ಪ್ರಶ್ನೋತ್ತರ : ಭಾಗ ೧

“ಗೀತಕ್ಕ… ಹೋಯ್ ಗೀತಕ್ಕ..” ಪೋಸ್ಟ್ ಮ್ಯಾನ್ ನಂಜಪ್ಪ ಕೂಗಿದಾಗ ಗೀತಕ್ಕ ಮನೆಯ ಟೆರೇಸ್ ಮೇಲೆ ಉರಿ ಬಿಸಿಲಿಗೆ ಶಪಿಸುತ್ತಾ ಒಗೆದ ಬಟ್ಟೆ ಒಣಗಿಸುತ್ತಿದ್ದರು. ನಂಜಪ್ಪನ ಧ್ವನಿ ಕೇಳಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲಿಳಿಯುತ್ತಾ, ಬಂದೆ ಬಂದೆ ಎಂದು ತಾನು ಕೂಡ ಕೂಗುತ್ತಾ ಏದುಸಿರು ಬಿಡುತ್ತಾ ಕೆಳಗಿಳಿದರು. “ತಗೊಳ್ಳಿ ಗೀತಕ್ಕ ನಿಮಗೊಂದು ಪತ್ರ ಬಂದಿದೆ.” ಎಂದು ನಂಜಪ್ಪ ಹೇಳಿದಾಗ ಯಾವುದೋ ದೇವಸ್ಥಾನದ ಜಾತ್ರೆಯ ಆಮಂತ್ರಣ ಪತ್ರಿಕೆಯೋ ಅಥವಾ ಯಾವುದೋ ವಿಮೆ ಕಂಪನಿಯ ಪತ್ರವಿರಬೇಕೆಂದು ಆಲಕ್ಷ್ಯದಿಂದದಲೇ ತೆಗೆದುಕೊಂಡರು. “ಗೀತಕ್ಕ ಮನೆ ಎದುರು ಒಂದು ಪೋಸ್ಟ್ ಬಾಕ್ಸ್ ಹಾಕಿ ಇಡಬಹುದಲ್ಲ. ನಿಮಗೂ ಪ್ರತಿ ಸಲ ಕೆಳಗೆ ಬರುವುದು ತಪ್ಪುತ್ತದೆ, ನನಗೂ ನಿಮ್ಮನ್ನು ಕಾಯುವುದು ತಪ್ಪುತ್ತದೆ.” ನಂಜಪ್ಪ ಗೊಣಗುತ್ತಲೇ ಸೈಕಲ್ ಏರಿ ಹೊರಟ. ಉತ್ತರಿಸುವ ಗೋಜಿಗೂ ಹೋಗದೆ ಪತ್ರವನ್ನು ಅಲ್ಲೇ ಬದಿಗಿಟ್ಟು ಆಗಷ್ಟೇ ಮನೆ ಎದುರು ಚದುರಿರುವ ಮರದ ಒಣಗಿದ ಎಲೆಯ ಕಸ ಗುಡಿಸಲು ಗೀತಕ್ಕ ಶುರುವಿಟ್ಟುಕೊಂಡರು. ಅಷ್ಟಕ್ಕೂ ಎಷ್ಟು ಮಹಾ ಕಾಗದಗಳು ಬರುತ್ತವೆ ಗೀತಕ್ಕನಿಗೆ? ಮೊದಲಿನಿಂದಲೂ ಸಂಬಂಧಿಕರೊಡನೆ ಅಷ್ಟೇನೂ ಸಂಪರ್ಕವಿಟ್ಟುಕೊಂಡವರಲ್ಲ. ಅಪ್ಪ ಅಮ್ಮ ತೀರಿದ ಮೇಲಂತೂ ಅಪರೂಪಕ್ಕೊಮ್ಮೆ ತಿಥಿಗೆ ಪಿಂಡ ಹಾಕಲು ತವರೂರಿನಲ್ಲಿರುವ ಅಣ್ಣನ ಮನೆಗೆ ಹೋಗುವುದು ಬಿಟ್ಟರೆ ಆ ಕಡೆ ತಲೆ ಕೂಡ ಹಾಕುವುದಿಲ್ಲ. ಇಲ್ಲಿ ಬೆಂಗಳೂರಿನಲ್ಲಿ ಸಂಜೆ ಉದ್ಯಾನವನದಲ್ಲಿ ವಾಕಿಂಗ್ ಮಾಡುವಾಗ ಸಿಗುವ ಕೆಲ ಹೆಂಗಸರನ್ನು ಬಿಟ್ಟರೆ ತುಂಬಾ ಆಪ್ತವಾಗಿರುವ ಗೆಳತಿಯರು ಇಲ್ಲ. ಇನ್ನು ಗಂಡ ಗಣೇಶಯ್ಯ ಕೆಲಸ ಮುಗಿಸಿ ಮನೆಗೆ ಬಂದು ಯಾವುದೋ ಪುಸ್ತಕವನ್ನು ಕೈಗೆತ್ತಿಕೊಂಡರೆ ಮತ್ತೆ ಏಳುವುದು ಊಟಕ್ಕೆ ಮಾತ್ರ. ಊಟದ ಸಮಯದಲ್ಲಿ ಸ್ವಲ್ಪ ಅನ್ನ ಹಾಕು, ಸಾರು ಹಾಕು ಅನ್ನುವುದು ಬಿಟ್ಟರೆ ಬೇರೇನು ಮಾತನಾಡದಷ್ಟು ಸವೆದು ಹೋಗಿದೆ ಅವರ ದಾಂಪತ್ಯ.

