ಪ್ರಶ್ನೋತ್ತರ : ಭಾಗ ೨

ಗೀತಕ್ಕ ಬಂದು ಕುಳಿತ ೫, ೧೦ ನಿಮಿಷದಲ್ಲೇ ಇನ್ನೊಬ್ಬ ಅವರಂತೆ ಮಧ್ಯವಯಸ್ಕ ಹೆಂಗಸು ಹಾಗು ಜ್ಞಾನಿಗಳಂತೆ ತೋರುವ ಇಳಿವಯಸ್ಸಿನ ವೃದ್ಧರೊಬ್ಬರು ಗೀತಕ್ಕನ ಮುಂದಿನ ಸಾಲಿನ ಕುರ್ಚಿಗಳಲ್ಲಿ ಬಂದು ಕುಳಿತರು. ಇವರಿಬ್ಬರೇ ತನ್ನ ಪ್ರತಿಸ್ಪರ್ಧಿಗಳು ಇರಬಹುದೆಂದು ಗೀತಕ್ಕ ಊಹಿಸುತ್ತಿದ್ದಂತೆ ಕಾರ್ಯಕ್ರಮದ ನಿರ್ವಾಹಕರಾದ ಡಾ|| ನಾ. ಸೋಮೇಶ್ವರ ಅವರು ಒಳ ಪ್ರವೇಶಿಸಿದರು. ಇದುವರೆಗೂ ಟಿವಿಯಲ್ಲಿ ಮಾತ್ರ ಅವರನ್ನು ನೋಡಿದ್ದ ಗೀತಕ್ಕ ಪ್ರತ್ಯಕ್ಷವಾಗಿ ಅವರನ್ನು ನೋಡಿ ಹಾಗೇ ಅವಾಕ್ಕಾಗಿ ಕುಳಿತರು. ಮುಂದಿನ ಸಾಲಿನಲ್ಲಿದ್ದ ವೃದ್ಧ ವ್ಯಕ್ತಿ ಕೂಡಲೇ ನಿಂತು ನಮಸ್ಕರಿಸಿದ್ದನ್ನು ನೋಡಿ ಗೀತಕ್ಕ ಹಾಗು ಇನ್ನೊಂದು ಹೆಂಗಸು ಕೂಡ ದಡಬಡಿಸಿ ಎದ್ದು ನಿಂತು ನಮಸ್ಕರಿಸಿದರು. ಗೀತಕ್ಕನ ಹಣೆಯಲ್ಲಿ ಬೆವರ ಹನಿಗಳು ಆಗಲೇ ಚಿತ್ತಾರ ಮೂಡಿಸತೊಡಗಿದ್ದವು. ಸೋಮೇಶ್ವರ್ ಅವರು ಎಲ್ಲರಿಗೂ ನಮಸ್ಕರಿಸಿ ಹಾಗೇ ಸ್ಟುಡಿಯೋ ಕೊಠಡಿಯೊಳಗೆ ಹೆಜ್ಜೆ ಹಾಕಿದರು. ಕೆಲವೇ ನಿಮಿಷಗಳಲ್ಲಿ ಒಬ್ಬ ಯುವತಿ ಬಂದು ಸ್ಪರ್ಧಿಗಳನ್ನೆಲ್ಲಾ ಸ್ಟುಡಿಯೋ ಒಳ ಪ್ರವೇಶಿಸುವಂತೆ ಸೂಚಿಸಲು, ಗೀತಕ್ಕನ ಸಮೇತ ಉಳಿದೆರಡು ಸ್ಪರ್ಧಿಗಳು ಕೂಡ ಒಳ ನಡೆದರು. ಸೋಮೇಶ್ವರ ಅವರು ಮತ್ತೊಮ್ಮೆ ಎಲ್ಲರಿಗೂ ನಮಸ್ಕರಿಸಿ ವೇದಿಕೆಯ ಮೇಲಿದ್ದ ಸ್ಪರ್ಧಿಗಳ ಆಸನದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಎಲ್ಲ ದೀಪಗಳು ಬೆಳಗಿದವು. ಅಂತೂ ಇಂತೂ ಗೀತಕ್ಕ ಬಹುದಿನಗಳಿಂದ ತಯಾರಿ ನಡೆಸಿಕೊಂಡಿದ್ದ ಕ್ಷಣ ಎದುರಿಗೆ ಬಂದು ನಿಂತಿತ್ತು. ಬಂದ ಉಳಿದಿಬ್ಬರಲ್ಲಿ, ವೃದ್ಧರು ನಿವೃತ್ತ ಸರಕಾರೀ ವೈದ್ಯ ಹಾಗೂ ಇನ್ನೊಂದು ಹೆಂಗಸು ಯಾವುದೋ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಂದು ತಿಳಿದು ಸ್ವಲ್ಪ ಮಟ್ಟಿಗೆ ತಳಮಳಗೊಂಡರೂ, ಮತ್ತೆ ಸುಧಾರಿಸಿಕೊಂಡು ವಾರದಿಂದ ತಾನು ಬಾಯಿ ಪಾಠ ಮಾಡಿಕೊಂಡಿದ್ದ ಪರಿಚಯವನ್ನು ಚಾಚೂ ತಪ್ಪದೇ ಗೀತಕ್ಕ ನುಡಿದರು.

