ವಿಕಸಿಕ

ಸುಮಾರಕ್ಕೆ ೧೯೪೬ ಮತ್ತು ೧೯೬೪ ನಡುವೆ ಪಾಶ್ಚಿಮಾತ್ಯ ದೇಶಗಳಲ್ಲಿ ಜನಿಸಿದ ತಲೆಮಾರಿಗೆ, ಇರುವ ಹೆಸರು ‘ಬೇಬಿ ಬೂಮರ್ಸ್ ‘. ೨ನೇ ಮಹಾಯುದ್ಧ ಮುಗಿಯುತ್ತಲೇ ಒಮ್ಮೆಲೇ ಮಕ್ಕಳ ಜನನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದದ್ದೇ, ಆ ತಲೆಮಾರಿಗೆ ಇಂಥ ಹೆಸರು ಬರಲು ಕಾರಣ. ಯುದ್ಧ ಮುಗಿಸಿ ಮನೆಗೆ ಮರಳಿದ ಸೈನಿಕರ ಕುಟುಂಬ ಕಟ್ಟಿಕೊಳ್ಳುವ ಹಂಬಲ, ಸುಧಾರಿಸಿದ ದೇಶದ ಆರ್ಥಿಕ ಸ್ಥಿತಿಗತಿಗಳು ಇನ್ನೂ ಮುಂತಾದ ಅನೇಕ ಕಾರಣಗಳು ಈ ಏರಿಕೆಗೆ ಕಾರಣವಾಗಿದ್ದವು.

ನಮ್ಮ ದೇಶದವರು ಮಹಾಯುದ್ಧದಲ್ಲಿ ಅಷ್ಟಾಗಿ ಪಾಲ್ಗೊಂಡವರಲ್ಲ. ಹಾಗಾಗಿ ಯುದ್ಧದ ಮೊದಲಾಗಲಿ, ನಂತರವಾಗಲಿ ಇಲ್ಲಿ ಜನನ ಪ್ರಮಾಣಕ್ಕೇನು ಕೊರತೆ ಬಂದದ್ದೇ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ನೋಡಿ ಮಕ್ಕಳನ್ನು ಸೃಷ್ಟಿಸುತ್ತಿದ್ದ ಕಾಲವು ಕೂಡ ಅದಲ್ಲ. ಆದ್ದರಿಂದ ನಮ್ಮವರ ತಲೆಮಾರಿಗೆ ಈ ಹೆಸರನ್ನು ಜೋಡಿಸುವುದು ಸರಿ ಎನಿಸುವುದಿಲ್ಲ. ಆದರೂ ಸಹ ನಮ್ಮ ದೇಶದಲ್ಲಿ ಕೂಡ ಸಾಮಾನ್ಯವಾಗಿ ಈ ಸಮಯದಲ್ಲಿ ಹುಟ್ಟಿದವರಲ್ಲಿ ತುಂಬಾ ಸಾಮ್ಯತೆಗಳು ಇರುವುದಂತೂ ನಿಜ. ಈ ಸಮಯದಲ್ಲಿ ಧರೆಗಿಳಿದ ನಮ್ಮ ಜನರು ದೇಶ ಕ್ಷಿಪ್ರಗತಿಯಲ್ಲಿ ಕಂಡ ಬದಲಾವಣೆಯ ಹರಿಕಾರರು ಹಾಗೂ ಸಾಕ್ಷಿಗಳು. ಬಹುಶಃ ಅವರ ಹಿಂದಿನ ಮತ್ತು ಮುಂದಿನ ತಲೆಮಾರಿಗೆ ಹೋಲಿಸಿದರೆ, ತಮ್ಮ ಜೀವಿತಾವಧಿಯಲ್ಲಿ, ಸಮಾಜದ ಅತಿ ಹೆಚ್ಚಿನ, ವೈವಿಧ್ಯಕರ ರೂಪಾಂತರಗಳನ್ನು ನೋಡಿ, ಬದುಕಿದ ಪೀಳಿಗೆ ಇದು ಎಂದೇ ಹೇಳಬೇಕು. ಆದರಿಂದಲೇ ಇವರನ್ನು’ವಿಕಸಿಕ’ರೆಂದು ಕರೆಯುವುದೇ ಸೂಕ್ತ.

