Notice: Undefined index: rcommentid in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 348

Notice: Undefined index: rchash in /home/u564312884/domains/beenecheela.in/public_html/wp-content/plugins/wp-recaptcha/recaptcha.php on line 349
ಚಿಕ್ಕ ಮೇಳ - ಬೀಣೆ ಚೀಲ

ಚಿಕ್ಕ ಮೇಳ

ಸಾಮಾನ್ಯವಾಗಿ ಕರಾವಳಿಯ ಯಕ್ಷಗಾನದ ಮೇಳಗಳು ವರ್ಷವಿಡೀ ಸುತ್ತಾಟ ನಡೆಸಿ ಸುಸ್ತಾಗಿ ಮಳೆಗಾಲದ ಸಮಯದಲ್ಲಿ ವಿರಾಮಕ್ಕಾಗಿ ಹಾಗು ಹೆಚ್ಚಿನ ಕಲಾಕಾರರು ರೈತರೂ ಕೂಡ ಆಗಿರುವುದರಿಂದ, ಬೇಸಾಯ ಮಾಡುವ ಸಲುವಾಗಿ ಮಳೆಗಾಲದ ಸಮಯದಲ್ಲಿ ಯಾವುದೇ ಯಕ್ಷಗಾನ ಪ್ರದರ್ಶನಗಳು ನಡೆಯುವುದಿಲ್ಲ. ಆದರೆ ಕೆಲ ಕಲಾವಿದರು ಈ ಬಿಡುವಿನ ಸಮಯದಲ್ಲಿ ಯಕ್ಷಗಾನವನ್ನು ಮನೆ ಬಾಗಿಲಿಗೆ ತರುವ ಚಿಕ್ಕ ಪ್ರಯತ್ನವನ್ನು ಮಾಡುತ್ತಾರೆ. ಅವರ ಈ ಚಿಕ್ಕ ಪ್ರಯತ್ನದ ಫಲವೇ ಚಿಕ್ಕ ಮೇಳ.

ಚಿಕ್ಕ ಮೇಳವೆಂದರೆ 2 ಪಾತ್ರಧಾರಿಗಳ, ಒಬ್ಬ ಭಾಗವತ ಹಾಗು ಒಬ್ಬ ಮೃದಂಗ ವಾದಕರ ಒಂದು ಚಿಕ್ಕ ಗುಂಪು. ಮಳೆಗಾಲದ ಸಮಯವಾದ ಆಗಸ್ಟ್ ತಿಂಗಳಿನಲ್ಲಿ ಈ ಮೇಳದ ಸಂಚಾಲಕರು ಪರಿಚಯದವರ ಮನೆಗಳಿಗೆ ತಿರುಗಿ, ತಾವು ಪ್ರದರ್ಶನ ನೀಡಲಿರುವ ದಿನಾಂಕವನ್ನು ಒಂದು ಚಿಕ್ಕ ಹಾಳೆಯಲ್ಲಿ ಮುದ್ರಿಸಿ ಹಂಚುತ್ತಾರೆ. ಆಸಕ್ತ ಮನೆಯವರು ಅವರನ್ನು ಬರಮಾಡಿಕೊಳ್ಳ ಬಯಸಿದಲ್ಲಿ ಸಂಚಾಲಕರಿಗೆ ಅಂದೇ ತಿಳಿಸಬೇಕು. ಇಂದಿನ ತಲೆಮಾರಿನವರಿಗೆ ತಿಳಿಯಲೆಂದು ಅದೇ ಪತ್ರದಲ್ಲಿ, ಚಿಕ್ಕಮೇಳ ನಿಮ್ಮ ಮನೆಗೆ ಆಗಮಿಸಿದಾಗ ಪಾಲಿಸಬೇಕಾದ ಕನಿಷ್ಟ ಶಿಷ್ಟಾಚಾರಗಳು ಹಾಗು ಪಾವತಿಸಬೇಕಾದ ಕನಿಷ್ಟ ಮೊತ್ತವನ್ನು ಕೂಡ ನಮೂದಿಸಿರುತ್ತಾರೆ. ಎಂದಿನಂತೆ ಈ ವರ್ಷ ಕೂಡ ಈ ಚಿಕ್ಕ ಮೇಳದವರು ನಮ್ಮ ಮನೆಗೆ ಭೇಟಿ ನೀಡಿ, 10 ನಿಮಿಷಗಳ ಚಿಕ್ಕ, ಚೊಕ್ಕದಾದ ಒಂದು ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಿದರು.


