ಅವನು ಅವಳು

ಸುಡುವ ಬಿಸಿಲಿನ ಧಗೆಗೆ ನೆಲವೆಲ್ಲ ಸುಟ್ಟು, ಸಮುದ್ರದ ಉಪ್ಪು ನೀರೆಲ್ಲ ಮೈ ಸೇರಿದೆಯೇನೋ ಎನ್ನುವ ಸಂದೇಹ ಬರುವಂತೆ ಮೈಯಿಂದ ಬೆವರು ಸುರಿಯುತ್ತಿರಬೇಕಾದರೆ, ಯಾವಾಗಾದರೂ ಮಳೆರಾಯ ಧರೆಗಿಳಿಯುತ್ತಾನೋ ಎಂಬ ಕಾತರ, ಉಕ್ಕಿ ಹರಿಯುವ ಕೆಂಪು ನದಿಗಳು ಸಮುದ್ರವನ್ನು ಬಂದು ಸೇರುವುದನ್ನು ನೋಡುವ ಸಂಭ್ರಮ, ಮಳೆ ನಿಂತ ಸಂಜೆಯ ಮಬ್ಬಿನ ವೇಳೆಯಲ್ಲಿ ದೂರದ ಸಮುದ್ರದ ಭೋರ್ಗರೆತವನ್ನು ಕಿವಿ ತುಂಬಿಸಿಕೊಳ್ಳುವ ಆತುರ ಕರಾವಳಿಯ ಜನರಿಗೆ. ಮದುವೆ ಮನೆಯ ಚಪ್ಪರದಂತೆ ಪ್ರತಿ ಮನೆಯ ಮುಂದೆ ಆಗಲೇ ನೇಯ್ದ ತೆಂಗಿನ ಗರಿಯ ಮಳೆ ಮಾಡು. ಹೋದ ವರ್ಷ ಮಡಚಿಟ್ಟ ಕೊಡೆ, ಬಣ್ಣದ ರೈನ್ ಕೋಟುಗಳು ಸ್ವಲ್ಪ ಬಣ್ಣ ಮಾಸಿ, ಧೂಳು ಕೊಡವಿಕೊಂಡು ಹೊರಬಂದಿವೆ. ಕಾಗದದ ದೋಣಿಗಳು ಆಗಲೇ ಸೇತುವೆಯ ಈಚಿಂದ ಆಚೆ ಪ್ರಯಾಣ ಆರಂಭಿಸಿವೆ. ಪುಟಾಣಿ ಮಕ್ಕಳು ಶಾಲೆಯಿಂದ ಹೊರಡುವುದನ್ನೇ ಹೊಂಚು ಹಾಕಿ ಸುರಿದ ಮಳೆಯು ಒಂದು ಹನಿಯು ರೈನ್ ಕೋಟ್ ಹಾಕಿದ ಪುಟಾಣಿಯ ಮೂಗಿನ ಮೂಲಕ ಬಾಯಿ ಸೇರಿ ಉಪ್ಪುಪ್ಪಾಗಿದೆ. ಶಂಕ್ರನ ಗೂಡಂಗಡಿಯ ಒಳಗಿನ ಚಿಕ್ಕ ಸವೆದ ಬೆಂಚಿನ ಮೇಲೆ ಒಂದೊಂದೇ ಗುಟುಕು ಕಾಫಿಯನ್ನು ಇಳಿಸುತ್ತ ಮುದುಡಿದ ಮುದುಕರ ಬಾಯಲ್ಲಿ ರಾಷ್ಟ್ರ ರಾಜಕೀಯ ರಾರಾಜಿಸಿದೆ. ಹೊರಗಿನ ಮಳೆಯ ಆರ್ಭಟಕ್ಕೋ ಮುಪ್ಪಿನ ಕೆಪ್ಪಿಗೋ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಿದ್ದರೇನಂತೆ, ಜಿನ್ನಾ, ನೆಹರು, ಮೋದಿಯೆಲ್ಲ ವೃದ್ಧರ ಮಾತಿನ ಮೆರವಣಿಗೆಯಲ್ಲಿ ಕೊಡೆ ಹಿಡಿದು ದಿಕ್ಕು ದಾರಿಯಿಲ್ಲದೆ ಹೊರಟಿದ್ದಾರೆ.

ಇವೆಲ್ಲ ಸಡಗರ, ಮಳೆಗಾಲ ಶುರುವಾದ ಎರಡು ವಾರದಲ್ಲೇ ಮಾಯವಾಗಿದೆಯೇನೋ ಎಂಬಂತೆ ನಿರಂಜನ ಮಾತ್ರ ಸಮುದ್ರ ತೀರದ ತನ್ನ ಮನೆಯ ಜಗಲಿಯ ಮೇಲೆ ನಿರುತ್ಸಾಹಿಯಾಗಿ ಕುಳಿತಿದ್ದಾನೆ. ಮನೆ ಒಳಗೆ ಅಡುಗೆ ಬೇಯಿಸುತ್ತಿರುವ ಅಮ್ಮನ ಆಕ್ರೋಶ ಉದ್ವೇಗಗಳು ಒಲೆಯ ಬೆಂಕಿಯ ಉರಿಗಿಂತ ಬಿಸಿಯಾಗಿ ಆತನನ್ನು ತಾಕುತ್ತಿದೆ. ಏನು ಉದ್ಯೋಗ ಮಾಡಿಕೊಂಡಿದ್ದೀಯಪ್ಪಾ ಎಂದು ವಿಚಾರಿಸುವ ಸಂಬಂಧಿಗಳಿಗೆ ಆತನ ಬಳಿ ಸರಿಯಾದ ಉತ್ತರವಿಲ್ಲ. ಯಾಕೆಂದರೆ ತಾನು ಮಾಡುವ ಉದ್ಯೋಗ ಒಂದೇ ಎರಡೇ? ಯಾವುದೆಂದು ಹೇಳಲಿ? ಕೆಲವೊಮ್ಮೆ ಗೂಡ್ಸ್ ಆಟೋ ಓಡಿಸಿಕೊಂಡಿದ್ದರೆ, ಮತ್ತೊಮ್ಮೆ ಮೇಸ್ತ್ರಿಗಳ ಜೊತೆ ಸಹಾಯಕನಾಗಿ ಹೋಗುತ್ತಾನೆ. ಒಂದೊಮ್ಮೆ ಸಮಾರಂಭಗಳಿಗೆ ವಿದ್ದ್ಯುದ್ದೀಪ ಅಳವಡಿಸುವವರ ಜೊತೆ ಕಾಣಿಸಿಕೊಂಡರೆ, ಗಣೇಶ ಚತುರ್ಥಿಯ ಸಮಯದಲ್ಲಿ ಹುಲಿ ವೇಷಧಾರಿಯಾಗಿ ಮನೆ ಮನೆಗೆ ಹೋಗಿ ಕುಣಿದಿದ್ದಿದೆ. ಆದರೆ ಆತನನ್ನು ಇದೆಲ್ಲಕ್ಕಿಂತ ಸೆಳೆಯುವುದು ಮಲ್ಪೆಯ ಬಂದರಿನಿಂದ ಕೆಲವೇ ದೂರದಲ್ಲಿ ತೋರುವ ಸೈ0ಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಯಾಂತ್ರಿಕ ದೋಣಿಯ ನಾವಿಕನಾಗಿಯೋ ಅಥವಾ ಸಹಾಯಕನಾಗಿಯೋ ಮಾಡುವ ಕೆಲಸ. ಮಳೆಗಾಲದಲ್ಲಿ ದ್ವೀಪಕ್ಕೆ ಪ್ರವೇಶ ನಿಷಿದ್ಧ. ಏನಿದ್ದರೂ ಮತ್ತೆ ಅಲ್ಲಿಗೆ ದೋಣಿ ಬಿಡುವುದು ಆಗಸ್ಟ್ ನಂತರವಷ್ಟೇ. ಭರೋ ಎಂದು ಸುರಿಯುತ್ತಿರುವ ಮಳೆಯನ್ನೇ ನೋಡುತ್ತಾ ಕುಳಿತಿರುವ ನಿರಂಜನ ಕಳೆದೆರಡು ವಾರಗಳಿಂದಂತೂ ಖಾಲಿಯಾಗಿದ್ದಾನೆ. ಜೇಬು ಕೂಡ ಖಾಲಿ ಖಾಲಿ. ಅಮ್ಮನ ಅಡಗಿಸಿಟ್ಟ ಚಿಕ್ಕ ಚಿಕ್ಕ ಬೆಲೆಯ ತೇವಗೊಂಡಿರುವ ಹಳೆ ನೋಟುಗಳೆಲ್ಲ ಮನೆಯ ಸಂದು ಗೊಂದುಗಳಿಂದ ಹೊರ ಬಂದು ನಿರಂಜನನನ್ನು ತಿರಸ್ಕಾರದಿಂದ ನೋಡುತ್ತಿವೆ.

