ರಾವಣಾಯಣ : ಭಾಗ ೧ – ಬಲಾಬಲ

“ವಾಲ್ಮೀಕಿ ರಚಿತ ರಾಮಾಯಣವನ್ನು ಹೊರತುಪಡಿಸಿ ಬೇರೆ ಬೇರೆ ಭಾಷೆಯಲ್ಲಿ ಕೂಡ ೩೦೦ ಕ್ಕೂ ಮಿಗಿಲಾಗಿ ರಾಮಾಯಣದ ಆವೃತ್ತಿಗಳಿವೆ. ಸಂಸ್ಕೃತದಲ್ಲಿ ಲಿಖಿತ ಕೃತಿಗಳಾದ ತುಳಸಿದಾಸರ ರಾಮಚರಿತ ಮಾನಸ, ವಸಿಷ್ಠ ರಾಮಾಯಣ, ಅದ್ಭುತ ರಾಮಾಯಣ, ಆನಂದ ರಾಮಾಯಣ, ಅಗಸ್ತ್ಯ ರಾಮಾಯಣ, ತೆಲುಗಿನ ಶ್ರೀ ರಂಗನಾಥ ರಾಮಾಯಣಂ, ತಮಿಳಿನ ಕಂಬರಾಮಾಯಣಂ, ಕನ್ನಡದ ಕುಮುದೇನು ರಾಮಾಯಣ ಹಾಗೂ ರಾಮಚಂದ್ರ ಚರಿತ ಪುರಾಣವಲ್ಲದೇ, ಸಾಮಾನ್ಯವಾಗಿ ಭಾರತದ ಎಲ್ಲ ಭಾಷೆಗಳಲ್ಲಿ, ಬೌದ್ಧ ಹಾಗೂ ಜೈನ ಧರ್ಮೀಯರಲ್ಲಿ ಕೂಡ ಅವರದ್ದೇ ಆದ ಸ್ವಂತ ಆವೃತ್ತಿಯ ರಾಮಾಯಣಗಳಿವೆ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಒಬ್ಬರಾದ ಶ್ರೀ ರಾಮ ಚಂದ್ರರ ಮಹತ್ವ ಎಷ್ಟೆಂದು ಇದು ತೋರಿ ಹೇಳುತ್ತದೆ.” ಹೀಗೆ ಬೆಳ್ಯಾಡಿಯ ನರಸಿಂಹ ಸೋಮಯಾಜಿಯವರು  ರಾಮಾಯಣದ ಬಗ್ಗೆ ಪ್ರವಚನ ಮುಗಿಸುತ್ತಿರಲು ಇಡೀ ಊರಿಗೆ ಊರೇ ಮಂತ್ರ ಮುಗ್ಧವಾಗಿ ಕೇಳಿಸಿಕೊಳ್ಳುತ್ತಿತ್ತು. ರಾಮಾಯಣದ ಮೇಲೆ ಅಂತಹ ಪ್ರಕಾಂಡ ಪಾಂಡಿತ್ಯ ಅವರಿಗೆ. ಮೇಲೆ ಅವರು ವಿವರಿಸಿದ ಎಲ್ಲ ಆವೃತ್ತಿಯ ರಾಮಾಯಣದ ಕೃತಿಗಳು ಅವರ ಮನೆಯ, ಇದಕ್ಕೆಂದೇ ಮೀಸಲಿರಿಸಿದ ಪ್ರತ್ಯೇಕವಾದ ಕೋಣೆಯ ಕಪಾಟಿನಲ್ಲಿವೆ. ವರ್ಷಕ್ಕೊಮ್ಮೆ ನಡೆಯುವ ಬೆಳ್ಯಾಡಿಯ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಸೋಮಯಾಜಿಗಳ ಪ್ರವಚನ ಇಲ್ಲವೆಂದಲ್ಲಿ ಅದು ಅಪೂರ್ಣವೆಂದೇ ಅರ್ಥ. ಬೇರೆಲ್ಲೂ ಸಿಗದ ಸೋಮಯಾಜಿಗಳ ಪ್ರವಚನ ನೋಡಲೆಂದೇ ಜನ ಉತ್ಸವಕ್ಕೆ ಬೇರೆ ಬೇರೆ ಊರುಗಳಿಂದ ಬೆಳ್ಯಾಡಿಗೆ ದೌಡಾಯಿಸುತ್ತಿದ್ದರು.

ಹಾಗೆ ನೋಡ ಹೋದರೆ ಬೆಳ್ಯಾಡಿ, ನಗರದ ಛಾಯೆಯಿಂದ ದೂರವಿರುವ, ಕರಾವಳಿಗೆ ಹಾಗೂ ಮಲೆನಾಡಿನ ಮಧ್ಯೆ ತನ್ನದೇ ನಿಧಾನ ಗತಿಯಿಂದ ಸಂತನಂತೆ ಬದುಕುತ್ತಿರುವ ಊರು. ಸಾಮಾನ್ಯವಾಗಿ ಕನ್ನಡ ಹಾಗೂ ತುಳು ಭಾಷೆ ಮಾತನಾಡುವ ಸುಮಾರು ೧೦೦ ಆಸುಪಾಸು ಮನೆಗಳಿರುವ, ಅಷ್ಟೊಂದು ಸುದ್ದಿ ಮಾಡುವ ವಿದ್ಯಮಾನಗಳೇನು ನಡೆಯದಂತ ಚಿಕ್ಕ ಊರು ಇದು. ಬೆಳ್ಯಾಡಿ ಸ್ವಲ್ಪ ಮಟ್ಟಿಗಾದರೂ ಪ್ರಾಮುಖ್ಯತೆಯನ್ನು ಪಡೆದಿರುವುದು ಅಲ್ಲಿನ ಮಹಾ ವಿಷ್ಣು ದೇವಸ್ಥಾನಕ್ಕೆ, ನರಸಿಂಹ ಸೋಮಯಾಜಿಗಳ ಪ್ರವಚನಕ್ಕೆ ಹಾಗೂ ಶಂಕರ ಹೆಗ್ಡೆಯವರ ಯಕ್ಷಗಾನಕ್ಕೆಮಾತ್ರ.

ಸೋಮಯಾಜಿಗಳಂತೆಯೇ ಶಂಕರ ಹೆಗ್ಡೆಯವರು ಕೂಡ ಊರಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬರು. ಪ್ರತೀ ವರ್ಷದ ಉತ್ಸವದ ರಾತ್ರಿಯಂದು ನಡೆಯುವ ರಾಮಾಯಣದ ಪ್ರಸಂಗದ ಯಕ್ಷಗಾನದಲ್ಲಿ ರಾವಣನ ಪಾತ್ರ ಯಾವತ್ತೂ ಶಂಕರ ಹೆಗ್ಡೆಯವರಿಗೆ ಮೀಸಲು. ಹೆಗ್ಡೆಯವರ ರಾವಣ ಪಾತ್ರದ ಅಭಿನಯ ಎಂಥದ್ದೆಂದರೆ, ರಾಮಾಯಣದ ಪ್ರಸಂಗದಲ್ಲಿ ರಾಮ ಪೆಚ್ಚಾಗಿ ರಾವಣನೇ ಮೆರೆಯುತ್ತಿದ್ದ. ರಾವಣ ಪಾತ್ರದ ಗತ್ತು, ಗಾಂಭೀರ್ಯ ಹೆಗ್ಡೆಯವರಲ್ಲದೇ ಬೇರೆ ಯಾರಿಗೂ ಕೂಡ ಅಷ್ಟೊಂದು ಸೊಗಸಾಗಿ ನಿರ್ವಹಿಸಲು ಸಾಧ್ಯವಿಲ್ಲವೆಂಬ ಮಾತು ಜನರ ಬಾಯಲ್ಲಿ ಪ್ರಚಲಿತದಲ್ಲಿತ್ತು. ಇಷ್ಟೊಂದು ಜನಪ್ರಿಯರಾಗಿದ್ದರೂ ಕೂಡ ಹೆಗ್ಡೆಯವರು ರಾವಣ ಪಾತ್ರ ಮಾಡುತ್ತಿದ್ದದ್ದು ಊರಿನ ಉತ್ಸವದ ರಾತ್ರಿ ನಡೆಯುವ ಯಕ್ಷಗಾನ ಪ್ರಸಂಗಗಳಲ್ಲಿ ಮಾತ್ರ. ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳು ತಮ್ಮನ್ನು ಸೇರುವಂತೆ ಮಾಡಿದ ಮನವಿಗಳನ್ನು ಹೆಗ್ಡೆಯವರು ಅಷ್ಟೇ ನಯವಾಗಿ ನಿರಾಕರಿಸಿದ್ದರು. ಇದು ಊರಿನ ಜನರಿಗೆ ಅವರ ಮೇಲಿನ ಅಭಿಮಾನವನ್ನು ಇನ್ನೂ ಹೆಚ್ಚುವಂತೆ  ಮಾಡಿತ್ತು.

ಆದರೆ ನರಸಿಂಹ ಸೋಮಯಾಜಿಯವರ ಹಾಗೂ ಶಂಕರ ಹೆಗ್ಡೆಯವರ ಮನೆತನದ ನಡುವಿನ ಸಂಬಂಧ ಅನಾದಿ ಕಾಲದಿಂದಲೂ ಅಷ್ಟಕ್ಕಷ್ಟೇ. ಹಿಂದಿನ ಕಾಲದಿಂದಲೂ ಊರ ಪ್ರಮುಖರೆನಿಸಿಕೊಂಡಿದ್ದ ಎರಡು ಕುಟುಂಬಗಳ ಮಧ್ಯೆ ಪ್ರತಿಷ್ಠೆಗಾಗಿ ಪೈಪೋಟಿ, ಶೀತಲ ಸಮರ ನಡೆದುಕೊಂಡೇ ಬಂದಿದೆ. ಆದರೆ ಈ ಕಲಹ ಉಚ್ಛ್ರಾಯ ಸ್ಥಿತಿ ತಲುಪಿದ್ದು ಇವರಿಬ್ಬರ ಕಾಲದಲ್ಲೇ ಎನ್ನಬಹುದು. ಸೋಮಯಾಜಿಗಳ ಹಾಗೂ ಹೆಗ್ಡೆಯವರ ಪ್ರಮುಖ ಆದಾಯ ಬರುತ್ತಿದ್ದದ್ದು ಬೇಸಾಯದಿಂದಲೇ. ಉತ್ಸವದ ಸಮಯದಲ್ಲಿ ಮಾತ್ರ ಸೋಮಯಾಜಿಗಳು ಪ್ರವಚನದಲ್ಲಿ ಹಾಗೂ ಹೆಗ್ಡೆಯವರು ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದದ್ದು ಬಿಟ್ಟರೆ, ವರ್ಷದ ಉಳಿದ ದಿನಗಳಲ್ಲಿ ಇಬ್ಬರ ಪ್ರಮುಖ ಕಸುಬು ಕೂಡ ಬೇಸಾಯವೇ ಆಗಿತ್ತು. ಎಕರೆಗಳಲ್ಲಿ ವಿಸ್ತರಿಸಿದ್ದ ಅವರಿಬ್ಬರ ಜಮೀನುಗಳು ಪರಸ್ಪರ ಹೊಂದಿಕೊಂಡ ಹಾಗಿರುವುದು ಹೊಳೆ ಬದಿಯ ಒಂದೂವರೆ ಫ಼ರ್ಲಾಂಗಿನಷ್ಟು ಜಾಗದಲ್ಲಿ ಮಾತ್ರ. ಇದೇ ಜಾಗ ಈಗ ಈ ಎರಡು ಕುಟುಂಬಗಳ ವೈಮನಸ್ಸು ಜಗಜ್ಜಾಹೀರಾಗಲು ಮುಖ್ಯ ಕಾರಣವಾಗಿದ್ದು.

