ತುಪ್ಪದ ದೋಸೆ

ಒಂದು ಕಾಲದಲ್ಲಿ ಸೈಕಲ್ ಹ್ಯಾಂಡಲ್ ಮೇಲೆ ಸಿಕ್ಕಿಸಿಕೊಂಡ ಚಿಕ್ಕ ಡೈನಮೊ ಲೈಟಿನ ಬೆಳಕಿನಲ್ಲೇ ಜನರು ರಾತ್ರಿ ಮನೆ ತಲುಪಿ ಬಿಡುತ್ತಿದ್ದರು. ಇಂದು ಕಾರು, ಬೈಕುಗಳಲ್ಲಿ ಬರುವ ದೊಡ್ಡ ದೀಪಗಳು ಕೂಡ ನಮಗೆ ಸರಿಯಾಗಿ ದಾರಿ ತೋರಿಸವು. ಹಳ್ಳಿಗಾಡುಗಳ ಗಾಢ ಕತ್ತಲೆಯ ಅಂಧಕಾರದಲ್ಲಿ ಹೊರಟವನಿಗೆ, ಮಿಣುಕು ದೀಪದ ಬೆಳಕು ಕೂಡ ಯಥೇಚ್ಛ. ನಗರಗಳ ಕಣ್ಣು ಕುಕ್ಕುವ ಪ್ರಕಾಶಗಳ ಮಧ್ಯೆ ಸಾಗಲು ಬೆಳಕು ಇದ್ದಷ್ಟು ಸಾಲದು.

ಎಲ್ಲಿಯವರೆಗೆ ನಮ್ಮ ವ್ಯಯಿಸಬಹುದಾದ ಸಂಪನ್ಮೂಲಗಳ ಎಲ್ಲೆ ಸೀಮಿತವಾಗಿರುತ್ತದೆಯೋ, ನಮ್ಮ ತೃಪ್ತಿಯ ವ್ಯಾಖ್ಯಾನ ಕೂಡ ಅದೇ ಮಿತಿಯೊಳಗೆ ಹುದುಗಿರುತ್ತದೆ. ನೆಮ್ಮದಿಯ ಮಾನದಂಡ ಬದಲಾಗುವುದು ಬದಲಾಗುವ ಆಯದೊಂದಿಗೆ, ಜೊತೆಜೊತೆಯಲ್ಲಿ ಬರುವ ಬದಲಾದ ವ್ಯಯಗಳೊಂದಿಗೆ.

ಬಡವನ ಸಂತೋಷದ ಕ್ಷಣಗಳಿಗೆ ಕೊರತೆಯಿದೆಯೆಂದೇನಲ್ಲ. ಆದರೆ ಧನಿಕನಿಗೆ, ಬಡವನ ಕಷ್ಟಗಳ ಕಾಲ್ಪನಿಕ ಚಿತ್ರಣ ಕೂಡ, ತನ್ನ ಸುಖಗಳನ್ನು, ಸಾಧನೆಗಳನ್ನು ನಿರಂತರವಾಗಿ ನೆನಪಿಗೆ ತರುವಂಥ ಮಾಧ್ಯಮವೇ. ಅದಕ್ಕೆಂದೇ ನಾವು ಆರ್ಥಿಕವಾಗಿ ನಮಗಿಂತ ಕೆಳಗಿರುವವರನ್ನು ನೋಡಿ ಮರುಗುವ ನಾಟಕವಾಡುತ್ತೇವೆ. ಎಲ್ಲರ ಮನೆ ದೋಸೆ ತೂತೇ ಎಂದು ನಮ್ಮ ಮನೆಯ ದೋಸೆಯನ್ನು ತುಪ್ಪದಲ್ಲಿ ಅದ್ದಿ ಸವಿಯುತ್ತೇವೆ. ತುಪ್ಪದ ಘಮವನ್ನು ಮನಸ್ಸಿನ ಮೂಲೆಯಲ್ಲಿ ಆನಂದಿಸಿರುತ್ತೇವೆ.

ಕಡಿಮೆ ಎಣ್ಣೆಯ ದೋಸೆಯನ್ನು ತಿಂದ ಬಡವನ ನಾಲಿಗೆಗೂ ದೋಸೆ, ರುಚಿಯನ್ನೇ ನೀಡಿರುತ್ತದೆ. ಆದರೆ ಎಲ್ಲೋ ಒಮ್ಮೆ ತುಪ್ಪದ ದೋಸೆ ರುಚಿ ನೋಡುವ ನಾಲಿಗೆ, ಆತನ ಮನಸ್ಸನ್ನು ಹೋಲಿಕೆಯ ಕೂಪಕ್ಕೆ ನೂಕುತ್ತದೆ. ನಿಧಾನಕ್ಕೆ ಮನೆಯ ಸಾದಾ ದೋಸೆಯ ರುಚಿ ಮಾಸತೊಡಗುತ್ತದೆ. ನೆಮ್ಮದಿ ಕೆಡತೊಡಗುತ್ತದೆ.

ಅದಕ್ಕೋಸ್ಕರವೇ ಸುಮಾರು ೩೦೦ ವರ್ಷಗಳ ಹಿಂದೆ ಬದುಕಿದ ತತ್ತ್ವಜ್ಞಾನಿ Montesquieu ಹೇಳಿರುವುದು:

ಸಂತೋಷದಿಂದ ಬದುಕುವುದು ಬಲು ಸುಲಭ ಸಾಧ್ಯದ ವಿಚಾರ.
ಆದರೆ ನಮಗೆ ಬೇಕಾಗಿರುವುದು ಇತರರಿಗಿಂತ ಸಂತೋಷವಾಗಿರುವುದು.
ಇತರರ ಅವಾಸ್ತವಿಕವಾದ ಸಂತೋಷಗಳನ್ನು ನಾವು ಭ್ರಮಿಸುವುದರಿಂದಲೇ ನಮಗೆ ಇದು ಬಹಳ ಕಷ್ಟಕರವಾಗುವುದು.

ಕಾಲಮಾನಗಳ ನಡುವೆ ಹೋಲಿಕೆ ಮಾಡುವ ವಿಕಸಿಕರದ್ದು ಬೇರೊಂದು ಬಗೆಯ ಕಥೆ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)