ಅಭೀಷ್ಟಭೂತ

38 ವರುಷಗಳ ಕಾಲ ತಾಳ್ಮೆಯಿಂದ ಕಾದು, ಹಿರಿಯ ಅಣ್ಣಂದಿರೆಲ್ಲ ಕಾಲದಲ್ಲಿ ಕಳೆದು ಹೋದ ಮೇಲೆ ಜನರಿಂದಲೇ ಆಯ್ಕೆಯಾಗಿ ಆತ ಅಧಿಕಾರಕ್ಕೆ ಬಂದ. ಅಧಿಕಾರಕ್ಕೆ ಬಂದ ಮೊದಲೆಂಟು ವರ್ಷ ಶಿಸ್ತಿನಿಂದ ಯೋಜನೆ ಮಾಡಿ ಪದಾತಿ ಪಡೆ, ಅಶ್ವ ದಳ, ಗಜ ದಳ ಹಾಗು ನೌಕಾದಳವನ್ನು ಬಲಿಷ್ಠಗೊಳಿಸಿದ. ತನ್ನನ್ನೆದುರಿಸಲು ಒಂದಾದ ಬಲಿಷ್ಠ ಚೇರ, ಪಾಂಡ್ಯ ಹಾಗು ಸಿಂಹಳೀಯರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿ, ಮೂರೂ ಸಂಸ್ಥಾನಗಳನ್ನಾಳಿದ (ಚೋಳ, ಚೇರ ಹಾಗು ಪಾಂಡ್ಯ) ವೀರನಾಗಿ ‘ಮುಮ್ಮುಡಿ’ ಎಂಬ ಬಿರುದನ್ನೂ ಸಂಪಾದಿಸಿದ. ಚಾಲುಕ್ಯರಿಗೆ ಸರಿಸಮನಾಗಿ ಹೋರಾಡಿ ಹಿಮ್ಮೆಟ್ಟಿಸಿದ. ಭರತ ಖಂಡದ ಪೂರ್ತಿ ದಕ್ಷಿಣಪ್ರಾಂತ್ಯದ ಒಡೆಯನಾಗಿದ್ದೂ ಅಲ್ಲದೆ ಸಮುದ್ರದಾಚೆಯ ಮಾಲ್ಡೀವ್ಸ್ ಹಾಗು ಸಿಂಹಳೀಯರನ್ನು ಕೂಡ ಸೋಲಿಸಿ ಅಲ್ಲಿ ಚೋಳ ಅಧಿಪತ್ಯ ಸಾರಿದ. ಇಳಿವಯಸ್ಸಿನಲ್ಲಿ ತನ್ನ ಬೃಹತ್ ಸಾಮ್ರಾಜ್ಯದ ಉಸ್ತುವಾರಿಯನ್ನು ಮಗನಿಗೆ ವಹಿಸಿ ತನ್ನ ಮಹದಾಸೆಯಾದ ಬೃಹದಾಕಾರದ ಈಶ್ವರ ದೇವಸ್ಥಾನದ ಸ್ಥಾಪನೆಗೆ ಮುಂದಾದ. ಇನ್ನೇನು ತನ್ನ ಬೃಹದಾಕಾರಕ್ಕೆ ವಿಶ್ವ ಪ್ರಸಿದ್ಧಿ ಪಡೆಯಲಿರುವ ಆ ದೇವಸ್ಥಾನದ ನಿರ್ಮಾಣ ಮುಗಿದೇ ಹೋಯಿತು ಎಂಬಷ್ಟರಲ್ಲಿ ಇತಿಹಾಸದ ಯಾವ ಪುಟಗಳಲ್ಲಿಯೂ ದೊರಕದಂತೆ ಮಾಯವಾಗಿ ಹೋದ. ಆತನ ರಾಜಧಾನಿಯಾಗಿ ಮೆರೆದ ಊರು ಹೇಳ ಹೆಸರಿಲ್ಲದಂತೆ ಮಹತ್ವ ಕಳೆದುಕೊಂಡು ನಿಗೂಢ ರೀತಿಯಲ್ಲಿ ಸಪ್ಪೆಯಾಯಿತು. ಆತ ಚೋಳ ಸಂಸ್ಥಾನವನ್ನು ಹಿಂದೆಂದೂ ಇಲ್ಲದಂತೆ ಬಲಪಡಿಸಿ ದಕ್ಷಿಣ ಭಾರತದ ಉದ್ದಗಲಕ್ಕೂ ಏಕಸ್ವಾಮ್ಯತೆ ಸಾಧಿಸಿದ ದೊರೆ ರಾಜ ರಾಜ ಚೋಳ. ಅವನು ನಿರ್ಮಿಸಿದ ತಂಜಾವೂರಿನ ಬೃಹದೀಶ್ವರ ದೇವಾಲಯವು ಹಲವು ಕಾರಣಗಳಿಗಾಗಿ ಪ್ರಪಂಚದ ಕಣ್ಣಿಗೆ ಇನ್ನೂ ಕೂಡ ಬೆರಗಾಗಿಯೇ ಉಳಿದಿದೆ.