ಆಗ ತಾನೇ ಹುಟ್ಟಿದ ಅವರಂತೆಯೇ, ದೇಶ ಕೂಡ ಸ್ವಾತಂತ್ರ್ಯ ಸಿಕ್ಕಿ ಮರುಜನ್ಮ ಪಡೆದ ಕಂದನಂತೆ ಪಿಳಿ ಪಿಳಿ ನೋಡುತ್ತಿದ್ದ ಸಮಯ ಅದು. ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿದರೆ, ಗೊಂದಲ, ಅಸ್ತವ್ಯಸ್ತತೆ ಹಾಗು ಮಾರ್ಗದರ್ಶನವಿಲ್ಲದ ವ್ಯವಸ್ಥೆಯ ಮಧ್ಯೆಯೇ ಬೆಳೆದವರು ನಮ್ಮ ವಿಕಸಿಕರು.  ಆದರೆ ಹಳ್ಳಿಗಳೇ ಹೆಚ್ಚಾಗಿದ್ದ ದೇಶದಲ್ಲಿ, ದಿಲ್ಲಿಯಲ್ಲಿ ನಡೆದ ಘಟನೆಗಳು ಮನೆ ತಲುಪಲು ದಿನಗಟ್ಟಲೆ ಬೇಕಾದಂಥ ಸಂಧರ್ಭಗಳಲ್ಲಿ, ಜನಗಳ ಮೇಲೆ ಈ ಗೊಂದಲಗಳ ಪ್ರಭಾವ ಇದ್ದದ್ದು ಕೂಡ ಅಷ್ಟಕ್ಕಷ್ಟೇ. ಬದಲಾವಣೆ ಯಾವತ್ತೂ ನಿಧಾನ ಹಾಗು ನಿರಂತರ. ಸ್ವಾತಂತ್ರ್ಯಪೂರ್ವ ಹಾಗು ಸ್ವಾತಂತ್ರ್ಯೋತ್ತರ ಎಂದು ಮಧ್ಯದಲ್ಲಿ ಒಂದು ಗೆರೆ ಎಳೆದು ಬಿಟ್ಟಷ್ಟು ಸರಳ, ನಿಶ್ಚಿತವಂತೂ ಅಲ್ಲ. ಇಡೀ ದೇಶವೇ ಬಡತನದಲ್ಲಿ ಮುಳುಗಿದ್ದ ಕಾಲ. ಈಗಿನ ಸಮಾಜ ಯಾವುದನ್ನು ಬಡತನವೆನ್ನುವುದೋ ಅದು ಆಗಿನ ಜೀವನ ಕ್ರಮ.

ಅಂದಿಗೆ ವಿದ್ಯಾಭ್ಯಾಸವು ಕೂಡ ಒಂದು ಸವಲತ್ತಿನಂತೆಯೇ. ಒಂದು ಮನೆಯ ಮಗ ಶಾಲೆಗೆ ಹೊರಟನೆಂದರೆ ಮನೆಯವರ ಹೊಟ್ಟೆ ತುಂಬಿಸಬಲ್ಲಂತ ಎರಡು ಕೈಗಳು ನಿಷ್ಪ್ರಯೋಜಕವಾದಂತೆಂದು ನಂಬಿದ ಜನಗಳೇ ಜಾಸ್ತಿ. ವಿದ್ಯಾಭ್ಯಾಸವು ಧನಮುಖಿಯಾಗಿರದೆ, ಜ್ಞಾನಮುಖಿಯಾಗಿದ್ದಂತ ದಿನಗಳು ಅವು. ದಿನದ ಕೊನೆಗೆ ಹೊಟ್ಟೆ ತುಂಬಿ, ಕಣ್ಣಿಗೆ ನಿದ್ರೆ ಹತ್ತಿತೆಂದರೆ ಅದೇ ಸುಖವೆಂದು ಅರಿತಿದ್ದ ಜನರ ಮಧ್ಯೆಯೇ ಬೆಳೆದ ತಲೆಮಾರು ಈ ವಿಕಸಿಕರದ್ದು. ನಾವೆಲ್ಲರೂ ನಮ್ಮ ತಂದೆ ತಾಯಂದಿರ ಇಂಥ ಕಷ್ಟ ಕಾರ್ಪಣ್ಯದ ದಿನಗಳ ಕಥೆಗಳನ್ನು ಅಚ್ಚರಿಯಿಂದ ಕೇಳಿಸಿಕೊಂಡು, ಅವರ ಅಂದಿನ ಸ್ಥಿತಿಗಳನ್ನು ಊಹಿಸಿಕೊಂಡು, ನಮ್ಮ ಇಂದಿನ ಸ್ಥಿತಿಗಳ ಬಗ್ಗೆ ನೆನೆದು ಧನ್ಯರಾದವರೇ.

