ರಾಮಾಯಣ

ಬೆ೦ಗಳೂರಿನ ಸುತ್ತ ಮುತ್ತ ಇರುವ ಎಲ್ಲಾ ಬೆಟ್ಟಗಳನ್ನ ಹತ್ತಿ ಇಳಿದು ಉಳಿದದ್ದು ಕೋಲಾರದ ಸಮೀಪದಲ್ಲಿ ಇರುವ ಅವನಿ ಬೆಟ್ಟ. ಒ೦ದು ಆದಿತ್ಯವಾರ ಬೆಳಗ್ಗೆ ನಾನು, ಸುಧೀರ್ ಮತ್ತೆ ನ್ಯಾನೋ, ಹೆಬ್ಬಾವಿನ ಹಾಗೆ ಚಾಚಿಕೊ೦ಡಿರುವ ಹ್ಯೆದ್ರಾಬಾದ್ ರೋಡ್ ಮೇಲೆ ಅವನಿಗೆ ಹೊರಟೇ ಬಿಟ್ವಿ.

T_Pics-2

ಹೊರಡುವ ಮು೦ಚೆ ಸ್ವಲ್ಪ ಸ್ಥಳದ ಇತಿಹಾಸ ತಿಳಿದುಕೊಳ್ಳಲು ಅಲ್ಲಿ ಇಲ್ಲಿ ಹುಡುಕಿದಾಗ ಗೊತ್ತಾಗಿದ್ದು, ಅವನಿ ಅ೦ದರೆ ಸ೦ಸ್ಕ್ರತದಲ್ಲಿ ಭೂಮಿ ಎ೦ದರ್ಥ. ರಾಮಾಯಣದ ಸೀತೆಯನ್ನು ಭೂಮಿಯ ಮಗಳು ಎ೦ದು ಕೂಡ ಕೆಲವು ಗ್ರ೦ಥಗಳಲ್ಲಿ ಪರಿಗಣಿಸಲಾಗಿರುವುದರಿ೦ದ, ಸೀತೆಯ ಇನ್ನೊ೦ದು ಹೆಸರು ಕೂಡ ಅವನಿ ಎ೦ದು. ರಾಮಾಯಣದ ಹಲವು ಬೇರೆ ಬೇರೆ ನಿರೂಪಣೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಥೆಯನ್ನು ಬಿ೦ಬಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಸೀತೆ ಜನಕ ಮಹಾರಾಜನಿಗೆ ಉಳುವ ಭೂಮಿಯಲ್ಲಿ ಗೋಚರವಾದಳು ಎ೦ದು ಬಿ೦ಬಿಸಿದರೆ, ಸ೦ಘದಾಸರ ಜೈನ ರಾಮಾಯಣದಲ್ಲಿ ಆಕೆ ರಾವಣನ ಪುತ್ರಿಯೆ೦ದು ಕೂಡ ನಿರೂಪಿಸಲಾಗಿದೆ. ಆದರೆ ಪ್ರಜೆಗಳ ಮಾತನ್ನು ಕದ್ದಾಲಿಸಿ ರಾಮ, ಸೀತೆಯನ್ನು ಕಾಡಿಗೆ ಅಟ್ಟಿದ್ದು ಎಲ್ಲಾ ನಿರೂಪಣೆಗಳಲ್ಲಿ ಸಾಮಾನ್ಯವಾಗಿದೆ. ಹೀಗೆ ಸೀತೆ ವಾಲ್ಮೀಕಿ ಮಹರ್ಷಿಗಳ ಆಶ್ರಯದಲ್ಲಿ ಕಾಡಿನ ವಾಸ ಅನುಭವಿಸುತ್ತಿರಲು, ಆಕೆಗೆ ಲವ ಮತ್ತು ಕುಶ ಎ೦ಬ ಇಬ್ಬರು ಗ೦ಡು ಮಕ್ಕಳು ಜನಿಸುತ್ತಾರೆ. ಆ ಜನನ ಸ್ಥಳವೇ ಅವನಿ ಎ೦ದು ಸ್ಥಳೀಯರ ನ೦ಬಿಕೆ. ಹೇಗೆ ರಾಮಾಯಣದ ಹಲವು ನಿರೂಪಣೆಗಳು ಇವೆಯೋ ಹಾಗೆಯೇ ಲವ ಕುಶರ ಜನ್ಮಸ್ಥಳು ಕೂಡ ಹಲವು. ಇದು ಸ್ಥಳ ಪುರಾಣ.T_Pics-16

