ಚಂದ್ರೋದಯ

“ಕಿಟಕಿಯಿಂದಾಚೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕರಿ ಕಪ್ಪಾದ ಅಮಾವಾಸ್ಯೆಯ ರಾತ್ರಿ. ಕಠೋರವಾದ ಕತ್ತಲು, ಅಪ್ಪನ ಮನಸ್ಸಿನ ತರಹವೇ. ಎಷ್ಟೋ ಸಲ ಅನ್ನಿಸಿದ್ದಿದೆ, ಅಪ್ಪ ದಿನಾಲು ಪೂಜೆ ಮಾಡುವ ಬೆಳ್ಯಾಡಿ ವಿಷ್ಣುಮೂರ್ತಿ ದೇವಸ್ಥಾನದ ದೇವರ ಕಲ್ಲಾದರೂ ಎಂದಾದರು ಒಲಿದೀತು ಆದರೆ ಅಪ್ಪನನ್ನು ಒಲಿಸಿಕೊಳ್ಳಲು ಅಸಾಧ್ಯ. ಶಿಸ್ತಿಗೆ, ಸಂಪ್ರದಾಯಕ್ಕೆ ಹಾಗೂ ದೂರ್ವಾಸ ಕೋಪಕ್ಕೆ ಅಪ್ಪ ಇಡೀ ಬೆಳ್ಯಾಡಿಯಲ್ಲೇ ಚಿರಪರಿಚಿತ. ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವರ ಭಯವೆಷ್ಟಿದೆಯೋ ಆ ದೇವರೇ ಬಲ್ಲ ಆದರೆ ಆ ದೇವರನ್ನು ಪೂಜಿಸುವ ಅಪ್ಪನ ಮೇಲಂತೂ ಭಯವಿದ್ದೇ ಇದೆ. ಎಷ್ಟೋ ಬಾರಿ ಪೂಜಾ ಸಮಯದಲ್ಲಿ, ಪೂಜೆಯಲ್ಲಿ ತಲ್ಲೀನರಾಗದೇ ತಮ್ಮ ತಮ್ಮಲ್ಲೇ ಲೋಕಾಭಿರಾಮ ಮಾತನಾಡಿಕೊಳ್ಳುತ್ತಿದ್ದ ಎಷ್ಟೋ ಮಂದಿಯನ್ನು ಗಮನಿಸಿ, ಅವರು ದೇವಸ್ಥಾನದಿಂದ ಹೊರ ಕಾಲಿಡುವವರೆಗೆ ಪೂಜೆಯನ್ನು ನಿಲ್ಲಿಸಿದಂತ ಭೂಪ ಅಪ್ಪ.2 ದೇವಸ್ಥಾನದ ಮೊಕ್ತೇಸರರಿಂದ ಹಿಡಿದು ಬೆಳ್ಯಾಡಿಯ ಕೆಲ ಗಣ್ಯಾತಿಗಣ್ಯ ವ್ಯಕ್ತಿಗಳ ಮನಸ್ಸಿನ ಒಳಗೇ ಅಪ್ಪನ ಬಗೆಗೆ ಅಸಮಾಧಾನವಿರುವುದು ಸುಳ್ಳಲ್ಲ. ಅಪ್ಪನ ಪೂಜಾ ಪಾಂಡಿತ್ಯ ಇವರೆಲ್ಲರ ಬಾಯಿ ಮುಚ್ಚಿಸಿದೆ ಅಷ್ಟೆ. ಅಪ್ಪನ ಸಾಮಾಜಿಕ ವರ್ತನೆ ಹಾಗು ಖಾಸಗಿ ವರ್ತನೆ ಹೆಚ್ಚೇನು ಭಿನ್ನವಿಲ್ಲ. ಅವರು ಸಂಜೆ ಪೂಜೆ ಮುಗಿಸಿ ಮನೆಗೆ ಬಂದಾಗಿಂದ ಮನೆ ತುಂಬಾ ನೀರವ ಮೌನ ಆವರಿಸಿಕೊಳ್ಳುತ್ತದೆ. ಅಮ್ಮ, ನಾನು ಹಾಗು ಅಣ್ಣ ಅಪ್ಪನೆದುರು ಗಟ್ಟಿಯಾಗಿ ಮಾತನಾಡಲು ಕೂಡ ಅಂಜುತ್ತೇವೆ. ಇರುವವರಲ್ಲಿ ಅಣ್ಣನೇ ಅಪ್ಪನಿಗೆ ಹೆಚ್ಚು ಆಪ್ತ. ಅಣ್ಣ ನನಗಿಂತ ಒಂದು ವರ್ಷ ದೊಡ್ಡವ ಅಷ್ಟೆ. ಇದೇ ಕಾರಣಕ್ಕೆ ಮಾತು ಮಾತಿಗೂ ನನ್ನ ಮತ್ತು ಆತನ ನಡುವೆ ಅಪ್ಪನ ಮನಸ್ಸಿನಲ್ಲಿ ಹೋಲಿಕೆ ನಡೆಯುತ್ತದೆ. ಪರಿಣಾಮವಾಗಿ ಮೂಡುವ ಅಸಮಾಧಾನ ಅವರ ಮಾತಿನ ಮೂಲಕ ಹೊರ ಬಂದು ನನ್ನನ್ನು ಚುಚ್ಚುತ್ತದೆ. ಅಪ್ಪನ ಪ್ರಕಾರ ಅಣ್ಣನೇ ಅವರ ಸೂಕ್ತ ಉತ್ತರಾಧಿಕಾರಿ. ಅವರ ವಾದ ನಿಜ ಕೂಡ. ಆತನಿಗಿರುವ ಪೂಜಾ ವಿಧಿವಿಧಾನಗಳ ಬಗೆಗಿನ ಆಸಕ್ತಿ ತನಗಿಲ್ಲ. ಇದೇ ಕಾರಣಕ್ಕೆ ಅವನ ಸಾಮಾನ್ಯ ಶಾಲಾ ಶಿಕ್ಷಣವನ್ನು ಅರ್ಧಕ್ಕೇ ಕಡಿತಗೊಳಿಸಿ ತಾನೇ ಖುದ್ದಾಗಿ ಸಂಸ್ಕೃತ ಪಾಠ ಮಾಡಿಸುತ್ತಿದ್ದಾರೆ. ದೇವಸ್ಥಾನದ ಉತ್ಸವದ ಸಮಯದಲ್ಲಿ ಮುಖ್ಯ ಪೂಜೆಯನ್ನು ಹೊರತು ಪಡಿಸಿ ಇತರೆ ಸೇವಾ ಪೂಜೆಗಳನ್ನು ನಿರ್ವಹಿಸುವಷ್ಟು ಅರ್ಹನನ್ನಾಗಿ ಆತನನ್ನು ಅಪ್ಪ ಸಿದ್ಧ ಪಡಿಸಿದ್ದಾರೆ.”

moon“ಉದಯಾ.. ಅದೇನು ಅರ್ಧ ರಾತ್ರಿಯ ಸಮಯದಲ್ಲಿ ಕಿಟಕಿಯ ಬಳಿ ಕೆಲಸ ನಿಂಗೆ? ಎಷ್ಟು ಸಲ ನಿನಗೆ ಬುದ್ಧಿ ಹೇಳಿಲ್ಲ ರಾತ್ರಿ ಸಮಯದಲ್ಲಿ ಕಿಟಕಿ ಬಾಗಿಲು ತೆರೆಯಬಾರದೆಂದು? ನಾನು, ನಿನ್ನ ಅಮ್ಮ ಅಥವಾ ನಿನ್ನ ಅಣ್ಣ ಬದುಕಿರುವುದು ನಿನಗೆ ಇಷ್ಟವಿಲ್ಲವೇನೋ ಮುಟ್ಠಾಳ? ಆ ಚಂಡಾಲನ ಕೈಯಲ್ಲಿ ನಾವು ಸಾಯಬೇಕೆಂಬುದು ನಿನ್ನ ಬಯಕೆಯೇನೊ?” ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ಗುರುಮೂರ್ತಿ ಹಂದೆಯವರ ಘಟವಾಣಿ ಅರ್ಧ ರಾತ್ರಿಯಲ್ಲಿ ಮಾರು ದೂರ ಕೇಳಿಸಿತು. ಕಿಟಕಿ ಬಾಗಿಲು ಮುಚ್ಚಿದ ಸಪ್ಪಳ ಹಾಗು ಬೆನ್ನಿನ ಮೇಲೆ ಚಡಿಯೇಟು ಬಿದ್ದ ಧ್ವನಿ ಅದನ್ನು ಹಿಂಬಾಲಿಸಿತು.

