Deprecated: Methods with the same name as their class will not be constructors in a future version of PHP; ReCaptcha has a deprecated constructor in /home/u564312884/domains/beenecheela.in/public_html/wp-content/plugins/wp-recaptcha/recaptchalib.php on line 42

Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ವಿ'ಚಿತ್ರ' - ಬೀಣೆ ಚೀಲ

ವಿ’ಚಿತ್ರ’

“ನಮಸ್ಕಾರ ಫ್ರೆಂಡ್ಸ್. ನೀವು ಈಗ ನೋಡ್ತಾ ಇದ್ದೀರಾ ಬಿಜಾಪುರದ ಗೋಲಗುಂಬಜ್…”
ಆತ ಇತ್ತೀಚೆಗಷ್ಟೇ ಪ್ರಸಿದ್ಧಿ ಪಡೆಯುತ್ತಿರುವ ಒಬ್ಬ youtuber ಪ್ರವಾಸಿಗ. ಆತ ತನ್ನ ಚಾನೆಲ್ ನ ವೀಕ್ಷಕರಿಗೆ ಜಾಗಗಳನ್ನು ತೋರಿಸುವ ಪಡುವ ಶ್ರಮ ಅಷ್ಟಿಷ್ಟಲ್ಲ. ತಾನು ಮಾಡುತ್ತಿರುವುದು ಸಮಾಜ ಸೇವೆಯ ಪರಾಕಾಷ್ಠೆ ಎಂದೇ ಆತನ ನಂಬಿಕೆ. ದುರದೃಷ್ಟವಶಾತ್ ಆತ ಯಾವುದೇ ಜಾಗ ತೋರಿಸ ಹೋದರೂ, ಪರದೆಯ ಮುಕ್ಕಾಲು ಭಾಗ ಆತನ ಮುಖವೇ ಆವರಿಸಿಕೊಂಡಿರುತ್ತದೆ. ಉಳಿದ ಕಾಲು ಭಾಗದಲ್ಲಿ ಮಾತ್ರ ಪ್ರೇಕ್ಷಣೀಯ ಸ್ಥಳಗಳಿಗೆ ಇಣುಕಲು, ತಮ್ಮನ್ನು ತೋರಿಸಿಕೊಳ್ಳಲು ಅವಕಾಶ.

Vlogging

ಆತ ತನ್ನನ್ನು ಜನರಿಗೆ ತೋರಿಸಿ, ತಲುಪಿಸಿ ಪ್ರಸಿದ್ಧ ಮಾಡಿಸುತ್ತಿದ್ದಾನೆ ಎಂದು, ವೀಕ್ಷಕರು ತನ್ನನ್ನು ನೋಡಲು ತವಕಿಸಿ ಆನಂದಿಸುತ್ತದ್ದರೆ ಎಂಬ ಭ್ರಮೆ ಗುಂಬಜದ್ದು.
ಗುಂಬಜಕ್ಕೇನು ಗೊತ್ತು ಆತ ತೋರಿಸುತ್ತಿರುವುದು ಅವನ ಸ್ವಂತ ಜೀವನದ ದಿನಗಳು ಎಷ್ಟೊಂದು ಸಾಹಸಮಯ, ಉಲ್ಲಾಸಮಯ, ಜೀವನ್ಮುಖಿಯಾಗಿರುತ್ತದೆ ಎಂತೆಂದು.
ಗುಂಬಜಕ್ಕೇನು ಗೊತ್ತು ವೀಕ್ಷಕನು ನೋಡಿ ಸಮಾಧಾನ ಪಟ್ಟಿಕೊಳ್ಳುತ್ತಿರುವುದು, ತೋರಿಸುತ್ತಿರುವವನ ಜೀವನಶೈಲಿಯನ್ನು, ಆತ ಹಾಕಿರುವ ಸಾಮಾನ್ಯ ಉಡುಗೆಯನ್ನು, ಆತ ಬದುಕುತ್ತಿರುವ ರೀತಿಯನ್ನು, ಮಾಡುವ ತಪ್ಪುಗಳನ್ನು, ಮಾಡದಿರುವ ಸರಿಗಳನ್ನು ಎಂದು,
ಆತನ ಬದುಕನ್ನು ತನ್ನ ಬದುಕಿನ ಜೊತೆ ತಕ್ಕಡಿಯಲ್ಲಿ ತೂಗಿ ಅಳೆದಾಗ ತನ್ನ ತಟ್ಟೆ ಭಾರವಾಗಿ ಕೆಳಗಿಳಿಯುತ್ತಿರುವುದನ್ನು ಕಲ್ಪಿಸಿ ಪಡುವ ಸಂತೋಷಕ್ಕೆಂದು.
ಪೆದ್ದು ಗುಂಬಜಕ್ಕೇನು ಗೊತ್ತು ಅದೊಂದು ನೆಪ ಮಾತ್ರಕ್ಕೆಂದು.


ದಿನ ಕಳೆದಂತೆ ಮನುಷ್ಯನಿಗೆ ಪ್ರಪಂಚವನ್ನು ತನ್ನ ಸುತ್ತಲೇ ಸುತ್ತಿಸಿಕೊಳ್ಳುವ ಹಂಬಲ ಜಾಸ್ತಿಯಾಗಿದೆಯೋ ಅಥವಾ ಮೊದಲಿನಿಂದ ಸುಪ್ತವಾಗಿದ್ದ ಬಯಕೆಗೆ ಒಂದು ವೇದಿಕೆ ಈಗ ಸಿಕ್ಕಿದೆಯೋ?

'Go Selfie Yourself'

ಸಭೆ ಸಮಾರಂಭಗಳಲ್ಲಂತೂ ಕೋಲಿನಂತೆ ಕೈ ಮುಂದೆ ಮಾಡಿ, ತಮ್ಮ ಸುಂದರವಾದ ಮುಖವನ್ನೇ ಫೋನಿನ ಪರದೆಯ ಮೇಲೊಮ್ಮೆ ನೋಡಿ, ಮತ್ತೊಮ್ಮೆ ತಮ್ಮ ಮೇಲೆಯೇ ಪ್ರೀತಿ ಬರಿಸಿಕೊಂಡು, ಹಲ್ಲು, ಬಾಯಿ, ನಾಲಿಗೆ, ತುಟಿ, ಕೈ ಬೆರಳುಗಳನ್ನು ವೈವಿಧ್ಯಕರ ಆಕಾರ, ವಿಕಾರ ಮಾಡಿ, ಅನಿಯಮಿತವಾಗಿ ಚಿತ್ರ ತೆಗೆಸಿಕೊಳ್ಳುವ ಸಂಭ್ರಮ ಎಲ್ಲರ ಮುಖದಲ್ಲೂ.
ಹೀಗೆ ಪ್ರಪಂಚಕ್ಕೆ ಬಂದ ಆ ಮುಗ್ಧ ಚಿತ್ರಗಳನ್ನು ನೋಡಿ ಚಿತ್ರದಲ್ಲಿರುವವರು ಸಂತೋಷಪಟ್ಟುಕೊಳ್ಳುವುದು ಹೆಚ್ಚೆಂದರೆ 3 ದಿನಗಳಿರಬಹುದು. 5 ನೇ ದಿನಕ್ಕಾಗಲೇ ವಾಂತಿ ಬರುವಷ್ಟು ಬಾರಿ ತಮ್ಮನು ತಾವೇ ನೋಡಿಕೊಂಡು, ದೂರದ ಸಾಮಾಜಿಕ ಜಾಲ, ಗುಂಪುಗಳಲ್ಲಿ ಹರಿಬಿಟ್ಟು, ಹರಿದು ಬರುವ ಜನರ ಶ್ಲಾಘನೆಗೆ ಹಿಗ್ಗಿ, ತಿರಸ್ಕಾರಕ್ಕೆ ಕುಗ್ಗಿ ಚಿತ್ರ ಅದಾಗಲೇ ಹಳಸಿರುತ್ತದೆ.


