ಬೀಣೆ ಚೀಲ.. ಸಾಮಾನ್ಯವಾದ ಹಳ್ಳಿಗಳಲ್ಲಿ ಸಾಮಾನ್ಯವಾದ ಮನೆಗಳ ಸಾಮಾನ್ಯ ಜನರು, ಸಾಮಾನ್ಯವಾದ ಸಾಮಾನುಗಳನ್ನು ತರಲು ಬಳಸುತ್ತಿದ್ದ ಚೀಲ. ಹೆಂಡತಿಗೆ ಮನೆ ನಡೆಸಲು ಬೇಕಾದ ದಿನಸಿ ಇರಬಹುದು, ಪುಟಾಣಿ ಮಗುವಿಗೆ ತಂದ ಪುಟಾಣಿ ತಿಂಡಿ ಪೊಟ್ಟಣ ಇರಬಹುದು, ವೃದ್ಧೆ ಅಮ್ಮನಿಗೆ ಕಾಲು ನೋವಿಗೆಂದು ತಂದ ಬೇರಿನ ಎಣ್ಣೆ ಇರಬಹುದು, ಅಪ್ಪನಿಗೆ ಜಗಿಯಲು ತಂದ ಅಡಿಕೆ ಇರಬಹುದು, ಮಗಳಿಗೆ ತಂದ ಪೆನ್ನು ಪುಸ್ತಕ ಇರಬಹುದು, ಈ ಚೀಲ ಯಾವತ್ತೂ ಚಿಕ್ಕ ಪುಟ್ಟ ಆಸೆ, ಅಚ್ಚರಿ, ನಿರೀಕ್ಷೆಗಳ ಆಗರ. ಹಾಗೆಯೇ ನನ್ನ ಈ ಬ್ಲಾಗ್. ತೆರೆದು ನೋಡಿದರೆ ಅಸಾಮಾನ್ಯವಾದದ್ದೇನು ಸಿಗದು. ಇರುವುದು ಬರೀ ಅತೀ ಸಾಮಾನ್ಯ ಬರಹಗಳು, ಎಳಸು ಕಥೆಗಳು. ತೆರೆದವರಿಗೆ ನಿರಾಸೆ ಆಗದಿದ್ದರೆ ಸಾಕು ಅಲ್ಲಿಗೆ ನಾನು ಸಫಲ.

ಜೀವನದ, ಪ್ರಪಂಚದ ಬಗ್ಗೆ ಟೀಕಿಸುವಷ್ಟು, ವಿಮರ್ಶಿಸುವಷ್ಟು ಲೋಕ ನೋಡಿಲ್ಲ ಇನ್ನೂ. ಇಲ್ಲಿರುವ ಎಲ್ಲ ಬರಹಗಳಿಗೆ ಪ್ರೇರಣೆ ಇರುವುದರಲ್ಲೇ ತೃಪ್ತಿಯಿಂದಿರುವ, ತಮ್ಮದೇ ರೀತಿಯಲ್ಲಿ ಸಮಾಧಾನದ ಜೀವನ ಸಾಗಿಸುತ್ತಿರುವ, ವಿದ್ಯೆ ಕಲಿಸಿ ಮಕ್ಕಳನ್ನು ದೊಡ್ಡ ನಗರಗಳಿಗೆ ಕಳಿಸಿ ಹಳ್ಳಿಗಳಲ್ಲಿ ಒಂಟಿ ಜೀವನ ಸಾಗಿಸುತ್ತಿರುವ ತಂದೆ ತಾಯಿಯರು, ನಗರ ಜೀವನದ ಜಂಜಾಟ , ಪೈಪೋಟಿಗಳಿಗೆ ಬೇಸತ್ತು, ಇತ್ತ ಇರಲಾರದೆ ಅತ್ತ ಹೋಗಲಾರದೆ ತೊಳಲಾಡುತ್ತಿರುವ, ಸಾಧನೆಯ ಬೆನ್ನ ಹಿಂದೆ ಬೇತಾಳನಂತೆ ಬಿದ್ದು ಸಿಕ್ಕಾಗ ಖುಷಿ ಪಟ್ಟು , ಸಿಗದೇ ಹೋದಾಗ ಹತಾಷೆಗೊಳಗಾಗಿ ಒಟ್ಟಾರೆ ಗಲಿಬಿಲಿಗೊಂಡಿರುವ ಹುಡುಗರು, ಹುಡುಗತನ ಬಿಡಲೊಪ್ಪದ ಮಧ್ಯವಯಸ್ಕರು. ಬದುಕಿನ ಎಲ್ಲ ರಹಸ್ಯಗಳನ್ನು ಅರಿತು, ಯಾವುದೋ ವಿಷಾದವನ್ನು ಸದಾ ಮುಖದಲ್ಲಿ ಹೊತ್ತವರಂತಿರುವ ಇಳಿವಯಸ್ಕರು ಹಾಗು ನಮ್ಮಂಥ ಅತಿ ಸಾಮಾನ್ಯ ಜನಗಳು.

ನನ್ನ ಹೆಸರು ತಿಲಕ್. ಊರು ಉಡುಪಿ ಜಿಲ್ಲೆಯ ಬ್ರಹ್ಮಾವರ. ಚಿತ್ರಕಲೆ, ಓದುವುದು, ಊರು ಸುತ್ತುವುದು, ಇಷ್ಟವಾದದ್ದನ್ನು ಚಿತ್ರದಲ್ಲಿ ಸೆರೆ ಹಿಡಿಯುವುದು ಖುಷಿ ಕೊಡುವ ಹವ್ಯಾಸಗಳು. ಗಿರೀಶ್ ರಾವ್ ಜೋಗಿ , ಜಯಂತ ಕಾಯ್ಕಿಣಿ, ಯು ಆರ್ ಅನಂತ ಮೂರ್ತಿ, ಪೂರ್ಣಚಂದ್ರ ತೇಜಸ್ವಿಯವರು ಬರೆದದ್ದು ಓದಲು ಇಷ್ಟ. ಸದ್ಯಕ್ಕೆ ಬೆಂಗಳೂರಿನಲ್ಲಿ ನನ್ನ ಬರಹಗಳ ಏಕೈಕ ವಿಮರ್ಶಕಿ, ಮೊದಲ ಓದುಗಾರ್ತಿ ಹಾಗು ಹೆಂಡತಿಯಾದ ರಂಜನಿ ಜೊತೆ ಬೀಡು ಬಿಟ್ಟಿದ್ದೇನೆ. ಪುರುಸೊತ್ತಿದ್ದಲ್ಲಿ, ಪುರುಸೊತ್ತಾಗಿ ಓದಿ, ತಪ್ಪಿದ್ದಲ್ಲಿ ಟೀಕಿಸಿ.

ಧನ್ಯವಾದಗಳು.

-ತಿಲಕ್ ರಾಜ್ ಸೋಮಯಾಜಿ

Also Visit: Stepstogether.in