ಹೀಗೆ ಶೂನ್ಯನಾಗಿ ಕುಳಿತ ಕ್ಷಣಗಳಲ್ಲೆಲ್ಲ ನಿರಂಜನನಿಗೆ ತನ್ನ ಜೀವನ ಸಾಗುತ್ತಿರುವ ಬಗೆಗೆ ಖೇದ ಮೂಡುವುದು. ಹುಟ್ಟಲೇನೋ ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲೇ. ಮುಖ್ಯ ಪುರೋಹಿತರಿಗೆ ಸಹಾಯಕರಾಗಿ ಹೋಗುತ್ತಿದ್ದ ಅಪ್ಪ ಬದುಕಿದ್ದರೆ ತಾನೂ ಕೂಡ ಇವತ್ತು ಒಬ್ಬ ಪುರೋಹಿತನಾಗಿ ಲೋಕ ಒಪ್ಪುವ ದಾರಿಯಲ್ಲಿ ಜೀವನ ಸಾಗಿಸುತ್ತಿದೆನೋ ಏನೋ. ಆದರೆ ದೈವೇಚ್ಛೆ ಬೇರೆಯೇ ಇತ್ತು. ತನಗೆ ಆರು ವರ್ಷವಾಗುತ್ತಲೇ ವೈದ್ಯರು ಅರಿಯದ ಖಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದ ಅಪ್ಪ, ತನಗೆ ಮತ್ತು ಅಮ್ಮನಿಗೆಂದು ಬಿಟ್ಟು ಹೋಗಿದ್ದು ಈ ಮನೆ ಮಾತ್ರ. ಅಮ್ಮನಾದರೂ ಅಲ್ಲಿಲ್ಲಿ ದೇವಸ್ಥಾನಗಳಲ್ಲಿ ತನಗಾದ ಕೆಲಸ ಮಾಡಿಕೊಂಡು ಹೊಟ್ಟೆ ಹೊರೆದರೂ, ಎಂದೂ ತನ್ನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಒಡ್ಡಿದವಳಲ್ಲ. ಆದರೆ ತಾನೇ ಅಪ್ಪನಿಲ್ಲದ ಮಗನೆಂದು ಊರ ಜನರೆಲ್ಲ ಛೀಮಾರಿ ಹಾಕಿಸಿಕೊಳ್ಳುವಂತೆ ಬೆಳೆದು ಉಂಡಾಡಿ ಗುಂಡನ ಹಾಗೆ ಹತ್ತನೇ ತರಗತಿಯನ್ನು ಹದಿನೆಂಟು ವರ್ಷಕ್ಕೆ ಪಾಸು ಮಾಡಿಕೊಂಡು ಆ ಮುಂದೆ ವಿದ್ಯಾಭ್ಯಾಸದ ಕಡೆ ತಲೆ ಕೆಡಿಸಿಕೊಳ್ಳದೆ ಹಣ ಸಂಪಾದನೆಯ ದಾರಿಗಿಳಿದದ್ದು. ಇಂದು ತನ್ನ ಬಗ್ಗೆ ತಲೆಗೊಂದರಂತೆ ಅಸಂಬದ್ಧ ಮಾತಾಡುವ ಈ ಸಂಬಂಧಿಗಳೆಲ್ಲ ಆಗೆಲ್ಲಿ ತಲೆಮರೆಸಿಕೊಂಡಿದ್ದರೋ. ಯಾರನ್ನು ಹಳಿಯಬೇಕು? ಹೆಂಡತಿ ಮಕ್ಕಳ ಭವಿಷ್ಯದ ಭದ್ರತೆಯ ಬಗ್ಗೆ ಕಿಂಚಿತ್ತೂ ಯೋಚಿಸದೆ ಅರ್ಧ ದಾರಿಗೆ ಕೈ ಕೊಟ್ಟು ಲೋಕ ತ್ಯಜಿಸಿದ ತಂದೆಯನ್ನೋ? ಅನಿವಾರ್ಯತೆಯ ಕಾರಣಗಳಿಂದ ತನ್ನ ಬೆಳವಣಿಗೆಯ ಬಗ್ಗೆ ಹೆಚ್ಚೇನು ಗಮನ ಕೊಡಲಾಗದೆ ತನ್ನನ್ನು ಬೆಳೆಸಿದ ತಾಯಿಯನ್ನೋ? ಅವಿವೇಕಿಯಂತೆ ಎಲ್ಲವನ್ನು ಉಡಾಫೆಯಿಂದ ನೋಡುತ್ತಾ ಬೆಳೆದ ತನ್ನನ್ನೋ? ಅಥವಾ ಎಲ್ಲವನ್ನು ಒಂದರೊಟ್ಟಿಗೆ ಹೊಸಕಿ ಹಾಕಿ ಮಜಾ ನೋಡಿದ ವಿಧಿಯನ್ನೋ? ತನಗೀಗ ವಿಧಿಯ ಮೇಲೆ ಗೂಬೆ ಕೂರಿಸುವ ಅವಕಾಶವಾದರೂ ಇದೆ. ಎಲ್ಲವೂ ಸರಿಯಿದ್ದು ತಾನು ಹೀಗಿದ್ದಿದ್ದರೆ ಆ ಅವಕಾಶವೂ ಇಲ್ಲವಾಗಿದ್ದಿತ್ತು ಅಂದು ತನ್ನನ್ನು ತಾನೇ ಸಮಾಧಾನಿಸಿಕೊಂಡು, ಬಿಡದೆ ಮೊರೆಯುವ ಸಮುದ್ರದ ಅಲೆಗಳ ಸದ್ದಿಗೆ ಆತ ಮತ್ತೆ ಕಿವಿಯಾಗುತ್ತಾನೆ.

ನಿರಂಜನನ ತಂದೆ ಯಾವ ಪುರೋಹಿತರ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದರೋ ಅವರ ಮಗ ಸಂದೀಪ ಕೂಡ ಒಂದು ಕಾಲದಲ್ಲಿ ಶಾಲೆಯಲ್ಲಿ ನಿರಂಜನನ ಸಹಪಾಠಿಯೇ. ವ್ಯತ್ಯಾಸವೆಂದರೆ ನಿರಂಜನ ಓದಿನಲ್ಲಿ ತೋರಿಸುತ್ತಿದ್ದರ ಎರಡು ಪಟ್ಟು ಆಸ್ಥೆಯನ್ನು ಸಂದೀಪ ವಿದ್ಯಾಭ್ಯಾಸದ ಕಡೆ ಕೊಡುತ್ತಿದ್ದ. ಹಾಗೆಯೇ ನಿಸ್ಸಂದೇಹ ಕಾರಣಗಳಿಂದ ಆತ ಶಾಲೆಯ ಎಲ್ಲ ಉಪಾಧ್ಯಾಯರಿಗೆ ಹಾಗೂ ತರಗತಿಯ ಎಲ್ಲ ಮಕ್ಕಳಿಗೂ ಕೂಡ ಅಚ್ಚುಮೆಚ್ಚಿನ ವಿದ್ಯಾರ್ಥಿ ಹಾಗೂ ಗೆಳೆಯನಾಗಿದ್ದ. ಆಕೆಗೂ ಕೂಡ.
ಆಕೆಯ ಹೆಸರು ಲಿಪಿ. ನಿರಂಜನ ಹಾಗೂ ಸಂದೀಪನ ಸಹಪಾಠಿ. ಸಂದೀಪನಿಗಾಗಲಿ, ತರಗತಿಯ ಇತರೆ ಮಕ್ಕಳಿಗಾಗಲಿ ಇರದ ಆಕರ್ಷಣೆ ನಿರಂಜನನಿಗೆ ಲಿಪಿಯ ಮೇಲೆ. ಆಕೆ ನಿರಂಜನನನ್ನು ಕಣ್ಣೆತ್ತಿ ಕೂಡ ನೋಡಿದ್ದು ಅವನಿಗೆ ನೆನಪಿಲ್ಲ. ಆದರೂ ನಿರಂಜನನಿಗೆ ಎಲ್ಲಿ ಆಕೆ ಮನಸ್ಸಿನಲ್ಲೇ ಸಂದೀಪನನ್ನು ಆರಾಧಿಸುತ್ತಿರುವಳೇನೋ ಎಂಬ ಸಂದೇಹ. ಹಾಗಂತ ಈ ಸಂದೇಹ ನಿರಂಜನನಿಗೆ ಲಿಪಿಯ ಬಗ್ಗೆ ಮೋಹವನ್ನೇನು ಕಡಿಮೆಗೊಳಿಸಿರಲಿಲ್ಲ. ಈಗ ಸಂದೀಪ ಅಮೆರಿಕಾದಲ್ಲಿ ಯಾವುದೋ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವುದು ಹೇಗೋ ನಿರಂಜನನ ಕಿವಿಗೆ ಬಿದ್ದಿತ್ತು. ಒಂದೇ ಘಟ್ಟದಲ್ಲಿ ಪಯಣ ಆರಂಭಿಸಿದ ಇಬ್ಬರ ಗುರಿ ಬೇರೆಯೇ ದಾರಿಗಳನ್ನು ಹಿಡಿದಿದ್ದವು. ಬಾಲ್ಯದಲ್ಲೇ ಹೀಗೆಲ್ಲ ಅಡ್ಡ ದಾರಿಯಲ್ಲಿ ತನ್ನ ಯೋಚನೆಗಳು ಹರಿದ ರೀತಿಯನ್ನೇ ನೆನೆಯುತ್ತಾ, ಸಣ್ಣಗೆ ಸುರಿಯುತ್ತಿರುವ ತುಂತುರು ಸುರಿಮಳೆಯಲ್ಲಿ ಮಲ್ಪೆ ಬಂದರಿನ ಪಕ್ಕದ ಗೂಡಂಗಡಿಯಲ್ಲಿ, ನಿರಂಜನ ಬೀಡಿ ಸೇದುತ್ತಾ ನಿಂತಿರುವಾಗಲೇ ಸರಿಯಾಗಿ ದೊಡ್ಡದಾದ ಕಾರೊಂದು ಕೊಚ್ಚೆ ಹಾರಿಸಿಕೊಂಡು ಬಂದು ಅದೇ ಗೂಡಂಗಡಿಯ ಮುಂದೆ ನಿಂತಿತು. ಕಾಕತಾಳೀಯವೆಂಬಂತೆ ಕಾರಿನಿಂದ ಇಳಿದದ್ದು ಸಂದೀಪನೇ. ನೂರು ವರ್ಷ ಆಯಸ್ಸು ಈ ಸಂದೀಪನಿಗೆ. ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಕೂಡ ತಿಳಿಯದೆ ಅಲ್ಲೇ ಪಕ್ಕದಲ್ಲಿ ಕಂಬಕ್ಕೊರಗಿ ನಿಂತಿದ್ದ ನಿರಂಜನನನ್ನು ಕಣ್ಣೆತ್ತಿ ಕೂಡ ನೋಡದೆ ಸೀದಾ ಆತ ಅಂಗಡಿಯಾತನಲ್ಲಿ ಹೋಗಿ ಸೈ0ಟ್ ಮೇರಿಸ್ ದ್ವೀಪಕ್ಕೆ ಎಷ್ಟು ಹೊತ್ತಿಗೆ ದೋಣಿ ಹೊರಡುತ್ತದೆ, ಎಲ್ಲಿ ಹೋಗಿ ಹತ್ತಬೇಕು ಮುಂತಾಗಿ ವಿಚಾರಿಸತೊಡಗಿದ. ಅಂಗಡಿಯಾತನು ತನ್ನನ್ನೇ ಕೇಳುವಂತೆ ಬೊಟ್ಟು ಮಾಡಿದ್ದನ್ನು ಅರಿತ ನಿರಂಜನ, ಏನೋ ಒಂದು ಥರದ ತಳಮಳದಿಂದ, ಸಂದೀಪನನ್ನು ಎದುರಿಸುವ ಧೈರ್ಯ ಸಾಲದೆ, ಅರ್ಧ ಸುಟ್ಟ ಬೀಡಿಯನ್ನು ಅಲ್ಲೇ ಕೊಚ್ಚೆಗೆಸೆದು ದರದರನೆ ಸಂದೀಪನ ಕಾರು ನಿಂತಿದ್ದ ದಿಕ್ಕಿನ ಕಡೆ ಹೊರಟುಬಿಟ್ಟ. ಹಾಗೆಯೇ ನಡೆದುಕೊಂಡು ಹೋಗುತ್ತಿರಲು ಕಾರಿನೆಡೆಗೆ ದೃಷ್ಟಿ ಹರಿಸಿದ ನಿರಂಜನನಿಗೆ ಕಾರೊಳಗೆ ಬಿಸಿಯುಸಿರಿನಿಂದ ಮಬ್ಬಾದ ಗಾಜಿನ ಮೂಲಕ ತೋರಿದ್ದು ಮುಂದಿನ ಸೀಟಿನಲ್ಲಿ ಕುಳಿತ ಹೆಣ್ಣಿನ ಆಕೃತಿ. ಸಂದೀಪನ ಹೆಂಡತಿಯಿರಬೇಕೇನೋ ಎಂದುಕೊಂಡು ಸಂಕೋಚವಾಗಿ, ತನ್ನ ಆತ್ಮಾಭಿಮಾನ ವಿನಾ ಕಾರಣ ಕುಗ್ಗಿದಂತೆನಿಸಿ ತನ್ನ ನಡಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿದ. ಒಂದು ಕ್ಷಣ ಬಾಲ್ಯದ ಪ್ರೀತಿ ಲಿಪಿ ನಿರಂಜನನ ಮನಸ್ಸನ್ನು ಹಾಗೆ ಹಾದು ಹೋದಳು. ಎಲ್ಲಿ ಕಾರಲ್ಲಿ ಕುಳಿತ ಹೆಂಗಸು ಲಿಪಿಯೇ ಇರಬಹುದೇನೋ ಎಂಬ ಶಂಕೆ ಕೂಡ ಹಾಗೆ ಮೂಡಿ ಮಾಯವಾಯಿತು.

