ಮಾಸಿದ ಕೋಟು

ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ತಿಥಿ ಆಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಇದೇ ಕಾರಣಕ್ಕಾಗಿ ರಂಜನಿ ಜೊತೆ ಈ ಚಿತ್ರವನ್ನು ಪುನಃ ನೋಡಲು ಕುಳಿತಾಗ ಸ್ವಲ್ಪ ಹಿಂಜರಿಕೆಯಂತೂ ಇದ್ದೇ ಇತ್ತು. ಎಲ್ಲಿ ಎಷ್ಟೋ ವರುಷಗಳ ನಂತರ ಮತ್ತೆ ನೋಡಿದಾಗ ಚಿತ್ರ ತನ್ನ ಹಳೆಯ ಸೊಬಗನ್ನು ಮರುಕಳಿಸುವಲ್ಲಿ ವಿಫಲವಾಗಬಹುದೇನೋ ಎಂದು.

ಬದುಕಿನ ವಿವಿಧ ಘಟ್ಟಗಳಲ್ಲಿ ನಮೂದಾಗುವ, ಹಲವು ದೃಶ್ಯಗಳ, ಕಥೆಗಳ, ವಸ್ತುಗಳ ಅಥವಾ ವ್ಯಕ್ತಿಗಳ ಜೊತೆ ನಾವು ವ್ಯಯಿಸಿದ ಸಮಯ, ಆ ಗಳಿಗೆಗಳಲ್ಲಿ ನಮಗೆ ಖುಷಿಯೋ, ದುಃಖವೋ, ನೆಮ್ಮದಿಯೋ ಅಥವಾ ಇದೆಲ್ಲವನ್ನೂ ಮೀರಿದ ಭಾವನೆಯ ಒಂದು ಛಾಪು ಮೂಡಿಸಿ ಹೋಗಿರುತ್ತದೆ. ಅಲ್ಲಿಂದ ಆ ಭಾವ ಜೀವಂತವಾಗಿರುವುದು ನಮ್ಮ ನೆನಪುಗಳಲ್ಲಿ ಮಾತ್ರ. ಅಂದು ಮೂಡಿದ ಅನುಭವವನ್ನು ನೆನಪಿನಲ್ಲೇ ಬಂಧಿಯಾಗಿರಿಸಿ ಮುಂದೆ ಬೇಕಾದಾಗ ಅದರ ಮೆಲುಕು ಹಾಕಿ ಸವಿಯುವುದರಲ್ಲೇ ನಿಜವಾದ ಸುಖವಿರುವುದು. ವರ್ಷಕ್ಕೊಮ್ಮೆ ಜರುಗುವ ಊರ ಜಾತ್ರೆಯಲ್ಲಿ ಮಾತ್ರ ಸಿಗುವ ಸಕ್ಕರೆ ಮಿಠಾಯಿ, ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾವ ತರುತ್ತಿದ್ದ ಆಟದ ಸಾಮಾನುಗಳು ಬಾಲ್ಯದ ಸವಿ ನೆನಪಿನ ಪೆಟ್ಟಿಗೆಯಲ್ಲೇ ಭದ್ರವಾಗಿರುತ್ತವೆ. ಬಾಲ್ಯದ ಗೆಳೆಯರು ಕೂಡ ಹಾಗೆಯೇ. ಅವರೊಂದಿಗೆ ಆಡಿದ ಆಟಗಳು, ಮಾಡಿದ ಚೇಷ್ಟೆಗಳು ನೆನಪುಗಳಲ್ಲಿಯೇ ಸುಂದರ. ಈ ಮಧುರ ಕ್ಷಣಗಳನ್ನು ಮತ್ತೆ ಸೃಷ್ಟಿಸಲು ಹೊರಡುವುದು, ಈ ನೆನಪುಗಳನ್ನು ಕೊಲ್ಲುವ ಸಲುವಾಗಿ ನಾವು ಮಾಡುವ ಪ್ರಮಾದವಷ್ಟೇ.

