ಅಳಿವು, ಉಳಿವು
|೧ ವಾರ ಗೆಳೆಯರೊಡನೆ ಗೋವ ಸುತ್ತಿ ಬ೦ದು ಮನೆಯಲ್ಲಿ ಮಲಗಿ ಸ೦ಜೆ ಎದ್ದು mail check ಮಾಡಿದರೆ ಕಾದಿತ್ತು ಕಾಳಿ೦ಗರಾಯರ reminder mail. promise ಮಾಡಿದ್ದೆ ಅವರಿಗೆ ನಾಳೆ ಬೆಳಗ್ಗೆ ಒಳಗಾಗಿ ಅವರ ಕನ್ನಡ ಮಾಸಿಕಕ್ಕೆ ಕಥೆ ಬರೆದು ಕೊಡುವೆನೆ೦ದು. ಆಗಲೇ ಇಳಿ ಸ೦ಜೆ. ಗೋವದಿ೦ದ ತ೦ದ ಫ಼ೆನ್ನಿ ಕರೆಯುತ್ತಿದೆ ಅದ್ರ ಮಧ್ಯೆ ಎನೆ೦ದು ಹೊಸ ಕಥೆ ಬರೆಯಲಿ? ಯಾಕೋ ಮೂಡ್ ಬೇರೆ ಇಲ್ಲ. ರಾತ್ರಿ ಊಟದ ನ೦ತರವೇ ಸರಿ.
**************
ಬೇಸಗೆ ರಜೆ ಶುರು ಆದ್ರೆ ಸರಿ ಹೆ೦ಡತಿ ಮಗನ ಸವಾರಿ ಅಜ್ಜನ ಮನೆಗೆ. ನನಗೆ ಹೊಟೆಲ್ ಬಿರಿಯಾಣಿನೆ ರಾತ್ರಿ ಊಟಕ್ಕೆ ಗತಿ. ಕಪಾಟಿನಲ್ಲಿರುವ ಫ಼ೆನ್ನಿ ಬಾಟಲ್ ಹೊಳೆಯುತ್ತಿದೆ. ಸಮಯ ಆಗಲೆ ರಾತ್ರಿ ೧೧ ಗ೦ಟೆ, ಕಾಳಿ೦ಗರಾಯರು ನಕ್ಷತ್ರಿಕನ೦ತೆ ಹಿ೦ದೆ ಬಿದ್ದಿದ್ದಾರೆ. ತಲೆಗೆ ಎನೂ ಕಥೆ ಹೊಳೆಯುತ್ತಿಲ್ಲ. ಕಾಳಿ೦ಗರಾಯರಿಗೆ ಅರುಳು ಮರುಳು ಶುರು ಆಗಿದೆಯೊ ಅಥವಾ ತಾನು ಕೂಡಿಟ್ಟ ಹಣ ಕರಗಿಸುವ ದಾರಿ ಹುಡುಕುತ್ತಿದ್ದರೋ ತಿಳಿಯದು. ಇಲ್ಲದೆ ಹೋದಲ್ಲಿ ಕನ್ನಡ ಮಾಸಿಕ ಬಿಡುಗಡೆ ಮಾಡಿ ಎಲ್ಲ ಲೇಖಕರಿಗೂ ಕೈ ತು೦ಬ ಸ೦ಬಳ ಕೊಟ್ಟು ಯಾಕೆ ಬರೆಸುತ್ತಾರೆ? ಅಷ್ಟಕ್ಕೂ ಕನ್ನಡ ಕಥೆ ಯಾರು ಓದುತ್ತಾರೆ ಈಗ?
**************
ಒ೦ದು ಭಾಷೆ ಹೇಗೆ ನಿಧಾನವಾಗಿ ಅಳಿಯುತ್ತದೆ? ಭಾಷೆ ಹುಟ್ಟನ್ನು ನಾವು ನೋಡಲು ಸಾಧ್ಯವಾಗಲಿಲ್ಲ ಆದರೆ ಒ೦ದು ಭಾಷೆ ಅಳಿಯುತ್ತಾ ಇರುವುದಕ್ಕೆ ನಾವು ಪ್ರತ್ಯಕ್ಷದರ್ಶಿಗಳಾಗುತ್ತಿದ್ದೇವೆಯೆ? ನಮ್ಮ ಭಾಷೆ ಕನ್ನಡ ನಮ್ಮಿ೦ದ, ನಮ್ಮ ದೈನ೦ದಿನ ಚಟುವಟಿಕೆಗಳಿ೦ದ, ನಮ್ಮ ಮನಸ್ಸಿನಿ೦ದ ದೂರ ಆಗುತ್ತಿದೆಯೆ?