ಮುಂದೆರಡು ವಾರಗಳಲ್ಲಿ ಮಳೆಯ ಅಬ್ಬರ ಸಂಪೂರ್ಣವಾಗಿ ಕಡಿಮೆಯಾಗಿ ಮಲ್ಪೆಯಲ್ಲಿ ಜನಜೀವನ ಹದಕ್ಕೆ ಮರಳಿ, ಸೈಂಟ್ ಮೇರೀಸ್ ದ್ವೀಪಕ್ಕೆ ದೋಣಿ ಸಂಚಾರ ಮತ್ತೆ ಪ್ರಾರಂಭವಾಯಿತು. ಮಂಕಾಗಿ ಮನೆಯಲ್ಲಿ ಕುಳಿತಿದ್ದ ನಿರಂಜನನಿಗೆ ಮೈಯಲ್ಲಿ ಮತ್ತೆ ಉತ್ಸಾಹ ಸಂಚರಿಸಿ, ದ್ವೀಪದೆಡೆ ಸಾಗುವ ದೋಣಿಯ ನಾವಿಕನಾಗಿ ಕೆಲಸ ಶುರು ಹಚ್ಚಿಕೊಂಡು, ಕೆಲಸದ ಮೊದಲ ದಿನವೇ, ದ್ವೀಪವನ್ನು ನೋಡದೆ ಎಷ್ಟೋ ವರ್ಷಗಳೇ ಸಂದಿದೆ ಎಂಬಂತೆ ಬೋಟನ್ನು ಗೆಳೆಯನಿಗೆ ವಹಿಸಿ, ಅತಿ ಅಕ್ಕರೆಯಿಂದ ದ್ವೀಪದ ಮೂಲೆ ಮೂಲೆಯನ್ನು ಸಂಚರಿಸಿದ್ದಾಯಿತು. ಮದುವೆಗೆ ಗಂಡು ನೋಡಲು ಬರುವಾಗ ಬಹು ಆಸ್ಥೆಯಿಂದ ಸಿಂಗರಿಸಿ ಕುಳಿತುಕೊಂಡು ಕಾದು, ಬರದೇ ಹೋದಾಗ ಬೇಸರದಿಂದ ಖಿನ್ನಳಾಗಿ ಆಕಾಶವನ್ನೇ ನೋಡುತ್ತಾ ಕುಳಿತಿರುವ ಹುಡುಗಿಯಂತೆ, ಯಾರೋ ಬಂದು ಕುಳಿತು ಕೆತ್ತಿಟ್ಟು ಹೋದಂತಿರುವ, ಅಲ್ಲಿನ ಉದ್ದುದ್ದದ ಶಿಲೆಗಳನ್ನು ಆತ ಇಡೀ ದಿನ ನೋಡುತ್ತಾ ಕೂರಬಲ್ಲ. ನೀಲಿ ಸಾಗರದ ಅಲೆಗಳು ಈ ಶಿಲ್ಪ ಸುಂದರಿಯ ಬೇಸರವನ್ನು ಹೋಗಲಾಡಿಸಲೆಂಬಂತೆ ಪದೇ ಪದೇ ಬಂದು ಮಾತನಾಡಿಸಿದರೂ ಆಕೆಯ ಮೌನವೇ ಎಲ್ಲದಕ್ಕೂ ಉತ್ತರ. ಚಿಕ್ಕಂದಿನಿಂದಲೂ ಸಮುದ್ರ ತೀರದ ಆತನ ಮನೆಗೆ, ದೂರದಲ್ಲಿ ತೋರುತ್ತಿದ್ದ ದ್ವೀಪ ಅವನಿಗೆ ಅಚ್ಚರಿ, ಕುತೂಹಲದ ಒಂದು ಕಾರಣವೇ. ಮುಂದೊಂದು ದಿನ ದ್ವೀಪಕ್ಕೆ ಅಮ್ಮನ ಜೊತೆ ಹೋದಾಗ ಅದರ ಚಂದಕ್ಕೆ ಆಸೆಯಾಗಿ ಅಲ್ಲೇ ಮನೆ ಮಾಡುವಂತೆ ಅಮ್ಮನನ್ನು ಹಠ ಹಿಡಿದು ರಂಪಾಟ ಮಾಡಿದ್ದು ಆತನಿಗೆ ಇನ್ನೂ ನೆನಪಿದೆ. ಅದಕ್ಕೆ ಇರಬೇಕು ನಿರಂಜನನಿಗೆ ತಾನು ಮಾಡುವ ಉಳಿದೆಲ್ಲ ಕೆಲಸಕ್ಕಿಂತ ದ್ವೀಪಕ್ಕೆ ಜನರನ್ನು ಸಾಗಿಸುವ ಕೆಲಸವೇ ಅಚ್ಚು ಮೆಚ್ಚು. ಬಣ್ಣ ಬಣ್ಣದ ಉಡುಗೆಯುಟ್ಟು, ಸಂಭ್ರಮದಿಂದ ಬೋಟನ್ನು ಹತ್ತುವ ಜನರು, ಮಕ್ಕಳ ಕಣ್ಣಲ್ಲಿ ಕಾಣುವ ಕಾತರ, ಮೊದಲ ಬಾರಿಗೆ ಸಮುದ್ರವನ್ನು ನೋಡುತ್ತಿರುವ ಘಟ್ಟದ ಮೇಲಿನ ಜನರ ಉದ್ವೇಗ, ಮೊದ ಮೊದಲು ಮೂರನೆಯವರಂತೆ ಕಂಡು, ಸಮಯ ಸರಿದಂತೆ ಪರಿಚಿತರಾಗುತ್ತಾ ನಮ್ಮವರೇ ಆಗಿ ಬಿಡುವ ಕೆಲ ಗೆಳೆಯರಂತೆ, ದೋಣಿಗೆ ಸ್ವಲ್ಪ ಸ್ವಲ್ಪವೇ ಹತ್ತಿರಾಗುತ್ತಾ ಹೋಗುವ ದ್ವೀಪವನ್ನು ನೋಡುವುದೇ ಆತನಿಗೆ ಸಂತಸ.

ಅಂದು ಬೆಳಗ್ಗೆದ್ದ ನಿರಂಜನನ ಮುಖದಲ್ಲಿ ಖುಷಿಭರಿತ ಆಲಸ್ಯ ಲಾಸ್ಯವಾಡುತ್ತಿದೆ. ಬೆಳ ಬೆಳಗ್ಗಿನ ಸಿಹಿನಿದ್ರೆಯ ಮಂಪರಿನಲ್ಲಿ ಆತನ ಕಣ್ಣ ತುಂಬಾ ಲಿಪಿಯದ್ದೇ ಕನಸುಗಳು. ಸಂದೀಪನ ಕಾರಲ್ಲಿ ಮಬ್ಬಾಗಿದ್ದ ಗಾಜನ್ನು ಒರೆಸಿ ತನ್ನನ್ನೇ ಆಕೆ ನೋಡುತ್ತಿದ್ದಂತೆ, ತನ್ನನ್ನು ನೋಡಿ ಸಿಹಿ ನಗು ನಕ್ಕು ನಾಚಿಕೊಂಡಂತೆ, ಮಾತನಾಡಲು ಪದಗಳು ಸಿಗದೇ ಹಪ ಹಪಿಸಿದಂತೆ ಹೀಗೆ ಏನೇನೋ. ನಿದ್ದೆಯಿಂದೆದ್ದರೂ ಆಕೆಯ ಕನಸುಗಳನ್ನು ಮರೆಯಲು ಬಿಡದೆ ನೆನಪಿನ ಜೊತೆ ಯುದ್ಧ ಸಾರಿದಂತೆ ನಿರಂಜನ, ಕನಸಿನಲ್ಲಿ ನೋಡಿದ ಆಕೆಯ ಮುಖವನ್ನು ನೆನಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಜ್ಞಾಪಕವಾಗುತ್ತಿಲ್ಲ. ಎಂಟನೇ ತರಗತಿಯಲ್ಲಿ ನೋಡಿದ ಆಕೆಯ ಮುಖವನ್ನು ಹೊರತುಪಡಿಸಿ, ಆಕೆಯ ಬಗ್ಗೆ ಮತ್ಯಾವುದೇ ಚಿತ್ರಣ ಆತನ ಮನಸ್ಸಿನಲ್ಲಿ ಮೂಡುತ್ತಿಲ್ಲ. ಕನಸು ಮರೆತುಹೋದದ್ದಕ್ಕೆ ಯಾರನ್ನು ಶಪಿಸಬೇಕೆಂದು ಕೂಡ ತಿಳಿಯದೆ ಸಿಡಿಮಿಡಿಯಿಂದಲೇ ನಿರಂಜನ ಎದ್ದು ಅಂದಿನ ಕೆಲಸಕ್ಕೆ ಹಾಜರಾದನು.