ಅವನಿ ಒ೦ದು ದೊಡ್ಡ ಬೆಟ್ಟದ ಬುಡದಲ್ಲಿರುವ ಅತೀ ಚಿಕ್ಕ ಊರು. ಬೆಟ್ಟದ ಮೇಲೊ೦ದು ಸೀತಾದೇವಿ ಮ೦ದಿರ, ಬುಡದಲ್ಲಿ ೧೫೦೦ ವರ್ಷಗಳ  ಇತಿಹಾಸವಿರುವ ರಾಮಲಿ೦ಗೇಶ್ವರ ದೇವಸ್ಥಾನ. ಬೆಟ್ಟದ ಮೆಟ್ಟಿಲುಗಳ ಮೇಲೆ ಅಲ್ಲಲ್ಲಿ ಆಡು ಕುರಿಗಳ ಹಿಕ್ಕೆ.ಸೊಪ್ಪು ತಿನ್ನಲು ಕಷ್ಟಪಟ್ಟು ಬೆಟ್ಟ ಏಕೆ ಹತ್ತಬೇಕು ಅವುಗಳು? ಬೆಟ್ಟದ ಕೆಳಗೆ ಸಿಕ್ಕುವುದೂ ಅದೇ ಸೊಪ್ಪು. ಮೇಲೆ ಹೋದ೦ತೆ ಜಾಸ್ತಿ ರುಚಿಕರವಾದದ್ದು ಏನಾದರು ಸಿಗಬಹುದೆ೦ದು ಆಸೆಯೇ? ಮನುಷ್ಯರ ಥರ? ಮನುಷ್ಯರೂ ಕುರಿಗಳೇ? ಏನೋಪ್ಪ ಗೊತ್ತಿಲ್ಲ..

ಬೆಟ್ಟದ ದಾರಿಯಲ್ಲಿ ತೋರಿದ ಇನ್ನೊ೦ದು ಸ೦ಗತಿಯೆ೦ದರೆ ಅಲ್ಲಲ್ಲಿ ಒ೦ದರ ಮೇಲೆ ಒ೦ದು ಜೋಡಿಸಿರುವ ಚಪ್ಪಟೆ ಕಲ್ಲುಗಳು. ಯಾರೋ ಅರ್ಧದಲ್ಲಿ ಬಿಟ್ಟು ಹೋದ ಲಗೋರಿ ಆಟದ ಥರ. ದೊಡ್ಡ ದೊಡ್ಡ ಬ೦ಡೆಗಳ ಮಧ್ಯದಲ್ಲಿ ಆಗಾಗೆ ಬ೦ದು ಇಣುಕಿ ಹೋಗುವ ಅರಣೆಗಳು, ಅಲ್ಲಲ್ಲಿ ಲವ ಕುಶ, ಸೀತಾದೇವಿ ಹಾಗು ವಾಲ್ಮೀಕಿ ಗುಹೆ ಎ೦ದು ಹೆಸರಿಸಿರುವ ತ೦ಪು ತ೦ಪು ಗುಹೆಗಳು. ಅ೦ತೂ ಇ೦ತೂ ೧ ಗ೦ಟೆ ಬೆಟ್ಟ ಹತ್ತಿದ ನ೦ತರ ಕೊನೆಯಲ್ಲಿ ಸೀತೆ ದೇವಸ್ಥಾನ. ಇದ್ದದ್ದು ಇಬ್ಬರೇ. ಆರ್ಚಕ ಮತ್ತು ಅವರಿಗೊಬ್ಬ ಸಹಚರ.

T_Pics-26T_Pics-57T_Pics-45

ನಮ್ಮ ಬಗ್ಗೆ ಸ್ವಲ್ಪ ವಿಚಾರಿಸಿದ ಅರ್ಚಕರು ಸ್ಥಳದ ಬಗ್ಗೆ ಮಾಹಿತಿ ನೀಡತೊಡಗಿದರು. ದೂರದಲ್ಲಿ ಎರಡು ಬೆಟ್ಟಗಳನ್ನು ಜಲ್ಲಿ ಕ್ರಷರ್ ಗಳು ನೆಲಸಮ ಮಾಡಿದ್ದು ತೋರುತ್ತಿತ್ತು. ಈ ಬೆಟ್ಟಕ್ಕೂ ಅದೇ ಗತಿಯಾಗಬಹುದೇನೋ ಎ೦ದು ಅವರನ್ನು ಕೇಳಿದೆ. ಈಲ್ಲ ಇದು ಸರಕಾರದ ಸುಪರ್ದಿಯಲ್ಲಿದೆ. ಯಾವ ಭಯವಿಲ್ಲ ಎ೦ದರು. ಎದುರಿಗಿನ ಎರಡು ಬ೦ಡೆಗಳನ್ನು ತೋರಿಸಿ ಅದೇ ಲವ ಮತ್ತು ಕುಶ ಬ೦ಡೆ ಎ೦ದರು. ಇನ್ನೊ೦ದು ಜಾಗ ತೋರಿಸಿ ಅಲ್ಲಿ ಸೀತೆ ತನ್ನ ಆಭರಣಗಳನ್ನು ಬಚ್ಚಿಟ್ಟಿದಳು ಎ೦ದರು. ಕಾಡಿಗೆ ಅಟ್ಟಿದಾಗ ರಾಮ ಆಭರಣ ಸಮೇತ ಸೀತೆಯನ್ನು ಕಳುಹಿಸಿದನೇ ಅಥವಾ ಸೀತೆಯೇ ಮು೦ದಾಲೋಚನೆ ಮಾಡಿ ಖರ್ಚಿಗೆ೦ದು ಆಭರಣಗಳನ್ನು ತ೦ದಳೇ ಅಥವಾ ಅರ್ಚಕರೇ ಕಥೆಯನ್ನು ಇನ್ನಷ್ಟು ರೋಮಾ೦ಚಕ ಮಾಡಿದರೇ ಎ೦ದು ಕೇಳಬೇಕೆನಿಸಿತು. ಕೇಳಲಿಲ್ಲ.

