ಹರಿ ಕಥೆ

ಪಲ್ಲವಿ:Taala

“ಉಡಿಯಲ್ಲಿ ಉಡಿಗೆಜ್ಜೆ ಬೆರಳಲ್ಲಿ ಉಂಗುರ

ಕೊರಳಲ್ಲಿ ಹಾಕಿದ ವೈಜಯಂತಿ ಮಾಲೆ

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು

ಪೂಸಿದ ಶ್ರೀಗಂಧ ಮೈಯೆಲ್ಲಾ ಘಮ ಘಮ

ಕೃಷ್ಣ ನೀ ಬೇಗನೇ ಬಾರೋ

ಬೇಗನೇ ಬಾರೋ ಮುಖವನ್ನು ತೋರೋ..”

ಅವಳ ಹೆಸರು ಮೀರಾ. ಚಿಕ್ಕಂದಿನಿಂದಲೂ ಆಕೆಗೆ ಕೃಷ್ಣನ ಮೇಲೆ ಅದೇನೋ ಮೋಹ. ಹೆಣ್ಣು ಮಗು ಅಂದಾಕ್ಷಣ, ಮರು ಯೋಚನೆ ಇಲ್ಲದೆ ಮಗುವಿಗೆ ಹೆಸರು ಸೂಚಿಸಿದ ಕೃಷ್ಣ ಭಕ್ತ ಅಪ್ಪ, ಕೃಷ್ಣನ ಬಾಲ ಲೀಲೆಗಳನ್ನೇ ಹೇಳಿ ರಾತ್ರಿ ಮಲಗಿಸುತ್ತಿದ್ದ ಅಮ್ಮ ಹಾಗೂ ಸಿಕ್ಕಾಗೆಲ್ಲ, “ಮೀರಾ, ಎಲ್ಲೇ ನಿನ್ನ ಕೃಷ್ಣ” ಅಂದು ಛೇಡಿಸುತ್ತಿದ್ದ ಸಂಬಂಧಿಕರೇ ಇದಕ್ಕೆ ಪ್ರತ್ಯಕ್ಷ ಕಾರಣ. ಮನೆಯಲ್ಲಿ ದಿನ ನಡೆಯುತ್ತಿದ್ದ ಭಜನೆಗಳಲ್ಲಿ ಆಕೆ ಹಾಡುವುದು ಬರಿ ಕೃಷ್ಣ ಸ್ತುತಿ ಮಾತ್ರ. ಕೊರಳಿಗೊಂದು ಕೃಷ್ಣನ ಪದಕವಿರುವ ಸರ. ಅಷ್ಟೇನೂ ಸ್ಥಿತಿವಂತರಲ್ಲದ ಮನೆಯವರು ೧೮ನೆಯ ವಯಸ್ಸಿಗೇ ವರಾನ್ವೇಷಣೆ ಪ್ರಾರಂಭಿಸುವಾಗ ಕೂಡ ಆಕೆಯ ಕಲ್ಪನೆಯಲ್ಲಿದ್ದದ್ದು ಕೃಷ್ಣನಂತಿರುವ ಗಂಡನೇ. ಅದಾಗಲೇ ಆಕೆಗೆ ಭಜನೆ ಸಮೂಹದಲ್ಲಿ ಬಲು ದೊಡ್ಡ ಹೆಸರು. ಅವಳ ಗುಂಪು ಭಜನೆಗೆ ಹೋದ ಕಡೆ, ಮೀರಾಳ ಭಜನೆ ಕೇಳಲೆಂದೇ ಜನ ಸಮೂಹ ನೆರೆಯುವ ಮಟ್ಟಿಗೆ ಆಕೆ ಪ್ರಸಿದ್ಧಿ ಸಂಪಾದಿಸಿದ್ದಳು. ನೋಡಲು ಕೂಡ ತಕ್ಕ ಮಟ್ಟಿಗೆ ಸುರೂಪಿಯಾಗಿದ್ದ ಮೀರಾಳಿಗೆ ವರ ಸಿಗುವುದು ಅಷ್ಟೇನೂ ಕಷ್ಟವಾಗಲಿಲ್ಲ. ಹತ್ತಿರದ್ದೇ ಊರಿನ ಶ್ಯಾಮ ಭಟ್ಟರ ಮಗನಾದ, ಪೌರೋಹಿತ್ಯ ಬಿಟ್ಟು ಮನೆ ಕಟ್ಟಲು ಬೇಕಾಗುವ ಮರಳು ವ್ಯವಹಾರ ಮಾಡಿಕೊಂಡಿದ್ದ ಸುರೇಶನ ಜೊತೆ ಮೀರಾಳ ವಿವಾಹ ಹಾಗೆಯೇ ನಡೆದು ಹೋಯಿತು. ಮೀರಾಳ ಕೃಷ್ಣ ಆಕೆಯ ಮನಸ್ಸಿನಲ್ಲೇ ಉಳಿದು ಹೋದ.

