ರಾವಣಾಯಣ : ಭಾಗ ೨ – ಅತಿಕ್ರಮಣ
|ಯಾವತ್ತು ಶಂಕರ ಹೆಗ್ಡೆಯವರ ಸಮಾಧಿಯ ಜಾಗ ತನ್ನ ಜಮೀನಿನ ಬೇಲಿಯೊಳಗೆ ಸೇರ್ಪಡೆಯಾಯಿತೋ ಅಂದಿನ ದಿನವೇ ಶ್ರೀರಾಮ ಸೋಮಯಾಜಿಯ ಮುಖದಲ್ಲಿ ಗೋಚರವಾದ ಆಶ್ಚರ್ಯ, ಆನಂದ, ಹಾಗೂ ಆತಂಕ ಮಿಶ್ರಿತವಾದ ಅವ್ಯಕ್ತ ಭಾವದಿಂದ ಸ್ವಲ್ಪ ಮಟ್ಟಿಗೆ ಗಾಬರಿಯಾದ ಬೇಲಿ ಹಾಕಲು ಬಂದ ಆಳುಗಳು, ಅದು ಶ್ರೀಧರ ಹೆಗ್ಡೆಯ ಮೇಲೆ ಪ್ರತೀಕಾರ ತೀರಿಸಿಕೊಂಡಿರುವ ವಿಜಯದ ಸಂತೋಷವಿರಬಹುದೆಂದು ಸುಮ್ಮನಾದರು. ಆದರೆ ಅಂದಿನ ದಿನದಿಂದ, ದಿನಾಲು ಸಂಜೆ ಅದೇ ಹೊಳೆ ಬದಿಯ ಜಮೀನಿನ ಒಂದು ಮರದ ಕೆಳಗೆ ಕುಳಿತು ರಾತ್ರಿಯ ತನಕ ಶಂಕರ ಹೆಗ್ಡೆಯವರ ಸಮಾಧಿಯನ್ನು ದಿಟ್ಟಿಸಿ ಕುಳಿತುಕೊಳ್ಳಲು ಪ್ರಾರಂಭಿಸಿದ ಶ್ರೀರಾಮನನ್ನು ಯಾರೂ ಗಮನಿಸಲಿಲ್ಲ. ನಿಧಾನಕ್ಕೆ ಮನೆಗೆ ಬರುವ ಆಳು ಕಾಳುಗಳ ಜೊತೆ ಶ್ರೀರಾಮನ ವರ್ತನೆ ಬದಲಾಗತೊಡಗಿತು. ಅಲ್ಲಿಯ ತನಕ ಶಾಂತ ರೂಪಿಯಾಗಿ, ನಮ್ರ, ವಿನೀತವಾಗಿಯೇ ಎಲ್ಲರ ಜೊತೆ ವರ್ತಿಸುತ್ತಿದ್ದ ಶ್ರೀರಾಮನ ವರ್ತನೆಯಲ್ಲಿ ನಿಧಾನಕ್ಕೆ ದರ್ಪ ಇಣುಕು ಹಾಕತೊಡಗಿತು. ಅಪ್ಪ ಬದುಕಿರುವ ತನಕ ಶಂಕರ ಹೆಗ್ಡೆಯ ಹೆಸರು ಕೂಡ ಮನೆಯಲ್ಲಿ ಮಾತಿನ ಮಧ್ಯೆ ಬರುವುದು ನಿಷೇಧವಿತ್ತು. ಆದರೆ ಈಗ ಮನೆಯಲ್ಲಿ ಒಂಟಿಯಾಗಿದ್ದ ಶ್ರೀರಾಮ ವ್ಯವಸಾಯದ ಬಿಡುವಿನ ಸಮಯದಲ್ಲಿ ತನಗೆ ನೆನಪಿರುವ, ಶಂಕರ ಹೆಗ್ಡೆಯವರು