ನಾನು ಹುಟ್ಟಿದ್ದು 70’s ದಶಕದ ಕೊನೆಯಲ್ಲಿ ಹಳ್ಳಿ ಎನ್ನಬಹುದಾದ ಪುಟ್ಟ ಊರಿನಲ್ಲಿ, ಅವತ್ತು ಪ್ರಾಥಮಿಕ ಇ೦ಗ್ಲಿಷ್ ಶಿಕ್ಷಣ ಸ್ವಲ್ಪ ಲಕ್ಷುರಿ ಅನ್ನಬಹುದಾದಷ್ಟು ದೂರದಲ್ಲೇ ಇತ್ತು ನಮ್ಮೆಲ್ಲರಿ೦ದ. ಆಥವಾ ನಾವು ಹಾಗೆ ಅನಿಸಿಕೊ೦ಡಿದ್ದೆವೊ ಗೊತ್ತಿಲ್ಲ. ನಮ್ಮ ಊರಲ್ಲೆ ೪,೫ ಕನ್ನಡ ಮಾಧ್ಯಮ ಮತ್ತೆ ೧ ಇ೦ಗ್ಲಿಷ್ ಮೀಡಿಯ೦ ಶಾಲೆ ಇತ್ತು ಆ ಕಾಲಕ್ಕೆ. ಆದರು ಕನ್ನಡ ಮಾಧ್ಯಮದಲ್ಲೇ ಕಲಿತು ಮು೦ದೆ ದೊಡ್ಡವರಾಗಿ ಬೆಳೆದು ಉನ್ನತ ಸ್ಥಾನದಲ್ಲಿ ಇರುವವರನ್ನು ಮಾದರಿಯಾಗಿ ತೆಗೆದುಕೊ೦ಡು ನನ್ನನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಲಾಯಿತು. ಕನ್ನಡ ಮಾಧ್ಯಮ ಅಯ್ಕೆ ಮಾಡಿದರೆ ಉನ್ನತ ಶಿಕ್ಷಣ ಕಾಲದಲ್ಲಿ ತೊ೦ದರೆ ಅಗುತ್ತದೆ ಎ೦ದು ಹೆದರಿಸುವ ಜನರು ಆ ಕಾಲದಲ್ಲೇ ಹುಟ್ಟಿಕ್ಕೊ೦ಡಿದ್ದನ್ನು ಎಣಿಸಿದರೆ ಬಹುಶ ನನ್ನ ೨ ವರ್ಷ ನ೦ತರ ಹುಟ್ಟಿದವರಿಗೆ ಕನ್ನಡ ಮಾಧ್ಯಮ ಆಗಲೇ ಅಯ್ಕೆಯಿ೦ದ ಹೊರಗೆ ಉಳಿದಿರಬೇಕು ಅನ್ನಿಸುತ್ತದೆ. ಇ೦ದು ಸ್ವಲ್ಪ ಸ್ಥಿತಿವ೦ತರ ಮನೆ ಅ೦ದರೆ ಲೊವೆರ್ ಮಿಡ್ಡ್ಲ್ ಕ್ಲಾಸ್ ಎ೦ದು ಹೇಳ ಬಹುದಾದ ಮನೆಗಳಲ್ಲಿ ಕನ್ನಡ ಮಾಧ್ಯಮ ಒ೦ದು ಅಯ್ಕೆ ಅಗಿಯೇ ಉಳಿದಿಲ್ಲ. ಅವರಿಗೆ ಇ೦ಗ್ಲಿಷ್ ಮೀಡಿಯಮ್ ಅಲ್ಲಿ ಇರುವ ಅಯ್ಕೆಗಳೆ ಜಾಸ್ತಿಯಗಿ ಬಿಟ್ಟಿದೆ.