ಗೀತಕ್ಕ ಹೀಗೆ ಅಂತರ್ಮುಖಿಯಾಗುವುದಕ್ಕೆ ಕಾರಣವಿಲ್ಲವೆಂದಲ್ಲ. ಮದುವೆಯಾದ ಮೊದಲೆರಡು ವರುಷ ಎಲ್ಲ ಸರಿಯಾಗಿಯೇ ನಡೆದಿತ್ತು. ಬರು ಬರುತ್ತಾ ಸಿಕ್ಕ ಸಿಕ್ಕವರೆಲ್ಲ, ಹೋದ ಹೋದಲ್ಲಿ ಗೀತಕ್ಕನಿಂದ ವಿಶೇಷ ಸುದ್ದಿಯ prashnottaraಬಗ್ಗೆ ನಿರೀಕ್ಷೆ ಮಾಡುತ್ತಾ ಮೊದ ಮೊದಲು ತಮಾಷೆಯಾಗಿ ಬರು ಬರುತ್ತಾ ಸಂಶಯದಿಂದ ಕಡೆಗೆ ದೂರುವ ರೀತಿಯಲ್ಲಿ, ತಿರಸ್ಕಾರದ ರೀತಿಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಬಿಸಾಡುತ್ತ ಗೀತಕ್ಕನ ನೆಮ್ಮದಿಯನ್ನು,ಖುಷಿಯನ್ನು, ಮನೋಸ್ಥೈರ್ಯವನ್ನು ಹಿಂಡಿ ಹೀರಿ ಸಂತುಷ್ಟರಾಗಿ ತೇಗುವುದನ್ನು ನೋಡಿ, ಜನರ ತೂತಾದ ಬುದ್ಧಿಯಲ್ಲಿ ಮಾನವೀಯತೆ ಎಂದೋ ಸೋರಿ ಹೋಗಿರುವುದನ್ನು ತಿಳಿದು ಕಂಗಾಲಾಗಿ, ಒಬ್ಬೊಬ್ಬರಿಂದಲೇ ಕೊಂಡಿ ಕಳಚಿಕೊಳ್ಳುತ್ತಾ ಬಂದು ಏಕಾಂತವೆ ಬದುಕು ಎಂಬ ಸ್ಥಿತಿಗೆ ಬಂದು ನಿಂತಿದ್ದಾರೆ ಗೀತಕ್ಕ. ಗಣೇಶಯ್ಯನನ್ನು ಕೂಡ ಆಪಾದಿಸುವಂತಿಲ್ಲ. ಕೂದಲು ನರೆದ ಮೇಲೆ ಸಂತನಂತೆ ತೋರುವುದು ಬಿಟ್ಟರೆ ಮದುವೆ ಹೊಸತರಲ್ಲಿ ಅವರು ಕೂಡ ರಸಿಕರೇ. ಹಲವಾರು ನಿದ್ರೆಯಿಲ್ಲದ ರಾತ್ರಿಗಳನ್ನು ಗೀತಕ್ಕನಿಗೆ ತೋರಿಸಿದವರೇ ಗಣೇಶಯ್ಯ. ಆದರೂ ಮದುವೆಯಾಗಿ ವರುಷ ವರುಷಗಳು ಕಳೆದರೂ ದೇವರು ಮಗುವನ್ನು ಮಾತ್ರ ಕರುಣಿಸಲಿಲ್ಲ. ಕೊರತೆ ಯಾರಲ್ಲಿದೆ ಎಂಬ ಪರೀಕ್ಷೆ ಮಾಡಿಸಲು ದಂಪತಿಗಳು ವೈದ್ಯರ ಬಳಿ ಕೂಡ ಹೋಗಲಿಲ್ಲ. ಸಮಾಜದಲ್ಲಿ ಬಂಜೆಯೆಂಬ ಆಪಾದನೆ ಮೊದಲು ಬರುವುದು ಹೆಂಡತಿಯ ಮೇಲೆಯೇ ಎಂದು ಗೊತ್ತಿದ್ದ ಗಣೇಶಯ್ಯ ವಿನಾ ಕಾರಣ ಆ ಹೊರೆ ತನ್ನ ಮೇಲೆಲ್ಲಾದರೂ ತಿರುಗೀತೆಂಬ ಭಯದಿಂದ ತೆಪ್ಪಗೆ ಇದ್ದು ಬಿಟ್ಟರು. ಗೀತಕ್ಕನಿಗೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕೆನ್ನಿಸಿದರೂ ಆ ವಿಷಯ ಎತ್ತಿದಾಗಲೆಲ್ಲ ಗಣೇಶಯ್ಯನ ರೇಗಾಟ ನೋಡಿ ತಾವೂ   ಸುಮ್ಮನಿದ್ದು ಬಿಟ್ಟರು. ಯಾಕೋ ಗಣೇಶಯ್ಯ ಮಗುವನ್ನು ದತ್ತು ತೆಗೆದುಕೊಳ್ಳುವ ವಿಷಯದಲ್ಲೂ ನಿರಾಸಕ್ತಿ ತೋರಿದ್ದು ನೋಡಿ ಎಲ್ಲಿ ಅವರು ತನಗೆ ಗೊತ್ತಿಲ್ಲದಂತೆ ಇನ್ನೊಂದು ಸಂಸಾರ ಹೂಡಿರಬಹುದೆಂಬ ಆತಂಕ ಮೂಡಿ ಅವರನ್ನು ಒಲಿಸಿಕೊಳ್ಳಲು ಗಂಡನ ಚಾಕರಿಯೇ ಜೀವನದ ಪರಮೋಧ್ಯೇಯವನಾಗಿಸಿಕೊಂಡ ಸಾಧು ಜೀವಿ ಈ ಗೀತಕ್ಕ.

ಅಂಗಣ ಗುಡಿಸಿ ಮನೆಯೊಳಗೆ ಹೊರಡುತ್ತಿದ್ದಂತೆ ಗೀತಕ್ಕನಿಗೆ ಎತ್ತಿಟ್ಟಿದ್ದ ಕಾಗದದ ನೆನಪಾಯಿತು. ಕಾಗದದ ಮೇಲೆ ತನ್ನದೇ ಹೆಸರಿದೆ. ಯಾರಪ್ಪ ತನಗೆ ಪತ್ರ ಬರೆದಿರುವುದು ಎಂದು ಆಶ್ಚರ್ಯದಿಂದ ತಿರುಗಿಸಿ ನೋಡಲು ಕಾಗದದ ಕವರ್ ಅಲ್ಲಿ ದೂರದರ್ಶನ ಕೇಂದ್ರ, ಬೆಂಗಳೂರು ಎಂದು ಮುದ್ರಿತವಾಗಿದೆ! ನಿಧಾನಕ್ಕೆ ಗೀತಕ್ಕನಿಗೆ ಒಂದೊಂದೇ ವಿಷಯ ಹೊಳೆದು ಮುಖದಲ್ಲಿ ಎಂದೋ ಕಳೆದು ಹೋದ ಸಂತೋಷ ಮತ್ತೆ ಮೂಡತೊಡಗಿತು. ದಿನಾ ರಾತ್ರಿ ೮ ಗಂಟೆಗೆ ಗಣೇಶಯ್ಯನವರಿಗೆ ಊಟ ಬಡಿಸಿ ತಾನು ಊಟ ಮುಗಿಸುವುದರಲ್ಲಿ ಗಣೇಶಯ್ಯ ಹಾಸಿಗೆಯಲ್ಲಿ ಕಾಲು ಚಾಚಿ ನಿದ್ರೆಗೆ ಶರಣಾಗುತ್ತಿದ್ದರು. ಮಧ್ಯಾಹ್ನ ಮಲಗುವ ಅಭ್ಯಾಸ ಮಾಡಿಕೊಂಡಿದ್ದ ಗೀತಕ್ಕನಿಗೆ ರಾತ್ರಿ ಅಷ್ಟು ಬೇಗ ನಿದ್ರೆ ಬಾರದು. ಕಾಲ ಕಳೆಯಲು ಟಿವಿ ಇದ್ದ ಮೇಲೆ ಇನ್ಯಾವ ಕೊರತೆ? ಇರುವ ಎರಡು ಘಂಟೆಯಲ್ಲಿ, ಬರುವ ಮೂವತ್ತು ಕನ್ನಡ ಚಾನಲ್ ಗಳಲ್ಲಿ ಪ್ರಸಾರವಾಗುವ ಕನಿಷ್ಠ ಹತ್ತು ಧಾರಾವಾಹಿಗಳ ಪಾತ್ರಗಳನ್ನು ಹಾಗು ಕಥೆಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಗೀತಕ್ಕ ಮೈಗೂಡಿಸಿಕೊಂಡಿದ್ದರು. ಆದರೆ ಅದೊಂದು ರಾತ್ರಿ ಮಾತ್ರ ಚಂದನ ವಾಹಿನಿಯನ್ನು