ರಾವಣಾಯಣ : ಭಾಗ ೪ – ಮಿಥ್ಯ ದಹನ

06-05-fire-artರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ ನಿಂತಿರುವ ಯಕ್ಷಗಾನದ ರಾವಣ ವೇಷ ಧರಿಸಿರುವ ವ್ಯಕ್ತಿಯ ಆಕೃತಿ, ಆ ವ್ಯಕ್ತಿಯ ಹಣೆಯಲ್ಲಿ ಹೆಪ್ಪುಗಟ್ಟಿದ ರಕ್ತ ಹಾಗು ಕನ್ನಡಿಯ ಪ್ರತಿಫಲನದಲ್ಲಿ ತನಗೆ ಪ್ರಜ್ಞೆ ಬರುವುದನ್ನೇ ನಿರೀಕ್ಷಿಸುತ್ತಿರುವಂತೆ ದಿಟ್ಟಿಸುತ್ತಿರುವ ಆ ವ್ಯಕ್ತಿಯ ಕಣ್ಣುಗಳು.

ಪ್ರಜ್ಞೆಗೆ ಮರಳಿದ್ದನ್ನು ನೋಡಿ ನಿಧಾನಕ್ಕೆ ಹೆಜ್ಜೆಯಿಡುತ್ತ ಅವಳನ್ನು ಸಮೀಪಿಸಿದ ಆಕೃತಿಯನ್ನು ನೋಡಿ ಸಹಾಯಕ್ಕಾಗಿ ಕೂಗಲು ಕೂಡ ಸ್ವರ ಹೊರಡದಷ್ಟು ಭಯದಿಂದ ತತ್ತರಿಸಿರುವ ಅವನಿ ಮತ್ತೆ ಕಣ್ಣು ಮುಚ್ಚಿಕೊಳ್ಳುತ್ತಾಳೆ. ರಾವಣ ಆಕೃತಿ ತನ್ನ ಬಳಿಯೇ ನಿಂತಿರುವುದು ಆಕೆಯ ಗಮನಕ್ಕೆ ಬರುತ್ತದೆ. ಆಗಲೇ ಪರಿಚಿತ ಸ್ವರ ಆಕೆಗೆ ಕೇಳುತ್ತದೆ. “ಮಗಳೇ ಕಣ್ಣು ತೆರೆ. ಭಯ ಪಡಬೇಡ. ನಾನು ನಿನ್ನ ತಂದೆಯೇ. ಬೇರಾರು ಅಲ್ಲ.” ಕ್ಷಣಮಾತ್ರದಲ್ಲಿ ಅವಾಕ್ಕಾಗಿ ಆಕೆ ಕಣ್ಣನ್ನು ತೆರೆಯುತ್ತಾಳೆ. ಅನುಮಾನವೇ ಇಲ್ಲ ಅದು ಆಕೆಯ ತಂದೆ ಶಂಕರ ಹೆಗ್ದೆಯವರದ್ದೇ ಧ್ವನಿ. ಆದರೆ ಯಾರ ಮುಖ ಇದು? ಹಣೆಯಲ್ಲಿ ಹೆಪ್ಪುಗಟ್ಟಿದ ರಕ್ತ. ರಕ್ತದೊಂದಿಗೆ ಬೆರೆತು ಇಳಿದಿರುವ ಮುಖಕ್ಕೆ ಹಚ್ಚಿರುವ ವೇಷದ ಬಣ್ಣ. ಅಲ್ಲಲ್ಲಿ ಹರಿದಿರುವ ಯಕ್ಷಗಾನದ ರಾವಣ ವೇಷ. ರಾವಣ ಆಕೃತಿ ಮಾತು ಮುಂದುವರೆಸುತ್ತದೆ. “ಜನ ಕಥೆ ಕಟ್ಟುತ್ತಾರೆ. ನಿನ್ನ ಸೌಂದರ್ಯದ ಮೋಹಕ್ಕೆ ಮರುಳಾದ ನಾನು, ನೀನು ರಾಮನ ಜೊತೆ ವನವಾಸದಲ್ಲಿದ್ದಾಗ ಅಪಹರಿಸಿಕೊಂಡು ಲಂಕೆಗೆ ಕೊಂಡೊಯ್ದೆನೆಂದು. ನಿನ್ನನ್ನು ಅಪಹರಿಸಿದ್ದದ್ದು ನಿಜ. ಆದರೆ ಅದಕ್ಕೆ ಕಾರಣ ಸೌಂದರ್ಯದ ಮೋಹವಲ್ಲ. ಅಕ್ಕರೆಯ ಮೋಹ ಮಗಳೇ. ರಾಮನಂಥ ಸ್ವಾರ್ಥಿಯ ಜೊತೆ ನೀನೆಂದೂ ಸುಖವಾಗಿ ಬಾಳಲು ಸಾಧ್ಯವಿಲ್ಲ. ಆತನಿಗೆ ಬೇಕಾಗಿರುವುದು ಕೀರ್ತಿ, ಸಾಮ್ರಾಜ್ಯ ಅಷ್ಟೇ. ಯಾವನೋ ತಲೆ ಕೆಟ್ಟ ಆಸ್ಥಾನ ಜ್ಯೋತಿಷಿಯ ಮಾತು ಕೇಳಿ, ನನಗೇ ಅರಿವಿಲ್ಲದಂತೆ ನನ್ನವರೇ ನಿನ್ನನ್ನು ಎಳಸು ಮಗುವಿರುವಾಗಲೇ ನನ್ನಿಂದ ದೂರ ಮಾಡಿದರು. ಇಲ್ಲದೇ ಹೋದಲ್ಲಿ ಜನಕನಿಗೆ ನೀನು ಭೂಮಿಯಲ್ಲಿ ದೊರೆಯಲು ಸಾಧ್ಯವೇ? ಭೂಮಿಯಲ್ಲಿ ಹುಟ್ಟುವುದು ಮರವಷ್ಟೇ ಹೊರತು ಮನುಷ್ಯರಲ್ಲ. ಮೇಲ್ವರ್ಗದ ಜನ, ಸಾಮಾನ್ಯ ಜನರನ್ನು ಮೂರ್ಖರನ್ನಾಗಿಸುವುದು ಹಿಂದಿನಿಂದಲೂ ನೆಡೆದು ಬಂದ ಸಂಪ್ರದಾಯ. ಇತಿಹಾಸವನ್ನು ಪುರಾಣವನ್ನಾಗಿಯೂ, ಪುರಾಣವನ್ನು ಇತಿಹಾಸವನ್ನಾಗಿಯೂ ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸುವ ಕಲೆ ಅವರಿಗೆ ಕರಗತವಾಗಿದೆ. ಹನುಮಂತ ಒಂದೇ ಜಿಗಿತಕ್ಕೆ ಭರತ ಖಂಡದಿಂದ ಲಂಕೆಗೆ ಹಾರುವುದು ಪುರಾಣ ಕಥೆಯಾಗುತ್ತದೆ. ವಾನರ ಸೈನ್ಯ ಭಾರತದಿಂದ ಲಂಕೆಗೆ ಕಲ್ಲು ಸೇತುವೆ ನಿರ್ಮಿಸಿರುವುದರ ಪುರಾವೆ ಸಿಕ್ಕು ಅದು ಇತಿಹಾಸವಾಗುತ್ತದೆ. ಮರೆಯಲ್ಲಿ ನಿಂತು ಬಾಣದಿಂದ ವಾಲಿಯನ್ನು ಹೊಡೆದುರುಳಿಸುವ ರಾಮನ ಅನೈತಿಕ ನೀತಿಯಾಗಲಿ, ಕಾಮಕ್ಕೆ ಬಲಿಯಾಗಿ ಒಲಿಸಲು ಬಂದ ಶೂರ್ಪನಖಿಯ ಮೂಗನ್ನು ಕತ್ತರಿಸುವ ಲಕ್ಷ್ಮಣನ ಕ್ರೌರ್ಯವಾಗಲೀ, ತಿಂದ ಅನ್ನಕ್ಕೆ ದ್ರೋಹ ಬಗೆದು ಪರ ಸೈನ್ಯದ ಜೊತೆ ಸೇರಿ ತನ್ನ ಅಣ್ಣನ ವಿರುದ್ಧವೇ ದುಷ್ಟ ತಂತ್ರ ಹೆಣೆಯುವ ವಿಭೀಷಣನ ನೀಚತನವಾಗಲಿ ನಿಮ್ಮ ರಾಮಾಯಣದಲ್ಲಿ ಬಿಂಬಿತವಾಗುವುದಿಲ್ಲ. ಅಲ್ಲಿ ತೋರುವುದು ಬರಿ ರಾವಣನ ಹತ್ತು ಕಪ್ಪು ಮುಖಗಳು.”  ಇನ್ನೇನೋ ಮಾತು ಮುಂದುವರೆಸಲೆಂದು ಬಾಯಿ ತೆರೆದ ರಾವಣ ವೇಷಧಾರಿ ಮನುಷ್ಯ ಅಲ್ಲೇ ಕಣ್ಣು ಕತ್ತಲು ಬಂದಂತಾಗಿ ಮೂರ್ಛೆ ತಪ್ಪಿ ನೆಲಕ್ಕೆ ಕುಸಿಯುತ್ತಾನೆ.

tumblr_m2kj31xGKk1qhttpto4_1280ಗಾಢ ನಿದ್ರೆಯಿಂದ ಎಚ್ಚರವಾದಂತೆ ಎದ್ದ ಶ್ರೀರಾಮನು ಚೇತರಿಸಿಕೊಂಡು ಕುಳಿತುಕೊಳ್ಳುವಷ್ಟರಲ್ಲಿ ತನ್ನದೇ ಮನೆಯ ಚಾವಡಿಯ ತುಂಬೆಲ್ಲಾ ತನ್ನನ್ನೇ ದಿಟ್ಟಿಸುತ್ತಿರುವ ಕಣ್ಣುಗಳು ಗೋಚರಿಸುತ್ತವೆ. ಬೃಹದಾಕಾರದ ಕನ್ನಡಿಯ ಮುಂದೆ ಶ್ರೀಧರ ಹೆಗ್ಡೆ ನಿಂತಿದ್ದಾನೆ. ಅದರಿಂದ ಪ್ರತಿಫಲಿಸುತ್ತಿರುವ ಆತನ ಮುಖದಲ್ಲಿ ತಣ್ಣಗಿನ ದ್ವೇಷ ಉರಿಯುತ್ತಿದೆ. ಪಕ್ಕದಲ್ಲೇ ಪೋಲಿಸ್ ಅಧಿಕಾರಿ ಹಾಗು ಪೇದೆ ನಿಂತಿದ್ದಾರೆ. ಅವರ ಹಿಂದೆ ಪರಿಚಯದ, ಗುರುತವಿಲ್ಲದ ಹಲವಾರು ಮುಖಗಳು ಒಂದಾಗಿ ಮೌನವಾಗಿ ನಿಂತಿವೆ. ಪೋಲಿಸ್ ಅಧಿಕಾರಿ ಮೌನ ಮುರಿಯುತ್ತಾರೆ, “ಎದ್ದೇಳಿ ಶ್ರೀರಾಮ ಸೋಮಯಾಜಿಗಳೇ, ಬೇಗನೇ ಬಟ್ಟೆ ಬದಲಾಯಿಸಿಕೊಳ್ಳಿ. ಠಾಣೆಗೆ ಹೊರಡಲು ಸಿದ್ಧವಾಗಿ. ಶ್ರೀಧರ ಹೆಗಡೆಯವರು ನಿಮ್ಮ ವಿರುದ್ಧ ಅವರ ತಂಗಿಯ ಅಪಹರಣದ ದೂರು ದಾಖಲಿಸಿದ್ದಾರೆ. ಅದು ನೀವೇ ಮಾಡಿರುವುದೆಂದು ಖಚಿತ ಪಡಿಸುವ ಸಾಕಷ್ಟು ಪುರಾವೆಗಳು ಕೂಡ ನಮ್ಮಲ್ಲಿವೆ. ನಿಮ್ಮ ತಂದೆಯ ಮೇಲಿನ ಅಭಿಮಾನದ ಕಾರಣದಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಅಷ್ಟೇ.ಇನ್ನು ಸಮಯ ವ್ಯರ್ಥ ಮಾಡುವುದು ಸರಿಯಲ್ಲ ನಡೆಯಿರಿ.”

