ಕನಸು-ವಾಸ್ತವ : ಮುಖಾಮುಖಿ

ದಿನಾ ಬೆಳಗ್ಗೆ ಆದ್ರೆ ಅದೇ ರಾಗ ಅದೇ ಹಾಡು. ಅದೇ ಆಫೀಸ್, ಅದೇ ಕೆಲಸ, ಅದೇ ಕೆಸರು ಎರಚಾಟ, ಅದೇ ಹೋರಾಟ, ಅದೇ ಟ್ರಾಫಿಕ್, ಅದೇ ಊಟ, ಅದೇ ಕಾಫಿ ಮತ್ತೆ ಅದೇ ಜೀವನ. ಗುರುತದವರಿಗೆ, ಸಂಬಂಧಿಕರ ಮಧ್ಯೆ ಹೇಳಿಕೊಳ್ಳಲು ಒಂದು ಕೆಲಸ. IT ಕೆಲಸ. ಮಾಹಿತಿ ತಂತ್ರಜ್ಞಾನಿ, ಸಾಫ್ಟ್ ವೇರ್ ಇಂಜಿನಿಯರ್. ಕೆಲಸ ಒಂದು ನಾಮ ಹಲವು. ಅದೇ ದೇವರ ಥರ. ಯಾವಾಗಲು ನಿಗೂಢ ಹೊರಜಗತ್ತಿಗೆ. ನಾವು ಮಾಡುವ ಕೆಲಸದ ಬಗ್ಗೆ ಏನೋ ಅಸ್ಪಷ್ಟ ಮಾಹಿತಿ ಹಳಬರಿಗೆ. ನಮಗೆ ಮಾತ್ರ ಗೊತ್ತು ನಾವು ಮಾಡುವ ಕೆಲಸ ನಮಗೇ ಸರಿಯಾಗಿ ಗೊತ್ತಿಲ್ಲ ಎಂದು. ಯಾವತ್ತೂ ನೋಡಿರದ, ಅಶರೀರ ವಾಣಿಯ ಮೂಲಕ ಮಾತ್ರ ಪರಿಚಯವಿರುವ, ಜಗತ್ತಿನ ಯಾವುದೋ ಮೂಲೆಯಲ್ಲಿ ಕೂತ ನರಮಾನವರಿಗೆ ನಮಗೆ ತಿಳಿದಂತೆ, ಅರ್ಥವಾದಂತೆ ಏನೋ ಒಂದು ಪ್ರಾಡಕ್ಟ್ ಕೊಡುವುದು ನಮ್ಮ ಗುರಿ. ಅದಕ್ಕೆ ಸಂಬಳ ಸಿಗುತ್ತದೆ. ಇಲ್ಲಿ ಎಲ್ಲರು ಎಲ್ಲರಿಗೂ ಸಮಾನ. ನಾನು ಕೂಡ ಹತ್ತರಲ್ಲಿ ಹನ್ನೊಂದನೆಯವ ಅಷ್ಟೇ. ಆಫೀಸಿನ ಇನ್ನೊಂದು ಕೊನೆಯಲ್ಲಿ ಕೂತವನಿಗೆ ನನ್ನ ಪರಿಚಯವಿಲ್ಲ. ಸೀಮಿತ ಗುರುತು, ಸೀಮಿತ ಮರ್ಯಾದೆ, ಸೀಮಿತ ಜಗತ್ತು. ನನ್ನಿಷ್ಟದಂತೆ ಬದುಕುವುದು ವಾರದಲ್ಲಿ ಎರಡೇ ದಿನ. ಬೇರೆ ದಿನ ಬದುಕುವುದು ಸಾಮಾಜಿಕ ತಾಣದಲ್ಲಿ. ಫೇಸ್ಬುಕ್, ಟ್ವಿಟ್ಟರ್, ಮಣ್ಣು ಮಸಿ. ಎಲ್ಲ ಜಗತ್ತಿಗೆ ತೋರಿಸಲು, ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ ಎಂದು. ಅಲ್ಲಿಯ ಗೆಳೆಯ ಇಲ್ಲಿ ಎದುರಿಗೆ ಸಿಕ್ಕಿದರೆ ನಗುವಿಲ್ಲ. ಬದುಕಿರುವುದು ಅಲ್ಲಿ ಮಾತ್ರ, ಇಲ್ಲಲ್ಲ.