moon“ಕೆಲವು ತಿಂಗಳುಗಳಿಂದ ಈಚೆಗೆ ನಮ್ಮೂರು ಬೆಳ್ಯಾಡಿಯ ಜನ ಹಗಲಿಗಿಂತ ರಾತ್ರಿಯೇ ಜಾಗ್ರತವಾಗಿರುತ್ತಾರೆ. ರಾತ್ರಿ ಜಾಗರಣೆ, ಬೆಳಗ್ಗೆ ಪ್ರಸಾರಣೆ. ತಮ್ಮ ತಮ್ಮದೇ ಕಲ್ಪನೆಗಳ ಪ್ರಸಾರಣೆ. ಇದಕ್ಕೆ ಮೂಲ ಕಾರಣ ಒಬ್ಬ ನಿಶಾಚರಿ ದರೋಡೆಕೋರ. ಊರವರ ಬಾಯಿಮಾತಿನ ಸುದ್ದಿಯ ಪ್ರಕಾರ ಈತನೇನು ಸಾಮಾನ್ಯ ದರೋಡೆಕೋರನಲ್ಲ. ಪುಡಿಗಾಸಿಗಾಗಿ ಹಲವು ತಲೆ ಪುಡಿ ಮಾಡಿದವನು. ಆತನ ಚಿತ್ರಣವೇ ಚಿತ್ರ ವಿಚಿತ್ರ. ಹೆಸರು ಚಂದ್ರನ್. ಕೇರಳ ಮೂಲದವನಂತೆ. ಕರವಾಳಿಯ ಉದ್ದಕ್ಕೂ ಹಬ್ಬಿರುವ ಎಲ್ಲ ಊರುಗಳಲ್ಲಿಯೂ ಈತನ ಸಂಚಾರವಿದೆಯಂತೆ. ಆತ ನೆಲೆಸಿರುವ ಜಾಗ, ಆತನ ಕಾರ್ಯಾಚರಣೆ ಎಲ್ಲ ನಿಗೂಢ. ನಮ್ಮ ಊರಿನಲ್ಲಂತೂ ಆತನನ್ನು ಕಣ್ಣಾರೆ ಕಂಡವರಿಲ್ಲ. ಊರಿಗೆ ಬರುವ ಎಲ್ಲಾ ಅಪರಿಚಿತರ ಮೇಲೆ ಜನರಿಗೆ ಸಂಶಯ ಈಗ. ತಡರಾತ್ರಿ ಸಿನೆಮಾ ಶೋಗಳೆಲ್ಲ ರದ್ದು. ಯಕ್ಷಗಾನ ನೋಡಲು ಜನವಿಲ್ಲ. ಸೂರ್ಯ ಮುಳುಗುತ್ತಿದ್ದಂತೆ ಬೆಳ್ಯಾಡಿಯ ಎಲ್ಲಾ ಅಂಗಡಿಗಳು ಬಾಗಿಲೆಳೆದುಕೊಂಡು ಮಲಗುತ್ತವೆ. ಬೀದಿಗಳು ಜನವಿಲ್ಲದೇ ಮುಗುಮ್ಮಾಗುತ್ತವೆ. ಜನಗಳು ಒಬ್ಬೊಬ್ಬರಾಗಿ ಸಂಚರಿಸುವುದು ನಿಂತೇ ಹೋಗಿದೆ. ಅನಿವಾರ್ಯವಿದ್ದಲ್ಲಿ ಗುಂಪಿನಲ್ಲಿ ಮಾತ್ರ ಸಂಚಾರ. ಆಗಾಗ್ಗೆ ಅಕ್ಕ ಪಕ್ಕದಲ್ಲಿ ಹಸು ಕರುಗಳು, ಕೋಳಿಗಳು ರಾತ್ರಿ ಬೆಳಗಾಗುವುದರಲ್ಲಿ ನಾಪತ್ತೆಯಾಗುತ್ತವೆ. ಅಂದು ಇಡೀ ಊರು ತನ್ನೊಳಗೆ ಚಂದ್ರನ್ ನ ಉಪಸ್ಥಿತಿಯನ್ನು ಅರಿತು ಮತ್ತಷ್ಟು ಗಂಭೀರವಾಗುತ್ತದೆ. ಮತ್ತಷ್ಟು ಹೊಸ ಸುದ್ದಿಗಳು ಹರಡುತ್ತವೆ. ಅಮ್ಮ ಮನೆ ಬಿಟ್ಟು ಹೊರಗಡೆ ಹೋಗುವುದು ತೀರ ಕಡಿಮೆ. ಅಪ್ಪನಿಗೆ ಇಷ್ಟವಾಗುವುದಿಲ್ಲವೆಂಬ ಕಾರಣಕ್ಕೆ. ಆಕೆಗೆ ಊರಿನ ಸುದ್ದಿ ತಿಳಿಯುವುದು ಅಮ್ಮಿಯಿಂದ. ಅಮ್ಮಿ ನಮ್ಮನೆಗೆ ತೋಟದಲ್ಲಿ ಪುಡಿಗೆಲಸ ಮಾಡಲು ಆಗಾಗ್ಗೆ ಬರುತ್ತಿರುತ್ತಾಳೆ”.moon“ಲಕ್ಷ್ಮಮ್ಮ ವಿಷಯ ಗೊತ್ತಾಯ್ತ ನಿಮಗೆ?”
“ಏನು ವಿಷಯ ಇದ್ರೂ ನೀನೆ ಹೇಳಬೇಕಲ್ವ ನಂಗೆ” ಹಂದೆಯವರ ಹೆಂಡತಿ ಲಕ್ಷ್ಮಮ್ಮ, ಅಮ್ಮಿಯ ಪ್ರಶ್ನೆಗೆ ಉತ್ತರಿಸಿದರು.
“ಆ ಸಣ್ಣಂಗಡಿ ಪೈಗಳು ಇದ್ದಾರಲ್ಲ, ಅವರ ಮನೆ ಹತ್ರ ನಿನ್ನೆ ರಾತ್ರಿ ಹೊತ್ತಿಗೆ ಹೊರಗೆ ತೋಟದ ಹತ್ತಿರ ಏನೋ ಸದ್ದಾಯ್ತಂತೆ. ಆ ಹೊತ್ತಿಗೆ ಪೈಗಳು ಸರಿಯಾಗಿ ಉಪ್ಪಿನಕಾಯಿ ಮಸಾಲೆ ಮಾಡಲು ಮೆಣಸಿನ ಪುಡಿ ಸಿದ್ಧ ಮಾಡ್ತಾ ಇದ್ರಂತೆ. ಹೊರಗೆ ಸದ್ದಾದನ್ನು ಕೇಳಿ ಬಾಗಿಲು ತೆರೆದು ಹೊರಗೆ ಹೋಗಿ ಆಚೆ ಈಚೆ ಟಾರ್ಚ್ ಹಾಕಿ ನೋಡಿದ್ರೆ ಏನು ತೋರಲಿಲ್ಲ ಅವ್ರಿಗೆ. ವಾಪಾಸು ಮನೆಗೆ ಹೋಗೋಣವೆಂದು ತಿರುಗಿದವರಿಗೆ ತೋರಿದ್ದು ಮಿರ ಮಿರ ಮಿಂಚುವ, ಕರಿ ಕಪ್ಪು ಬಣ್ಣದ ವಿಕಾರ ಮುಖ. ಹೆದರಿಕೆಯಿಂದ ಜೀವವೇ ಕೈಗೆ ಬಂದಂತಾಗಿ ಏನು ಮಾಡಬೇಕೆಂದು ತೋಚದೆ ಮೆಣಸಿನ ಪುಡಿ ಮೆತ್ತಿದ್ದ ಕೈಯಿಂದ ಆ ಕರಿ ಮೂತಿಯನ್ನು ನೂಕಿ ಬಿಟ್ಟರಂತೆ. ಬಹುಷಃ ಮೆಣಸಿನ ಪುಡಿ ಕಣ್ಣಿನ ಒಳಗೆ ಹೋಗಿಯೋ ಏನೋ, ಪೈಗಳನ್ನು ಕಾಲಿನಿಂದ ಬಲವಾಗಿ ಒದ್ದು ಆ ಮನುಷ್ಯ ಮಲಯಾಳಿ ಭಾಷೆಯಲ್ಲಿ ಏನೋ ಕಿರಿಚಾಡುತ್ತಾ ಕತ್ತಲಲ್ಲಿ ಮರೆಯಾಯಿತಂತೆ. ಪೈಗಳು ಬದುಕಿದೆಯಾ ಬಡಜೀವವೇ ಎಂದು ಮನೆಗೆ ಬಂದು ಕೀಲಿ ಹಾಕಿಕೊಂಡಾಗಲೇ ಅವರಿಗೆ ಹೊಳೆದದ್ದು ಮನೆ ಹೊರಗೆ ಬಂದದ್ದು ಚಂದ್ರನ್ ಎಂದು. ನೋಡಿ ಅಮ್ಮ, ಚಂದ್ರನ್ ನಮ್ಮೂರಲ್ಲಿ ಇದ್ದಾನೆಂದು ಸಾಬೀತಾಯಿತು. ಸೂರ್ಯ ಮುಳುಗುತ್ತಿದ್ದಂತೆ ಇವತ್ತೇನಾಗುತ್ತದೋ ಎಂಬ ಹೆದರಿಕೆ ಶುರು ಆಗಿ ಬಿಟ್ಟಿದೆ. ಯಾವಾಗ ಈ ಮಾರಿ ನಮ್ಮೂರಿನಿಂದ ತೊಲಗುವುದೋ ಆ ದೇವರೇ ಬಲ್ಲ. ಯಾವುದಕ್ಕೂ ಸ್ವಲ್ಪ ಹುಷಾರು ಲಕ್ಷ್ಮಮ್ಮ”.
“ಹೌದಾ ಅಮ್ಮಿ? ಹೀಗೆಲ್ಲ ಆಯ್ತಂತ?” ಲಕ್ಷ್ಮಮ್ಮ ಆತಂಕದಿಂದ ಕೇಳಿದರು.
moon“ಕಥೆಗಳು. ಥರ ಥರದ ಕಥೆಗಳು. ನಮ್ಮೂರಿನ ಜನರಷ್ಟು ಕಲಾತ್ಮಕವಾಗಿ ಕಥೆ ಹೆಣೆಯಲು ಯಾರಿಗೂ ಸಾಧ್ಯವಿಲ್ಲವೇನೋ? ಈ ಚಂದ್ರನ್ ಎಂಬ ದರೋಡೆಕೋರ ನಮ್ಮೂರಿನಲ್ಲಿ ಅಸಂಖ್ಯಾತ ಕಥೆಗಾರರನ್ನು ಹುಟ್ಟುಹಾಕಿದ್ದಾನೆ. ಕೆಲವರು ಊರವರ ರಂಜನೆಗೆ ಕಥೆಗಾರರಾದವರು, ಹಲವರು ಸ್ವಂತ ಲೋಭಕ್ಕೆ ಕಥೆಗಾರರದವರು.