ಆದದ್ದಿಷ್ಟು. ಅದೊಂದು ದಿನ ಏನನ್ನೋ ಹುಡುಕುತ್ತಿದ್ದ ಸೋಮಯಾಜಿಗಳಿಗೆ, ಅಟ್ಟದ ಮೇಲೆ ಹಳೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಡತವೊಂದು ಸಿಗುತ್ತದೆ. ಕುತೂಹಲಕ್ಕೆಂದು ಕೂಲಂಕಷವಾಗಿ ಕಡತವನ್ನು ಪರಿಶೀಲಿಸಿದ ಸೋಮಯಾಜಿಗಳಿಗೆ ತಿಳಿಯುವ ವಿಚಾರವೆಂದರೆ ಹೊಳೆಬದಿಯ ಜಮೀನಿನ ಒಂದೂವರೆ ಫ಼ರ್ಲಾಂಗಿನುದ್ದಕ್ಕು ಸ್ವಲ್ಪ ಸ್ವಲ್ಪವೇ ಭೂಮಿ ಹೆಗ್ಡೆಯವರ ವಶಕ್ಕೆ ಹೋಗಿದೆ ಎಂದು. ಕಾಲಕ್ರಮೇಣವಾಗಿ ನಡೆದ ಅಚಾತುರ್ಯದಿಂದ ಹೀಗಾಗಿರಬಹುದು ಎಂದೆನಿಸಿ, ಕಡತ ಸಮೇತ ಮೊದಲ ಬಾರಿಗೆ ಸೋಮಯಾಜಿಗಳು ಹೆಗ್ಡೆಯವರ ಜೊತೆ ಈ ವಿಚಾರವಾಗಿ ಮಾತಾಡಿ ಸಮಸ್ಯೆ ಪರಿಹರಿಸುವುದರ ಸಲುವಾಗಿ ಅವರ ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆದರೆ ಮನೆ ಅಂಗಳದಲ್ಲೇ ಎದುರಾದ ಹೆಗ್ಡೆಯವರ ಮಗ ಶ್ರೀಧರ ಹೆಗ್ಡೆ, ಶಂಕರ ಹೆಗ್ಡೆಯವರು ಊರಲ್ಲಿ ಇಲ್ಲವೆಂದೂ, ಆಸ್ತಿಯ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳಲು ತಾವು ತಯಾರಿಲ್ಲವೆಂದೂ ಧೂರ್ತತನದಿಂದ ಉತ್ತರಿಸಿ ಸೋಮಯಾಜಿಯವರನ್ನು ಮನೆಯೊಳಗೂ ಕರೆಸಿಕೊಳ್ಳದೆ ಅಲ್ಲಿಂದಲೇ ಕಳಿಸಿಕೊಡುತ್ತಾನೆ. ಹೀಗಾದ ಅನಿರೀಕ್ಷಿತ ಅವಮಾನದಿದಂದ ಕುಪಿತರಾದ ಸೋಮಯಾಜಿಗಳು ಈ ಆಸ್ತಿ ವಿಚಾರವಾಗಿ ಕೋರ್ಟಲ್ಲಿ ಕೇಸ್ ಜಡಿದೇ ಬಿಡುತ್ತಾರೆ. ತಾನಿಲ್ಲದೇ ಇರುವಾಗ ಮಗ ನಡೆಸಿದ ಕಿತಾಪತಿಯ ಅರಿವಿಲ್ಲದ ಶಂಕರ ಹೆಗ್ಡೆಯವರು, ಸೋಮಯಾಜಿಗಳು ಹಾಕಿದ ಕೇಸ್ ವಿಷಯ ತಿಳಿಯಲು, ತನ್ನನ್ನು ಕೋರ್ಟಿಗೆಳೆದ ಸೋಮಯಾಜಿಗಳ ಮೇಲೆ ಅಸಮಾಧಾನದ ಕಿಡಿ ಕಾರ ತೊಡಗುತ್ತಾರೆ. ಅಂದಿನಿಂದ ಕೋರ್ಟ್ ಕೇಸ್ ನಡೆಯುತ್ತಲೇ ಇದೆ, ಪ್ರತೀ ವರ್ಷ ವಿಷ್ಣುಮೂರ್ತಿಯ ಉತ್ಸವ ನಡೆಯುತ್ತಲೇ ಬಂದಿದೆ, ಆದರೆ ಸೊಮಯಾಜಿಗಳಾಗಲೀ ಹೆಗ್ಡೆಯವರಾಗಲೀ ಪರಸ್ಪರ ಎದುರುಗೊಂಡದ್ದಿಲ್ಲ, ಮಾತನಾಡಿದ್ದಿಲ್ಲ. ಇದರಿಂದ ಲಾಭ ಪಡೆದುಕೊಂಡದ್ದು ಬೆಳ್ಯಾಡಿಯ ಜನಗಳು ಮಾತ್ರ. ಅವರಿಗೆ ದಿನಾಲು ಹರಟೆ ಚರ್ಚೆ ಮಾಡಲು ಹೊಸ ವಿಷಯ ಸಿಕ್ಕಂತಾಯಿತು. ಹಾಗೆಯೇ ಪರಸ್ಪರರ ಕಿವಿಯೂದಿ ಇಬ್ಬರಿಂದಲೂ ಲಾಭ ಪಡೆದುಕೊಳ್ಳುತ್ತಿದ್ದ ಮಂದಿ ಕೂಡ ಕಡಿಮೆಯಿರಲಿಲ್ಲ.

ಇನ್ನು ಮಕ್ಕಳ ವಿಷಯಕ್ಕೆ ಬಂದರೆ, ಸೋಮಯಾಜಿಗಳಿಗೆ ಇದ್ದದ್ದು ಒಬ್ಬನೇ ಮಗ. ಆತನ ಹೆಸರು ಶ್ರೀರಾಮ ಸೋಮಯಾಜಿ. ಇಟ್ಟ ಹೆಸರಿಗೆ ತಕ್ಕಂತೆ, ಅಪ್ಪನ ಆಚಾರ ವಿಚಾರ, ನಯ ವಿನಯಗಳನ್ನು ಮೈಗೂಡಿಸಿಕೊಂಡು ಬೆಳೆದವನು. ಊರಿನ ಜನತೆ ನರಸಿಂಹ ಸೋಮಯಾಜಿಗಳನ್ನು ಓಲೈಸಲೆಂಬ ಕಾರಣಕ್ಕೆ ಅವರ ಮಗ ಶ್ರೀ ರಾಮಚಂದ್ರ ದೇವರ ಅವತಾರದಂತೆ ಇದ್ದಾನೆಂದು ಹೊಗಳುತ್ತಿದ್ದರೂ ಸ್ವಲ್ಪ ಮಟ್ಟಿಗೆ ಅದು ನಿಜ ಕೂಡ ಆಗಿತ್ತು.