ಮುಗಿಯದ ಟ್ರಾಫಿಕ್ ಇಲ್ಲಿ. ಸಮಸ್ಯೆಯ ಬಗ್ಗೆ ದೂರುವವ ನಾನು ಕೂಡ ಸಮಸ್ಯೆಯ ಒಂದು ಭಾಗವೇ. ಟ್ರಾಫಿಕ್ ಸಿಗ್ನಲ್ ಅಲ್ಲಿ ನಿಂತಾಗ ಸುತ್ತಲಿನ ಜನರನ್ನು ನೋಡುವುದು ಕೂಡ ಒಂದು ಮಜವೇ. ಅನಿವಾರ್ಯವಾಗಿ ಅನುಭವಿಸಬೇಕಾದ ಮಜಾ. ಗಂಡಸೋ, ಹೆಂಗಸೋ ತಿಳಿಯದಂತಿರುವ ಮಂಗಳ ಮುಖಿಯರು , ಅವರಂತೆ ವೇಷ ಹಾಕಿ ಬೇಡುವ ಗಂಡಸರು, ಅಪ್ಪನ ಬೈಕ್ ಅಲ್ಲಿ ಹಿಂದಿನ ಸೀಟ್ ಅಲ್ಲಿ ತಿರುಗಿ ಕೂತಿರುವ ಹುಡುಗ, ಕಾರ್ ಒಳಗೆ ೫ ಬೆರಳಿಗೆ ೬ ಉಂಗುರ ಹಾಕಿ, ರೆಡ್ಡಿ’ಸ್ ಅಂತ ಸ್ಟಿಕರ್ ಹಾಕಿರುವ ಮನುಷ್ಯ, ಅತಿ ಜಾಗರೂಕತೆಯಿಂದ ಸ್ಕೂಟರ್ ಚಲಾಯಿಸುತ್ತಿರುವ ಮಹಿಳೆ , ಹಳ್ಳಿಯಿಂದ ಬಂದರೂ, ನಗರದ ಹುಡುಗಿಯರ ಜೊತೆ ಪೈಪೋಟಿ ನೀಡಲು ಅವರಂತೆ ಕಾಣಲು ಹೆಣಗುತ್ತಿರುವ ಹುಡುಗಿ. ಫೋನ್ ಅಲ್ಲೇ ಜೀವನ ಅಡಗಿದೆಯೇನೋ ಎಂಬಂತೆ ಕಣ್ಣು ಮಿಟುಕಿಸದೆ ಅದನ್ನೇ ದಿಟ್ಟಿಸುತ್ತ ಅಡ್ಡಾದಿಡ್ಡಿ ನಡೆಯುತ್ತಿರುವ ಯುವತಿಯರು. ಸ್ವಲ್ಪ ಜಾಗ ಸಿಕ್ಕಿದರೆ ಇಗೋ ನುಗ್ಗಿಬಿಟ್ಟೆ ಎಂಬಂತೆ ಕಾಯುತ್ತಿರುವ ಆಟೋಗಳು. ಜೀವನದ ವಿರಹಗಳನ್ನೆಲ್ಲ ಕಾರಿನಲ್ಲಿ ಗೀಚಿರುವ ಭಗ್ನ ಪ್ರೇಮಿ ಚಾಲಕರು ಮತ್ತು ಮುತ್ತಿರುವ ಗಾಡಿಗಳ ನಡುವೆ ನುಸುಳಿ ನುಗ್ಗಿ ಬರುವ ಭಿಕ್ಷುಕರು. ಎಷ್ಟೊಂದು ಜೀವನಗಳು.

