ್ದಿ ಊರೆಲ್ಲ ಹಬ್ಬಿತ್ತು. ಯಾರಿಗೂ ಮುಖ ಕೊಟ್ಟು ಕೇಳುವ ಧೈರ್ಯವಿಲ್ಲ. ಒಂದಿಬ್ಬರು ವಿಚಾರಿಸಿದಾಗ ಸೂಕ್ತ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದೆ. ಒಂದೆರಡು ದಿನಗಳಲ್ಲಿ ಮೇಲ್ನೋಟಕ್ಕೆ ಎಲ್ಲ ಮಾಮೂಲಿಯಂತಾಯಿತು. ಬೆಳ್ಯಾಡಿಯ ಜನರ ಮನಸ್ಥಿತಿಯ ಬಗ್ಗೆ ಚೆನ್ನಾಗಿ ಅರಿತಿದ್ದ ನನಗೆ ಮಾತ್ರ ತಿಳಿದಿತ್ತು  ಜನರ ಕುತೂಹಲದ ಕೆಂಡದ ಮೇಲೆ ಬರಿ ಬೂದಿ ಮೆತ್ತಿದೆ ಅಷ್ಟೇ, ಅದು ಸಂಪೂರ್ಣವಾಗಿ ಆರಿ ಹೋಗಿಲ್ಲ ಎಂದು.
ಇನ್ನು ಹೆಂಡತಿಯಾಗಿ ಬಂದವಳು ಮೊದ ಮೊದಲು ಮಾತನಾಡಲು ಕೂಡ ಅಳುಕುತ್ತಿದ್ದಳು. ಹೊಸ ಊರಿನ, ಹೊಸ ಸಂಪ್ರದಾಯದ ಭಯವಿರಬಹುದೆಂದು ನಾನು ಹೆಚ್ಚೇನು ತಲೆ ಕೆಡಿಸಕೊಳ್ಳಲಿಲ್ಲ. ಆದರೆ ಬರು ಬರುತ್ತಾ ತಿಳಿಯಿತು ಆಕೆ ತನ್ನನ್ನು ಗಂಡನ ಸ್ಥಾನದಲ್ಲಿ ಇರಿಸಿಯೇ ಇಲ್ಲವೆಂದು. ಸರಸದ ಮಾತಾಡಲು ಹೋದರೆ ವಿಚಿತ್ರವಾಗಿ ನನ್ನ ಮುಖ ನೋಡಿ ಅಸಹ್ಯದಿಂದ ಎದ್ದು ಹೋಗುವಳು. ಅಪ್ಪನ ಬಗ್ಗೆ ಎಳ್ಳಷ್ಟು ಗೌರವ ತೋರಿಸಲೊಲ್ಲಳು. ಮದುವೆಯ ಹೊಸತರಲ್ಲಿಯೇ ಜಗಳ ಬೇಡವೆಂದು ನಾನು ಕೂಡ ಸುಮ್ಮನಾಗಿ ದೈನಂದಿನ ಚಟುವಟಿಕೆಗಳಲ್ಲಿ ನನ್ನನ್ನು ತೊಡಿಸಿಕೊಂಡೆ.