Brihadeeshawara Temple
ಬೃಹದೀಶ್ವರ ದೇವಾಲಯ

ವಿಶ್ವದಲ್ಲಿಯೇ ಅತಿ ಕಠಿಣ ಹಾಗು ಭಾರವಾದ, ತಂಜಾವೂರಿನ ಆಸುಪಾಸಿನ 100 ಕಿಲೋಮೀಟರಿನ ಸುತ್ತಳತೆಯಲ್ಲಿ ಎಲ್ಲೂ ಸಿಗದ ಪೆಡಸುಕಲ್ಲಿನ (Granite stone) ಶಿಲೆಯನ್ನು, 1000 ವರ್ಷಗಳ ಹಿಂದೆಯೇ ಕೊರೆದು ಕೆತ್ತಿ ಸುಂದರವಾಗಿಸಿ, 216 ಅಡಿಗಳಷ್ಟು ಎತ್ತರದ ಗೋಪುರವನ್ನು,ಮಧ್ಯಾಹ್ನದ ಹೊತ್ತಿನ ನೆತ್ತಿಯ ಮೇಲಿನ ಸೂರ್ಯನ ನೆರಳು ಕೂಡ ಬೀಳದಂತೆ ಅತಿ ವಿಶಿಷ್ಟ ಹಾಗು ಕರಾರುವಾಕ್ ತಂತ್ರಜ್ಞಾನದಿಂದ ನಿರ್ಮಿಸಿರುವ, 80 ಟನ್ ಗಳಷ್ಟು ಭಾರವಾದ ಶಿಲಾ ಕಲಶವನ್ನು 60 ಮೀಟರಿಗೂ ಮಿಗಿಲಾದ ಗೋಪುರದ ಮೇಲೆ ಯಾವುದೇ ಕ್ರೇನಿನ ಸಹಾಯವಿಲ್ಲದೆ ಸ್ಥಾಪಿಸಿರುವ ಈ ದೇವಾಲಯದ ನಿರ್ಮಾಣ ಇಂದಿಗೂ ಹಲವಾರು ನಿಗೂಢಗಳಿಗೆ ಸೆಲೆ. ಸುಮಾರು 8 ವರ್ಷಗಳ ಕಾಲ ನಡೆದ ಈ ದೇವಾಲಯದ ನಿರ್ಮಾಣಕ್ಕೆ 1000 ಕ್ಕೂ ಹೆಚ್ಚು ಆನೆಗಳನ್ನು ಬಳಸಲಾಗಿತ್ತೆಂದು ಅಂದಾಜಿಸಲಾಗುತ್ತದೆ. ದೇವಾಲಯ ಪೂರ್ಣಗೊಂಡ ನಂತರ ದೇವಸ್ಥಾನದ ಕಾರ್ಯನಿರ್ವಹಣೆಗೆಂದು 1000 ಜನರನ್ನು ನೇಮಿಸಲಾಗಿತ್ತಂತೆ. ಅದರಲ್ಲಿ 400 ಜನ ಬರಿ ನೃತ್ಯಗಾತಿಯರೇ. ಅಷ್ಟಕ್ಕೂ ಇಂತಹ ಮಹಾ ನಿರ್ಮಾಣದ ಅವಶ್ಯಕತೆಯಾದರೂ ರಾಜನಿಗೆ ಏನಿರಬಹದು? ಸಮಕಾಲೀನ ರಾಜರ ಮುಂದೆ ತನ್ನ ಹೆಗ್ಗಳಿಕೆಯ ಪ್ರಶ್ನೆಯೇ? ದಕ್ಷಿಣ ಭಾರತದ ಉದ್ದಗಲಕ್ಕೂ ತನ್ನ ಸಾಮ್ರಾಜ್ಯ ವಿಸ್ತರಿಸಿದ ಹೆಮ್ಮೆಯ ಸಂಕೇತವೆಂದೇ? ಈಶ್ವರನೆಡೆಗಿನ ತನ್ನ ಭಕ್ತಿಯ ತೋರ್ಪಡಿಕೆಯೇ? ರಾಜನ ಇಳಿವಯಸ್ಸಿನಲ್ಲಿ ಮೂಡಿದ ಆಧ್ಯಾತ್ಮಿಕ ಆಸಕ್ತಿಯೇ? ಸಾವಿರ ವರ್ಷಗಳ ಹಿಂದೆಯೇ ಇಂತಹ ದೈತ್ಯಾಕಾರದ ನಿರ್ಮಾಣಕ್ಕೆ ಕೈ ಹಾಕಿದ ರಾಜನ ಮಹದಾಸೆಗೆ ಪ್ರಜೆಗಳು ಬಲಿಪಶುಗಳಾದರೇ? ನಿರ್ಮಾಣದ ಎಂಟು ವರ್ಷಗಳ ಕಾಲ ರಾಜ ಪ್ರಜೆಗಳೆಲ್ಲರ ಮೇಲೆ ಸರ್ವಾಧಿಕಾರ ಚಲಾಯಿಸಿ ದುಡಿಸಿಕೊಂಡಿರಬಹುದೇ? ವೈರಾಗ್ಯಮೂರ್ತಿಯಾದ ಈಶ್ವರನಿಗೆ ಐಶ್ವರ್ಯದ ಸಂಕೇತವೆನಿಸುವ ದೇವಾಲಯ ನಿರ್ಮಿಸುವ ರಾಜನ ಯೋಜನೆಯು ತನ್ನ ಹೆಸರನ್ನು ಯುಗ ಯುಗಗಳ ತನಕ ಅಮರವಾಗಿಸುವ ಯೋಜನೆಯೇ? ಅಷ್ಟಕ್ಕೂ ಆತನ ಜೀವನ ಅಮರವಾಗಿ ಉಳಿಯಿತೇ, ಪ್ರಜೆಗಳ ಮನಸ್ಸಿನಲ್ಲಿ ಆತ ಸಾಯುವ ಮೊದಲು ಗೌರವ ಮೂಡಿಸಿದ್ದ ಎಂದು ಪ್ರಚುರಪಡಿಸುವಂತೆ ಹೇಳಿಕೊಳ್ಳಲು ಚೋಳರ ವಂಶದ ಅತಿ ಪ್ರಬಲನಾದ ಪ್ರಭು ರಾಜ ರಾಜ ಚೋಳನ ಸಮಾಧಿಯ ಬಗ್ಗೆ ತಂಜಾವೂರಿನ ಸುತ್ತಮುತ್ತ ಯಾವುದೇ ಕುರುಹಿಲ್ಲ. ತನ್ನ ಪ್ರತಿಯೊಂದು ವೀರಗಾಥೆಯನ್ನು ಶಾಸನಗಳಲ್ಲಿ ದಾಖಲಿಸಿದ ರಾಜನ ಕೊನೆಯ ದಿನಗಳು ಯಾವುದೇ ಶಾಸನದಲ್ಲಿ ದೊರೆತಿಲ್ಲ. ಸಾಮಾನ್ಯವಾಗಿ ಚೋಳರ ವಂಶದಲ್ಲಿ ಆತ್ಮಹತ್ಯೆಗೈದವರ ಅಥವಾ ಸಂಚಿನಿಂದ ಕೊಲೆಯಾದವರ ವಿವರಗಳು ಶಾಸನಗಳಲ್ಲಿ ಬರೆಯಲಾಗುವುದಿಲ್ಲ. ರಾಜ ರಾಜ ಚೋಳನ ಅಂತ್ಯ ಕೂಡ ಹೀಗಾಗಿರಬಹುದೇನೋ ಎಂಬ ಸಂಶಯಕ್ಕೆ ಪುಷ್ಟಿ ಕೊಡುತ್ತದೆ ಸ್ಥಳೀಯರು ಹೇಳುವ ಕಥೆ.

