ಇಳಿಸಂಜೆ

ಯಾಕೋ ೭೦ ವರ್ಷಗಳಿಂದ ಓಡಾಡಿದ ರಸ್ತೆ ಇದಲ್ಲ ಅನಿಸುತ್ತಿದೆ. ಏನೋ ಗುರಿಯಿಲ್ಲದ ಪಯಣದಂತಿದೆ ಇಂದಿನ ಇಳಿ ಸಂಜೆಯ ನಡಿಗೆ. ಮನೆಯಲ್ಲಿ ಉಸಿರುಗಟ್ಟುವ ವಾತಾವರಣ. ಚಿಕ್ಕದಾಗಿ ಚೊಕ್ಕವಿಲ್ಲದ ಮನೆ. ತನ್ನೆಲ್ಲ ಸೋಲಿಗೂ ನಾನೇ ಹೊಣೆ ಎಂಬಂತೆ ವರ್ತಿಸುವ ಮಗ, ಪ್ರಯೋಜನವಿಲ್ಲದ ಪ್ರಾಣಿಯನ್ನು ಮನೆಯೊಳಗೆ ಇಟ್ಟುಕೊಂಡಂತೆ ನೋಡುವ ಸೊಸೆ, ತನ್ನದೇ ಪ್ರಪಂಚದಲ್ಲಿ ಕಳೆದು ಹೋಗಿರುವ ಮೊಮ್ಮಗು, ಮುಂದೇನು ಎಂದು ಯಾವ ಯೋಚನೆಯು ಇಲ್ಲದೆ ಇರುವಂತಿರುವ ಬದುಕು.

ದಾಕ್ಷಾಯಿಣಿ ಇದ್ದಾಗ ಹೀಗಿರಲಿಲ್ಲ ದಿನಗಳು. ಅಥವಾ ಹೀಗೆ ಇದ್ದವೋ? ಆಕೆ ಜೊತೆಗಿದ್ದ ಕಾರಣ ಕೆಟ್ಟದ್ದು ಯಾವುದು ತೋರುತ್ತಿರಲಿಲ್ಲವೇನೋ. ಗಂಡಸು ತಾನು ಎಂದು ನಾನು ಬೀಗುತ್ತಿರುವ ಕಾಲದಲ್ಲಿ ಜೀವನ ಸಂಗತಿಯಾಗಿ ಬಾಳಲ್ಲಿ  ಬಂದವಳು ನಿಧಾನಕ್ಕೆ ನನ್ನ ಮಗುವನ್ನಾಗಿ ಪರಿವರ್ತಿಸಿದವಳು ಆಕೆ. ಗಮನಕ್ಕೆ ಬಾರದೆ ಎಲ್ಲದಕ್ಕೂ ಅವಳನ್ನೇ  ಅವಲಂಬಿಸುತ್ತ ಹೋದವನು ನಾನು. ಯಾವತ್ತು ಏನಾದ್ರು ಬೇಕೆಂದು ಹಠ ಮಾಡಿದವಳು ಅಲ್ಲ ಆಕೆ. ಮಾಮೂಲಿ ಗುಮಾಸ್ತ ಗಂಡನ ಆದಾಯದಲ್ಲೇ ಮನೆ ಸಾಗಿಸುವ ಚಾಣಾಕ್ಷತನ ಅವಳಲ್ಲಿತ್ತು. ಕೆಲವೊಮ್ಮೆ ಒಬ್ಬಳೇ ವರಾಂಡದಲ್ಲಿ ಕೂತು ಮೌನವಾಗಿ ಏನೋ ಯೋಚಿಸುವವಳು. ಆಕೆ ಮೌನವಾದಗಲೆಲ್ಲ ಏನೋ ತಳಮಳ ನನ್ನೊಳಗೆ. ಆಕೆಯನ್ನು ಖುಷಿಯಾಗಿ ಇಡಲಿಕ್ಕೆ ತನ್ನಿಂದ ಸಾಧ್ಯವಾಗುತ್ತಿಲ್ಲವೇನೋ ಎಂದು. ಆದರೆ ಕೇಳಲು ಸಾಧ್ಯವಿಲ್ಲ, ಭರವಸೆ ನೀಡಲು ನಾನು ಅಶಕ್ಯ. ತನ್ನಿಂದ ಆಕೆ ನಿರೀಕ್ಷಿಸಬಹುದಾದ ಸುಖ ತುಂಬಾ ಪರಿಮಿತ.166032