ಬೆಳಗ್ಗೆ ಅಮ್ಮಿ, ಅಮ್ಮನಿಗೆ ಹೇಳಿದ ಪೈಗಳು ಕೂಡ ಎರಡನೆಯ ವರ್ಗದವರು. ರಾತ್ರಿ ಸಮಯದಲ್ಲಿ ಸದ್ದಾದಾಗ ಪೈಗಳು ಧೈರ್ಯದಿಂದ ಬಾಗಿಲು ತೆರೆದು ಪರೀಕ್ಷಿಸಲೆಂದು ಹೊರ ಹೋದರೆಂಬುದು ನಂಬಲಸಾಧ್ಯವಾದ ಮಾತು. ಪೈಗಳೆಂಥಾ ಅಂಜುಬುರುಕರೆಂಬುದು ಇಡೀ ಊರಿಗೆ ತಿಳಿದ ವಿಷಯ. ಆದರೆ ಪರಿಸ್ಥಿತಿ ಜನರನ್ನು ನಂಬುವಂತೆ ಮಾಡಿದೆ.thief ಆ ನಂಬಿಕೆಯ ಉಪಯೋಗವನ್ನು ಪೈಗಳಂಥಾ ಜನ ತಮ್ಮ ಶಕ್ತಿಯನುಸಾರ ಬಳಸಿಕೊಳ್ಳುತ್ತಾರೆ. ಪೈಗಳ ಕಥೆ, ಅವರ ಅಂಗಡಿಯ ಮೆಣಸಿನ ಪುಡಿ ಚಂದ್ರನ್ ನನ್ನು ಓಡಿಸಿದ ಸಾರಾಂಶ ಹೇಳುತ್ತದೆ. ನಾಳೆ ಪೈಗಳ ಅಂಗಡಿಯಲ್ಲಿ ಭರದಿಂದ ಮೆಣಸಿನ ಪುಡಿಯ ವ್ಯಾಪಾರ ನಡೆಯುತ್ತದೆ. ಕಳೆದೆರಡು ತಿಂಗಳುಗಳಿಂದ ಊರಿನಲ್ಲಿ ನಡೆಯುತ್ತಿರುವುದು ಇಂತಹದೆ ವಿದ್ಯಮಾನಗಳು. ವ್ಯಾಪರವಿಲ್ಲದೇ ಕಂಗೆಟ್ಟಿದ್ದ ಕಮ್ಮಾರ ಶಂಭು, ಪರಿಸ್ಥಿತಿಯ ಲಾಭ ಪಡೆದು ಥರೇವಾರಿ ಚಿಕ್ಕ ಚಿಕ್ಕ ಆಯುಧಗಳನ್ನು ಸಿದ್ಧ ಪಡಿಸಿ ಕೊಟ್ಟಿಗೆಯ ಮುಂದೆ ನೇತು ಹಾಕಿದ. ಎರಡೇ ದಿನಗಳಲ್ಲಿ ಬೆಳ್ಯಾಡಿಯ ಎಲ್ಲ ಮನೆಗಳಲ್ಲಿ ಶಂಭು ತಯಾರಿಸಿದ ಒಂದಿಲ್ಲೊಂದು ಆಯುಧಗಳು ರಾರಾಜಿಸಿದವು.
ಅಗ್ರಹಾರದ ಸೋಮಾರಿ ಬ್ರಾಹ್ಮಣ ಕೃಷ್ಣ ಶಾಸ್ತ್ರಿ, ತಾನು ಕಾಶಿಯಿಂದ ವಿಶೇಷವಾಗಿ ಮಂತ್ರಿಸಿ ತಾಯಿತಗಳನ್ನು ತರಿಸಿರುವುದಾಗಿಯೂ, ಅದನ್ನು ಧರಿಸಿದವರ ಎದುರಿಗೆ ಚಂದ್ರನ್ ಥರದ ಪಾಪಿಗಳು ಬಂದ ಕೂಡಲೇ ಆ ಪಾಪಿಯ ದೃಷ್ಟಿ ಮಂದವಾಗುವುದೆಂದು ಸುದ್ದಿ ಹಬ್ಬಿಸಿದ. ತರಿಸಿದ ಎಲ್ಲ ತಾಯಿತಗಳು ಖಾಲಿಯಾಗಿ, ಕೃಷ್ಣ ಶಾಸ್ತ್ರಿಯ ಹೆಂಡತಿಯ ಕತ್ತಲ್ಲಿ, ಕಿವಿಯಲ್ಲಿ ಹೊಸ ಚಿನ್ನದ ಆಭರಣಗಳು ಪ್ರತ್ಯಕ್ಷವಾದವು. ಮತ್ತೆ ತಾಯಿತ ತರುವುದಾಗಿ ಹೇಳಿ ಕಳೆದಾರು ದಿನದಿಂದ ಶಾಸ್ತ್ರಿ ಊರಿನಿಂದ ಮಾಯವಾಗಿದ್ದಾನೆ. ಚಂದ್ರನ್ ಊರಿನ ಯಾವುದೋ ಮನೆಯಿಂದ ಎರಡು ಕೋಳಿಗಳನ್ನು ಕದ್ದಿದ್ದಾನೆ ಎಂದು ಸುದ್ದಿಯಾದ ಮರುದಿನ ರಾತ್ರಿ ಊರ ಹೊರಗಿನ ಚೀಂಕ್ರನ ಮನೆಯಿಂದ ಕೋಳಿ ಸಾರಿನ ಪರಿಮಳ ಅಡರುತ್ತಿರುತ್ತದೆ. ಹೀಗೆ ನಮ್ಮ ಊರಿನ ಹಲವರ ಬುದ್ಧಿ ಚುರುಕುಗೊಳಿಸಿದ ಕೀರ್ತಿ ಸಲ್ಲುವುದು ಚಂದ್ರನ್ ಗೆ.
ಇನ್ನು ಆಗಲೇ ಹೇಳಿದಂತೆ ಊರವರ ರಂಜನೆಗೆ ಕಥೆಗಾರರಾದವರ ಕಥೆ ಕೇಳಲು ಬಲು ಸೊಗಸು.
ಅವರ ಪ್ರಕಾರ ಚಂದ್ರನ್ ಮೂಲತಃ ಕೇರಳದವನಾದರೂ ಆತನಿಗೆ ಎಲ್ಲ ಭಾಷೆಗಳೂ ತಿಳಿದಿವೆಯಂತೆ. ಎಷ್ಟರ ಮಟ್ಟಿಗೆಂದರೆ ರಾತ್ರಿ ಕಾಲದಲ್ಲಿ ಗೂಬೆ, ಬಾವಲಿ ಹಕ್ಕಿಗಳು ಮಾಡುವ ಸದ್ದಿನ ಅರ್ಥ ಕೂಡ ಅವನಿಗಾಗುತ್ತಂತೆ. ಕೆಲವರ ಪ್ರಕಾರ ಆತ ಯಾರ ಕೈಗೂ ಸಿಗದಿರಲೆಂದು ಬರಿ ಒಂದು ಕಚ್ಚೆ ಉಟ್ಟು ಮೈಯೆಲ್ಲಾ ಎಣ್ಣೆ ಬಳಿದುಕೊಂಡೆ ರಾತ್ರಿ ಕಾರ್ಯಾಚರಿಸುವುದೆಂದು. ಇನ್ನು ಕೆಲವರ ಪ್ರಕಾರ ಆತ ಧರಿಸುವುದು ಒಂದು ವಿಶೇಷ ಬಗೆಯ ಅಂಗಿ. ಆ ಅಂಗಿಯ ಹೊರಗೆಲ್ಲ ಚೂರಿಯಷ್ಟು ಮೊನಚಾದ ಮುಳ್ಳುಗಳಿವೆ. ಅದನ್ನು ಧರಿಸಿ ಆತ ಯಾರನ್ನಾದರು ಬಲವಾಗಿ ಅಪ್ಪಿಕೊಂಡರೆ ಅಲ್ಲೇ ಅವರ ಮರಣ ನಿಶ್ಚಿತ. ಆತ ಧರಿಸುವುದು ಸ್ಪ್ರಿಂಗ್ ಇರುವ ಚಪ್ಪಲಿಯೆಂದು, ಆತ ಅದರ ಬಲವಾಗಿ ಹಾರಿಕೊಂಡೆ ಓಡುವುದೆಂದು ಇನ್ನು ಕೆಲವರ ವಾದ. ಆತನಿಗೆ ಸಮ್ಮೋಹಿನಿ ವಿದ್ಯೆ ಕೂಡ ತಿಳಿದಿರುವುದರಿಂದ ಆತ ಎದುರಿನವರಿಗೆ ಮಂಕು ಮಾಡುವುದರಲ್ಲಿ ಕೂಡ ನಿಸ್ಸೀಮ. ಪಳಗಿದ ವೇಷಗಾರನು ಕೂಡ ಆಗಿರುವ ಆತ, ಊರಿನ ತಿಳಿದವರ ವೇಷ ಹಾಕಿಕೊಂಡು ಹಗಲು ಸಮಯದಲ್ಲಿ ನಮ್ಮೆಲ್ಲರ ಮಧ್ಯೆ ಓಡಾಡಿಕೊಂಡಿರುತ್ತಾನೆ ಎಂದು ಬಗೆ ಬಗೆಯ ಸುದ್ದಿಗಳು ಬೆಳ್ಯಾಡಿಯ ತುಂಬೆಲ್ಲ ಆಗಲೇ ಪ್ರಚಲಿತದಲ್ಲಿವೆ.”
moon“ಅಪ್ಪ, ನನ್ನ ಪದವಿಪೂರ್ವ ಪರೀಕ್ಷೆ ಫಲಿತಾಂಶ ಬಂತು ಇವತ್ತು” ಉದಯ ತನ್ನಲ್ಲಿ ಇದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿ ಹೇಳಿದ.
“ಹೌದಾ ಸರಿ” ಹೊಸ ಜನಿವಾರ ಗಂಟು ಹಾಕುತ್ತ ಗುರುಮೂರ್ತಿ ಹಂದೆಯವರು ನಿರ್ವಿಣ್ಣನಾಗಿ ಉತ್ತರಿಸಿದರು.
“ಮೇಷ್ಟ್ರು ಹೇಳಿದ್ರು ಇಡೀ ಕಾಲೇಜಿನಲ್ಲಿ ನನ್ನದೇ ಅಗ್ರ ಅಂಕ ಎಂದು”
“ಅದಕ್ಕೆ?” ಮಾಡುತ್ತಿದ್ದ ಕೆಲಸ ನಿಲ್ಲಿಸಿ ಹಂದೆಯವರು ಉದ್ಯಾನ ಮುಖ ದಿಟ್ಟಿಸುತ್ತ ಕೇಳಿದರು.
“ಪದವಿ ಶಿಕ್ಷಣ ಖಂಡಿತವಾಗಿ ಮುಂದುವರಿಸಬೇಕೆಂದು ಒತ್ತಾಯಿಸಿದರು.” ಅಳುಕುತ್ತ ಉದಯ ಉತ್ತರಿಸಿದ.
“ನಾನು ಮೂಲೆಗೆ ಬಿದ್ದ ಮೇಲೆ ನಿನ್ನ ಅಣ್ಣ ಪ್ರಧಾನ ಅರ್ಚಕ ಆದ ಮೇಲೆ ಅವನಿಗೆ ಸಹಾಯಕ ಆಗಿ ನಿನ್ನ ಮೇಷ್ಟ್ರ ಮಗ ಬರುತ್ತಾನಂತ?” ಕೆಕ್ಕರಿಸಿ ನೋಡುತ್ತಾ ದೊಡ್ಡ ದನಿಯಲ್ಲಿ ಉದಯನ ಪರೋಕ್ಷ ಬೇಡಿಕೆಯನ್ನು ಹಂದೆಯವರು ಹಾಗೆಯೇ ತುಳಿದು ಹಾಕಿದರು.
moon“ದೇವಸ್ಥಾನದ ಗರ್ಭಗುಡಿಯ ಉಸಿರುಗಟ್ಟುವ ವಾತಾವರಣದಲ್ಲಿ ಎದುರಿಗಿರುವ ಕಲ್ಲನ್ನು ದೇವರೆಂದು ಹಾಲು, ಬೆಣ್ಣೆ, ತುಪ್ಪ ಸುರಿದು ಪೂಜೆ ಮಾಡುವ ಯಾವುದೇ ಆಸಕ್ತಿ ನನಗಿಲ್ಲ. ಪಾಪಿಗಳ ಮತ್ತು ದೇವರ ನಡುವಿನ ಮಧ್ಯವರ್ತಿ ನಾನಾಗಲಾರೆ. ಪಾಪಿಗಳ ದಕ್ಷಿಣೆಯ ಆಧಾರದಲ್ಲಿ ನನ್ನ ಜೀವನ ಸಾಗಿಸುವ ಹಂಗು ನನಗೆ ಬೇಕಾಗಿಲ್ಲ. ನನ್ನ ಆಸಕ್ತಿಗಳಿಗೆ, ನನ್ನ ಕನಸುಗಳಿಗೆ ಅಪ್ಪನ ಬಳಿ ಯಾವುದೇ ಕೀಮತ್ತಿಲ್ಲ. ಅಣ್ಣ, ನಾನು ಹಾಗು ಅಮ್ಮ, ಅಪ್ಪನ ಸರ್ವಾಧಿಕಾರಿ ಜಗತ್ತಿನ ಪ್ರಜೆಗಳಷ್ಟೇ. ನಮಗ್ಯಾವ ಸ್ವಾತಂತ್ರ್ಯ ಇಲ್ಲಿಲ್ಲ. ಅಪ್ಪ ಹಾಕಿಕೊಟ್ಟ ಗೆರೆಯ ದಾರಿಯ ಮೇಲಷ್ಟೇ ನಡೆಯಬೇಕು ನಾವು. ಗೆರೆಯಿಂದಾಚೆ ಇರುವುದೆಲ್ಲ ಮುಳ್ಳಿನ ರಾಶಿಯೆಂದು ಅಪ್ಪ ಹುಟ್ಟಿದಾಗಿನಿಂದ ಭಯದ ಬೀಜ ಬಿತ್ತಿದ್ದಾರೆ. ಸರಿ ತಪ್ಪುಗಳ ಪಟ್ಟಿಯನ್ನು ಸಿದ್ಧಪಡಿಸುವುದು ಅಪ್ಪನೇ. ಅದನ್ನು ಅನುಕರಿಸುವುದಷ್ಟೇ ನಮ್ಮೆಲ್ಲರ ಕರ್ತವ್ಯ. ಅಪ್ಪನ ಭಯದಿಂದಲೋ, ಸ್ವಂತ ಆಸಕ್ತಿಯಿಂದಲೋ ಅಥವಾ ಅಪ್ಪನ ಮುಖದಲ್ಲಿ ಅಪರೂಪವಾಗಿ ತೋರುವ ತನ್ನ ಬಗೆಗಿನ ಹೆಮ್ಮೆಯ ಕಳೆಯನ್ನು ನೋಡಲೋ ಏನೋ ಅಣ್ಣನಂತೂ ಅಪ್ಪನ ಆಜ್ಞೆಯಂತೆ ಅರ್ಚಕನಾಗ ಹೊರಟಿದ್ದಾನೆ. ನಾನು ಹಾಗಾಗಲಾರೆ. ಕುಬ್ಜ ಮನಸ್ಸಿನ ಜನಗಳಿಂದವೇ ತುಂಬಿರುವ ಈ ಊರಿನ ಹೊರಗೇ ಹೋಗದಿದ್ದಲ್ಲಿ ತನ್ನ ಬೆಳವಣಿಗೆ ಸಾಧ್ಯವಿಲ್ಲ. ಅಪ್ಪನ ಎದುರು ಮಾತಾಡಿ ಮನೆ ಬಿಟ್ಟು ಹೋಗುವ ಧೈರ್ಯ ಕೂಡಾ ಸಾಲದು.”

moonಬೆಳಬೆಳಗ್ಗೆಯೇ ಬೆಳ್ಯಾಡಿಯ ಪ್ರಮುಖರ ಗುಂಪೊಂದು ಗುರುಮೂರ್ತಿ ಹಂದೆಯವರ ಮನೆಯಲ್ಲಿ ಹಾಜರಾಗಿದೆ. ಗುಂಪಿನ ನಾಯಕನ ದರ್ಪದಲ್ಲಿ ದೇವಸ್ಥಾನದ ಮೊಕ್ತೇಸರ ಭೀಮ ಶೆಟ್ಟಿಯವರು ಮಾತು ಶುರುವಿಟ್ಟುಕೊಂಡರು.
“ನಮಸ್ಕಾರ ಹಂದೆಯವರಿಗೆ. ಬೆಳಗ್ಗೆ ಬೆಳಗ್ಗೆಯೇ ತಮಗೆ ತೊಂದರೆ ಕೊಟ್ಟದ್ದಕ್ಕೆ ಕ್ಷಮೆಯಿರಲಿ”.
“ನಮಸ್ಕಾರ ಶೆಟ್ರೆ. ತೊಂದರೆಯೇನಿಲ್ಲ. ಬನ್ನಿ ಕುಳಿತುಕೊಳ್ಳಿ. ಹೇಳಿ ಏನು ವಿಷಯ?” ಹೆಂಡತಿ ಲಕ್ಹ್ಮಿಗೆ ಎಲ್ಲರಿಗೂ ಕಾಫಿ ತರುವಂತೆ ಸನ್ನೆ ಮಾಡಿ ಹಂದೆಯವರು ಉತ್ತರಿಸಿದರು.
“ಈ ಚಂದ್ರನ್ ಕಾಟ ಊರಲ್ಲಿ ತುಂಬಾ ಜಾಸ್ತಿ ಆಗ್ತಾ ಇರುವುದು ನಿಮಗೂ ಗೊತ್ತಿರುವ ವಿಷಯವೇ. ದಿನ ರಾತ್ರಿ ಊರಲ್ಲಿ ಒಂದಲ್ಲ ಒಂದು ಕೆಟ್ಟ ಘಟನೆಗಳು ನಡಿಯುತ್ತಲೇ ಇವೆ. ಪೋಲಿಸರಲ್ಲಿಗೆ ಹೋದರೆ ಅವರದ್ದು ಒಂದೇ ಉತ್ತರ, ಎಷ್ಟು ಕಡೆ ನಾವು ಪಹರೆ ಹಾಕಲು ಸಾಧ್ಯ ಎಂದು. ಅದಕ್ಕೆ ನಾವೆಲ್ಲಾ ಒಟ್ಟಾಗಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಅದೇನೆಂದರೆ ದಿನಾ ರಾತ್ರಿ ಪಾಳಿಯಲ್ಲಿ ಊರಿನ ಮನೆಯಲ್ಲಿರುವ ಗಂಡಸರೇ ಜೊತೆಯಾಗಿ ಕಾವಲು ಕಾಯುವುದೆಂದು. ಅದೇನೇ ಆಗಲಿ ಅವನನ್ನು ಹಿಡಿದೇ ಹಿಡಿಯಬೇಕು. ಅಥವಾ ಕನಿಷ್ಠ ಪಕ್ಷ ಆತ ನಮ್ಮ ಊರಿನ ಕಡೆ ತಲೆ ಹಾಕದಂತಾದರೂ ಮಾಡಲೇ ಬೇಕು. ಇದಕ್ಕೋಸ್ಕರವೇ ನಮ್ಮ ಯೋಜನೆ ಏನೆಂದರೆ ಬೆಳ್ಯಾಡಿಯ ಪ್ರತಿ ಮನೆಯಿಂದಲೂ ಕೂಡ ಒಬ್ಬ ಗಂಡಸು ನಮ್ಮ ಗುಂಪನ್ನು ಸೇರಬೇಕು. ಅವರ ಪಾಳಿ ಯಾವತ್ತು ಬರುವುದೆಂದು ಅಮೇಲೆ ನಿರ್ಧರಿಸಿದರಾಯಿತು. ಅದರಂತೆಯೇ ನಿಮ್ಮ ಮನೆಯಿಂದ ಕೂಡ ಒಬ್ಬರನ್ನು ಕಳಿಸಿ ಕೊಡಬೇಕಾಗಿ ನಮ್ಮ ವಿನಮ್ರ ವಿನಂತಿ.” ಇಷ್ಟು ಹೇಳಿ ಭೀಮ ಶೆಟ್ಟರು ಹಂದೆಯವರ ಉತ್ತರಕಾಗಿ ಕಾದರು.
“ಶೆಟ್ಟರೆ ನನಗಂತೂ ವಯಸ್ಸಾಗಿದೆ. ರಾತ್ರಿ ಪಾಳಿ ಕಾಯುವ ಕೆಲಸ ನನ್ನಿಂದಾಗುವುದು ಸ್ವಲ್ಪ ಕಷ್ಟ.” ಹಂದೆಯವರು ಅಂಜಿಕೆಯಿಂದ ಉತ್ತರಿಸಿದರು.
“ಅಯ್ಯೋ ಹಂದೆಯವರೇ ಅದು ನಮಗೆ ಗೊತ್ತಿಲ್ಲದ ವಿಷಯವೇ? ನಿಮ್ಮನ್ನು ಪಹರೆ ಕಾಯಲು ಹೇಳಿ ನಾವ್ಯಾವ ನರಕಕ್ಕೆ ಹೋಗಬೇಕು ಹೇಳಿ. ನಾವು ಮಾತನಾಡುತ್ತಿರುವುದು ನಿಮ್ಮ ದೊಡ್ಡ ಮಗನ ಬಗ್ಗೆ. ಊರಿನ ಹಿತದೃಷ್ಟಿಯಿಂದ ನಿಮ್ಮ ಕೈಲಾದ ಸಹಾಯ ಮಾಡಿ ಅಂತಷ್ಟೇ ನಮ್ಮ ಕೋರಿಕೆ. ಒತ್ತಾಯವೇನಿಲ್ಲ.” ಶೆಟ್ಟರು ಕೈ ಮುಗಿಯುತ್ತ ಕೇಳಿಕೊಂಡರು.
“……. ಇಲ್ಲ ಆತ ಬೇಡ. ಚಿಕ್ಕವ ಉದಯ ನಿಮ್ಮ ಜೊತೆ ಬರುತ್ತಾನೆ. ಸರಿಯೇ?” ತಡವರಿಸಿ, ಯೋಚಿಸಿ ಹಂದೆಯವರು ಉತ್ತರಿಸಿದರು.
“ಅದು ನಿಮಗೆ ಬಿಟ್ಟಿದ್ದು ಹಂದೆಯವರೇ. ನಿಮ್ಮ ಇಬ್ಬರೂ ಮಕ್ಕಳೂ ಆಜಾನುಬಾಹುಗಳೇ. ಯಾರು ಬಂದರೂ ಸರಿ. ತುಂಬಾ ಧನ್ಯವಾದಗಳು ತಾವು ಸಹಕರಿಸಲು ಒಪ್ಪಿಕೊಂಡದ್ದಕ್ಕೆ. ನಾವಿನ್ನು ಬರುತ್ತೇವೆ.” ಕಾಫಿ ಕುಡಿದ ಲೋಟವನ್ನು ತೊಳೆಯಲೆಂದು ಎತ್ತಿಕೊಂಡು ಶೆಟ್ಟರು ಹಾಗೂ ಅವರ ಗುಂಪು ಮನೆಯಿಂದ ಹೊರನಡೆಯಿತು.

moon“ಅಪ್ಪನ ವರ್ತನೆ ನನಗಂತೂ ನಿರೀಕ್ಷಿತವೇ ಆಗಿತ್ತು. ಯಾವುದೇ ಕಾರಣಕ್ಕೂ ಅಣ್ಣನ ಜೀವಹಾನಿಯಿಂದಾಗುವ ನಷ್ಟವನ್ನು ಭರಿಸಲು ಅಪ್ಪ ತಯಾರಿಲ್ಲ. ಆತನ ಮೇಲಿದ್ದಷ್ಟು ಆದರ ಮಮತೆಗಳು ನನ್ನ ಮೇಲೆ ಅವರಿಗಿಲ್ಲ. T-Pics-1ಹಾಗಾಗಿ ಆಯ್ಕೆ ಮಾಡುವ ವಿಷಯ ಬಂದಾಗ ಪಹರೆಗೆ ನನ್ನನ್ನು ಆಯ್ಕೆ ಮಾಡುವುದು ಅಪ್ಪನಿಗೆ ಉಳಿದದೊಂದೇ ದಾರಿಯಾಗಿತ್ತು. ನಿಜದಲ್ಲಿ ನನಗೂ ಇದು ಖುಷಿಯ ವಿಷಯವೇ. ಉಸಿರುಗಟ್ಟುವ ವಾತಾವರಣದಿಂದ ಈ ನೆಪದಲ್ಲಾದರೂ ಹೆಚ್ಚಿನ ಕಾಲ ಮನೆಯಿಂದ ಹೊರಗಿರಬಹುದು.

ಊರಿನ ಜನರ ಪ್ರಕಾರ ಅಪ್ಪನ ಅಜ್ಜ ತುಂಬಾ ವಿಶಾಲಹೃದಯಿ ಮನುಷ್ಯ. ಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಮಾಡಿಕೊಂಡು ಸರಳವಾದ ಜೀವನ ನಡೆಸಿದ ಜೀವಿ. ನಾವೀಗಿರುವ ಮನೆ ಅವರೇ ಕಟ್ಟಿಸಿದ್ದು. ಮಣ್ಣಿನ ಗೋಡೆಯಾದರೂ ಗಟ್ಟಿಮುಟ್ಟಿನ ಮನೆ. ಆದರೆ ನನ್ನ ಅಜ್ಜ ಹಾಗು ಅಪ್ಪ ಅವರಷ್ಟು ಕೀರ್ತಿ ಸಂಪಾದಿಸಲಿಲ್ಲ. ಹೀಗೆ ಅವರು ಕಟ್ಟಿಸಿದ ಮನೆಯಲ್ಲಿ ಒಂದು ಕುತೂಹಲಕರವಾದ ನಿರ್ಮಾಣವೆಂದರೆ ಮನೆ ಹೊರಗಿನ ಗೋಡೆಗೆ ತಾಗಿಕೊಂಡಿರುವ ಇನ್ನೊಂದು ಚಿಕ್ಕ ಗೋಡೆ. ಈ ಚಿಕ್ಕ ಗೋಡೆಗೊಂದು ಚಿಕ್ಕ ವರಾಂಡ. ಬರೀ ಈ ಗೋಡೆಯನ್ನು ಮಾತ್ರ ಮುಚ್ಚುವಂತೆ ಒಂದು ಚಿಕ್ಕ ಮಾಡು. ಗೋಡೆಯ ಮಧ್ಯದಲ್ಲೊಂದು ಮರದ ಬಾಗಿಲು. ಬಾಗಿಲಿಗೆ ಮರದ ಚಿಲಕ. ವಿಚಿತ್ರವೆಂದರೆ ಈ ಗೋಡೆ ಯಾವ ಕೋಣೆಗೂ ಸಂಬಂಧಿಸಿದ್ದಲ್ಲ. ಮನೆಗೆ ಈ ಗೋಡೆಯಿಂದ ಯಾವ ಪ್ರಯೋಜನವೂ ಇಲ್ಲ. ಗೋಡೆಯ ಎರಡು ಬದಿ ತೆರೆದೇ ಇದೆ. ಇಷ್ಟಾದರೂ ಅಪ್ಪ ಆಗಲೀ, ಅಜ್ಜ ಆಗಲೀ ಈ ಅನಾವಶ್ಯಕ ಗೋಡೆಯನ್ನು ಕೆಡವಿ ಹಾಕಲಿಲ್ಲ. ಯಾಕೆಂದರೆ, ಅಪ್ಪನ ಅಜ್ಜನ ಬಳಿ ಈ ಗೋಡೆ ಕಟ್ಟಿಸಿದ ಕಾರಣ ಕೇಳಿದಾಗಲೆಲ್ಲ, ‘ಸಮಯ ಬಂದಾಗ ನಿಮಗೆ ತಿಳಿಯುತ್ತದೆ’ ಅಂದಷ್ಟೇ ಉತ್ತರಿಸುತ್ತಿದ್ದರಂತೆ. ಬಹುಶಃ ಆ ಸಮಯ ಬರಲೇ ಇಲ್ಲ. ಅಜ್ಜನಿಗೆ, ಅಪ್ಪನಿಗೆ, ಮನೆ ಮಂದಿಗೆ, ನೆಂಟರಿಷ್ಟರಿಗೆಲ್ಲ ಆ ಗೋಡೆಯ ಅರ್ಥ ನಿಗೂಢವಾಗಿ ಆ ಗೋಡೆಯಂತೆಯೇ ಉಳಿದುಕೊಂಡಿತು.”
moon“ಹೇಯ್ ಉದಯಾ ಹೆದರಿಕೆ ಆಗ್ತಾ ಇದ್ಯನಾ?” ಭೀಮ ಶೆಟ್ಟರ ಮಗ ರಾಜೇಶ ನಗುತ್ತಾ ಕೇಳುತ್ತಾನೆ.
“ಹೆದರಿಕೆ ಏನಿಲ್ಲಪ್ಪ. ಹೀಗೆ ರಾತ್ರಿ ಗಸ್ತು ಹೊಡಿಯು ಕೆಲಸ ಮಾಡಿ ಗೊತ್ತಿಲ್ಲ ಅಲ್ವ, ಅದ್ಕೆ ಸ್ವಲ್ಪ ಆತಂಕ.” ಅತ್ತ ಇತ್ತ ಟಾರ್ಚ್ ಬೆಳಕು ಹಾಯಿಸುತ್ತ ಉದಯ ಉತ್ತರಿಸುತ್ತಾನೆ.
“ಆತಂಕ ಏನು? ನಾವು ನಾಲ್ಕು ಜನ ಇದ್ದೇವೆ. ಬರಲಿ ಇವತ್ತು ಆ ಚಂದ್ರನ್ ಬಡ್ಡಿ ಮಗ. ಅವ್ನು ಮನುಷ್ಯ ಅಂತ ಗೊತ್ತಾಗಬಾರದು ಹಾಗೆ ಮೂಳೆ ತಿಪ್ಪಿ ಇಡ್ತೇನೆ ಅವನದ್ದು.” ಸಿಟ್ಟಿನಲ್ಲಿ ಕೈ ಹಿಸುಕಿಕೊಳ್ಳುತ್ತ ರಾಜೇಶ ಹೂಂಕರಿಸಿದ.