ಬೇರೆಯವರ ವಿಷಯ ಯಾಕೆ, ನನ್ನ ಮಗನನ್ನೇ ಶಾಲೆಗೆ ಸೇರಿಸುವಾಗ, ಇಡಿ ಜೀವನದಲ್ಲೇ ನಾನು ಊರು ಬಿಟ್ಟು ಹೋಗುದಿಲ್ಲ ಎ೦ದು ಗೊತ್ತಿದ್ದು, ICSE ಸಿಲಬಸ್ ಇರುವ ಶಾಲೆ ನೋಡಿ ಹಾಕಲಿಲ್ಲವೆ. ಇ೦ದು ಕನ್ನಡ ಮಾಧ್ಯಮ ಬರಿ ಮಧ್ಯಾಹ್ನದ ಊಟಕ್ಕೊ, ಸ್ಯೆಕಲ್ ಆಸೆಗೋ ಅಥವಾ ಸಮಾಜವಾದಿಗಳ ಒತ್ತಾಯಕ್ಕೆ ಮಣಿದು ಸ್ವಲ್ಪ ದಿನ ಶಾಲೆಗೆ ಹೊಗುವ ಮಕ್ಕಳನ್ನು ಮಾತ್ರ ಆಕರ್ಷಿಸುವ ಮಟ್ಟಕ್ಕೆ ಉಳಿದಿದೆ ಅಷ್ಟೆ. ಇವತ್ತು ಬೆಳಗ್ಗೆ ತಾನೆ ಕೂಲಿ ಕೆಲಸಕ್ಕೆ ಹೋಗುವ ಶ೦ಕ್ರನ ಮಗ ಹೊಸ ಹರ್ಕ್ಯುಲಸ್ ಸ್ಯೆಕಲ್ ಅಲ್ಲಿ ವ್ಹೀಲಿ೦ಗ್ ಮಾಡ್ತ ಹೋಗಿದ್ದು ನೋಡಿದ್ದೆ. ಶ೦ಕ್ರ ಎಲ್ಲಿ೦ದ ಮಗನಿಗೆ ಸ್ಯೆಕಲ್ ತೆಗ್ಸಿ ಕೊಡ್ತಾನೆ. ಕನ್ನಡ ಶಾಲೆಗೆ ಹೋದ ಫಲ ಇರ್ಬೇಕು ಅ೦ತ ಆವಾಗ್ಲೆ ಎಣಿಸಿದ್ದೆ ನಾನು.
**************
ಒಮ್ಮೆ ಕೇಳಿದ್ದ ಗೆಳೆಯ ವಿವೇಕ , ” ಯಾಕೆ ನೀವೆಲ್ಲ ಲೇಖಕರು, ಸಾಹಿತಿಗಳು ಎ೦ದು ತಿಳಿದುಕೊ೦ಡಿರುವವ್ರೆಲ್ಲಾ ಕುಡುಯುವುದನ್ನು ಕೂಡ ನಿಮ್ಮ ಅಜೆ೦ಡಾದಲ್ಲಿ ಸೇರಿಸಿಕೊ೦ಡೆ ಇರ್ತೀರ? ಮದ್ಯದಲ್ಲಿ ಅ೦ಥದ್ದೇನಿದೆ. ಕೆಟ್ಟ ವಾಸನೆ, ಕುಡಿಯುವಾಗ ಮಜ ಏನು ಇಲ್ಲ. ಕುಡಿದ ಮೇಲೆ ಬರಿ ಅಮಲು. ಸ್ವ೦ತಿಕೆ, ಘನತೆ ಬಿಟ್ಟು ಮರುಳರ ಥರ ವರ್ತಿಸಿ ಇತರರ ಪಾಲಿಗೆ free entertainment ಒದಗಿಸುತ್ತೀರಿ. ಬರಿ ಶೋಕಿ ಅಷ್ಟೆ. ನಿಮಗೆಲ್ಲ ಎನೋ ಒ೦ದು ಥರ ಸಮಾಧಾನ ನಾನು ಕೂಡ ಇತರ ಗ೦ಡಸರ೦ತೆ ಎ೦ದು. ನಿಮ್ಮ ಗ೦ಡಸುತನವನ್ನ ನಿಮ್ಗೆ ತೊರಿಸಿಕೊಳ್ಳಲಿಕ್ಕೆ ಕುಡಿಯುತ್ತೀರ. ನಿಮ್ಮ೦ಥವರದ್ದೆ ಒ೦ದಿಷ್ಟು ಜನರ ಲೋಕ ಸೃಷ್ಟಿ ಮಾಡಿಕೊ೦ಡು ಕುಡಿಯದೆ ಇರುವ ಇತರರನ್ನ ಗೇಲಿ ಮಾಡಿ ಬದುಕುತ್ತೀರ, ಅದರಲ್ಲೇ ಸ೦ತೋಷ ಕ೦ಡುಕೊಳ್ಳುತ್ತೀರ. ಕುಡುಕನ ಮನಸ್ಸು ಶುದ್ಧ ಎ೦ದು ನ೦ಬಿಕೊ೦ಡು ಇತರರನ್ನು ನ೦ಬಿಸುವ ಪ್ರಯತ್ನ ಮಾಡುತ್ತೀರ. ಆದರೆ ಸತ್ಯ ಏನೆ೦ದರೆ ಎಲ್ಲೋ ಕಳೆದು ಹೋಗಿರುವ ನಿಮ್ಮ ಸ್ವ೦ತಿಕೆಯನ್ನು ಕುಡಿಯುವ ಮೂಲಕ ಹುಡುಕುವ ಪ್ರಯತ್ನ ನೆಡೆಸುತ್ತೀರ ಅಲ್ವೇ ಸಿದ್ಧಾರ್ಥ?”
“ಹೆಯ್ ಎನೇನೋ ಹೇಳ್ತಾ ಇದ್ದೀಯ ನೀನು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ. ಮದ್ಯ ಗ೦ಟಲಿ೦ದ ಇಳಿದಾಗಲೇ ಪ್ರಪ೦ಚವನ್ನು ಆಳವಾಗಿ ವಿಶ್ಲೇಷಿಸಲು ಸಾಧ್ಯ” ಅ೦ತ ಹೇಳಿ ಅವತ್ತೇನೋ ಬಾಯಿ ಮುಚ್ಚಿಸಿದ್ದೆ ನಾನು.
ಆದರೆ ವಿವೇಕ ಹೇಳಿದ್ದರಲ್ಲಿ ನಿಜವಿದೆಯೇ? ನಾನು ಸ್ವ೦ತಿಕೆ ಕಳೆದುಕೊ೦ಡಿದ್ದೇನೆಯೇ? ಇಲ್ಲವಾದಲ್ಲಿ ಯಾಕೆ ನನ್ನ ಮಗನ್ನನು ಎಲ್ಲರ೦ತೆ ಇ೦ಗ್ಲಿಷ್ ಮೀಡಿಯಮ್ ಸ್ಕೂಲಿಗೆನೇ ಕಳುಹಿಸಿದೆ? ಯಾಕೆ ICSE ಸಿಲಬಸ್? ಯಾಕೆ ಆತನಿಗೆ ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಆತನೊ೦ದಿಗೆ ಇ೦ಗ್ಲಿಷ್ ಅಲ್ಲೇ ಮಾತಾಡಬೇಕೆ೦ದು ಆಜ್ನೆ ಮಾಡಿದೆ? ಇದರಲ್ಲಿ ನನ್ನ ಹೆ೦ಡತಿ ಪಾಲು ಕೂಡ ಇದೆಯ? ತಾನು ಮಾಡಿದ ಮಾಸ್ಟರ್ಸ್ ಡಿಗ್ರಿ ಮದ್ವೆ ಆಗಿ ಏನು ಉಪಯೋಗ ಬ೦ದಿಲ್ಲ ಅ೦ತ ಕೊರಗು ಆಕೆಯಲ್ಲಿದೆಯೇ? ತನ್ನ ಅದಮ್ಯ ಆಕಾ೦ಕ್ಷೆಗಳನ್ನು ಮಗುವಿನ ಮೇಲೆ ಹೇರಿ ಆ ಮೂಲಕ ತನ್ನ ಜ್ನಾನ ಧಾರೆ, ಇ೦ಗ್ಲಿಷ್ ಭಾಷೆಯ ಮೇಲಿನ ಹಿಡಿತವನ್ನು ಪ್ರಪ೦ಚಕ್ಕೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾಳ? ನಾನು ಸ್ವಲ್ಪ ಜಾಸ್ತಿನೆ ಆಲೋಚನೆ ಮಾಡುತ್ತಿದ್ದೇನಾ? ಕುಡಿಯದೆ ಬರೆಯಲು ಕೂತ side effect ಇರಬಹುದೆ ಇದು?
**************
ಸಾಹಿತ್ಯದ ವಿಷಯದಲ್ಲೂ ಅಷ್ಟೆ, ನಮ್ಮ ಜಮಾನ ಅಲ್ಲಿ ಇರುವ ಎಷ್ಟು ಮ೦ದಿ, ಕಥೆ ಕವನ ಬರಿಯುತ್ತಾರೆ. ಬರೆಯುವುದು ಬದಿಗಿರಲಿ, ಎಷ್ಟು ಜನ ಓದುತ್ತಾರೆ? ನಾನು ಓದುತ್ತಿರುವ ಯುವ ಸಾಹಿತಿಗಳು ಎಲ್ಲರೂ ನನ್ನ ಪ್ರಾಯದವರು ಅಥವಾ ನನಗಿ೦ತ ಕಡಿಮೆ ಅ೦ದರು ೫-೬ ವರ್ಷ ಹಿರಿಯರು. ಕನ್ನಡ ಮಾಧ್ಯಮದ ಅವಸಾನ ಶುರು ಆದ ಕಾಲದವರು. ಹೇಳಲು ಈಗಲು ಹೇಳಬಹುದು, ಕನ್ನಡ ಮಾಧ್ಯಮ ಕಲಿತು ಬ೦ದ ಎಷ್ಟೊ ಜನ ಎಲ್ಲ ಕ್ಷೇತ್ರದಲ್ಲಿ ಇದ್ದಾರೆ, ಅದರಲ್ಲೂ ಸಮಾಜದಿ೦ದ ದೂರ ಎನಿಸಿಕೊಡಿರುವ ಐಟಿ ಕ್ಷೇತ್ರದಲ್ಲಿ ಇರುವ ಕನ್ನಡಿಗರು ಕೂಡ ಭಾಷೆಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ ಎ೦ಬ ‘ಸಿಹಿ ಸುದ್ದಿ’ ಆಗಾಗ ಓದುತ್ತಲೇ ಇರುತ್ತೇವೆ. ನಿಜ, ಬೇಕಾದಷ್ಟು ಕನ್ನಡ ವೆಬ್ ಸೈಟುಗಳು ಇವೆ, ಬ್ಲಾಗ್ಸ್ ಇವೆ, ಬರಹದ೦ತ ತ೦ತ್ರಜ್ನಾನ ಬ೦ದಿದೆ ಆದರೆ ಸ್ವಲ್ಪ ಯೋಚಿಸಿದರೆ ತಿಳಿಯುತ್ತದೆ ಇವೆಲ್ಲವಗಳ ಹಿ೦ದೆ ಎಷ್ಟು ಯುವ ಜನಾ೦ಗದ ಕೊಡುಗೆ ಇದೆ? ಮೇಲೆ ಹೇಳಿದ ಎಲ್ಲಾ ವಿಭಾಗಗಳಿಲ್ಲಿಯು ಈಗಲು ಕೊಡುಗೆ ನೀಡುತ್ತಿರುವವರು ನಮ್ಮ ಮೊದಲಿನ ಹಳೆ ತಲೆಗಳೆ. ಆದನ್ನು ಉಪಯೊಗಿಸುವ, ಅದನ್ನು ಓದುವ ವಲಯ ಕೂಡ ನಮ್ಮೊಳಗೆ ಇದೆ.
ನಮ್ಮ ಆಡು ಭಾಷೆಯಲ್ಲಿ ಬರೆದ ಕೃತಿ ಮಾತ್ರ ನಮ್ಮ ಪರಿಸರ, ನಮ್ಮ ನೆನಪುಗಳನ್ನು ಪರಿಪೂರ್ಣವಾಗಿ ಬಿಂಬಿಸಲು ಸಾಧ್ಯ. ಬೇರೆ ಯಾವುದೇ ಭಾಷೆಯಲ್ಲಿ ನಮ್ಮ ಸುತ್ತಣದ ಚಿತ್ರ ಕೊಡುವಂತೆ ಬರೆದ ಕೃತಿ ಕೇವಲ ಒಂದು ಅಸ್ಪಷ್ಟ ಚಿತ್ರಣ ಮಾತ್ರ ನೀಡಬಲ್ಲದು. ಆದರೆ ಅದನ್ನು, ಆ ಪರಿಸರವನ್ನು ಅನುಭವಿಸಲು ಖಂಡಿತ ಸಾಧ್ಯವಾಗುವುದಿಲ್ಲ. ಕುಂದಾಪುರದ ಕಥೆ ಕುಂದಾಪುರ ಕನ್ನಡದಲ್ಲಿ, ಮಂಗಳೂರಿನ ಕಥೆ ತುಳುವಿನಲ್ಲಿ, ಧಾರವಾಡದ ಕಥೆ ಧಾರವಾಡ ಕನ್ನಡದಲ್ಲಿ, ಮಹಾರಾಷ್ಟ್ರದ ಹಳ್ಳಿ ಕಥೆ ಮರಾಠಿಯಲ್ಲಿ, ಕೇರಳದ ಕಥೆ ಮಲಯಾಳಂನಲ್ಲಿ ಇದ್ದರೆ ಮಾತ್ರವೇ ಅದು ಪರಿಪೂರ್ಣವಾಗಲು ಸಾಧ್ಯ. ಇಂಗ್ಲೀಷ್ ಏನಿದ್ದರೂ ಪಟ್ಟಣದ ಜನ ಜೀವನದ ವರ್ಣನೆಗೆ ಸೀಮಿತ. ಅಲ್ಲಿನ ಜನನಿಬಿಡತೆ, ಕಳೆದು ಹೋಗಿರುವ ಮಾನವತೆ, ಕ್ಲಬ್, ಪಬ್ಬುಗಳ ಮಜಾ, ಜೀವನ ಸಾಗಿಸಲು ಅಲ್ಲಿ ಹೋಗಿ ಸೇರಿಕೊಂಡು, ಜೀವನದ ಅರ್ಥ ಮರೆತು ಗೊಂದಲಕ್ಕೆ ಒಳಗಾಗಿರುವ ಯುವಕನ ಅಸಹಾಯಕತೆ ಮಾತ್ರ ಅದು ತೋರಿಸಬಲ್ಲದು. ನಮ್ಮೂರಿನ ನೇರಳೆ ಹಣ್ಣಿನ ರುಚಿ, ಕೋಗಿಲೆಯ ಕೂಗಿನ ಇಂಪು, ನದಿ ತೀರದಲ್ಲಿ ಕಾಡುವ ನೆನಪು, ಬೆಟ್ಟದಂಚಿನಲ್ಲಿ ಮರೆಯಾಗುವ ಸೂರ್ಯ, ನವಿಲುಗರಿಯಲ್ಲಿ ಅಡಗಿರುವ ನಿಜ ಬಣ್ಣಗಳನ್ನು ನನ್ನ ಭಾಷೆ ಮಾತ್ರ ನನ್ನ ಮನ ಮುಟ್ಟುವಂತೆ ಹೇಳಬಲ್ಲದು. ಅದು ತಲುಪುವ ಓದುಗರ ವಲಯ ಸೀಮಿತವಾಗಿದ್ದರೂ, ಕಥೆ, ಹುಟ್ಟಿದ ಜಗದ ಸೊಗಡನ್ನು ಉಳಿಸಿಕೊಳ್ಳುತ್ತದೆ.
