ಹೊಸ ಬೀಣೆಚೀಲ

ಸುಮಾರು ೧೮ ವರ್ಷಗಳ ಹಿಂದೆ ನಾನು ನೋಡಿದ ಬಿಟಿಎಂ ಲೇಔಟ್ ಈಗಿನಂತಿರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳು ಮತ್ತು ಕೆಲವು ಮನೆಗಳಿದ್ದವು. ಆದರೆ  ಈಗ ಧೂಳು ಕೂಡ ಹಾರಾಡಲು ಜಾಗವಿರದಂತೆ ಈ ಊರು ತುಂಬಿಕೊಂಡಿದೆ. ಎಲ್ಲೆಲ್ಲಿಂದಲೋ ಬಂದ ಜನರು ಇದು ನಮ್ಮದೇ ಊರೇ ಎಂದು ಸಂದೇಹ ಬರುವಷ್ಟರ ಮಟ್ಟಿಗೆ ಇದನ್ನು ಬದಲಾಯಿಸಿ ಬಿಟ್ಟಿದ್ದಾರೆ. ಈ ಊರು, ಆ ಊರು ಎಂದೇನಿಲ್ಲ; ಬದಲಾವಣೆ ಎಲ್ಲ ವಿಧದಲ್ಲೂ ಗೋಚರಿಸುತ್ತದೆ. ಒಂದು ಕಾಲದಲ್ಲಿ ಮಾರುತಿ ಕಾರು ಇಟ್ಟುಕೊಳ್ಳುವುದು ಊರಿನ ಶ್ರೀಮಂತ ವ್ಯಕ್ತಿ ಮಾತ್ರ. ಆತ ಕೂಡ ಮನೆ ಮಂದಿಯೊಡನೆ ಹೋಗುವುದಾದರೆ ಮಾತ್ರ ಕಾರನ್ನು ರಸ್ತೆಗಿಳಿಸುತ್ತಿದ್ದದ್ದು. ಇಂದು ಹಾಗಲ್ಲ. ಮಿನಿ ಲಾರಿಯಂತಿರುವ ಕಾರಿನಲ್ಲಿ ಒಬ್ಬರೇ ಕೂತು ಪ್ರಯಾಣಿಸುತ್ತಾರೆ. ಒಂದು ಕಾಲದಲ್ಲಿ ಲಕ್ಷುರಿ ಎಂದು ಪರಿಗಣಿಸಲಾಗಿದ್ದ ಟೆಲಿವಿಷನ್, ಫೋನ್, ಎಸಿ ಇತ್ಯಾದಿಗಳೆಲ್ಲ ಇಂದಿನ ಅಗತ್ಯಗಳಾಗಿವೆ. ತಂತ್ರಜ್ಞಾನ ಬೆಳೆದಂತೆ ಅದಕ್ಕೆ ಒಗ್ಗಿಕೊಂಡು ಮನುಕುಲ ಕೂಡ ಬೆಳೆಯುತ್ತದೆ. ಇಂದು ಒಂದನೇ ತರಗತಿಗೆ ಹೋಗುವ ಮಗು, ಅಜ್ಜ ಅಜ್ಜಿಯರಿಗೆ ಫೋನ್ ಹೇಗೆ ಬಳಸಬೇಕು ಎಂದು ತಿಳಿಹೇಳುತ್ತದೆ. ಒಟ್ಟಾರೆ ಬದಲಾವಣೆ ಜಗದ ನಿಯಮ.

ಹಾಗೆಯೇ ಬದಲಾಗುತ್ತಿದೆ ಬೀಣೆಚೀಲ. ಹೊಸ ತಾಣ, ಹೊಸ ರೂಪದೊಂದಿಗೆ. ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋದ ಸಂಭ್ರಮದೊಂದಿಗೆ.

ಈ ಬದಲಾವಣೆಗೆ ಮುಖ್ಯ ಕಾರಣಕರ್ತರಾದ ನಿತಿನ್ ಹೊಳ್ಳ ಹಾಗೂ ಬೀಣೆಚೀಲಕ್ಕೆ ಸುಂದರವಾದ ಲೋಗೋ ವಿನ್ಯಾಸಗೊಳಿಸಿದ ರಜತ್ ರಾಜ್ ರಾವ್ ಅವರಿಗೆ ಅನಂತ ಧನ್ಯವಾದಗಳು.

ಸಮಯವಿದ್ದಲ್ಲಿ ಭೇಟಿಕೊಡಿ, ತಪ್ಪಿದ್ದಲ್ಲಿ ಟೀಕಿಸಿ.

3 Comments