Untitled

ಅನುಪಲ್ಲವಿ:2939886-meerabai-wall-hanging

“ನೊಂದೆನಯ್ಯ ಭವಬಂಧನದೊಳು ಸಿಲುಕಿ

ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು

ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ

ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ 

ಇಂದು ಎನಗೆ ಗೋವಿಂದ ನಿನ್ನಯ

ಪಾದಾರವಿಂದವ ತೋರೋ ಮುಕುಂದನೆ ..”

ಮದುವೆಯಾದ ಮೊದ ಮೊದಲ ಸ್ವಲ್ಪ ತಿಂಗಳುಗಳ ಕಾಲ ಎಲ್ಲವು ಕೂಡ ಸರಿಯಾಗಿಯೇ ಇತ್ತು. ಅತ್ತೆಯಿಲ್ಲದ ಮನೆ ಸೇರಿದ ಮೀರಾಳ ಬಗ್ಗೆ ಸಂಬಧಿಕ ಹೆಂಗಸರಿಗೆ ಕಿಚ್ಚು ಕೂಡ ಇತ್ತು. ಮಾವ ಶ್ಯಾಮ ಭಟ್ಟರು ಹಾಗೂ ಸತೀಶ ಆಕೆಯನ್ನು ಕಾಳಜಿಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ನಿಧಾನಕ್ಕೆ ಸತೀಶ ಬದಲಾಗ ತೊಡಗಿದ. ಚಿಕ್ಕ ಚಿಕ್ಕ ವಿಷಯಗಳಿಗೆ ರೇಗಾಡುವುದು, ಬೆಳಗ್ಗೆದ್ದು ತುಂಬಾ ಕಾಲ ಮನೆ ಜಗುಲಿಯಲ್ಲಿ ಕೂತು ಏನೋ ಚಿಂತಿಸುವುದು ಮಾಡತೊಡಗಿದ. ಕಾರಣ ಕೇಳಿದರೆ ಮತ್ತೆ ಅದೇ ರೇಗಾಟ. ಕಡೆಗೊಂದು ದಿನ ಕಾರಣ ಶ್ಯಾಮಭಟ್ಟರಿಂದಲೇ ಮೀರಾಳಿಗೆ ತಿಳಿಯಿತು. ಕಾನೂನಿನ ತೊಡಕು, ಪೋಲೀಸರ ಕಿರುಕುಳದಿಂದ ಸತೀಶನ ಮರಳಿನ ವ್ಯಾಪಾರದಿಂದ ಬರುವ ಆದಾಯ ದಿನೇ ದಿನೇ ಕುಗ್ಗುತ್ತಿದೆ ಎಂದು. ಬರು ಬರುತ್ತಾ ಮನೆಯಲ್ಲಿ ೩ ಹೊತ್ತಿನ ಊಟ ಮಾಡಲು ಕೂಡ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗತೊಡಗಿತು. ಶ್ಯಾಮ ಭಟ್ಟರು ಪೌರೋಹಿತ್ಯ ಮಾಡಲು ಅಶಕ್ಯರು, ಮೀರಾ ಬೇರೆ ಕೆಲಸ ಹುಡುಕುವಷ್ಟು ಓದಿಕೊಂಡಿಲ್ಲ. ಹೀಗೆ ಸಂಸಾರದ ಪೂರ್ತಿ ಭಾರ ತನ್ನ ಮೇಲೆ ಹೊತ್ತಿರುವ ಸತೀಶ ಕಂಗಾಲಾಗತೊಡಗಿದ. ಇಂತಹದೆ ಕಹಿ ಕಾರಣಗಳಿಂದ ಕತ್ತಲು ಕವಿದಿದ್ದ ಮನೆಯಲ್ಲಿ ಬೆಳಕಾಗಿ ಬಂದ ಸಿಹಿ ಸುದ್ದಿ ಮೀರಾ ಹಾಗೂ ಸತೀಶನ ಗಂಡು ಮಗುವಿನ ಜನನ. ಶ್ಯಾಮ ಭಟ್ಟರಿಗಂತೂ ತಮ್ಮನ್ನು ಕಷ್ಟಗಳಿಂದ ಪಾರುಮಾಡಲು ಆ ಕೃಷ್ಣ ಪರಮಾತ್ಮನೇ ಮಗುವಿನ ರೂಪದಲ್ಲಿ ಜನಿಸಿದ ಎಂಬಷ್ಟು ಸಂಭ್ರಮ. ಆದರೆ ಈ ಸಂಭ್ರಮ ಕೂಡ ಬಹು ಕಾಲ ಉಳಿಯಲಿಲ್ಲ. ಮಗು ಹುಟ್ಟಿದ ೩ ನೇ ತಿಂಗಳಿಗೆ ಸಾಮಾನ್ಯ ತಪಾಸಣೆಗಾಗಿ ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಅವರ ಮುಖದಲ್ಲಿ ವ್ಯಕ್ತವಾದ ಆತಂಕ ಹಾಗೂ ಬೇಸರ ಮೀರಾಳಿಗೆ ಸಂಶಯ ಮೂಡಿಸಿತು. ಸ್ವಲ್ಪ ದಿನಗಳ ನಂತರ ವೈದ್ಯರೇ ಖುದ್ದು ಅವರ ಮನೆಗೆ ಬಂದು ಆತಂಕದ ಕಾರಣ ತಿಳಿಹೇಳಿದರು. ಜನಿಸಿದ ಮಗು ಎಲ್ಲ ಮಕ್ಕಳಂತೆ ಆಗಲು ಸಾಧ್ಯವಿಲ್ಲವೆಂದೂ, ಮಗುವಿನ ಬೌದ್ಧಿಕ ಬೆಳವಣಿಗೆ ಇತರ ಮಕ್ಕಳಿಗಿಂತ ಮಂದವಾಗಿ ಇರುವುದೆಂದೂ ತಿಳಿಹೇಳುತ್ತಿರಬೇಕಾದರೆ ಮೀರಾಳಿಗೆ ಕಣ್ಣು ಕತ್ತಲು ಬಂದಂತಾಯಿತು. ಅಂದು ಅಸಹ್ಯ ದೃಷ್ಟಿಯಿಂದ ಮೀರಾಳ ಕಡೆಗೆ ಕೆಕ್ಕರಿಸಿ ನೋಡಿ ಹೋದ ಸತೀಶ ಬಹು ದಿನಗಳ ತನಕ ಮನೆಗೆ ಮರುಳಲಿಲ್ಲ. ಶ್ಯಾಮ ಭಟ್ಟರು ಮಗುವನ್ನು ಆಡಿಸುವುದನ್ನೇ ಬಿಟ್ಟು ಬಿಟ್ಟರು. ಮೀರಾ ಮಾತ್ರ ಇದ್ದ ಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಮಗುವಿನ ಪಾಲನೆ ಮಾಡತೊಡಗಿದಳು. ಮಗುವಿನ ಕಿಲ ಕಿಲ ನಗುವಿನಲ್ಲಿ ಆಕೆಗೆ ಎಂದೋ ಮರೆತು ಹೋಗಿದ್ದ ಕೃಷ್ಣ ತೋರತೊಡಗಿದ. ಆದರೆ ಈ ಬಾರಿ ಆ ನಗು ತನ್ನ ಪರಿಸ್ಥಿತಿಯನ್ನು ಛೇಡಿಸುತ್ತಿರುವಂತೆ ಆಕೆಗೆ ಭಾಸವಾಯಿತು.