ಕಾರ್ಯಕ್ರಮ ಮುಂದಕ್ಕೆ ಹೋದಂತೆ ವೃದ್ಧ ವೈದ್ಯರು ಸಾಮಾನ್ಯ ಜ್ಞಾನದಲ್ಲಿ ಗೀತಕ್ಕ ಹಾಗು ಅಧ್ಯಾಪಕಿಗಿಂತ ಎಷ್ಟೊ ಮುಂದಿರುವುದನ್ನು ಸಾಬೀತುಪಡಿಸುತ್ತಾ ಹೋದರೂ, ಪದಬಂಧ ಹಾಗೂ ಸಿನಿಮಾ ಸಂಬಂಧಪಟ್ಟ 0ಪ್ರಶ್ನೆಗಳಲ್ಲಿ ಗೀತಕ್ಕ ಮೇಲುಗೈ ಸಾಧಿಸಿ ಅಂತೂ ಇಂತೂ ಎರಡು ಪುಸ್ತಕಗಳನ್ನು ಗೆದ್ದೇ ಬಿಟ್ಟರು. ತಾನು ಗೆದ್ದದ್ದಕ್ಕಿಂತ, ಇನ್ನೊಬ್ಬ ಸ್ಪರ್ಧಿ ಅಧ್ಯಾಪಕಿ ಸೊನ್ನೆ ಅಂಕ ಗಳಿಸಿದ್ದು ಗೀತಕ್ಕನಿಗೆ ಹೆಚ್ಚಿನ ಸಂತಸ ತರಿಸಿತು. ಕಾರ್ಯಕ್ರಮ ಮುಗಿದ ನಂತರ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಸೋತ ಅಧ್ಯಾಪಕಿಯ ಗಾಯದ ಮೇಲೆ ಉಪ್ಪು ಸವರುವಂತೆ ಹೋಗಿ ಸಮಾಧಾನ ಮಾಡಿ, ಆಯೋಜಕರ ಬಳಿ ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ  ಮುಂದಿನ ಬುಧವಾರವೆಂದು ತಿಳಿದುಕೊಂಡು, ಅಗತ್ಯ ಬಿದ್ದಲ್ಲಿ ಸಂಪರ್ಕಿಸಲು ದೂರದರ್ಶನ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಮತ್ತೆ ಮನೆಗೆ ಮರಳಲು ಆಟೋ ಹಿಡಿದರು. ದಾರಿಯಲ್ಲಿ ಗೀತಕ್ಕ ಅಧ್ಯಾಪಕಿಯ ಬಗ್ಗೆ ಯೋಚಿಸತೊಡಗಿದರು. ಶಾಲೆಯ ಮಕ್ಕಳಿಗೆ ತಮ್ಮ ಮುಖ್ಯೋಪಾಧ್ಯಾಯಿನಿ ಸೊನ್ನೆ ಅಂಕ ಗಳಿಸಿರುವುದು ನೋಡಿ ಎಷ್ಟು ಮಜಾ ಸಿಗಬಹುದು ಎಂದು ಯೋಚಿಸಿಯೇ ಅವರ ಮುಖದಲ್ಲೊಂದು ಕಿರುನಗು ಮೂಡಿತು. ಮರುಕ್ಷಣದಲ್ಲೇ ತಾನು ಯೋಚಿಸಿದ ಬಗೆಗೆ ಹಾಗು ಆಕೆಗೆ ಸಮಾಧಾನಿಸುವ ಮೂಲಕ ಇನ್ನಷ್ಟು ದುಃಖಗೊಳಿಸಿದ್ದರ ಬಗೆಗೆ ಖೇದವೆನಿಸಿ ಮರುಗಿದರು. ಹಾಗೇ ತಾನು ಗೆದ್ದಿರುವ ಪುಸ್ತಕಗಳು ಯಾವುವೆಂದು ಕೂಡ ನೋಡಿಲ್ಲವೆಂದು ಗಮನಕ್ಕೆ ಬರಲು, ಚೀಲಕ್ಕೆ ಕೈ ಹಾಕಿ  ಅವುಗಳನ್ನು ಹೊರ ತೆಗೆದರು. “ನಿಮ್ಮ ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಿ” ಎಂಬುದು ಒಂದು ಪುಸ್ತಕವಾದರೆ “ಮಗುವಿನ ಲಾಲನೆ, ಪಾಲನೆ” ಎನ್ನುವುದು ಇನ್ನೊಂದು ಪುಸ್ತಕದ ಹೆಸರಾಗಿತ್ತು. ಯಾಕೋ ಆಟೋ ಚಾಲಕ ಇದನ್ನು ನೋಡಿ ನಕ್ಕಂತೆ ಭಾಸವಾಗಿ, ಗೀತಕ್ಕ ಪುಸ್ತಕಗಳನ್ನು ಹಾಗೇ ಚೀಲದೊಳಗೆ ತುರುಕಿದರು. ಸಮಯ ನೋಡಿದವರಿಗೆ ಆಗಲೇ ಮಧ್ಯಾಹ್ನ ೨ ಗಂಟೆ ದಾಟಿರುವುದು ತಿಳಿದು, ಮತ್ತೆ ಮನೆಗೆ ಹೋಗಿ ಅಡುಗೆ ಮಾಡಿ ಊಟ ಮಾಡಲು ಆಲಸ್ಯವೆನಿಸಿ, ಮನೆಯ ಆಚೆಯ ಬೀದಿಯಲ್ಲಿರುವ ಒಂದು ಹೋಟೆಲ್ ಅಲ್ಲಿ ಊಟ ಮಾಡಿ ಮನೆಗೆ ಕಾಲ್ನಡಿಗೆಯಲ್ಲೇ ಉಬ್ಬಸ ಬಿಡುತ್ತಾ ಬಂದ ಗೀತಕ್ಕ, ವಾರದ ಹೊರೆಯೆಲ್ಲ ತಲೆಯ ಮೇಲಿಂದ ಕಳಚಿ, ಮನಸ್ಸು ಹಕ್ಕಿಯಂತೆ ಹಗುರವಾದಂತೆ ಅನಿಸಿ, ಮನೆ ಒಳ ಪ್ರವೇಶಿಸಿ ಸೀದಾ ಹಾಸಿಗೆ ಮೇಲೆ ಉರುಳಿ ನಿದ್ರೆ ಹೋದರು.

ಸಂಜೆ ನಿದ್ರೆಯಿಂದ ಎದ್ದಂತೆ ಹೊಸ ಯೋಚನೆ ಗೀತಕ್ಕನಿಗೆ ಹೊಳೆಯಿತು. ಹೇಗಿದ್ದರೂ ಯಾರಿಗೂ ಹೇಳದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಯಿತು. ಈಗ ತಾನು ಟಿವಿಯಲ್ಲಿ ಬರುವ ವಿಚಾರವನ್ನು ಗಂಡನಿಗಾಗಲೀ, ಅಕ್ಕ ಪಕ್ಕದ ಮನೆಯವರಿಗಾಗಲೀ ಅಥವಾ ಸಂಜೆ ಸಿಗುವ ಗೆಳತಿಯರಿಗಾಗಲೀ ಹೇಳುವುದು ಹೇಗೆ? ಸುಮ್ಮನೆ ಮಾತಿನಲ್ಲಿ ವಿಚಾರ ತಿಳಿಸಿದರೆ ಪೆಚ್ಚೆನಿಸುತ್ತದೆ. ಹಾಗೆ ಹೇಳಿದರೂ ಪ್ರಸಾರವಾಗುವ ದಿನಾಂಕವನ್ನು ನೆನಪಿಟ್ಟುಕೊಂಡು ಎಲ್ಲರೂ ತನ್ನನ್ನು