ಹಿಂದಿನ ಕಾಲದ ಯಕ್ಷಗಾನ ಪ್ರಸಂಗಗಳು ಸಂಜೆ ಹೊತ್ತಿಳಿಯುತ್ತಿದ್ದಂತೆ ಕೋಡಂಗಿಗಳ ಕುಣಿತದೊಂದಿಗೆ ಶುರುವಾಗುತ್ತಿದ್ದವು. ಕೋಡಂಗಿಗಳು ಹೊಸದಾಗಿ ಮೇಳಕ್ಕೆ ಸೇರಿರುವ ವಿದ್ಯಾರ್ಥಿಗಳು. ಅವರ ಪ್ರದರ್ಶನ ಬರಿ ಸ್ವಂತ ಅಭ್ಯಾಸಕ್ಕಷ್ಟೇ. ಇನ್ನೇನು ಆಟ ಶುರುವಾಗಿಯೇ ಬಿಟ್ಟಿತು ಎಂದು ಮೇಳದವರು ಊರಿನ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸುತ್ತಿದ್ದ ಪರಿ ಅಷ್ಟೇ. ಅಸಲಿ ಪ್ರಸಂಗ ಸುಮಾರು ೮ರ ಹಾಗೆ ಶುರುವಾದರೆ ಮರುದಿನ ಮುಂಜಾನೆ ೬ರ ತನಕವೂ ಮುಂದುವರೆಯುತ್ತಿತ್ತು. ಇತರೆ ಪಾತ್ರಧಾರಿಗಳಿಗೆ ಅಲ್ಲಲ್ಲಿ ಚಿಕ್ಕ ದೊಡ್ಡ ವಿರಾಮಗಳು ದೊರೆಯುತ್ತಿದ್ದವಾದರೂ, ಮುಖ್ಯ ಪಾತ್ರಧಾರಿಗೆ ಈ ಸುಮಾರು ೯ ಗಂಟೆಗಳ ಅವಧಿಯುದ್ದಕ್ಕೂ ವೇಷ ಧರಿಸಿಯೇ ಆ ಪಾತ್ರದಲ್ಲಿಯೇ ತನ್ನನ್ನು ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆ. ಪ್ರಸಂಗ ಮುಗಿದ ಮೇಲೆ ತಿಂಡಿ ತಿಂದು ಮನೆ ಸೇರಿ ಮಲಗಿದರೆ ಪೂರ್ತಿ ಎಚ್ಚರವಾಗುವುದು ಸಂಜೆಯ ಹೊತ್ತಿಗೇ. ಅದಾಗಲೇ ಊರಿನ ಮತ್ತೆಲ್ಲೋ ಆಗಲೇ ಮೇಳದ ವೇದಿಕೆ ಸಿದ್ಧವಾಗಿರುತ್ತದೆ. ಮತ್ತದೇ ವೇಷ, ಮತ್ತೆ ಅಭಿನಯ. ದಿನದ ೨೪ ಘಂಟೆಗಳಲ್ಲಿ, ಪಾತ್ರದ ಒಳಗೆ ಹೊಕ್ಕಿದ ಆ ೯ ಘಂಟೆಗಳ ಕಾಲ ಮಾತ್ರ ಕಲಾವಿದನ ಮನಸ್ಸು ಸಂಪೂರ್ಣ ವರ್ತಮಾನದ ಅರಿವಿನ ಸ್ಥಿತಿಯಲ್ಲಿ ಇರುತ್ತಿದ್ದಿರಬಹುದೇ. ಹಾಗಾದರೆ ಆತ ಬದುಕುತ್ತಿದ್ದದ್ದು ತನ್ನ ಸ್ವಂತ ಅಸ್ಥಿತ್ವದ ಬದುಕನ್ನೋ ಅಥವಾ ಅಭಿನಯಿಸುತ್ತಿದ್ದ ಪಾತ್ರದ ಬದುಕನ್ನೋ? ಭೀಷ್ಮನ ವೇಷದಲ್ಲಿದ್ದಾಗ ಭಲೇ ಎಂದು ಹೊಗಳಿಸಿಕೊಳ್ಳುತ್ತಿದ್ದ ಪಾತ್ರಧಾರಿ, ಬಣ್ಣ ಕಳಚಿದ ಮೇಲೆ ಅತಿ ಸಾಮಾನ್ಯ. ಇರುಳಿನಲ್ಲಿ ತಾನು ಸ್ವಯಂ ಬಣ್ಣ ಹಚ್ಚಿ ವೇಷ ಭೂಷಣ ತೊಟ್ಟು ಅಭಿನಯಿಸುತ್ತಿದ್ದ ಪಾತ್ರ ಆತನ ಅಸ್ಥಿತ್ವವೇ? ಹಗಲಿನಲ್ಲಿ ಸುಳ್ಳೇ ಬಣ್ಣ ತೊಟ್ಟ ಪ್ರಪಂಚವನ್ನು ಅರೆಪ್ರಜ್ಞಾವಸ್ಥೆಯಲ್ಲಿ ಎದುರಿಸುವ ವ್ಯಕ್ತಿ ಆತನ ನಿಜವಾದ ಅಸ್ಥಿತ್ವವೇ?


ಬೆಂಗಳೂರು ಮೈಸೂರಿನ ನಡುವಿನ ರಸ್ತೆ ಅಗಲೀಕರಣಗೊಳ್ಳುತ್ತಿದೆ. ಕಾಮಗಾರಿ ಸಂಪೂರ್ಣಗೊಂಡ ಮೇಲೆ ಇನ್ನೇನು ಬರೀ ೧ ಗಂಟೆ ೩೦ ನಿಮಿಷ ಸಾಕಾಗಬಹುದೇನೋ ಈ ದೂರ ಕ್ರಯಿಸಲು. ದೇಶದುದ್ದಕ್ಕೂಈಗ ಹೆದ್ದಾರಿಗಳದ್ದೇ ಕಾರುಬಾರು. ಹೆದ್ದಾರಿಗಳ ನಡುವೆ ಉಳ್ಳವರ ಜೇಬು ಖಾಲಿ ಮಾಡಲು ಎದ್ದು ನಿಂತಿವೆ ಭವ್ಯ ಹೋಟೆಲುಗಳು ಹಾಗು ಹಣ ಕಕ್ಕಿಸಿಕೊಂಡು ತನ್ನಿಂದ ತಾನೇ ತೆರೆದುಕೊಳ್ಳುವ ದುಬಾರಿ ಶುಲ್ಕ ವಸೂಲಾತಿ ಕೇಂದ್ರಗಳು. ಎಲ್ಲಿಯೂ ಕಾಲ ವ್ಯಯಿಸಲು ನಮಗೆ ಮನಸ್ಸಿಲ್ಲ. ಬೇಗನೆ ಊರು ತಲುಪಬೇಕು. ಅಂಚೆಯಲ್ಲಿ ಪತ್ರ ಕಳಿಸಿ ಉತ್ತರಕ್ಕೆ ಕಾಯಲು ವ್ಯವಧಾನ ಯಾರಿಗಿದೆ? ಕ್ಷಣಾರ್ಧದಲ್ಲಿ ತಲುಪುವ ಚಿಕ್ಕ ಮೆಸೇಜುಗಳಲ್ಲಿ ಅರ್ಧ ಪದಗಳನ್ನು ಬೇಗನೆ ಟೈಪಿಸಿ ಸುತ್ತಲಿರುವ ಜನರ ಮಧ್ಯೆಯೂ ಸಲ್ಲದೇ, ಬರದಿರಬಹುದಾದ ಉತ್ತರಕ್ಕಾಗಿ ಕಾಯುವ ತ್ರಿಶಂಕು ಜನಾಂಗ ನಮ್ಮದು.