“ಹೊಸ ಕಥೆ ಏನಾದ್ರೂ ಇದ್ಯಾ ಊರಲ್ಲಿ ಚಂದ್ರನ್ ಕಿತಾಪತಿ ಬಗ್ಗೆ?” ನಿದ್ರೆ ಮಂಪರು ಕಳೆಯಲೆಂದು ಉದಯ ನಿರಾಸಕ್ತಿಯಿಂದ ಪ್ರಶ್ನಿಸುತ್ತಾನೆ.
“ಹೊಸ ಸುದ್ದಿ ಏನಂದ್ರೆ ಇಷ್ಟು ದಿನ ಒಬ್ಬನೇ ಕಳ್ಳತನ, ಕೊಲೆ ಮಾಡ್ತಾ ಇದ್ದ ಚಂದ್ರನ್ ಈಗ ತನ್ನದೇ ಒಂದು ಗುಂಪು ಕಟ್ಟಿಕೊಳ್ತಾ ಇದ್ದಾನಂತೆ. ಬೇರೆ ಬೇರೆ ಊರಿನಿಂದ ಒಳ್ಳೆ ಬಲಿಷ್ಠ ಹುಡುಗ್ರನ್ನ ರಾತ್ರಿ ಮಂಕು ಬೂದಿ ಎರಚಿ ಕದ್ದು ಹೋಗಿ ಘಟ್ಟದ ಮೇಲಿನ ಕೊಟ್ಟಿಗೆಹಾರ ಎಂಬ ಊರಲ್ಲಿ ಅವನ ಕುಲ ದೇವರ ಎದುರಲ್ಲಿ ಸಮ್ಮೋಹನ ಮಾಡಿಸಿ ತನ್ನ ಪರ ಮಾಡಿಸಿಕೊಳ್ಳುತ್ತಿದ್ದಾನೆ ಅಂತ ಸುದ್ದಿ. ಅಪ್ಪನಿಗೆ ಇವತ್ತು ನನ್ನನ್ನ ಗಸ್ತಿಗೆ ಕಳ್ಸುಕೆ ಸ್ವಲ್ಪ ಅಳುಕಿತ್ತು. ನಾನೇ ಸಮಾಧಾನ ಮಾಡಿದೆ. ನಾನೊಬ್ನೇ ಅಲ್ಲ ನಾವು ನಾಲ್ಕು ಜನ ಗಟ್ಟಿ ಆಳುಗಳಿದ್ದೇವೆ ಹೆದರ ಬೇಡಿ ಅಂತ.” ರಾಜೇಶ ರೋಚಕವಾಗಿ ವಿವರಿಸಿದ.
“ಒಹ್ ಹೌದಾ?” ಉದಯನ ಕಣ್ಣುಗಳು ಅಗಲವಾದವು.
“ಹೇಯ್ ಈಚೆ ಬನ್ನಿ ಮಾರ್ರೆ, ಆ ದಾರಿಯಲ್ಲಿ ಗಸ್ತು ಹೋಗುದ್ ಬೇಡ ಅಂತ ಅಪ್ಪ ಹೇಳಿದ್ದಾರೆ. ಅಲ್ಲಿ ಇಂಬಳ ಹುಳ ಜಾಸ್ತಿ ಇದೆ ಅಂತೆ.” ಪೂರ್ಣಿಮಾ ನದಿ ಕಡೆ ಹೋಗುವ ದಾರಿ ತೋರಿಸಿ ರಾಜೇಶ ಉಳಿದ ಹುಡುಗರನ್ನು ನಿರ್ದೇಶಿಸಿದ.
moon“ಇರುಳಲ್ಲಿ ಜ್ಞಾನೋದಯವಾದಂತೆ ಅಪ್ಪನ ಅಜ್ಜ ಕಟ್ಟಿಸಿದ ಗೋಡೆಯ ಅರ್ಥ ಇಂದು ನನಗೆ ತಿಳಿಯತೊಡಗಿದೆ. ಒಂಟಿ ಗೋಡೆ. ಅದರ ಆಚೆ ಕೂಡ ವಿಶಾಲ ಜಗತ್ತು ಈಚೆ ಕೂಡ. ಬಾಗಿಲ ಮುಂದೆ ನಿಂತವನಿಗೆ ಬಾಗಿಲ ಆಚೆ ಹೊಸತೇನೋ ಇರಬಹುದೆಂಬ ನಿರೀಕ್ಷೆ. ತಾನಿರುವ ಪ್ರಪಂಚದಲ್ಲಿ ಆತನಿಗೆ ಆಸಕ್ತಿ ಹೊರಟು ಹೋಗಿದೆಯೋ ಅಥವಾ ಇನ್ನೂ ಹೆಚ್ಚೇನೋ ಬೇಕೆಂಬ ಆತನ ದುರಾಸೆ ಹೆಚ್ಚಾಗಿದೆಯೋ ಅಂತೂ ಆತ ಬಾಗಿಲ ಮುಂದೆ ನಿಂತು ಎಡೆ ಬಿಡದೆ ಬಾಗಿಲು ಬಡಿಯುತ್ತಾನೆ. ಯಾರಾದರೂ ಬಂದು ಬಾಗಿಲು ತೆರೆಯಬಹುದೆಂಬ ನಿರೀಕ್ಷೆ ಆತನಿಗೆ. ಯೌವ್ವನದ ಅಪೂರ್ವ ದಿನಗಳನ್ನು ಬಾಗಿಲು ಬಡಿಯುವುದರಲ್ಲೇ ಕಳೆಯುತ್ತಾನೆ. ತನ್ನ ಜೀವನ ಬದಲಾಯಿಸಬಲ್ಲ ಪ್ರಪಂಚ ಬಾಗಿಲಿನಾಚೆಯಿದೆಯೆಂಬ ಭ್ರಮೆಯಿಂದ. ವಯಸ್ಸು ಮೀರಿ ತೋಳ್ಬಲ ಕಡಿಮೆಯಾಗುತ್ತಿರುವುದು ಅರಿವಾಗುತ್ತಿದ್ದಂತೆಯೇ ತಾಳ್ಮೆಗೆಟ್ಟು ಬಾಗಿಲನ್ನು ಕೂಲಂಕಶವಾಗಿ ಪರೀಕ್ಷಿಸಿದವನಿಗೆ ತೋರುವುದೇ ಬಾಗಿಲಿನ ಮಧ್ಯ ಭಾಗದಲ್ಲಿದ್ದ ಚಿಲಕ. ಚಿಲಕ ಸರಿಸಿದ ಕೂಡಲೇ ಬಲು ಸುಲಭವಾಗಿ ಬಾಗಿಲು ತೆರೆದುಕೊಳ್ಳುತ್ತದೆ. ಕಾತರ ತಡೆಯಲಾಗದೆ ಹೊಸ್ತಿಲು ದಾಟಿದವನಿಗೆ ತೋರುವುದು ಅದೇ ಹಳೆ ಪ್ರಪಂಚ. ತನ್ನ ಕಡೆಯಿಂದ ಯಾವ ಪ್ರಯತ್ನ ಮಾಡದೆ ಭವಿಷ್ಯದ ಬಗ್ಗೆ ಭ್ರಮೆಯಿಂದ ಬಾಗಿಲು ಬಡಿಯುತ್ತಾ ಅರ್ಧ ಆಯಸ್ಸು ಕಳೆದ ಆತನಿಗೆ ಸತ್ಯ ದರ್ಶನವಾಗುತ್ತದೆ. ಭ್ರಮೆಯ ಬಾಗಿಲಿನ ಚಿಲಕ ತೆರೆದಾಚೆ ನೋಡಿದ್ದಾಗ ತೋರುವ ದೃಶ್ಯವೇ ಅಂತರಂಗ ಸತ್ಯ. ಅದುವೇ ಬಹಿರಂಗ ವಾಸ್ತವ. ಅಪ್ಪನ ಅಜ್ಜ ಕಟ್ಟಿಸಿದ ಈ ಬಾಗಿಲು ಸಾರುವ ಅರ್ಥ ಕೂಡ ಇದೇ. ನನ್ನ ವಿಷಯದಲ್ಲಿ ಹೀಗಾಗಲು ನಾನು ಬಿಡುವುದಿಲ್ಲ. ಇದೇ ಮನೆಯಲ್ಲಿ ಅಪ್ಪನ ಆದೇಶದ ಆಶ್ರಯದಲ್ಲೇ ಕುಳಿತು ಬಾಗಿಲು ಬಡಿಯುತ್ತ ಭವಿಷ್ಯದ ಭ್ರಮೆ ಕಟ್ಟಿಕೊಳ್ಳುವ ಮನುಷ್ಯ ನಾನಾಗುವುದಿಲ್ಲ. ಚಿಲಕ ತೆಗೆಯುವ ಕಾಲ ಸನ್ನಿಹಿತವಾಗಿದೆ.”

moon“ಈ ರಾತ್ರಿಯಲ್ಲಿ ಮಲಗುವುದು ಬಿಟ್ಟು ಹೊರಗೆ ಎಲ್ಲಿ ಹೊರಟ್ಯ ಉದಯ? ಇವತ್ತಿನ ಗಸ್ತಿನ ಪಾಳಿ ನಿನ್ನದಲ್ಲ ಅಂತ ಶೆಟ್ಟರು ಆಗ ದೇವಸ್ಥಾನದಲ್ಲಿ ಸಿಕ್ಕಾಗ ಹೇಳಿದ್ರು.” ಮನೆಯಿಂದ ಹೊರ ಕಾಲಿಡುತ್ತಿದ್ದ ಉದಯನನ್ನು ಹಂದೆಯವರು ಗಟ್ಟಿ ಸ್ವರದಲ್ಲಿ ಪ್ರಶ್ನಿಸಿದರು.
