‘ನಗರಿ’ಕಥೆ

(ಸೆಪ್ಟೆಂಬರ್ 7, 2016 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಪಿ . ಕುಸುಮಾ ಆಯರಹಳ್ಳಿ ಅವರ ‘ಕ್ರಾಸ್ ಕನೆಕ್ಷನ್’ ಅಂಕಣದ ಬರಹದ ಪ್ರತಿಯಾಗಿ ನನ್ನ ಅನಿಸಿಕೆ.)

ಆಧುನಿಕತೆಯ ಗಾಳಿ ನಿಧಾನಕ್ಕೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿರುವ ಸಮಯದಲ್ಲಿ ಎಲ್ಲಿ ನಮ್ಮ ಸಾಂಪ್ರದಾಯಿಕ ಆಚಾರ, ವಿಚಾರಗಳು ಹೊರಗಿನ ಯಾವುದೋ ಸಂಸ್ಕೃತಿಯೊಂದಿಗೆ ಮಿಳಿತವಾಗುತ್ತಿರುವ ಬಗ್ಗೆ ಆಗುತ್ತಿರುವ ಆತಂಕ 80, 90 ರ ದಶಕದಲ್ಲಿ ಹುಟ್ಟಿದ ನಮ್ಮಂಥವರಿಗೆ ಸಾಮಾನ್ಯ. ಯಾವುದೇ ಮಾಧ್ಯಮದಲ್ಲಿ ಒಂದು ಸಲ ನಮ್ಮ ಕಾಲದಲ್ಲಿ ಪ್ರಚಲಿತವಿದ್ದ, ಈಗ ನಿಧಾನಕ್ಕೆ ನಶಿಸುತ್ತಿರುವ ಕುರುಹು ನೀಡುತ್ತಿರುವ ವಿಚಾರಗಳ ಬಗ್ಗೆ ಯಾರಾದರೂ ಬಿಡಿಸಿ ಕಣ್ಣಿಗೆ ಕಟ್ಟುವಂತೆ ಹೇಳುವುದನ್ನು ಕೇಳಲು ನಮಗೆ ಈಗಲೂ ಅತೀ ಸಂತೋಷ ಮತ್ತೆ ಅದರ ಬೆನ್ನಿಗೆ ಅರ್ಥವಿಲ್ಲವೆಂದೆನಿಸುವ ಕ್ಷಣಿಕ ಗಲಿಬಿಲಿ. ಆದರೆ ಒಂದು ಕ್ಷಣ ಶಾಂತಚಿತ್ತದಿಂದ ಕುಳಿತು ಆಲೋಚನೆ ಮಾಡಿದರೆ ಹೊಳೆಯುವುದು ಮತ್ತೆ ಅದೇ ಹಳೆಯ ವಾಕ್ಯ “ಬದಲಾವಣೆ ಜಗದ ನಿಯಮ”. ದಿನ ಕಳೆದಂತೆ ಎಲ್ಲಿ ಅಪ್ರಸ್ತುತರಾಗಿ ಬಿಡುತ್ತಿದ್ದೇವೇನೋ ಎಂದು ನಮಗೆ ಅನ್ನಿಸಲಿಕ್ಕೆ ಶುರುವಾಗಿರುವುದೇ ಈ ಬದಲಾವಣೆಯ ಸಲುವಾಗಿನ ನಮ್ಮ ಆತಂಕಕ್ಕೆ ಕಾರಣವಿರಬಹುದೇ? ಇಂತಹದೇ ಆತಂಕ ನಮ್ಮ ತಂದೆ ತಾಯಿಯವರಿಗೂ ಆಗಿರಲಿಕ್ಕಿರದೆ ಸಾಧ್ಯವಿಲ್ಲ. ಆಧುನಿಕತೆಯ ಗೀಳು ತರುತ್ತಿರುವ ಬದಲಾವಣೆ ಸಂಪೂರ್ಣವಾಗಿ ಆರೋಗ್ಯದಾಯಕವಾಗಿಲ್ಲದಿರಬಹುದು, ಆದರೆ ನಾವ್ಯಾಕೆ ಈ ಬದಲಾವಣೆಯ ಬಗ್ಗೆ ಸದಾ ಹಳಿಯದೆ ಇದರಿಂದಾಗುವ ಅಲ್ಪ ಸ್ವಲ್ಪ ಒಳಿತಿನ ಬಗ್ಗೆಯೂ ಚಿಂತಿಸಬಾರದು?