ನಿನ್ನೆ ಮಧ್ಯಾಹ್ನ ಹೀಗೆಯೆ ಕಾರ್ಯನಿಮಿತ್ತ ಹೊರ ಹೋದವನು ಮನೆಗೆ ಮರುಳಲು ತೋರಿದ್ದು ಹಾಗೆ ತೆರೆದಿದ್ದ ಬಾಗಿಲು. ಗಾಬರಿಯಿಂದ ಒಳಗೆ ಹೋಗಿ ನೋಡಲು ಆಘಾತವೇ ಕಾದಿತ್ತು. ದೇವರ ಕೋಣೆಯ ಪಕ್ಕದಲ್ಲೇ ಇದ್ದ ತಿಜೋರಿಯ ಬಾಗಿಲು ಕೂಡ ತೆರೆದಿದೆ. ಈ ಮುಂಚೆ ಆ ತಿಜೋರಿಯಲ್ಲಿ ಅಮ್ಮನ ಹಳೆಯ ಬೆಲೆಬಾಳುವ ಆಭರಣ ಬಿಟ್ಟರೆ ಬೇರೇನು ಇದ್ದಿರಲಿಲ್ಲ. ಕಳ್ಳರು ಮನೆಗೆ ನುಗ್ಗಿದ್ದು ಖಚಿತವಾಗುತ್ತಲೇ ಹೆಂಡತಿಯೆಂದು ಮನೆಗೆ ತಂದವಳಿಗಾಗಿ ಹುಡುಕಾಡಿದೆ. ಆಕೆಯ ಪತ್ತೆ ಕೂಡ ಇಲ್ಲ. ಎಲ್ಲಿ ಆಕೆಯ ಪ್ರಾಣಕ್ಕೆ ಕೂಡ ಸಂಚಕಾರ ಬಂದಿರಬಹುದೇನೋ ಎಂದು ಯೋಚಿಸುತ್ತ ಕುಳಿತಾಗಲೇ ಆಕೆ ಜೊತೆಗೆ ತಂದ ಒಂದು ಚೀಲವನ್ನು ಇಡುತ್ತಿದ್ದ ಮೂಲೆಯ ಕಡೆಗೆ ಗಮನ ಹೋದದ್ದು. ಆ ಮೂಲೆಯಲ್ಲಿ ಇಂದು ಆ ಚೀಲವಿಲ್ಲ. ಅನುಮಾನ ಬಂದಂತಾಗಿ ಮನೆಯೆಲ್ಲಾ ತಡಕಾಡಲು, ಆಕೆಯು ಈ ಮನೆಯಲ್ಲೇ ತಂಗಿದ್ದಳು ಎಂದು ಹೇಳುವ ಒಂದೇ ಒಂದು ಕುರುಹು ಕೂಡ ಉಳಿದಿಲ್ಲ ಎಂದು ತಿಳಿದದ್ದು. ವಿಷಯ ಸ್ಪಷ್ಟವಾಗಿತ್ತು. ಕಳ್ಳ ಮನೆಯ ಹೊರಗಿಂದ ಒಳ ಬಂದಿಲ್ಲ, ಒಳಗಿಂದವೇ ಹೊರ ನಡೆದಿರುವುದು ಎಂದು. ಆಕೆ ಬಗೆದ ಅನಿರೀಕ್ಷಿತ ದ್ರೋಹದಿಂದಾಗಿ ಮಂಕಾಗಿ ಮೂಲೆಯಲ್ಲಿ ಕುಳಿತ ನನಗೆ ಎಚ್ಚರಾಗಿದ್ದು ಬೆಳಗ್ಗೆದ್ದು ದೇವಸ್ಥಾನದ ಕಡೆಗೆ ಹೋಗಿದ್ದ ಅಪ್ಪ ಬಂದು ಏನಾಯ್ತು ವಿಶ್ವೇಶ ಎಂದು ಕೇಳಿದಾಗಲೇ. ಏನನ್ನು ಉತ್ತರಿಸದೇ ಸುಮ್ಮನೆ ಕೋಣೆಗೆ ಹೋಗಿ ಮಲಗಿದೆ. ಮನಸ್ಸಲ್ಲಿ ಬಗೆ ಬಗೆಯ ವಿಚಾರದ ಅಲೆಗಳು ಏಳತೊಡಗಿದವು. ಇಷ್ಟು ದಿನ ಈ ಊರಿನ ಜನರ ಮನಸ್ಥಿತಿಯನ್ನು ಧಿಕ್ಕರಿಸಿ ಅವರ ಅಸಹಾಯಕತೆಯನ್ನು ನೋಡಿ ಮನದಲ್ಲೇ ಅಟ್ಟಹಾಸಗೈಯ್ಯುತ್ತಿದ್ದ ತಾನು ಅದೇ ಅಟ್ಟಹಾಸಕ್ಕೆ ಕಾರಣವಾದ ವ್ಯಕ್ತಿಯಿಂದಲೇ ಹೀನಾಯವಾಗಿ ಮೋಸ ಅನುಭವಿಸಿದ ವಿಚಾರ ತಿಳಿದು ಸುಮ್ಮನಿರುವರೇ? ಸಾಧ್ಯವಿಲ್ಲ. ಈ ಕೇವಲ ಜನರ ಗೇಲಿಗೆ ನಾನು ಬಲಿಯಾಗಲಾರೆ. ಅಷ್ಟಕ್ಕೂ ನನಗೂ ಕೂಡ ಈ ಜೀವನ ರೋಸಿ ಹೋಗಿದೆ. ಏನಿದೆ ಇಲ್ಲಿ? ಮನಸ್ಸಿನಲ್ಲಿ ವಿಷವಿಟ್ಟುಕೊಂಡು ಇತರರ ಮನೆಯ ದೋಸೆಯ ತೂತು ಹುಡುಕುವ ಮಂದಿಯ ಮಧ್ಯೆ ತನಗೆ ಜೀವಿಸಲು ಸಾಧ್ಯವಿಲ್ಲ. ಇದು ಧೈರ್ಯದ ಮಾತಲ್ಲ, ಅವಶ್ಯಕತೆಯ ಮಾತು. ನನಗೆ ಈ ಜೀವನದ ಅವಶ್ಯಕತೆ ತೋರುತ್ತಿಲ್ಲ.
ರಾತ್ರಿಯ ಹೊತ್ತು ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು. ಕೂಡಲೇ ಎದ್ದು ನಾನೇ ಅಡುಗೆ ಮನೆಗೆ ಹೋಗಿ ರಾತ್ರಿ ಊಟಕ್ಕೆ ಅಡುಗೆ ತಯಾರಿಸಿ ಅಪ್ಪನಿಗೆ ಬಡಿಸಿದೆ. ಅಪ್ಪ ಕೇಳಿದರು, ಆಕೆ ಎಲ್ಲಿ ಎಂದು. ಹಾಗೇ ಅವರ ಮುಖ ನೋಡಿ ಸುಮ್ಮನಾದೆ. ನನ್ನ ಮೌನ ಅವರಿಗೆ ಅಭ್ಯಾಸವಾಗಿದೆ. ಹೆಚ್ಚೇನು ಮಾತನಾಡದೇ ಊಟ ಮಾಡಿ ಅಪ್ಪ ಮಲಗಿದರು. ಆ ರಾತ್ರಿ ತುಂಬಾ ದಿನದಿಂದ ಮಾಯವಾಗಿದ್ದ ಸುಖನಿದ್ರೆ ಹತ್ತಿತು. ಬೆಳಗ್ಗೆ ಬೇಗನೇ ಎದ್ದು ಎಲ್ಲ ತಯಾರಿ ಮಾಡಿದೆ. ಅಪ್ಪ ಏಳುತ್ತಿದ್ದಂತೆ ತಿಂಡಿಯ ಜೊತೆ ಕಾಫಿಯ ಬದಲು ನಾನೇ ತಯಾರಿಸಿದ ಕಹಿ ಅಮೃತವನ್ನು ಕೊಟ್ಟೆ. ಒಂದು ಗುಟುಕು ಕುಡಿದು ಮುಖ ಹೀಕರಿಸಿ ಇದೇನು ಎಂದರು ಅಪ್ಪ. ಇಂದು ಕರ್ಕಾಟಕ ಅಮಾವಾಸ್ಯೆ. ಹಾಳೆ ಕೆತ್ತೆ ಕಷಾಯ ಇದು, ಕುಡಿದು ಖಾಲಿ ಮಾಡಿ ಎಂದೆ. ಹೌದೇ ಎಂದು ಏನೋ ಲೆಕ್ಕಾಚಾರ ಮಾಡಿ ಸುಸ್ತಾಗಿ ಅಪ್ಪ ಕೊಟ್ಟದ್ದನ್ನು