“ಇಲ್ಲೇ ಹೊರಗೆ ಉಚ್ಚೆ ಮಾಡ್ಲಿಕ್ಕೆ. ಬಚ್ಚಲು ಮನೇಲಿ ಅಮ್ಮ ಬಾಗಿಲು ಹಾಕೊಂಡಿದ್ದಾಳೆ.” ಉದಯ ದಿಟವಾಗಿ ಉತ್ತರಿಸಿದ.
“ಸರಿ ದೂರ ಎಲ್ಲಿ ಹೋಗ್ಬೇಡ.” ಮತ್ತೆ ಹಂದೆಯವರ ಆಜ್ಞೆ.
ಹತ್ತು ಹದಿನೈದು ನಿಮಿಷವಾದರೂ ಉದಯನ ಪತ್ತೆಯಿಲ್ಲದಿದ್ದನ್ನು ನೋಡಿ ಟಾರ್ಚ್ ಹಿಡಿದು ಗಟ್ಟಿಯಾಗಿ ಹೆಸರು ಕೂಗುತ್ತಾ ಹಂದೆಯವರು ಮನೆ ಅಂಗಣಕ್ಕೆ ಬಂದರು. ಟಾರ್ಚ್ ಬೆಳಕು ಅತ್ತಿತ್ತ ಹಾಯಿಸಿದವರಿಗೆ ತೋರಿದ್ದು ಅವರಜ್ಜ ಕಟ್ಟಿಸಿದ್ದ ನಿರುಪಯುಕ್ತ ಒಂಟಿ ಗೋಡೆಯ ಬಾಗಿಲು ತೆರೆದಿರುವುದು. ಏನೋ ತಪ್ಪಾಗಿದೆಯೆಂದು ಅರಿತ ಹಂದೆಯವರು ಮತ್ತೆ ಮನೆ ಬಾಗಿಲಿನ ಕಡೆ ತಿರುಗಿದಾಗ ಟಾರ್ಚ್ ಅಸ್ಪಷ್ಟ ಬೆಳಕಿನಲ್ಲಿ ತೋರಿದ್ದು ವಿಕಾರವಾಗಿ ಹಲ್ಲು ತೋರಿಸಿ ನಗುತ್ತಿರುವ, ಮೈಯೆಲ್ಲಾ ಕಪ್ಪು ಎಣ್ಣೆ ಬಳಿದುಕೊಂಡಂತೆ ಬೆಳದಿಂಗಳಿನ ಬೆಳಕಿನಲ್ಲಿ ಮಿರ ಮಿರ ಮಿಂಚುತ್ತಿರುವ ಮನುಷ್ಯಾಕೃತಿ. ಉಟ್ಟಿರುವುದು ಕೇವಲ ಬಿಳಿಬಣ್ಣದ ಒಂದು ಕಚ್ಚೆ ಮಾತ್ರ. ಕೈಯಲ್ಲಿ ಚೂರಿಯಂತೆ ತೋರುವ ಏನೋ ಆಯುಧ. ಬಂದಿರುವುದು ಬೇರಾರಲ್ಲ ಚಂದ್ರನ್ ಎಂದು ಹೊಳೆಯಲು ಹಂದೆಯವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಕಂಗಾಲಾಗಿ, ಮೈ ಕೈಯೆಲ್ಲ ಬೆವರಿ, ನಡುಗುತ್ತಾ ಟಾರ್ಚ್ ಅಲ್ಲೇ ಬಿಸಾಡಿ ಎದ್ದೆನೋ ಬಿದ್ದೆನೋ ಎನ್ನುವಂತೆ ಓಡಿ ಹೋಗಿ ಮನೆ ಸೇರಿಕೊಂಡು ಹೆಬ್ಬಾಗಿಲಿನ ಚಿಲಕ ಭದ್ರಪಡಿಸಿ ಬಾಗಿಲಿಗೊತ್ತಿಕೊಂಡು ನಿಂತರು. ಹಾಹಾಕಾರವಾಗಿ ನಗುತ್ತ ಹೆಜ್ಜೆ ಸಪ್ಪಳ ದೂರಾಗುತ್ತಿರುವುದನ್ನು ಹಂದೆಯವರ ಚುರುಕು ಕಿವಿಗಳು ಆಲಿಸಿದವು. ಸ್ವಲ್ಪವೇ ಹೊತ್ತಿನಲ್ಲಿ ದೂರದಿಂದ “ಅಪ್ಪ, ಅಮ್ಮ, ಕಾಪಾಡಿ. ಕಾಪಾಡಿ ಯಾರಾದರು ಬನ್ನಿ.. ” ಎಂಬ ಉದಯನ ಆರ್ತನಾದ ಕೇಳಿ ಬಾಗಿಲಿನ ಬಳಿಯೇ ಹಂದೆಯವರು ದುಃಖದಿಂದ ಕುಸಿದು ಕುಳಿತರು.
moon“ಮುಂದಿನ ಹಾದಿ ನಿಚ್ಚಳವಾಗಿ ಗೋಚರಿಸುತ್ತಿದೆ ಇಂದಿನ ಹುಣ್ಣಿಮೆಯ ಬೆಳದಿಂಗಳಿನಲ್ಲಿ. ಪೂರ್ಣಿಮಾ ನದಿಯ ನೀರು ತಣ್ಣಗಿದ್ದರೂ ಮನಸ್ಸಿನ ಸ್ವಾತಂತ್ರ್ಯದ ಬೆಚ್ಚಗಿನ ಕಾವಿನಿಂದ ಇಂದು ಹಿತವೆನಿಸುತ್ತಿದೆ. ಚಂದ್ರನ ಬೆಳದಿಂಗಳು ನೀರಿನ ಅರೆ ಅಲೆಗಳ ಮೇಲೆ ಬೆಳ್ಳಿಯ ಮಿರುಗು ಲೋಕ ಸೃಷ್ಟಿಸುತ್ತಿದೆ. ಮನಸ್ಸಿನಲ್ಲಿ ಹಿಂದೆರಡು ದಿನ ಮಾಡಿದ ಯೋಜನೆಗಳೆಲ್ಲ ಮತ್ತೆ ತಳುಕು ಹಾಕಿಕೊಳ್ಳುತ್ತಿವೆ. ಅಪ್ಪನ ಮುಂದೆ ನಾನಿಟ್ಟ ಮುಂದಿನ ವಿದ್ಯಾಭ್ಯಾಸದ ಪ್ರಸ್ತಾಪವನ್ನು ಎಡಕಾಲಲ್ಲಿ ಒದ್ದಂತೆ ತಿರಸ್ಕರಿಸಿದಾಗ ಮನಸ್ಸಿಗಾದ ನೋವು ಅಷ್ಟಿಷ್ಟಲ್ಲ. ಆದರೆ ನನ್ನ ಭವಿಷ್ಯ ನಾನೇ ರೂಪಿಸಿಕೊಳ್ಳಬೇಕೆಂಬ ಕೆಚ್ಚು ಉಳಿದೆಲ್ಲದಕ್ಕಿಂತ ಜಾಸ್ತಿಯಾಗಿ ಕಂಡಿತು. ಮರುದಿನ ಬೆಳಗ್ಗೆಯೇ ಶಾಲೆಯ ಮುಖ್ಯೋಪಾಧ್ಯಾಯ ಶೇಖರ ಸುವರ್ಣರಲ್ಲಿ ಹೋಗಿ ನಡೆದದ್ದನ್ನು ವಿವರಿಸಿದೆ. ಶೇಖರ ಮಾಷ್ಟರು ಹೋದ ವರ್ಷವಷ್ಟೇ ನಮ್ಮ ಊರಿಗೆ ಹೊಸದಾಗಿ ವರ್ಗವಾಗಿ ಮಂಗಳೂರಿನಿಂದ ಬಂದವರು. Moon1ವಿಷಯ ತಿಳಿದು ಬೇಸರಗೊಂಡ ಅವರು ನಾನು ಮನೆ ತೊರೆದು ಬರುವುದಾದರೆ ಮೈಸೂರಿನ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಅವರ ಹಳೆಯ ಸಹೋದ್ಯೋಗಿ ಕೇಶವ ರಾಯರಿಗೆ ಹೇಳಿ, ಅವರ ಮನೆಯಲ್ಲೇ ಉಳಿದುಕೊಂಡು ಮುಂದಿನ ವಿದ್ಯಾಭ್ಯಾಸ ಮುಂದುವರೆಸಬಹುದೆಂಬ ಸಲಹೆ ನೀಡಿದರು. ಮನೆ ತೊರೆದು ಬರುವುದೆಂದರೆ ಅಪ್ಪನ ವಿರುದ್ಧವಾಗಿಯೇ ಹೊರಬರಬೇಕು. ಹೀಗೆ ಮಾಡಿದಲ್ಲಿ ಅರ್ಚಕ ಗುರುಮೂರ್ತಿಗಳ ಮಗ ಮನೆ ಬಿಟ್ಟು ಓಡಿ ಹೋದನೆಂದು ಊರಿನಲ್ಲಿ ಜನ ತಲೆಗೊಂದು ಮಾತಾಡುತ್ತಾರೆ. ನನ್ನ ಕನಸನ್ನು ಸಾಕಾರಗೊಳಿಸುವುದರ ಜೊತೆಗೆ ಅಪ್ಪನ ಗೌರವಕ್ಕೆ ಧಕ್ಕೆಯಾಗದಂತೆ ಸಂಗತಿಯನ್ನು ಸಂಭಾಳಿಸುವುದು ಹೇಗೆಂದು ಯೋಚನೆಯಲ್ಲಿದ್ದಾಗಲೇ ರಾತ್ರಿ ಗಸ್ತಿಗೆ ಹೋದಾಗ, ಚಂದ್ರನ್ ಊರಿನ ಯುವಕರನ್ನು ಅಪಹರಿಸುತ್ತಿರುವ ಸುದ್ದಿ ಊರಿಡಿ ಹಬ್ಬಿದೆಯೆಂದು ರಾಜೇಶನ ಮೂಲಕ ತಿಳಿದದ್ದು. ಅಂದು