ಅಂದಿನ ಪ್ರಪಂಚವೇ ಚಿಕ್ಕದಾಗಿತ್ತೇನೋ. ದೂರದೂರಿನ ಸಂಬಂಧಿಗಳೊಡನೆ ಬೇಕಾದಾಗ ಮಾತನಾಡಲು ಟೆಲಿಫೋನಾಗಲಿ, ಮುಖತಃ ಹೋಗಿ ಭೇಟಿ ಮಾಡಲು ಸಾರಿಗೆ, ರಸ್ತೆ ಸೌಲಭ್ಯವಾಗಲಿ ಇಂದಿನಂತೆ ಇರಲಿಲ್ಲ. ಬದಲಾವಣೆಯ ಗಾಳಿ ಬೀಸತೊಡಗಿದ್ದು ಸುಮಾರು ೮೦ ರ ದಶಕದ ಆರಂಭದಲ್ಲಿ.

ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಸೂರು ಮಾಡಿ ಕೊಡುವ ಸಲುವಾಗಿ ಅಸಂಖ್ಯಾತ ಮರಗಳು ಧರೆಗುರುಳಿದವು. ಕಾಡುಗಳೆಲ್ಲ ನಾಡುಗಳಾಗಿ ಪರಿವರ್ತನೆ ಹೊಂದತೊಡಗಿದವು. ಹುಲ್ಲಿನ ಮಾಡಿನ ಮನೆಗಳು, ಹಂಚಿನ ಮಾಡಾಗಿ, ತಾರಸಿ ಮಾಡಿನ ಎರಡಂತಸ್ತಿನ ಮನೆಗಳಾಗಿ ಬದಲಾಗತೊಡಗಿದವು.

ಪತ್ರ ಮುಖೇನ ನಡೆಯುತ್ತಿದ್ದ ವ್ಯವಹಾರಗಳು, ದೂರವಾಣಿಯ ಆರಂಭದೊಂದಿಗೆ ನಿಧಾನಕ್ಕೆ ಮರೆಯಾದವು. ಮೊಬೈಲ್ ಫೋನುಗಳಂತೂ ಎಲ್ಲವನ್ನು ನುಂಗಿ ಹಾಕತೊಡಗಿದವು.

ದಿನಕ್ಕೆರಡು ಬಾರಿ ರೇಡಿಯೋ ಕೇಳಿಸಿಕೊಳ್ಳುತ್ತಿದ್ದವರ ಮನೆಗೆ ಕಪ್ಪು ಬಿಳುಪು ದೂರದರ್ಶನ ಕಾಲಿಟ್ಟಿತು. ಮುಂದೆ ಪರದೆಗೆ ಬಣ್ಣ ತುಂಬಿತು. ಬೀದಿ ಓಣಿಗಳು, ರಾಮಾಯಣ, ಮಹಾಭಾರತ, ಕ್ರಿಕೆಟ್ ಪ್ರಸಾರದ ಸಮಯಗಳಲ್ಲಿ ಭಣಗುಟ್ಟತೊಡಗಿದವು. ತೆಳು ಪರದೆಯ ಟಿವಿಗಳು, ನಿಜವನ್ನು ಇನ್ನಷ್ಟು ವೈಭವೀಕರಿಸಿ ತೋರಿಸುವ ಪೂರ್ತಿ ಗೋಡೆಯ ಗಾತ್ರದ ಪರದೆಗಳು ಬಂದವು. ಜನರನ್ನು ಕುರ್ಚಿಗಂಟಿಸಿಬಿಟ್ಟವು. ಮನರಂಜನೆಯೇ ದಿನದ ಮುಖ್ಯ ಭಾಗವೆನಿಸತೊಡಗಿತು. ಎತ್ತಿನ ಗಾಡಿಯ, ಸೈಕಲ್ ಮೇಲಿನ ಪ್ರಯಾಣವನ್ನು ಬಸ್ಸು, ಮೋಟಾರು ಬೈಕುಗಳು ಇನ್ನಷ್ಟು ವೇಗಗೊಳಿಸಿದವು. ಮೊದಮೊದಲು ಚಿಕ್ಕ ಚಿಕ್ಕ ಕಾರುಗಳು ಬೀದಿಗಿಳಿದವು. ಅವುಗಳು ಓಡಾಡಲು ರಸ್ತೆಗಳು ಸುಧಾರಣೆಗೊಂಡವು. ಚಿಕ್ಕ ಕಾರುಗಳು ದೊಡ್ಡದಾದವು. ಪ್ರತಿಷ್ಠೆಯ ಸಂಕೇತಗಳಾದವು.