ಮದುವೆ ಮೊದಲು ಬರಿಗಾಲ ಸನ್ಯಾಸಿ ಆಗಿದ್ದವನು, ಮೊದಲ ಸೈಕಲ್ ಕೊಂಡಾಗ ಸಂತಸ ಪಟ್ಟಿದ್ದಳು ಆಕೆ. ಆಮೇಲೆ ಹುಟ್ಟಿದ್ದು ವಸಂತ, ಮುದ್ದಿನ ಮಗ. ಹೆಚ್ಚೇನೂ ಹಟವಿಲ್ಲದ, ಅಪ್ಪನನ್ನೇ ಹೀರೋ ಎಂದು ಭಾವಿಸುತ್ತಾ ಬೆಳೆದ ಮಗು. ಬೆಳೆಯುತ್ತ ಬೆಳೆಯುತ್ತ ಆತನಿಗೆ ತಿಳಿದದ್ದು, ಅಪ್ಪ ಏನು ಹೀರೋ ಅಲ್ಲ, ಮಾಮೂಲಿ ಮನುಷ್ಯ ಅಂತ. ಸ್ಕೂಟರ್, ಬೈಕ್ ಇರುವ ತಂದೆಯಂದಿರ ಜೊತೆ ಬರುವ ತನ್ನ ಗೆಳೆಯರೆದುರಿಗೆ, ಅಪ್ಪನ ಜೊತೆ ಸೈಕಲ್ ಅಲ್ಲಿ ಶಾಲೆಗೆ ಬರುತ್ತಿದ್ದ ಆತನ ಮುಖದಲ್ಲಿ ಮೊದ ಮೊದಲು ಬೇಜಾರು, ಆಮೇಲೆ ನಾಚಿಕೆ, ಬೆಳೆಯುತ್ತ ಹೋದಂತೆ ಅಪ್ಪನ ಬಗ್ಗೆ ಆಕ್ರೋಶ ಕೊನೆಗೆ ಅಸಹ್ಯ. ಎಷ್ಟೋ ಬಾರಿ ಕೇಳುವವನು, ನಿಮಗೇಕೆ ಇನ್ನು ಸೈಕಲ್? ಅವರೆಲ್ಲ ಹೇಗೆ ಸ್ಕೂಟರ್ ಕಾರ್ ತಗೊಳ್ಳಲಿಕ್ಕೆ ಸಾಧ್ಯ ಆಯಿತೆಂದು. ಸಮಾಜದ ನಿಯಮ ತಿಳಿ ಹೇಳಿದರೆ ಅರ್ಥ ಮಾಡಿಕೊಳ್ಳುವ ವಯಸ್ಸಲ್ಲ ಅವನದ್ದು.

ಅಷ್ಟಕ್ಕೂ ತಾನು ಕೂಡ ಎಲ್ಲೋ ಎಡವಿದೆನೋ ಅಂತ ತುಂಬಾ ಸಲ ಅನ್ನಿಸಿದೆ. ತನ್ನ ಸಹೋದ್ಯೋಗಿಗಳು ಎಲ್ಲರೂ ಭಡ್ತಿ ಪಡೆದು ಬೇಗ ಬೇಗನೆ ಮೇಲಕ್ಕೆ ಹೋದರೂ ತನ್ನ ಸಂಬಳ ಹೆಚ್ಚಿದ್ದು ಆಮೆಗತಿಯಲ್ಲೇ. ಮೊದಲಿನಿಂದಲೂ ಸಮಾಜಮುಖಿಯಾಗಿ ಇರಲೇ ಇಲ್ಲ ತಾನು. ಯಾವತ್ತೂ ಮೇಲಧಿಕಾರಿಗಳ ಎದುರು ಹಲ್ಲು ಗಿಂಜಲಿಲ್ಲ. ಅವರು ಬಿಸಾಡುವ ಎಂಜಲಿಗೆ ಕೈ ಒಡ್ಡಲಿಲ್ಲ. ಸ್ವಾಭಿಮಾನ ಯಾವತ್ತು ತನಗಿಂತ ಮುಂದೆ ನಡೆದಿತ್ತು.

ಸುಖ ಮತ್ತೆ ನೆಮ್ಮದಿ ಎರಡರ ಮಧ್ಯದ ವ್ಯತ್ಯಾಸದ ಅರ್ಥ ಅರಿತುಕೊಂಡು ಬಾಳಿದವರು ನಾನು ಮತ್ತು ದಾಕ್ಷಾಯಿಣಿ. ಆದರೆ ವಸಂತನಿಗೆ ಯಾಕೋ ಅರ್ಥವಾಗಲೇ ಇಲ್ಲ ಅದು. ಬೆಳೆಯುತ್ತ ಬೆಳೆಯುತ್ತ ಐಶಾರಾಮ ನೆಮ್ಮದಿ ಎಂದು ತಪ್ಪು ಕಲ್ಪನೆ ಬೆಳೆಸಿಕೊಳ್ಳುತ್ತ ಹೋದ ಆತ. ಇಂಜಿನಿಯರಿಂಗ್ ಸೇರಿಸಲಾಗದೇ ಡಿಪ್ಲೋಮಾ ಸೇರಿಸಿದಾಗಲೇ ಆತನ ಮನಸ್ಸಲ್ಲಿ ಸಿಡಿಮಿಡಿ. ಸಮಯ ಸಿಕ್ಕಾಗೆಲ್ಲ ತನ್ನನ್ನು ಹೀಯಾಳಿಸಿ ನಿಧಾನಕ್ಕೆ ತನ್ನೊಳಗೆ ದೋಷಿ ಭಾವನೆ ಬೆಳೆಸಿದ. ಓರಗೆಯ ಮಕ್ಕಳೆಲ್ಲ ಹೊಸ ಹೊಸ ಬಟ್ಟೆ ಹಾಕಿದಾಗ, ಬೈಕ್ ಗಳಲ್ಲಿ ಕಾಲೇಜು ಹೋಗುವಾಗ ವಿಚಿತ್ರ ದೃಷ್ಟಿಯಿಂದ  ತನ್ನ ಕಡೆ ನೋಡುತ್ತಿದ್ದ.

ಯಾವತ್ತೂ ಪೋಲಿ ಹುಡುಗರ ಸಹವಾಸಕ್ಕೆ ಮಾತ್ರ ಬೀಳಲಿಲ್ಲ. ಡಿಪ್ಲೋಮಾ ಮುಗಿಸಿ ಸಾಲ ಮಾಡಿ ಊರಲ್ಲೇ ಒಂದು ಎಲೆಕ್ಟ್ರಾನಿಕ್ಸ್ ಸರ್ವಿಸ್ ಸೆಂಟರ್ ಹಾಕಿದ. ಶೃದ್ಧೆಯಿಂದ ಕೆಲಸ ಮಾಡಿ ಮೇಲಕ್ಕೆ ಬಂದ. ನಾವು ಹೇಳಿದ ಹುಡುಗಿಯನ್ನು ಮದುವೆಯಾದ. ಮಗು ಕೂಡ ಹುಟ್ಟಿತು. ಜೀವನ ಒಂದು ಹದಕ್ಕೆ ಬಂದಿದೆ ಈಗ. ಯಾವುದಕ್ಕೂ ಕಡಿಮೆಯಿಲ್ಲ, ಯಾವುದು ಕೂಡ ಜಾಸ್ತಿಯು ಇಲ್ಲ. ಹುಡುಗನಾಗಿ ಇದ್ದಾಗ ತನ್ನ ಮೇಲೆ ಇದ್ದ ಅಸಹನೆ ಕೋಪ ತೋರಿಸಿಕೊಳ್ಳದಿದ್ದರೂ ಮನಸ್ಸಲ್ಲಿ ತಂದೆಯ ಬಗ್ಗೆ ಈಗಲೂ ಅಸಡ್ಡೆ ಇದೆ. ಇಂಜಿನಿಯರಿಂಗ್ ಓದಲಾಗಲಿಲ್ಲ ಎಂಬ ಕೊರಗು ಇನ್ನೂಇದೆ, ಓದಿಸಲಾಗದೆ ಇದ್ದದ್ದಕ್ಕೆ ತನ್ನ ಮೇಲೆ ಆಕ್ರೋಶ ಕೂಡ ಹಾಗೆ ಇದೆ. ಸೊಸೆಗೂ ಕೂಡ ಮಾವನ ಮೇಲೆ ಅಷ್ಟೇನು ಅಕ್ಕರೆಯಿಲ್ಲ. ಮೊಮ್ಮಗು ಅದರ ಲೋಕದಲ್ಲೇ ವ್ಯಸ್ತ. ದಾಕ್ಷಾಯಿಣಿ ಕೂಡ ಜೊತೆಗಿಲ್ಲ ಈಗ.