ಅಂತಹ ದಿವ್ಯ ತೇಜಸ್ಸು ಆತನ ಮುಖದಲ್ಲಿತ್ತು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಶ್ರೀರಾಮ ಪ್ರಾಯಕ್ಕೆ ಬಂದಂತೆ ಅಪ್ಪನ ವ್ಯವಸಾಯದ ಜವಾಬ್ದಾರಿಯನ್ನು ತಾನೇ ಹೊತ್ತು ಕೊಂಡಿದ್ದ. ಅಪ್ಪ ಮಾಡುವ ಪ್ರವಚನ ಅಷ್ಟೊಂದು ಜನಪ್ರಿಯವಾಗಿದ್ದರೂ ಚಿಕ್ಕಂದಿನಿಂದಲೂ ಶ್ರೀರಾಮನನ್ನು ಸೆಳೆಯುತ್ತಿದ್ದದ್ದು ಯಕ್ಷಗಾನ. ಅದರಲ್ಲೂ ಅಪ್ಪನ ವೈರಿ ಶಂಕರ ಹೆಗ್ಡೆಯವರು ಮಾಡುತ್ತಿದ್ದ ರಾವಣನ ಪಾತ್ರ. ಅಪ್ಪನಿಗೆ ತಿಳಿಯದಂತೆ ಆತ ಶಂಕರ  ಹೆಗ್ಡೆಯವರ ಬಹು ದೊಡ್ಡ ಅಭಿಮಾನಿಯಾಗಿದ್ದ. ಬಾಯಿ ಬಿಟ್ಟು ಹೇಳಿಕೊಳ್ಳುವ ಧೈರ್ಯ ಮಾತ್ರ ಆತ ಎಂದಿಗೂ ಮಾಡಿರಲಿಲ್ಲ. ಆತನ ಗೆಳೆಯರು ಕೂಡ ತುಂಬಾ ಕಡಿಮೆ. ಇದ್ದವರು ಕೂಡ ತುಂಬಾ ಆಪ್ತರೇನಲ್ಲ. ಶಂಕರ ಹೆಗ್ಡೆಯವರಿಗೆ ಇಬ್ಬರು ಮಕ್ಕಳು ಒಂದು ಗಂಡು ಇನ್ನೊಂದು ಹೆಣ್ಣು. ಗಂಡು ಮಗನ ಹೆಸರು ಶ್ರೀಧರ, ಹೆಣ್ಣು ಮಗಳ ಹೆಸರು ಅವನಿ. ಶ್ರೀಧರ ಹೆಗ್ಡೆಗೆ ಶ್ರೀರಾಮನಷ್ಟೇ ಪ್ರಾಯ. ಆದರೆ ಸ್ವಭಾವ ಮಾತ್ರ ತದ್ವಿರುದ್ಧ. ಚಿಕ್ಕಂದಿನಿಂದಲೂ ಪೋಲಿ ಮಕ್ಕಳ ಸಹವಾಸದಲ್ಲಿ ಬೆಳೆದ ಶ್ರೀಧರ, ಬರುಬರುತ್ತಾ ಯಾರ ಮಾತಿಗೂ ಬಗ್ಗದವನಾಗಿ ಬಿಟ್ಟ. ಊರಿನಲ್ಲಿ ನಡೆಯುವ ಯಾವುದೇ ಪುಢಾರಿ ಕೆಲಸಗಳಲ್ಲಿ ಶ್ರೀಧರನ ಹೆಸರು ಮೊದಲು ಕೇಳಿ ಬರುತ್ತಿತ್ತು. ಪ್ರಾಯಕ್ಕೆ ಬಂದ ಮೇಲೂ ಕೂಡ ಯಾವುದೇ ಜವಾಬ್ದಾರಿ ಹೊರದೇ ಶಂಕರ ಹೆಗ್ಡೆಯವರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದ. ಅಪ್ಪ ಯಕ್ಷಗಾನದಲ್ಲಿ ರಾವಣ ವೇಷ ಹಾಕಿ ಜನರನ್ನು ರಂಜಿಸಿದರೆ, ಮಗ ನಿಜ ರೂಪದಲ್ಲಿ ರಾಕ್ಷಸನ ಹಾಗೆ ಜನರನ್ನು ಹಿಂಸಿಸುತ್ತಿದ್ದಾನೆ ಎಂದು ಆತನನ್ನು ನೋಡಿ ಜನ ಹಿಂದಿನಿಂದ ಮಾತನಾಡಿಕೊಳ್ಳುತ್ತಿದ್ದದ್ದು ಕೂಡ ಶಂಕರ ಹೆಗ್ಡೆಯವರ ಕಿವಿಗೆ ಬಿದ್ದಿಲ್ಲವೆಂದಲ್ಲ. ಅದೇ ಕಾರಣಕ್ಕೆ ಕಳೆದ ೩ ವರ್ಷಗಳಿಂದ ಹೆಗ್ಡೆಯವರು ಬಣ್ಣ ಹಚ್ಚುವುದು ನಿಲ್ಲಿಸಿ ಬಿಟ್ಟಿದ್ದಾರೆ. ಸದಾ ಕಳೆದು ಹೋದಂತಿರುವ ಒಂದು ತೆರನಾದ ವೈರಾಗ್ಯ ಅವರ ಮುಖದಲ್ಲಿ ತೋರುತ್ತದೆ. ಇನ್ನು ಅವರ ಮಗಳಾದ ಅವನಿ, ಶ್ರೀಧರನಿಗಿಂತ ಪ್ರಾಯದಲ್ಲಿ ೩ ವರ್ಷ ಚಿಕ್ಕವಳು. ಆದರೆ ಮಹಾ ಬುದ್ಧಿವಂತೆ. ವಿದ್ಯೆಯಲ್ಲಿ ಸದಾ ಮುಂದು. ಮಗನನ್ನು ಓದಿಸಿ ಪದವೀಧರನನ್ನಾಗಿ ಮಾಡಿಸ ಬೇಕೆಂಬ ಕನಸನ್ನು ಹೆಗ್ಡೆಯವರು ಮಗಳ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ. ಆಕೆ ದೂರದ ಪೇಟೆಯ ಕಾಲೇಜಿಗೆ ದಿನಾ ಹೋಗಿ ಬಂದು ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ.

ಹೀಗೆ ದಿನಗಳು ಸಾಗುತ್ತಿರಲು ಅದೊಂದು ದಿನ ಎದೆ ನೋವೆಂದು ಅಚಾನಕ್ಕಾಗಿ ಹಾಸಿಗೆ ಪಾಲಾದ ಸೋಮಯಾಜಿಗಳು ಮುಂದಿನ ದಿನ ಬೆಳಗ್ಗೆ ಉಸಿರಾಡುವುದನ್ನು ನಿಲ್ಲಿಸುತ್ತಾರೆ. ಹೀಗೆ ಅಚಾನಕ್ಕಾಗಿ ಆದ ಮರಣದಿಂದ ದುಖತಪ್ತನಾದ ಶ್ರೀರಾಮ ಅಪ್ಪನ ಅಂತ್ಯ ಕ್ರಿಯೆಗಳನ್ನು ಪೂರೈಸಿ, ಅವರ ಆಸೆಯಂತೆ ಅಸ್ಥಿ ವಿಸರ್ಜನೆಗೆಂದು ಮನೆಗೆ ಬೀಗ ಹಾಕಿ ರಾಮೇಶ್ವರದ ಕಡೆ ಹೊರಡುತ್ತಾನೆ. ಕಾಕತಾಳೀಯವೆಂಬಂತೆ ಸೋಮಯಾಜಿಗಳ ಮರಣದ ಸರಿಯಾಗಿ ೩ ದಿನಗಳ ನಂತರ ಶಂಕರ ಹೆಗ್ಡೆಯವರು ಕೂಡ ಅಸುನೀಗಿ ಬಿಡುತ್ತಾರೆ. ಈ ವಿಷಯದಲ್ಲೂ ಧೂರ್ತತನ ತೋರುವ ಶ್ರೀಧರ ಹೆಗ್ಡೆ, ಬೇಕೆಂದಲೇ ಅವರ ಶವ ಸಂಸ್ಕಾರವನ್ನು ಹೊಳೆ ಬದಿಯ ವಿವಾದಿತ ಜಾಗದಲ್ಲೇ ನಡೆಸುತ್ತಾನೆ ಹಾಗೂ ಅದೇ ಜಾಗದಲ್ಲಿ ಕಾಂಕ್ರೀಟ್ ಹಾಕಿ ಒಂದು ಸಮಾಧಿಯನ್ನು ಕೂಡ ನಿರ್ಮಿಸುತ್ತಾನೆ. ರಾಮೇಶ್ವರದಿಂದ ಮನೆಗೆ ಮರಳಿದ ಶ್ರೀರಾಮ, ಶಂಕರ ಹೆಗ್ಡೆಯವರ ಸಾವಿನ ಸುದ್ದಿ ಕೇಳಿ ಬೇಸರಗೊಳ್ಳುತ್ತಾನೆ ಹಾಗೂ ತಾನಿಲ್ಲದಿದ್ದಾಗ ಶ್ರೀಧರ ಮಾಡಿದ ಕುತಂತ್ರಕ್ಕೆ ಅಸಹ್ಯಪಡುತ್ತಾನೆ. ಇದೆಲ್ಲಾ ಆಗಿ ಕೆಲವೇ ತಿಂಗಳುಗಳ ಬಳಿಕ ನಡೆದ ಪ್ರಮುಖ ವಿದ್ಯಮಾನದಲ್ಲಿ, ನರಸಿಂಹ ಸೋಮಯಾಜಿಗಳ ಪರ ಕೋರ್ಟ್ ತೀರ್ಪು ನೀಡುತ್ತದೆ. ಕೂಡಲೇ ಕಾರ್ಯತತ್ಪರನಾದ ಶ್ರೀರಾಮ ಹೊಳೆಬದಿಯ ಜಮೀನಿಗೆ ಉದ್ದಕ್ಕೂ ಹೊಸದಾಗಿ ಸೇರ್ಪಡೆಯಾಗಿರುವ ಜಾಗವನ್ನು ಒಳಗೂಡಿಸಿ ತಂತಿ ಬೇಲಿಯನ್ನು ಹಾಕಿಸಿ ಬಿಡುತ್ತಾನೆ. ಆದರೆ ಇದರ ಫಲವಾಗಿ, ಊರಿನ ಜನರನ್ನೆಲ್ಲ ಚಕಿತಗೊಳಿಸುವಂತೆ, ಶಂಕರ ಹೆಗ್ಡೆಯವರ ಸಮಾಧಿ ಕೂಡ ಹೊಸದಾಗಿ ಶ್ರೀರಾಮನಿಗೆ ಸೇರಿದ ಜಾಗದ ಬೇಲಿಯ ಒಳಗಡೆ ಸೇರ್ಪಡೆಯಾಗುತ್ತದೆ. ಈ ಬೆಳವಣಿಗೆ ಸೋಮಯಾಜಿಗಳ ಹಾಗೂ ಹೆಗ್ಡೆಯವರ ಕುಟುಂಬಗಳ ಹೊಸ ತಲೆಮಾರಿನ ಹೊಸ ಕಲಹಕ್ಕೆ ನಾಂದಿ ಹಾಡುತ್ತದೆ. ಬೆಳ್ಯಾಡಿಯು ಹಿಂದೆಂದೂ ಕಂಡು ಕೇಳರಿಯದ ಘಟನೆಗಳಿಗೆ ಸಾಕ್ಷಿಯಾಗಲು ಸನ್ನದ್ಧವಾಗುತ್ತದೆ.

ಮುಂದಿನ ಭಾಗ > ರಾವಣಾಯಣ : ಭಾಗ ೨ – ಅತಿಕ್ರಮಣ

4 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)