ಮೈಲುಗಟ್ಟಲೆ ದೂರಕ್ಕೂ ಒಂದೇ ತೆರನಾಗಿ ಹೆಬ್ಬಾವಿನಂತೆ ಚಾಚಿಕೊಂಡಿರುವ ಹೆದ್ದಾರಿ, ದಾರಿಯಲ್ಲಿ ಸಿಗುವ ಎಲ್ಲಾ ಚಿಕ್ಕ ಊರುಗಳ ಪ್ರತ್ಯೇಕ ವ್ಯಕ್ತಿತ್ವವನ್ನು ಅಳಿಸಿ ಹಾಕಿದಂತೆ, ಅಪರೂಪಕ್ಕೊಮ್ಮೆ ಆ ಊರನ್ನು ಹಾದುಹೋಗುವ ನಮಗೆ ಅನ್ನಿಸುವುದು ನಿಜ. ಆದರೆ ದಿನ ಬೆಳಗಾದರೆ ಆ ಊರನ್ನೇ ನೋಡುತ್ತಾ ಬೆಳೆಯುವ ಮಂದಿಗೆ ತಮ್ಮ ಉರಲ್ಲಾಗುತ್ತಿರುವ ಬದಲಾವಣೆ ಈಗಷ್ಟೆ ಹುಟ್ಟಿದ ಮಗುವಿನ ಬೆಳವಣಿಗೆಯನ್ನು ನೋಡುತ್ತಾ  ಕಾಲ ಸವೆಸುವ ತಂದೆ ತಾಯಿಯರಂತೆಯೇ. ಮಗುವಿನ ಬೆಳವಣಿಗೆ ಯಾವತ್ತೂ ಅವರಿಗೆ ಅದನ್ನು ಅಪರಿಚಿತನನ್ನಾಗಿ ಮಾಡಲು ಅಸಾಧ್ಯ. ಎಲ್ಲೋ ವರ್ಷಕ್ಕೊಮ್ಮೆ ಆ ಮಗುವನ್ನು ನೋಡುವ ಸಂಬಂಧಿಗಳಿಗಷ್ಟೇ ಆ ಮಗು ಗುರುತಿಸಲಾರದಂತೆ ಬೆಳೆದಿರುತ್ತದೆ. ಹೀಗೆ ಬೆಳೆದ ಹೆದ್ದಾರಿ ಮುಖ್ಯ ಊರುಗಳ ಮಧ್ಯೆ ಸಂಪರ್ಕವನ್ನು ವೃದ್ಧಿಸುತ್ತದೆ. ಗೂಗಲ್ ಮ್ಯಾಪ್ ಭಾಷೆ ಬಾರದ ಅನೇಕರಿಗೆ ದೂರದೂರಿಗೆ ದಾರಿ ತೋರಿಸುತ್ತದೆ. 20 ವರ್ಷಗಳ ಹಿಂದೆ ತಮ್ಮ ಸ್ವಂತ ವಾಹನದಲ್ಲಿ ತಮಿಳುನಾಡಾಗಲಿ, ಕೇರಳವಾಗಲಿ ಸುತ್ತ ಬೇಕೆಂದಿದ್ದಲ್ಲಿ, ತಮಿಳು ಅಥವಾ ಮಲಯಾಳಂ ಭಾಷೆ ಮಾತನಾಡಲು ಬರುವುದು ಅವಶ್ಯಕವಿತ್ತು. ಈಗ ಹಾಗಿಲ್ಲವೆಂದರೆ ಅದಕ್ಕೆ ಕಾರಣ ಇವೆ ಹೆದ್ದಾರಿಗಳು ಹಾಗೂ ಗೂಗಲ್ ಮ್ಯಾಪ್. ಹಿಂದೆ ನನ್ನೂರಿಂದ ಮಂಗಳೂರು ತಲುಪಬೇಕಾದರೆ ಕನಿಷ್ಠ ಮೂರು ತಾಸು ಹಿಡಿಯುತ್ತಿತ್ತು. ಈಗ ಅಗಲವಾಗಿ, ನಯವಾಗಿರುವ  ಹೆದ್ದಾರಿ ಈ ಸಮಯವನ್ನು 1 ಗಂಟೆ 30 ನಿಮಿಷಕ್ಕೆ ಇಳಿಸಿದೆ, ಅಮ್ಮ ಅಪ್ಪನ ಜೊತೆ ಮಾತನಾಡಲು ಅವರೊಂದಿಗೆ ಸಮಯ ಕಳೆಯಲು ಹೆಚ್ಚಿನ ಸಮಯ ದೊರಕಿಸಿದೆ. ಹೆಚ್ಚಿದ ಪ್ರವಾಸಿಗರಿಂದಾಗಿ ಹೆದ್ದಾರಿಯುದ್ದಕ್ಕೂ ವಿವಿಧ ಉದ್ಯಮಗಳು ಬೆಳೆಯುತ್ತವೆ. ಬೆಂಗಳೂರು ಮೈಸೂರು ಹೆದ್ದಾರಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ, ಈಗ ಕಿಲೋಮೀಟರಿಗೊಂದೆಂಬಂತೆ ಹೋಟೆಲೊಂದು ತಲೆಯೆತ್ತಿದೆ. ಹೋಟೆಲಿನ ಅಡಿಗೆ ಭಟ್ಟನ ಮಗಳು ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಾಳೆ. ಮುಂದೊಂದು ದಿನ ಆತ ತನ್ನದೇ ಸ್ವಂತ ಹೋಟೆಲ್ ತೆರೆದರೂ ಆಶ್ಚರ್ಯವಿಲ್ಲ. ಅಲ್ಲಿಗೆ ಆತನ ತಲೆಮಾರಿನಲ್ಲಿ ಜೀವನದ ಶೈಲಿ ಒಂದು ಹಂತ ಮೇಲೇರಿರುತ್ತದೆ.City

ಇನ್ನು ಫ್ಯಾಶನ್ ವಿಚಾರಕ್ಕೆ ಬಂದರೆ ನಿಜ ಹಳ್ಳಿ ಹುಡುಗಿಯ ತೊಡೆ ಮೇಲು ಜೀನ್ಸ್, ಲೆಗ್ಗಿಂಗ್ಸ್ ಬಂದಿದೆ, ಹುಡುಗನ ಟಿ ಶರ್ಟಿನಲ್ಲೂ ಯಾವುದೋ ಬ್ರಾಂಡ್ ಹೆಸರು ರಾರಾಜಿಸುತ್ತಿರುತ್ತದೆ. ಇದೇ  ಉಡುಪಿನ ಶೈಲಿ, ಹಳ್ಳಿ ಹುಡುಗ ಹುಡುಗಿಯರಲ್ಲೂ ಒಂದು ಬಗೆಯ ಆತ್ಮವಿಶ್ವಾಸ ಮೂಡಿಸುತ್ತದೆ. ನಗರದ ಜನರಿಗೂ ತಮಗೂ ಉಡುಪಿನ ಮೂಲಕ ಸೃಷ್ಟಿಯಾಗುವ ಕಂದಕವನ್ನು ನಿವಾರಣೆಗೊಳಿಸುತ್ತದೆ. ಚಿತ್ರದುರ್ಗದಂಥ ಮಧ್ಯಮ ನಗರದ ಜನ ಕೂಡ  ಪಿಜ್ಜಾದ ರುಚಿ ನೋಡಿದಲ್ಲಿ ತಪ್ಪೇನು?

ನಗರಕ್ಕೆ ಬಂದು ಸೇರಿದರೇನಂತೆ ಯುವಕರ ಕಣ್ಣಲ್ಲಿರುವುದು ಅದೇ ಸ್ವಂತ ಊರಿನ ಗುಂಗು. ಅವರು ಹೊಗಳುವುದು ಅಲ್ಲಿನ ಸಂಸ್ಕೃತಿಯನ್ನೇ, ಮಾತನಾಡುವುದು ಅಲ್ಲಿಯ ಭಾಷೆಯನ್ನೇ. ಎಲ್ಲೋ ಅಲ್ಪ ಸ್ವಲ್ಪ ಅವರ ನಡವಳಿಕೆ ಬದಲಾಗಿದ್ದರೂ ಕೂಡ ಅದರ ಕಾರಣ ಅವರು ಬಂದು ಸೇರಿರುವ ನಗರದ ಜನರ ಮನಸ್ಥಿತಿ. ಎಲ್ಲಿಯವರೆಗೆ ನಗರದ ಜನರ ಮನೋಧರ್ಮ ಹಳ್ಳಿಯ ಜೀವನಶೈಲಿಯನ್ನು ಹುಸಿ ಅಚ್ಚರಿಯಿಂದ ನೋಡಿದಂತೆ ಮಾಡಿ ನಿಜ ಲೇವಡಿ ಮಾಡುವುದಿಲ್ಲವೋ ಅಲ್ಲಿಯವರೆಗೆ ಹಳ್ಳಿ ಸಂಸ್ಕೃತಿ ನಗರದೊಡನೆ ಬೆರೆಯುವ ಅವಿರತ ಪ್ರಯತ್ನ ಮಾಡುತ್ತಲೇ ಇರುತ್ತದೆ. ಹಳ್ಳಿ ದಿಲ್ಲಿಗಳೆಂಬ ಬೇಧಭಾವವನ್ನು ಹೊಡೆದೋಡಿಸಿರುವುದೇ ತಂತ್ರಜ್ಞಾನದ, ಆಧುನಿಕತೆಯ ಸಾಧನೆಯಲ್ಲವೇ?

ಜೀವನಶೈಲಿ ಯೂನಿಫಾರ್ಮಿನಂತೆ ಆಗಿರುವುದು ಮೊದಲಿನಿಂದಲೂ ನಡೆದು ಬಂದದ್ದೇ. ದೇಶ ಕಾಯುವ ಸೈನಿಕನಾಗಲಿ, ಅನ್ನ ಬಿತ್ತುವ ರೈತನಾಗಲಿ, ಯಾರದ್ದೋ ಖಾತೆ ತೆರೆಯುತ್ತಿರುವ ಬ್ಯಾಂಕ್ ಗುಮಾಸ್ತನಾಗಲಿ,  ಬೆಳಗ್ಗೆದ್ದು ರಸ್ತೆ ಗುಡಿಸುವ ಪೌರ ಕಾರ್ಮಿಕನಾಗಲಿ, ಕಂಪ್ಯೂಟರ್ ಪರದೆಯ ಮುಂದೆ ಕೀಲಿಕೈ ಕುಟ್ಟುತ್ತಾ ಕೂತಿರುವ ತಂತ್ರಜ್ಞನಾಗಲಿ, ಏಕತಾನತೆಯೆನ್ನುವುದು ಹೆಚ್ಚಿನ ಎಲ್ಲ ಕ್ಷೇತ್ರದಲ್ಲಿ ಯಾವಾಗಲೋ ಹಾಸು ಹೊಕ್ಕಿದೆ. ಸೃಷ್ಟಿಪರ ಕ್ಷೇತ್ರದಲ್ಲಿ ಕೆಲಸ ಮಾಡದ ಹೊರತು ಈ ಏಕತಾನತೆ ಎಲ್ಲರಿಗು ಬಾಧಿಸುವಂಥದ್ದೇ. ಬದಲಾಗುವುದು ಯೂನಿಫಾರ್ಮಿನ ಬಣ್ಣ, ಆಕಾರ ಮತ್ತು ಶೈಲಿಯಷ್ಟೇ. ಇದೇ ಏಕತಾನತೆಯ ವೃತ್ತಿ ಒದಗಿಸುವ ಆದಾಯವೇ ಪರೋಕ್ಷವಾಗಿ ಸೃಷ್ಟಿಪರ ಕ್ಷೇತ್ರದ ಹೊಟ್ಟೆಹೊರೆಯುತ್ತಿರುವುದನ್ನು ಮರೆಯಬಾರದು.