ರಾತ್ರಿಯೇ ನನ್ನ ಮನಸ್ಸಿನಲ್ಲಿ ಯೋಜನೆ ಸಿದ್ಧವಾಗಿತ್ತು. ಮರುದಿನ ಬೆಳಗ್ಗೆ ಅಡಿಗೆ ಮನೆಯಿಂದ ಬೇಕಾದಷ್ಟು ತೆಂಗಿನೆಣ್ಣೆ, ಒಲೆಯಿಂದ ಒಂದಷ್ಟು ಮಸಿ, ಬೀರುವಿನಲ್ಲಿದ್ದ ಅಪ್ಪನ ಹಳೆ ಬಿಳಿ ಪಂಚೆ, ದಾನ ದಕ್ಷಿಣೆಯಿಂದ ಒಟ್ಟಾದ ಅಷ್ಟಿಷ್ಟು ಹಣ ಹಾಗೂ ನನ್ನ ಒಂದೆರಡು ಹೊಸ ಜೊತೆ ವಸ್ತ್ರಗಳನ್ನು ಒಂದು ಚೀಲದಲ್ಲಿ ಹಾಕಿ ತೋಟದ ಆಚೆಯ ಮಾವಿನ ಮರದ ಮೇಲೆ ಅಡಗಿಸಿ ಇಟ್ಟೆ. ಕೆಲಸ ಮುಗಿಸಿದ ಕೂಡಲೇ ಶೇಖರ ಮಾಷ್ಟರನ್ನು ಭೇಟಿಯಾಗಿ ನನ್ನೆಲ್ಲ ಉಪಾಯಗಳನ್ನು ತಿಳಿಸಿದೆ. ಸಂತೋಷದಿಂದಲೇ ಮಾಷ್ಟರು ಬೆನ್ನು ತಟ್ಟಿ, ಈ ವಿಷಯವನ್ನು ಗೌಪ್ಯವಾಗಿ ಇಡುವುದಾಗಿಯೂ, ಮೈಸೂರಿನ ಗೆಳೆಯ ಕೇಶವ ರಾಯರಿಗೆ ತಾವೇ ಕೂಡಲೇ ವಿಷಯ ತಿಳಿಸುವುದಾಗಿಯೂ ಮಾತು ಕೊಟ್ಟು, ಒಳ್ಳೆಯದಾಗಲೆಂದು ಹರಸಿ ಕಳಿಸಿದರು. ಮಧ್ಯಾಹ್ನ ಊಟದ ನಂತರ ಗಡದ್ದಾಗಿ ನಿದ್ರೆ ಹೊಡೆದು ಸಂಜೆ ಹೊತ್ತಿಗೆ ಮಾನಸಿಕವಾಗಿ ತಯಾರಾಗಿದ್ದೆ. ರಾತ್ರಿ ಊಟದ ನಂತರ ಎಣಿಸಿದಂತೆ ಮೂತ್ರಕ್ಕೆಂದು ಹೊರ ಹೊರಟವನನ್ನು ಅಪ್ಪ ತಡೆದು ಕಾರಣ ಕೇಳಿದಾಗ ಒಂದು ಕ್ಷಣ ಅಳುಕಾದರೂ ಕೂಡಲೆ ಸಂಭಾಳಿಸಿಕೊಂಡು ಉತ್ತರಿಸಿ ಮಾವಿನ ಮರದತ್ತ ಓಡಿದವನು ೫ ನಿಮಿಷದೊಳಗಾಗಿ ಜನರ ಮನಸ್ಸಿನೊಳಗಿನ ಚಿತ್ರಣದ ಚಂದ್ರನ್ ಆಗಿ ಬದಲಾಗಿದ್ದೆ. ಮೊದಲು ಮಾಡಿದ ಕೆಲಸವೇ ಅಪ್ಪನ ಅಜ್ಜ ಕಟ್ಟಿಸಿದ ಒಂಟಿ ಗೋಡೆಯ ಬಾಗಿಲಿನ ತೆರೆದಿಟ್ಟದ್ದು. ಅಪ್ಪ ಹೆಚ್ಚು ಕಾಯಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಟಾರ್ಚ್ ಹಿಡಿದು ಹೊರಬಂದ ಅಪ್ಪನೆದುರು ಚಂದ್ರನ್ ಆಗಿ ಅವರನ್ನು ಹೆದರಿಸಿದಾಗ ಅವರ ಮುಖದಲ್ಲಿ ತೋರಿದ ಭೀತಿ ಹುಟ್ಟಿಸಿದ ಅಪರಾಧ ಪ್ರಜ್ಞೆ ಅಳಿಯಲು ಸ್ವಲ್ಪ ಕಾಲವೇ ಬೇಕಾಗಬಹುದು. ಮತ್ತೆ ಮಾವಿನ ಮರದತ್ತ ಓಡಿ ಸಹಾಯಕ್ಕಾಗಿ ಕಿರುಚಿ, ಮೊದಲೇ ಸಿದ್ಧಪಡಿಸಿದ್ದ ಚೀಲವನ್ನು ಹೆಗಲೇರಿಸಿ ಪೂರ್ಣಿಮಾ ನದಿಯ ಮಾರ್ಗವಾಗಿ ಓಡಿಬಂದು ನದಿ ದಡ ತಲುಪುವವರೆಗೂ ಯೋಜನೆ ನಾನೆಣಿಸಿದಂತೆಯೇ ಜಾರಿಯಾಗಿದೆ. ಮೈಗೆ ಹಚ್ಚಿಕೊಂಡ ಎಣ್ಣೆಯೊಂದಿಗೆ ಮಿಶ್ರವಾದ ಮಸಿಯನ್ನು ನದಿ ನೀರಿನಲ್ಲಿ ತೊಳೆದು ಸ್ನಾನ ಮಾಡಿ, ಬೆಳದಿಂಗಳ ಇವತ್ತಿನ ಈ ರಾತ್ರಿಯಲ್ಲಿ ನಡೆಯಲು ಶುರು ಮಾಡಿದರೆ ಮುಂಜಾವಿನ ಸಮಯದಲ್ಲಿ ಉಡುಪಿ ತಲುಪುವುದು ಕಷ್ಟವಲ್ಲ. ನಾಳೆ ರಾತ್ರಿಯ ಹಾಗೆ ಶೇಖರ ಮಾಷ್ಟರು ಕೊಟ್ಟ ಕೇಶವ ರಾಯರ ಮೈಸೂರು ವಿಳಾಸ ತಲುಪಿಬಿಟ್ಟರೆ ಅಲ್ಲಿಂದ ನನ್ನ ಹೊಸ ಜೀವನದ ಪ್ರಾರಂಭ. ಮಗ ಮನೆ ಬಿಟ್ಟು ಓಡಿ ಹೋದ ಎಂಬ ಅವಮಾನದಿಂದ ಅಪ್ಪನನ್ನು ಮುಕ್ತಗೊಳಿಸಿದ್ದಲ್ಲದೇ, ಹಂದೆಯವರ ಮಗ ಚಂದ್ರನ್ ಪಾಲಾದ ಎಂಬ ಊರಿನ ಜನರ ಸಹಾನುಭೂತಿಯನ್ನೂ ಅಪ್ಪನಿಗೆ ಗಿಟ್ಟಿಸಿಕೊಟ್ಟೆ ಎಂಬ ಸಮಾಧಾನ ನನ್ನ ಪಾಲಿಗಿರುತ್ತದೆ.”
moonಬೆಳ್ಯಾಡಿಯ ಪೂರ್ಣಿಮಾ ನದಿ ನೀರಿನಲ್ಲಿ ಉದಯ ಮೈಗೆ ಬಳಿದುಕೊಂಡ ಕಪ್ಪು ಬಣ್ಣ ಅಲೆ ಅಲೆಯಾಗಿ ಆತನ ಭೂತಕಾಲದ ದಿನಗಳಂತೆ ಹರಿದು ಹೋಗುತ್ತಿತ್ತು. ಬೆಳದಿಂಗಳ ರಾತ್ರಿಯಲ್ಲಿ ಮುಂದೆ ಸಾಗಬೇಕಾದ ದಾರಿ ಉದಯನ ಕಣ್ಣೆದುರಿಗೆ ಹಾಲಿನಂತೆ ಬಿಳುಪಾಗಿ ಮಿಂಚುತ್ತಿತ್ತು. ಕೆಲವು ಘಳಿಗೆಗಳಲ್ಲಿ ಉದಯಿಸುವ ಸೂರ್ಯನೊಂದಿಗೆ, ಚಂದ್ರನ್ ನೆಪವಾಗಿ ಉದಯನ ಭವಿಷ್ಯ ಉದಯಿಸುತಿತ್ತು. ಬೆಳ್ಯಾಡಿ, ಹೊಸ ಗಾಳಿಮಾತಿಗೆ, ಹರಟೆಗೆ ಹೊಸದಾಗಿ ಸಜ್ಜಾಗುತ್ತಿತ್ತು,

moon( ಮುತ್ತುಕುಟ್ಟಿ ಚಂದ್ರನ್ ಅಲಿಯಾಸ್  ರಿಪ್ಪರ್ ಚಂದ್ರನ್ ಎಂಬ ಸರಣಿ ಪಾತಕಿ ಕರಾವಳಿಯುದ್ದಕ್ಕೂ ೮೦ರ ದಶಕದಲ್ಲಿ ಜನರ ಮನಸ್ಸಿನಲ್ಲಿ ನಡುಕ ಹುಟ್ಟಿಸಿದ ವ್ಯಕ್ತಿ. ಸುಮಾರು ೧೫ ಕ್ಕೂ ಮಿಗಿಲಾಗಿ ಹತ್ಯೆಗಳನ್ನು ಮಾಡಿದ ಈತನನ್ನು ಕೊನೆಗೂ ೧೯೯೩ ರಲ್ಲಿ ಕೇರಳದ ಕಣ್ಣೂರಿನ ಸೆಂಟ್ರಲ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಯಿತು.)

2 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)