ದೇಶ ವಿದೇಶದ ಯಾವುದೋ ಮೂಲೆಯಲ್ಲಿನ ಅನಾವಶ್ಯಕವಾದ ಸುದ್ಧಿ ನಡೆಯುತ್ತಿದಂತೆ ನಮ್ಮ ಕೈ ಬೆರಳಿನಲ್ಲಿ ಮಿಂಚಿ ಮಾಯವಾಗುತ್ತದೆ. ದಿನೇ ದಿನೇ ಹೆಚ್ಚು ವೇಗವಾಗಿ ಚಲಿಸಬಲ್ಲ ವಾಹನಗಳು ಮಾರುಕಟ್ಟೆಯಿಂದ ರಸ್ತೆಗಿಳಿಯುತ್ತವೆ. ದೇವಸ್ಥಾನಗಳಲ್ಲಿ ಉದ್ದುದ್ದದ ಸರದಿಯಲ್ಲಿ, ಅಂಗಿ ಬಿಚ್ಚಿದ ಮಹಾಭಕ್ತರ ಬೆವರು ತಾಗಿಸಿಕೊಂಡು ಗಂಟೆಕಟ್ಟಲೆ ಕಾಯುವ ಗೋಳು ಯಾರಿಗೆ ಬೇಕು? ೫೦೦ ರೂಪಾಯಿ ಚೆಲ್ಲಿದರೆ ದೇವರು ಕೂಡ ಚಿಕ್ಕ ಸರದಿಯಿಂದ ಕರೆಸಿಕೊಂಡು ಶೀಘ್ರ ದರ್ಶನ ಕೊಡುತ್ತಾನೆ. ಮಾರುಕಟ್ಟೆಗೆ ಹೋಗಿ ಚರ್ಚೆ ಮಾಡಿ ತರಕಾರಿ ಯಾರ್ರೀ ತರ್ತಾರೆ? ತಂಪಾಗಿ ಮನೆಯ ಸೋಫಾದಲ್ಲಿ ಕೂತು ಖರೀದಿ ಮಾಡಿದ ಸೊಪ್ಪು ತರಕಾರಿಗಳು ಸಂಜೆಯೊಳಗೆ ಮನೆ ಬಾಗಿಲಿಗೆ ಹಾಜರ್. ಅಂತರ್ಜಾಲದಲ್ಲಿ ಹುಡುಕಿದ್ದೆಲ್ಲ ಕಣ್ಣು ಮಿಟುಕಿಸುವುದರಲ್ಲಿ ಮುಂದೆ ತಂದು ಇಡುವಷ್ಟು ವೇಗದ ವ್ಯವಸ್ಥೆಯನ್ನು ಕೊಡಲು ನಾ ಮುಂದು ತಾ ಮುಂದು ಎಂದು ಭರ್ತಿ ಜೇಬಿನ ಸಂಸ್ಥೆಗಳು ಪೈಪೋಟಿಗಿಳಿದಿವೆ. ಸಂದೇಹ ಬಂದ ವಿಷಯಗಳನ್ನು ಸ್ಪಷ್ಟಗೊಳಿಸಿಕೊಳ್ಳಲು ಗ್ರಂಥಾಲಯಗಳನ್ನು ಹೊಕ್ಕಿ ಧೂಳು ಹಿಡಿದ ಪುಸ್ತಕಗಳ ಮುಂದೆ ಗಂಟೆಗಟ್ಟಲೆ ಸಮಯ ಕಳೆಯಬೇಕಾಗಿಲ್ಲ. ಶ್ರದ್ಧಾಳುಗಳ ಆಜ್ಞೆಯ ಮೇರೆಗೆ ಪುರೋಹಿತರು ಕೂಡ ಸತ್ಯನಾರಾಯಣ ಪೂಜೆಯ ಸಾರಾಂಶವನ್ನು ೫ ನಿಮಿಷದಲ್ಲಿ ಮುಗಿಸಿ ಬಿಡುವ ಪಾಂಡಿತ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ದೂರದೂರಿನ ಸಂಬಂಧಿಯ ಮುಖ ನೋಡಿ ಮಾತನಾಡಿಸಿಕೊಂಡು ಬರಲು ತಾಸುಗಟ್ಟಲೆ ಪ್ರಯಾಣ ಮಾಡುವ ಹಕೀಕತ್ತು ನಮಗಿಲ್ಲ. ಪ್ರಪಂಚ ಅಂಗೈ ಬೆರಳ ತುದಿಗೆ ಬಂದು ನಿಂತಿದೆ. ೫ ದಿನದ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ, ಒಂದು ದಿನದ ಆಟವಾಗಿ, ಇಂದು ಬರಿ ೩ ಗಂಟೆಯ ಮನೋರಂಜನೆಯಾಗಿ ಪರಿವರ್ತಿತವಾಗಿದೆ.
ವೇಗವು ಬದುಕಿನ ಎಲ್ಲ ಆಯಾಮಗಳನ್ನು ಹಾಸು ಹೊಕ್ಕಿ, ವ್ಯಯಿಸಿ ಹೋಗುತ್ತಿದ್ದ ಕಾಲವನ್ನು ಹೆಡೆಮುರಿ ಕಟ್ಟಿ ಪಳಗಿಸಿದ ಭ್ರಮೆ ತೋರಿಸಿದೆ. ನಿಧಾನವೇ ಪ್ರಧಾನವೆನ್ನುವ ವಾಕ್ಯ ರಾಜ್ಯ ಹೆದ್ದಾರಿ ಬದಿಗೆ ತೋರುವ ಫಲಕಕ್ಕಷ್ಟೇ ಸೀಮಿತ.


Paintings by Victor Bauer: "Walking Man"
Paintings by Victor Bauer: “Walking Man”

ಸಮಯವನ್ನು ಪಳಗಿಸಿದ ಸಮಾಜ, ಉಳಿಸಿದ ಸಮಯದೊಂದಿಗೆ ಏನು ಮಾಡುತ್ತಿದೆ ಎಂಬುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ. ಮನೆಯಲ್ಲಿ ಕಾದಿರುವ ಮಗುವಿನೊಂದಿಗೆ ಆಡಲು ಅಪ್ಪನಿಗೆ ಸಮಯವಿಲ್ಲ. ತಂದೆ ತಾಯಿಯರ ಜೊತೆ ಕೂತು ಮಾತನಾಡಲು ಮಗನಿಗೆ ಕೆಲಸದ ಒತ್ತಡ. ಪುಸ್ತಕದಲ್ಲಿ ಅಡಗಿರುವ ಚಂದವಾದ ಕಥೆ ಓದಲು ನಮಗೆಲ್ಲಿದೆ ಸ್ವಾಮಿ ಸಮಯ? ಹೂದೋಟದಲ್ಲಿ ಬಣ್ಣ ಬಣ್ಣದ ಗಿಡ ಬೆಳೆಸಲು, ಕುಂಚ ಹಿಡಿದು ಚಿತ್ರ ಬಿಡಿಸಲು, ಕುಳಿತುಕೊಂಡು ಉತ್ತಮವಾದ ಸಂಗೀತವನ್ನು ಆಸ್ವಾದಿಸಲು, ರುಚಿಕರವಾದ ಹೊಸ ಅಡುಗೆ ಕಲಿಯಲು, ಕಲಿತದ್ದರ ಸೂಕ್ಷ್ಮತೆಗಳನ್ನು ತಿದ್ದಿ ತೀಡಿ ಹದಗೊಳಿಸಿ ಪರಿಪೂರ್ಣತೆಯನ್ನು ಸಾಧಿಸಲು, ಹೊರಗಿನ ಮರದ ಮೇಲೆ ಹಣ್ಣು ತಿನ್ನುತ್ತಿರುವ ಅಳಿಲನ್ನು ಗಮನಿಸಲು, ಏನು ಮಾಡದೆ ಸುಮ್ಮನೆ ಏಕಾಂತದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳಲು ಯಾವುದಕ್ಕೂ ನಮಗೆ ಸಮಯವಿಲ್ಲ. ಹಾಗಾದರೆ ಇಷ್ಟೊಂದು ವೇಗವನ್ನು ಮೈಗೂಡಿಸಿಕೊಂಡು ಉಳಿಸಿದ ಸಮಯ ವ್ಯರ್ಥವಾದದ್ದರೂ ಎಲ್ಲಿ?