ಹಲವು ರುಚಿ ನೋಡಿದ ಈಗಿನ ನಾಲಿಗೆಗೆ ಜಾತ್ರೆಯ ಮಿಠಾಯಿ ಒಗ್ಗದು. ಎಷ್ಟೋ ವರುಷಗಳ ನಂತರ ಮಧ್ಯವಯಸ್ಸಿನಲ್ಲಿ, ತುಂಬಾ ನಿರೀಕ್ಷೆಗಳೊಂದಿಗೆ ಪುನಃ ಭೇಟಿಯಾದ ಹಳೆಯ ಮಿತ್ರನ ಮಾತುಗಳಲ್ಲಿ ಮೊದಲಿನ ಸ್ವಾರಸ್ಯವಿಲ್ಲ. ಕಾಲ ಆತನನ್ನೂ ಹದಗೊಳಿಸಿ ಮೆತ್ತಗಾಗಿಸಿದೆ. ಅಲ್ಲಿಯವರೆಗೆ ಕಟ್ಟಿಕೊಂಡು ಬಂದ ಸುಂದರ ಅನುಭವದ ನೆನಪಿನ ಕೋಟೆ ಅಲ್ಲಿಗೆ ಛಿದ್ರ.
ಇವೆಲ್ಲ ಕಲ್ಪಿತ ಭಯದಿಂದಲೇ ಮತ್ತೆ ಈ ಸಿನೆಮಾವನ್ನು ಹಿಂಜರಿಕೆಯಿಂದಲೇ ನೋಡಿದರೂ, ಮತ್ತೆ ಹೊಸದೇನನ್ನೋ ತೋರಿಸಿಕೊಡುವ ಮಾಂತ್ರಿಕತೆಯನ್ನು ತಾನು ಉಳಿಸಿಕೊಂಡಿದೆ ಎಂದು ತಿಥಿ ಸಾಬೀತುಪಡಿಸಿತು.

ಜನಜನಿತವಾಗಿರುವ ಗಡ್ದಪ್ಪ ಹಾಗು ಸೆಂಚುರಿ ಗೌಡನ ಹೊರತಾಗಿಯೂ ತಿಥಿ ಚಿತ್ರದಲ್ಲಿ ತುಂಬಾ ಸಾಮಾನ್ಯವೆನಿಸುವ, ಎಲ್ಲೂ ಅಷ್ಟೇನೂ ಢಾಳಾಗಿ ಗೋಚರಿಸದ ಕೆಲವು ಸೂಕ್ಷ್ಮವಾದ ಪಾತ್ರಗಳಿವೆ. ಮಾಸಿದ ಕರಿ ಕೋಟನ್ನು ಧರಿಸಿಕೊಂಡು ಹೊರಬರುವ ಶಾನುಭೋಗನ ಪಾತ್ರವೂ ಅಂಥದ್ದರಲ್ಲಿ ಒಂದು. ಚಿತ್ರದುದ್ದಕ್ಕೂ ಆತನ ಪ್ರಾಧಾನ್ಯತೆ ನಗಣ್ಯವೆನಿಸುವಂಥದ್ದು. ಹೆಂಡತಿಯಿಂದ ಛಿ ಥು ಎನಿಸಿಕೊಳ್ಳುವ, ಊರವರ ಗೇಲಿಯ ವಸ್ತುವಾಗಿರುವ, ಎಲ್ಲೂ ಸಲ್ಲದೇ, ಗಣನೆಗೆ ಬರದಂಥ ಹಳ್ಳಿಗ. ಆತ ಗತಕಾಲದಲ್ಲಿ ಆ ಹಳ್ಳಿಯ ನಿರಕ್ಷರ ಕುಕ್ಷಿಗಳು ಹಾಗು ಪಟ್ಟಣದ ಸರಕಾರೀ ಕಛೇರಿಗಳಲ್ಲಿ ಕುಳಿತಿರುವ ರಣಹದ್ದುಗಳ ನಡುವೆ ಕೊಂಡಿಯಂತಿದ್ದ ದಲ್ಲಾಳಿ. ಸಮಯ ಕಳೆದಂತೆ, ಅಧಿಕಾರಿಗಳು ಬದಲಾದಂತೆ, ಜನ ಅಲ್ಪಸ್ವಲ್ಪ ಜ್ಞಾನ ಗಳಿಸಿದಂತೆ ಹಳ್ಳಿಯಲ್ಲಿ ಆತನ ಪ್ರಸ್ತುತತೆ ಕ್ಷೀಣಿಸಿ ಇಲ್ಲವೆಂಬಂತಾಗಿದೆ. ಮನೆಯ ಒಳಗೂ ಹೊರಗೂ ಆತನಿಗೆ ಕೀಮತ್ತಿಲ್ಲ. ಆಚೆ, ಹಳ್ಳಿಯವರಂತೆ ಮೈ ಮುರಿದು ದುಡಿದು ಬೇಸಾಯ ಮಾಡದೆ, ಈಚೆ, ಬದಲಾದ ಕಾಲದ ನಗರದ ವ್ಯವಹಾರಗಳಿಗೂ ಸೈ ಎನಿಸಿಕೊಳ್ಳದೆ ಅಬ್ಬೆಪಾರಿಯಂತಾಗಿರುವ ಜೀವನ ಶಾನುಭೋಗನದ್ದು. ಇಷ್ಟಾದರೂ ಆತ ಇತರ ಹಳ್ಳಿಯವರಂತೆ ಲುಂಗಿ ಬನಿಯನ್ನಿನಲ್ಲಿ ಮನೆ ಬಿಡಲಾರ. ಮನೆಯಿಂದ ಆತ ಹೊರ ಬರುವುದು ತನ್ನ ಮಾಸಿದ ಕಪ್ಪು ಕೋಟಿನಲ್ಲಿಯೇ. ಅದು ಆತನಿಗೆ ತನ್ನ ಗತ ವೈಭವದ ನೆನಪು. ಆತನ ಏಕೈಕ ಅಸ್ತಿತ್ವದ ಗುರುತು. ತಾನೇ ಕಟ್ಟಿಕೊಂಡಿರುವ ಭ್ರಮೆಯ ಕನ್ನಡಿ. ಊರ ಜನಗಳ ಮಧ್ಯೆ ತನ್ನ ಪ್ರಾಧಾನ್ಯತೆಯನ್ನು ತೋರಿಸಿಕೊಳ್ಳುವ ಆತನ ಕೊನೆಯ ಉತ್ಕಟವಾದ ಪ್ರಯತ್ನ. ಆತನಿಗೂ ಗೊತ್ತು, ಆ ಕರಿ ಕೋಟಿನ ಹೊರಗೆ, ಸಮಾಜದ ಮುಂದೆ ತನ್ನ ಇರುವಿನ ಗುರುತೇ ಇಲ್ಲವೆಂಬುದು.