ಅಭಿನಯಿಸಿದ್ದ ರಾವಣನ ಪಾತ್ರದ ಕೆಲ ಸಾಲುಗಳನ್ನು ಅಭ್ಯಾಸ ಮಾಡತೊಡಗಿದನು. ತನ್ನ ಮನೆಯ ಚಾವಡಿಯಲ್ಲಿ ಇಡಲೆಂದು, ಬೆಳ್ಯಾಡಿಯಲ್ಲೆಲ್ಲೂ ಸಿಗದಂಥ ಬೃಹತ್ತಾದ ಗಾತ್ರದ ಕನ್ನಡಿಯನ್ನು ಪೇಟೆಯಿಂದ ಹೇಳಿ ಮಾಡಿಸಿ ತರಿಸಿಟ್ಟನು. ಅಪರೂಪಕ್ಕೊಮ್ಮೆ ಮನೆಗೆ ಬರುತ್ತಿದ್ದ ಸಂಬಂಧಿಕರು ಆಶ್ಚರ್ಯದಿಂದ ಆ ಕನ್ನಡಿ ತಂದಿಟ್ಟಿರುವ ಹಿಂದಿನ ಕಾರಣ ಕೇಳಿದರೆ, ಅವರನ್ನು ಆ ಕನ್ನಡಿಯ ಮುಂದೆ ನಿಲ್ಲಿಸಿ ಹೇಳುವ, “ನೋಡಿ ನಿಮ್ಮನ್ನು ಈ ಕನ್ನಡಿಯಲ್ಲಿ. ಬಹುಶ ನಿಮ್ಮದಲ್ಲದ ಮುಖದ ಮುಖವಾಡ ಹಾಕಿ ನೀವು ಇಡೀ ಜಗತ್ತನ್ನು ಮೂರ್ಖಗೊಳಿಸುತ್ತಿರಬಹುದು, ಆದರೆ ಈ ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಂಡಾಗ ತೋರುವುದು ನಿಮಗೆ ನಿಮ್ಮ ಅಸಲಿ ಮುಖವೇ. ದಿನಾಲು ನನ್ನ ಅಸಲಿ ಮುಖದ ಪರಿಚಯ ಮಾಡಿಕೊಳ್ಳಲಿಕ್ಕೋಸ್ಕರ ಇದನ್ನ ಈ ಚಾವಡಿಯಲ್ಲಿ ಇರಿಸಿದ್ದೇನೆ.” ಆ ಸಂಬಂಧಿಕರ ಪೈಕಿ ಬಹು ಪಾಲು ಜನ ಮುಂಚೆ ನರಸಿಂಹ ಸೋಮಯಾಜಿಯವರ ಮುಂದೆ ಸುಳ್ಳು ಸುಳ್ಳೇ ಕಷ್ಟ ಕಾರ್ಪಣ್ಯಗಳ ಕಾರಣ ನೀಡಿ ಸಹಾಯ ಪಡೆದುಕೊಳ್ಳಲೆಂದೇ ಬರುತ್ತಿದ್ದವರು. ಈಗ ಶ್ರೀರಾಮನ ಈ ವರ್ತನೆ ನೋಡಿ, ಯಾಕೋ ನಿಜ ತಿಳಿದುಕೊಂಡು ಈತ ತಮ್ಮನ್ನೇ ಚುಚ್ಚುತ್ತಿದ್ದಾನೆಂಬ ಅಪರಾಧಿ ಭಾವದಿಂದ ಹುಸಿ ನಗೆ ಬೀರಿ ಅಲ್ಲಿಂದ ಕಾಲ್ಕೀಳತೊಡಗಿದರು.