ಉಡುಪಿಯ ಪರ್ಯಾಯ ಮಹೋತ್ಸವ ಕೂಡ ವಾರಾಂತ್ಯದ ದಿನವೇ ಬಂದ ಕಾರಣಕ್ಕೆ ಎಂದಿಗಿಂತ ಹೆಚ್ಚಿನ ಕಿಕ್ಕಿರಿದ ಜನಸಂದಣಿ ಜನ ಈ ಬಾರಿ ಮಲ್ಪೆ ಬಂದರಿನಲ್ಲಿ. ಬಿಡುವಿಲ್ಲದ ದಿನದಲ್ಲಿ ಹೆಚ್ಚಿನ ಜವಾಬ್ದಾರಿ ಎಲ್ಲರ ಹೆಗಲ ಮೇಲೆ. ಸಾಮಾನ್ಯವಾಗಿ ಹತ್ತಿಸಿಕೊಳ್ಳುವುದರ ಎರಡು ಪಟ್ಟು ಜನರನ್ನು ದೋಣಿಯಲ್ಲಿ ಹತ್ತಿಸಿಕೊಳ್ಳಲಾಗುತ್ತಿದೆ. ಹೀಗೆ ಸಾಗಿದ ಒಂದು ಮೋಟಾರು ದೋಣಿಗೆ ನಾವಿಕನಾಗಿ ನಿರಂಜನನೇ ಕುಳಿತಿದ್ದಾನೆ. ಆತನ ಮನಸ್ಸಿನ ತುಂಬಾ ಮುಂಜಾವಿನ ಕನಸಿನದ್ದೇ ಗುಂಗು. ಅಚಾನಕ್ಕಾಗಿ ಯಾವುದೋ ಕಾರಣಕ್ಕಾಗಿ ದೋಣಿ ಚಲಾಯಿಸುತ್ತಿದ್ದವನು ಹಿಂದಿರುಗಿ ಪ್ರಯಾಣಿಕರ ಕಡೆ ನೋಡಿದವನಿಗೆ ದೋಣಿಯ ಕಡೆಯ ಮೂಲೆಯಲ್ಲಿ ಶ್ವೇತ ವರ್ಣದ ಸಲ್ವಾರ್ ಧರಿಸಿದ ಯುವತಿ ಕಣ್ಣಿಗೆ ಬಿದ್ದಳು. ಆಕೆಯ ಮುಖ ದೋಣಿಯ ಹಿಂಭಾಗಕ್ಕೆ ತಿರುಗಿರುವ ಕಾರಣದಿಂದ ನಿರಂಜನನಿಗೆ ಆಕೆಯ ಮುಖ ತೋರುತ್ತಿಲ್ಲ. ಆಕೆಯ ನೀಳವಾದ ಮುಂಗುರುಳು, ದೋಣಿಯಿಂದ ನೀರಿನಲ್ಲಿ ಏಳುತ್ತಿರುವ ಸಣ್ಣ ಅಲೆಗಳೊಂದಿಗೆ ಲಯಬದ್ಧವಾಗಿ ಕಂಪಿಸುತ್ತಿದೆ. ದೋಣಿಯೊಳಗಿನ ಜನಸಂದಣಿಯ ಗದ್ದಲದಿಂದ, ಸುತ್ತಲಿನ ಯಾವುದಕ್ಕೂ ತನಗೆ ಸಂಬಂಧವೇ ಇಲ್ಲವೆಂಬಂತೆ ಸಾಗರದ ನೀಲಿ ಅಲೆಗಳನ್ನು ನೋಡುತ್ತಾ ಆಕೆ ಕಳೆದು ಹೋಗಿದ್ದಾಳೆ. ಇದ್ದಕ್ಕಿದ್ದಂತೆಯೇ ನಿರಂಜನನಿಗೆ ಎರಡು ದಿನಗಳ ಹಿಂದೆ ಸಂದೀಪನ ಕಾರಲ್ಲಿ ಅಸ್ಪಷ್ಟವಾಗಿ ತೋರಿದ್ದ ಹುಡುಗಿಯ ಮುಖ, ಎಂಟನೇ ತರಗತಿಯ ಲಿಪಿಯ ಮುಖ ಹಾಗೂ ಬೆಳಗ್ಗೆ ಕನಸಿನಲ್ಲಿ ಬಂದ ಅದೇ ಲಿಪಿಯ ನೆನಪಾಗದೆ ಹೋದ ಮುಖವೆಲ್ಲವೂ , ದೋಣಿಯ ಇನ್ನೊಂದು ತುದಿಯಲ್ಲಿ ಏಕಾಂಗಿಯಾಗಿ ನಿಂತಿರುವ ಯುವತಿಯೊಂದಿಗೆ ತಾಳೆ ಹೊಂದಿ ಆಕೆಯ ಮುಖವನ್ನು ಇಂದಾದರೂ ನೋಡಲೇಬೇಕೆಂಬ ಕಾತರದಿಂದ ದೋಣಿಯ ನಿಯಂತ್ರಣವನ್ನು, ಸಹಾಯಕನೂ ಗೆಳೆಯನೂ ಆಗಿರುವ ಸುರೇಶನಿಗೆ ವಹಿಸಿ, ಆ ಯುವತಿಯ ಕಡೆ ಹೆಜ್ಜೆ ಹಾಕುತ್ತಾನೆ. ಹರಸಾಹಸ ಪಡುತ್ತಾ ಒತ್ತೊತ್ತಾಗಿ ಕೂತಿರುವ ಜನರ ಗುಂಪಿನ ಮಧ್ಯದಿಂದ ಚಲಿಸುತ್ತಾ, ಇನ್ನೇನು ಆಕೆಯನ್ನು ತಲುಪಿಯೇ ಬಿಟ್ಟೆ ಎನ್ನುವಷ್ಟರಲ್ಲಿ ಅತ್ತ ಕಡೆಯಿಂದ ಸುರೇಶ ಗಟ್ಟಿಯಾಗಿ ಕೂಗಿ ನಿರಂಜನನನ್ನು ಕರೆಯುತ್ತಾನೆ. ದೋಣಿಯನ್ನು ಅಷ್ಟಿಷ್ಟು ಚಲಾಯಿಸಲು ಮಾತ್ರ ಕಲಿತಿರುವ ಸುರೇಶನಿಗೆ ಅದನ್ನು ಸರಿಯಾಗಿ ನಿಲ್ಲಿಸುವ ಪರಿ ತಿಳಿಯದು. ಸೈಂಟ್ ಮೇರೀಸ್ ದ್ವೀಪ ಕೂಡ ಕಣ್ಣಳತೆ ದೂರದಲ್ಲಿ ಬಂದೇ ಬಿಟ್ಟಿದೆ. ನಿರಂಜನ ಮತ್ತೆ ಅದೇ ಗುಂಪಿನ ನಡುವಿನಿಂದ ಓಡೋಡಿ ಬೋಟಿನ ನಿಯಂತ್ರಣ ಕೋಣೆಗೆ ವಾಪಸಾಗಿ, ದ್ವೀಪದಲ್ಲಿ ಯಾಂತ್ರಿಕ ದೋಣಿಗಳನ್ನು ನಿಲ್ಲಿಸಲೆಂದೇ ಮಾಡಿದ ಚಿಕ್ಕ ಬಂದರಿಗೆ ತಂದು ನಿಲ್ಲಿಸಲೂ, ಅತ್ತ ಕಡೆಯಿಂದ ಸುರೇಶ ಒಬ್ಬೊಬ್ಬರಾಗಿ ಪ್ರಯಾಣಿಕರನ್ನು ದೋಣಿಯಿಂದ ಕೆಳಗಿಳಿಸಲು ಶುರುವಿಟ್ಟುಕೊಳ್ಳಲೂ ಸರಿ ಹೋಯಿತು. ನೆರೆದ ಗುಂಪೆಲ್ಲ ಕೆಳಗಿಳಿಯುವ ತನಕ ತಾಳ್ಮೆಯಿಂದ ಕಾದ ನಿರಂಜನನಿಗೆ ಆ ಯುವತಿ ಮಾತ್ರ ಕಣ್ಣಿಗೆ ಬೀಳುವುದೇ ಇಲ್ಲ. ಸುರೇಶನಲ್ಲಿ ವಿಚಾರಿಸಿದರೆ, ದೋಣಿಯ ತುಂಬಾ ತುಂಬಿ ಹೋಗಿದ್ದ ಪ್ರಯಾಣಿಕರನ್ನು ಇಳಿಸುವ ಭರದಲ್ಲಿ ಆತ ಯಾರನ್ನೂ ಗಮನಿಸಲಿಲ್ಲವೆಂಬ ಉತ್ತರ ಮಾತ್ರ ದೊರೆಯುತ್ತದೆ. ನಿರಂಜನನಿಗೆ ಗಾಬರಿಯಾಯಿತು. ಎಲ್ಲಿ ಆಕೆ ದೋಣಿಯಿಂದ ಸಮುದ್ರ ಮಧ್ಯದಲ್ಲಿ ಹಾರಿ ಪ್ರಾಣ ಕಳೆದುಕೊಂಡಿರಬಹುದೇ? ಜೊತೆಗೆ ತನ್ನ ಬಗೆಗೆ ಸಂಶಯ ಕೂಡ ಮೂಡಿತು. ತಾನು ಆಕೆಯನ್ನು ನೋಡಿದ್ದು ಬರೀ ಭ್ರಮೆಯಿರಬಹುದೇ? ಬೆಳಗ್ಗೆ ಬಿದ್ದ ಕನಸಿನ ಮಂಪರೇ ತನ್ನನ್ನು ಹೀಗೆಲ್ಲ ಆಟವಾಡಿಸುತ್ತಿರಬಹುದೇ? ಆತ ಮತ್ತಷ್ಟು ಗೊಂದಲಕ್ಕೊಳಗಾಗಿ, ಅರ್ಧ ಮನಸ್ಸಿನಿಂದ ಇನ್ನೊಂದು ಪ್ರಯಾಣಿಕರ ತಂಡವನ್ನು ಮಲ್ಪೆ ಬಂದರಿನಿಂದ ಕರೆ ತರುವ ಸಲುವಾಗಿ ದ್ವೀಪದಿಂದ ದೋಣಿಯನ್ನು ತಿರುಗಿಸಿಕೊಂಡು ಹೊರಟೇಬಿಟ್ಟ. ದ್ವೀಪದಿಂದ ಹೆಚ್ಚೇನು ಅರ್ಧ ಮೈಲಿ ಕೂಡ ದೂರ ಹೋಗಿದ್ದನೋ ಇಲ್ಲವೋ ಸುಮ್ಮನೆ ಹೀಗೆ ತಿರುಗಿ ದ್ವೀಪದೆಡೆಗೆ ನೋಡಿದವನಿಗೆ ಅಸ್ಪಷ್ಟವಾಗಿ ತೋರಿದ್ದು, ದ್ವೀಪದ ಇನ್ನೊಂದು ಮಗ್ಗುಲಿನಲ್ಲಿ, ಏಕಾಂಗಿಯಾಗಿ ನೀರಿನಲ್ಲಿ ಕಾಲು ಮುಳುಗಿಸಿಕೊಂಡು ಎತ್ತರೆತ್ತರಕ್ಕೆ ಉದ್ದವಾಗಿ ನೀಳವಾಗಿ ನಿಂತಿರುವ ದ್ವೀಪದ ವಿಶಿಷ್ಟ ಶಿಲೆಗಳನ್ನೇ ದಿಟ್ಟಿಸುತ್ತಾ ನಿಂತಿರುವ ಅದೇ ಯುವತಿ. ನಿರಂಜನ ಸಂಕಷ್ಟಕ್ಕೆ ಸಿಲುಕಿದ. ವಾಪಾಸು ದ್ವೀಪದೆಡೆ ಹೋಗೋಣವೆಂದರೆ ಮಲ್ಪೆಯಲ್ಲಿ ಆಗಲೇ ಸಾಲುಗಟ್ಟಿ ನಿಂತಿರುವ ಪ್ರಯಾಣಿಕರನ್ನು ಹೊತ್ತು ತರುವ ಜವಾಬ್ದಾರಿ ಹೆಗಲ ಮೇಲಿದೆ. ಆದರೆ ಆಕೆಯನ್ನು ಹೋಗಿ ಮಾತನಾಡಿಸಬೇಕೆಂಬ ಹಂಬಲ ತೀವ್ರವಾಗುತ್ತಿದೆ. ಹೇಗೂ ದ್ವೀಪಕ್ಕೆ ಬಂದು, ಅಲ್ಲಿನ ಸೌಂದರ್ಯಕ್ಕೆ ಮನಸೋಲುವ ಪ್ರಯಾಣಿಕರು ಯಾರೂ ಕನಿಷ್ಠ 2 ಗಂಟೆಗಳಷ್ಟು ಕಾಲ ಇಲ್ಲಿ ಕಳೆಯದೆ ಮರಳಲಾರರು. ಇನ್ನೊಂದು ಅರ್ಧ ಗಂಟೆಯೊಳಗೆ ದ್ವೀಪಕ್ಕೆ ಹೇಗಿದ್ದರೂ ಮರಳುವ ತಾನು ಆಕೆಯನ್ನು ಭೇಟಿ ಮಾಡಿ ಮಾತನಾಡಿಸಿದರಾಯಿತು ಎಂಬ ಆಲೋಚನೆಯೊಂದಿಗೆ ಶರವೇಗದಲ್ಲಿ ದೋಣಿಯನ್ನು ಮಲ್ಪೆ ಬಂದರಿನೆಡೆಗೆ ಚಲಾಯಿಸಿದ.

ನಿರಂಜನನ ಊಹೆ ಮೀರಿ, ಮತ್ತೆ ಆತ ದ್ವೀಪವನ್ನು ತಲುಪಲು ಒಂದು ಘಂಟೆಯ ಕಾಲವೇ ಹಿಡಿಯಿತು. ಈ ಬಾರಿ ಆತ ವಾಪಾಸು ಮಲ್ಪೆ ಬಂದರಿಗೆ ದೋಣಿಯೊಡನೆ ಮರಳದೇ, ಸ್ವಲ್ಪ ಹೊತ್ತು ದ್ವೀಪದಲ್ಲೇ ಉಳಿದುಕೊಂಡು, ಮೊದಲು ನೋಡಿದ ಯುವತಿಯನ್ನು ಹುಡುಕಿ, ಆಕೆ ಲಿಪಿಯೇ ಆಗಿದ್ದಲ್ಲಿ ಆಕೆಯ ಜೊತೆ ನೂರು ವರುಷಗಳಿಗಾಗುವಷ್ಟು ಮಾತನಾಡಬೇಕೆಂಬ ಯೋಜನೆ ಹಾಕಿ ಇನ್ನೊಬ್ಬ ಚಾಲಕನನ್ನು ಕರೆ ತಂದಿದ್ದ. ದ್ವೀಪ ತಲುಪುತ್ತಲೇ ದೋಣಿಯನ್ನು ಆ ಚಾಲಕನ ಸುಪರ್ದಿಗೆ ವಹಿಸಿ, ಆ ಯುವತಿ ನೀರಿನಲ್ಲಿ ಆಟವಾಡುತ್ತಿದ್ದ, ದ್ವೀಪದ ಇನ್ನೊಂದು ಭಾಗದ ಕಡೆ ಬಿರುಸಿನಿಂದ ನಡೆದ. ಅಲ್ಲಿ ಹೋಗಿ ನೋಡಿದರೆ ಆಕೆ ಅಲ್ಲಿಲ್ಲ. ಬೇರೆ ಯಾವುದಾದರೂ ಜಾಗಕ್ಕೆ ಹೋಗಿರಬೇಕು. ಅಷ್ಟಕ್ಕೂ ಈ ಚಿಕ್ಕ ದ್ವೀಪವನ್ನು ಹುಡುಕುವುದು ಅದೇನು ಮಹಾ ಕೆಲಸವೆಂದು, ಮೊದಲಿಂದಲೂ ತನಗೆ ಚಿರಪರಿಚಿತವಾಗಿರುವ ದ್ವೀಪದ ಮೂಲೆ ಮೂಲೆಯನ್ನು ಅಲೆದ. ಎಲ್ಲೂ ಆಕೆ ತೋರುತ್ತಿಲ್ಲ. ಮತ್ತೆ ಆಕೆ ಮೊದಲು ತೋರಿದ ಜಾಗಕ್ಕೆ ಬಂದು ಅಲ್ಲಿ ವಿಹರಿಸುತ್ತಿದ್ದ ಒಂದಿಬ್ಬರು ಪ್ರವಾಸಿಗಳನ್ನು ಆಕೆಯ ಬಗ್ಗೆ ವಿಚಾರಿಸಿದ. ಯಾರಿಂದಲೂ ಆಕೆಯನ್ನು ನೋಡಿದ ಬಗೆಗೆ ಮಾಹಿತಿ ದೊರೆಯದೆ ನಿರಾಶನಾಗಿ, ಮತ್ತೆ ದ್ವೀಪದ ಬಂದರಿನ ಸಮೀಪ ಬಂದು ಮಲ್ಪೆಗೆ ಹೋಗುವ ದೋಣಿಗಾಗಿ ಕಾಯುತ್ತಾ ಕುಳಿತ. ಎಲ್ಲಿ ಆಕೆ ಬೇರೆ ಯಾವುದಾದರೂ ದೋಣಿಯಲ್ಲಿ ಮಲ್ಪೆಗೆ ವಾಪಾಸಾಗಿರಬಹುದೇನೋ ಎಂಬ ಊಹೆಯಿಂದ ಅಲ್ಲಿ ಕಾರ್ಯಾಚರಿಸುವ ಎಲ್ಲ ದೋಣಿ ಚಾಲಕರು ಹಾಗೂ ಸಹಾಯಕರನ್ನು ವಿಚಾರಿಸಿದರು ಕೂಡ ಆಕೆಯ ಬಗ್ಗೆ ಸುಳಿವಿಲ್ಲ. ಯಾರೂ ಆಕೆಯನ್ನು ನೋಡಿಲ್ಲ. ಆಕೆ ಕೂಡ ಯಾರ ಜೊತೆಗಾದರೂ ಮಾತನಾಡಿದ್ದನ್ನು ತಾನು ನೋಡಿಲ್ಲ. ನಿರಾಶೆ, ಹತಾಶೆ ಭಾವಗಳೆಲ್ಲ ಸಮುದ್ರದ ಅಲೆಗಳ ಧ್ವನಿಯ ಜೊತೆಗೂಡಿ, ಭೂತ ಕಾಲದ ತುಣುಕುಗಳೆಲ್ಲ ಕಣ್ಣ ಮುಂದೆ ನುಸುಳಿ ಸುಸ್ತಾದಂತೆ ಮರಳ ಮೇಲೆ ಕುಸಿದು ಬಿದ್ದವನಿಗೆ ಮತ್ತೆ ಎಚ್ಚರವಾದದ್ದು ದಿನದ ಕೊನೆಯ ಪಾಳಿಯ ದೋಣಿಯನ್ನು ಚಲಾಯಿಸಿಕೊಂಡು ಬಂದ ಸುರೇಶ ಎಚ್ಚರಿಸಿದಾಗಲೇ. ಬೆಳಗ್ಗೆ ಬಿದ್ದ ಕನಸಿನ ಪ್ರಭಾವದಿಂದ ತನಗೆ ಉಂಟಾದ ಭ್ರಮೆಯೇ ಇರಬೇಕು ಆಕೆ ಎಂದು ನಿರಂಜನ ಮನೆಗೆ ಮರಳಿ ರಾತ್ರಿಯಿಡೀ ನಿದ್ರೆ ಬಿಟ್ಟು ಯೋಚಿಸತೊಡಗಿದ. ಅಂತೂ ಇಂತೂ ಬೆಳಗ್ಗಿನ ಜಾವ ಕಣ್ಣಿಗೆ ನಿದ್ರೆ ಹತ್ತಿ ಮಧ್ಯಾಹ್ನದ ಹೊತ್ತಿಗೆ ಎಚ್ಚರವಾದಾಗ ಕೆಲಸಕ್ಕೆ ಹಾಜರಾಗುವ ಸಮಯ ಆಗಲೇ ಮೀರಿ ಅಂದು ದ್ವೀಪಕ್ಕೆ ಹೋಗದೆ ಮನೆಯಲ್ಲೇ ಉಳಿಯಲು ನಿರ್ಧರಿಸಿದ. ಸಂಜೆಯ ಹೊತ್ತಿಗೆ ಆತನ ಮನಸ್ಸಿನಲ್ಲೊಂದು ಆಲೋಚನೆ ಮೂಡಿತು. ಹೇಗಿದ್ದರೂ ಸಂದೀಪನ ಮನೆ ಇದೇ ಊರಿನಲ್ಲಿರುವುದು. ಯಾಕೆ ತಾನೇ ಹೋಗಿ ಅವರನ್ನು ವಿಚಾರಿಸಬಾರದು? ಸಂದೀಪ ಲಿಪಿಯನ್ನೇ ಮದುವೆಯಾಗಿದ್ದಾನೆಯೇ? ಅಂದು ಸಂದೀಪನ ಕಾರಿನಲ್ಲಿ ನೋಡಿದ್ದು ಆಕೆಯನ್ನೆಯೇ? ಎಣಿಸಿದಂತೆ ಅರ್ಧ ಗಂಟೆಯೊಳಗೆ ಸಂದೀಪನ ಮನೆಯೆದುರು ಹಾಜರಾದವನಿಗೆ ಅಂಗಣದಲ್ಲಿಯೇ ಸಂದೀಪನ ಅಮ್ಮ ಎದುರಾದರು. ಅವರಿಗೆ ನಮಸ್ಕಾರ ಹೇಳಿ ನಿರಂಜನ ತನ್ನ ಪರಿಚಯ ಮಾಡಿಕೊಂಡು, ತನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನೆಲ್ಲ ಅವರ ಎದುರು ಹಾಕಿದ. ಅಲ್ಲಿಯವರೆಗೂ ನಗುತ್ತಲೇ ಮಾತನಾಡುತ್ತಿದ್ದ ಸಂದೀಪನ ತಾಯಿ ಲಿಪಿಯ ವಿಷಯ ಬರುತ್ತಿದ್ದಂತೆ ಗಂಭೀರವಾಗಿ ನಿರಂಜನನನ್ನು ದಿಟ್ಟಿಸುತ್ತಾ, ಆಕೆಯನ್ನು ಸಂದೀಪ ಮದುವೆಯಾಗಿರುವುದು ಹೌದೆಂದಷ್ಟೇ ಹೇಳಿ ತನಗೆ ತುಂಬಾ ಕೆಲಸವಿದೆಯೆಂದೂ, ನಿರಂಜನನನ್ನು ಹೊರಡಬೇಕೆಂದು ವಿನಂತಿಸಿ ಮನೆಯೊಳಗೆ ಹೋಗಿ ಬಾಗಿಲಿನ ಚಿಲಕ ಹಾಕಿಕೊಂಡರು. ಮೊದಲೇ ಗೊಂದಲದಲ್ಲಿದ್ದ ನಿರಂಜನನಿಗೆ ಲಿಪಿಯ ಬಗೆಗಿನ ಅವರ ವರ್ತನೆ ನೋಡಿ ಇನ್ನಷ್ಟು ಗೋಜಲಾಯಿತು.

