ಮಂಕು ಪಾರಿವಾಳ
|ಬೆಳಿಗ್ಗೆ ಬೇಗನೆ ಎಚ್ಚರವಾಯಿತು. ಸುಮ್ಮನೆ ಹೊರಗೆ ಬಂದು ಕೂತವನಿಗೆ, ಎದುರಿನ ಕಟ್ಟಡದಲ್ಲಿ ಒಂದು ಪಾರಿವಾಳ ತೋರಿತು. ಒಂದಷ್ಟು ಹೊತ್ತು ಸುಮ್ಮನೆ ದಿಗಂತದೆಡೆ ದಿಟ್ಟಿಸುತ್ತಾ, ಮರುಕ್ಷಣ ಆತಂಕದಿಂದ ಎಂಬಂತೆ ಆಚೆ ಈಚೆ ತಿರುಗಾಡುತ್ತಾ, ಮತ್ತೆ ಏನೋ ನೆನಪಾದಂತೆ ಆಲೋಚಿಸುತ್ತಾ, ತನ್ನ ಸಹವರ್ತಿಗಳ ಹಾರಾಟವನ್ನು ನೋಡುತ್ತಾ, ಕೆಳಗಡೆ ಆಗಲೇ ದಿನಚರಿಯಲ್ಲಿ ಈಜಲು ಸಿದ್ಧವಾಗುತ್ತಿರುವ ನಾಗರಿಕತೆಯನ್ನು ದಿಟ್ಟಿಸುತ್ತಿತ್ತು.
ಏನು ಆಲೋಚಿಸುತ್ತಿರಬಹುದು ಆ ಪಕ್ಷಿ? ಆ ಮಂಕು ಹಕ್ಕಿಯ ವೈಚಾರಿಕ ಸಾಮರ್ಥ್ಯ ಎಷ್ಟಿರಬಹುದು? ಇವತ್ತೇನು ತಿಂದು ಹೊಟ್ಟೆ ತುಂಬಿಸಿಕೊಳ್ಳಲಿ, ಇವತ್ತು ಯಾವ ಹೆಣ್ಣಿನ ಜೊತೆ ಸಂಭೋಗಿಸಲಿ, ಇಂದ್ಯಾವ ವಾಹನದ ಮೇಲೆ ಪಿಕ್ಕೆ ಹಾರಿಸಲಿ ಎಂದಷ್ಟೆಯೇ?
ಆ ಮಂಕುಪಕ್ಷಿಗೆ ಎಲ್ಲಿಂದ ಬಂದೆ ಎನ್ನುವ ಜ್ಞಾನವಿಲ್ಲ. ಎಲ್ಲಿಗೋ ಹೋಗಬೇಕೆಂಬುವ ಧಾವಂತವೂ ಇದ್ದಂತಿಲ್ಲ. ಗೂಬೆಗಿರುವ ಜ್ಞಾನವಿಲ್ಲ, ಕೋಗಿಲೆಯ ಮಾಧುರ್ಯವಿಲ್ಲ. ಅನುಭವಿಸಲಾರದಷ್ಟು ಸಂಪತ್ತನ್ನು ಹೇಗೆ ದುಡಿಯಲಿ, ತಲೆತಲೆಮಾರುಗಳು ತನ್ನನ್ನು ಸ್ಮರಿಸುವಂಥದ್ದೇನು ಮಾಡಲಿ, ಯಾರಿಗೆ ಸಹಾಯ ಮಾಡಲಿ, ಇನ್ಯಾರಿಗೆ ಮೋಸ ಮಾಡಲಿ, ಉಹುಂ, ಇಂತಹ ಯಾವ ಹುನ್ನಾರಗಳೂ ಅದಕ್ಕಿದ್ದಂತಿಲ್ಲ.
ಆದರೂ ಅದು ಏನೋ ಆಲೋಚಿಸುತ್ತಿತ್ತು. ಸ್ವಂತ ಬುದ್ಧಿಯಿಂದ ಆಲೋಚಿಸುತ್ತಿತ್ತು. ಅದರ ಕಿವಿಯಲ್ಲಿ ಕಿವಿಯಡಕದ ಮೂಲಕ ಹೀಗೆ ಬದುಕಬೇಕೆಂದು ಯಾರೋ ಗುಣುಗುಣಿಸುತ್ತಿರಲಿಲ್ಲ, ಸಹವರ್ತಿಗಳ ಜೀವನದ ಮಾನದಂಡವಿರಲಿಲ್ಲ, ಅದರ ಕೈಯಲ್ಲಿ ಸುದ್ದಿ ಬಿತ್ತುವ ದಿನಪತ್ರಿಕೆಯಾಗಲಿ, ಕಥೆ ಹೇಳುವ ಪುಸ್ತಕವಾಗಲಿ, ಪ್ರಪಂಚ ತೋರಿಸುವ ಬಣ್ಣದ ಪರದೆಯಾಗಲಿ ಇರಲಿಲ್ಲ. ಸರಿ ತಪ್ಪುಗಳೆಂದು, ಬದುಕಿಗೆ ಮಾದರಿ ಸಿದ್ಧಪಡಿಸಿಟ್ಟ ಬಂಧು ಬಾಂಧವರಿಲ್ಲ. ಮಂಕುಪಕ್ಷಿ ಯಾರ ಪ್ರಭಾವಕ್ಕೂ ಒಳಗಾಗದೆ ಸ್ವಂತವಾಗಿ ಆಲೋಚಿಸುತ್ತಿತ್ತು.