ಭಿಕ್ಷುಕರ ಪಡೆಗೆ ಹೊಸ ಸೇರ್ಪಡೆ ಈತ. ನೋಡಲು ಮುಸಲ್ಮಾನನಂತಿದ್ದಾನೆ. ಕೊಳೆಯಾದ ಬಿಳಿ ಜುಬ್ಬಾ. ತಲೆ ಮೇಲೊಂದು ಚಿಕ್ಕ ಕಪ್ಪು ಟೊಪ್ಪಿ. ಸ್ವಲ್ಪ ಮೇಕೆ ಗಡ್ಡ. ನೀಲಿ ಬಣ್ಣದ ಚೆಕ್ಸ್ ಲುಂಗಿ. ಜೊತೆಯಲ್ಲಿ ಒಂದು ಗಾಲಿಚಕ್ರದ ಕುರ್ಚಿ, ಕುರ್ಚಿಯ ಮೇಲೆ ಸದಾ ನಗುತ್ತಿರುವಂತೆ ತೋರುವ ಸೊಟ್ಟಗೆ ಕೂತಿರುವ ಚಿಕ್ಕ ಬಾಲಕ. ಶಾಲೆಗೆ ಹೋಗಿದ್ದರೆ ೭ ನೆ ಕ್ಲಾಸ್ ಅಲ್ಲಿ ಇರಬಹುದಾದಷ್ಟು ದೊಡ್ಡವ. ಮೊದಲೆರಡು ದಿನ ಅನ್ನಿಸಿತ್ತು, ಯಾಕೋ ಆ ಹುಡುಗ ಬುದ್ಧಿಮಾಂದ್ಯನ ನಟನೆ ಮಾಡುತ್ತಿದೆ ಎಂದು. ಆದರೆ ಈಗೀಗ ದಿನಾ ಆ ಹುಡುಗನ ಮುಖದಲ್ಲಿ ಅದೇ ನಗು. ಅದೇ ಕಳೆ. ಅಲ್ಲಿ ನೆರೆದಿರುವ ಜನರಲ್ಲಿ ಸಂತೋಷವನ್ನು ಹುಡುಕಿದವನು ಆತನೊಬ್ಬನೇ ಅನ್ನುವಂಥ ನಗು. ಅಪ್ಪನ ಮುಖದಲ್ಲಿ ಅದೇ ವಿಷಾದ. ಭಿಕ್ಷೆಗೆ ಅನಿವಾರ್ಯವಾದ ವಿಷಾದ. ಇಂಥವರಿಗೆ ಮಕ್ಕಳು ಆದಾಯದ ಒಂದು ಮೂಲ ಅಷ್ಟೇ. ಇದೇ ಹುಡುಗ ಆರೋಗ್ಯವಂತನಾಗಿದ್ದರೆ ಆತನನ್ನು ಇನ್ನೊಂದು ಬೀದಿಯಲ್ಲಿ ಭಿಕ್ಷೆಗೆ ಇಳಿಸುತ್ತಿದ್ದ ಈ ಅಪ್ಪ. ಈಗ ಈತ ಅಂಗವಿಕಲ, ಈತನ ಮೂಲಕ ಭಿಕ್ಷೆ ಬೇಡುತ್ತಾನೆ. ಯಾಕೆ ಈ ಜನಗಳಿಗೆ ಅರ್ಥವಾಗುವುದಿಲ್ಲ, ಒಂದು ಸಲ ಸ್ವಲ್ಪ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಮುಂದಿನ ತಲೆಮಾರು ತನ್ನಿಂದ ತಾನೇ ಭಿಕ್ಷೆ ಬೇಡುವ ಸ್ಥಿತಿಯಿಂದ ಮೇಲಕ್ಕೆ ಬರುತ್ತದೆ ಎಂದು. ಆಥವಾ ಹಸಿವಿನ ದಾಹದ ತೀವ್ರತೆ ಭವಿಷ್ಯದ ಬಗ್ಗೆ ಯೋಚಿಸುವುದರಿಂದ ತಡೆಯುತ್ತದೋ? ಬಹುಶಃ ಹೊಟ್ಟೆ ತುಂಬಿದವ ಮಾತ್ರ ನಾಳೆಯ ಬಗ್ಗೆ ಯೋಚಿಸಬಲ್ಲ. ಹಸಿದ ಹೊಟ್ಟೆಗೆ ಇವತ್ತಿನ ಊಟದ ಬಗ್ಗೆ ಮಾತ್ರ ಚಿಂತೆಯಿರಬಹುದು. ಅಂದ ಹಾಗೆ ನನಗೆ ಕೊನೆಯ ಸಲ ಯಾವಾಗ ಹಸಿವಾಗಿದ್ದು? ನೆನಪಿಗೆ ಬರುತ್ತಿಲ್ಲ.

ಇವತ್ತು ಯಾಕೋ ಮಾಮೂಲಿ ದಿನಕ್ಕಿಂತ ಟ್ರಾಫಿಕ್ ತುಂಬಾ ಜಾಸ್ತಿ ಇದೆ. ಆಗಲೇ ಆಫೀಸ್ ತಲುಪಬೇಕಾದ ಸಮಯ ಮೀರುತ್ತಿದೆ. ಪಕ್ಕದ ಫುಟ್ ಪಾತ್ ಮಾತ್ರ ಖಾಲಿ ಉಳಿದಿದೆ. ಎಂದೂ ಫುಟ್ ಪಾತ್ ಮೇಲೆ ಬೈಕ್ ಓಡಿಸಿದವನಲ್ಲ ತಾನು. ಆದರೆ ಇಂದು ಬೇರೆ ದಾರಿ ಇಲ್ಲ. ಎಲ್ಲ ವಾಹನಗಳು ತಟಸ್ಥವಾಗಿ ನಿಂತಿರಬೇಕಾದರೆ ತಾನೊಬ್ಬನು ಮಾತ್ರ ಚಲಿಸುತ್ತಿರುವಾಗಿನ ಆನಂದವೇ ಬೇರೆ. ಕೆಲವೊಮ್ಮೆ ಕಾನೂನು ಮುರಿಯುವುದು ಕೂಡ ಆನಂದ ಕೊಡುತ್ತದೆ. ಬೈಕಿನ ವೇಗ ಹೆಚ್ಚುತ್ತಲೇ ಇರುವಾಗಲೇ ಎದುರಿಗೆ ಸಿಕ್ಕಿದ ಮರದ ಎಡವಿನಿಂದ ತೋರಿದ್ದು ಅದೇ ಮುಸ್ಲಿಂ ಭಿಕ್ಷುಕನ ಬಿಳಿ ಜುಬ್ಬಾ. ಶರವೇಗದಲ್ಲಿರುವ ಬೈಕ್ ಆಗಲೇ ತನ್ನ ಹತೋಟಿ ಮೀರಿ ನಡೆದಿದೆ. ಆತಂಕದಲ್ಲಿ ಹಾರ್ನ್, ಬ್ರೇಕ್ ಎಲ್ಲ ಅದುಮಿದವನಿಗೆ ಕೊನೆಯಲ್ಲಿ ಕೇಳಿದ್ದು ಆ ಭಿಕ್ಷುಕ ಕಿಟಾರನೆ ಚೀರಿದ ಮತ್ತು ಗಾಲಿ ಕುರ್ಚಿ ಮುರಿದ ಧ್ವನಿ. ಕೊನೆಯಲ್ಲಿ ನೋಡಿದ್ದು ನಗುಮುಖದ ಆ ಅಂಗವಿಕಲ ಹುಡುಗನ ಕಣ್ಣಲ್ಲಿದ್ದ ಆತಂಕ. ಆನಂತರ ಬರಿ ಕತ್ತಲು.