ರಾಜ ರಾಜ ಚೋಳ ಸಿಂಹಳದ ಕಡೆ ಕೈಗೊಂಡ ವೀರಯಾತ್ರೆಯಲ್ಲಿ ಸಿಂಹಳದ ದೊರೆಯಾದ ಮಹಿಂದನನ್ನು ಸೋಲಿಸಿ ಉತ್ತರಾರ್ಧ ಭಾಗದ ಸಿಂಹಳವನ್ನು ತನ್ನ ವಶಪಡಿಸಿಕೊಳ್ಳುತ್ತಾನೆ. ಮಹಿಂದ ದಕ್ಷಿಣ ಸಿಂಹಳದ ಕಡೆ ಓಡಿ ತಲೆ ಮರೆಸಿಕೊಳ್ಳುತ್ತಾನೆ. ದ್ವೇಷದ ಜ್ವಾಲೆಯಲ್ಲಿ ಬೇಯುವ ಮಹಿಂದ ತನ್ನ ಕಡೆಯ ಒಬ್ಬ ಬೌದ್ಧ ಮಹಿಳೆಯನ್ನು ರಾಜ ರಾಜ ಚೋಳನ ಬಳಿ ಹೋಗಿ ಸೇರುವಂತೆ ಕುತಂತ್ರ ಮಾಡುತ್ತಾನೆ. ಕಾಲಾನಂತರದಲ್ಲಿ ರಾಜ ರಾಜ ಚೋಳನ ವಿಶ್ವಾಸಗಳಿಸಿದ ಆ ಮಹಿಳೆಯು ರಾಜನ ಆಪ್ತ ಬಳಗದಲ್ಲಿ ಸೇರಿಕೊಳ್ಳುತ್ತಾಳೆ. ತಂಜಾವೂರಿನ ಬೃಹದೀಶ್ವರ ದೇವಾಲಯ ಇನ್ನೇನು ಮುಕ್ತಾಯದ ಹಂತದಲ್ಲಿದೆ ಎನ್ನುವಾಗ ರಾಜ ಗೋಪುರದ 8 ನೇ ಮಹಡಿಯಿಂದ ಕೆಲಸ ಕಾರ್ಯಗಳನ್ನು ಪರೀಕ್ಷಿಸುತ್ತಿರಬೇಕಾದರೆ ಸಮಯ ಸಾಧಿಸಿ ಆ ಮಹಿಳೆ ರಾಜನನ್ನು ಕೆಳ ನೂಕುತ್ತಾಳೆ. ಎತ್ತರದಿಂದ ಬಿದ್ದ ರಾಜ ಅಲ್ಲೇ ಅಸು ನೀಗುತ್ತಾನೆ. ರಾಜನ ಮಗನಾದ ರಾಜೇಂದ್ರ ಚೋಳ ದೇವಸ್ಥಾನವನ್ನು ಪೂರ್ಣಗೊಳಿಸಿ, ಮಹಿಂದನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಮತ್ತೊಮ್ಮೆ ಸಿಂಹಳದ ಮೇಲೆ ದಂಡೆತ್ತಿ ಹೋಗಿ ಪೂರ್ತಿ ಸಿಂಹಳ ದ್ವೀಪವನ್ನು ವಶಪಡಿಸಿ ಕೊಂಡು ಮಹಿಂದನನ್ನು ಬಂಧಿಸಿ ತನ್ನ ಹೊಸ ರಾಜಧಾನಿಯಾದ ಗಂಗೈ ಕೊಂಡ ಚೋಳಪುರಂನ ಕಾರಾಗೃಹದಲ್ಲಿ ಆತ ಸಾಯುವ ತನಕ ಖೈದಿಯಾಗಿರಿಸುತ್ತಾನೆ. ಸಾವಿರ ವರುಷಗಳಿಂದ ಜನರ ಬಾಯಿಂದ ಬಾಯಿಗೆ ಹರಿದು ಬಂದಿರುವ ಈ ಕಥೆ ಪೂರ್ಣ ಸತ್ಯವಿರದಿದ್ದರೂ, ರಾಜ ರಾಜ ಚೋಳನ ಮೃತ್ಯುವಿನ ಬಗ್ಗೆಯಾಗಲಿ, ದೇವಾಲಯದ ನಿರ್ಮಾಣದ ಕಾಮಗಾರಿಯ, ಬಳಕೆಯಾದ ತಂತ್ರಜ್ಞಾನದ ಬಗ್ಗೆಯಾಗಲಿ ಯಾವುದೇ ಶಾಸನದಲ್ಲಿ ಉಲ್ಲೇಖವಾಗದಿರುವುದು, ರಾಜನ ಮಗ ತಂಜಾವೂರಿನಿಂದ ಗಂಗೈಕೊಂಡ ಚೋಳಪುರಂಗೆ ತನ್ನ ರಾಜಧಾನಿಯನ್ನು ವರ್ಗಾಯಿಸಿಕೊಳ್ಳುವುದು ಈ ಕಥೆಗೆ ಪುಷ್ಟಿ ನೀಡುತ್ತದೆ.