ಮೊಬೈಲು ನೋಡುತ್ತಲೇ ದಿನಬೆಳಗ್ಗೆ ಏಳುವುದು, ರಾತ್ರಿ ಮಲಗುವ ಮುನ್ನ ಮೊಬೈಲು ನೋಡುವುದು ಬಹುತೇಕರ ಅಭ್ಯಾಸ ಈಗ ನಿಜ. ಮೊದಲಾದರೆ ಅಲಾರ್ಮ್ ಗಡಿಯಾರ ಹೊಡೆದುಕೊಳ್ಳುತ್ತಿತ್ತು ಈಗ ಫೋನ್ ಹೊಡೆದುಕೊಳ್ಳುತ್ತದೆ. ಮೊದಲಾದರೆ ಪತ್ರಿಕೆ ಓದುತ್ತಾ ಕುಳಿತುಕೊಳ್ಳುತ್ತಿದ್ದೆವು. ಈಗ ಕಣ್ಣು ಬಿಡುತ್ತಲೇ ಸುದ್ದಿ ಮೊಬೈಲಿನಲ್ಲಿ ಬಂದು ಬಿದ್ದಿರುತ್ತದೆ. ಮೊದಲಾದರೆ ಗೆಳೆಯರಿಗೆ ಫೋನಾಯಿಸಿ ಸಂಭಾಷಿಸುತ್ತಿದ್ದೆವು, ಈಗ ಮೊಬೈಲಿನ ಮೂಲಕ ಸಾಮಾಜಿಕ ತಾಣಗಳಲ್ಲೇ ಅವರು ಸಿಗುತ್ತಾರೆ. ಮಣಗಟ್ಟಲೆ ಭಾರದ ಪುಸ್ತಕಗಳನ್ನು, ಮೊಬೈಲಿನಲ್ಲೇ ಓದಬಹುದಾದ ಪುಸ್ತಕಗಳು ಬದಲಾಯಿಸಿವೆ. ಒಟ್ಟಾರೆ ಹಿಂದೆ ದಿನ ನಿತ್ಯ ನಾವು ಬಳಸುತ್ತಿದ್ದ ಹಲವು ಸಲಕರಣೆ ಸಾಧನಗಳನ್ನು ಮೊಬೈಲ್ ಎಂಬ ಒಂದು ಸಾಧನ ಪ್ರತಿನಿಧಿಸುತ್ತಿದೆ. ಇದನ್ನು ತಂತ್ರಜ್ಞಾನದ ಸಾಧನೆ ಎನ್ನಬೇಕೇ ಹೊರತು ಅದನ್ನು ದೂರುವಂತಿಲ್ಲ. ಯಾವುದೇ ವಸ್ತುವಿನ ಮೇಲಿನ ಅತಿಯಾದ ಮೋಹ ಗೀಳಾಗಿ ಬದಲಾಗುತ್ತದೆ. ಗೀಳು ಹಲವು ಕಾಲಗಳಲ್ಲಿ ಹಲವು ರೂಪಗಳಲ್ಲಿ ಎಲ್ಲರನ್ನು ಕಾಡುತ್ತಲೇ ಬಂದಿದೆ. ಆಧುನಿಕತೆಯನ್ನು ಈ ಕಾರಣಕ್ಕಾಗಿ ದೂಷಿಸುವುದು ಎಷ್ಟು ಸರಿ?

