ಮೃಗಶಿರ : ಸಂಕ್ಷಿಪ್ತತೆ

ಅಂತಿಮ ಅಧ್ಯಾಯ:

ಅವನ ಹೆಸರು ಕೂಡ ನೆನಪಾಗುತ್ತಿಲ್ಲ. ಅಚ್ಯುತ ಇರಬೇಕು. ನಮ್ಮೂರು ಬೆಳ್ಯಾಡಿಯ ಗೋಪಿ ಭಟ್ಟರ ಮಗ. ಚಿಕ್ಕಂದಿನಲ್ಲಿ ಒಮ್ಮೆ ಯಾರದ್ದೋ ತಿಥಿಯಲ್ಲಿ ಜೊತೆಗೆ ಆಟವಾಡಿ ಅಂದಿನ ದಿನಕ್ಕೇ ಮರೆತು ಹೋಗಿದ್ದ ಗೋವಿಂದನ ತಮ್ಮ, ಅಚ್ಯುತ. ಅಂದು ಬೆಳಗ್ಗೆ ಆತ ಭಯಾನಕವಾಗಿ ಮರಣ ಹೊಂದಿದ್ದ. ಬೆಳಗ್ಗೆ ಬಾವಿಯ ನೀರು ಸೇದಲು ಹೋದ ಗೋವಿಂದನ ಹೆಂಡತಿಗೆ ಬಾವಿಯಲ್ಲಿ ತೇಲುತ್ತಿರುವ ಶವ ತೋರಿತ್ತು. ಸ್ವತಃ ನಾನೇ ಹೋಗಿ ನೋಡಿಲ್ಲವಾದರೂ, ಅಪ್ಪ ಆವತ್ತು ಮಧ್ಯಾಹ್ನ ಬಂದು ಹೇಳಿದ ಕಥೆ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಅಂದು ಬಾವಿಯಲ್ಲಿ ಸಿಕ್ಕಿದ ಶವ ಎಷ್ಟು ಭಯಾನಕವಾಗಿತ್ತೆಂದರೆ ಅದು ಅಚ್ಯುತ ಎಂದು ಗುರುತಿಸಲು ಶವದ ಸೊಂಟಕ್ಕೆ ಸುತ್ತಿದ್ದ ಏಕೈಕ ಶಾಲಿನಿಂದ ಮಾತ್ರ ಸಾಧ್ಯವಾಗಿದ್ದಂತೆ. ಆ ಶಾಲಾದರೂ ರೇಷ್ಮೆಯದ್ದು. ಅಚ್ಯುತ ಬೆಂಗಳೂರಿನಲ್ಲಿದ್ದಾಗ ತನ್ನನ್ನು ಸನ್ಮಾನ ಮಾಡಿ ಒಂದು ಸಂಘದವರು ಹೊದಿಸಿದ್ದೆಂದು ಆತನೇ ಹೇಳಿಕೊಂಡ ಶಾಲು. ಶಾಲಿನ ಹೊರತಾಗಿ ಆತನ ಮೈಯಲ್ಲಿ ಯಾವುದೇ ಬಟ್ಟೆಯೂ ಇರಲಿಲ್ಲವಂತೆ. ಎಲ್ಲಕ್ಕಿಂತ ವಿಚಿತ್ರವಾಗಿದ್ದ ಸಂಗತಿಯೆಂದರೆ, ಶವದ ಮುಖ ಒಂದು ಭಯಾನಕ ಮೃಗದ ರೀತಿಯಲ್ಲಿ ವಿಚಿತ್ರವಾಗಿ ಬದಲಾಗಿದ್ದದ್ದು. ಘಟನೆ ನಡೆದ ಎರಡು ದಿನ ಊರಿನ ತುಂಬಾ ಇದರದ್ದೇ ಗುಲ್ಲು. ತಲೆಗೊಂದು ಎಂಬಂತೆ ಗಾಳಿ ಮಾತುಗಳು. ಇಡೀ ಉರಿನ ತುಂಬಾ ವಿಷಾದಕ್ಕಿಂತ ಹೆಚ್ಚು ತುಂಬಿಕೊಂಡದ್ದು ಕುತೂಹಲ. ಅಚ್ಯುತನ ಸಾವಿನ ಕಾರಣದ ನಿಗೂಢತೆ, ಎಲ್ಲರನ್ನೂ ೨ ದಿನ ತಮ್ಮ ಸ್ವಂತ ಜೀವನದ ತೂತುಗಳನ್ನು ಮುಚ್ಚಿಸುವಂತೆ ಮಾಡಿತ್ತು. ಎಲ್ಲರೂ ಮರುಕ ವ್ಯಕ್ತ ಪಡಿಸುವಂತೆ ಮಾತು ಶುರು ಹಚ್ಚಿ ತಮಗೆ ಎಲ್ಲೋ ಕೇಳಿ ಬಂದ ಸುದ್ದಿಯ ಬಗ್ಗೆ ಇನ್ನೂ ಸ್ವಲ್ಪ ಮಸಾಲೆ ಅರೆದು ರುಚಿಕಟ್ಟಾಗಿ ಕಥೆ ಹೆಣೆಯುವವರೇ.

ಹಾಗೆ ನೋಡ ಹೋದರೆ ಅಚ್ಯುತ ಬದುಕಿದ ರೀತಿ ಕೂಡ ಅವನ ಸಾವಿನಷ್ಟೇ ವಿಚಿತ್ರ ಹಾಗೇ ನಿಗೂಢ. ೭ ನೇ ತರಗತಿಯವರೆಗೆ ನನ್ನ ತರಗತಿಯಲ್ಲೇ ಇದ್ದವ. ಮಾತು ಬಹಳ ಕಡಿಮೆ. ಯಾವ ಮಕ್ಕಳೊಂದಿಗೂ ಅಷ್ಟೊಂದು ಬೆರೆಯುತ್ತಿದ್ದವನಲ್ಲ. ಯಾವತ್ತೂ ತಾನಾಯಿತು ತನ್ನ ಲೋಕವಾಯಿತು ಎಂಬಂತೆ ಅತಿ ಸಾಧುವಾಗಿ ಇರುತ್ತಿದ್ದವ, ಒಮ್ಮೆ ಮಾತ್ರ ಎಲ್ಲರಿಗೂ ಅಚ್ಚರಿಯಾಗುವಂತೆ ವರ್ತಿಸಿ ಬಿಟ್ಟಿದ್ದ. ಎಂದಿನಂತೆ ತರಗತಿಯ ಶಿಕ್ಷಕಿಯಾದ ಸುಲಕ್ಷಣ ಟೀಚರ್ ಏನೋ ಮನೆಕೆಲಸ ಕೊಟ್ಟಿದ್ದರು. ಮೊದಲೇ ಮುಂಗೋಪಿಯಾಗಿದ್ದ ಸುಲಕ್ಷಣ ಟೀಚರಿಗೆ ಹೆದರಿ ಎಲ್ಲರೂ ಮನೆಗೆಲಸವನ್ನು ಅಚ್ಚುಕಟ್ಟಾಗಿ ತಂದು ಒಪ್ಪಿಸಿದ್ದೆವು. ಅವತ್ತು ಯಾಕೋ ಅಚ್ಯುತ ಮಾತ್ರ ಸರಿಯಾಗಿ ಪುಸ್ತಕದಲ್ಲಿ ಬರೆದಿಲ್ಲವೆನಿಸುತ್ತದೆ. ಅದನ್ನ ನೋಡಿದವರೇ ಟೀಚರ್ ಆತನ ಕಪಾಳಕ್ಕೊಂದು ಸರಿಯಾಗಿ ಬಿಗಿದಿದ್ದರು. ಏನಾಯಿತೋ ಗೊತ್ತಿಲ್ಲ ತಕ್ಷಣ ಅಚ್ಯುತನ ಕಣ್ಣು, ಪೆಟ್ಟು ತಿಂದ ಕೆನ್ನೆಗಿಂತ ಜಾಸ್ತಿ ಕೆಂಪಾಗಿ, ಅಲ್ಲೇ ಮೇಜಿನ ಮೇಲೆ ಬಿದ್ದಿದ್ದ ತನ್ನ ಪುಸ್ತಕವನ್ನು ಶಿಕ್ಷಕಿಯ ತಲೆಯ ಮೇಲೆ ಜೋರಾಗಿ ಕುಕ್ಕಿ, ತಡಮಾಡದೆ ತರಗತಿಯಿಂದ ಓಡಿ ಹೋಗಿ ಬಿಟ್ಟ. ಅಂದೇ ಕೊನೆ, ಸುಲಕ್ಷಣ ಟೀಚರ್ ಆಗಲಿ ಅಚ್ಯುತನಾಗಲಿ ತರಗತಿಯಲ್ಲಿ ಕಾಣಿಸಿಕೊಂಡದ್ದು. ಅಚ್ಯುತನನ್ನು ಮುಖ್ಯೋಪಾಧ್ಯಾಯರು ಶಾಲೆಯಿಂದ ಹೊರಹಾಕಿ, ಇನ್ನು ಶಾಲೆಗೆ ಕಾಲಿಡುವಂತಿಲ್ಲವೆಂದು ತಾಕೀತು ಮಾಡಿದ್ದಾರೆ ಎಂದೂ, ಸುಲಕ್ಷಣ ಟೀಚರ್ ಗಂಡ ಬೇರೊಂದೂರಿಗೆ ವರ್ಗವಾಗಿರುವುದರಿಂದ ನಮ್ಮ ಶಾಲೆ ಬಿಟ್ಟರೆಂದು ಆಮೇಲೆ ಸುದ್ದಿ ಹಬ್ಬಿತು.
ಆನಂತರ ಕೂಡ ಆತ ಬೆಳ್ಯಾಡಿಯಲ್ಲಿ ಹೊರ ತೋರಿಕೊಂಡದ್ದು ಕಡಿಮೆಯೇ. ಎಂದಿಗೂ ನಮ್ಮೊಂದಿಗೆ ಆಟವಾಡಲು ಬಂದವನಲ್ಲ. ಊರಿನ ಯಾವ ಮಕ್ಕಳಿಗೂ ಆತನ ನೆನಪೇ ಇಲ್ಲವೇನೋ ಎಂಬಂತೆ ಆತ ಅಗೋಚರವಾಗಿದ್ದ. ಪದವಿಗೆ ಬೆಳ್ಯಾಡಿ ಬಿಟ್ಟು ಬೆಂಗಳೂರು ಸೇರಿಕೊಂಡ ಮೇಲಂತೂ ಆತ ನನ್ನ ವಿಚಾರಗಳಲ್ಲಿ ಹಾದುಹೋಗಿದ್ದೇ ಇಲ್ಲ. ಒಮ್ಮೆ ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುವಾಗ ಆಕೆ ಹೇಳಿದ್ದಳು, ಅಚ್ಯುತ ಕೂಡ ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ಬೆಳ್ಯಾಡಿ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದಾನಂತೆ ಎಂದು. ಯಾವುದೋ ವಿಚಾರದಲ್ಲಿ ಮುಳುಗಿ ಹೋಗಿದ್ದ ನಾನು ಅಮ್ಮನ ಮಾತನ್ನು ಅರ್ಧಂಬರ್ಧ ಕೇಳಿಸಿಕೊಂಡು ಹೌದಾ ಎಂದಷ್ಟೇ ಉತ್ತರಿಸಿ ಮರೆತು ಬಿಟ್ಟಿದ್ದೆ.