ಇಂದಿಗೂ ಕೂಡ ಗಣ್ಯ ವ್ಯಕ್ತಿಗಳು ಬೃಹದೀಶ್ವರ ದೇವಾಲಯಕ್ಕೆ ಭೇಟಿ ಕೊಡುವುದು ಅಪಶಕುನವೆಂದೇ ಭಾವಿಸಿ ಹಿಂಜರಿಯುತ್ತಾರೆ. ಅಲ್ಲಿಗೆ ಒಬ್ಬ ರಾಜನ ಜೀವಮಾನದ ಸಾಧನೆಯ ಸಂಕೇತವಾದ ಒಂದು ನಿರ್ಮಾಣ ಅಷ್ಟಐಶ್ವರ್ಯಗಳ ನಶ್ವರತೆಯ ಸಂದೇಶ ಸಾರುತ್ತಾ ಯುಗಗಳಿಂದ ಜಗ್ಗದೆ ಗಾಳಿ ಮಳೆ ಬಿಸಿಲುಗಳನ್ನು ಎದುರಿಸಿ ನಿಂತಂತಾಗಿದೆ.

——————————————————————————–

ಆತ ಹುಟ್ಟಿ ಬೆಳೆದದ್ದು ಮಲೆನಾಡಿನ ಯಾವುದೋ ಹಸುರಿನ ಹಳ್ಳಿಯಲ್ಲಿ. ಪ್ರಾಯಕ್ಕೆ ಬಂದಾಗ ಆಗಲೇ ನಗರದೆಡೆ ಏನೋ ಸೆಳೆತ. ಅವರಿವರಲ್ಲಿ ಕೇಳಿ ತಿಳಿದಂತೆ ಮಹಾನಗರದ ಬಗ್ಗೆ ಏನೋ ಮಹಾಕಲ್ಪನೆ ಆತನಿಗೆ. ಹೊಲ, ತೋಟದಲ್ಲಿ ಸಂತೃಪ್ತಿಯಿಂದ ಕಾಲ ಸವೆಸುತ್ತಿದ್ದ ಅಪ್ಪನ ಕೈ ಕಾಲು ಹಿಡಿದು ಸಾಲ ಮಾಡಿ ಅಂತೂ ಇಂತೂ ನಗರದ ದೊಡ್ಡ ಕಾಲೇಜಿಗೆ ಸೇರಿದ್ದಾಯಿತು. ಆಗಷ್ಟೇ ಪ್ರಪಂಚ ನೋಡಲು ಶುರುವಿಟ್ಟುಕೊಂಡಿದ್ದ ಎಳಸು ಕಣ್ಣುಗಳಿಗೆ ಎಲ್ಲರೂ ತನ್ನನ್ನು ಗಮನಿಸಬೇಕೆಂಬ ಆಸೆ. ನಗರದ ಶ್ರೀಮಂತ ಹುಡುಗರಂತೆ ದುಬಾರಿ ವೇಷಭೂಷಣ ಮಾಡಿಕೊಂಡದ್ದಾಯಿತು, ವಾಕ್ಚಾತುರ್ಯವನ್ನು ಉಪಯೋಗಿಸಿಕೊಂಡು ತರಗತಿಯ ಮುಖಂಡ, ಆಮೇಲೆ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದು ಕೂಡ ಆಯಿತು. ಪ್ರತಿಷ್ಟೆಯ ಪ್ರಶ್ನೆಯೆಂಬಂತೆ, ಕಾಲೇಜಿನ ಮೊದಲ ದಿನವೇ ಮನಸ್ಸಿಗೆ ಹಿಡಿಸಿದ್ದ ಸಾದಾ ಸೀದಾವಾಗಿದ್ದ ಕಾಲಿಗೆ ಗೆಜ್ಜೆ ಕಟ್ಟಿಕೊಂಡೇ ದಿನಾ ಕ್ಲಾಸಿಗೆ ಬರುತ್ತಿದ್ದ ಹುಡುಗಿಯನ್ನು ಮರೆತು, ತನ್ನ ಮೈಮಾಟದಿಂದಲೇ ಕಾಲೇಜಿನ ಎಲ್ಲಾ ಹುಡುಗರ ಸ್ವಪ್ನ ಸುಂದರಿಯಂತಿದ್ದ ಇನ್ನೊಬ್ಬಳನ್ನು ಒಲಿಸಿಕೊಂಡು ಉಳಿದೆಲ್ಲಾ ಹುಡುಗರ ಅಸೂಯೆಯ ದೃಷ್ಟಿಗೆ ಪಾತ್ರನಾಗಿ ಒಳಗೊಳಗೇ ಖುಷಿಪಟ್ಟದ್ದೂ ಆಯಿತು. ಕಾಲೇಜು ಮುಗಿಯುತ್ತಲೇ ಆಕೆ ವಿದೇಶದಲ್ಲಿ ನೆಲೆಸಿದ್ದ ಶ್ರೀಮಂತನನ್ನು ಮದುವೆಯಾಗಿ ಹಾರಿ ಹೋಗಿದ್ದನ್ನು ನೆನೆಸಿಕೊಂಡೇ ಇನ್ನಷ್ಟು ಆಕ್ರೋಶಿತನಾಗಿ ಸೇಡು ತೀರಿಸಿಕೊಳ್ಳಲೆಂಬಂತೆ ಹಠ ಹಿಡಿದು ಒದ್ದಾಡಿ ದೊಡ್ಡದೊಂದು ಸಂಸ್ಥೆಯಲ್ಲಿ ಕೆಲಸ ಗಳಿಸಿದ್ದಾಯಿತು. ಸಾಧನೆಯ ಭೂತ ಹತ್ತಿದಂತೆ ವೃತ್ತಿಜೀವನದ ಮಜಲುಗಳನ್ನು ಅತಿ ವೇಗವಾಗಿ ಏರಿ, ಮಾಡುತ್ತಿದ್ದ ನೌಕರಿ ಸಾಕೆನಿಸಿ ತನ್ನದೇ ಹೊಸ ವ್ಯವಹಾರವನ್ನು ಮಾಡಲು ಹೊಸ ಸಂಸ್ಥೆ ಶುರು ಮಾಡಿದ್ದಾಯಿತು. ತನ್ನ ಅಂತಸ್ತಿಗೆ ಸರಿ ಹೊಂದುವ ಶ್ರೀಮಂತ ಮನೆತನದ ಹುಡುಗಿಯನ್ನು ಒಲಿಸಿ, ವರಿಸಿ ಎಂದೋ ಮರೆತಂತಿದ್ದ ಅಪ್ಪ ಅಮ್ಮನ ಊರಿಗೆ ಹೋಗಿ ಕಾಲಿಗೆ ಬಿದ್ದದ್ದಾಯಿತು. ಪೋಷಕರನ್ನು ಊರಲ್ಲಿಯೇ ಬಿಟ್ಟು ಅವರಿಗೆ ಅವಶ್ಯಕತೆಯಿಲ್ಲದ ಹಣವನ್ನು ತಿಂಗಳು ತಿಂಗಳು ಅವರಿಗೆ ಕಳುಹಿಸಿಕೊಡುತ್ತಾ, ಧನ್ಯತೆಯ ಭಾವದಲ್ಲಿ ತನ್ನನ್ನು ತಾನು ತೇಲಿಸಿಕೊಂಡದ್ದಾಯಿತು. ತಾನು ತನ್ನ ಹೆಂಡತಿ ಇಬ್ಬರು ಮಾತ್ರ ತಿರುಗಲು, ಅವನಪ್ಪ ಇಡೀ ಜೀವಮಾನದಲ್ಲಿ ಸಂಪಾದಿಸಿರಬಹುದಾದ ಹಣವನ್ನು ತೆತ್ತು, ಸುತ್ತ ಮುತ್ತಲಿನ ೩ ಮನೆಯವರು ಕುಳಿತುಕೊಳ್ಳಬಹುದಾದ ದೊಡ್ಡ ಗಾಡಿಯನ್ನು ಖರೀದಿಸಿದ್ದಾಯಿತು. ಇಡೀ ಕೌರವ ಸಂತಾನವನ್ನು ತನ್ನೊಳಗೆ ಹೊಂದಿಸಿಕೊಳ್ಳಬಹುದಾದಷ್ಟು ಬಹುಮಹಡಿಗಳ ದೊಡ್ಡ ಬಂಗಲೆ ಕಟ್ಟಿಸಿದ್ದಾಯಿತು. ಹುಟ್ಟಿದ ಗಂಡು ಮಗುವಿಗೆ ಗುರುತವಿರುವವರು ಯಾರೂ ಇಟ್ಟಿರದಂಥ, ಎಂದೂ ಕೇಳರಿಯದ ಯಾವುದೋ ವೇದದಲ್ಲಿ ಯಾವುದೋ ಅರ್ಥ ಕೊಡುವಂತಹ ಕ್ಲಿಷ್ಟಕರವಾದ ಒಂದು ಹೆಸರನ್ನು ಆರಿಸಿ ನಾಮಕರಣ ಮಾಡಿದ್ದಾಯಿತು. ಮಗುವನ್ನು ಊರಲ್ಲೇ ಕೇಳರಿಯದಷ್ಟು ಹಣ ಕೀಳುವಂತಹ, ವ್ಯಾವಹಾರಿಕ ಉದ್ದೇಶವನ್ನಷ್ಟೇ ಮುಂದಿಟ್ಟುಕೊಂಡಿರುವ ಅಂತರಾಷ್ಟ್ರೀಯ ಶಾಲೆಗೆ ಪ್ರತಿಷ್ಟೆಯ ಸಂಕೇತವೆಂಬಂತೆ ಸೇರಿಸಿದ್ದಾಯಿತು. ಇಷ್ಟೆಲ್ಲಾ ಮಾಡಿ, ವಿದೇಶಕ್ಕೆ ಹಾರಿ ಅಲ್ಲಿ ಮತ್ತೆ ಹೊಸದಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಪ್ರಯತ್ನ ಮಾಡುತ್ತಾ ತಂದೆ ಸತ್ತಾಗ ಚಿತೆಗೆ ಬೆಂಕಿಯಿಡಲು ಕೂಡಾ ಪುರುಸೊತ್ತಿಲ್ಲದಂತೆ ಕೆಲಸದಲ್ಲಿ ಮಗ್ನನಾಗಿ ದುಡಿದು ತನ್ನ ಸಂಸ್ಥೆಯನ್ನು ಬೆಳೆಸಿದ್ದಾಯಿತು. ಅಪ್ಪನಿಗೆ ಕೊಡಲಾಗದ ಸಮಯವನ್ನು ಮಗನಿಗೆ ಹೇಗೆ ಕೊಟ್ಟಾನು? ಅಪ್ಪನಿಗಿಂತ ಹೆಚ್ಚಾಗಿ ದುಡ್ಡಿನ ಮುಖವನ್ನೇ ನೋಡಿದ ಮಗನಿಗೆ ಅಪ್ಪ ನಿಧಾನಕ್ಕೆ ದೂರವಾಗುತ್ತಾನೆ. ಯಾವ ಅಪ್ಪ ತನ್ನ ಯೌವ್ವನದಲ್ಲಿ ತನ್ನ ತಂದೆ ತಾಯಿಯ ಪ್ರೀತಿಯ ಮಹತ್ವವನ್ನು ಕಡೆಗಣಿಸಿದನೋ ಅವನ ಮಗ ತನ್ನ ಯೌವ್ವನದಲ್ಲಿ ಅಪ್ಪ ಮಾಡಿಟ್ಟ ಹಣದ ಮೇಲಿನ ಮಹತ್ವವನ್ನು ಕಳೆದುಕೊಳ್ಳುತ್ತಾನೆ. ತನಗೆಂದೂ ಸಿಗದ ಪ್ರೀತಿಯನ್ನು ಹುಡುಕುತ್ತಾ ಹೋಗಿ ಈತನಿಂದ ದೂರವಾಗುತ್ತಾನೆ. ಅಪ್ಪ ಸಂಬಂಧಗಳನ್ನು ಕಡೆಗಣಿಸಿ ಬೆಳೆಸಿದ ಸಂಸ್ಥೆ ನೋಡಿಕೊಳ್ಳುವರಿಲ್ಲದೆ ಯಾರೋ ಬೇನಾಮಿಗಳ ಪಾಲಾಗುತ್ತದೆ. ಕಡೆಗೆ ಸಾವಿನ ಹೊಸ್ತಿಲಿನಲ್ಲಿ ಆತನಿಗೆ ತನ್ನ ಜೀವನದ ಕಡೆಗೆ ತಿರುಗಿ ನೋಡಿದಾಗ ತೋರುವುದು ಬರಿ ಶೂನ್ಯ.

—————————————–