ನಾವೆಲ್ಲರೂ ಒಳಗೆಲ್ಲೋ ಈ ಶಾನುಭೋಗನನ್ನು ಬೆಳೆಸಿಕೊಂಡೇ ಬಂದಿರುತ್ತೇವಾ? ಒಂದು ಮಗು ಹಾಗೆ ಸುಮ್ಮನೆ ಖುಶಿಯಾಗಿ ಹಾಡಿರುವುದನ್ನೇ ಹೆತ್ತವರು ಸಂಬಂಧಿಕರ ಮುಂದೆ ಹಾಡಿ ಹೊಗಳಿ ಮಗುವನ್ನು ಸುಮ್ಮನೆ ಅಟ್ಟಕ್ಕೇರಿಸಿರುತ್ತಾರೆ. ಕ್ರೀಡೆಯಲ್ಲೋ, ಕಲೆಯಲ್ಲೋ, ಮಾತುಗಾರಿಕೆಯಲ್ಲೋ, ನಟನೆಯಲ್ಲೋ ಅಥವಾ ಜಗತ್ತು ಬೆರಗಿನಿಂದ ನೋಡುವ ಇನ್ಯಾವುದೋ ವಿಷಯದಲ್ಲೋ ಒಮ್ಮೆಯಾದರೂ ನಾವೆಲ್ಲ ನಮ್ಮನ್ನು ತೊಡಗಿಸಿಕೊಂಡು ನಮ್ಮನು ಸಾಬೀತುಪಡಿಸಿಕೊಳ್ಳುವ ಪ್ರಯತ್ನವನ್ನಂತೂ ಖಂಡಿತ ಮಾಡಿರುತ್ತೇವೆ. ಇಂಥದ್ದೇ ಯಾವುದೋ ಪ್ರಯತ್ನವೇ ನಮ್ಮ ಅತೀ ಸಾಧಾರಣವಾದ ಪ್ರತಿಭೆಯನ್ನು ಕೂಡ ಹೊರ ತಂದಿರುತ್ತದೆ. ಪ್ರೋತ್ಸಾಹ ನೀಡಲೋ, ಅಥವಾ ಕಟು ಟೀಕೆ ಮಾಡಿ ಸಂಬಂಧ ಕೆಡಿಸಿಕೊಳ್ಳುವ ಭಯದಿಂದಲೋ ನಮ್ಮ ಸುತ್ತಲಿನವರು, ಒಳಗಿಂದ ಗೇಲಿ ಮಾಡಿಕೊಂಡರೂ, ಎದುರಿಗೆ ಸುಮ್ಮ ಸುಮ್ಮನೆ ಹಾಡಿ ಹೊಗಳುತ್ತಾರೆ. ಯಾವುದೋ ಬಣ್ಣದ ಕೋಟನ್ನು ಹೇಳ ಕೇಳದೆ ನಮಗೆ ಧರಿಸಿಯೇ ಬಿಡುತ್ತಾರೆ. ಕೋಟು ನಮಗೆ ಹೋಲುತ್ತದೆಯೋ ಎಂಬ ವಿವೇಚನೆ ಕೂಡ ಮಾಡದೆ ನಾವು ಆಗಲೇ ಅದನ್ನು ಧರಿಸಿಕೊಂಡು ಊರ ತುಂಬಾ ಮೆರೆಯಲು ಶುರು ಮಾಡಿಯೇ ಬಿಟ್ಟಿರುತ್ತೇವೆ. ಧರಿಸಿದ ಕೋಟು ನಮಗೆ ಸಮಾಧಾನ, ಆರಾಮ ನೀಡುತ್ತಿದೆಯೇ ಎಂದು ವಿವೇಚಿಸುವ ಅವಶ್ಯಕತೆಯೂ ತೋರುವುದಿಲ್ಲ. ಪ್ರಪಂಚಕ್ಕೆ ನಾವು ಚಂದ ಕಾಣಿಸಬೇಕು. ಚಂದ ಕಾಣಿಸದಿದ್ದರೂ ತೊಂದರೆಯಿಲ್ಲ, ಕಡೆ ಪಕ್ಷ ಕಾಣಿಸಬೇಕಷ್ಟೆ.