ಈಗ ರಜೆಯ ಮೇಲೆ ಬೆಳ್ಯಾಡಿಗೆ ಬಂದವನಿಗೆ ಅಚ್ಯುತನ ವಿಚಿತ್ರ ಸಾವು ಆತನ ಬಗ್ಗೆ ಅಳಿದುಳಿದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತ್ತು. ಅಂದು ಸಂಜೆ ಗೆಳೆಯರನ್ನು ಭೇಟಿ ಮಾಡಿದಾಗ ಅಚ್ಯುತನ ಬಗ್ಗೆ ಇನ್ನೂ ಕೆಲವು ಗೊತ್ತಿರದ ವಿಚಾರಗಳು ತಿಳಿದವು.
ಚಿಕ್ಕಂದಿನಲ್ಲೇ ಮನೆ ಬಿಟ್ಟು ಓಡಿ ಹೋಗಿದ್ದ ಅಚ್ಯುತ, ಮನೆಯವರ ಕೈಗೆ ಯಾವತ್ತೂ ಸಿಗಲಿಲ್ಲ. ಎಲ್ಲಿಯವರೆಗೆ ಎಂದರೆ ಗೋಪಿ ಭಟ್ಟರು ಹಾಸಿಗೆ ಹಿಡಿದು ಕಡೆಯುಸಿರು ಎಳೆದಾಗಲಾದರೂ ಅಪ್ಪನ ಪಿಂಡಕ್ಕೆ ನೀರು ಬಿಡಲು ಬಂದೇ ಬರುತ್ತಾನೆಂಬ ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದವ ಆತ. ಅಣ್ಣ ಗೋವಿಂದನ ಮದುವೆ ಕೂಡ ಅಚ್ಯುತನ ಅನುಪಸ್ಥಿತಿಯಲ್ಲಿ ನಡೆದೇ ಹೋಯಿತು. ಆದರೆ ಗೋವಿಂದನ ಮದುವೆಯಾದ ಸುಮಾರು ಒಂದೂವರೆ ವರ್ಷದ ನಂತರ ಅಚಾನಕ್ಕಾಗಿ ಅಚ್ಯುತ ಮನೆ ಮುಂದೆ ಪ್ರತ್ಯಕ್ಷನಾಗಿದ್ದ. ಸಣಕಲು ಕೃಶ ಶರೀರ, ಕಳೆಗುಂದಿ ಹಳ್ಳದಂತಾಗಿದ್ದ ಕಣ್ಣುಗಳು, ಸನ್ಯಾಸಿಯಂತೆ ಬಿಟ್ಟಿದ್ದ ಗಡ್ಡದಿಂದಾಗಿ ಮನೆಯವರಿಗೇ ಅಚ್ಯುತನ ಗುರುತು ಹಿಡಿಯಲು ಸಾಧ್ಯವಾಗಲಿಲ್ಲವಂತೆ. ಎಷ್ಟೋ ವರುಷಗಳ ಕಾಲ ಮನೆ, ಮನಸುಗಳಿಂದ ಮಾಸಿ ಹೋದ ಮುಖವನ್ನು, ಆರೋಗ್ಯಕರವಾಗಿ ಬಂದು ಪ್ರತ್ಯಕ್ಷವಾದರೂ ಕೂಡ ಗುರುತುಹಿಡಿಯುವುದು ಕಷ್ಟವಾಗುತ್ತಿತ್ತೇನೋ ಮನೆಯವರಿಗೆ ಬಹುಶಃ. ಅದಾಗಲೇ ಹಾಸಿಗೆ ಹಿಡಿದ ಅಮ್ಮನ ಚಾಕರಿ ಮಾಡುತ್ತಾ, ಹೊಸದಾಗಿ ಮದುವೆಯಾಗಿದ್ದ ಹೆಂಡತಿಯ ಸಿಡಿಮಿಡಿಯನ್ನು ಸಹಿಸುತ್ತಾ, ಹಟ್ಟಿಯಲ್ಲಿರುವ ಒಂದೆರಡು