ಹೀಗೆ ದಿನ ಕಳೆದಂತೆ ಶ್ರೀರಾಮನ ವಿಚಿತ್ರ ವರ್ತನೆಯಿಂದಾಗಿ, ಮನೆಗೆ ಬರುವವರ ಸಂಖ್ಯೆ ಕಡಿಮೆಯಾಗ ತೊಡಗಿತು. ಶ್ರೀರಾಮನು ಕೂಡ ಹೊಲ, ತೋಟ, ಜಮೀನುಗಳ ಮೇಲೆ ಆಸಕ್ತಿ ಕಳೆದುಕೊಂಡು ಮನೆಯಲ್ಲೇ ಜಾಸ್ತಿ ಕಾಲ ಉಳಿಯ ತೊಡಗಿದ. ಮನೆಯಲ್ಲಿ ಕಾಲ ಕಳೆಯಲೆಂದು ಕನ್ನಡಿಯ ಮುಂದೆ ಮಾಡುತ್ತಿದ್ದ ರಾವಣ ಪಾತ್ರದ ಅಭಿನಯ, ಬರು ಬರುತ್ತಾ ಆತನ ದಿನದ ಬಹುಪಾಲು ಸಮಯವನ್ನು ಹೀರತೊಡಗಿತು. ಸುತ್ತ ಮುತ್ತ ಎಲ್ಲೇ ಯಕ್ಷಗಾನವಾದರೂ ತಪ್ಪದೇ ಹಾಜರಿರುತ್ತಿದ್ದ ಶ್ರೀರಾಮ, ಮೇಳದವರ ಸ್ನೇಹ ಸಂಪಾದಿಸಿ ಅವರು ವೇಷ ಹಾಕಿಕೊಳ್ಳುತ್ತಿದ್ದ ಚೌಕಿಗೆ ಹೋಗಿ, ಅವರು ಮುಖಕ್ಕೆ ಬಣ್ಣ ಹಾಕುವ ಕಲೆ, ಪಾತ್ರಕ್ಕೆ ತಕ್ಕಂತೆ ವೇಷ ಭೂಷಣ ಧರಿಸುವ ಕ್ರಮವನ್ನು ತಲ್ಲೀನನಾಗಿ ಗಮನಿಸತೊಡಗಿದ. ಹೀಗೆ ಅವರಿಂದ ಮಾಹಿತಿ ಕಲೆ ಹಾಕಿ, ರಾವಣನ ಪಾತ್ರಕ್ಕೆ ಬೇಕಾಗುವ, ಬಡಗುತಿಟ್ಟು ಶೈಲಿಯ ಎಲ್ಲಾ ಆಭೂಷಣಗಳನ್ನೂ ಹತ್ತಿರದ ಉಡುಪಿ ಪೇಟೆಗೆ ಹೋಗಿ ಮನೆಗೆ ತಂದಿಟ್ಟುಕೊಂಡ. ಮನೆಯಲ್ಲಿಯೇ ತಂದಿಟ್ಟಿದ್ದ ರಾವಣನ ವೇಷಭೂಷಣಗಳನ್ನು ಧರಿಸಿಯೇ ಆತನ ಅಭಿನಯ ಅಭ್ಯಾಸ ಮುಂದುವರೆಯತೊಡಗಿತು. ಹೀಗೆ ಅತಿಯಾದ ಅಭ್ಯಾಸದ ಪರಿಣಾಮವಾಗಿ ನಿಧಾನಕ್ಕೆ ಶ್ರೀರಾಮನ ಮನಸ್ಸಿನಲ್ಲಿ, ರಾವಣನ ಬಗ್ಗೆ ಅಭಿಮಾನ ಮೂಡತೊಡಗಿತು. ರಾವಣನ ವೇಷ ಹಾಕಿದಾಗ ಆತ ಸ್ವತಃ ರಾವಣನೆಂದು ಮಿಥ್ಯ ಭಾವನೆ ಆತನ ಮನಸ್ಸಿನಲ್ಲಿ ಮೂಡತೊಡಗಿತು. ರಾಮನ ವಿಚಾರಗಳು, ಸಂಸ್ಕಾರಗಳೆಲ್ಲವು ಪೊಳ್ಳಾಗಿ ತೋರತೊಡಗಿದವು. ರಾವಣನ ವೇಷ ಧರಿಸಿದ ಶ್ರೀರಾಮನಿಗೆ ರಾಮಾಯಣದ ರಾಮ ಕೇವಲ ಹೆಂಡತಿಯನ್ನು ಹಿಂಪಡೆಯುವ ನೆಪದ ಆಧಾರದ ಮೇಲೆ ಲಂಕೆಗೆ ಹೊರಟ ಅನಾಚಾರಿ ಸಾಮ್ರಾಜ್ಯಶಾಹಿಯಂತೆ ತೋರತೊಡಗಿದ. ಆದರೆ ರಾಮನ ಬಗ್ಗೆ ಆತನಿಗೆ ಮೂಡುತ್ತಿದ್ದ ಈ ತೆರನಾದ ಭಾವನೆಗಳಿಗೆ ಸಮರ್ಥಿಸಿಕೊಳ್ಳಲು ಯಾವುದೇ ಆಧಾರವಿಲ್ಲದೆ ಆತ ಚಡಪಡಿಸತೊಡಗಿದ ಹಾಗೂ ಇದೇ ಕಾರಣಕ್ಕೆ ದೇವಸ್ಥಾನದಲ್ಲಿ ನಡೆಯುವ ರಾಮಾಯಣದ ಕುರಿತ ಎಲ್ಲ ಹರಿಕಥೆಗಳನ್ನು ಗಮನವಿಟ್ಟು ಕೇಳತೊಡಗಿದ. ಇದರ ಹಿಂದಿನ ಉದ್ದೇಶ ಕೇವಲ ರಾಮಾಯಣದೊಳಗೆ, ರಾಮನ ಲೋಪ ದೋಷಗಳನ್ನು ಹುಡುಕುವುದು ಮಾತ್ರವಾಗಿತ್ತು. ಇಡೀ ರಾಮಾಯಣದಲ್ಲಿ ಆತನಿಗೆ ಮೋಸದಿಂದ ಮರೆಯಲ್ಲಿ ನಿಂತು ವಾಲಿಯನ್ನು ಕೊಂದ ಹಾಗೂ ಯಾರೋ ಯಕಶ್ಚಿತ್ ಮನುಷ್ಯರ ಮಾತು ಕೇಳಿ ತನ್ನ ಪ್ರತಿಷ್ಠೆಗೋಸ್ಕರ ಗರ್ಭಿಣಿ ಹೆಂಡತಿಯನ್ನು ಕಾಡಿಗಟ್ಟಿದ ರಾಮನೇ ತೋರತೊಡಗಿದ. ಇದೇ ಪ್ರಶ್ನೆಯನ್ನು ಆತ ಎಲ್ಲ ಹರಿಕಥೆಗಳಲ್ಲೂ ಕೇಳಿ ವಿದ್ವಾಂಸರನ್ನು ಮುಜುಗರಗೊಳಿಸಿದ್ದೂ ಅಲ್ಲದೇ ನೆರೆದ ಭಕ್ತಾದಿಗಳ ಮನದಲ್ಲೂ ನಗೆಪಾಟಲಿಗೀಡಾಗತೊಡಗಿದ. ಅತ್ತ ಜಮೀನು ಕಳೆದುಕೊಂಡು ಅವಮಾನಿತನಾದ ಶ್ರೀಧರ ಹೆಗ್ಡೆ ಇದೇ ತಕ್ಕ ಸಮಯವೆಂದು, ಶ್ರೀ ರಾಮ ಸೋಮಯಾಜಿಗೆ ತಂದೆಯ ನಿಧನದ ನಂತರ ಏಕಾಂಗಿತನದಿಂದ ಹುಚ್ಚು ಹಿಡಿದಿದೆ ಎಂದು ಅಲ್ಲಲ್ಲಿ ಗುಲ್ಲೆಬ್ಬಿಸುತ್ತಾ ಬಂದ. ಮೊದಮೊದಲು ಇದು ಅಸೂಯೆಯ ಮಾತೆಂದು ಜನರು ಅಷ್ಟೇನೂ ತಲೆ ಕೆಡಿಸಕೊಳ್ಳದಿದ್ದರೂ, ಬರು ಬರುತ್ತಾ ಶ್ರೀರಾಮನ ವರ್ತನೆ ಶ್ರೀಧರ ಹಬ್ಬಿಸಿದ ಗಾಳಿಮಾತಿಗೆ ಪುಷ್ಟೀಕರಣ ಕೊಡುವಂತೆ ಬದಲಾದದ್ದನ್ನು ಗಮನಿಸಿ, ಶ್ರೀರಾಮನಿಗೆ ಹುಚ್ಚು ಹಿಡಿಯುತ್ತಿರುವುದು ಇದ್ದರೂ ಇರಬಹುದೆಂದು ಕರುಣಾಪೂರಿತ ಹಾಗೂ ಹದವಾಗಿ ಗೇಲಿ ಮಿಶ್ರಿತ ದೃಷ್ಟಿಯಿಂದ ನೋಡತೊಡಗಿದರು. ಬರು ಬರುತ್ತಾ ಶ್ರೀರಾಮನ ಹುಚ್ಚಾಟದ ಸುಳ್ಳು ಸುಳ್ಳೆ ಸುದ್ದಿಗಳು ಹುಟ್ಟಿಕೊಂಡು ಬೆಳ್ಯಾಡಿಯ ಜನತೆಗೆ ಮನರಂಜನೆಗೆ ಹೊಸ ಮೂಲವೊಂದು ದೊರೆತಂತಾಯಿತು.