ಹೀಗೆ ನಡೆದ ಘಟನೆಗಳಿಂದ ವಿಚಲಿತವಾದ ನಿರಂಜನನ ಮನಸ್ಸಿನಲ್ಲಿ ಲಿಪಿಯ ಬಗ್ಗೆ ಕನಿಕರದಂಥಾ ಭಾವನೆ ಮೊಳೆದು, ನಿಧಾನಕ್ಕೆ ಮತ್ತೆ ಹಳೆಯ ಪ್ರೀತಿ ಚಿಗುರಿ, ಆಕೆಯ ಒಂದು ನೋಟಕ್ಕಾಗಿ ಆತ ಹಂಬಲಿಸತೊಡಗಿದ. ಪ್ರತಿ ದಿನ ದೋಣಿ ಹತ್ತುವ ಪ್ರಯಾಣಿಕರ ನಡುವೆ ಆತನ ಕಣ್ಣುಗಳು ಆಕೆಗಾಗಿ ಹುಡುಕಾಡತೊಡಗಿದವು. ಎಲ್ಲಿ ಆಕೆ ತೋರಬಹುದೇನೋ ಎಂಬ ನಿರೀಕ್ಷೆಯಿಂದ ದಿನಕ್ಕೆರಡು ಬಾರಿ ಸಂದೀಪನ ಮನೆ ಕಡೆ ಅತ್ತಿತ್ತ ಸುಳಿಯಲಾರಂಭಿಸಿದ. ಒಂದು ಬಾರಿ ಆಕೆ ಸಿಕ್ಕರೆ ಆಕೆಯ ಬಗೆಗಿನ ತನಗಿರುವ ಎಲ್ಲ ಭಾವನೆಗಳನ್ನು ತಿಳಿಸಿಬಿಡುವುದಾಗಿ ನಿಶ್ಚಯಿಸಿದ. ಒಂದೊಮ್ಮೆ ಸಂದೀಪನ ಅಮ್ಮನ ಪ್ರತಿಕ್ರಿಯೆ ನೆನಪಾಗಿ ಆಕೆಗೆಲ್ಲಿ ಅನಾಹುತವೇನಾದರೂ ಆಗಿದ್ದಿರಬಹುದೋ ಎಂದು ಚಡಪಡಿಸಿ ಊಟ ನಿದ್ರೆ ಬಿಟ್ಟು ಅತ್ತದ್ದು ಕೂಡ ಇದೆ. ಆದರೆ ದ್ವೀಪದಲ್ಲಿ, ದೋಣಿಯಲ್ಲಿ ತನಗೆ ತೋರಿದ ಯುವತಿ ಆಕೆಯೇ ಎಂದು ನಿರ್ಧರಿಸಿ ತಾನೇ ಸಮಾಧಾನವಾಗುತ್ತಾನೆ. ಲಿಪಿಯನ್ನು ಆಸುಪಾಸಿನಲ್ಲಿ ಎಂದೂ ನೋಡದ ಆತನ ಗೆಳೆಯರು ಕೂಡ ಆತನ ಹುಚ್ಚಾಟವನ್ನು ಸಹಿಸಲಾಗದೆ ಗೇಲಿ ಮಾಡತೊಡಗುತ್ತಾರೆ. ಆದರೆ ನಿರಂಜನನಿಗೆ ಲಿಪಿ ತನಗೆ ಒಲಿಯುವಳೆಂದು ನಿಶ್ಚಯವಾಗಿಬಿಟ್ಟಿದೆ. ಇದೇ ಸ್ಥಿತಿಯಲ್ಲಿ ಸುಮಾರು ಎರಡು ವಾರ ಕಳೆದಿರಬಹುದು. ವೈರಾಗ್ಯ ಮೂರ್ತಿಯಂತೆ ಅಸಡ್ಡೆಯಿಂದ ಪ್ರಯಾಣಿಕರನ್ನೆಲ್ಲ ದ್ವೀಪದಲ್ಲಿಳಿಸಿ ಒಬ್ಬನೇ ಮಲ್ಪೆಯ ಕಡೆ ದೋಣಿಯನ್ನು ತಿರುಗಿಸಿ ಸ್ವಲ್ಪ ದೂರ ಬಂದಿದ್ದನೋ ಇಲ್ಲವೋ, ಮತ್ತೆ ದ್ವೀಪದ ಅದೇ ಮೂಲೆಯಲ್ಲಿ ಆಕೆ ನಿರಂಜನನಿಗೆ ಕಾಣಿಸಿಕೊಂಡಳು. ನಿರಂಜನನ ಹೃದಯ ಬಡಿತದ ಗತಿ ತೀವ್ರವಾಯಿತು. ಆತನ ಕಣ್ಣುಗಳಲ್ಲಿ ಹೊಸ ಹೊಳಪು ಮೂಡಿತು. ಇಂದು ಕೂಡ ಅದೇ ಉಡುಗೆ ತೊಡುಗೆ ಆಕೆಯದ್ದು. ಅಲೆಗಳ ನಡುವೆ ಪಾದವನ್ನಿರಿಸಿ ನಿಂತುಕೊಂಡು ಅದೇ ಶಿಲ್ಪಗಳನ್ನು ದಿಟ್ಟಿಸುತ್ತಿದ್ದಾಳೆ. ಉದ್ವೇಗ ತಾಳಲಾರದೆ, ಬೇರೆ ಆಲೋಚನೆ ಮಾಡದೆ ನಿರಂಜನ ದೋಣಿಯನ್ನು ಹಾಗೆಯೇ ತಿರುಗಿಸಿ, ಮತ್ತೆ ಆಕೆ ಕಣ್ತಪ್ಪಿ ಹೋಗದಿರಲೆಂದು, ಆಕೆಯ ಮೇಲೆಯೇ ದೃಷ್ಟಿ ನೆಟ್ಟುಕೊಂಡು ಆಕೆಯಿರುವ ಜಾಗದ ಕಡೆ ಮರಳಿನ ಮೇಲೆಯೇ ಯಾಂತ್ರಿಕ ದೋಣಿಯನ್ನು ಹಾರಿಸಿಯೇ ಬಿಟ್ಟ. ನೀರಿನಿಂದ ಮರಳಿಗೆ ಬಂದ ದೋಣಿಯ ಯಂತ್ರ ಕೆಟ್ಟದಾಗಿ ಶಬ್ದ ಮಾಡುತ್ತಾ ಅಲ್ಲಿಯೇ ನಿಂತು ಹೋಯಿತು. ದೋಣಿಯಿಂದ ಚಕ್ಕನೆ ಮರಳಿಗೆ ಹಾರಿದ ನಿರಂಜನ ತಡ ಮಾಡದೆ ಯುವತಿಯ ಕಡೆ ಒಂದೇ ಉಸಿರಿನಲ್ಲಿ ಓಡತೊಡಗಿದ. ಹತ್ತಿರಾದಂತೆ ಆಕೆಯ ಮುಖ ಸ್ಪಷ್ಟವಾಗಿ ಗೋಚರಿಸತೊಡಗಿತು. ನಿರಂಜನನ ಊಹೆ ಸುಳ್ಳಾಗಲಿಲ್ಲ. ಬಾಲ್ಯದಲ್ಲಿ ನೋಡಿದ ಲಿಪಿಯನ್ನು ಸ್ಪಷ್ಟವಾಗಿ ಗುರುತಿಸುವಷ್ಟು ಸಾಮ್ಯತೆಯನ್ನು ಆಕೆಯ ಚಹರೆ ಇನ್ನು ಉಳಿಸಿಕೊಂಡಿತ್ತು. ಒಮ್ಮೆಲೇ ಎದುರಿಗೆ ಪ್ರತ್ಯಕ್ಷನಾದ ನಿರಂಜನನನ್ನು ನೋಡಿ ಯಾವುದೇ ಆಶ್ಚರ್ಯವನ್ನು ಆಕೆ ವ್ಯಕ್ತಪಡಿಸದೇ, ಇಷ್ಟು ದಿನದಿಂದ ಆತನಿಗೋಸ್ಕರವೇ ದಿನಾ ದ್ವೀಪಕ್ಕೆ ಬಂದು ತಾನು ಕಾಯುತ್ತಿರುವುದೇನೋ ಎಂಬಂತೆ ಪ್ರೀತಿಯ ನಗು ಚೆಲ್ಲುತ್ತಾ, ಆತನನ್ನು ಆಲಂಗಿಸಿಕೊಳ್ಳಲೆಂಬಂತೆ ತನ್ನೆರಡು ತೋಳುಗಳನ್ನು ಬಿಡಿಸಿಕೊಂಡಳು. ಬಹು ದಿನಗಳಿಂದ ತಾನು ಅನುಭವಿಸುತ್ತಿರುವ ಅವಮಾನ, ಗೇಲಿಗಳಿಗೆ, ಕಳೆದು ಹೋದ ತನ್ನ ಬಾಲ್ಯದ ಪ್ರೀತಿಗೆ, ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಮುಂದೆ ನಿಂತು ತನ್ನಲ್ಲೇ ಕಳೆದು ಹೋಗು ಬಾ ಎಂಬಂತೆ ಆಹ್ವಾನ ನೀಡುತ್ತಿರುವ ಲಿಪಿಯನ್ನು ನೋಡುತ್ತಲೇ ಆಕೆಯ ತೆರೆದ ತೋಳುಗಳಲ್ಲಿ ನಿರಂಜನ ಲೀನನಾದನು.