ಆಕಳುಗಳನ್ನೂ, ಒಂದಿಪ್ಪತ್ತು ತೆಂಗಿನ ಮರಗಳಿರುವ ಚಿಕ್ಕ ತೋಟವನ್ನೂ ನೋಡಿಕೊಂಡು, ಜೀವನದೊಂದಿಗೆ ಸೋಲುತ್ತಿರುವ ಹೋರಾಟವನ್ನು ಮಾಡುತ್ತಾ ಬದುಕುತ್ತಿದ್ದ ಗೋವಿಂದನಿಗೆ ಅಚ್ಯುತನ ಪುನರಾಗಮನ ಅಷ್ಟೇನೂ ಸಂತಸವಾಗಲಿ, ಬೇಸರವನ್ನಾಗಲಿ ತರಲಿಲ್ಲ. ಮನಸ್ಸಿನ ಆಳದಲ್ಲೆಲ್ಲೋ ಅಚ್ಯುತ ಮುಂದೆ ತನ್ನ ಕೆಲಸಗಳಲ್ಲಿ ನೆರವಾಗಬಹುದೆಂಬ ಸಣ್ಣ ಆಸೆಯೂ ಕೂಡ ಇತ್ತೇನೋ. ಆದರೆ ಎಣಿಕೆಗೆ ವಿರುದ್ಧವಾಗಿ, ಮರಳಿದ ಒಂದು ತಿಂಗಳಿನ ಒಳಗೆ ಗೋವಿಂದನಿಗೆ ಆತ ಇನ್ನೊಂದು ಹೊರೆಯಾಗಿಯೇ ಪರಿಣಮಿಸಿದನೇ ಹೊರತು ನೆರವಾಗಿಯಲ್ಲ. ಇಡೀ ದಿನ ಯಾರೊಂದಿಗೂ ಹೆಚ್ಚೇನೂ ಮಾತಾಡದೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡಿಕೊಂಡು ಹೆಚ್ಚಿನ ಸಮಯವನ್ನು ಮನೆಯ ಪಡಸಾಲೆಯಲ್ಲೊ, ಅಪರೂಪಕ್ಕೊಮ್ಮೆ ತೋಟದಲ್ಲಿ ಯಾವುದಾದರೂ ಮರದಡಿಯಲ್ಲಿ ಕೂತೋ ಕಳೆದುಬಿಡುತ್ತಿದ್ದ.

ಹೀಗೆ ಹೇಗೋ ದಿನಗಳು ಸಾಗುತ್ತಿರಬೇಕಾದರೆ ಅದೊಂದು ದಿನ ಅಚಾನಕ್ಕಾಗಿ, ವಿಚಿತ್ರವಾಗಿ ಅಚ್ಯುತ ಇನ್ನಿಲ್ಲವಾಗಿ ಹೋದ. ಸುಮಾರು ಎರಡು ವಾರಗಳ ಕಾಲ ಊರಿನ ತುಂಬಾ ಆತನ ಸಾವಿನ ಬಗ್ಗೆಯೇ ಚರ್ಚೆಗಳು ನಡೆದವು. ತಲೆಗೊಂದಂತೆ ಜನ ಮಾತನಾಡಿದರು.
“ಬಿಟ್ಟಿ ಊಟ ಮನೆಯಲ್ಲಿ ಸಿಕ್ಕಿಯೂ ಕೂಡ ಇವನಿಗೇನು ಬಂತು ದಾಡಿ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು?”
“ಯಾರಿಂದಲೋ ಸಾಲ ತೆಗೆದುಕೊಂಡಿದ್ದನಂತೆ ಬೆಂಗಳೂರಿನಲ್ಲಿ. ಇಲ್ಲಿ ಬಂದು ತಲೆ ತಪ್ಪಿಸಿಕೊಂಡಿದ್ದ. ಹುಡುಕಿಕೊಂಡು ಬಂದು, ಮುಗಿಸಿ, ಬಾವಿಗೆ ಎಸೆದಿದ್ದಾರೆ.”
“ಬೊಂಬಾಯಿಯಲ್ಲಿ ಯಾರೋ ಆತನನ್ನು ಒಮ್ಮೆ ನೋಡಿದ್ದರಂತೆ. ಬೆಳ್ಯಾಡಿಗೆ ಬಂದಾಗ ಅವನ ಮುಖ ಸೊರಗಿದ್ದು ನೋಡಿದರೆ ಗೊತ್ತಾಗುದಿಲ್ವೇ? ಕೆಟ್ಟ ಖಾಯಿಲೆ ಹಿಡಿದುಕೊಂಡೆ ಬಂದಿದ್ದ. ದಿನ ಹತ್ತಿರ ಬಂದಾಗ ಹೆದರಿ ಬಾವಿಗೆ ಹಾರಿದ್ದಾನೆ ಅಷ್ಟೇ.”
“ಯಾರಿಗೂ ಹೇಳ್ಬೇಡಿ, ಗೋವಿಂದನ ಹೆಂಡತಿ ಜೊತೆ ಅಚ್ಯುತನಿಗೆ ಸಂಬಂಧವಿತ್ತೆಂದು ಸುದ್ದಿ. ಹೇಗೂ ಗೋವಿಂದ ಹೊರಗೆ ಹೋದಾಗೆಲ್ಲ ಇವನು ಮನೆಯಲ್ಲೇ ಇರುತ್ತಿದ್ದನಲ್ಲ. ಗೋವಿಂದನಿಗೆ ಇವನ ಕಳ್ಳಾಟ ತಿಳಿದಿರಬೇಕು. ಯಾರಾದರೂ ಸಹಿಸಿಕೊಳ್ಳುತ್ತಾರೆಯೇ? ”
“ಆಸ್ತಿಯಲ್ಲಿ ಪಾಲು ಕೇಳಿದನಂತೆ, ಮೊದಲೇ ಕಷ್ಟದಲ್ಲಿ ದಿನ ಸಾಗಿಸುತ್ತಿರುವ ಗೋವಿಂದನಿಗೆ ಇವನು ದೊಡ್ಡ ತಲೆ ನೋವಾಗಿದ್ದನಿರಬೇಕು. ದಾರಿಯಿಂದ ಸರಿಸಿದ್ದಾನೆ ಅಷ್ಟೇ.”
ಮುಗಿಯದ ಕಲ್ಪನೆಗಳು ಬೆಳ್ಯಾಡಿಯ ಜನತೆಯದ್ದು. ಕ್ರೂರ,ಕೊಳಕು, ಮೃಗೀಯ ಕಲ್ಪನೆಗಳು. ಸತ್ತ ಅಚ್ಯುತನ ಮೃಗದಂತಿದ್ದ ಶಿರಕ್ಕಿಂತಲೂ ವಿಕಾರವಾದ ಕಲ್ಪನೆಗಳು.
ಇವೆಲ್ಲ ಘಟನೆಗಳು ನಡೆದ ೨ ವರ್ಷಗಳ ನಂತರ ಮೊನ್ನೆಯಷ್ಟೇ ಬೆಳ್ಯಾಡಿಯ ಮನೆಗೆ ಭೇಟಿ ಕೊಟ್ಟಿದ್ದೆ. ಗೋವಿಂದನ ಮನೆಯ ಬಾವಿಯ ಪಕ್ಕದಲ್ಲೇ ಸಾಗುವ ಕಾಲುಹಾದಿಯನ್ನು ಊರಿನ ಯಾರು ಕೂಡ ಬಳಸುತ್ತಿಲ್ಲ ಈಗಲೂ ಕೂಡ. ಅಚ್ಯುತನ ನೆನಪನ್ನು ಬೆಳ್ಯಾಡಿ ಮಾಸಲು ಬಿಟ್ಟಂತಿಲ್ಲ.

———————————————————————-

ಎರಡು ವಾರಗಳ ಹಿಂದೆ ಈ ಮಹಾನಗರದ ಆಫೀಸಿನಲ್ಲಿ ಹೀಗೆ ಒಂದು ಸಂಜೆ ಸಹೋದ್ಯೋಗಿಗಳ ಜೊತೆಯಲ್ಲಿ ಹರಟೆ ಹೊಡೆಯುತ್ತಿರಬೇಕಾದರೆ ಒಬ್ಬರ ಮೊಬೈಲಿನಲ್ಲಿ ಸಂದೇಶ ಬಂತು. ನಮ್ಮ ಆಫೀಸಿನ ಕಟ್ಟಡದ ಪಕ್ಕದಲ್ಲೇ ಇರುವ ಇನ್ನೊಂದು ಕಟ್ಟಡದ ೧೧ನೆ ಮಹಡಿಯಿಂದ ಯಾವುದೋ ಒಬ್ಬ ಯುವಕ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂದು.
ಹಠಾತ್ತನೆ ಬಂದ ವರದಿಗೆ ಎಲ್ಲರು ಬೆಚ್ಚಿಬಿದ್ದಿದ್ದಂತೂ ನಿಜ. ಆದರೆ ಯಾರೊಬ್ಬರೂ ಲಗುಬಗೆಯಿಂದ ಎದ್ದು ಹೋಗಿ ನೋಡಿ ಬರುವ ಎಂದು ಹೊರಡಲಿಲ್ಲ. ಒಂದಿಷ್ಟು “ಅಯ್ಯೋ!!”, “ಹೌದಾ?”, “ಛೆ” ಗಳ ಉದ್ಗಾರ ಹೊರಟವಷ್ಟೇ. ಆಮೇಲೆ ಶುರುವಾಯಿತು ವಿಶ್ಲೇಷಣೆಗಳ ಜೊತೆ ಜೊತೆಗೆ ತೀರ್ಪುಗಳ ಸರಮಾಲೆ.
“ಯಾಕಂತೆ ಹಾರಿದ್ದು ಅವ್ನು?”
“ಯಾರಿಗ್ಗೊತ್ತು? ಟಾಯ್ಲೆಟ್ ಕಿಟಕಿಯಿಂದ ಕೆಳಗೆ ಹಾರಿದ್ದಂತೆ. ಗೊತ್ತಿಲ್ಲದೇ ಆದ ಅನಾಹುತವಂತೂ ಅಲ್ಲ.”
“ಅಲ್ಲ ಹೀಗೆ ಸಾಯ್ಲಿಕ್ಕೆ ಇಲ್ಲಿ ಆಫೀಸಿಗೆ ಬಂದೆ ಸಾಯ್ಬೇಕಾ? ಎಲ್ಲರನ್ನ ಡಿಸ್ಟರ್ಬ್ ಮಾಡ್ಲಿಕ್ಕೆ”
“ಮ್ಯಾನೇಜರ್ ಜೊತೆ ಏನೋ ಮನಸ್ತಾಪವಾಗಿರ್ಬೇಕು”
“ಟ್ರೈನಿ ಅಂತೆ”
“ಹಾಗಾದ್ರೆ ನನ್ ಮಗಂದು ಲವ್ ಕೇಸ್ ಇರ್ತದೆ”
“ಇಷ್ಟ್ ವರ್ಷ ಸಾಕಿ ಬೆಳ್ಸಿದ ಅಪ್ಪ ಅಮ್ಮಂದಿರು ಕಣ್ಣು ಮುಂದೆ ಬರುದಿಲ್ಲ ಹೀಗೆಲ್ಲ ಮಾಡ್ವಾಗ”
“ಥು ಹೇಡಿ ನನ್ ಮಗ”
