ದೇವಿ : ಭಾಗ ೩

ಮುಂದಿನ ನಡೆದ ಘಟನೆಗಳು ದುಗ್ಗಿಗೆ ಕನಸೇನೋ ಎಂಬಂತೆ ನಡೆದು ಹೋದವು. ಕೋಲ ನಡೆದ ಮರುದಿನ ಬೆಳಗ್ಗೆಯೇ  ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಪ್ರಮುಖರೆಲ್ಲ ಶಂಭು ಶೆಟ್ಟರ ನೇತೃತ್ವದಲ್ಲಿ ದುಗ್ಗಿಯ ಮನೆ ಮುಂದೆ ಹಾಜರಾದರು. ಹೇಗೆ ಬೆಳ್ಯಾಡಿಗೆ ಸಿರಿ ದೇವತೆಯ ಗುಡಿಯ ಅವಶ್ಯಕತೆ ಇದೆ ಎಂದೂ, ಯಾಕೆ ಅದಕ್ಕೆ ದುಗ್ಗಿಯೇ ಪೂಜೋಪಚಾರ ನಡೆಸಬೇಕೆಂದೂ, ದುಗ್ಗಿ ಯಾವ ರೀತಿಯಲ್ಲಿ ಇತರರಿಗಿಂತ ವಿಶಿಷ್ಟಳು ಎಂದೂ ಶೆಟ್ಟರು ವಿಧ ವಿಧವಾಗಿ ವರ್ಣಿಸಿದರು. ಮೊದ ಮೊದಲು ಸಂಕೋಚದ ಮುದ್ದೆಯಂತೆ, ಭಯದಿಂದ ತಲೆ ಕೆಳ ಹಾಕಿ ಕುಳಿತ ದುಗ್ಗಿ, ಶೆಟ್ಟರ ಹೊಗಳಿಕೆಯಿಂದ ನಿಧಾನಕ್ಕೆ ಬೀಗುತ್ತಾ ತಲೆಯೆತ್ತಿ ಶೆಟ್ಟರು ಹೇಳಿದ್ದಕ್ಕೆಲ್ಲ ಸಮ್ಮತಿಯಿಂದ ತಲೆಯಾಡಿಸತೊಡಗಿದಳು. ಅಂತೂ ಇಂತೂ ಎಣಿಸಿಕೊಂಡ ಕಾರ್ಯ ಸಾಧಿಸಿದ ತೃಪ್ತಿಯಿಂದ ಶೆಟ್ಟರು ಸಂಗಡಿಗರೊಂದಿಗೆ ದುಗ್ಗಿಯ ಮನೆಯಿಂದ ಹೊರ ನಡೆದರು.

ಮುಂದೊಂದು ವಾರ ಬೆಳ್ಯಾಡಿಯ ದಕ್ಷಿಣ ದಿಕ್ಕಿನಲ್ಲಿರುವ ಶೆಟ್ಟರ ಜಮೀನಿನಲ್ಲಿ ಸಿರಿ ದೈವದ ಗುಡಿ ಕಟ್ಟುವ ಕಾರ್ಯ ಭರದಿಂದ ಸಾಗಿತು. ಬೆಳ್ಯಾಡಿ ಇದರ ಜೊತೆ ಜೊತೆಗೆ ಮುಂದಿನ ಪಂಚಾಯತ್ ಚುನಾವಣೆಗೆ ಸಜ್ಜಾಗುತ್ತಿತ್ತು. ಬೆಳ್ಯಾಡಿಯಲ್ಲಿ ಶೆಟ್ಟರಿಗಿಂತ ಹೆಚ್ಚಿನ ವರ್ಚಸ್ಸು ಹೊಂದಿರುವ ಗಿರೀಶ ರಾಯರು, ಶೆಟ್ಟರಿಗೆ ಪ್ರತಿಸ್ಪರ್ಧಿಯಾಗಿ ನಿಂತಿದ್ದರು. ಶಂಭು ಶೆಟ್ಟರು ಕೂಡ ತಾನೇನು ಕಡಿಮೆಯಿಲ್ಲವೆಂಬಂತೆ ಬೆಳ್ಯಾಡಿಯ ತುಂಬೆಲ್ಲಾ ಅಬ್ಬರದ ಪ್ರಚಾರ ನಡೆಸಲು ಶುರು ಹಚ್ಚಿಕೊಂಡಿದ್ದರು. ಈ ಬಾರಿ ಶೆಟ್ಟರ ಚುನಾವಣಾ ಪ್ರಚಾರದ ಪ್ರಮುಖ ಅಜೆಂಡಾ ಸಿರಿ ಗುಡಿಯ ಸ್ಥಾಪನೆಯೇ ಆಗಿತ್ತು. ಬೆಳ್ಯಾಡಿಯ ಹಿತದೃಷ್ಟಿಯಿಂದ ಗುಡಿಯ ಸ್ಥಾಪನೆಗೆ ತಾನು ಮುಂದಾಗಿರುವುದಾಗಿಯೂ, ಜನರ ಬೆಂಬಲ ಮುಂದುವರೆದಲ್ಲಿ ಬೆಳ್ಯಾಡಿಯಲ್ಲಿ ಹೀಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿಯೂ ಭರವಸೆಯ ಭಾಷಣ ಕೊಡತೊಡಗಿದರು. ಕಾವೇರಮ್ಮನ ಕೈಲಿ ಕೆಲಸ ಮಾಡಿಸಿಕೊಳ್ಳುವುದು, ದೈವಾಂಶ ಸಂಭೂತವಾಗಿರುವ ತನ್ನ ಪ್ರತಿಷ್ಠೆಗೆ ಕುಂದೆಂದು ದುಗ್ಗಿ, ಶೆಟ್ಟರ ಮನೆಗೆ ಕೆಲಸಕ್ಕೆ ಹೋಗುವುದು ನಿಲ್ಲಿಸಿ ಬಿಟ್ಟಳು. ಶೆಟ್ಟರು ಅದಕ್ಕೆ ಪೂರಕವೆಂಬಂತೆ, ದುಗ್ಗಿಯ ಸಂಸಾರ ಸಾಗಲು ಬೇಕಾದಷ್ಟು ದಿನಸಿ ಧಾನ್ಯಗಳು ಆಕೆಯ ಮನೆ ಸೇರುವಂತೆ ವ್ಯವಸ್ಥೆ ಮಾಡಿದರು.

ಹಾಗೇ ಒಂದು ತಿಂಗಳಿನ ಒಳಗೆ ಗುಡಿಯ ಕಾರ್ಯಗಳು ಪೂರ್ಣಗೊಂಡು, ಉದ್ಘಾಟನೆಯ ದಿನ ಕೂಡ ನಿಗದಿಯಾಯಿತು. ಗುಡಿಯ ಉದ್ಘಾಟನೆಯ ದಿನ ತನ್ನ ವತಿಯಿಂದ ಬೆಳ್ಯಾಡಿಯ ಸಮಸ್ತ ಜನತೆಗೆ ಅನ್ನ ದಾನದ ಹೊಣೆಯನ್ನು ಶೆಟ್ಟರೇ ಹೊತ್ತುಕೊಂಡರು. ನಿರೀಕ್ಷೆಯಂತೆ ಅಂದು ಬೆಳ್ಯಾಡಿಯ ಬ್ರಾಹ್ಮಣೇತರ  ವರ್ಗದ ಬಹುಪಾಲು Devi6aಜನತೆ ಹೊಸ ಆಶಾಕಿರಣದೊಂದಿಗೆ ಸಿರಿ ದೈವದ ಮೊದಲ ಪೂಜೆಗೆ ಸನ್ನದ್ಧವಾಗಿ ಬಂದಿತು. ನೆರೆದ ಜನ ಸಾಗರವೆಲ್ಲ ತನ್ನ ಮೇಲೆ ಇಟ್ಟಿರುವ ಗೌರವನ್ನು ನೋಡುತ್ತ, ಹೀಗೊಂದು ತಿಂಗಳ ಹಿಂದೆ ಇದೇ ಎಲ್ಲ ಜನ ತನ್ನನ್ನು ತಾತ್ಸಾರದಿಂದ ನಿರ್ಲಕ್ಷಿಸುತ್ತಿದ್ದ ದಿನಗಳು ಒಮ್ಮೆಲೇ ನೆನಪಿಗೆ ಬಂದು, ನಿಜಕ್ಕೂ ತಾನೇ ಸಿರಿ ದೈವವೇನೋ ಎಂಬಂತೆ ತನ್ನನ್ನು ನಂಬಿಸಿಕೊಳ್ಳುತ್ತಾ, ಬಯಸದೇ ಬಂದ ಭಾಗ್ಯವನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಅರಿವಾಗದೆ, ಒತ್ತಡದಲ್ಲಿ, ಆವೇಶದಲ್ಲಿ, ಆತಂಕದಲ್ಲಿ, ತಳಮಳಗೊಂಡು ದುಗ್ಗಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಕೊಜ ಕೊಜವೆಂದು ಏನೇನೋ ಒದರುತ್ತಾ, ದೈವದ ಸನ್ನಿಧಿಯಲ್ಲೇ ತಲೆ ಸುತ್ತಿ ಬಿದ್ದಳು. ನಡೆದ ಘಟನೆಯಿಂದ ಅಪಾರ ಸಂತೋಷಕ್ಕೊಳಗಾದ ಶೆಟ್ಟರು, ದುಗ್ಗಿಯ ಒದರಿಕೆಗೆ ತಾನೇ ಅರ್ಥ ಕೊಟ್ಟು, ಸಿರಿ ದೇವಿಯು, ನಾವು ಮಾಡಿದ ಕಾರ್ಯಗಳಿಂದ ಪ್ರಸನ್ನಳಾಗಿದ್ದಳೆಂದೂ, ಆಕೆಯ ಅಭಯ ಹಸ್ತ ಬೆಳ್ಯಾಡಿಯ ಜನತೆಯ ಮೇಲೆ ಸದಾ ಇರುವುದೆಂದು ದುಗ್ಗಿಯ ಮೂಲಕ ಸಿರಿ ದೈವ ನುಡಿದಿದ್ದಾಗಿ ಧ್ವನಿವರ್ಧಕದ ಮೂಲಕ ಪ್ರಕಟಣೆ ಸಾರಿದರು. ಊರ ಜನತೆ ನೆಮ್ಮದಿಯಿಂದ ಹೊಟ್ಟೆ ತುಂಬಾ ಉಂಡು ತೇಗಿ, ನಾಳೆಯಿಂದ ಸಿರಿ ದೈವದ ಆರಾಧನೆ ಮಾಡುವುದಾಗಿ ನಿಶ್ಚಯಿಸಿ, ತಮ್ಮ ಹಿತಕ್ಕಾಗಿ ಎಲ್ಲವನ್ನು ತಾವೇ ಮುಂದು ನಿಂತು ಮಾಡುತ್ತಿರುವ ಶೆಟ್ಟರನ್ನು ಮನಸಾರೆ ಹರಸಿ ಮನೆಗೆ ಮರಳಿದರು.

ಹಠಾತ್ತನೆ ಅಲ್ಲದಿದ್ದರೂ ನಿಧಾನವಾಗಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬ್ರಾಹ್ಮಣೇತರ ಭಕ್ತರ ಸಂಖ್ಯೆ ಕ್ಷೀಣವಾಗ ತೊಡಗಿತು. ಇತ್ತ ಕಡೆ ಸಿರಿ ದೈವದ ಗುಡಿಗೆ ಬರುವವರ ಸಂಖ್ಯೆ ಜಾಸ್ತಿಯಾಗ ತೊಡಗಿತು. ಅಂತೆಯೇ ಊರಿನಲ್ಲಿ ದುಗ್ಗಿಯ ಖದರು ಹೆಚ್ಚಾದಂತೆ ದುಗ್ಗಿಯ ಅಹಮಿಕೆ ಕೂಡ ಬೆಳೆಯ ತೊಡಗಿತು. ಆಕೆ ಈಗ ಯಾರ ಮನೆಗೂ ಕೆಲಸ, ಚಾಕರಿಗೆಂದು ಹೋಗಳು. ಯಾರೇ ಪ್ರಮುಖರು ಗುಡಿಗೆ ದೇವಿಯ ದರ್ಶನಕ್ಕೆಂದು ಬಂದರೂ, ಬಿಗಿ ಮುಖದಿಂದಲೇ ಪೂಜೆ ಮಾಡಿ ಕಳುಹಿಸುವಳು. ಪುಡಿ ದಿನಸಿ ಸಾಮಾನುಗಳಿಗೆ ಸಣ್ಣಂಗಡಿ ಪೈಗಳಿಗೆ ಹಣ ಕೊಡಳು. ಅಸಮಾಧಾನ ತಡೆಯದೆ ಹಣ ಕೇಳಿದರೆ ಪೈಗಳನ್ನು ಕೆಕ್ಕರಿಸಿ ನೋಡಿ ಅವರು ಹೆದರಿ ಬಾಯಿ ಮುಚ್ಚುವಂತೆ ಮಾಡುವಳು. ಊರ ಜನ ಕೂಡ ದುಗ್ಗಿಯ ಆಟೋಪಟೋಪಗಳನ್ನು ಸಹಿಸಿ ಕೊಂಡಿರುವುದು ಸಿರಿ ದೈವದ  ಮೇಲಿರುವ ಭಯದಿಂದಾಗಿ. ಗುಡಿ ಸ್ಥಾಪನೆಯಾದಾವಿಗಿನಿಂದ ದರೋಡೆಕೋರ ಚಂದ್ರನ್ ಬೆಳ್ಯಾಡಿಯಲ್ಲೆಲ್ಲೂ ದಾಳಿಯಿಟ್ಟ ಸುದ್ದಿ ಬೇರೆ ಹರಿದಾಡದೇ ಇರುವುದು ಸಿರಿ ದೈವದ ಮಹಿಮೆಯನ್ನು ಜನರ ಮನಸ್ಸಿನಲ್ಲಿ ಹೆಚ್ಚಿಸಿದೆ.

ಪರಿಸ್ಥಿತಿ ಹೀಗಿರುವಾಗ ಶೆಟ್ಟರು ಬಹುದಿನಗಳಿಂದ ಯೋಜನೆ ಹಾಕಿ, ಹಣದ ಹೊಳೆ ಹರಿಸಿ, ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಿದ್ದು, ಬ್ರಾಹ್ಮಣೇತರ ವರ್ಗದ ಮತಗಳೆಲ್ಲ ಒಗ್ಗಟ್ಟಾಗಿ ಶೆಟ್ಟರ ಕಡೆ ವಾಲಿ, ಪ್ರತಿಸ್ಫರ್ಧಿ ಗಿರೀಶ ರಾಯರನ್ನು ಭಾರಿ ಅಂತರದಿಂದ ಶೆಟ್ಟರು ಸೋಲಿಸುವಂತೆ ಮಾಡಿತು. ಹೂಡಿದ ಹಂಚಿಕೆ ಕೈಗೂಡಿದ ಖುಷಿ ಶೆಟ್ಟರ ಮುಖದಲ್ಲಿ ತುಂಬಿ ತುಳುಕಾಡುತ್ತಿತ್ತು. ಇದೇ ಸಮಯಕ್ಕೆ ಶಿಷ್ಟಾಚಾರಗಳನ್ನು ಮೀರಿ ಬೆಳೆಯುತ್ತಿದ್ದ ದುಗ್ಗಿ, ಇನ್ನೊಂದು ಹೆಜ್ಜೆ ಮುಂದಕ್ಕಿರಿಸಿ, ಶೆಟ್ಟರ ಗೆಲುವಿಗೆ ಸಂಪೂರ್ಣವಾಗಿ ತಾನೇ ಕಾರಣವೆಂದು ಊರ ತುಂಬೆಲ್ಲ ಸುದ್ದಿ ಹಬ್ಬಿಸಿದಳು. ಸುದ್ದಿ ಕಿವಿಗೆ ಬಿದ್ದರೂ, ಸಂಭ್ರಮದ ಸಮಯದಲ್ಲಿ ಮನಃಸ್ಥಿತಿ ಹದಗೆಡಿಸಿಕೊಳ್ಳಬಾರದೆಂಬ ಕಾರಣಕ್ಕೆ ಶೆಟ್ಟರು ದುಗ್ಗಿಯನ್ನು ಸಹಿಸಿಕೊಂಡೆ ಇದ್ದು ಬಿಟ್ಟರು. ಆದರೆ ಯಾವಾಗ ಚುನಾವಣೆ ಗೆದ್ದ ಪ್ರಯುಕ್ತ, ಎರಡು ದಿನ ಬಿಟ್ಟು ಶೆಟ್ಟರು ಸಿರಿ ದೈವದ ಗುಡಿಗೆ ವಿಶೇಷ ಪೂಜೆಗೆಂದು ಕಾವೇರಮ್ಮನ ಸಹಿತ ತೆರಳಿದಾಗ, ಇವರನ್ನು ನೋಡಿದ ಕೂಡಲೇ ಉರಿ ಮುಖ ಮಾಡಿಕೊಂಡ ದುಗ್ಗಿ, “ಗೆದ್ದು ಇಷ್ಟು ದಿನವಾದ ನಂತರ ಅಮ್ಮನ ನೆನಪಾದ ಹಾಗಿದೆ ಸಾಹೇಬರಿಗೆ” ಎಂದು ಉಡಾಫೆಯಿಂದ ಮಾತಾಡಿದಳೋ, ಆ ಕ್ಷಣವೇ ಈ ಸೊಕ್ಕಿನ ದನದ ಮೂಗಿಗೆ ಹಗ್ಗ ಸುರಿಯುವ ಕ್ಷಣ ಸನ್ನಿಹಿತವಾಗಿದೆ ಅಂದು ಶೆಟ್ಟರು ನಿರ್ಧರಿಸಿದರು.

ಹೀಗೆ ಬೆಳ್ಯಾಡಿಯಲ್ಲಿ ದಿನಗಳು ಕಳೆದು ಬೇಸಗೆ ಕಾಲಿಟ್ಟಿತು. ಇಂದಿನ ಬಾರಿಯೇಕೋ ಊರಿನ ಕೆರೆ ಬಾವಿಗಳು ಬೇಗ ಬತ್ತಿ ಹೋಗ ತೊಡಗಿದವು. ಸೂರ್ಯನ ತಾಪ ಅತಿಯಾಗಿ, ಕುಡಿಯಲು ನೀರು ಸಿಗದೇ ದನ ಕರುಗಳು ಒದ್ದಾಡಿದವು. ಗಾಯದ ಮೇಲೆ ಬರೆ ಎಳೆದಂತೆ ಇಲ್ಲಿಯತನಕ ಗಟ್ಟಿ ಮುಟ್ಟಾಗೇ ಇದ್ದ ಕೆರೆಬದಿ ಮನೆ ಶಂಕರನ ಮಗ ಸುರೇಶ ಇದ್ದಕ್ಕಿದ್ದಂತೆ ಜ್ವರ ಬಿದ್ದು ಎರಡು ದಿನದೊಳಗೆ ತೀರಿ ಹೋದ. ಸ್ವಲ್ಪ ದಿನಗಳಲ್ಲೇ ಪಂಚಾಯಿತಿಗೆ ಸರಕಾರದಿಂದ ನೋಟೀಸ್ ಬಂದು, ಇಲಿಜ್ವರ ಬೆಳ್ಯಾಡಿಯ ಸುತ್ತ ಮುತ್ತಲಿನ ಊರಿನಲ್ಲಿ ಕಾಣಿಸಿ ಕೊಂಡಿದ್ದು , ಜನರು ಸೂಕ್ತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಲಾಯಿತು. ಮೊದಲೇ ಗಾಳಿ ಸುದ್ದಿಗೆ ಹೆಸರಾದ ಬೆಳ್ಯಾಡಿಯ ಜನತೆಗೆ ಹೊಸದೊಂದು ಸುದ್ದಿ ಸಿಕ್ಕಂತಾಗಿ, ಊರಿನಲ್ಲಿ ಯಾರದ್ದೇ ಮನೆಯಲ್ಲಿ ಆಯಸ್ಸು ತೀರಿ ಸತ್ತವರ ಸಾವಿಗೂ ಇಲಿಜ್ವರವೇ ಕಾರಣವೆಂಬ ಥರ ಥರದ ಸುದ್ದಿಗಳು ಹರಡತೊಡಗಿದವು.
ಇದೆಲ್ಲದರ ಜೊತೆಗೆ ಬೆಳ್ಯಾಡಿಯ ದಕ್ಷಿಣ ದಿಕ್ಕಿನ ಕೆಲ ಪ್ರದೇಶಗಳು ಪಕ್ಕದ ಊರಿನಲ್ಲಿ ಖಾಸಗಿ ಕಂಪನಿಯೊಂದು ಹೊಸದಾಗಿ ನಿರ್ಮಿಸಲು ಯೋಜಿಸಿರುವ ಬೃಹತ್ ಜವಳಿ ಉದ್ಯಮದ ಕಾರ್ಖಾನೆಗೆ ಅವಶ್ಯಕತೆ ಬೀಳಬೇಕಾಗಬಹುದೆಂದೂ, ತಮಗೆ ಅಗತ್ಯವಿರುವ ಜಮೀನನ್ನು ಆ ಕಂಪನಿ ಅತೀ ದುಬಾರಿ ಬೆಲೆ ತೆತ್ತಾದರೂ ಖರೀದಿಸಲು ಸಿದ್ಧವಾಗಿರುವುದಾಗಿಯೂ ಸುದ್ದಿ ಹಬ್ಬತೊಡಗಿತು. ಯಾವಾಗ ಈ ಮಾಹಿತಿ ನಿಜವೆಂಬಂತೆ ಆಧಾರವಾಗಿ ದಿನಪತ್ರಿಕೆಯಲ್ಲಿ ಅದೇ ಕಂಪನಿ ಖುದ್ದಾಗಿ ಜಾಹೀರಾತು ಪ್ರಕಟಿಸಿತೋ, ಅದನ್ನೋದುತ್ತ ಮನೆ ಚಾವಡಿಯಲ್ಲಿ ಕುಳಿತಿದ್ದ ಶೆಟ್ಟರ ಮುಖದಲ್ಲಿ, ದುಗ್ಗಿಯ ಮೇಲಿದ್ದ, ಮನಸಲ್ಲೇ ಅದುಮಿಕೊಂಡಿದ್ದ ರೋಷವೆಲ್ಲ ಭಾರೀ ನಗುವಿನ ಮೂಲಕ ಹೊರ ಹೊಮ್ಮಿತು. ಆ ಕೂಡಲೇ ತಡಮಾಡದೇ ಹಣ್ಣು ಹಂಪಲುಗಳನ್ನು ಬೆಳ್ಳಿಯ ತಟ್ಟೆಯಲ್ಲಿ ಹಾಕಿ ಶೆಟ್ಟರ ಸವಾರಿ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಗುರುಮೂರ್ತಿ ಹಂದೆಯವರ ಮನೆ ಕಡೆ ಹೊರಟಿತು.