ಮುಂದೆಂದೋ ಮಧ್ಯವಯಸ್ಸಿನಲ್ಲಿ ಕಾಲ ಕನ್ನಡಿ ಹಿಡಿಯುತ್ತದೆ. ಇಷ್ಟು ದಿನ ಧರಿಸಿಕೊಂಡು ಮೆರೆದ, ಕಾಲದ ಬಿಸಿಲಿಗೆ ಬಣ್ಣ ಮಾಸಿದ ಕೋಟು ನಮ್ಮ ವ್ಯಕ್ತಿತ್ವಕ್ಕೆ ಹೇಳಿಸಿದ್ದಲ್ಲ ಎಂದು ಅರಿವಾಗುವಾಗ ಹೊತ್ತಿಗೆ ಸಮಯ ಮೀರಿರುತ್ತದೆ. ಬೇರೆ ಕೋಟು ನಮ್ಮಲ್ಲಿಲ್ಲ, ಹೊಸದು ಹೊಲಿಸಿಕೊಳ್ಳಲು ಸಾಕಷ್ಟು ಸಮಯವಿಲ್ಲ, ಚೈತನ್ಯವೂ ಉಳಿದಿರುವುದಿಲ್ಲ. ಶಾನುಭೋಗನಂತೆ ಮಾಸಿದ ಕೋಟನ್ನೇ ಧರಿಸಿಕೊಡು, ಕಳೆದು ಹೋದ ಅಸ್ತಿತ್ವವನ್ನು ಹುಡುಕುತ್ತಲೇ ಇರುವುದೊಂದೇ ಉಳಿದ ದಾರಿ.

“Just as in the second part of a verse bad poets seek a thought to fit their rhyme, so in the second half of their lives people tend to become more anxious about finding actions, positions, relationships that fit those of their earlier lives, so that everything harmonizes quite well on the surface: but their lives are no longer ruled by a strong thought, and instead, in its place, comes the intention of finding a rhyme.”
― Friedrich Nietzsche

2 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)