“ಬಿಡು ಮನೆಯವ್ರ ಬಗ್ಗೆ ಸ್ವಲ್ಪನು ಕಾಳಜಿ ಇಲ್ದೆ ಇರುವ ಇಂಥವ್ರು ಇರುದಕ್ಕಿಂತ ಸತ್ರೆನೇ ಒಳ್ಳೇದು”
“ಎಲ್ಲದು ಜನರಿಗೆ ಗೊತ್ತಾಗುವ ಹಾಗೆ ಮಾಡಬೇಕು ಈಗ ಅಷ್ಟೇ. ““ಹುನ್ ಕಣ್ರೀ ಮೊನ್ನೆ ನಮ್ಮನೆ ಬೀದಿಲಿ ಒಬ್ಬಳು ಹುಡುಗಿ ಮಧ್ಯ ರಾತ್ರಿ ಜೋರಾಗಿ ಯಾರಿಗೋ ಫೋನ್ ಅಲ್ಲಿ ಬೈತಾ ಇದ್ಲು. ಬಾಯ್ ಫ್ರೆಂಡ್ ಇರ್ಬೇಕು. ವೀಕೆಂಡ್ ಬಂದ್ರಂತೂ ಈ ಲವರ್ಸ್ ಕಾಟ ಭಾರಿ ಜಾಸ್ತಿ ಪಾ ನಮ್ಮನೆ ಹತ್ರ.”
“ಹಹಹ ನೀನ್ಯಾಕೆ ವೀಕೆಂಡ್ ಅಲ್ಲಿ ಮನೆಲ್ಲಿ ಇರ್ತೀಯ? ಬೋರಿಂಗ್ ಫೆಲೋ”

“ಈ ವೀಕೆಂಡ್ ಎಲ್ಲಾದ್ರೂ ಶಾರ್ಟ್ ಟ್ರಿಪ್ ಪ್ಲಾನ್ ಮಾಡೋಣ ಎಲ್ಲರು ಫ್ರೀ ಇದ್ರೆ?”
“ಮೀಟಿಂಗ್ ಟೈಮ್ ಆಯಿತು ನಡಿರೋ ”
ಹುಡುಗ ಸತ್ತು ಹೋದ ವಿಷಯ ನಮ್ಮ ಮಧ್ಯೆ ಸದ್ದಿಲ್ಲದೇ ಕೊನೆಯುಸಿರೆಳೆದಿತ್ತು.
ಸಂಜೆ ಹೊತ್ತಿಗೆ ಹುಡುಗ ಹಾರಿ ಸತ್ತು ಹೋದ ಜಾಗದ ಪಕ್ಕದಿಂದಲೇ ನಡೆದು ಹೋದೆ. ರಕ್ತದ ಕಲೆಗಳನ್ನು ನೀರು ಹಾಕಿ ಸ್ವಚ್ಛಗೊಳಿಸಲಾಗಿತ್ತು. ಇನ್ನೂ ಒದ್ದೆಯಿದ್ದ ಜಾಗದಲ್ಲಿ ಐದಾರು ಜನ ಹುಡುಗ ಹುಡುಗಿಯರು ಸಿಗರೇಟು ಸೇದುತ್ತಾ ಹರಟೆ ಹೊಡೆಯುತ್ತ ಕೇಕೆ ಹೊಡೆದು ನಗುತ್ತಿದ್ದರು. ಅವರೆಲ್ಲರ ಮಧ್ಯದಿಂದ, ಬರಿ ಮೈಯ್ಯ, ಸೊಂಟದ ಕೆಳಗೆ ರೇಷ್ಮೆ ಶಾಲು ಸುತ್ತಿಕೊಂಡ ಮನುಷ್ಯನಂಥ ಆಕೃತಿ, ವಿಕಾರವಾದ ಮೃಗದ ಮುಖ ಹೊತ್ತು ನನ್ನನ್ನೇ ನೋಡಿ ನಕ್ಕಂತೆ ಭಾಸವಾಗಿ ಮೈಯಲ್ಲಿ ಚಳಿ ಹೊಕ್ಕಂತಾಯಿತು.

(ಮುಕ್ತಾಯ)

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)