ಯಾವುದೋ ಹಳ್ಳಿ ಮೂಲೆಯ ಚಹಾದಂಗಡಿಯಾಗಲಿ, ಆ ಊರಿನ ಹುಡುಗಿಯ ಉದ್ದ ಜಡೆಯಾಗಲಿ, ಉತ್ತರ ಕರ್ನಾಟಕದ ತಟ್ಟಿ ಮಾಡಿದ ರೊಟ್ಟಿಯಾಗಲೀ, ಒಂದೇ ರೀತಿ ಮಾತನಾಡುವ ಪಾತ್ರಗಳ ಧಾರಾವಾಹಿಯಾಗಲೀ, ಲೆಗ್ಗಿಂಗ್ಸ್ ಆಗಲಿ, ಜೀನ್ಸ್ ಆಗಲಿ, ಯಾವುದೇ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳಾಗಲೀ, ಸತ್ತ್ವವಿದ್ದಲ್ಲಿ, ತಮ್ಮದೇ ವೈಶಿಷ್ಟ್ಯದಿಂದ ಕಾಲದ ಪ್ರವಾಹದ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯವಿದ್ದುದೇ ಆದಲ್ಲಿ ಹೇಗಾದರೂ ಉಳಿದುಕೊಂಡೇ ಉಳಿಯುತ್ತವೆ. ಅನಾವಶ್ಯಕ, ಅಪ್ರಸ್ತುತ ಆಚರಣೆಗಳನ್ನು ಆಧುನಿಕತೆ ಹೊಡೆದು ಹಾಕುತ್ತದೆ. ಬೆಳೆಯುವ ನಾಗರಿಕತೆಯ ವೈಶಿಷ್ಟ್ಯವೇ ಅದು ಅಲ್ಲವೇ? ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತ ನಾವು, ಹಳ್ಳಿಯವರನ್ನು ನಮ್ಮ ಸಂಸ್ಕೃತಿಯ, ವೈವಿಧ್ಯತೆಯ ರಾಯಭಾರಿಗಳೆಂದು ಹಣೆಪಟ್ಟಿ ಅಂಟಿಸಿ, ಕಪ್ಪು ಹೊಗೆ ಕಾರುವ ಒಲೆಯ ಮುಂದೆ ಕೂಡಿಸಿ ರೊಟ್ಟಿ ತಟ್ಟುತ್ತಿರಿ ಎನ್ನುವುದು ಎಷ್ಟು ಸೂಕ್ತ?

(ವಿ. ಸೂ.: ಇಲ್ಲಿ ಬರೆದಿರುವುದು ಕೇವಲ ನನ್ನ ಅನಿಸಿಕೆಯಷ್ಟೇ. ಲೇಖಕಿಯವರ ಬರಹದ ಮೂಲ ಆಶಯಕ್ಕೆ ಕುಂದು ತರುವ ಯಾವುದೇ ಉದ್ದೇಶ ಇಲ್ಲಿಲ್ಲ. ನನ್ನ ಅನಿಸಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಂತೂ ಮೊದಲೇ ಇಲ್ಲ.
ಪಿ . ಕುಸುಮಾ ಆಯರಹಳ್ಳಿ ಅವರ ‘ಕ್ರಾಸ್ ಕನೆಕ್ಷನ್’ ಅಂಕಣದ ಕೊಂಡಿ: http://www.vijaykarnatakaepaper.com/Details.aspx?id=14720&boxid=14316879)

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)