—————————————————————

ಸುಜಾತಕ್ಕನವರು ಮನೆಯಲ್ಲಿ ಆತಂಕದಿಂದ ಕುಳಿತಿದ್ದಾರೆ. ಸಂಜೆಯ ಹೊತ್ತಿನಲ್ಲಿ ಮನೆ ಮುಂದೆ ಬಂದು ನಿಂತ ಆಟೋ ರಿಕ್ಷಾ ಅವರನ್ನು ವಾಸ್ತವಕ್ಕೆ ಮರಳುವಂತೆ ಮಾಡಿದೆ. ಯಾರದೋ ನಿರೀಕ್ಷೆಯಲ್ಲಿದ್ದಾರೆ ಎಂದು ಅವರ ಮುಖ ಸ್ಪಷ್ಟವಾಗಿ ಸಾರಿ ಹೇಳುತ್ತಿದೆ. ಆಟೋದಿಂದಿಳಿದ ಗಿರಿಜಮ್ಮನನ್ನು ನೋಡುತ್ತಿದ್ದಂತೆಯೇ ಸುಜಾತಕ್ಕನ ಮುಖದಲ್ಲಿ ಸ್ವಲ್ಪ ಚೇತರಿಕೆ ಕಂಡುಬರುತ್ತದೆ. ಗಿರಿಜಮ್ಮ, ಸುಜಾತಕ್ಕನ ಅಕ್ಕ. ಹೆಸರಿಗೆ ಮಾತ್ರವಷ್ಟೇ ಆಕೆ ಅಕ್ಕ. ಸುಜಾತಕ್ಕನಿಗಂತೂ ಅವರು ಅಮ್ಮನ ಥರವೇ. ಪ್ರಾಯದಲ್ಲಿ ತುಂಬಾ ವ್ಯತ್ಯಾಸವಿರುವ ಸುಜಾತಕ್ಕನನ್ನು ಅಮ್ಮನಷ್ಟೇ ಅಕ್ಕರೆ ತೋರಿ ಸಾಕಿದ್ದರು ಗಿರಿಜಮ್ಮ. ಮನೆಗೆ ಬಂದವರೇ ಗಿರಿಜಮ್ಮ ಮನೆಯೆಲ್ಲ ಸುತ್ತಾಡಿ ಬಂದು ವರಾಂಡದಲ್ಲಿ ಚಿಂತಾಕ್ರಾಂತರಾಗಿ ಕುಳಿತ ಸುಜಾತಕ್ಕನನ್ನು ಕೇಳುತ್ತಾರೆ. “ಎಲ್ಲಿ ನಿನ್ನ ಮಗಳು ಲಿಪಿ? ಸಂದೀಪನನ್ನು ಬಿಟ್ಟು ಬಂದು ತಿಂಗಳುಗಳಿಂದ ಇಲ್ಲೇ ವಾಸವಾಗಿದ್ದಾಳೆ ಎಂದು ತಿಳಿಸಿದೆ ಅಲ್ವಾ ನೀನು ಮೊನ್ನೆ.”
ತುಂಬಿ ಬಂದ ಕಂಗಳನ್ನು ಹಿಡಿದಿಟ್ಟುಕೊಂಡು ಸ್ವಲ್ಪ ಸಮಯದ ನಂತರ ಸುಜಾತಕ್ಕ ಉತ್ತರಿಸುತ್ತಾರೆ, “ಏನು ಹೇಳುವುದು ಅಕ್ಕ ಅವಳ ಬಗ್ಗೆ. 3 ತಿಂಗಳಾಯಿತು ಅಮೆರಿಕಾದಿಂದ ಸಂದೀಪನನ್ನು ಬಿಟ್ಟು ಬಂದು. ಮೊದಲೊಂದು ತಿಂಗಳು ಎಲ್ಲವೂ ಸರಿಯಾಗೇ ಇದೆ ಎಂದು ಎಣಿಸಿಕೊಂಡಿದ್ದೆವು. ಆದರೆ ಆಕೆ ಮರಳುವ ಲಕ್ಷಣ ತೋರಿಸದೆ ಇದ್ದಾಗ, ಕುಳಿತು ಸಮಾಧಾನದಿಂದ ಆಕೆಯನ್ನು ವಿಚಾರಿಸಿಕೊಂಡಾಗಲೇ ತಿಳಿದದ್ದು ಆಕೆ ಅಮೆರಿಕಕ್ಕೆ ಮರಳುವ ಉದ್ದೇಶದಿಂದ ಬಂದದ್ದು ಅಲ್ಲವೆಂದು.”
ಸುಜಾತಕ್ಕನ ಒಗಟಿನ ಮಾತು ಗಿರಿಜಕ್ಕನಿಗೆ ಸಹಿಸಲಾಗದೆ ರೇಗಿ ಕೇಳಿದರು. “ಏನೀಗ ನನಗೆ ಸರಿಯಾಗಿ ವಿಷಯ ಬಿಡಿಸಿ ತಿಳಿಸುತ್ತೀಯೋ ಅಥವಾ ಹೀಗೆ ಒಬ್ಬಳೇ ಕುಳಿತು ಕೊರಗುವ ಯೋಚನೆಯಿದೆಯೋ ನಿಂಗೆ?”
ಅಳುವ ಮೋರೆ ಮಾಡಿಕೊಂಡೇ ಸುಜಾತಕ್ಕ ಮುಂದುವರೆಸಿದರು, “ಅಕ್ಕ, ನಿನಗೇ ಗೊತ್ತಿತ್ತಲ್ಲ. ಕಾಲೇಜಿನ ಸಹಪಾಠಿ ಸಂದೀಪನನ್ನೇ ಮದುವೆಯಾಗುತ್ತೇನೆ ಎಂದು ಲಿಪಿ ಹಠ ಹಿಡಿದಾಗ, ನಾವು ಅಷ್ಟೇನು ಇಷ್ಟವಿಲ್ಲದಿದ್ದರೂ ಆಕೆಯನ್ನು ಒಳ್ಳೆಯ ರೀತಿಯಲ್ಲಿ ಮದುವೆ ಮಾಡಿ ಅಮೆರಿಕಕ್ಕೆ ಕಳುಹಿಸಿದ್ದೆವೋ ಇಲ್ಲವೋ? ಮೊನ್ನೆ ಬಂದವಳು, ಬಂದ ಎರಡನೇ ವಾರದಿಂದಲೇ ಸಂದೀಪನ ಬಗ್ಗೆ ದೂರಿನ ಮೇಲೆ ದೂರು. ಆಗಲೇ ನನಗೆ ಹೊಳೆದಿತ್ತು ಈಕೆ ಸಂದೀಪನ ಜೊತೆ ಏನೋ ಚಿಕ್ಕ ಪುಟ್ಟ ಜಗಳವಾಡಿಯೇ ಬಂದಿದ್ದಾಳೆಂದು. ಆತ ತನಗೆ ಸಮಯ ಕೊಡುತ್ತಿಲ್ಲವೆಂದೂ, ಆ ಅಪರಿಚಿತ ಜನಗಳ ಮಧ್ಯೆ ತನಗೆ ಏಕಾಂಗಿ ಅನುಭವವಾಗುತ್ತಿದೆಯೆಂದೂ, ಸಂದೀಪನಿಗೆ ತಾನು ಮನೆ ಚಾಕರಿ ನೋಡಿಕೊಳ್ಳುವ ಕೆಲಸದವಳು ಮಾತ್ರವೆಂದೂ, ಕೊನೆ ಕೊನೆಗಂತೂ ಆತನಿಗೆ ಆಫೀಸಿನ ಇನ್ನೊಂದು ಹುಡುಗಿಯ ಜೊತೆ ಅಕ್ರಮ ಸಂಬಂಧ ಕೂಡ ಇದೆ ಎಂಬ ಮಟ್ಟಕ್ಕೆ ಆತನ ಮೇಲೆ ದ್ವೇಷ ಸಾಧಿಸತೊಡಗಿದಳು. ಸ್ವಲ್ಪ ದಿನ ನಮ್ಮನೆಯಲ್ಲಿ ಇದ್ದರೆ ಎಲ್ಲ ಸರಿ ಹೋಗಬಹುದೆಂಬ ಭ್ರಮೆಯಲ್ಲೇ ನಾನು ಮತ್ತು ನಮ್ಮವರು ಇಬ್ಬರೂ ಇದ್ದೆವು. ಆದರೆ ಕಳೆದ ತಿಂಗಳಿನಿಂದಂತೂ ಪರಿಸ್ಥಿತಿ ಅತಿರೇಕಕ್ಕೆ ಹೋಗಿದೆ. ಒಂದೇ ಸಮನೆ ಹಠ ಶುರು ಮಾಡಿಬಿಟ್ಟಳು, ಉಡುಪಿ ಸಮೀಪದ ಮಲ್ಪೆಗೆ ಹೋಗಬೇಕೆಂದು. ಯಾಕೆಂದು ಕೇಳಿದರೆ ಅಲ್ಲಿ ತನಗಾಗಿ ಕಾಯುತ್ತಿರುವ ಬಾಲ್ಯದ ಗೆಳೆಯ, ಯಾರೋ ನಿರಂಜನನನ್ನು ಭೇಟಿ ಮಾಡಬೇಕು, ಆತ ಒಪ್ಪಿದರೆ ಆತನನ್ನೇ ಮದುವೆಯಾಗಿ ಕರಾವಳಿಯಲ್ಲೇ ಸಂಸಾರ ಹೂಡಿ ಬಿಡಬೇಕೆಂದು ಹೇಳತೊಡಗಿದಳು. ನಮಗಿಬ್ಬರಿಗಾದ ಮೊದಲ ಅನುಮಾನವೇ ಆಕೆಗೆ ಹುಚ್ಚು ಹಿಡಿದಿದೆಯೆಂದು. ಆದರೂ ಎಷ್ಟೆಂದರೂ ಹೆತ್ತ ಕರುಳು. ಮಗಳಿಗೆ ಹುಚ್ಚೆಂದು ಒಪ್ಪದು. ನಮ್ಮವರು ಆಕೆ ಚಿಕ್ಕಂದಿನಿಂದ ಕಲಿತ ಎಲ್ಲಾ ಶಾಲೆ ಕಾಲೇಜುಗಳಿಗೆ ಭೇಟಿ ನೀಡಿ ವಿಚಾರಿಸಿದರು, ಯಾವುದಾದರೂ ತರಗತಿಯಲ್ಲಿ ಆಕೆಗೆ ನಿರಂಜನ ಎಂಬ ಹೆಸರಿನ ಸಹಪಾಠಿಯಿದ್ದಾನೆಯೇ ಎಂದು. ಆಕೆಯ ಬಾಲ್ಯದ ಗೆಳತಿಯರಲ್ಲಿ ಕೂಡ ವಿಚಾರಿಸಿದ್ದಾಯಿತು. ಹಾಗೊಂದು ವ್ಯಕ್ತಿ ಆಕೆಯ ಜೀವನದಲ್ಲಿ ಯಾವತ್ತೂ ಅಸ್ತಿತ್ವವಿದ್ದ ಕುರುಹೇ ಇಲ್ಲ. ನಿರಂಜನ ಎಂಬುದು ಕೇವಲ ಆಕೆಯ ಕಲ್ಪನೆ ಎಂಬುದು ನಮಗೆ ತಿಳಿದು ಹೋಯಿತು. ಆಕೆಗೆ ಗೊತ್ತಿಲ್ಲದಂತೆ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರನ್ನು ನಾವು ಭೇಟಿಯಾಗಿ ಸಮಾಲೋಚಿಸಿ ಕೂಡ ಬಂದೆವು. ವೈದ್ಯರು ಎಲ್ಲವನ್ನು ವಿವರವಾಗಿ ತಿಳಿಸಿದರು. ಯಾವತ್ತು ನಮಗೆ ಒಂದು ವ್ಯಕ್ತಿಯಿಂದ ನಾವು ನಿರೀಕ್ಷಿಸಿದ ಪ್ರೀತಿ, ಲಕ್ಷ್ಯ, ಗೆಳೆತನ ದೊರೆಯದೆ ಹೋಗುತ್ತದೆಯೋ ಸ್ವಲ್ಪ ದಿನ ಮನಸ್ಸು ಘಾಸಿಯಾಗಿ ಕುಗ್ಗಿ ಹೋಗಿಬಿಡುತ್ತದೆ. ಆಮೇಲೆ ಅದು ತನ್ನಿಂದ ತಾನೇ ಗುಣ ಪಡಿಸಿಕೊಳ್ಳಲು ತಯಾರಾಗಿ ತನ್ನ ಬಯಕೆಯಂತಹದೇ ಒಂದು ಪಾತ್ರವನ್ನು ಸೃಷ್ಟಿ ಮಾಡಿಕೊಂಡು ತನ್ನ ದಿನ ನಿತ್ಯದ ಜೀವನವನ್ನು ಅದೇ ಪಾತ್ರದ ಸುತ್ತಮುತ್ತ ಹೆಣೆಯುತ್ತದೆ. ಲಿಪಿಯದ್ದು ಕೂಡ ಅದೇ ಕಥೆ. ಯಾವುದೋ ಕಾರಣದಿಂದ ಆಕೆಗೆ ಜೀವನದಲ್ಲಿ ತಾನು ನಿರೀಕ್ಷಿಸಿದ ಕಾಳಜಿ ದೊರಕಿಲ್ಲ. ಆಗ ಸೃಷ್ಟಿಯಾದ ಪಾತ್ರವೇ ಈ ನಿರಂಜನ. ಗಾಬರಿಯಾಗುವ ಅವಶ್ಯಕತೆಯಿಲ್ಲ ಆಕೆಯನ್ನು ಇಲ್ಲಿ ಕರೆತಂದು ಸ್ವಲ್ಪ ದಿನಗಳ ಕಾಲ ಚಿಕಿತ್ಸೆ ನೀಡಿ ಗುಣಪಡಿಸುವುದು ಸಾಧ್ಯ. ಈ ಕ್ಷಣದಲ್ಲಿ ಆಕೆಗೆ ಯಾವ ವಿಷಯವನ್ನು ತಿಳಿಸುವುದು ಬೇಡವೆಂದು ಧೈರ್ಯ ಹೇಳಿ ಕಳುಹಿಸಿದರು. ಒಂದು ಕ್ಷಣ ಭೂಮಿಯೇ ಬಾಯಿ ಬಿಟ್ಟಂತೆ ನಮಗಿಬ್ಬರಿಗೂ ಅನ್ನಿಸಿದರೂ ಆಕೆಗೋಸ್ಕರ ನಾವು ಧೈರ್ಯ ತೆಗೆದುಕೊಳ್ಳದೇ ಬೇರೆ ದಾರಿ ಇರಲಿಲ್ಲ. ಸಂದೀಪನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೆ ಆತ ಪ್ರಯತ್ನಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದ. ಇನ್ನು ಆತನ ತಂದೆ ತಾಯಿಯರಿಬ್ಬರು ಕೂಡ ನಮ್ಮಷ್ಟೇ ಅಸಹಾಯಕರು. ಹಾಗೆ ಒಂದೆರಡು ವಾರಗಳು ಕಳೆದವೋ ಏನೋ. ನಿಧಾನಕ್ಕೆ ಲಿಪಿಗೆ ನಿರಂಜನನ ಹುಚ್ಚು ಜಾಸ್ತಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು ಆದರೆ ಆಕೆ ಮನೆ ಬಿಟ್ಟು ನಾಪತ್ತೆಯಾಗಿ ಬಿಡಬಹುದೆಂಬ ಚಿಕ್ಕ ಸುಳಿವು ಕೂಡ ಇದ್ದಿರಲಿಲ್ಲ ಅಕ್ಕ. ಎರಡು ದಿನವಾಯ್ತು. ಎಲ್ಲಿದ್ದಾಳೆ ಎಂಬ ಮಾಹಿತಿ ಇನ್ನು ಕೂಡ ಇಲ್ಲ. ಇಲ್ಲದ ನಿರಂಜನನನ್ನು ಹುಡುಕಿಕೊಂಡು ಮಲ್ಪೆ ಕಡೆಗೆ ಹೋಗಿದ್ದಾಳೆ ಎಂಬುದು ನಮಗೆ ಖಚಿತವಾದ ನಂಬಿಕೆ. ಇವರಂತೂ ಏನಾದರೂ ಮಾಹಿತಿ ಸಿಗಬಹುದೇನೋ ಎಂದು ಪೊಲೀಸ್ ಠಾಣೆಯಲ್ಲೇ ಹಗಲು ರಾತ್ರಿ ಕಳೆಯುತ್ತಿದ್ದಾರೆ. ಹೂವಿನಂತೆ ಬೆಳೆದ ಹುಡುಗಿ, ಒಬ್ಬಳೇ ಗೊತ್ತು ಗುರಿಯಿಲ್ಲದ ಊರಿನಲ್ಲಿ ಹೇಗಿದ್ದಾಳೋ, ಯಾಕೆ ದೇವರು ನಮಗೆ ಈ ಶಿಕ್ಷೆ ಕೊಡುತ್ತಿದ್ದಾನೋ? ಯಾವ ಜನ್ಮದ ಪಾಪದ ಫಲ ಇದು” ಎಂದು ಹೇಳಿ ಸುಜಾತಕ್ಕ ಅಳತೊಡಗಿದರು. ಕಥೆಯನ್ನು ಕೇಳಿ ಗಿರಿಜಮ್ಮ ಅಲ್ಲೇ ದಿಗ್ಭ್ರಮೆಯಿಂದ ಕುಸಿದು ಕುಳಿತರು.

——————————————————————-

ದ್ವೀಪದಿಂದ ಮಲ್ಪೆಗೆ ಮರಳುವ ಎಲ್ಲ ದೋಣಿಗಳು ವಾಪಾಸಾದರೂ ಕೂಡ ನಿರಂಜನ ಹಾಗೂ ಲಿಪಿ ಮಾತ್ರ ದ್ವೀಪದ ಶಿಲೆಗಳ ಮೇಲೆ ಮುಳುಗುತ್ತಿರುವ ಸೂರ್ಯನನ್ನು ದಿಟ್ಟಿಸುತ್ತಾ ಮುಗಿಯದ ಮಾತುಕತೆ ನಡೆಸುತ್ತಿದ್ದಾರೆ. ಇನ್ನೇನು ಅನಂತ ಸಮುದ್ರದ ಅಂಚಿನಲ್ಲಿ ಸೂರ್ಯ ಇವರಿಬ್ಬರ ಪ್ರೀತಿಗೆ ನಾಚಿ ಕೆಂಪಾಗಿ ಮರೆಯಾಗುತ್ತಿರಲು ಲಿಪಿ ನಿರಂಜನನ ಕೈ ಗಟ್ಟಿಯಾಗಿ ಹಿಡಿದುಕೊಂಡು ಜೊತೆ ಜೊತೆಯಾಗಿ ಸೂರ್ಯನನ್ನು ಹಿಂಬಾಲಿಸುವಂತೆ ಅವನೆಡೆಗೆ ನಡೆದಿದ್ದಾಳೆ. ದಿನವಿಡೀ ಜನರನ್ನು ಖುಷಿ ಪಡಿಸಿ ದಣಿದಂತಿರುವ ಸಾಗರ ಇಬ್ಬರ ಪ್ರೀತಿಯ ಪರಿಗೆ ಸೋತು, ಈಗಷ್ಟೇ ಮೂಡುತ್ತಿರುವ ಒಲುಮೆಯಲ್ಲಿ ತನ್ನ ಪಾಲನ್ನು ಕೇಳುತ್ತಾ, ಇಬ್ಬರನ್ನೂ ಇಷ್ಟಿಷ್ಟೇ ತನ್ನ ತೆಕ್ಕೆಗೆ ಬರಸೆಳೆದುಕೊಳ್ಳುತ್ತಾ ಧನ್ಯವಾಗುತ್ತಿದೆ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)