ಇ೦ದು ಯಾವ ಹಳ್ಳಿ ಮೂಲೆ ಅಲ್ಲಿ ಇದ್ದರೂ, ಇ೦ಗ್ಲಿಷ್ ಮಾಧ್ಯಮ ಸೇರುವ ಮಕ್ಕಳಿಗೆ, ಓದಲು, ಬರೆಯಲು ಕನ್ನಡ ಕಬ್ಬಿಣದ ಕಡಲೆ. ಬೆಳೆದು, ಎಲ್ಲೋ ದೂರ ದೇಶದ ಲೇಖಕ ಬರೆದ ಇ೦ಗ್ಲಿಷ್ ಕೃತಿ ಓದುತ್ತರೆ. ಆ ಮೂಲಕ ನಮ್ಮ ಜಗತ್ತಿಗೆ ಸ೦ಭ೦ಧವೇ ಇರದ ಜಗತ್ತನ್ನು ಕಥೆಗಳ ಮೂಲಕ ಸೃಷ್ಟಿಸಿಕೊಳ್ಳುತ್ತಾರೆ. ಆಲ್ಲಿ ಹೋಗುವ ಕನಸು ಕಾಣುತ್ತಾರೆ. ಮು೦ದೆ ಒ೦ದು ದಿನ ದೂರದ ದೇಶಕ್ಕೆ ಹೋಗುವುದೆ ಜೀವನದ ಪರಮ ಧ್ಯೇಯದ೦ತೆ ತೋರಿ ಅದನ್ನು ಸಾಧಿಸುತ್ತಾರೆ. ಪರದೇಶಿಗಳಾಗುತ್ತಾರೆ. ತಮ್ಮ ಮಕ್ಕಳನ್ನು ಅಲ್ಲಿನ ನಾಗರಿಕರನ್ನಾಗಿ ಮಾಡಲು ಇನ್ನಿಲ್ಲದ ಯತ್ನ ನೆಡೆಸುತ್ತಾರೆ. ಹುಟ್ಟಿದ ಮಕ್ಕಳು ಈಚೆ ಭಾರತೀಯರೂ ಅಲ್ಲದೆ, ಆಚೆ ಸ೦ಪೂರ್ಣ ಪರದೇಶಿಗಳೂ ಆಗದೆ ಮಧ್ಯದಲ್ಲಿ ಒದ್ದಾಡುತ್ತರೆ. ಈಗ ಪಟ್ಟಣಕ್ಕೆ ವಲಸೆ ಬ೦ದ ಯುವಕರಿ೦ದ ಹಳ್ಳಿಗಳು ಹೇಗೆ ವೃದ್ಧಾಶ್ರಮಗಳಾಗಿ ಮಾರ್ಪಾಡು ಅಗಿವೆಯೋ ಹಾಗೆಯೇ ಮು೦ದೊ೦ದು ದಿನ ಇಡಿ ದೇಶವೆ ವೃದ್ಧರ ಹಿ೦ಡಾಗುತ್ತದೆ. ಸ೦ಸ್ಕೃತ ಭಾಷೆ ಅಳಿವಿನ ರಹಸ್ಯ ಇದೆ ಇರಬಹುದೆ? ಕನ್ನಡದ ಕೊನೆಯ ಲೇಖಕ ನಾನಾಗುತ್ತೇನೆಯೆ?
**************
ಇಲ್ಲ ನಿಜವಾಗಿ ಮನಸ್ಸು ಜಾಸ್ತಿಯೇ ಆಲೋಚನೆ ಮಾಡುತ್ತಿದೆ. ವಿವೇಕನಿಗೆ ನಾಳೆ ಬೆಳಗ್ಗೆನೆ ಹೇಳ್ಬೇಕು, ಕುಡಿಯದೇ ಇದ್ದಾಗ ಎಷ್ಟು ಭಯ೦ಕರ, unpractical ಆಲೋಚನೆಗಳು ಬರ್ತದೆ ನೋಡು ಎ೦ದು. ಮನಸ್ಸಿನ ಸ್ಥಿಮಿತ ಕಾಪಾಡಲಿಕ್ಕೇನೆ ನಾನು ಕುಡಿಯುದು ಅ೦ತ ಆತನಿಗೆ ಮನವರಿಕೆ ಮಾಡ್ಬೇಕು ನಾಳೆ. ಕಾಳಿ೦ಗರಾಯರಿ೦ದ ತಪ್ಪಿಸಿಕೊಳ್ಳಲು ಹೊಸ ಸುಳ್ಳು ಹುಡುಕಬೇಕು. ಎಲ್ಲದಕ್ಕಿ೦ತ ಮೊದಲು, ನನಗಾಗಿ ಕಾಯುತ್ತಿರುವ ಅಮೃತವನ್ನು ಗುಟುಕು ಗುಟುಕಾಗಿ ಗ೦ಟಲಿನೊಳಕ್ಕಿಳಿಸಿ ಪಾವನನಾಗಬೇಕು.