ಅಷ್ಟಕ್ಕೂ ನಾವೇಕೆ ಇಷ್ಟೊಂದು ನಮ್ಮದೇ ಚಿತ್ರಗಳನ್ನು ತೆಗೆದುಕೊಳ್ಳುತ್ತೇವೆ?

ನೆನಪುಗಳನ್ನು ಕಾದಿರಿಸಲೆಂದು.

ಸುಮ್ಮನೆ 30 ವರ್ಷದ ಹಳೆಯ ಒಂದು ಸಮಾರಂಭದ 5 ಬೇರೆ ಬೇರೆ ಚಿತ್ರಗಳನ್ನು ನೋಡಿದರು ಸಾಕು ಅರಿವಾಗಲು, ನೆನಪುಗಳ ಮರುಕಳಿಕೆಗೂ, ಚಿತ್ರಗಳ ಸಂಖ್ಯೆಗೂ ಸಂಬಂಧವಿಲ್ಲವೆಂದು.
ಈಗ ನಡೆಯುವ ಸಮಾರಂಭಗಳ 5೦೦ ಚಿತ್ರಗಳನ್ನು ತೆಗೆಯುವ, ತೆಗೆಸಿಕೊಳ್ಳುವ ಅವಧಿಯಲ್ಲಿ ಸಮಾರಂಭವನ್ನು ನಾವೆಷ್ಟು ನಿಜವಾಗಿ ಅನುಭವಿಸುತ್ತೇವೆ? ನೆನಪು ಮಾಸದಿರುವುದು ಚಿತ್ರಗಳ ಸಂಗ್ರಹದಿಂದಲೋ, ನಮಗಾದ ಅನುಭವಗಳಿಂದಲೋ? ಸದಾ ವರ್ತಮಾನವನ್ನು ಚಿತ್ರಗಳ ಮೂಲಕವೇ ಹಿಡಿದಿಡಲು ಪ್ರಯತ್ನಿಸುವ ನಾವೇಕೆ ವರ್ತಮಾನವನ್ನು ಅನುಭವಗಳ ಮೂಲಕ ಅದನ್ನು ಅಮರವನ್ನಾಗಿಸಲು ಯತ್ನಿಸುವುದಿಲ್ಲ?

ಅತಿಯಾದ ನಮ್ಮದೇ ಚಿತ್ರಗಳನ್ನು ನಾವು ತೆಗೆಸಿಕೊಳ್ಳುವ ಪ್ರವೃತ್ತಿ ಬೆಳೆದಿರುವುದು ಕೇವಲ ನಾವು ಆ ಕ್ಷಣದಲ್ಲಿ ಹೇಗೆ ತೋರುತ್ತಿದ್ದೇವೆಂದು ಅರಿತುಕೊಳ್ಳಲು, ಚಿತ್ರದಲ್ಲಿ ನಮ್ಮ ಜೊತೆಗಿರುವ ಇತರ ಮಂದಿಯೊಡನೆ ತುಲನೆ ಮಾಡಿಕೊಳ್ಳಲಷ್ಟೇ ಇರಬಹುದೇ?. ಅಷ್ಟಕ್ಕೂ ಈ ಪರಿಯಾದ ಸ್ವ ಭ್ರಾಂತಿ ಹುಟ್ಟಿದ್ದು ಹೇಗಿರಬಹುದು? 2೦ ವರುಷಗಳ ಹಿಂದಕ್ಕೆ ಹೋದರೆ ಜನರ ಸ್ವ ಅಲಂಕಾರ ಆಲೋಕನ ಕೇವಲ ಕನ್ನಡಿಗಷ್ಟೇ ಸೀಮಿತವಾಗಿತ್ತು. ಅದಕ್ಕೂ ಹಿಂದೆ 5೦ ವರ್ಷಗಳ ಹಿಂದಕ್ಕಂತೂ ಕೇವಲ ಮುಖ ತೋರುವ ಕನ್ನಡಿಯಲ್ಲಷ್ಟೇ ಜನ ತಮ್ಮ ಅಲಂಕಾರವನ್ನೊಮ್ಮೆ ನೋಡಿಕೊಳ್ಳುತ್ತಿದ್ದದ್ದು. ಅದೇಕೆ ಈಗ ಸ್ವ ಪ್ರದರ್ಶನ ಈ ಮಟ್ಟಿಗೆ ನಮ್ಮನ್ನು ಆವರಿಸಿಕೊಂಡಿದೆ?