ಹೊರತುಪಡಿಸಿ ಉಳಿದೆಲ್ಲಾ ಕನ್ನಡ ಚಾನಲ್ಲುಗಳೂ ಸ್ಥಬ್ದವಾಗಿದ್ದವು. ಅಂದೇ ಗೀತಕ್ಕ ಅದರಲ್ಲಿ ಪ್ರಸಾರವಾಗುತ್ತಿದ್ದ “ಥಟ್ ಅಂತ ಹೇಳಿ” ಎಂಬ ಪ್ರಶ್ನೋತ್ತರ ಕಾರ್ಯಕ್ರಮವನ್ನು ಮೊದಲ ಬಾರಿ ನೋಡಿದ್ದು. ಪದವಿಪೂರ್ವ ತನಕದ ಶಿಕ್ಷಣವನ್ನು ಪೂರೈಸಿದ್ದ ಗೀತಕ್ಕನಿಗೆ ತನ್ನ ಜ್ಞಾನದ ಬಗ್ಗೆ ಹೆಮ್ಮೆ ಮೂಡಿದ್ದು ಆವತ್ತೇ ಮೊದಲು. ಕಾರ್ಯಕ್ರಮದಲ್ಲಿ ಕೇಳಲಾಗುತ್ತಿದ್ದ  ಹೆಚ್ಚಿನ ಪ್ರಶ್ನೆಗಳಿಗೆ ಉತ್ತರ ಅರಿತಿದ್ದ ಗೀತಕ್ಕ “ಥಟ್ ಅಂತ ಹೇಳಿ” ಕಾರ್ಯಕ್ರಮದ ಖಾಯಂ ವೀಕ್ಷಕರಾದರು. ಹೀಗಿರುವಾಗ ತಾನು ಒಮ್ಮೆ ಯಾಕೆ ಇದರಲ್ಲಿ ಭಾಗವಹಿಸಬಾರದು ಎಂಬ ಆಲೋಚನೆ ಹೊಳೆದು ಕಾರ್ಯಕ್ರಮದ ಆಯೋಜಕರಿಗೆ ಪತ್ರ ಬರೆದಿದ್ದರು. ತಿಂಗಳುಗಳು ಕಳೆದರೂ ಉತ್ತರ ಬರದೇ ಹೋದದ್ದನ್ನು ನೋಡಿ ನಿರಾಸೆಯಿಂದ ಆ ವಿಚಾರವನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದರು ಕೂಡ. ಇಂದು ಬಂದ ಪತ್ರ ಅವೆಲ್ಲ ನೆನಪುಗಳನ್ನು ಮರುಕಳಿಸಿವಂತೆ ಮಾಡಿತು.
ಆತುರದಿಂದ ಮನೆ ಒಳಗೆ ನಡೆದು ಪತ್ರವನ್ನು ಓದುತ್ತ ಹೋದಂತೆ ಗೀತಕ್ಕನ ಮುಖ ರಂಗೇರತೊಡಗಿತು. ಅನುಮಾನದಂತೆಯೇ ಅದು ಚಂದನ ವಾಹಿನಿಯಿಂದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಮಂತ್ರಣದ ಸಲುವಾಗಿನ ಪತ್ರವಾಗಿತ್ತು. ಮುಂದಿನ ಸೋಮವಾರ ಬೆಳಗ್ಗೆ ಸ್ಟುಡಿಯೋದಲ್ಲಿ ಹಾಜರಿರುವಂತೆ ಸೂಚಿಸಲಾಗಿತ್ತು. ಪುಳಕದಿಂದ ಗೀತಕ್ಕ ಹಾಗೇ ಎಷ್ಟು ಹೊತ್ತು ಕುರ್ಚಿಯ ಮೇಲೆ ಮುಖವಿಷ್ಟು ಅಗಲ ಮಾಡಿಕೊಂಡು ಕೂತಿದ್ದರೋ ಗೊತ್ತಿಲ್ಲ, ವರ್ತಮಾನಕ್ಕೆ ಮರಳಿದ ಕೂಡಲೇ ಕ್ಯಾಲೆಂಡರ್ ಕಡೆ ದೃಷ್ಟಿ ಹಾಯಿಸಿ ನೋಡಿ ಇನ್ನು ಬರೀ ೫ ದಿನಗಳಷ್ಟೇ  ಬಾಕಿ ಇರುವುದನ್ನು ನೋಡಿ ಗಾಬರಿಗೊಂಡರು.