ಕ್ಷಣದಲ್ಲಿ ಎಲ್ಲ ಅರ್ಥವಾದವನಂತೆ ಶ್ರೀರಾಮ ಎದ್ದು ನಿಂತು ಬಟ್ಟೆ ಬದಲಾಯಿಸಲು ಎಂಬಂತೆ ಸನ್ನೆ ಮಾಡಿ ಮನೆಯ ಒಳ ಕೋಣೆಯೊಳಗೆ ನಡೆಯುತ್ತಾನೆ. ಇದಾಗಿ ಮರುಕ್ಷಣದಲ್ಲೇ ಏನೋ ಹೊಳೆದಂತಾಗಿ ಶ್ರೀಧರ ಹೆಗ್ಡೆ ಕೂಡ ಅದೇ ಕೋಣೆಯ ಬಾಗಿಲು ದೂಡಲು, ಕೋಣೆಗೆ ಇನ್ನೊಂದು ಬಾಗಿಲು ಇದ್ದು, ಅದು ತೆರೆದಿರುವುದು ಹಾಗು ಅದೇ ಬಾಗಿಲಿನ ನೇರಕ್ಕೆ ದೂರದಲ್ಲಿ ಶ್ರೀರಾಮನು ಸೀಮೆ ಎಣ್ಣೆಯ ಡಬ್ಬಿಯೊಂದಿಗೆ ಓಡುತ್ತಿರುವುದು ಮುಸ್ಸಂಜೆಯ ಮಬ್ಬು ಬೆಳಕಿನಲ್ಲಿ ಗೋಚರವಾಗುತ್ತದೆ. ನಡೆಯುತ್ತಿರುವ ಸನ್ನಿವೇಶವನ್ನು ಕೂಡಲೇ ಅರ್ಥ ಮಾಡಿಕೊಂಡ ಶ್ರೀಧರ ಹೆಗ್ಡೆ, ಪೋಲಿಸ್ ಆಧಿಕಾರಿ ಹಾಗು ಪೇದೆ ಶ್ರೀರಾಮನ ಬೆನ್ನಟ್ಟುತ್ತಾರೆ. ನೆರೆದಿರುವ ಜನತೆ  ಕೂಡ ನಡೆಯಲಿರುವ ನಾಟಕವನ್ನು ನೋಡಲು ಇವರನ್ನು ಹಿಂಬಾಲಿಸುತ್ತದೆ.

ಶಂಕರ ಹೆಗ್ಡೆಯ ಸಮಾಧಿಯ ಹೊಲದ ತನಕ ಶ್ರೀರಾಮನನ್ನು ಹಿಂಬಾಲಿಸಿದವರಿಗೆ ಸೂರ್ಯನ ಬೆಳಕು ಮಬ್ಬಾಗಿ, ಕತ್ತಲೆಯಲ್ಲಿ ಶ್ರೀರಾಮನನ್ನು ಪತ್ತೆ ಮಾಡುವುದು ಅಸಾಧ್ಯವಾಗಿ ಬಿಡುತ್ತದೆ. ನೆರೆದ ಜನರ ಮಧ್ಯೆ ಟಾರ್ಚ್ ಗಾಗಿ ಪೋಲಿಸ್ ಪೇದೆ ತಡಕಾಡುತ್ತಾನೆ. ಪೇದೆಗೆ ಟಾರ್ಚ್ ಸಿಗುವುದಕ್ಕೂ ಹಾಗು ಸೀಮೆ ಎಣ್ಣೆಯ ಘಾಟು ಮೂಗಿಗೆ ಹೊಡೆಯುವುದಕ್ಕೂ ಸರಿ ಹೋಗುತ್ತದೆ. ಟಾರ್ಚ್ ಉರಿಸಿದವರಿಗೆ ತೋರುವುದು, ಸೀಮೆ ಎಣ್ಣೆಯಿಂದ ತೋಯ್ದು ಹೋಗಿರುವ, ಶಂಕರ ಹೆಗ್ಡೆಯ ಸಮಾಧಿಯ ಮೇಲೆ ನಿಂತಿರುವ ರಾವಣ ವೇಷಧಾರಿ ಶ್ರೀರಾಮ. ತಡಮಾಡದೆ ಪೇದೆ ಆತನನ್ನು ಹಿಡಿಯಲು ಮುನ್ನುಗ್ಗುತ್ತಿದ್ದಂತೆ, ಶ್ರೀರಾಮ ಅಬ್ಬರಿಸುತ್ತಾನೆ, “ನಿಂತಲ್ಲೇ ನಿಂತು ಬಿಡಿ. ಮುಂದುವರೆದಲ್ಲಿ ನನ್ನ ಕೈಯಲ್ಲಿರುವ ಬೆಂಕಿಕಡ್ಡಿ ಹೊತ್ತಿಕೊಳ್ಳುತ್ತದೆ.” ಅಷ್ಟರಲ್ಲಿ ಸುದ್ದಿ ಹೇಗೋ ಊರೆಲ್ಲ ಹಬ್ಬಿ, ಉತ್ಸವಕ್ಕೆಂದು ದೇವಸ್ಥಾನದ ಹತ್ತಿರ ನೆರೆದಿದ್ದ ಮಂದಿಯೆಲ್ಲ ಹೊಳೆಬದಿಯ ಸಮಾಧಿ ಇರುವ ಗದ್ದೆಯ ಬದಿ ದೌಡಾಯಿಸಿ ಗದ್ದಲ ಗೊಂದಲದ ವಾತವರಣ ಅಲ್ಲಿ ಸೃಷ್ಟಿಯಾಗುತ್ತದೆ.

2-elements-fire-original-acrylic-18-x-24-inches-by-laara-williamsen-april-2013ಶ್ರೀರಾಮ ಎಲ್ಲರನ್ನ ಒಂದು ಬಾರಿ ದಿಟ್ಟಿಸಿ ವಿಕಾರವಾಗಿ ನಕ್ಕು ಮುಂದುವರೆಸುತ್ತಾನೆ. ಧ್ವನಿ ಮಾತ್ರ ಅದೇ ಶಂಕರ ಹೆಗ್ದೆಯದ್ದು. “ನೆರೆದಿರುವ ಎಲ್ಲಾ ಶ್ರೀರಾಮಚಂದ್ರ ದೇವರ ಭಕ್ತರಿಗೂ ನನ್ನ ದೊಡ್ಡ ನಮಸ್ಕಾರಗಳು. ರಾಮ ನಿಮಗೆಲ್ಲ ಪೂಜಾರ್ಹ ದೇವರು. ಆದರೆ ನೀವೆಲ್ಲಾ ಮರೆತಿರುವ ಒಂದೇ ಒಂದು ಅಂಶವೆಂದರೆ ಆತನನ್ನು ದೇವರ ಸ್ಥಾನಕ್ಕೆ ಏರಿಸಿದವನು ನಾನು, ರಾವಣ. ನಾನಿಲ್ಲದಿದ್ದಲ್ಲಿ ನಿಮ್ಮ ರಾಮಾಯಣವಿಲ್ಲ. ರಾಮನೆಂಬ ದೇವರಿಲ್ಲ. ದೈವತ್ವ ಎದ್ದು ತೋರುವುದು ರಾಕ್ಷಸೀ ಪ್ರವ್ರತ್ತಿಯ ಮುಂದಷ್ಟೇ. ಯಾವತ್ತು ಎಲ್ಲರೂ ದೇವರಾಗುತ್ತಾರೋ ಅಂದು ದೇವರೆಂಬ ವ್ಯಕ್ತಿಗೆ ಅಸ್ತಿತ್ವವಿಲ್ಲ. ಆದರೆ ನಿಮಗೆಲ್ಲಾ ದೇವರಾಗಲು ಎಂದಿಗೂ ಸಾಧ್ಯವಿಲ್ಲ. ಅದಕ್ಕೇ ಇಲ್ಲಿ ರಾಮನಂಥ ದೇವರು ಮೆರೆಯುತ್ತಾನೆ. ಪ್ರತಿ ದಶರೆಯ ರಾತ್ರಿಯಂದು ನೀವು ರಾವಣನನ್ನು ದಹಿಸುತ್ತೀರಿ. ಆದರೆ ರಾವಣ ಇರುವುದು ನೀವು ಭಸ್ಮ ಮಾಡುವ ಗೊಂಬೆಯಲ್ಲಲ್ಲ . ನಿಮ್ಮ ಮನಸ್ಸಿನಲ್ಲಿ. ಮುಂದಿನ ದಶರೆಗೆ ಮತ್ತೆ ನಿಮ್ಮೊಳಗಿನ ರಾವಣ ಹೊಸ ಗೊಂಬೆಯ ರೂಪ ತಾಳುತ್ತಾನೆ. ಮತ್ತೆ ಆತನನ್ನು ಸುಡುವ ವ್ಯರ್ಥ ಪ್ರಯತ್ನ ಮಾಡುತ್ತಿರಿ. ಕಾಮ, ಕ್ರೋಧ, ಮದ, ಮತ್ಸರ, ಲೋಭ, ನೀಚತನ, ಕ್ರೌರ್ಯ, ಕೃತಘ್ನತೆ ಇತ್ಯಾದಿ ಹಲವು ಮುಖಗಳಿಗೆ ರಾಮನ ಮುಖವಾಡ ಹಾಕಿ ಸುತ್ತಲಿನ ಪ್ರಪಂಚವನ್ನು ಹಾಗೂ ನಿಮ್ಮನ್ನು ನೀವೇ ವಂಚಿಸುತ್ತೀರಿ. ಎಲ್ಲ ನಾಣ್ಯಗಳಿಗೆ ಎರಡು ಮುಖಗಳಿರುವಂತೆ, ನನಗೆ, ರಾಮನಿಗೆ ಹಾಗು ನಿಮಗೆಲ್ಲರಿಗೂ ಕಪ್ಪು ಹಾಗೂ ಬಿಳುಪಿನ ಎರಡು ಛಾಯೆಯ, ಎರಡು ವ್ಯಕ್ತಿತ್ವದ ಮುಖಗಳಿವೆ. ರಾಮನು ನಿಮ್ಮ ಮನಸ್ಸಿನಲ್ಲಿ ದೇವರಾಗಿ ಇರುವ ತನಕ ನಿಮ್ಮಲ್ಲಿರುವ ರಾವಣನಿಗೆ ಮರಣವಿಲ್ಲ. ರಾಮನಂತೆ ರಾವಣನು ಕೂಡ ನಮ್ಮ ನಿಮ್ಮೊಳಗೆ ಚಿರಾಯು.” ಶ್ರೀರಾಮ ಇಷ್ಟು ಹೇಳಿ ಮುಗಿಸುತ್ತಿರಲು, ಶ್ರೀಧರ ಹೆಗ್ಡೆ ಆತನನ್ನು ಹಿಡಿಯಲು ಮುನ್ನುಗ್ಗುತ್ತಾನೆ. ಶ್ರೀರಾಮನ ಕೈಲಿದ್ದ ಬೆಂಕಿ ಕಡ್ಡಿಯು, ಮೊದಲು ಕಿಡಿಯಾಗಿ, ನಂತರ ಜ್ವಾಲೆಯಾಗಿ ಆತನ ಮೈ ತುಂಬಾ ಧಗಧಗಿಸುತ್ತದೆ. ಅಲ್ಲಿಯ ತನಕ ಮಂತ್ರ ಮುಗ್ಧರಾಗಿ ಶ್ರೀರಾಮನ ಮಾತನ್ನು ಕೇಳಿಸಿ ಕೊಳ್ಳುತ್ತಿದ್ದ ಜನತೆ ಒಂದೇ ಸಮನೆ ಪ್ರಜ್ಞೆಗೆ ಮರಳಿದಂತವರಾಗಿ, ಬೆಂಕಿ ಆರಿಸಲು ನೀರಿಗಾಗಿ ತಡಕಾಡುತ್ತಾರೆ. ಯಾರೋ ಹೊಳೆಯಿಂದ ಕೊಡಪಾನದಲ್ಲಿ ನೀರು ತರುವಷ್ಟರಲ್ಲಿ, ಪೂರ್ತಿ ಕರಕಲಾದ ಶ್ರೀರಾಮನ ಶರೀರ ಶಂಕರ ಹೆಗ್ಡೆಯ ಸಮಾಧಿಯಲ್ಲಿ ಒಂದಾಗಿರುತ್ತದೆ.

 

(———- ಮುಕ್ತಾಯ —————)

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)