ಸ್ವಾಭಾವಿಕವಾಗಿ ಇತರರ ದೃಷಿಯಲ್ಲಿ ತನ್ನನ್ನು ನೋಡಿಕೊಳ್ಳಲು ಮನುಷ್ಯ ಇಂದಿಗೂ ಎಂದಿಗೂ ಅಸಹಾಯಕನೇ.

ಬೇರೆಯವರ ಚಪ್ಪಲಿಯನ್ನು ಹಾಕಿಕೊಳ್ಳುವ ಪ್ರಯತ್ನವೇನೋ ಮಾಡಬಹುದು, ಆದರೆ ಆ ಚಪ್ಪಲಿ ನಿಮಗೂ, ಅದರ ಮಾಲೀಕನಿಗೂ ಒಂದೇ ತೆರನಾದ ಅನುಭವವನ್ನಂತೂ ನೀಡದು.

ನನ್ನೆದುರಿಗೆ ನಿಂತವನಿಗೆ ನಾನು ಹೇಗೆ ತೋರುತ್ತಿರಬಹುದೆಂದು ನಾನು ಕಲ್ಪಿಸಿಕೊಳ್ಳಬಹುದಷ್ಟೆ. ಎಷ್ಟೋ ಬಾರಿ ನಾನು ನಗು ಮುಖದಲ್ಲೇ ಮಾತಾಡಿದೆ ಎಂದೆನಿಸಿಕೊಳ್ಳುತ್ತಿರುವಾಗಲೇ ಎದುರಿಗೆ ನಿಂತ ಮಹಾನುಭಾವರು, ಮುಖ ಯಾಕೆ ಗಂಟಿಕ್ಕಿಕೊಂಡಿದೆ ಎಂದು ಕೇಳಿದ್ದಿದೆ. ೫೦ ವರುಷಗಳ ಹಿಂದೆ ಇತರರಿಗೆ ನಾವು ಹೇಗೆ ತೋರುತ್ತಿರಬಹುದೆಂದು ತೋರಿಸುವ, ಎದುರು ಇರುವವರಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ನಮ್ಮ ರೂಪವನ್ನು ಪ್ರದರ್ಶಿಸುವ ಸಾಧನ ಸೌಕರ್ಯಗಳಿರಲಿಲ್ಲ. ಸಂಭಾಷಣೆಗಲ್ಲಿ, ನಡೆ ನುಡಿಗಳಲ್ಲಿ, ಎಲ್ಲೋ ಅಚಾನಕ್ಕಾಗಿ ಘಟಿಸುವ, ಅಲ್ಲೇ ಮರೆಯಬಹುದಾದಂತ ಚಿಕ್ಕ ಲೋಪ ದೋಷ, ಅಚಾತುರ್ಯಗಳನ್ನು ಸಂಗ್ರಹಿಸಿಕೊಂಡು ಮುಂದೆಂದೋ ಅದನ್ನ ಅವಲೋಕಿಸಿ ಕೀಳರಿಮೆ ಬೆಳೆಸಿಕೊಳ್ಳುವ ಅವಕಾಶವಿರಲಿಲ್ಲ. ಇಂದು ಹಾಗಲ್ಲ. ಆ ಕ್ಷಣದಲ್ಲಿ ಅರಿಕೆಯಾಗದಿದ್ದರೂ, ನನ್ನ ಹೊರರೂಪವನ್ನು ಇನ್ನೊಬ್ಬನ ದೃಷಿಯಿಂದ ನೋಡಿ, ಸುಧಾರಿಕೊಳ್ಳುವ ಅವಕಾಶ ನನಗಿದೆ. ದುರಂತವೆಂದರೆ, ಇದೇ ಅವಕಾಶ, ಬಯಕೆಯಾಗಿ ಮಾರ್ಪಟ್ಟಿರುವುದು. ಬಯಕೆಗೆಲ್ಲಿದೆ ಕೊನೆ?