ದೂರದಲ್ಲೊಂದು ಬೆಟ್ಟದ ಬುಡದಲ್ಲಿ ಮಾವಿನ ಮರಗಳ ತೋಪಿನ ಮಧ್ಯದಲ್ಲೊಂದು ಪುಟ್ಟ ಹಳ್ಳಿ. ಹಳ್ಳಿಗೆ ಹೋಗಲು ಇರುವುದು ಕೇವಲ ಮಣ್ಣಿನ ದಾರಿ. ಹಳ್ಳಿಯಲ್ಲಿರುವುದು ಕೇವಲ ಹತ್ತು ಹದಿನೈದು ಗುಡಿಸಲುಗಳು.
ಹಳ್ಳಿ ಜನರ ಆಕಾಂಕ್ಷೆಗಳು ಹೆಚ್ಚೇನಿಲ್ಲ. ನಾಡಿದ್ದಿರ ಬಗ್ಗೆ ಅವರಿಗೆ ಚಿಂತೆಯಿಲ್ಲ. ತಮ್ಮ ಹಸಿವು ನೀಗಿಸುವ ಆಹಾರವನ್ನು ಅವರೇ ಮನೆಯಂಗಳದಲ್ಲಿ ಬೆಳೆಯುತ್ತಾರೆ. ಹೆಚ್ಚಾಗಿರುವುದನ್ನು ದೂರದೂರಿಗೆ ಹೋಗಿ ಮಾರಿ ಅಲ್ಪ ಸ್ವಲ್ಪ ಹಣ ಗಳಿಸುತ್ತಾರೆ. ಅಂಥದ್ದೇ ಒಂದು ಪುಟ್ಟ ಗುಡಿಸಲಿನ ಒಳಗಿನ ಒಂದು ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗುವಿನ ಕಣ್ಣಲ್ಲಿ ಗಾಢ ನಿದ್ರೆ. ನಿದ್ರೆಯೊಳಗೆ, ರಾತ್ರಿ ಮನೆಯಂಗಳದಿಂದ ಹೊರಬಂದು ನೋಡಿದರೆ ತೋರುವ ಸ್ವಚ್ಛ ಆಕಾಶದ ತುಂಬಾ ಮಿರಿ ಮಿರಿ ಮಿಂಚುವಂಥ ನಕ್ಷತ್ರಗಳಂಥ ಕನಸು.

 

—————————————————————————–

Reference:
http://secretofcholas.blogspot.in/2013/01/mysteries-of-tanjore-big-temple.html
http://undiscoveredindiantreasures.blogspot.in/2011/06/brihadeeswara-temple-in.html
https://en.wikipedia.org/wiki/Brihadeeswarar_Temple
http://www.phenomenalplace.com/2015/12/indian-king-raja-raja-cholas-mysterious.html?showComment=1472793200529#c2422476775594208297

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)