ಗಣೇಶಯ್ಯ ಕೆಲಸ ಮುಗಿಸಿ ಮನೆಗೆ ಬಂದಾಗ ವಿಷಯ ತಿಳಿಸಬೇಕೆಂದಿದ್ದ ಉತ್ಸಾಹ ಯಾಕೋ ಅವರ ಮುಖ ನೋಡಿ ಹಾಗೇ ಮಾಸಿ ಹೋಯಿತು. ಆಮೇಲೆ ಗಂಡನಿಗೆ ಅಚ್ಚರಿ ನೀಡಲು ಎಂಬಂತೆ ಆ ವಿಷಯವನ್ನು ಹಾಗೇ ಕಾದಿರಿಸಿದರು. ಆ ರಾತ್ರಿಯಿಡೀ ಗೀತಕ್ಕನಿಗೆ ನಿದ್ರೆಯಿಲ್ಲ. ಅಂದಿನ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಅತೀ ಸೂಕ್ಷ್ಮತೆಯಿಂದ ಗಮನಿಸಿ, ಯಾವ ಸುತ್ತಿನ ನಂತರ ಯಾವ ಸುತ್ತು, ಬಂದ ಅಭ್ಯರ್ಥಿಗಳು ಹೇಗೆ ಆಟವಾಡುತ್ತಾರೆ, ಯಾವ ಕ್ಷಣದಲ್ಲಿ ಉತ್ತರಿಸಲು ಕರೆಗಂಟೆ ಹೊಡೆಯಬೇಕು? ಕುಳಿತುಕೊಳ್ಳುವಾಗ ಭಾವ ಭಂಗಿ ಹೇಗಿರಬೇಕು? ಕಾರ್ಯಕ್ರಮದ ಶುರುವಿನಲ್ಲಿ ತನ್ನ ಪರಿಚಯ ಹೇಗೆ ಹೇಳಿಕೊಳ್ಳಬೇಕು ಎಂದು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡರು. ೧ ಗಂಟೆಯ ಸತತ ಪರಿಶ್ರಮದ ನಂತರ ಪರಿಚಯದ ಪ್ರಸ್ತಾವನೆ ಸಿದ್ಧವಾಯಿತು. ನಾಳೆಯಿಂದ ದಿನಾಲೂ ಗಣೇಶಯ್ಯ ಹೊರಟ ನಂತರ ಈ ಟಿಪ್ಪಣಿಯನ್ನು ಪರಿಪಾಠ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಹಾಸಿಗೆಯ ಮೇಲೆ ಮೈ ಚಾಚುವಾಗ ಆಗಲೇ ರಾತ್ರಿ ೧ ಗಂಟೆ. ಆಮೇಲೆ ನಿದ್ರೆ ಹತ್ತಲು ಗೀತಕ್ಕನಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಮರುದಿನ ಬೆಳಗ್ಗೆ ಗೀತಕ್ಕನಿಗೆ ಎಂದಿನಂತೆ ಎಚ್ಚರವಾಗಲಿಲ್ಲ. ಮುಖ ತೊಳೆದು ಬಂದರೂ ಇನ್ನೂ ಮಲಗಿರುವ ಹೆಂಡತಿಯನ್ನು ನೋಡಿ ಗಣೇಶಯ್ಯನವರೇ ಸಿಡಿಮಿಡಿಗೊಂಡು ಆಕೆಯನ್ನು ಎಬ್ಬಿಸಿದರು. ಕಿಡಿಕಾರುತ್ತಿದ್ದ ಗಂಡನ ಮುಖ ನೋಡಿ ಬೇಸರವಾದರೂ ವಿಷಯ ತಿಳಿದಾಗ ಅವರ ಮುಖದಲ್ಲಿ ಮೂಡುವ ಸಂತೋಷವನ್ನು ನೆನೆಸಿಕೊಂಡೇ ಗೀತಕ್ಕನಿಗೆ ಸಮಾಧಾನವಾಯಿತು. ತನ್ನ ಹೆಂಡತಿ ಟಿವಿಯಲ್ಲಿ ಬರುವುದು ಸಾಮಾನ್ಯವಾದ ಮಾತೇ? ಅಂತೂ ಕಡೆಗಾದರೂ ಗಂಡನಿಗೆ ತನ್ನ ಮೇಲೆ ಹೆಮ್ಮೆ ಮೂಡುವಂಥ ಒಂದು ಕೆಲಸವನ್ನು ತಾನು ಮಾಡುತ್ತಿದ್ದೇನೆ ಎಂಬ ಸಡಗರದಿಂದಲೇ ದಿನಚರಿಯನ್ನು ಶುರು ಹಚ್ಚಿಕೊಂಡ ಗೀತಕ್ಕ, ಗಣೇಶಯ್ಯ ಮನೆಯಿಂದ ಹೊರಟ ಕೆಲವೇ ಸಮಯದಲ್ಲಿ ಮನೆ ಕೆಲಸವನ್ನೆಲ್ಲಾ ಮುಗಿಸಿ ಹತ್ತಿರದಲ್ಲೇ ಇದ್ದ ಸರಕಾರೀ ಗ್ರಂಥಾಲಯಕ್ಕೆ ಹೊರಟು, ಅಲ್ಲಿ ಇದ್ದ ಬಿದ್ದ ಎಲ್ಲ ವಾರ ಪತ್ರಿಕೆ, ದಿನ ಪತ್ರಿಕೆಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿ ಕಾರ್ಯಕ್ರಮದಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಅಂಕಣಗಳಲ್ಲಿ, ಸುದ್ದಿಗಳಲ್ಲಿ ತಡಕಾಡಿ ಊಹಿಸಿದರು. ಅಲ್ಲಿಂದ ಸೀದಾ ಪುಸ್ತಕದಂಗಡಿಗೆ ಹೋಗಿ ಅಂಗಡಿಯವನ ಹತ್ತಿರವೇ ಉತ್ತಮವಾದ ಸಾಮಾನ್ಯ ಜ್ಞಾನದ ಪುಸ್ತಕವನ್ನು ಕೇಳಿ ಖರೀದಿಸಿದರು. ಪುಸ್ತಕದ ಗಾತ್ರ ನೋಡಿ ಗಾಬರಿಗೊಂಡರು. ಕೆಲವೇ ದಿನಗಳಲ್ಲಿ ಅದರಲ್ಲಿರುವ ವಿಷಯಗಳನ್ನು ತಾನು ಅರಿತು ಕಾರ್ಯಕ್ರಮದಲ್ಲಿ ಪಟಪಟನೆ ಉತ್ತರಿಸುವುದನ್ನು ನೆನೆದುಕೊಂಡು ಪುಳಕಿತರಾದರು. ಶನಿವಾರದ ತನಕ ಗೀತಕ್ಕನ ಗ್ರಂಥಾಲಯ ಭೇಟಿಯ ದಿನಚರಿ ಮುಂದುವರೆಯಿತು. ಆ ಮಧ್ಯದಲ್ಲಿ ಪಕ್ಕದಲ್ಲೇ ಇದ್ದ ಸೀರೆಯಂಗಡಿಗೆ ಹೋಗಿ ತನ್ನ ಪ್ರಾಯಕ್ಕೆ ಹೊಂದುವಂಥಾ ಹೊಸ ಮಾದರಿಯ ಸೀರೆಯನ್ನು ಅಂಗಡಿಯವನಲ್ಲಿ ಕೇಳಿ ಪಡೆದು ಅಂದೇ ದರ್ಜಿಯಲ್ಲಿ ರವಿಕೆ ಹೊಲಿಯಲು ಕೊಟ್ಟು ಇನ್ನೆರಡೇ ದಿನದಲ್ಲಿ ನೀಡಬೇಕೆಂದು ಮನವಿ ಮಾಡಿ ಬಂದದ್ದಾಯಿತು. ಭಾನುವಾರ ಗಣೇಶಯ್ಯ ಮನೆಯಲ್ಲೇ ಇದ್ದ ಕಾರಣ ಗೀತಕ್ಕನಿಗೆ ಯಾವುದೇ ತಯ್ಯಾರಿ ಮಾಡಿಕೊಳ್ಳಾಗಲಿಲ್ಲ. ರಾತ್ರಿಯಾಗುತ್ತಿದ್ದಂತೆ ಗೀತಕ್ಕನ ಮನದ ತುಂಬಾ ಆತಂಕ ತುಂಬಿಕೊಳ್ಳತೊಡಗಿತು. ನಾಳೆ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾರೆನೋ ಎಂಬ ಭಯ ಕಾಡಿ ಮನಸ್ಸಿನಲ್ಲಿದ್ದದ್ದೆಲ್ಲ ಶೂನ್ಯವಾಗಿ ತಾನು ವಾರದಿಂದ ಬಾಯಿಪಾಠ ಮಾಡಿದ್ದ, ತನ್ನ ಸಲುವಾಗಿನ ಪರಿಚಯದ ಮಾತುಗಳು ಕೂಡ ಮರೆತು ಹೋಯಿತು. ಅಮೇಲೆ ಎಷ್ಟೋ ಹೊತ್ತಿನ ನಂತರ ಬಂದ ನಿದ್ರೆಯಲ್ಲಿ ಥರೇವಾರಿ ಕನಸುಗಳು ಗೀತಕ್ಕನಿಗೆ ಬಿದ್ದವು. ಪ್ರತೀ ಪ್ರಶ್ನೆಗೆ ಬಹುಮಾನವಾಗಿ ಕೊಡುವ ಪುಸ್ತಕಗಳಿಂದ, ಕಾರ್ಯಕ್ರಮದಲ್ಲಿ ತಾನು ಕೂತಿರುವ ಮೇಜು ತುಂಬಿ ತನ್ನ ಮುಖ ಕೂಡ ಕಾಣದಿರುವ ಹಾಗೆ ಒಂದು ಕನಸು ಬಂದರೆ, ಇನ್ನೊಂದರಲ್ಲಿ ಎಲ್ಲ ಪ್ರಶ್ನೆಗಳಿಗೂ ತಪ್ಪು ಉತ್ತರ ಹೇಳಿ, ನಕಾರಾತ್ಮಕ ಅಂಕ ಗಳಿಸಿದ ಕಾರಣ ಜುಲ್ಮಾನೆಯ ರೂಪದಲ್ಲಿ ತನ್ನ  ಮನೆಯಲ್ಲಿರುವ ಪುಸ್ತಕವನ್ನು ಅವರಿಗೆ ಕಳುಹಿಸಿ ಕೊಡಬೇಕೆಂದು ಆಯೋಜಕರು ಆದೇಶ ಹೊರಡಿಸಿದಂತೆಯೂ, ಅವರು ಸೂಚಿಸಿದ  ಅವಧಿಯಲ್ಲಿ ತಾನು ಮನೆಯಲ್ಲಿರುವ ಸ್ವಂತ ಪುಸ್ತಕಗಳನ್ನು ಕಳುಹಿಸದ ಕಾರಣ, ಕಾರ್ಯಕ್ರಮದ ನಿಯಮ ಮೀರಿದ ಸಲುವಾಗಿ  ಇಬ್ಬರು ಪೋಲಿಸ್ ಪೇದೆಗಳು ಒಂದು ಬೆಳಗ್ಗೆ ತನ್ನ ಮನೆ ಮುಂದೆ ಕೈ ಕೋಳದೊಂದಿಗೆ ತನ್ನನ್ನು ಜೈಲಿಗಟ್ಟಲು ಸಿದ್ಧವಾಗಿ ಬಂದಂತೆಲ್ಲ ವಿಚಿತ್ರ ಕನಸುಗಳು ಬಿದ್ದು ಅರೆಬರೆ ನಿದ್ರೆಯಲ್ಲೇ ಗೀತಕ್ಕ ಹಾಸಿಗೆಯಲ್ಲಿ ಹೊರಳಾಡಿದರು.

ಅಂತೂ ಬೆಳಗ್ಗೆ ಬೇಗನೇ ಎದ್ದ ಗೀತಕ್ಕ ಸಡಗರದಿಂದಲೇ ಮನೆ ಕೆಲಸವೆಲ್ಲ ಮುಗಿಸಿ ಗಣೇಶಯ್ಯನನ್ನು ಆಫೀಸಿಗೆ ಕಳುಹಿಸಿಕೊಟ್ಟು ದೂರದರ್ಶನ ವಾಹಿನಿಯಿಂದ ಬಂದ ಪತ್ರವನ್ನು ಕೈಗೆತ್ತಿಕೊಂಡು, ಸ್ಟುಡಿಯೋದಲ್ಲಿ 1ಹಾಜರಿರಬೇಕಾದ ಸಮಯ ಬೆಳಗ್ಗೆ ೧೧ ಗಂಟೆಗೆ ಎಂದು ಇನ್ನೊಮ್ಮೆ ಖಚಿತ ಪಡಿಸಿಕೊಂಡು ಹೊರಡಲು ಅನುವಾದರು. ಇದಕ್ಕೆಂದೇ ಖರೀದಿಸಿದ ಹೊಸ ಸೀರೆಯನ್ನುಟ್ಟುಕೊಂಡು ಸಂಭ್ರಮಿಸಿದರು. ಮನೆಯಿಂದ ಸುಮಾರು ೧೦ ಕಿಲೋಮೀಟರು ದೂರವಿರುವ ಸ್ಟುಡಿಯೋ ತಲುಪ ಬೇಕಾದರೆ ಬಸ್ಸಿನಲ್ಲಿ ಹೊರಟರೆ ಎಲ್ಲಿ ತಡವಾಗಿ ಬಿಡಬಹುದೇನೋ ಎಂಬ ಆತಂಕದಿಂದ ಆಟೊ ಹತ್ತಿ, ಮೀಟರ್ ಹಾಕದ ಚಾಲಕನ ಜೊತೆ ವಾದ ವಿವಾದ ನಡೆಸಿ ಸುಸ್ತಾಗಿ ಕಡೆಗೂ ಆತ ಹೇಳಿದ ದರಕ್ಕೆ ಒಪ್ಪಿ ಆಟೊ ಹತ್ತಿ ಕುಳಿತು ಎಲ್ಲಿ ಮುಖಕ್ಕೆ ಹಚ್ಚಿಕೊಂಡ ಪೌಡರ್ ಕೆಟ್ಟು ಹೋಗಬಹುದೇನೋ ಎಂದು ಸೂಕ್ಷ್ಮವಾಗಿ ಬೆವರು ಒರೆಸಿಕೊಂಡರು. ಪ್ರಯಾಣ ಸಮಯದಲ್ಲಿ ಇನ್ನೊಮ್ಮೆ ತನ್ನ ಪರಿಚಯದ ಟಿಪ್ಪಣಿಯನ್ನು ಬಾಯಿಪಾಠ ಮಾಡಿಕೊಂಡರು. ಹೊರಡುವ ಗಡಿಬಿಡಿಯಲ್ಲಿ ಬೆಳಗ್ಗಿನ ಉಪಹಾರ ಮಾಡಲು ಕೂಡ ಮರೆತಿದ್ದದ್ದು ಗೀತಕ್ಕನಿಗೆ ಈಗ ನೆನಪಾದರೂ ಅದರ ಬಗ್ಗೆ ಚಿಂತಿಸುವ ವ್ಯವಧಾನ ಆಕೆಗಿರಲಿಲ್ಲ. ನಿಗದಿತ ಸಮಯಕ್ಕಿಂತ ಅರ್ಧ ತಾಸು ಮೊದಲೇ ತಲುಪಿದ ಗೀತಕ್ಕ, ಅರೆ ಮನಸ್ಸಿನಿಂದಲೇ ಆಟೋ ಚಾಲಕಿನಿಗೆ ಹಣ ಕೊಟ್ಟು ಸ್ಟುಡಿಯೋ ಪ್ರವೇಶಿಸಿ ತನಗೆ ಬಂದಿದ್ದ ಕಾಗದವನ್ನು ತೋರಿಸಿ ಕಾರ್ಯಕ್ರಮದಲ್ಲಿ ತನ್ನ ಭಾಗವಹಿಸುವಿಕೆಯನ್ನು ಖಚಿತ ಪಡಿಸಿಕೊಂಡು ಆಯೋಜಕರು ಸೂಚಿಸಿದ ಸ್ಥಳದಲ್ಲಿ ಹೋಗಿ ಕುಳಿತುಕೊಂಡರು. ಕಾರ್ಯಕ್ರಮದಲ್ಲಿ ತಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ ವಿಜೇತಳಾಗುವುದು, ಸುದ್ದಿ ತಿಳಿದು ಗಣೇಶಯ್ಯನಿಗೆ ತನ್ನ ಮೇಲೆ ಹೆಮ್ಮೆ ಮೂಡುವುದು, ಸಂಜೆ ಕಾಲ್ನಡಿಗೆ ಸಮಯದಲ್ಲಿ ಸಿಗುವ ಗೆಳತಿಯರ ಮುಂದೆ ತಾನು ಬೀಗುವುದು , ಅಕ್ಕ ಪಕ್ಕದ ಮನೆಯವರೆಲ್ಲ ಟಿವಿಯಲ್ಲಿ ಬಂದ ತನ್ನನ್ನು ಗುರುತಿಸುವುದು ಮುಂತಾದನ್ನೆಲ್ಲ ಕುಳಿತಲ್ಲಿಯೇ ನೆನೆದು ತನ್ನ ಬದುಕು ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುತ್ತಿರುವಂತೆ ಗೀತಕ್ಕನಿಗೆ ಭಾಸವಾಗಿ ಮನಸ್ಸಿನಲ್ಲಿಯೇ ಮುದಗೊಂಡರು.

(ಮುಂದುವರಿಯುವುದು ..)

One Comment
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)