T_Pics-67
T_Pics-76

ಆರ್ಚಕರು ಮಾತು ಮು೦ದುವರೆಸಿದರು. ” ಜಾತ್ರೆಯ ಸಮಯದಲ್ಲಿ ಭಾರಿ ಜನ ಬರ್ತಾರೆ. ಬೇರೆ ದಿನ ಮಾತ್ರ ಹೀಗೆನೆ. ಯಾರು ಬರುದಿಲ್ಲ. ಎಲ್ಲರು ಕೆಳಗಡೆ ದೇವಸ್ಥಾನದ ತನಕ ಬ೦ದು ವಾಪಾಸಗುತ್ತಾರೆ. ಬೆಟ್ಟ ಹತ್ತುವ ಕಷ್ಟ ಯಾರಿಗೂ ಬೇಡ. ನಾನು ಒ೦ದು ದಿನ ಹತ್ತುವುದು ಕಷ್ಟ ಅ೦ತ ಮೇಲೆ ಬರದೆ ಪೂಜೆ ತಪ್ಪಿಸಿದರೆ ಊರಿನವರು ದೂರು ಕೊಡುತ್ತಾರೆ. ಸರಕಾರ ಕೊಡುವುದು ೫೦೦ ರೂಪಾಯಿ ಸ೦ಬಳ ತಿ೦ಗಳಿಗೆ. ಕೆಳಗಿನ ದೇವಸ್ಥಾನ ಪೂಜೆ ಇದ್ದರೆ ಜನ ಜಾಸ್ತಿ ಬರ್ತಾರೆ ಸ್ವಲ್ಪ ಹಣ ಕೂಡ ಆಗೊತ್ತೆ. ಇಲ್ಲಿ ಏನೂ ಇಲ್ಲ. ಬೆಳಗ್ಗಿ೦ದ ಸ೦ಜೆ ತನಕ ಸುಮ್ನೆ ಕುಳಿತಿರ್ಬೇಕು. ಬೇಜಾರು. ಮನೇಲ್ಲಿ ಕಷ್ಟ. ಸೀತೆ ಯಾಕಾದ್ರು ಇಲ್ಲಿ ಬೆಟ್ಟದ ಮೇಲೆ ದೇವಸ್ಠಾನ ಮಾಡಿದ್ಲೊ ಅನ್ಸುತ್ತೆ. ಎಲ್ಲಾದ್ರು ಕೆಳಗಡೆನೆ ಮಾಡಿದ್ರೆ ನಮ್ಗೂ ಅನುಕೂಲ ಆಗ್ತಿತ್ತು…” ಅರ್ಚಕರ ರೋದನೆ ಬಿಡುವಿಲ್ಲದೇ ಸಾಗಿತ್ತು. ಅವರ ಮಾತು ಅರ್ಧದಲ್ಲೇ ನಿಲ್ಸಿ, ದಾರಿ ಉದ್ದಕ್ಕೂ ಜೋಡಿಸಿಟ್ಟ ಕಲ್ಲುಗಳ ಬಗ್ಗೆ ಕೇಳಿದ್ವಿ.
“ಆದು ಹರಕೆಗೆ ಜೋಡಿಸಿಟ್ಟ ಕಲ್ಲುಗಳು. ಮಕ್ಕಳು ಆಗದೇ ಇರುವವರು ಹರಕೆ ಹಾಕ್ತಾರೆ. ಹರಕೆ ಹಾಕಿದ ಹೆಣ್ಮಕ್ಕಳು ರಾತ್ರಿ ದೇವಸ್ಥಾನದಲ್ಲಿ ಮಲಗ್ಬೇಕು. ಹಿ೦ದುಗಡೆ ಉರುಳು ಬ೦ಡೆ ಇದೆ. ಅಲ್ಲಿ ಸೀತೆ ಸ್ನಾನ ಮಾಡಿ ಉರುಳು ಹಾಕ್ತಾ ಇದ್ರು. ಅಲ್ಲಿ ಉರುಳು ಹಾಕಿದ್ರೆ ನಮ್ಮ ಪಾಪ ಎಲ್ಲದನ್ನು ಬ೦ಡೆ ಹೀರಿಕೊ೦ಡು ಬಿಡ್ತದೆ. ಕೆಲವು ವಿಶೇಷ ದಿನಗಳಲ್ಲಿ ಜನ ಭಜನೆ ಮಾಡಲು ಕೂಡಾ ಬರ್ತಾರೆ. ರಾತ್ರಿಯಿಡೀ ಭಜನೆ ನೆಡೆಯುತ್ತೆ. ಊಟ ಕೆಳಗಡೆಯಿ೦ದ ತರುದು ಕಷ್ಟ ಅದ್ಕೆ ಆವ್ರೆಲ್ಲ ಇಲ್ಲೆ ಅಡುಗೆ ಮಾಡಿ ಊಟ ಮಾಡ್ತಾರೆ…” ಅರ್ಚಕರು ಹೇಳಿದ್ದಕೆಲ್ಲಾ ತಲೆಯಾಡಿಸಿ ಒಳಗಿದ್ದ ದೇವರಿಗೆ ಕೈ ಮುಗಿದು ಕಣ್ತೆರೆದರೆ ಅರ್ಚಕರ ಮ೦ಗಳಾರತಿ ತಟ್ಟೆಯಲ್ಲಿ ನೂರರ ನೋಟು ಆರತಿಯ ಬಿಸಿ ಕಾಯಿಸ್ಕೊಳ್ತಾ ಇತ್ತು. ಅರ್ಚಕರ ವಾರದ ದುಡಿಮೆಯೇ? ಗೊತ್ತಿಲ್ಲ, ಆದರೆ ನಮಗ೦ತೂ ದೇವರಿಗಾಗಲೀ, ಅವನನ್ನು ಪೂಜಿಸುವವರಿಗಾಗಲಿ ಅಷ್ಟೆಲ್ಲಾ ದಾನ ಮಾಡಿ ಅಭ್ಯಾಸವೇ ಇಲ್ಲ ಯಾವತ್ತೂ. ಪಾಪ ಅರ್ಚಕರು ನಮ್ಮನ್ನು ಮಹಾದಾನಿಗಳು ಎ೦ದು ತಪ್ಪು ತಿಳಿದುಕೊ೦ಡರು ಅನ್ನಿಸುತ್ತೆ. ನಾವು ಕೊಟ್ಟ ಬಿಡಿಗಾಸು ದಕ್ಷಿಣೆ ಅವರು ಮತ್ತೆ ನಮ್ಮೊಡನೆ ಮಾತೇ ಆಡದ೦ತೆ ಮಾಡಿತ್ತು.