ಶ್ಯಾಮ ಭಟ್ಟರ ಆರೋಗ್ಯ ದಿನ ಕಳೆದಂತೆ ಹದಗೆಡತೊಡಗಿತು. ಹಾಸಿಗೆಗೆ ಅಂಟಿಕೊಂಡ ಶ್ಯಾಮ ಭಟ್ಟರು ಹಾಗೂ ತನಗಂಟಿಕೊಂಡಿರುವ ಸ್ವಂತ ಮಗು ಇಬ್ಬರ ಜವಾಬ್ದಾರಿ ಕೂಡ ಮೀರಾಳ ಮೇಲೆಯೇ ಬಿತ್ತು. ಸತೀಶ ಅಪರೂಪಕ್ಕೊಮ್ಮೆ ಎಂಬಂತೆ ಮನೆಗೆ ಭೇಟಿ ಕೊಡಲು ಪ್ರಾರಂಭಿಸಿದ. ಆಗಾಗ್ಗೆ ಬಂದು ಹೋಗಿ ಮೀರಾಳ ಜೊತೆ ಹರಟೆ ಹೊಡೆಯುತ್ತಿದ್ದ ಕೆಲಸದಾಕೆ ಗುಬ್ಬಿಯಿಂದ ಸತೀಶ ಇನ್ನೊಂದು ಸಂಸಾರ ಹೂಡಿರುವ ಬಗ್ಗೆ ಮಾಹಿತಿ ದೊರೆಯಿತು. ಮೊದ ಮೊದಲು ಸ್ವಲ್ಪ ದಿನಗಳ ಕಾಲ ಬೇಜಾರಾದರೂ, ತನ್ನ ಹಣೆಯಲ್ಲಿ ಬರೆದ ಈ ದರಿದ್ರ ಜೀವನಕ್ಕೆ ಮೀರಾ ಒಗ್ಗಿ ಹೋದಳು.

Untitled

ಚರಣ: Meera Krishna

“ಬಂದ ನೋಡಿ ಗೋವಿಂದ ಕೃಷ್ಣ

ಬಂದ ಬಂದ ಆನಂದ ತೀರ್ಥ ಮುನೀಂದ್ರ ವಂಧ್ಯ

ಹರಿ ನಂದ ಮುಕುಂದ..

ಚರಣ ಕಮಲವಂತೆ ಸರ್ವದ ಮಾಳ್ಪುದು ದಯವಂತೆ

ಥರ ಥರ ಜನರಿಗೆ ಕರೆದು ವರವನೀವ

ಸರಸಿಜಾಕ್ಷ ನಮ್ಮ ಪುರಂದರ ವಿಠಲನು

ಬಂದ… ಬಂದ ನೋಡಿ ಗೋವಿಂದ ಕೃಷ್ಣ..”

ತಾನು ಕೂಡಿಟ್ಟ ಅಲ್ಪ ಸ್ವಲ್ಪ ಹಣ ಕೂಡ ಕರಗುತ್ತಾ ಬಂದಾಗಲೇ ಶ್ಯಾಮ ಭಟ್ಟರಿಗೆ ಹೊಳೆದದ್ದು ತಮ್ಮ ಮನೆಯ ಅಂಗಳದ ಇನ್ನೊಂದು ಮೂಲೆಯಲ್ಲಿರುವ ಚಿಕ್ಕ ಬಿಡಾರವನ್ನು ಬಾಡಿಗೆಗೆ ಕೊಡುವ ವಿಚಾರ. ಅವರ ಅದೃಷ್ಟಕ್ಕೆ ಎಂಬಂತೆ ಅದೇ ಸಮಯದಲ್ಲಿ ಊರಿನ ಸರಕಾರಿ ಶಾಲೆಗೆ ಹೊಸದಾಗಿ ಸಂಗೀತ ಉಪಾಧ್ಯಾಯರಾಗಿ ಮುರಳಿ ಮಕ್ಕಿತ್ತಾಯರು ನೇಮಕವಾದದ್ದು. ಶ್ಯಾಮ ಭಟ್ಟರ ಚಿಕ್ಕ ಮನೆಯಲ್ಲಿ ಮುರಳಿ ಮಕ್ಕಿತ್ತಾಯರು ವಾಸ್ತವ್ಯ ಹೂಡುವುದಾಗಿಯೂ, ಮನೆಗೆ ಬೇಕಾಗುವ ದಿನಸಿ ಪದಾರ್ಥಗಳನ್ನು ಅವರೇ ತಂದು ಹಾಕುವುದಾಗಿಯೂ, ವಿದುರರಾದ ಮಕ್ಕಿತ್ತಾಯರ ೩ ಹೊತ್ತಿನ ಊಟದ ವ್ಯವಸ್ಥೆ ಶ್ಯಾಮ ಭಟ್ಟರ ಮನೆಯಲ್ಲೇ ಎಂದು ಮಾತಾಯಿತು.