ಬೆಳ್ಯಾಡಿ ವಿಷ್ಣುಮೂರ್ತಿ ದೇವರ ವಾರ್ಷಿಕ ಜಾತ್ರೆ ಸನ್ನಿಹಿತವಾಗುತ್ತಿತ್ತು. ಬಹುಷಃ ಇದೊಂದು ಸನ್ನಿವೇಶದಲ್ಲಿ ಮಾತ್ರ ಬೆಳ್ಯಾಡಿಯ ಜನತೆ ಜಾತಿ ವರ್ಗಗಳ ಬೇಧವನ್ನು ಮರೆತು ಒಂದಾಗಿ ಪಾಲ್ಗೊಳ್ಳುವುದು. ಜಾತ್ರೆಗೆ ಎರಡು ದಿನ ಬಾಕಿಯಿದೆ ಎಂಬಷ್ಟರಲ್ಲಿ, ಚಂದ್ರನ್ ಅಪಹರಿಸಿದ್ದ ಹಂದೆಯವರ ಮಗ ಉದಯನ ವಿಚಾರವಾಗಿ ಸತ್ಯ ಸುದ್ದಿ ಊರ ತುಂಬೆಲ್ಲ ಹರಿದಾಡಿತು. ಅಲ್ಲಿಯವರೆಗೆ ಜನರು ನಂಬಿದ್ದಂತೆ ಉದಯನನ್ನು ಚಂದ್ರನ್ ಅಪಹರಿಸಿದ್ದಲ್ಲವೆಂದು, ಆತ ಸ್ವಇಚ್ಛೆಯಿಂದ ಮನೆಯವರಿಗೆ ತಿಳಿಸದೇ ಮೈಸೂರಿಗೆ ಓಡಿ ಹೋಗಿ ಅಲ್ಲಿ ಉನ್ನತ ವ್ಯಾಸಾಂಗ ಮುಂದುವರೆಸುತ್ತಿರುವುದಾಗಿಯೂ, ಸುಮ್ಮನೆ ಈ ಕಾರಣವಾಗಿ ಜನತೆ ಚಂದ್ರನ್ ಗೆ ಹೆದರಿದ್ದಾಗಿಯೂ ನೆಮ್ಮದಿಯ ವಾತವರಣ ಪಸರಿಸಿತು. ಸುದ್ದಿ ತಿಳಿದ ಹಂದೆಯವರು ಅವಮಾನದಿಂದ ಸ್ವಲ್ಪ ಕುಗ್ಗಿದರೂ, ಮಗ ಕ್ಷೇಮವಾಗಿ ಬದುಕಿರುವುದನ್ನು ತಿಳಿದು ಸಂತೋಷಪಟ್ಟರು. ಇದಕ್ಕೆಲ್ಲ ವಿಷ್ಣುಮೂರ್ತಿ ದೇವರ  ಮಹಿಮೆಯೇ ಕಾರಣವೆಂದು ಊರ ಮಂದಿಗೆಲ್ಲ ಹೇಳಿಕೊಂಡು ತಿರುಗಿದರು. ವಿಷ್ಣುಮೂರ್ತಿ ದೇವರ ಜಾತ್ರೆಯ ದಿನ ಸಂಜೆ ಊರಿನ ಎಲ್ಲ ವರ್ಗಗಳ ಮುಖ್ಯಸ್ಥರೆಲ್ಲ ಸೇರಿ, ತಾವು ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಬಗ್ಗೆ ಹಂದೆಯವರ ಮೂಲಕ ದೇವರಿಗೆ ಪ್ರಶ್ನೆ ಹಾಕುವುದು ಹಾಗೂ ಹಂದೆಯವರು ವಿಷ್ಣುಮೂರ್ತಿ ಪ್ರತಿಮೆಯ ಮುಂದೆ ಮಂತ್ರಿಸಿ, ಕವಡೆ ಹಾಕಿ, ಏನೇನೋ ಲೆಕ್ಕಾಚಾರ ಹಾಕಿ ಕೇಳಿದ ಪ್ರಶ್ನೆಗೆ ಸೂಕ್ತ ಪರಿಹಾರ ಸೂಚಿಸುವುದು ಇಲ್ಲಿಯವರೆಗೆ ಬೆಳ್ಯಾಡಿಯಲ್ಲಿ ನಡೆದು ಬಂದ ಸಂಪ್ರದಾಯ. ಅಂತೆಯೇ ಈ ಬಾರಿ ಕೂಡ ಮುಖಂಡರೆಲ್ಲ ಜೊತೆಗೂಡಿ ಸಮಾಲೋಚಿಸಿ ಸದ್ಯಕ್ಕೆ ಬೆಳ್ಯಾಡಿಯಲ್ಲಿ ತಲೆದೋರಿರುವ ಇಲಿಜ್ವರದ ಮಹಾಮಾರಿಗೆ ಕಾರಣವನ್ನು ಹಾಗೂ ಪರಿಹಾರವನ್ನೂ ವಿಷ್ಣುಮೂರ್ತಿಗೆ ಪ್ರಶ್ನೆ ಹಾಕಿ ತಿಳಿದುಕೊಳ್ಳುವುದೆಂದು ನಿರ್ಣಯಿಸಲಾಯಿತು. ಹಾಗೆ ಹಾಕಲಾದ ಪ್ರಶ್ನೆಗೆ Devi7aತುಂಬಾ ಸಮಯ ತೆಗೆದುಕೊಂಡು ಉತ್ತರದೊಂದಿಗೆ ಹೊರ ಬಂದ ಹಂದೆಯವರು ಊರ ಜನರೆಲ್ಲಾ ಚಕಿತಗೊಳ್ಳುವಂತ ಪರಿಹಾರ ಸೂಚಿಸಿದರು. “ಶಾಂತಿಯಿಂದ ದಿನಗಳನ್ನು ಸಾಗಿಸುತ್ತಿದ್ದ ಬೆಳ್ಯಾಡಿಯಲ್ಲಿ ಇತ್ತೀಚೆಗೆ ತಲೆದೋರುತ್ತಿರುವ ಮಹಾಮಾರಿ ಕಾಯಿಲೆಗೆ ಮೂಲಕಾರಣ ಸಿರಿ ದೈವವು ಊರ ಜನತೆಯ ಮೇಲೆ ಮುನಿದುಕೊಂಡಿರುವುದು. ಗುಡಿಯನ್ನೇನೋ ಸ್ಥಾಪಿಸಿರುವುದು ಹೌದಾದರೂ ಪೂಜೆ ಪುನಸ್ಕಾರಗಳು ಏನೇನೂ ವಿಧಿ ವಿಧಾನವಾಗಿ ನಡೆದಿಲ್ಲ. ಈ ಕಾರಣಕ್ಕಾಗಿ ದೈವವು ಮುನಿದುಕೊಂಡಿದ್ದು ಇನ್ನಿರುವ ಏಕೈಕ ಪರಿಹಾರವೆಂದರೆ ದೈವವನ್ನು, ಮೂಲಸ್ಥಾನವಾದ ನಂದಳಿಕೆಗೆ ಸಾಗಿಸಿ, ಸಿರಿಯ ಸನ್ನಿಧಿಯಲ್ಲಿ ಊರ ಸಮಸ್ತ ಮುಖಂಡರು ನಡೆದಿರುವ ಲೋಪಕ್ಕೆ ಕ್ಷಮೆ ಯಾಚಿಸಿ, ಕಾಣಿಕೆ ಸಲ್ಲಿಸಿ ವಾಪಾಸಾಗುವುದು ಅಷ್ಟೇ.” ಹಂದೆಯವರು ಪರಿಹಾರವನ್ನು ಸೂಚಿಸಿ ಮುಗಿಸುತ್ತಿದಂತೆಯೇ, ಅಲ್ಲಿ ನೆರೆದಿದ್ದ ಊರ ಮುಖಂಡರ ಪೈಕಿ ಹಿಂದಿನ ಪಂಕ್ತಿಯಲ್ಲಿ ಕುಳಿತ ಶೆಟ್ಟರು, ಹಂದೆಯವರ ಮುಖವನ್ನೊಮ್ಮೆ ನೋಡಿ ಸಮ್ಮತಿಯ ನಗು ನಕ್ಕು ತಲೆಯಾಡಿಸಿದರು.
ನಿಧಾನಕ್ಕೆ ಕುಂದುತ್ತಿದ್ದ ವಿಷ್ಣುಮೂರ್ತಿ ದೇವಸ್ಥಾನದ ವರ್ಚಸ್ಸನ್ನು ಮರುಸ್ಥಾಪಿಸಲು ಹಂದೆಯವರಿಗೆ ಹಾಗೂ  ತನ್ನ ಅಹಂ ಗೆ ಪೆಟ್ಟು ಹಾಕಿದ್ದ ಹಳೆಯ ಕೆಲಸದಾಕೆ ದುಗ್ಗಿಗೆ ಸರಿಯಾದ ಬುದ್ಧಿ ಕಲಿಸಲು ಶೆಟ್ಟರಿಗೆ ಈ ಪರಿಹಾರ ಎರಡು ಹಕ್ಕಿಗಳನ್ನು ಒಂದೇ ಗುರಿಯಲ್ಲುರುಳಿಸಿದ ರಾಮಬಾಣವಾಗಿ ಪರಿಣಮಿಸಿತು .

ಇತ್ತ ತಾನೇಕೆ ವಿಷ್ಣುಮೂರ್ತಿ ದೇವರ ಜಾತ್ರೆಯಲ್ಲಿ ಭಾಗವಹಿಸಬೇಕೆಂಬ ಅಹಂಕಾರದಿಂದ ದುಗ್ಗಿಯು ಮನೆಯಲ್ಲಿಯೇ ಉಳಿದುಕೊಂಡಳು. ಸಂಜೆಯಾಗುತ್ತಿದ್ದಂತೆ ನಿಧಾನಕ್ಕೆ ದುಗ್ಗಿಯ ಮೈ ಬಿಸಿಯೇರಿ ಜ್ವರ ತಗುಲಿಕೊಂಡಿತು. ನಿಧಾನಕ್ಕೆ ದುಗ್ಗಿಗೆ ಭೀತಿ ಕಾಡತೊಡಗಿತು ಎಲ್ಲಿ ತಾನು ಜಾತ್ರೆಗೆ ಹೋಗದೇ ಇದ್ದುದ್ದಕ್ಕೆ ದೇವರು ತನ್ನ ಮೇಲೆ ಸಿಟ್ಟಾಗಿ ಹೀಗೆ ಶಿಕ್ಷೆ ನೀಡಿರಬಹುದೇ ಎಂದು. ಮರುಕ್ಷಣವೇ ತನಗೆ ಬಂದಿರುವುದು ಇಲಿಜ್ವರವಿರಬಹುದೇ ಎಂದು ಪ್ರಾಣಭಯವಾಯಿತು. ಜಾತ್ರೆಗೆ ಹೋಗಿದ್ದ ಸುಗುಣ ವಾಪಾಸಾಗುತ್ತಿದ್ದಂತೆಯೇ ಹತ್ತಿರದಲ್ಲೇ ಇದ್ದ ವೈದ್ಯರ ಮನೆಗೆ ಮದ್ದು ತರಲು ಓಡಿಸಿದಳು. ಜಾತ್ರೆಯಲ್ಲಿ ನಡೆದ ವಿಷಯವನ್ನು ಹೇಳಬೇಕೆಂದಿದ್ದ ಸುಗುಣಳು, ಹೇಗಿದ್ದರೂ ಆ ಬೇಸರದ ಸುದ್ದಿಯನ್ನು ದುಗ್ಗಿ ಹುಷಾರಾದ ಮೇಲೆ ಹೇಳಿ ತಿಳಿಸಿದರಾಯಿತು ಎಂದು ಸುಮ್ಮನಾದಳು. ದುಗ್ಗಿಯ ಜ್ವರ ಮರುದಿನವೂ ಕಡಿಮೆಯಾಗುವ ಲಕ್ಷಣ ತೋರಲಿಲ್ಲ. ಸುಗುಣಳಿಗೆ ಉಳಿದ ಒಂದೇ ದಾರಿಯೆಂದರೆ ಉಡುಪಿಗೆ ಹೋಗಿ ದೊಡ್ಡ ವೈದ್ಯರ ಬಳಿ ಹೇಳಿ ಔಷಧಿ ತರುವುದು. ಆದರೆ ಅಷ್ಟು ಖರ್ಚು ವೆಚ್ಚಗಳನ್ನು ಭರಿಸುವಷ್ಟು ಹಣ ಅವರ ಮನೆಯಲ್ಲೆಲ್ಲಿರಬೇಕು? ಸುಗುಣ ಸಹಾಯಕ್ಕೆಂದು ಶೆಟ್ಟರ ಮನೆಗೆ ಹೋಗಿ, ಸ್ವಲ್ಪ ಧನ ಸಹಾಯ ಬೇಕಾಗಿದೆಯೆಂದು, ಇನ್ನು ಮುಂದೆ ದುಗ್ಗಿ ಅವರ ಮನೆಯಲ್ಲಿ ಮಾಡುತ್ತಿದ್ದ ಕೆಲಸಗಳನ್ನೆಲ್ಲ ತಾನು ಮಾಡುವುದಾಗಿಯೂ ಭರವಸೆಯನ್ನು ನೀಡಿ ಔಷಧಿ ತಂದು ದುಗ್ಗಿಯನ್ನು ಉಪಚರಿಸಿದಳು. ಹೇಳಿದ ಮಾತಿಗೆ ತಪ್ಪದೇ ಮರುದಿನದಿಂದ ಶೆಟ್ಟರ ಮನೆಗೆ ಕೆಲಸಕ್ಕೆ ಹೋಗಲು ಶುರುವಿಟ್ಟುಕೊಂಡಳು. ಇತ್ತ ದುಗ್ಗಿ ಹಾಸಿಗೆಯಿಂದ ಎದ್ದು ಕುಳಿತುಕೊಳ್ಳುವಷ್ಟಾಗಲು ವಾರವೇ ಹಿಡಿಯಿತು. ಸುಗುಣ ದಿನವೂ ಬೆಳಗ್ಗೆ ಸಿಂಗರಿಸಿಕೊಂಡು ಮನೆಯಿಂದ ಹೊರಡುವುದನ್ನು ಆಕೆ ಕಳೆದೆರಡು ದಿನದಿಂದ ಗಮನಿಸಿದ್ದಳು. ಮಾತನಾಡಲು ತ್ರಾಣವಿಲ್ಲದೆ ಸುಮ್ಮನಾಗಿದ್ದಳು. ಇಂದು ಹುಷಾರಾಗಿ ಕುಳಿತು, ಸುಗುಣ ಸಿಂಗರಿಸಿಕೊಂಡು ಮನೆಯಿಂದ ಹೊರಡುತ್ತಿರಬೇಕಾದರೆ ತಡೆದು ಹೊಸ ಬಟ್ಟೆಗಳಿಗೆ, ಶೃಂಗಾರ ಸಾಮಗ್ರಿಗಳಿಗೆ ಹಣವೆಲ್ಲಿಂದ ಬಂತೆಂದೂ, ಬೆಳಗ್ಗೆದ್ದು ಎಲ್ಲಿಗೆ ಹೋಗುವುದೆಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು. ಎಲ್ಲವನ್ನೂ ಸಮಾಧಾನವಾಗಿ ಕೇಳಿಕೊಂಡ ಸುಗುಣ, ತನಗೆ ದಕ್ಕದ್ದರ ಬಗ್ಗೆ ಅಸೂಯೆ ಪಟ್ಟುಕೊಳ್ಳಬಾರದ್ದಗಿ ವಾಪಾಸು ದುಗ್ಗಿಗೆ ಮುಖದ ಮೇಲೆ ಉತ್ತರಿಸಿ, ನಿರ್ಲಕ್ಷ್ಯದಿಂದ ದುಗ್ಗಿಯೆಡೆಗೆ ನೋಡಿ, ಮನೆಯಿಂದ ಹೊರನಡೆದು ಹೋದಳು. ಏನೂ ತಿಳಿಯದಂತೆ ಸ್ವಲ್ಪ ಹೊತ್ತು ಹಾಗೇ ನಿಂತಿದ್ದ ದುಗ್ಗಿಗೆ ಕೂಡಲೇ ಸಿರಿ ದೇವಿಯ ಗುಡಿಯ ನೆನಪಾಗಿ ಅತ್ತ ಕಡೆ ಹೆಜ್ಜೆ ಹಾಕಿದಳು. ಗುಡಿಯ ಜಾಗಕ್ಕೆ ಬಂದ ದುಗ್ಗಿ  ತನ್ನ ಕಣ್ಣುಗಳನ್ನು ತಾನೇ ನಂಬದಾದಳು. ಎಲ್ಲಿ ಗುಡಿಯ ಹಾದಿ ಮರೆತು ತಪ್ಪಿ ಬಂದು ಬಿಟ್ಟೆನೇ ಎಂದು ವಾಪಾಸು ಬಂದು, ಖಚಿತ ಪಡಿಸಿಕೊಂಡು ಅದೇ ಜಾಗಕ್ಕೆ ಬಂದು ನಿಂತಳು. ಕಣ್ಣೆದುರಿಗೆ ಗುಡಿ ತೋರುತ್ತಿಲ್ಲ. ಬದಲಿಗೆ ತೋರಿದ್ದು ಸಪಾಟಾಗಿ ಕಡಿದಿಟ್ಟ ಜಾಗ ಹಾಗೂ ಉದ್ದಕ್ಕೂ ಉದ್ದನೆಯ ತಂತಿ ಬೇಲಿ. ದುಗ್ಗಿಗೆ ಆಶ್ಚರ್ಯ ತಡೆಯಲಾಗದೇ ಕನಸೇನೋ ಎಂಬಂತೆ ಅಲ್ಲೇ ಸ್ವಲ್ಪ ಹೊತ್ತು ಕಲ್ಲಂತೆ ನಿಂತಳು. ಮರಳಿ ಪ್ರಜ್ಞೆಗೆ ಮರುಳಿ ವಿಷಯ ತಿಳಿದುಕೊಳ್ಳುವ ಸಲುವಾಗಿ ಪೈಗಳ ಅಂಗಡಿಗೆ ಬಂದು ವಿಚಾರಿಸಿದಳು. ದುಗ್ಗಿಯನ್ನೊಮ್ಮೆ ಅನುಕಂಪಭರಿತ ತಾತ್ಸಾರದ ದೃಷ್ಟಿಯಿಂದ ನೋಡಿದ ಪೈಗಳು, ವಿಷ್ಣುಮೂರ್ತಿ ದೇವರ ಜಾತ್ರೆಯಲ್ಲಿ ನಡೆದ ವಿಚಾರವನ್ನು ಬಿಡಿಸಿ ಹೇಳಿದರು. ಇದೆಲ್ಲ ನಡೆದ ಮೇಲೆ ಶೆಟ್ಟರು ಗುಡಿಯಿದ್ದ ಜಾಗವನ್ನು ಜವಳಿ ಕಾರ್ಖಾನೆಗೆ ಮಾರಿದ್ದಾಗಿಯೂ, ಅವರ ಕೆಲಸಗಾರರು ೨ ದಿಂದ ಹಿಂದಷ್ಟೇ ಗುಡಿಯನ್ನು ಕೆಡವಿ ಸಪಾಟು ಮಾಡಿ ಬೇಲಿ ಹಾಕಿ ಹೋಗಿರುವೂದಾಗಿಯೂ ತಿಳಿಸಿದರು.

ಸುದ್ದಿ ತಿಳಿದು ದುಗ್ಗಿ ಅತೀವ ಆಕ್ರೋಶದಿಂದ ಶೆಟ್ಟರ ಮನೆ ಕಡೆ ಹೆಜ್ಜೆ ಹಾಕಿದಳು. ತನ್ನ ಅನುಮತಿಯಿಲ್ಲದೆ ಗುಡಿ ಕೆಡವುವ ಅಧಿಕಾರ ಈತನಿಗೆ ನೀಡಿದ್ಯಾರೆಂದು ವಿಚಾರಿಸುವ ಸಲುವಾಗಿ ಶೆಟ್ಟರ ಮನೆ ಬಾಗಿಲ ಬಳಿ ಬಂದು ನಿಂತವಳಿಗೆ ಕೇಳಿದ್ದು ಒಳಗಿನಿಂದ ಸುಗುಣ ಕಿಲ ಕಿಲನೆ ನಗುವ ಶಬ್ದ. ಏನಾಗುತ್ತಿದೆ ಎಂಬ ಅರಿವಾಗದೆ ದುಗ್ಗಿ, ಹೋಗಿ ಅಲ್ಲೇ ಹಟ್ಟಿಯ ಪಕ್ಕದಲ್ಲಿ ಅವಿತು ಕುಳಿತಳು. ಸ್ವಲ್ಪವೇ ಸಮಯದಲ್ಲಿ ಶೆಟ್ಟರ ಶಯನಾಗೃಹದಿಂದ, ಸುಗುಣ ನಾಚಿ ನಗುತ್ತಾ, ಸೀರೆ ಸೆರಗು ಸರಿಪಡಿಸಿಕೊಳ್ಳುತ್ತಾ ಅಡ್ಡಡ್ಡವಾಗಿ ಓಡಿ ಹೊರಬಂದಳು. ಅಲ್ಲೇ ಕಣ್ಣು ಕತ್ತಲೆ ಬಂದಂತಾಗಿ ದುಗ್ಗಿ ಹಟ್ಟಿಯಲ್ಲಿದ್ದ ದನ ಕರುಗಳ ಸಗಣಿಯ ಮಧ್ಯ ಕುಸಿದು ಬಿದ್ದಳು.

(ಮುಕ್ತಾಯ)

3 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)