ನಾವೇನು, ನಾವೇನಲ್ಲ ಎಂದು ಸಮಾಜಕ್ಕೆ ತೋರಿಸಿಕೊಳ್ಳುವ ಅದಮ್ಯ ಬಯಕೆ ನಮಗೆ.
ನಮ್ಮ ಬದುಕಿನ ಸುಂದರ ಕ್ಷಣಗಳನ್ನು ಇನ್ನಷ್ಟು ಸುಂದರವಾಗಿ ಸಮಾಜದ ಮುಂದೆ ಪ್ರದರ್ಶಿಕೊಳ್ಳಬೇಕು.
ಅದನ್ನು ನೋಡಿ ಖುಷಿಪಟ್ಟಂತೆ ತೋರ್ಪಡಿಸುವ ಆಪ್ತರ ತೋರ್ಪಡಿಕೆಯನ್ನು ನೋಡಿ ನಾನು ಮತ್ತಷ್ಟು ಸುಂದರವಾಗಿ ನನ್ನ ಬದುಕನ್ನು ಕಲ್ಪಿಸಿಕೊಳ್ಳಬೇಕು.
ನನಗೂ ಗೆಳೆಯರಿದ್ದಾರೆ, ನಾನು ಕೂಡ ಸಮಾಜ ಮುಖಿ, ಪ್ರವಾಸಕ್ಕೆ ನಾನು ಹೋಗುತ್ತೇನೆ, ಸಮಾರಂಭಗಳಲ್ಲಿ ನಾನು ಕೂಡ ಮೆರೆಯುತ್ತೇನೆ, ಮೋಜೇ ನನ್ನ ಜೀವನ, ಪುಸ್ತಕಗಳನ್ನು ಓದುತ್ತೇನೆ, ಚಿತ್ರ ಬಿಡಿಸುತ್ತೇನೆ, ಸಂಗೀತ, ಕುಣಿತವಂತೂ ಕೇಳಲೇ ಬೇಡಿ. ಸುಂದರವಾದ ಕುಟುಂಬ ನನ್ನದು, ಕಚೇರಿಯಲ್ಲಂತೂ ಎಲ್ಲರೂ ಗೆಳೆಯರೇ. ಹಬ್ಬ ಹರಿದಿನಗಳಷ್ಟು ಸಂಭ್ರಮದ ದಿನ ನನಗೆ ಬೇರಿಲ್ಲ. ಪೂಜ್ಯ ತಂದೆ ತಾಯಿಯವರನ್ನು Father’s Day ಹಾಗು Mother’s Day ಯಂದು ತಪ್ಪದೆ ನೆನಪಿಸಿಕೊಳ್ಳುತ್ತೇನೆ. ಅಸಂಖ್ಯ ಗೆಳಯರೇ ತುಂಬಿರುವ ನನ್ನ ಜೀವನದಲ್ಲಿ ವಾಟ್ಸ್ ಅಪ್ಪ ಬಳಗದಲ್ಲಿ ಯಾರೋ ಒಬ್ಬ, ಯಾರೋ ಇನ್ನೊಬ್ಬನ, ಯಾವುದೋ ಸಮಾರಂಭ ನಿಮಿತ್ತ ಶುಭ ಕೋರಿದ ಗಳಿಗೆಯಲ್ಲೇ, ನನ್ನ ಗೆಳೆತನ ಕೂಡ ಜಾಗ್ರತವಾಗಿ ಶುಭಾಶಯ ತಿಳಿಸದೆ ಬಿಟ್ಟದ್ದಿಲ್ಲ.