ಇತ್ತ ಕಡೆ ದಿನೇ ದಿನೇ ರಾಮನ ಬಗ್ಗೆ ಅಸಮಾಧಾನ ಬೆಳೆಸಿಕೊಳ್ಳುತ್ತಾ ಹೋದ ಶ್ರೀರಾಮ, ತನ್ನ ವಾದಕ್ಕೆ ಸರಿಯಾದ ಆಧಾರವಿಲ್ಲದೇ ತಳಮಳಿಸುತ್ತಿರುವಾಗಲೇ ಆತನಿಗೆ ತನ್ನ ತಂದೆ ನರಸಿಂಹ ಸೋಮಯಾಜಿಗಳು ರಾಮಾಯಣದ ಹಲವು ಗ್ರಂಥಗಳನ್ನು ಜೋಡಿಸಿಟ್ಟಿದ್ದ ಕೋಣೆ ನೆನಪಾಗಿದ್ದು. ಬಾಗಿಲು ತೆರೆದು ನೋಡಿದವನಿಗೆ ಆಶ್ಚರ್ಯದಿಂದ ಕಂಗಾಲಾಗುವಂತೆ ಮಾಡಿದ್ದು ಅಪ್ಪನ ರಾಮಾಯಣಕ್ಕೆ ಸಂಬಂಧಿಸಿದ ಗ್ರಂಥಗಳ ಸಂಗ್ರಹ. ಗೋಡೆಯಷ್ಟೆತ್ತರದ ಕಪಾಟಿನ ತುಂಬಾ ಹಲವು ಥರೆವಾರಿ ರಾಮಾಯಣ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಪುಸ್ತಕಗಳು. ಎಲ್ಲಿಂದ ಓದಲು ಶುರು ಹಚ್ಚಿಕೊಳ್ಳುವುದೆಂದು ಗೊಂದಲದಲ್ಲಿ ಕುಳಿತ ಶ್ರೀರಾಮನಿಗೆ ತೋರಿದ್ದು ಕಪಾಟಿನ ಒಂದು ಮೂಲೆಯಲ್ಲಿ ಯಾರ ಕಣ್ಣಿಗೂ ಬೀಳದಂತೆ ತಿರುಗಿಸಿ ಇಟ್ಟ, ಸಂಪೂರ್ಣವಾಗಿ ಧೂಳಿನಿಂದ ಮುಚ್ಚಿ ಹೋಗಿರುವ ಒಂದು ಗ್ರಂಥ. ಧೂಳು ಕೊಡವಿದವನಿಗೆ ತೋರಿದ ಗ್ರಂಥದ ಹೆಸರು ‘ಗುಣಭಧ್ರನ ಉತ್ತರ ಪುರಾಣ’.