ಶಾಲೆ ಮುಗಿಸಿ ಬಂದ ಮಕ್ಕಿತ್ತಾಯರು ಸಂಜೆ ಮನೆಯಲ್ಲಿ ಭಜನೆ ಮಾಡುವ ಪದ್ಧತಿ ಪ್ರಾರಂಭಿಸಿದರು. ಮಕ್ಕಿತ್ತಾಯರ ಕಂಚಿನ ಕಂಠದಿಂದ ಬರುವ ಧ್ವನಿ, ಅಕ್ಕ ಪಕ್ಕದ ಮನೆಯ ಮಕ್ಕಳು ಹಾಗೂ ಯುವಕ ಯುವತಿಯರನ್ನು ಆಕರ್ಷಿಸ ತೊಡಗಿತು. ನಿಧಾನಕ್ಕೆ ಒಬ್ಬೊಬ್ಬರೇ ಬಂದು ಸೇರುತ್ತಾ, ದಿನಾ ಸಂಜೆ ಮಕ್ಕಿತ್ತಾಯರ ಮನೆಯ ಅಂಗಳದಲ್ಲಿ ಭಜನೆ ಮಾಡಲು ಒಂದು ಚಿಕ್ಕ ಸಮೂಹವೇ ನೆರೆಯತೊಡಗಿತು. ಶ್ಯಾಮ ಭಟ್ಟರ ಮನೆಯಲ್ಲಿ, ಮೀರಾಳ ಮನಸ್ಸಿನಲ್ಲಿ ನಿಧಾನಕ್ಕೆ ಜೀವಕಳೆ ಮೊಳೆಯತೊಡಗಿತು. ಎಂದೋ ಮರೆತು ಹೋದಂತಿದ್ದ ಭಜನೆಗಳು ಮನಸ್ಸಿನಲ್ಲಿ ಮತ್ತೆ ಗುನುಗುನಿಸ ತೊಡಗಿದವು. ದಿನಾಲು ದೂರದಿಂದಲೇ ನಿಂತು ನೋಡುತ್ತಿದ್ದ ಮೀರಾಳನ್ನು ಗಮನಿಸಿದ ಮಕ್ಕಿತ್ತಾಯರು ಒಂದು ಸಂಜೆ ಆಕೆಯನ್ನು ಕೂಡ ಭಜನೆ ಸಮೂಹವನ್ನು ಸೇರುವಂತೆ ವಿನಂತಿಸಿದರು. ಮೊದ ಮೊದಲು ಅಳುಕಿದರೂ ಆಮೇಲೆ ಒಗ್ಗಿಸಿಕೊಂಡು, ಶ್ಯಾಮ ಭಟ್ಟರ ಅಸಮಾಧಾನವನ್ನೂ ಲೆಕ್ಕಿಸದೆ, ಮಗುವನ್ನು ಮುಸ್ಸಂಜೆಯಲ್ಲಿ ಮಲಗಿಸಿ, ತಾನೂ ಕೂಡ ದಿನಾ ಸಂಜೆ ಮಕ್ಕಿತ್ತಾಯರ ಅಂಗಳದಲ್ಲಿ ಸೇರುವ ಸಮೂಹವನ್ನು ಕೂಡಿ ಹಾಡತೊಡಗಿದಳು. ಆಕೆಯ ಸುಮಧುರ ಕಂಠವನ್ನು ಗುರುತಿಸಲು ಮುರಳಿ ಮಕ್ಕಿತ್ತಾಯರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಹಿಂದಿನ ಸಾಲಿನಿಂದ ಮುಂದಿನ ಸಾಲಿಗೆ, ಆಮೇಲೆ ಗುರುಗಳ ಸಾಲಿಗೆ ಮೀರಾ ಭಡ್ತಿ ಪಡೆದಳು. ಮೀರಾ ಹಾಗೂ ಮುರಳಿಯ ಸಾರಥ್ಯದಲ್ಲಿ ನಡೆಯುತ್ತಿದ್ದ ಭಜನೆಗಳು ಸಂಜೆಯ ರಂಗೇರಿಸತೊಡಗಿದವು. ಭಜನೆ ಮುಗಿದ ಮೇಲೆ, ಜನರೆಲ್ಲಾ ಮನೆಗೆ ಮರಳಿದ ಮೇಲೆ ಕೂಡ ಮೀರಾ ಹಾಗೂ ಮಕ್ಕಿತ್ತಾಯರು ಸ್ವಲ್ಪ ಹೊತ್ತು ಜಗಲಿಯಲ್ಲೇ ಕುಳಿತು, ಭಜನೆಗಳು, ಸಂಗೀತದ ಬಗ್ಗೆ ಚರ್ಚಿಸುತ್ತಿದ್ದರು. ಬರು ಬರುತ್ತಾ ಚರ್ಚೆ ತಮ್ಮ ಸ್ವಂತ ಕಷ್ಟ ಸುಖಗಳ ವಿನಿಮಯ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಸಾಗುತ್ತಿದ್ದ ದಿನಗಳ ಒಂದು ಬೆಳಗ್ಗೆ ಶ್ಯಾಮಭಟ್ಟರ ದೇಹ ಉಸಿರಾಟ ನಿಲ್ಲಿಸಿತು. ಅದು ಹೇಗೋ ಸತೀಶನಿಗೂ ಸುದ್ದಿ ತಲುಪಿ, ಒಂದೂ ಕಣ್ಣೀರಿಲ್ಲದೆ ಶ್ಯಾಮಭಟ್ಟರ ಅಂತ್ಯ ಕ್ರಿಯೆಗಳು ನಡೆದು ಹೋದವು. ಈ ಎಲ್ಲ ದಿನಗಳಲ್ಲಿ ಮನೆಯಲ್ಲೇ ಉಳಿದ ಸತೀಶ ಮೀರಾಳ ಜೊತೆ ಮಾತನಾಡುವುದಾಗಲೀ, ತನ್ನ ಮಗುವಿನ ಕಡೆ ಕಣ್ಣೆತ್ತಿ ನೋಡುವುದಾಗಲೀ ಅಪ್ಪಿ ತಪ್ಪಿ ಕೂಡ ಮಾಡಲಿಲ್ಲ. ಮುರಳಿ ಮಕ್ಕಿತ್ತಾಯರ ಕಡೆ ಸಂಶಯದ ದೃಷ್ಟಿ ಬೀರುವುದನ್ನೂ ಬಿಡಲಿಲ್ಲ. ೧೩ ದಿನಗಳ ನಂತರ ಮಕ್ಕಿತ್ತಾಯರ ಮನೆಯಲ್ಲಿ ಮತ್ತೆ ಭಜನೆಗಳು ಶುರುವಾದವು, ಸತೀಶ ಮತ್ತೆ ಮನೆ ಬಿಟ್ಟು ಹೋದ. ೧೪ನೆಯ ದಿನ ಮೀರಾ, ಭಜನೆಯನ್ನು ಸೇರಿಕೊಂಡಳು, ೧೫ನೆಯ ದಿನ ರಾತ್ರಿ ಮಕ್ಕಿತ್ತಾಯರಿಗೆ ಊಟ ಬಡಿಸಿ, ತಾನೂ ಊಟ ಮುಗಿಸಿ, ಮಗುವನ್ನು ಮಲಗಿಸಿ ಸ್ವಲ್ಪ ಹೊತ್ತಲ್ಲಿ ತಾನೂ ನಿದ್ರೆಗೆ ಜಾರಿದ ಮೀರಾಳಿಗೆ ಒಂದು ವಿಚಿತ್ರ ಕನಸು ಬಿತ್ತು.

ಒಂದು ಸುಂದರವಾದ ಸಂಜೆ, ದೂರದಲ್ಲಿ ಬೆಟ್ಟಗಳ ನಡುವೆ ಮರೆಯಾಗಲು ಕಾಯುತ್ತಿರುವ ಸೂರ್ಯ, ಹಸಿರು ತುಂಬಿದ ಬಯಲಿನ ತುಂಬಾ ಹುಲ್ಲು ಮೇಯುತ್ತಿರುವ ಹಸುಗಳು. ಬಯಲಿನ ನಡುವೆ ವಿಶಾಲವಾದ ಒಂಟಿ ಮರ. ಮರದ ಕೆಳಗಿನಿಂದ ಬರುತ್ತಿದೆ ಸುಮಧುರವಾದ ಕೊಳಲಿನ ನಿನಾದ. ಕ್ಷಣ ಕಾಲ ಮೈ ಮರೆತ ಮೀರಾ ಸನಿಹ ಹೋಗಿ ನೋಡಲು, ತೋರುವುದು ತನ್ನ ಕಡೆ ಬೆನ್ನು ಹಾಕಿ ಕೂತ, ನೀಲ ಮೈ ಕಾಂತಿಯಿಂದ ಮಿರುಗುತ್ತಿರುವ ಶರೀರ. ಕೈಯಲ್ಲಿ ಕೊಳಲು, ತಲೆಯ ಮೇಲೊಂದು ನವಿಲುಗರಿ. ಸಂಜೆಯ ತಂಗಾಳಿಗೆ ಅಷ್ಟಷ್ಟೇ ಓಲಾಡುತ್ತಿರುವ ಮುಂಗುರುಳು. ಮುಖದ ಸುತ್ತಲೂ ಸಂಜೆಯ ಸೂರ್ಯ ಸೃಷ್ಟಿಸಿದ ಪ್ರಭೆಯಂಥ ಬೆಳಕು. ತನ್ನ ಕಲ್ಪನೆಯ ಕೃಷ್ಣನ ಪ್ರತ್ಯಕ್ಷ ನೋಡುತ್ತಿರುವಂತೆ ಪುಳಕಿತಳಾದ ಮೀರಾ, ಸನಿಹ ಹೋಗಿ, ಮುಖ ನೋಡಲೆಂಬಂತೆ ಸ್ಪರ್ಶಿಸಲು, ತಿರುಗಿದ ಮುಖ ನೋಡಿ ಆಶ್ಚರ್ಯ, ಆನಂದದಿಂದ ಮಾತೇ ಹೊರಡದಾಗುವುದು. ಅದೇ ಪರಿಚಿತ ಮುಖ ಈ ಕೃಷ್ಣನಿಗೆ. ಅದೇ ಪರಿಚಿತ ನಗು.

Untitled

ಮಂಗಳ:

“ವಸುದೇವ ತನಯನಿಗೆ ವೈಕುಂಠ ನಿಲಯನಿಗೆRadha_Krishna___Hindu_deities_by_eskay_raut

ಕುಸುಮನಾಭನಿಗೆ ಕೋಮಲರೂಪಗೆ

ಯಶೋದೆ ನಂದನಗೆ ವಸುಧೆಯ ರಮಣನಿಗೆ|

ಭಾಮೆಯರಸ ಗೋಪಾಲಕೃಷ್ಣಗೆ

ಮಂಗಲಂ ಜಯ ಮಂಗಲಂ”

ಬಹು ದಿನಗಳ ನಂತರ ಮನೆ ಮತ್ತು ಮಡದಿ ಮೇಲಿನ ಅಧಿಕಾರವನ್ನು ಸಾಧಿಸಲು ಮನೆಗೆ ಹಿಂದಿರುಗಿದ ಸತೀಶನನ್ನು ಎದುರುಗೊಂಡದ್ದು ಧೂಳು, ಕಸ ಕಡ್ಡಿಗಳಿಂದ ತುಂಬಿ ಹೋದ ಮನೆಯ ಅಂಗಣ ಹಾಗೂ ಬೀಗ ಜಡಿದಿರುವ ಮನೆಯ ಹೆಬ್ಬಾಗಿಲು. ಕಷ್ಟ ಪಟ್ಟು ಬೀಗ ಮುರಿದು ಒಳ ನುಗ್ಗಿದ ಸತೀಶನಿಗೆ ಮೊದಲು ತೋರಿದ್ದು ಎದುರಿನ ಮೇಜಿನ ಮೇಲೆ, ತನ್ನನ್ನೇ ಕಾಯುತ್ತಿರುವಂತೆ ಕೂತಿದ್ದ ಬಿಳಿ ಕಾಗದದ ಹಾಳೆ.

ಓದಲು ಕೈಗೆತ್ತಿಕೊಂಡವನಿಗೆ ತೋರಿದ್ದು ಬರಿ ಒಂದೇ ಸಾಲು.

“ಪೂರ್ವದ ಸಂಕಟಗಳನ್ನು ಮರೆತು, ಭವಿಷ್ಯದ ಆತಂಕಗಳ ಲೆಕ್ಕವಿಡದೇ, ವರ್ತಮಾನದಲ್ಲಿ ನನಗೋಸ್ಕರ ಬದುಕಲು ದೂರ ಹೊರಟಿದ್ದೇನೆ. ಹುಡುಕುವ ಪ್ರಯತ್ನ ಬೇಡ, ಸಿಕ್ಕಿದರೂ ನಾನು ನಿಮಗೆ ಅಪರಿಚಿತಳೇ.”

ಅನಿರೀಕ್ಷಿತ ಆಘಾತದಿಂದ ಪೆಚ್ಚಾದ ಸತೀಶ ಅತ್ತಿತ್ತ ನೋಡುತ್ತಿರಲು ತೋರಿದ್ದು ಅಲ್ಲೇ ಬಿದ್ದಿದ್ದ ‘ಚಿಗುರು’, ಮಕ್ಕಳ ಮಾನಸಿಕ ಸ್ವಾಸ್ಥ್ಯ ಕೇಂದ್ರದ ದಾಖಲಾತಿ ರಶೀದಿ. ಎಲ್ಲ ವಿಷಯಗಳೂ ಒಂದೊಂದಾಗಿ ಹೊಳೆದಂತಾಗಿ, ತನ್ನ ಗಂಡಸು ಅಹಂಕಾರಕ್ಕೆ ಪೆಟ್ಟು ಬಿದ್ದ ಆಕ್ರೋಶದಿಂದ ಮನೆಯಿಂದ ಹೊರ ಅಂಗಳಕ್ಕೆ ಬಂದು ಮಕ್ಕಿತ್ತಾಯರ ಮನೆ ಕಡೆ ದೃಷ್ಟಿ ಹಾಯಿಸಿದ ಸತೀಶನಿಗೆ, ಮಕ್ಕಿತ್ತಾಯರ ಮನೆಯ ಹಳೆ ಮುರುಕು ಬಾಗಿಲಿಗೆ ಹಾಕಿದ್ದ ಹೊಸ ಹೊಳೆಯುವ ಬೀಗ ತನ್ನನ್ನು ಮತ್ತಷ್ಟು ಛೇಡಿಸಿದಂತೆ ಭಾಸವಾಯಿತು.

ಈಗ ಶ್ಯಾಮ ಭಟ್ಟರ ಮನೆ ಅಂಗಳದಿಂದ ಸಂಜೆ ಭಜನೆಗಳು ಕೇಳಿ ಬರುವುದಿಲ್ಲ. ಕೇಳುವುದು ಬರೀ ಗಾಳಿ ಮಾತುಗಳು.

Untitled

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)