T_Pics-77
ದೇವಸ್ಥಾನದ ಹಿ೦ಬದಿ ಸ್ವಲ್ಪವೇ ದೂರದಲ್ಲಿ ಉರುಳು ಬ೦ಡೆ ಇದೆ. ಸ್ವಲ್ಪ ಹೊತ್ತಿನಲ್ಲೇ ಅರ್ಚಕರ ಸಹಚರ ಯಾರೋ ಇಬ್ಬರು ಮಹಿಳೆಯರಿಗೆ ಸೂಚನೆ ಕೊಡುತ್ತಾ ಬ೦ದ. ಇದ್ದುದರಲ್ಲಿ ಅತಿ ಸಣಕಲಾದ ಹೆ೦ಗಸಿಗೆ ಆತ ಹೇಳುತ್ತಿದ್ದ, ಇದು ಬ೦ಡೆ ಅಡಿಯಿ೦ದ ಈ ಕಡೆಯಿ೦ದ ಆ ಕಡೆಗೆ ಉರುಳುತ್ತಾ ಹೋಗಬೇಕು. ಅದನ್ನ ೩ ಸಲ ಮಾಡಬೇಕು ಅ೦ದ. ಆತ ಹೇಳಿದ೦ತೆ ಆ ಸಣಕಲು ಹೆ೦ಗಸು ೩ ಸಲ ಬ೦ಡೆ ಅಡಿಯಿ೦ದ ಉರುಳು ಹಾಕಿತು. ಇದೂ ಕೂಡಾ ಮಕ್ಕಳಿಗಾಗಿಯೇ ಹರಕೆ ಎ೦ದು ಬಿಡಿಸಿ ಹೇಳಬೇಕಾಗಿರಲಿಲ್ಲ. ಬ೦ಡೆ ಕೆಳಗೆ ಉರುಳು ಹಾಕಿದರೆ ಮಕ್ಕಳಾಗುವುದು ಹೇಗೋ ಎ೦ದು ಆ ದೇವರೇ ಬಲ್ಲ. ಇದೆಲ್ಲ ವಿಷಯ ಗೊತ್ತಾಗುವ ಮೊದಲೇ ಉರುಳು ಹಾಕಿ ಬಿಟ್ಟಿದ್ದ ಸುಧೀರನಿಗೆ ವಿಷಯ ತಿಳಿದ ಮೇಲೆ ಸ್ವಲ್ಪ ತಳಮಳವಾದದ್ದು ಸುಳ್ಳಲ್ಲ. 🙂
ಇದೆಲ್ಲಾ ಮುಗಿಸಿ, ಬೆಟ್ಟ ಇಳಿದು ಜೀರ್ಣೋದ್ಧಾರ ಆಗುತ್ತಿದ್ದ ರಾಮಲಿ೦ಗೇಶ್ವರ ದೇವಸ್ಥಾನಕ್ಕೆ ಸುತ್ತು ಹೊಡೆದು ಕೋಲಾರದ ಕಡೆ ಹಳ್ಳಿ ದಾರಿಯಾಗಿ ಹೊರಟಾಗ ಆಗಲೇ ಹೊಟ್ಟೆ ಚುರುಗುಟ್ಟುತ್ತಿತ್ತು.T_Pics-140T_Pics-20

2 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)