ಟಿವಿಯಲ್ಲಿ ನೋಡುತ್ತಾರೆ ಎಂಬ ಖಾತರಿ ಕೂಡ ಇಲ್ಲ. ಇಷ್ಟು ದಿನ ಎಲ್ಲರೂ ಪರದೇಶದಲ್ಲಿರುವ ತನ್ನ ಮಗನ ಬಗ್ಗೆಯೋ, ಇತ್ತೀಚೆಗಷ್ಟೇ ಅವರು ಪ್ರವಾಸಕ್ಕೆ ಹೋಗಿ ಬಂದ ಸ್ಥಳದ ಬಗ್ಗೆಯೋ, ಸೊಸೆ ತಂದು ಕೊಟ್ಟ ಹೊಸ ಸೀರೆಯ ಬಗ್ಗೆಯೋ ಅಥವಾ ಮನೆಯಲ್ಲಿರುವ ಮೊಮ್ಮಗು ಮಾಡುವ ಬಾಲ ಲೀಲೆಗಳ ಬಗ್ಗೆಯೋ ಹೇಳಿ ಗುಂಪಿನಲ್ಲಿ ಅಂದಿನ ಮಟ್ಟಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗುವಾಗ ಎಷ್ಟು ಬಾರಿ ತನಗೂ ಕೂಡ ಹಾಗೆ ಏನಾದರು ಹೇಳಬೇಕೆನಿಸಿದ್ದಿದೆ. ಆದರೆ ತನ್ನ ಜೀವನದಲ್ಲಿ ಅಂಥದ್ದೆಲ್ಲ ವಿಶೇಷ ಘಟನೆಗಳು ನಡೆದು ಯುಗಗಳೇ ಸಂದಿವೆ ಎಂದು ಎಷ್ಟೋ ಸಲ ಅನ್ನಿಸಿ ಸುಮ್ಮನಾಗಿದ್ದರು. ಆದರೆ ಈಗ ಅಂಥ ಸುವರ್ಣ ಅವಕಾಶ ಒದಗಿ ಬಂದಿದೆ. ಯಾವುದೇ ಕಾರಣಕ್ಕೂ ಈ ಬಾರಿ ಬಿಟ್ಟು ಕೊಡುವ ಯೋಚನೆ ಗೀತಕ್ಕನಿಗಿಲ್ಲ. ಹಾಗಾದರೆ ಏನು ಮಾಡುವುದೆಂದು ಯೋಚಿಸುತ್ತ ಕುಳಿತ ಗೀತಕ್ಕನಿಗೆ ಹೊಳೆದದ್ದೇ ರಾತ್ರಿ ಮನೆಯಲ್ಲಿ ನಡೆಸಬಹುದಾದ ದುರ್ಗಾ ನಮಸ್ಕಾರ ಪೂಜೆಯ ಬಗ್ಗೆ. ಪರಿಚಯದವರನ್ನೆಲ್ಲ ಕರೆದು ರಾತ್ರಿ ಮನೆಯಲ್ಲಿ ಊಟ ಕೂಡ ಹಾಕಿಸಬಹುದು, ಸುಮಾರು ಅದೇ ಸಮಯದಲ್ಲಿ ಪ್ರಸಾರವಾಗುವ ಥಟ್ ಅಂಥ ಹೇಳಿ ಕಾರ್ಯಕ್ರಮವನ್ನು ಎಲ್ಲರೆದುರಿಗೆ ಹಾಕಿ, ಎಲ್ಲರೂ ತಾನು ಟಿವಿಯಲ್ಲಿ ಬರುತ್ತಿರುವುದನ್ನು ನೋಡುತ್ತಾರೆ ಎಂಬ ವಿಷಯವನ್ನು ಕಣ್ಣೆದುರಿಗೆ ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ, ಎಲ್ಲರನ್ನೂ ಅಚ್ಚರಿಗೊಳಿಸಿ ಪ್ರಶಂಸೆಯ ಸುರಿಮಳೆಯನ್ನು ಕೂಡ ಪಡೆದುಕೊಳ್ಳಬಹುದೆಂಬ ಮಹಾ ಯೋಜನೆ ಗೀತಕ್ಕನ ಮನದಲ್ಲಿ ಸಿದ್ಧವಾಯಿತು.

ಈಗ ಮುಂದಿರುವ ಕೆಲಸ ಗಣೇಶಯ್ಯನವರನ್ನು ಪೂಜೆಗೆ ಒಪ್ಪಿಸುವುದು. ಗಣೇಶಯ್ಯ ನಾಸ್ತಿಕನಲ್ಲದಿದ್ದರೂ ಅಂಥಾ ಮಹಾ ಆಸ್ತಿಕ ಕೂಡ ಅಲ್ಲ. ಮಕ್ಕಳಾಗಲಿಲ್ಲ ಎಂದರೂ ಸಹ ಯಾವುದೋ ತೀರ್ಥಯಾತ್ರೆಯೋ ಅಥವಾ ಹೋಮ ಹವನಾದಿಗಳನ್ನು ಮಾಡಿಸಿದವರಲ್ಲ. ಮದುವೆಯಾದಾವಗಿಂದ ಮನೆಯಲ್ಲಿ ಯಾವುದಾದರೂ ಸಮಾರಂಭ ನಡೆಸಿದ ನೆನಪು ಗೀತಕ್ಕನಿಗಿಲ್ಲ. ಈಗ ಅಚಾನಕ್ಕಾಗಿ ಮನೆಯಲ್ಲಿ ದುರ್ಗಾ ನಮಸ್ಕಾರ ಮಾಡಿಸೋಣ ಎಂದರೆ ಅವರು ಹೇಗೆ ಪ್ರತಿಕ್ರಯಿಸಬಹುದೆಂಬ ಆತಂಕ ಗೀತಕ್ಕನನ್ನು ಕಾಡಿತು. ಅಂತೂ ಇಂತೂ ಇದ್ದ ಧೈರ್ಯವನ್ನೆಲ್ಲ ಕಲೆಹಾಕಿ ಸಂಜೆ ಗಣೇಶಯ್ಯನವರ ಕಾಫಿಯ ಜೊತೆ ಇಂದಿಗೆಂದೇ ವಿಶೇಷವಾಗಿ ತಯಾರಿಸಿದ ಮೆಣಸಿನ ಕಾಯಿ ಬಜ್ಜಿಯನ್ನು ಅವರ ಮುಂದಿರಿಸಿ ಗೀತಕ್ಕ ವಿಷಯ ಪ್ರಸ್ತಾಪಿಸಿಯೇ ಬಿಟ್ಟರು. ಗಣೇಶಯ್ಯನವರಿಗೂ ಪರಿಚಯಸ್ಥರನ್ನು ಒಮ್ಮೆ ಮನೆಗೆ ಕರೆದು ಊಟ ಹಾಕ ಬೇಕೆಂಬ ವಿಚಾರವಿತ್ತೋ ಅಥವಾ ಬಾಯಿಗಿಟ್ಟುಕೊಂಡ ಮೆಣಸಿನ ಕಾಯಿ ಬಜ್ಜಿಯ ಖಾರ ನೆತ್ತಿಗೇರಿತೋ ಗೊತ್ತಿಲ್ಲ ಆದರೆ ಮರು ಮಾತಿಲ್ಲದೆ ಅವರು ಗೀತಕ್ಕನ  ಪ್ರಸ್ತಾಪಕ್ಕೆ ತಲೆಯಾಡಿಸಿ ಬಿಟ್ಟರು. ಇಷ್ಟೊಂದು ಸುಲಭವಾಗಿ ಕೆಲಸ ನೆರವೇರಿದ್ದು ನೋಡಿ ಗೀತಕ್ಕನ ಸಂತೋಷಕ್ಕೆ ಪಾರವಿಲ್ಲವಾಯಿತು. ಯಾಕೋ ಅಂದು ರಾತ್ರಿ ಗೀತಕ್ಕನಿಗೆ ಗಂಡನ ಮೇಲೆ ಅತೀ ಅಕ್ಕರೆ ಮೂಡಿ ಗಣೇಶಯ್ಯ ನಿದ್ರೆಗೆ ಜಾರಿದ ನಂತರ ಅವರ ತಲೆಯನ್ನೊಮ್ಮೆ ಪ್ರೀತಿಯಿಂದ ನೇವರಿಸಿ ಹಣೆಯ ಮೇಲೊಂದು ಮುತ್ತಿಟ್ಟು ತಾನೂ ನಿದ್ರೆಗೆ ಜಾರಿದರು.

ಮರುದಿನ ಬೆಳಗ್ಗೆದ್ದು ಪೂಜೆಯ ಎಲ್ಲ ಕೆಲಸ ಕಾರ್ಯಗಳನ್ನು ತಾನೇ ವಹಿಸಿಕೊಳ್ಳುವೆನೆಂದೂ, ಗಣೇಶಯ್ಯ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲವೆಂದೂ ಗೀತಕ್ಕ ಗಂಡನಿಗೆ ತಿಳಿಸಿದರು. ಗೀತಕ್ಕನಲ್ಲಿ ಆಗುತ್ತಿರುವ ಬದಲಾವಣೆಯನ್ನು ಒಂದು ಬಾರಿ ವಿಚಿತ್ರವಾಗಿ ನೋಡಿ, ಗಣೇಶಯ್ಯ ಸರಿಯೆಂಬಂತೆ ತಲೆಯಾಡಿಸಿದರು. ಗೀತಕ್ಕ ಆ ಕೂಡಲೆ ಹತ್ತಿರದಲ್ಲೇ ಇದ್ದ ಗಣೇಶ ದೇವಸ್ಥಾನಕ್ಕೆ ಹೋಗಿ ಪೂಜಾರಿಯಿಂದ ಅವರಿಗೆ ಗುರುತಿರುವ ಪುರೋಹಿತರ ದೂರವಾಣಿ ಸಂಖ್ಯೆಯನ್ನು ಪಡೆದು, ಪುರೋಹಿತರೊಂದಿಗೆ ಮಾತನಾಡಿ ಬುಧವಾರದ ರಾತ್ರಿ ದುರ್ಗಾ ಪೂಜೆಗೆ ದಿನ ಗಟ್ಟಿ ಮಾಡಿಕೊಂಡರು. ಪೂಜೆಗೆ ಬೇಕಾಗುವ ಸಾಮಗ್ರಿಯ ಪಟ್ಟಿಯನ್ನು ಅವರಿಂದಲೇ ಪಡೆದರು. ಅಂದೇ ಸಂಜೆ ಕಾಲ್ನಡಿಗೆಗೆ ಹೋದವರು, ಅಲ್ಲಿ ಸಿಗುವ ತನ್ನೆಲ್ಲಾ ಗೆಳತಿಯರಿಗೆ ಪೂಜೆಯ ನಿಮಿತ್ತ ಬುಧವಾರ ರಾತ್ರಿ ತಮ್ಮ ಮನೆಗೆ ಆಗಮಿಸುವಂತೆ ಆಹ್ವಾನವಿತ್ತರು. ಮುಂದಿನ ನಾಲ್ಕೈದು ದಿನ ಹೀಗೆ ಗುರುತಿರುವವರನ್ನ ಆಮಂತ್ರಿಸುವುದು ಮತ್ತು ಪೂಜೆಗೆ ಮನೆ ಸಿದ್ಧ ಪಡಿಸುವುದರಲ್ಲಿ ಗೀತಕ್ಕ ಮಗ್ನವಾಗಿಬಿಟ್ಟರು.

ಗೀತಕ್ಕನ ಸಿದ್ಧತೆ ಯಾವ ಮಟ್ಟಿಗೆ ನಡೆದಿತ್ತೆಂದರೆ ಪೂಜೆ ದಿನದಂದು ಬೆಳಗ್ಗೆ ಅವರಿಗೆ ಯಾವುದೇ ವಿಶೇಷ ಕೆಲಸಗಳು ಮಾಡಲು ಉಳಿದಿರಲಿಲ್ಲ. ಹೇಗಿದ್ದರೂ ಪೂಜೆ ಇರುವುದು ರಾತ್ರಿಯಲ್ಲವೇ ಎಂದು ಗಣೇಶಯ್ಯ ಕೂಡ ಅರ್ಧ ದಿನ ಮಾತ್ರ ರಜೆ ತೆಗೆದುಕೊಳ್ಳುತ್ತೇನೆಂದು ಮಾಮೂಲಿ ಸಮಯದಂತೆ ಕಚೇರಿಗೆ ತೆರಳಿದರು. ಗೀತಕ್ಕ ಮನೆಯಲ್ಲಿ ಮತ್ತೆ ಒಂಟಿಯಾದರು. ಏನು ಮಾಡುವುದೆಂದು ತೋಚದೆ ಈ ನಡುವಿನಲ್ಲಿ ಇಂದು ಉಡಲೆಂದು ಖರೀದಿಸಿದ್ದ ಮತ್ತೊಂದು ಹೊಸ ಸೀರೆಗೆ ಇಸ್ತ್ರಿ ಹಾಕಿಟ್ಟರು. ಸಾಮಾನ್ಯವಾಗಿ ವರ್ಷಕ್ಕೆರಡೋ ಮೂರೋ ಸೀರೆ ಮಾತ್ರ ಖರೀದಿಸುವ ಗೀತಕ್ಕ, ಈ ಒಂದು ತಿಂಗಳಿನಲ್ಲಿಯೇ ೨ ಸೀರೆಗಳನ್ನು ಖರೀದಿಸಿದ್ದರು. ಮೊದಲಿಗೆ ಟಿವಿ ಕಾರ್ಯಕ್ರಮಕ್ಕೆ ಉಟ್ಟಿದ್ದ ಸೀರೆಯನ್ನೇ ಇಂದು ಪೂಜೆಯ ದಿನದಂದು ಉಡುವ ನಿಶ್ಚಯವೇನೋ ಮಾಡಿದ್ದರು. ಆದರೆ ಪೂಜೆಗೆ ಬಂದ ಅತಿಥಿಗಳ ಎದುರು ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲೂ ತಾನು ಅದೇ ಸೀರೆ ಉಟ್ಟಿರುವುದನ್ನು ನೆನೆಸಿಕೊಂಡು ಇನ್ನೊಂದು ಹೊಸ ಸೀರೆಯನ್ನು ಖರೀದಿ ಮಾಡಿದ್ದರು. ಪೂಜೆಗೆ ಯಾರನ್ನಾದರು ಆಮಂತ್ರಿಸುವುದು ಬಿಟ್ಟು ಹೋಯಿತೇನೋ ಎಂದು ಮತ್ತೊಮ್ಮೆ ಪರೀಕ್ಷಿಸಿದರು. ಮಧ್ಯಾಹ್ನ ಅಡುಗೆ ಮಾಡಿ, ಬೇಗನೇ ಬಂದ ಗಣೇಶಯ್ಯನವರಿಗೆ ಬಡಿಸಿ, ತಾನೂ ಊಟ ಮಾಡಿ, ಗಣೇಶಯ್ಯ ಮಧ್ಯಾಹ್ನದ ನಿದ್ರೆಗೆ ಶರಣಾದ ಮೇಲೆ ಮಾಡಲೇನು ಕೆಲಸವಿಲ್ಲದೇ ಸುಮ್ಮನೆ ಟಿವಿಯೆದುರು ಕುಳಿತರು. ಸ್ವಲ್ಪವೇ ಸಮಯದಲ್ಲಿ ಇದೇ ಟಿವಿಯೊಳಗೆ ತಾನು ಕೂಡ ಮೂಡುವುದನ್ನು ನೆನೆಸಿಕೊಂಡು ಪುಳಕಿತಗೊಂಡರು. ಹಾಕಿದ ಯಾವುದೋ ಚಾನಲ್ ಅಲ್ಲಿ ನಡೆಯುತ್ತಿದ್ದ ಯಾವುದೋ ಮಹರ್ಷಿಯ ಸಂದರ್ಶನದಲ್ಲಿ, ಅವರು ಜೀವನದಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸಬಾರದೆಂದೂ, ಹೇಗೆ ಬರುತ್ತದೋ ಹಾಗೆಯೇ ಅದನ್ನು ಸ್ವೀಕರಿಸಬೇಕೆಂದೂ, ನಿರೀಕ್ಷೆಯೇ ಮುಂದೊಂದು ದಿನ ದುಃಖಕ್ಕೆ ಮೂಲ ಕಾರಣವಾಗುವ ಸಾಧ್ಯತೆ ಜಾಸ್ತಿ ಇರುವುದೆಂದೂ, ಬ್ರಹ್ಮನು ಮೊದಲೇ ಎಲ್ಲರ ಹಣೆಬರಹ ಬರೆದಿರುವುದರಿಂದ ಏನು ನಡೆಯಬೇಕೆಂದಿರುವುದೋ ಅದೇ ನಡೆಯುವುದು ಎಂದೂ, ಮುಂತಾಗಿ ಬೋಧಿಸುವುದನ್ನು ಕೇಳಿಸಿಕೊಂಡು ಟಿವಿ ಆರಿಸಿ ಅಲ್ಲೇ ಸೋಫಾದಲ್ಲಿ ತಲೆಯಾನಿಸಿ ಮಲಗಿಕೊಂಡು ಬಿಟ್ಟರು. ಸ್ವಲ್ಪ ಸಮಯದಲ್ಲಿ ಮತ್ತೆ ಎಚ್ಚರವಾಗಿ ಪೂಜೆಯ ಸಮಯ ಹತ್ತಿರ ಬರಲು ಲಗುಬಗೆಯಿಂದ ತಯಾರಿ ಶುರು ಹಚ್ಚಿಕೊಂಡರು.

ಮನೆಯಲ್ಲಿ ಪುರೋಹಿತರ ಮಂತ್ರ ಘೋಷಗಳು ಮೊಳಗುತ್ತಿದ್ದರೂ, ಆಮಂತ್ರಿತ ಅತಿಥಿಗಳೆಲ್ಲ ಹಾಜರಿದ್ದರೂ, ಗೀತಕ್ಕನ ಗಮನವಿದ್ದದ್ದು ಮನೆಯ ಹಾಲ್ ನ ಗೋಡೆಗೆ ನೇತು ಹಾಕಿದ್ದ ಗಡಿಯಾರದ ಮೇಲೆಯೇ. ಎಲ್ಲಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಪ್ರಸಾರವಾಗುವ ವೇಳೆ ರಾತ್ರಿ ೯-೩೦ ತನಕವೂ ಪೂಜೆ ಮುಗಿಯಲಿಕ್ಕಿಲ್ಲವೇನೋ ಎಂಬ ಆತಂಕ ನಿಧಾನಕ್ಕೆ ಅವರನ್ನು ಕಾಡುತ್ತಿತ್ತು. ಎಲ್ಲೋ ಗಮನವಿಟ್ಟುಕೊಂಡು ಪೂಜೆಗೆ ಕುಳಿತುಕೊಂಡ ಗೀತಕ್ಕನನ್ನು aaನೋಡಿ ಪುರೋಹಿತರಿಗೂ ರೇಗಿ ಹೋಗಿ, “ನೋಡಮ್ಮ ದೇವರ ಮೇಲೆ ಭಕ್ತಿ ಇಲ್ಲದೆ ಮಾಡಿಸಿದ ಪೂಜೆಗೆ ಯಾವ ಫಲವೂ ಇಲ್ಲ”, ಎಂದು ಸಿಡಿಮಿಡಿಯಿಂದ ನುಡಿದರು. ಆದರೆ ಗೀತಕ್ಕನ ಅದೃಷ್ಟವೋ ಎಂಬಂತೆ ೯ ಗಂಟೆಯ ಹಾಗೆಲ್ಲ ಪೂಜೆ ಮುಗಿದು ಹೋಯಿತು. ಮನೆಯ ಬೇರೆ ಕೊಠಡಿಗಳಲ್ಲೂ ಊಟಕ್ಕೆ ಎಲೆ ಹಾಕಬಹುದೆಂದು ಗಣೇಶಯ್ಯ ಎಷ್ಟು ಹೇಳಿದರೂ ಗೀತಕ್ಕ ಕೇಳದೇ, ಎಲ್ಲರಿಗೂ ಮನೆಯ ಹಾಲಿನಲ್ಲೆಯೇ ಊಟ ಹಾಕಬೇಕೆಂದು ತಾಕೀತು ಮಾಡಿ ಹಠ ಹಿಡಿದರು. ಎಂದೂ ತನಗೆ ಎದುರು ಮಾತಾಡದ ಗೀತಕ್ಕನ ಈ ವಿಚಿತ್ರ ವರ್ತನೆ ನೋಡಿ ಗಣೇಶಯ್ಯನವರಿಗೆ ಕೋಪದ ಜೊತೆ ಜೊತೆಗೆ ಆಶ್ಚರ್ಯವೂ ಆಯಿತು. ಆದರೂ ಬಂದ ಅತಿಥಿಗಳೆದುರು ರಂಪಾಟ ಬೇಡವೆಂದು ಸುಮ್ಮನಾದರು. ಅಂತೂ ಇಂತೂ ಒತ್ತೊತ್ತಾಗಿ ಊಟಕ್ಕೆ ಎಲೆ ಹಾಕಿ ಬಂದ ಅತಿಥಿಗಳನ್ನೆಲ್ಲ ಮನೆಯ ಹಾಲಿನಲ್ಲಿ ಕುರಿ ದೊಡ್ಡಿಯಂತೆ ಊಟಕ್ಕೆಕೂರಿಸಿ ಸರಿಯಾಗಿ ೯-೩೦ ಸಮಯಕ್ಕೆ ಗೀತಕ್ಕ ಹೋಗಿ ಹಾಲ್ ನ ಒಂದು ಮೂಲೆಯಲ್ಲಿದ್ದ ಟಿವಿ ಚಾಲು ಮಾಡಿದರು. ಇಲ್ಲಿಯವರೆಗೂ ಕೋಪವನ್ನು ನುಂಗಿಕೊಂಡಿದ್ದ ಗಣೇಶಯ್ಯ ಹೆಂಡತಿಯ ಹುಚ್ಚಾಟವನ್ನು ತಡೆಯಲಾಗದೆ, ಗೀತಕ್ಕನನ್ನು ದರ ದರನೆ ಎಳೆದುಕೊಂಡು ಅಡುಗೆ ಕೋಣೆಗೆ ಹೋಗಿ, ಮನೆಯಲ್ಲಿ ನೆಂಟರಿಷ್ಟರೆಲ್ಲ ಊಟ ಮಾಡುತ್ತಿರುವಾಗ ಕೂಡ ಟಿವಿ ನೋಡಬೇಕೆಂಬ ಹುಚ್ಚು ತಲೆಗೇರಿದೆಯೇನೇ ಎಂದು ದಬಾಯಿಸಿದರು. ಗೀತಕ್ಕ ಗಣೇಶಯ್ಯನನ್ನು ಸಮಾಧಾನಿಸಿ, ಬನ್ನಿ, ನಿಮಗೊಂದು ಆಶ್ಚರ್ಯ ತೋರಿಸುತ್ತೇನೆಂದು ಮತ್ತೆ ಹಾಲ್ ಗೆ ಕರೆ ತಂದರು. ಗೀತಕ್ಕನ ಅತಿಯಾದ ಸಡಗರ ನೋಡಿ ಗಣೇಶಯ್ಯನಿಗೆ ಒಂದೊಮ್ಮೆ ಟಿವಿಯಲ್ಲಿ ನೋಡಿದ ಆಪ್ತಮಿತ್ರ ಚಿತ್ರದ ನಾಗವಲ್ಲಿ ನೆನಪಾದದ್ದು ಸುಳ್ಳಲ್ಲ. ಸರಿಯೆಂದು ಇಬ್ಬರು ಜೊತೆಗೆ ಮತ್ತೆ ಹಾಲಿಗೆ ನಡೆದು ಬರಲು, ಟಿವಿ ಪರದೆ ಮೇಲೆ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಶುರುವಾಗಲೂ ಜೊತೆಯಾಯಿತು. ನಿರೂಪಕರು ಪ್ರಾರಂಭದ ಒಂದೆರಡು ಮಾತನ್ನಾಡಿ ಸ್ಪರ್ಧಿಗಳಿಗೆ ಪರಿಚಯ ತಿಳಿಸುವಂತೆ ಹೇಳಿದರು. ಕ್ಯಾಮೆರ ಈಗ ನಿರೂಪಕರ ಮುಖದಿಂದ ಸ್ಪರ್ಧಿಗಳ ಮುಖ ತೋರುವಂತೆ ಬದಲಾಯಿತು. ಆ ಕೂಡಲೇ ಗೀತಕ್ಕನ ಎದೆ ಬಡಿತ ಜಾಸ್ತಿಯಾಯಿತು. ಜೊತೆಗೆ ನಿರಾಸೆಯ ಚಿಕ್ಕದೊಂದು ಅಲೆ ಗೀತಕ್ಕನ ಮುಖದಲ್ಲಿ ಮೂಡಿತು. ಕಾರಣವೆಂದರೆ, ಕುಳಿತ ಮೂರು ಸ್ಪರ್ಧಿಗಳಲ್ಲಿ ಪೂರ್ತಿ ಬಲ ಭಾಗದಲ್ಲಿದ್ದವರು ಗೀತಕ್ಕ. ಉಳಿದವರಿಬ್ಬರ ಮುಖ ಸರಿಯಾಗಿಯೇ ತೋರುತ್ತಿದ್ದರೂ, ಗೀತಕ್ಕ ಕುಳಿತ ಜಾಗದಲ್ಲಿಯೇ ಪ್ರಸಾರ ವಾಹಿನಿಯ ಚಿಹ್ನೆ ಪರದೆಯ ಮೇಲೆ ಮೂಡಿ ಅವರ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತೆ ಮಾಡಿತ್ತು. ಅಲ್ಲಿಯವರೆಗೂ ಊಟದಲ್ಲೇ ನಿರತರಾಗಿದ್ದ ಅತಿಥಿಗಳೆಲ್ಲ ಯಾವಾಗ ಗೀತಕ್ಕನ ಧ್ವನಿ ಟಿವಿ ಪರದೆ ಮೇಲೆ ಮೂಡಿತೋ, ನಿದ್ರೆಯಿಂದ ಎಚ್ಚರಗೊಂದವರಂತೆ ಟಿವಿ ನೋಡತೊಡಗಿದರು. ಗೀತಕ್ಕ ನೀಡಿದ ಪರಿಚಯ ಕೇಳಿದ ಮೇಲಂತೂ ಮಾತನಾಡುತ್ತಿರುವ ಮೂರನೇ ಸ್ಪರ್ಧಿ ಗೀತಕ್ಕನೇ ಎಂದು ಎಲ್ಲರಿಗೂ ಖಚಿತವಾಗಿ ಸಣ್ಣ ಸಂಚಲನವೇ ಆ ಹಾಲಿನಲ್ಲಿ ಮೂಡಿತು. ಇದೆಲ್ಲವನ್ನು ನೋಡುತ್ತ ಗೀತಕ್ಕ ಪುಳಕಗೊಳ್ಳುತ್ತಿರುವಂತೇ, ತಾನು ಪರಿಚಯ ಹೇಳುವಾಗ ತನ್ನ ಮುಖವೇ ತೋರದಂತಾಯಿತಲ್ಲ ಎಂಬ ಬೇಸರ ಕೂಡ ಮಾಡಿಕೊಂಡರು. ಅಲ್ಲಿಯವರೆಗೂ ಅವಾಕ್ಕಾಗಿ ಟಿವಿಯನ್ನೇ ಗಮನಿಸುತ್ತಿದ್ದ ಜನತೆ ವಿರಾಮದ ಸಮಯ ಬಂದ ಕೂಡಲೇ ಅಲ್ಲೇ ನಿಂತಿದ್ದ ಗೀತಕ್ಕನೆಡೆಗೆ ತಿರುಗಿ, ಯಾವಾಗ ಇದು ನಡೆಯಿತು, ಹೇಗೆ ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಎಲ್ಲದಕ್ಕೂ ಉತ್ತರಿಸಿದ ಗೀತಕ್ಕ ಗಣೇಶಯ್ಯನೆಡೆಗೆ ತಿರುಗಿ ಒಂದು ಕಿರುನಗು ನಕ್ಕರು. ಮುಖದಲ್ಲಿ ಮೂಡಿದ ಆಶ್ಚರ್ಯವನ್ನು ಗಣೇಶಯ್ಯನವರಿಗೆ ತಡೆದುಕೊಳ್ಳಲಾಗಲಿಲ್ಲ. ಅವರ ಮುಖದಲ್ಲಿ ಮೂಡಿದ ಪ್ರಶಂಸೆಯ ನಗುವನ್ನು ನೋಡಿ ಗೀತಕ್ಕನಿಗೆ ಹಿತವೆನಿಸಿತು. ತನ್ನ ಮುಖ ತೋರಲಿಲ್ಲವೆಂಬ ಬೇಸರವನ್ನು ಆಕೆ ತೋರಿದಾಗ, ಹಲವು ಕೋನಗಳಿದ, ವಿವಿಧ ಕ್ಯಾಮೆರಗಳ ಮೂಲಕ ಕಾರ್ಯಕ್ರಮವನ್ನು ಚಿತ್ರಿಸುತ್ತಾರೆಂದೂ, ಕಾರ್ಯಕ್ರಮ ಮುಂದುವರೆದಂತೆ ಬೇರೆ ಬೇರೆ ಕೋನದಲ್ಲಿ ಸ್ಪರ್ಧಿಗಳನ್ನು ತೋರಿಸುವುದರಿಂದ ಮುಂದೆ ಹೋದಂತೆ ಗೀತಕ್ಕನ ಮುಖ ತೋರುವುದೆಂದು ಗಣೇಶಯ್ಯ ಗೀತಕ್ಕನನ್ನು ಸಮಾಧಾನಿಸಿದರು. ವಿರಾಮ ಮುಗಿಸಿ ಕಾರ್ಯಕ್ರಮ ಮತ್ತೆ ಶುರುವಾದರೂ ಸ್ಪರ್ಧಿಗಳನ್ನು ತೋರಿಸುವ ಬಗೆ ಮಾತ್ರ ಬದಲಾಗಲೇ ಇಲ್ಲ. ಆಗಲೇ ಅಲ್ಲಿ ಊಟಕ್ಕೆ ಕುಳಿತವರ ನಡುವಿನಿಂದ ಗೀತಕ್ಕನ ಗೆಳತಿಯೊಬ್ಬರು, ಇದೇನು ಗೀತಕ್ಕ ನಿಮ್ಮ ಮುಖವೇ ತೋರುತ್ತಿಲ್ಲವಲ್ಲ, ಆದರೂ ನೀವು ಉಟ್ಟಿರುವ ಸೀರೆ ಮಾತ್ರ ಅಂದವಾಗಿ ತೋರುತ್ತಿದೆಯೆಂದು ಹೇಳಿದ್ದು ಕೇಳಿ, ಅದು ಆಕೆಯ ಬಾಯಿಂದ ಬಂದ ನಿಜವಾದ ಹೊಗಳಿಕೆಯೋ ಅಥವಾ ಬರೀ ಕುಹಕದ ನುಡಿಗಳೋ ಅಂದು ತಿಳಿಯದೇ ಸುಮ್ಮನೆ ನಕ್ಕರು. ಕಾರ್ಯಕ್ರಮ ಮುಂದುವರೆಯುತ್ತಲೇ ಹೋಯಿತು, ಗೀತಕ್ಕನ ಮುಖವಿರುವ ಜಾಗದ ಮೇಲೆಯೇ ಮೂಡಿದ್ದ ವಾಹಿನಿಯ ಚಿಹ್ನೆ ಮಾತ್ರ ಹಾಗೆಯೇ ನಿಂತಿತ್ತು. ವಿಚಿತ್ರವೆಂಬಂತೆ ಕಾರ್ಯಕ್ರಮದುದ್ದಕ್ಕೂ ಕ್ಯಾಮೆರ ಕೋನ ಬದಲಾಗಲೇ ಇಲ್ಲ. ಊಟಕ್ಕೆ ಕುಳಿತಿದ್ದ ಗಂಡಸರೆಲ್ಲ, ಕಾರ್ಯಕ್ರಮದಲ್ಲಿ ಗೀತಕ್ಕನ ಪ್ರತಿಸ್ಪರ್ಧಿಯಾಗಿ ಬಂದಿದ್ದ ನಿವೃತ್ತ ವೈದ್ಯರ ಜ್ಞಾನಕ್ಕೆ ತಲೆದೂಗಿ ಪ್ರಶಂಸಿಸತೊಡಗಿದರು, ಹೆಂಗಸರು ಎಲ್ಲಾದರೂ ಗೀತಕ್ಕನ ಮುಖ ತೋರಬಹುದೇನೊ ಎಂಬಂತೆ ಕಾತರದಿಂದ ಕಾದರು. ಅರ್ಧ ಕಾರ್ಯಕ್ರಮ ಮುಗಿಯುವ ವೇಳೆ ಗೀತಕ್ಕನ ಮುಖದಲ್ಲಿ ದುಃಖ ಹಾಗು ನಿರಾಸೆಗಳು, ಪ್ರಸಾರ ವಾಹಿನಿಯ ಚಿಹ್ನೆಯಂತೆಯೇ ಮಡುಗಟ್ಟಿ ನಿಂತಿದ್ದವು. ಕೂಡಲೇ ಏನೋ ಹೊಳೆದಂತಾಗಿ ಗೀತಕ್ಕ ತಮ್ಮ ಪರ್ಸ್ ತಡಕಾಡಲು, ಕಾರ್ಯಕ್ರಮ ಚಿತ್ರೀಕರಿಸಿದ ದಿನ ತಾನು ಅಲ್ಲಿಂದ ಕೇಳಿ ಪಡೆದಿದ್ದ, ಸ್ಟುಡಿಯೋ ದೂರವಾಣಿ ಸಂಖ್ಯೆ ಸಿಕ್ಕಿ, ಕೂಡಲೇ ಆ ಸಂಖ್ಯೆಗೆ ಕರೆ ಮಾಡಿದರು. ತುಂಬಾ ಹೊತ್ತಿನ ನಂತರ ಆ ಕಡೆಯಿಂದ ಉತ್ತರ ಬರಲು, ಗೀತಕ್ಕ ನಡೆಯುತ್ತಿರುವ ಘಟನೆಯನ್ನು ವಿವರಿಸಿ, ತಮ್ಮ ಗೋಳು ತೋಡಿಕೊಂಡರು. ಕಾರ್ಯಕ್ರಮ ಪ್ರಸಾರಕರು ಗೀತಕ್ಕನ ಬಳಿ ಕ್ಷಮೆ ಯಾಚಿಸುತ್ತ, ಅಂದು ಚಿತ್ರೀಕರಿಸಿದ ಮುದ್ರಣದಲ್ಲಿ ಅದೊಂದು ಕೋನದ ಕ್ಯಾಮೆರ ಬಿಟ್ಟು ಉಳಿದೆಲ್ಲ ಕ್ಯಾಮೆರಗಳಲ್ಲಿ ಚಿತ್ರೀಕರಣಗೊಂಡ ವೀಡಿಯೊದಲ್ಲಿ ಕುಂದುಗಳಿದ್ದ  ಕಾರಣ ಅವುಗಳನ್ನು ಪ್ರಸಾರ ಮಾಡದೆ ಇರುವ ಕಾರಣವನ್ನು ವಿವರಿಸಿದರು. ಫೋನ್ ಕೆಳಗಿಡುವ ವೇಳೆಗೆ ಗೀತಕ್ಕನ ಕಣ್ಣುಗಳಲ್ಲಿ ಆಗಲೇ ಕೊಳದಂತೆ ನೀರು ತುಂಬಿಕೊಂಡಿತ್ತು. ಮೂಡಿದ ನಿರಾಸೆಯನ್ನು ತಡೆಯಲಾಗದೆ, ಹಾಲಿನ ಟಿವಿ ಪರದೆ ಮೇಲೆ ಮೂಡುತ್ತಿದ್ದ ಕಾರ್ಯಕ್ರಮವನ್ನು ನೋಡಲು ಕೂಡ ಹೋಗದೇ, ತನ್ನ ಹಾಸಿಗೆಯ ಮೇಲೆ ಉರುಳಿ ಸಮಾಧಾನವಾಗುವಷ್ಟು ಗಳಗಳನೇ ಅತ್ತು ಬಿಟ್ಟರು. ಕೂಡಲೇ ನೆರೆದಿರುವ ಅತಿಥಿಗಳ ನೆನಪಾಗಿ, ಹಾಲಿನ ಕಡೆ ಹೊರ ನಡೆದಾಗ, ಆಗಲೇ ಊಟ ಹಾಗು ಕಾರ್ಯಕ್ರಮ ಎರಡು ಕೂಡ ಮುಗಿದು ಅತಿಥಿಗಳೆabಲ್ಲ ಹೊರಡಲು ಅನುವಾಗಿದ್ದರು. ಎದುರಾದ ಗೀತಕ್ಕನನ್ನು ಹೆಚ್ಚಿನವರು ಅಭಿನಂದಿಸಿದರು, ಕೆಲವರು ಸಮಾಧಾನಿಸಿದರು, ಮತ್ತೆ ಕೆಲವರು, ಬರೀ ವ್ಯಂಗ್ಯ ಭರಿತ ದೃಷ್ಟಿಯನ್ನಷ್ಟೇ ಬೀರಿ ಗೀತಕ್ಕನ ಮನೆಯಿಂದ ಹೊರಟರು.

ಮನೆ ಖಾಲಿಯಾದ ಮೇಲೆ, ನಿಶ್ಚೇಷ್ಟಿತವಾಗಿ ಗಣೇಶಯ್ಯನವರಿಗೆ ಊಟಕ್ಕೆ ಬಡಿಸಿ, ತಾವೂ ಅರ್ಧ ಮನಸ್ಸಿನಲ್ಲಿಯೇ ಊಟ ಮುಗಿಸಿ, ಮನೆಯೆಲ್ಲ ಸ್ವಚ್ಚಗೊಳಿಸಿ, ಎಂದಿನಂತೆ ಅರ್ಧ ರಾತ್ರಿಯ ತನಕ ಟಿವಿ ನೋಡದೇ ಸೀದಾ  ಹೋಗಿ ಮಲಗಿಕೊಂಡರು. ದಿಂಬಿಗೆ ತಲೆಯೊರಗಿಸಿದ ಕೂಡಲೇ ಮತ್ತೆ ದುಃಖ ಉಮ್ಮಳಿಸಿ ಬಂದು ಗಣೇಶಯ್ಯನಿಗೆ ಗೊತ್ತಾಗದಿರಲೆಂಬಂತೆ ಒಳಗೊಳಗೆ ಅತ್ತು, ಕಣ್ಣಿನಿಂದ ನೀರು ಹರಿಸಿ ದಿಂಬಿನ ಮೇಲೆ ಕಣ್ಣೀರಿನ ಚಿತ್ತಾರ ಮೂಡಿಸಿದರು. ಇನ್ನೂ ಎಚ್ಚರವಿದ್ದ ಗಣೇಶಯ್ಯ ಎಲ್ಲವನ್ನೂ ಅರಿತಂತೆ ಗೀತಕ್ಕನನ್ನು ನಿಧಾನವಾಗಿ ತಲೆ ನೇವರಿಸುತ್ತ, ಸಾಂತ್ವನದ ಮಾತಾಡುತ್ತಾ ಸಮಾಧಾನಿಸಿದರು. ಹಾಗೆಯೇ ತಾನು ಗೀತಕ್ಕನನ್ನು ಹೀಗೆ ಪ್ರೀತಿಯಿಂದ ಮಾತನಾಡಿಸಿ ವರುಷಗಳೇ ಕಳೆದಿರುವುದನ್ನು ಜ್ಞಾಪಿಸಿಕೊಳ್ಳುತ್ತಾ ಮತ್ತಷ್ಟು ಪ್ರೀತಿ ಮೂಡಿ ಆಕೆಯನ್ನು ಬರಸೆಳೆದುಕೊಂಡರು. ಗಂಡನಿಂದ ಸಾಂತ್ವನವನ್ನು ನಿರೀಕ್ಷೆ ಮಾಡಿರದ  ಗೀತಕ್ಕನ ಮನಸ್ಸು, ಮರುಭೂಮಿಯಲ್ಲಿ ಅರಳಿದ ಹೂವಿನಂತೆ ಮುದಗೊಂಡಿತು. ದಾರಿ ದೀಪದ ಬೆಳಕಿಗೆ, ಕೋಣೆಯ ಕಪಾಟಿನಲ್ಲಿಟ್ಟಿದ್ದ, ಕಾರ್ಯಕ್ರಮದಲ್ಲಿ ಗೆದ್ದ ಎರಡು ಪುಸ್ತಕಗಳು ಗೀತಕ್ಕನನ್ನು ಅಣಕಿಸುತ್ತಿರುವಂತೆ ಆಕೆಗೆ ಭಾಸವಾದರೂ ಗೀತಕ್ಕ, ಗಣೇಶಯ್ಯನವರ ತೋಳಿನಲ್ಲಿ  ಹಿತವಾಗಿ ನಿದ್ರೆಗೆ ಜಾರಿದರು.

(ಮುಕ್ತಾಯ.)

 

9 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)