T_Pics_2ಇಡಿ ಜೀವನದ ಉದ್ದಕ್ಕೂ ಎಲ್ಲೂ, ಯಾರಿಗೂ ಅಷ್ಟೇನು ಮುಖ್ಯವಾದ ವ್ಯಕ್ತಿಯಾಗಿ ತಾನು ಬಾಳಲೇ ಇಲ್ಲವೇನೋ ಅಂತ ತುಂಬಾ ಸಲ ಕಾಡುತ್ತದೆ. ಬಾಲ್ಯದಲ್ಲಿ ಅಪ್ಪ ಅಮ್ಮನಿಗೆ ೧೦ ಮಕ್ಕಳ ಜೊತೆ ಒಂದು ಮಗುವಾಗಿ, ಯೌವ್ವನದಲ್ಲಿ ನೂರಾರು ಯುವಕರ ಮಧ್ಯೆ ಒಬ್ಬನಾಗಿ, ಅತಿ ಸಾಮಾನ್ಯ ಮಧ್ಯಮವರ್ಗದ ಗಂಡನಾಗಿ, ಆಫೀಸಲ್ಲಿ ವರುಷಗಳಿಂದ ಒಂದೇ ಮೇಜಲ್ಲಿ ಕುಳಿತ ಸಾಮಾನ್ಯ ಗುಮಾಸ್ತನಾಗಿ, ಹಣ ಮಾಡಲಾಗದ ಇಳಿವಯಸ್ಸಿನ ವಿಫ಼ಲ ಅಪ್ಪನಾಗಿ, ಬೋರು ಹೊಡೆಸುವ ಅಜ್ಜನಾಗಿ, ಹೊರೆಯಂತೆನಿಸುವ ಮಾವನಾಗಿ ಬದುಕು ಮುಗಿಸುತ್ತ ಬಂದವನು ತಾನು. ಸಂಜೆ ಸಿಗುವ ಸಮವಯಸ್ಕ ಗೆಳೆಯರ ಮಧ್ಯೆ ಕೂಡ ತಾನು ಸಪ್ಪೆಯೇ. ಎಲ್ಲರ ಬಾಯಲ್ಲೂ ವಿದೇಶಕ್ಕೆ ಹೋಗಿ ಬಂದ ಅನುಭವ, ದೇಶದ ಯಾವುದೋ ಮೂಲೆಯಲ್ಲಿ ನಡೆಯುವ ರಾಜಕೀಯದ ಬಗ್ಗೆ ವಿಶ್ಲೇಷಣೆಗಳು, ಈಗಿನ ಜನಾಂಗದ ಬಗ್ಗೆ ಅಸಮಾಧಾನದ ಮಾತುಗಳು. ಬರಿ ಇಳಿವಯಸ್ಸಿನ ತಳಮಳಗಳು. ಅವರ ಮಧ್ಯೆ ಕೂಡ ತಾನು ಮೌನಿ. ಯಾಕೋ ಇತ್ತೀಚಿಗೆ ಮಾತನಾಡಬೇಕೆಂದೇ ಅನ್ನಿಸುತ್ತಿಲ್ಲ. ಮಾತೆಲ್ಲ ಮುಗಿದು ಹೋದಂತೆ. ಜೀವನದ ಗುರಿ ಕಳೆದು ಹೋದಂತೆ. ಅಷ್ಟಕ್ಕೂ ಜೀವನಕ್ಕೆ ಗುರಿ ಎಂದು ಯಾಕಿರಬೇಕು? ಅದು ಹೇಗಿರಬೇಕು? ಹುಟ್ಟಿನಿಂದ ಸಾಯುವ ತನಕ ಉದ್ದಕ್ಕೂ ಹೋರಾಡಿ  ಮಕ್ಕಳಿಗೆಂದು ಹಣ ಮಾಡಿ, ಸತ್ತ ಮೇಲೆ ಚಿನ್ನದ ಫ್ರೇಮ್ ಅಲ್ಲಿ ಗಂಧದ ಹಾರ ಹಾಕಿಸಿಕೊಂಡು ನೇಲುವುದೆ ಗುರಿಯೇ? ಅಥವಾ ಇರುವ ಚಿಕ್ಕದಾದ ಬದುಕನ್ನು ಚೊಕ್ಕದಾಗಿ, ನೆಮ್ಮದಿಯಾಗಿ, ಸ್ವಾಭಿಮಾನದಿಂದ ಬದುಕುವುದೇ ಗುರಿಯೇ? ತಪ್ಪು ಸರಿಗಳ ಮಧ್ಯದ ದ್ವಂದ್ವದಲ್ಲಿ ಸಿಕ್ಕು ನರಳುವುದೇ ಗುರಿಯೇ ತಿಳಿಯದಾಗಿದೆ.

error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)