ಇವೆಲ್ಲ ಬದಲಾವಣೆಗಳನ್ನು ಸಹಿಸುತ್ತಾ, ಜೊತೆಗೆ ಬೆಳೆಯುತ್ತಾ, ಪರಿವರ್ತನೆಗಳನ್ನು ಸ್ವೀಕರಿಸುತ್ತಲೇ ಬಂದ ನಮ್ಮ ವಿಕಸಿಕರು ನಿಜಕ್ಕೂ ಕಸಿವಿಸಿಗೊಂಡದ್ದು ಮಾಹಿತಿ ತಂತ್ರಜ್ಞಾನ, ಅಂತರ್ಜಾಲ, ಕಂಪ್ಯೂಟರ್ ಹಾಗು ಡಿಜಿಟಲ್ ಕ್ರಾಂತಿ ನಡೆದಾಗ ಹಾಗೂ ವಿಕಸಿಕರ ಮುಂದಿನ ಜನಾಂಗ ಈ ಪರಿವರ್ತನೆಯನ್ನು ಅಷ್ಟೇ ಬೇಗದಲ್ಲಿ ತಮ್ಮದಾಗಿಸಿಕೊಂಡಾಗ.

ವಿಕಸಿಕರು ತತ್ತರಿಸಿದರು. ಕೆಲವರನ್ನು ಕೆಲಸದಿಂದ ಸ್ವನಿವೃತ್ತಿ ಹೊಂದುವಂತೆ ಪರೋಕ್ಷವಾಗಿ ಒತ್ತಾಯಿಸಲಾಯಿತು. ಕೆಲವರು ಬದಲಾವಣೆಗೆ ಹೊಂದಿಕೊಂಡರು. ಹಲವರು ಅಧಿಕಾರಯುತ ಸ್ವಾತಂತ್ರ್ಯ ಕಳೆದುಕೊಂಡರು. ಪರಾವಲಂಬನೆ ಅನಿವಾರ್ಯವೆನಿಸತೊಡಗಿತು. ಅನಿವಾರ್ಯತೆ ಸ್ವಾಭಿಮಾನವನ್ನು ಕಟ್ಟಿ ಹಾಕಿತು. ವಿಕಸಿಕರು ಈ ಬದಲಾವಣೆಯನ್ನು ಅವರದೇ ಮಾಧ್ಯಮಗಳ ಮೂಲಕ ಖಂಡಿಸಿ ಹತ್ತಿಕ್ಕುವ ಪ್ರಯತ್ನ ಮಾಡಿದರು. ಪ್ರಪಂಚ ಮುಂದುವರೆದಿತ್ತು. ವಿಕಸಿಕರ ಮಾಧ್ಯಮಗಳು ಕೂಡ ಕಾಲಗತಿಯಲ್ಲಿ ಹಿಂದೆ ಬಿದ್ದಿದ್ದವು. ವಿಕಸಿಕರು ಓಟದಲ್ಲಿ ನಿಧಾನವಾಗತೊಡಗಿದರು. ಬದಲಾವಣೆಗೆ ಒಗ್ಗಿ ಒಗ್ಗಿ ರೋಸಿ ಹೋಗಿತ್ತೇನೋ, ಒಂದು ಹಂತದಲ್ಲಿ ನಿರಾಶಾವಾದಿಗಳಾಗಿ ಕೈಚೆಲ್ಲಿ ಕೂತರು.