ಬೇಕಾಬಿಟ್ಟಿಯಾಗಿ ಹರಿದಾಡುವ ಅತಿಯಾದ ಮಾಹಿತಿಯಿಂದ ಜ್ಞಾನ ಸಂಪಾದಿಸಿಕೊಂಡಿರುವ ಭ್ರಮೆಯಲ್ಲಿರುವ ನಾನು, ನನ್ನದೇ ಆದ ಪ್ರಪಂಚವನ್ನು ಅಳೆಯುವ ಮಾಪನವನ್ನು ಸ್ವಂತಕ್ಕೆಂದು ತಯಾರಿಸಿಕೊಂಡಿದ್ದೇನೆ. ಪ್ರಪಂಚ ನನ್ನನ್ನು ಕೂಡ ಅದೇ ಮಾಪನದಿಂದ ಅಳೆಯುತ್ತಿದೆ ಎಂಬ ಭ್ರಾಂತಿಯಲ್ಲಿ ಆ ಮಾಪನದ ತುದಿಯನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇನೆ.


ಯಾವತ್ತೋ ಮರೆತ ಗೆಳಯರೋ, ಒಳಗೊಳಗೇ ಸಣ್ಣದಾಗಿ ಉರಿದುಕೊಂಡೇ ನಗುಮುಖದೊಂದಿಗೆ ವ್ಯವಹರಿಸುವ ಸಮಕಾಲೀನ ಸಂಬಂಧಿಗಳೋ ಎಲ್ಲೋ ಸಭೆ ಸಮಾರಂಭಗಳಲ್ಲೋ ಸಿಕ್ಕಿದಾಗ, ಅತೀ ಆತ್ಮೀಯನಾಗಿ, ಹೆಗಲಿನ ಮೇಲೆ ಹೆಗಲಾಗಿ ಒಂದು ದೊಡ್ಡ ಚಿತ್ರದ ಫ್ರೇಮಿನೊಳಗೆ ತೂರಿಕೊಂಡು ನನ್ನ ಅನ್ಯೋನ್ಯತೆಯ ಪ್ರತೀಕವೆಂಬಂತೆ ಸಮಾಜಕ್ಕೆ ಪ್ರಕಟಿಸಿಕೊಳ್ಳುತ್ತೇನೆ. ಅಲ್ಲಿಗೆ ನಾನು ತೃಪ್ತ. ಸ್ನೇಹಮಯ ಜಗತ್ತಿನ ಒಂದು ಭಾಗ.


ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಾಲ ಅಲ್ಲಾಡಿಸಿಕೊಂಡು ಚೋಟುದ್ದದ ಕಾಲಿನ ಮೂಲಕವೇ ಚೋಟು ಹೊಡೆಯುತ್ತಾ, ಪ್ರೀತಿ ಕೊಟ್ಟು, ಪ್ರೀತಿ ನಿರೀಕ್ಷೆ ಮಾಡುವ ಬೀದಿ ಬದಿಯ ನಾಯಿ ಮರಿಗೆ ತನ್ನ ರೂಪದ ಅರಿವಿಲ್ಲ ಅದರ ಅವಶ್ಯಕತೆಯೂ ಇದ್ದಂತಿಲ್ಲ. ಫೋನಿನ ಇನ್ನೊಂದು ಬದಿಯ ಕ್ಯಾಮೆರಾ ಇನ್ನೂ ಶ್ರೇಷ್ಠ, ನನ್ನನ್ನು ಹೊರತುಪಡಿಸಿದಂತ ಜಗತ್ತಿನ ಥರವೇ. ಪರದೆಯ ಮೂಲಕ ಮೂಡುವ ಚಿತ್ರಕ್ಕಿಂತ ಕಣ್ಣಿಗೆ ತೋರುವ ದೃಶ್ಯ ಇನ್ನೂ ಸುಂದರ. ತೆರೆದು ನೋಡಬಲ್ಲ ಒಳದೃಷ್ಟಿ ಇರಬೇಕಷ್ಟೆ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)