ಎಲ್ಲೋ ನಡೆಯುತ್ತಿರುವ, ನಮ್ಮ ಬದುಕಿಗೆ ಸಂಬಂಧವೇ ಇಲ್ಲದ ವಿಕಾರ ಘಟನೆಗಳ ಬಗ್ಗೆ ರಸವತ್ತಾಗಿ ಬಣ್ಣಿಸುವ ಮಾಧ್ಯಮಗಳ ವಿಕೃತಿಯನ್ನು ನೋಡುವುದರಲ್ಲೇ? ಹಿಂದೆಂದೂ ಭೇಟಿಯಾಗಿರದ, ಮುಂದೆಂದೂ ಭೇಟಿಯಾಗದ ಕಾಲ್ಪನಿಕ ಸಾಮಾಜಿಕ ಬಳಗ ಕಟ್ಟಿಕೊಂಡು, ನಮ್ಮನ್ನು ಇಲ್ಲದಂತೆ, ಇತರರ ಕಣ್ಣು ಕುಕ್ಕುವಂತೆ ಬಿಂಬಿಸಕೊಳ್ಳುವುದು ಹೇಗೆಂದು ಚಿಂತನೆ ಮಾಡುವುದರಲ್ಲೇ? ಇತರರು ಇಷ್ಟಿಷ್ಟೇ ತೋರುವ ತಮ್ಮ ಬದುಕಿನ ಖುಷಿಯ ತುಣುಕುಗಳನ್ನೇ ಹುಳಿ ಮನಸ್ಸು ಮಾಡಿಕೊಂಡು ಮೆಲ್ಲುತ್ತ, ನಮ್ಮ ಬದುಕಿನ ಜೊತೆ ತುಲನೆ ಮಾಡುತ್ತಾ, ಇಲ್ಲದ್ದನ್ನು ಬಯಸುತ್ತ, ಇರುವುದನ್ನು ಹಳಿಯುತ್ತ, ಸಂತೋಷದ ಭ್ರಮೆಯ ಬಾಲ ಹಿಡಿದು ಹೋಗುವುದರಲ್ಲೋ? ದುಡಿಯುವುದು ಬದುಕಲು ಎಂಬುದ ಮರೆತು ಬದುಕುವುದು ದುಡಿಯಲು ಎಂದು ಗಾಣದ ಎತ್ತಿನಂತೆ ಅದೇ ಪರಿಧಿಯ ಸುತ್ತ ತಿರುಗುತ್ತ ದೂರ ಸಾಗುತ್ತಿದ್ದೇವೆ ಎಂದು ಭ್ರಮಿಸುವುದರಲ್ಲೇ?


ಹೆದ್ದಾರಿಯಲ್ಲಿ ಧಾವಿಸುವವನಿಗೆ ರಸ್ತೆ ಬದಿಯ ಹುಲ್ಲು ಕೇವಲ ಹಸುರ ಮಸುಕು. ಗುಲಾಬಿ ಬಣ್ಣದ ಕೆಂಪು ಚುಕ್ಕೆಯ ಹೂವು ಬರಿ ಗುಲಾಬಿ ಮಸುಕು. ಹುಲ್ಲಿನ ಮೇಲಿನ ಮಂಜಿನ ಹನಿ, ಹೂವಿನ ಒಳಗೆ ಗುಂಯ್ಗುಡುತ್ತ ಜೇನು ಹೀರುವ ದುಂಬಿಯ ಸೊಗಸು ಆಸ್ವಾದಿಸುವ ಅವಕಾಶ, ಸಾವಧಾನವಾಗಿ ನಡೆದು ನಿಂತು ನೋಡುವ ನಿಧಾನಿಗಷ್ಟೇ. ಪ್ರಸಂಗದ ಸತ್ವ ಮನಕ್ಕಿಳಿಯುವುದು ಕಣ್ಣಿಗೆ ಎಣ್ಣೆ ಬಿಟ್ಟು ಮುಂಜಾವಿನ ತನಕ ಎವೆಯಿಕ್ಕದೆ ನೋಡಿದ ಯಕ್ಷಗಾನ ಆಟದಿಂದಲೇ ಹೊರತು ೧೦ ನಿಮಿಷಗಳಲ್ಲಿ ಮುಗಿದು ಹೋಗುವ ಚಿಕ್ಕ ಮೇಳದಿಂದಲ್ಲ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)