ಹೀಗೆ ಕುಳಿತ ಸಮಯದಲ್ಲೇ, ಗತವೈಭವ ಒಮ್ಮಿಂದೊಮ್ಮೆಗೆ ನೆನಪು ಬರಹತ್ತಿತು. ವಿಕಸಿಕರಿಗೆ ಅವರ ಬಾಲ್ಯವು ಅತಿ ಸುಂದರ, ಸರಳ, ರಮಣೀಯವಾಗಿ ನೆನಪಿನಲ್ಲಿ ಕಾಡತೊಡಗಿತು. ನೆನಪುಗಳು ಇನ್ನೂ ಹೆಚ್ಚು ವರ್ಣರಂಜಿತವಾಗಿ ಅವರ ಮಾತುಗಳಲ್ಲಿ ಸುಳಿದಾಡತೊಡಗಿದವು. ತಮ್ಮದೇ ತಲೆಮಾರಿನ ಇಂದಿನ ದಿನಗಳು ಮತ್ತು ಪ್ರಾರಂಭದ ದಿನಗಳ ಜೊತೆ ತುಲನೆ ಮಾಡ ತೊಡಗಿದರು. ಇಂದಿನ ತಲೆಮಾರು ಸುಖದ ಸುಪ್ಪತ್ತಿಗೆಯ ಮೇಲೆ ತೇಲುತ್ತಿರುವಂತೆಯೂ, ತಮ್ಮ ತಲೆಮಾರು ಕಷ್ಟ ಕಾರ್ಪಣ್ಯಗಳ ಸಾಗರದಲ್ಲಿ ಮುಳುಗೆದ್ದು ಈಜಿ ಬಂದ ಸಾಹಸಿಕರಂತೆಯೂ ಕಲ್ಪಿಸಿಕೊಳ್ಳತೊಡಗಿದರು.

ವಿಕಸಿಕರು ಮರೆತದ್ದೇನೆಂದರೆ, ತಲೆಮಾರುಗಳು ಯಾವತ್ತೂ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿನವರೆಗಿನ ನೇರ ಗೆರೆ ಅಲ್ಲ ಎಂಬುದು. ಅದು ಯಾವತ್ತೂ ಸಹಸ್ರ ಬಿಂದುಗಳ ಜೊತೆಗೂಡಿರುವ ಅಂಕು ಡೊಂಕು ರೇಖಾ ಚಿತ್ರ. ಈ ಚಿತ್ರ ಒಬ್ಬೊಬ್ಬರ ಕಣ್ಣಿಗೆ, ಮನಸ್ಸಿಗೆ ಒಂದೊಂದು ಥರ. ಅವರವರು ಜೀವಿಸಿದ ಥರ. ಮೊದಲ ಬಿಂದುವಿನಿಂದ ಶುರುವಾದ ರೇಖೆ ಈಗ ಬಂದಿರುವಲ್ಲಿಗೆ ತಲುಪುವ ಕಾರ್ಯದಲ್ಲಿ ಅವರ ಕೊಡುಗೆಯೇ ಜಾಸ್ತಿ. ಇಂದಿನ ಕಾಲಬಿಂದುವಿಗೂ, ಆರಂಭದ ಕಾಲಬಿಂದುವಿಗೂ ಹೋಲಿಸಿಕೊಳ್ಳುವುದು ಬರಿಯ ಅನರ್ಥ.

ತಲತಲಾಂತರಗಳಿಂದಲೂ ಮಾನವನ ಭಾವನೆಗಳು, ಖುಷಿ ಮತ್ತು ದುಃಖಗಳ ನಡುವೆ ಬರುವ ಅಸಂಖ್ಯಾತ ಘಳಿಗೆಗಳ ಹದವಾದ ಮಿಶ್ರಣವೇ ಆಗಿದ್ದದ್ದು. ಎಂದಿನಿಂದಲೂ ಮನುಷ್ಯ ಸಂತೃಪ್ತಿಯನ್ನು ಪರಿಭಾಷಿಸಿರುವುದು ಹೋಲಿಕೆಗಳ ಮೂಲಕವೇ. ನಮ್ಮ ಸುಖದ ಪರಿಭಾಷೆ ರೂಪುಗೊಂಡಿರುವುದು ಕೆಳಗಿರುವವರನ್ನು ಹೋಲಿಸಿ ಸಮಾಧಾನಗೊಂಡು, ಮೇಲಿರುವವರನ್ನು ನೋಡಿ ಹಂಬಲಿಸಿಕೊಂಡು. ಈ ಹೋಲಿಕೆ ಅಸಂಬದ್ಧವೆನಿಸುವುದು ಹೋಲಿಕೆಯ ಕಾಲಮಾನಗಳು ಬದಲಾಗಿ, ಇಂದಿನ ಭಾವನೆಗಳನ್ನು ಅಂದಿನ ಭಾವನೆಗಳ ಜೊತೆ ತುಲನೆ ಮಾಡಿದಾಗ.