ಕುಡಿದು ಖಾಲಿ ಮಾಡಿದರು. ಪಂಚಾಗ ತೆರೆದು ದಿನ, ವಾರ, ತಿಥಿ, ನಕ್ಷತ್ರ ನೋಡುವಂಥ ಸಾಮರ್ಥ್ಯ ಅಪ್ಪ ಯಾವತ್ತೋ ಕಳೆದುಕೊಂಡಿದ್ದಾರೆ ಎಂದು ನನಗೆ ಚೆನ್ನಾಗಿಯೇ ತಿಳಿದಿತ್ತು. ಈಗ ಅವರು ಬರೀ ಬದುಕುತ್ತಿರುವ ಒಂದು ಜೀವ ಅಷ್ಟೇ. ಗುರಿಯಿಲ್ಲದ ಜೀವ. ನನ್ನ ಗುರಿಯೊಂದಿಗೆ ಇಂದು ಅವರನ್ನು ನಾನು ಮುನ್ನಡೆಸುತ್ತೇನೆ. ಮಧ್ಯಾಹ್ನದವರೆಗೂ ಅಪ್ಪನನ್ನೇ ಗಮನಿಸುತ್ತಿದ್ದೆ. ಮಧ್ಯದಲ್ಲಿ ಒಂದು ಬಾರಿ ಎದ್ದು ವಿಶ್ವೇಶ ಯಾಕೋ ಕಹಿ ತೇಗು ಬರುತ್ತಿದೆ, ಯಾವತ್ತೂ ಹೀಗೆ ಆಗಿರಲಿಲ್ಲ ಎಂದು ಹೇಳಿ ಮತ್ತೆ ಮಲಗಿದರು. ಮತ್ತೆ ಪುನಃ ಏಳಲಿಲ್ಲ. ಮನೆಯ ಹಿಂದಿನ ಮಾವಿನ ಮರದಡಿ ಅಪ್ಪನನ್ನು ಮಲಗಿಸಿ ಮಣ್ಣಿನ ಹೊದಿಕೆ ಹೊದಿಸಿ ಬಂದಿದ್ದೇನೆ ಈಗಷ್ಟೆ. ಮಗನಾದವನು ಅಪ್ಪನ ಸಂಸ್ಕಾರ ಕೂಡ ಶಾಸ್ತ್ರೋಕ್ತವಾಗಿ ಮಾಡಲಿಲ್ಲವೆಂಬ ಕೊರಗು ನನ್ನೊಂದಿಗೆ ಸ್ವಲ್ಪ ಸಮಯದಲ್ಲಿ ಅಂತ್ಯಗೊಳ್ಳಲಿದೆ. ಇನ್ನು ಆಕೆಯ ಹೆಸರನ್ನು ಬೇಕೆಂದೇ ಹೆಸರಿಸಿಲ್ಲ. ಆಕೆಯನ್ನು ಹುಡುಕಿ ಪ್ರಯೋಜನವಿಲ್ಲ. ಆಕೆ ನಿಶ್ಚಯಿಸಿದ ಗುರಿ ತಲುಪಿದ್ದಾಳೆ. ಅಲ್ಲಿಗೆ ಆಕೆ ಸಾಧಕಿ. ಈ ಕಾಗದ ಬರೆದ ಏಕೈಕ ಉದ್ದೇಶ ಜನರಿಗೆ ತಿಳಿಪಡಿಸುವುದು ನಾನು ಹೇಡಿ ಅಲ್ಲ ಎಂದು. ಜೀವಿಸುವ ಆಸೆ ನನ್ನಲ್ಲಿ ಸತ್ತು ಹೋಗಿದೆ. ಸತ್ತು ಹೋದದ್ದನ್ನು ಒಳಗಿಟ್ಟುಕೊಂಡು ಕೊಳೆಯಿಸುವುದಕ್ಕಿಂತ ಮಣ್ಣು ಮಾಡುವುದು ಲೇಸು. ನಾನು ಕೂಡ ಅದನ್ನೇ ಮಾಡುತ್ತಿದ್ದೇನೆ.
ಇಂತಿ ನಿಮ್ಮವನಲ್ಲದ,
ವಿಶ್ವೇಶ ಜೋಯಿಸ.

 

7 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)