ಒಂದೇ ಗುಕ್ಕಿನಲ್ಲಿ ಉತ್ತರ ಪುರಾಣವನ್ನು ಓದಲು ಶುರು ಹಚ್ಚಿದ ಶ್ರೀರಾಮನಿಗೆ ಹಸಿವು, ಬಾಯಾರಿಕೆ, ನಿದ್ರೆಗಳು ದೂರವಾದವು. ಓದುತ್ತಾ ಹೋದಂತೆ ರಾಮಾಯಣದ ಬಗ್ಗೆ ತನಗೆಂದೂ ಅರಿವಿಲ್ಲದ ಸಂಗತಿಗಳು ತಿಳಿಯುತ್ತಾ ಹೋದವು. ಬಹು ಬೇಗನೆ ಉತ್ತರ ಪುರಾಣವನ್ನು ಓದಿ ಮುಗಿಸಿದವನಿಗೆ ತನ್ನ ವಾದವನ್ನು ಸಮಗ್ರವಾಗಿ ಮಂಡಿಸಲು ಇನ್ನಷ್ಟು ಮಾಹಿತಿ ಬೇಕಾಗಬಹುದೆಂದು ಹುಚ್ಚನಂತೆ ಇಡೀ ಕೋಣೆಯನ್ನು ತಡಕಾಡತೊಡಗುತ್ತಾನೆ. ಅವನ ಅದೃಷ್ಟವೋ ದುರಾದೃಷ್ಟವೋ ತಿಳಿಯದಂತೆ ಕೋಣೆಯ ಅಟ್ಟದ ಮೇಲೆ ಬಟ್ಟೆಯಿಂದ ಸುತ್ತಿಟ್ಟ, ‘ಅದ್ಭುತ ರಾಮಾಯಣ’, ‘ದೇವಿ ಭಾಗವತ ಪುರಾಣ’ ಹಾಗೂ ‘ವಾಸುದೇವಹಿಂದಿ’ ಎಂಬ ಮತ್ತೊಂದಿಷ್ಟು ಗ್ರಂಥಗಳು ದೊರಕುತ್ತವೆ. ಯಾಕೆ ಅಪ್ಪ ಈ ಗ್ರಂಥಗಳನ್ನು ಓದುವ ಗೋಜಿಗೆ ಕೂಡ ಹೋಗಿಲ್ಲ ಎಂಬ ಆಶ್ಚರ್ಯಭರಿತ ಸಂಶಯದೊಂದಿಗೆ ಅವುಗಳ ಅಧ್ಯಯನ ಪ್ರಾರಂಭಿಸಿದವನಿಗೆ ಎಲ್ಲ ಓದಿ ಮುಗಿಸುವ ಹೊತ್ತಿಗೆ, ಊಟ ನಿದ್ರೆ ಬಿಟ್ಟು ಪ್ರೇತ ಕಳೆ ಹೊಕ್ಕ ಆತನ ಮುಖದಲ್ಲಿ ಪೈಶಾಚಿಕ ನಗುವೊಂದು ಮನೆ ಮಾಡಿರುತ್ತದೆ. ಮನೆಯ ಪಡಸಾಲೆಯಲ್ಲಿ ನೇತು ಹಾಕಿದ್ದ ನರಸಿಂಹ ಸೋಮಯಾಜಿಗಳ ಚಿತ್ರ ನೋಡಿ, ಅವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಯಾವುದೋ ಮಹಾ ಸತ್ಯವೊಂದನ್ನು ತಾನು ಕೆದಕಿ ಹುಡುಕಿ ತೆಗೆದ ಅಹಂ ಭಾವದಿಂದ ಗಹಗಹಿಸಿ ಕೇಕೆ ಹಾಕುತ್ತಾನೆ. ತಾನು ಅಂದುಕೊಂಡಿದ್ದ ಕಾರ್ಯವನ್ನು ಸಾಧಿಸುವ ರೂಪು ರೇಷೆಗಳು ಶ್ರೀರಾಮನ ಮನಸ್ಸಿನಲ್ಲಿ ಸ್ಫುಟವಾಗಿ ಸೃಷ್ಟಿಯಾಗುತ್ತವೆ.
ಹಿಂದಿನ ಭಾಗ < ರಾವಣಾಯಣ : ಭಾಗ ೧ - ಬಲಾಬಲ | ಮುಂದಿನ ಭಾಗ > ರಾವಣಾಯಣ : ಭಾಗ ೩ – ಅಪಹರಣ |