ವಿಕಸಿಕರು ತುಲನೆ ಮಾಡುವಾಗ ಮರೆತ ಮತ್ತೊಂದು ವಿಷಯವೆಂದರೆ ಅವರ ಪ್ರಾರಂಭದ ದಿನಗಳ ಸಾಮಾಜಿಕ ಪರಿಸ್ಥಿತಿಗಳನ್ನು. ಇಡಿಯಾಗಿ ಒಂದು ಸಮಾಜವೇ ಒಂದು ಕಾಲಘಟ್ಟದಲ್ಲಿ ಒಂದೇ ತೆರನಾಗಿ ಬದುಕುತ್ತಿರುವಾಗ, ಹೋಲಿಕೆ ಮಾಡಿಕೊಳ್ಳಬೇಕಾಗಿರುವುದು ಅದೇ ಸಮಾಜದ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಜೊತೆಗೆ, ಬದುಕುತ್ತಿರುವ ಸಹ ಜೀವಿಗಳ ಜೊತೆಗೆ ಹಾಗು ಅವರ ಜೀವನಗಳೊಂದಿಗೆ.

ನಾನು ಸಾಮಾನ್ಯ ಮನೆಯಲ್ಲಿ ಬದುಕುತ್ತಿರುವಾಗ ನೆರೆಯವನು ಅರಮನೆಯಲ್ಲಿ ಬದುಕುತ್ತಿದ್ದರೆ ಅದು ಕಣ್ಣು ಕುಕ್ಕುವ ವಿಷಯ. ಆತ ಕೂಡ ನನ್ನಂತೆಯೇ ಚಿಕ್ಕ ಮನೆಯಲ್ಲಿ ವಾಸಿಸುತ್ತಿದ್ದರೆ, ಇಡೀ ಊರಿಗೆ ಊರೇ ಅಂಥದ್ದೇ ಮನೆಯಲ್ಲಿ ಜೀವನ ಕಳೆಯುತ್ತಿದ್ದರೆ, ಮನೆ ಹೋಲಿಕೆಯ ಅಂಶವಾಗಿಯೇ ಉಳಿಯುವುದಿಲ್ಲ. ಮನೆಯ ಮಟ್ಟಿಗೆ ನಾನು ಸಂತೃಪ್ತ.

ವಿಕಸಿಕರು ಕೂಡ ತಮ್ಮ ಕಷ್ಟ ಕಾರ್ಪಣ್ಯದ ದಿನಗಳ ಬಗ್ಗೆ ಹೇಳಿಕೊಳ್ಳುವಾಗ ನಿಜವಾಗಿ ಕೇಳಿಕೊಳ್ಳಬೇಕಾಗಿರುವ ಪ್ರಶ್ನೆಯೆಂದರೆ, ಅಂದಿನ ಕಾಲಕ್ಕೆ ಅದು ಕಷ್ಟ ಕಾರ್ಪಣ್ಯದ ದಿನಗಳು ಎನಿಸಿದ್ದವೇ ಎಂದು. ನಾನು ರಾತ್ರಿ ಬರಿ ಗಂಜಿ ತಿಳಿ ಕುಡಿದು ಮಲಗುತ್ತಿದ್ದೆ ಎನ್ನುವಾಗ ನೆನಪಿಸಿಕೊಳ್ಳಬೇಕಾದದ್ದು ನನ್ನ ಊರಿನವರೇನು ಮೃಷ್ಟಾನ್ನ ಭೋಜನ ಸೇವಿಸಿ ಮಲಗುತ್ತಿದ್ದವರಲ್ಲ ಎಂಬುದನ್ನ. ಅಂದಿನ ರಾತ್ರಿಯ ಗಂಜಿ, ಇಂದಿನ ರಾತ್ರಿಯ ಭೋಜನದ ಜೊತೆ ಯಾವತ್ತೂ ಹೋಲಿಕಾರ್ಹ ವಿಷಯವಾಗಲಾರದು.

ಕಷ್ಟದ ಪರಿಭಾಷೆ ಹುಟ್ಟುವುದು ಸುಖದ ಪರಿಭಾಷೆ ಕಣ್ಣಿಗೆ ರಾಚಿದಾಗಲೇ. ಕಷ್ಟ ಸುಖದ ಪರಿಭಾಷೆಗಳು ವಿಕಸಿಕರಂತೆಯೇ ಕಾಲಮಾನಕ್ಕೆ ಸರಿಯಾಗಿ ಬೆಳೆದು ಬದಲಾಗಿ ವಿಕಸನಗೊಂಡಿದೆ ಎಂಬ ಅಂಶ ಕೂಡನೆನಪಿಲಟ್ಟಿಕೊಳ್ಳುವುದು ಬಹು ಮುಖ್ಯ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)