ಅಚ್ಯುತನಿಗೊಂದು ದೀರ್ಘ ವಿರಾಮ.

ಅಚ್ಯುತ ಹೊರಗೆ ಬರಲೊಲ್ಲ. 2 ವರ್ಷಗಳ ಸಮಯ ಬಾವಿಯ ದಂಡೆಯಲ್ಲಿ ಕಾದದ್ದಾಯಿತು. ತಾನಾಗಿ ಬಿದ್ದ ಬಾವಿಯಿಂದ ಆತ ಇಂದು ಎದ್ದು ಬರಬಹುದು, ನಾಳೆ ಬರಬಹುದು, ಬಂದು ಉಳಿದ ಕಂತಿನ ಕಥೆಗಳನ್ನು ಮುಂದುವರೆಸಬಹುದು ಎಂದು ನಿರೀಕ್ಷಿಸಿದ್ದೇ ಬಂತು. ಆತ ಬರಲಿಲ್ಲ. ಬಾವಿಯೊಳಗೆ ಇಳಿದು ಆತನನ್ನು ಹೊರಗೆಳೆದು ಕಥೆ ಕೇಳುವ ಧೈರ್ಯ ನನಗಿಲ್ಲ. ಒತ್ತಾಯಪೂರ್ವಕವಾಗಿ ಆತ ಹೇಳುವ ಕಥೆಯಲ್ಲಿ ತಿರುಳಿರುವುದು ಕೂಡ ಅನುಮಾನವೇ. ಬಹುಶಃ ಬಾವಿಯೊಳಗಿನ ಪ್ರಪಂಚವೇ ಆತನಿಗೆ ನೆಮ್ಮದಿ ಕೊಡುತ್ತಿರಬಹುದು. ಅಷ್ಟಕ್ಕೂ ಆತ ಹಾರಿದ್ದು ಕೂಡ ನೆಮ್ಮದಿಯ ನಿರೀಕ್ಷೆಯಲ್ಲಿಯೇ.
ಇರಲಿ…

“Waiting in the tunnel of thoughts” by Willem den Broeder

ಇನ್ನೂ ಕಾಯುತ್ತಾ ಕೂರುವ ವ್ಯವಧಾನ ನನಗಂತೂ ಇಲ್ಲ. ಮುಂದೆಂದಾದರೂ ಕಥೆ ಮುಂದುವರೆಸಬೇಕೆಂದಲ್ಲಿ, ಹೊರಗಿನ ಪ್ರಪಂಚಕ್ಕೆ ತನ್ನ ಕಥೆಯನ್ನು ತನ್ನದೇ ದೃಷ್ಟಿಕೋನದಲ್ಲಿ ತಿಳಿಸಿ, ಮಾಡಿದ ಕರ್ಮಗಳಿಗೆ ಸಮಜಾಯಿಷಿಗಳನ್ನು ಒಪ್ಪಿಸಿ, ಒಳಗೆ ಎಲ್ಲೋ ಮೂಲೆಯಲ್ಲಿ ಅವಿತಿರಬಹುದಾದ ಅಪರಾಧ ಪ್ರಜ್ಞೆಯಿಂದ ಪಲಾಯನವಾಗುವ ಹಂಬಲ ಜೋರಾದಾಗ ತಾನಾಗಿಯೇ ಹೊರ ಬರಲಿ. ಬಲವಂತದಿಂದ ದಕ್ಕಿಸಿಕೊಂಡದ್ದು ಯಾವತ್ತೂ ಸತ್ವಹೀನವೇ. ಆದರೆ ಮುಂದಿನ ಬಾರಿ ಕಥೆ ಹೇಳಲು ಹೊರಬಂದರೆ ಪೂರ್ತಿ ಕಥೆ ಕೇಳಿಯೇ ಬಿಡುವುದು ಆತನಿಂದ. ವರ್ಷಕ್ಕೊಂದು ಕಂತಿನಲ್ಲಿ ಕಥೆ ತಿಳಿಸುವುದು ಮುಂದೆ ನಡೆಯದು.
ಅಲ್ಲಿಯವರೆಗೆ ಮನೆಯ ಆ ಮೂಲೆಯ ಮೊಳೆಗೆ ಯಾವತ್ತಿಂದ ನೇತಾಡಿಸಿಬಿಟ್ಟ ಬೀಣೆಚೀಲದ ಧೂಳು ಕೊಡಕುವ ಪ್ರಯತ್ನ ನನ್ನದು.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)