——————————————————————————————————————————————————————————————–

32677873-Lಮತ್ತೊಂದು ಬೆಳಗ್ಗು, ಮತ್ತೊಂದು ದಿನದ ಆರಂಭ, ಮತ್ತೆ ಮನೆಯವರ ಬೈಗುಳ, ಮತ್ತೆ ಛೀಮಾರಿ, ಮತ್ತೆ ಜನರ ತಿರಸ್ಕಾರ, ಕರುಣೆಯ ಮುಖ, ಮತ್ತೆ ಅದೇ ಗೂಡಿನಂಥ ಮನೆಯೊಳಗಿನ ಮನಸ್ಸುಗಳ ಆತಂಕ, ಮತ್ತದೇ ದಿಂಬಿನ ಕಮಟು ವಾಸನೆ, ಅದೇ ಧೂಳು, ಅದೇ ನಾಣ್ಯಗಳ ಝಣ ಝಣ, ಮಗನ ಅದೇ ಭಾವನೆರಹಿತ ನಗುವ ಮುಖ. ನನಗೂ ಸಾಕಾಗಿದೆ, ಬೇಸತ್ತಿದೆ ಈ ರೋಗಿ ಅಮ್ಮನ, ರಾಟಾಳಿ ಹೆಂಡತಿಯ ಬೈಗುಳ ಕೇಳಿ ಕೇಳಿ. ಅವರ ಪಾಲಿಗೆ ನಾನು ಸೋಮಾರಿ, ಕೆಲಸಕ್ಕೆ ಬಾರದವ. ನನಗೂ ಕೆಲವು ಸಲ ಹಾಗೆ ಅನ್ನಿಸುತ್ತದೆ ನನ್ನ ಬಗ್ಗೆ. ಆದರೆ ಇದರಲ್ಲಿ ನನ್ನದು ಮಾತ್ರ ತಪ್ಪೇ? ಬರಿ ಮಕ್ಕಳನ್ನು ಹುಟ್ಟಿಸಿ ಬಿಟ್ಟರೆ ಅಪ್ಪ ಅಮ್ಮನ ಕರ್ತವ್ಯ ಮುಗಿಯಿತೇ? ಯಾಕೆ ಸರಿಯಾದ ಶಿಕ್ಷಣ ಕೊಡಲಿಲ್ಲ ನನಗೆ? ಓದಿದವರನ್ನು ನಾನು ನೋಡಿಲ್ಲವೇ? ಅಂಥ ಕಷ್ಟಕರವಾದ ಕೆಲಸ ಮಾಡುವ ಹಾಗೇನು ತೋರುವುದಿಲ್ಲ ಅವರೆಲ್ಲ, ಆದರೂ ಕೈಯಲ್ಲಿ ಕಾಸು ಓಡಾಡುತ್ತಿರುತ್ತದೆ. ತಮ್ಮ ತಪ್ಪನ್ನು ಮುಚ್ಚಿಸಲು ನನ್ನ ಮೇಲೆ ಅಪವಾದ ಮಾಡುತ್ತಾರೆ ಈಗ. ಅದರ ಮೇಲೆ ಇವಳೊಬ್ಬಳು ಹೆಂಡತಿ. ಅವಳ ಬಾಳನ್ನು ನಾನು ಹಾಳು ಮಾಡಿದೆನೋ ನನ್ನ ನೆಮ್ಮದಿಯನ್ನು ಆಕೆ ಹಾಳು ಮಾಡಿದಳೊ ತಿಳಿಯದು. ನನ್ನಂಥ ನಿರುದ್ಯೋಗಿಗೆ ಮದುವೆ ಬೇಡವಿತ್ತು ನಿಜ. ಆದರೆ ಆಸೆಗಳು ತನಗೂ ಇರುತ್ತವೆ ಅಲ್ಲವೇ? ಆ ಹಕ್ಕು ಕೂಡ ತನ್ನಂಥವರಿಗೆ ಇಲ್ಲವೇ? ಮದುವೆಯ ನಂತರ ತಡಮಾಡದೆ ಹುಟ್ಟಿದವ ಈ ಮಗ. ಬಹುಶಃ ನನ್ನ ಮೇಲೆ ನನಗೆ ಹೆಮ್ಮೆಯಾದದ್ದು ಅದೊಂದೇ ದಿನ. ತನಗೆ ಕೂಡ ಸೃಷ್ಟಿಸುವ ಯೋಗ್ಯತೆ ಇದೆ ಎಂದು. ಈ ಹೆಮ್ಮೆ ಬಹಳ ದಿನ ಉಳಿಯಲಿಲ್ಲ. ನಿಧಾನಕ್ಕೆ ತಿಳಿದದ್ದು ನನ್ನ ಮಗ ತಾನೇ ಸ್ವಂತ ನಡೆಯಲಾರ, ಮಾತನಾಡಲಾರ, ನಗುವನ್ನು ಬಿಟ್ಟರೆ ಬೇರೆ ಭಾವನೆ ತೋರಿಸಲಾರ ಎಂದು. ಜಗತ್ತು ಆತನನ್ನು ಅಂಗವಿಕಲ ಎಂದು ಕರುಣೆಯ ಮುಖವಾಡ ಹೊತ್ತು ಗೇಲಿ ಮಾಡಿತು. ರೋಗಿ ಅಮ್ಮ, ಬೇಸತ್ತ ಹೆಂಡತಿಯ ಜೊತೆ ಈತ ಇನ್ನೊಬ್ಬ ಹಸಿವಿನ ಪಾಲುದಾರನಾದ. ಹೆಂಡತಿ ಯಾರದ್ದೋ ಮನೆ ಚಾಕರಿ ಮಾಡಿ ಅಲ್ಪ ಸ್ವಲ್ಪ ಸಂಪಾದಿಸುವ ಪ್ರಯತ್ನ ಮಾಡಿದಳು. ತಾನು ಕೂಡ ಯಾರು ಯಾರೋ ಹತ್ತಿರ ಕಾಡಿ ಬೇಡಿ ಚಿಕ್ಕ ಚಿಕ್ಕ ಕೂಲಿ ಕೆಲಸ ಮಾಡಲು ಪ್ರಯತ್ನಿಸಿದೆ. ಎಲ್ಲ ಕಡೆ ಎರಡು ತಪ್ಪಿದರೆ ಮೂರು ದಿನ ಅಷ್ಟೇ, ತೊಲಗಾಚೆ ಸೋಮಾರಿ ಅಂದು ದಬ್ಬುವವರೇ ಎಲ್ಲರು. ಎಲ್ಲಾ ಪ್ರಯತ್ನಿಸಿ ಸೋತಾಗಲೇ ಹೊಳೆದದ್ದು ಈ ಕೊನೆ ದಾರಿ. ಭಿಕ್ಷೆ ಬೇಡುವುದು. ಮಗನನ್ನ ಮುಂದಿಟ್ಟುಕೊಂಡು. ಹೇಗಿದ್ದರೂ ಈತ ಈಗ ನಿರುಪಯೋಗಿ. ಹೊಳೆದದ್ದೇ ತಡ, ಹತ್ತಿರದ ನಾಸಿರ್ ಭಾಯಿಯ ಗುಜರಿ ಅಂಗಡಿಯಿಂದ ತಕ್ಕ ಮಟ್ಟಿಗೆ ಸರಿಯಿರುವ ಒಂದು ಗಾಲಿ ಕುರ್ಚಿ ತರಿಸಿ, ಸರಿಯಾಗಿ ಹೆಂಡತಿ ಕೆಲಸಕ್ಕೆ ಹೊರಟ ಸಮಯದಲ್ಲಿ, ಮಗನನ್ನು ಕರೆದುಕೊಂಡು ಹೊರಟದ್ದು. ಸರಿಯಾಗಿ ಪರಿಚಯವಿರುವವರು ಜಾಸ್ತಿ ತಿರುಗದ, ಸಾಮಾನ್ಯವಾಗಿ ಮೇಲಂತಸ್ತಿನ ಜನರನ್ನು ಬೆಸೆಯುವ ದೊಡ್ಡ ರಸ್ತೆಯ ಸಿಗ್ನಲ್ ಅಲ್ಲಿ. ಮೊದಲ ದಿನ ಹೊರಗೆ ಬಂದ ಮಗನ ಕಣ್ಣಲ್ಲಿ ನಗುವಿನ ಜೊತೆ ಹೊಳಪಿತ್ತ? ತಿಳಿಯಲಿಲ್ಲ. ಆದರೆ ಮರುದಿನದಿಂದ ಹೆಚ್ಚೇನೂ ವ್ಯತ್ಯಾಸ ತೋರಲಿಲ್ಲ ಆತನ ಮುಖದಲ್ಲಿ. ಬರಿ ನಗುವಿನಂತಿರುವ ನಗು. ಆತನನ್ನು ನೋಡಿ ಕರುಣೆಯಿಂದ ಚಿಲ್ಲರೆ ಕೊಡುವ ಜನರ ಮುಖದಿಂದ ಮಾಸಿದಂಥ ನಗು. ಅಷ್ಟಕ್ಕೂ ಜನ ಯಾಕೆ ಭಿಕ್ಷೆ ಕೊಡುತ್ತಾರೆ? ಅವರು ಕೊಡುವ ಚಿಲ್ಲರೆ ನಾಣ್ಯದಿಂದ ನಮ್ಮ ಬದುಕು ಉದ್ಧಾರವಾಗುವುದಿಲ್ಲ ಎಂದು ಅವರಿಗೆ ಕೂಡ ಗೊತ್ತಿದೆ. ಬಹುಷಃ ಯಾವುದೋ ತಪ್ಪಿತಸ್ಥ ಭಾವನೆಯಿಂದ ಹೊರಬರಲು ಇರುವ ಸುಲಭ ಮತ್ತು ಅಗ್ಗದ ದಾರಿ ಇದೇ ಇರಬಹುದು ಇವರಿಗೆ. ಆದರೆ ೨ ಹೊತ್ತಿನ ಊಟಕ್ಕಂತೂ ಇದರಿಂದ ಧಕ್ಕೆಯಿಲ್ಲ. ಈ ಹಣ ಎಲ್ಲಿಂದ ಬಂತು ಎಂದು ಹೆಂಡತಿ ಕೇಳುತ್ತಿಲ್ಲ. ಯಾಕೆಂದರೆ ಆಕೆಗೆ ಹಣದ ಮೂಲ ಬೇಕಾಗಿಲ್ಲ. ಮೂಲ ತಿಳಿದ ದಿನ ತಾನು ಬೇರೆ ದಾರಿ ಹುಡುಕುವುದು ಅನಿವಾರ್ಯ.

ಇಂದು ಯಾಕೋ ಬಿಸಿಲಿನ ಝಳ ಜೋರಾಗಿದೆ. ಯಾಕೋ ತಲೆ ತಿರುಗಿದ ಅನುಭವ. ವಾಪಸ್ ಮನೆಗೆ ಹೋಗುವಂತಿಲ್ಲ. ಇಂದಿನ ಸಂಪಾದನೆ ಆಗಿಲ್ಲ ಇನ್ನು. ಇನ್ನೊಂದೆರಡು ಗಂಟೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ, ಆಮೇಲೆ ಮನೆಗೆ ಹೋದರಾಯಿತು. ಸದ್ಯಕ್ಕೆ ಅಲ್ಲೊಂದು ಮರದ ಕೆಳಗೆ ಸ್ವಲ್ಪ ವಿಶ್ರಾಂತಿ ಪಡೆದರಾಯಿತು ಎಂದು ಗಾಲಿ ಕುರ್ಚಿಯಲ್ಲಿರುವ ಮಗನನ್ನು ಕೂಡ ನೆರಳಿಗೆ ಎಳೆದು ಕೂತವನಿಗೆ ಎದ್ದೇಳಲು ಸಾಧ್ಯವಾಗುತ್ತಿಲ್ಲ. ಕಣ್ಣು ಕತ್ತಲೆ. ಅಂತೂ ಇಂತೂ ಗಾಲಿ ಕುರ್ಚಿಯ ಹಿಡಿಯ ಆಧಾರದಿಂದ ಮೇಲೆದ್ದವನೇ ಮನೆಗೆ ವಾಪಸಾಗುವ ನಿರ್ಧಾರ ಮಾಡಿ ಮರದ ನೆರಳಿನಿಂದ ಆಚೆ ಬಂದವನಿಗೆ ಕೇಳಿದ್ದು, ಅತಿ ಹತ್ತಿರದಿಂದ ಬಂದ ಕರ್ಕಶ ಹಾರ್ನ್ ಮತ್ತು ಬ್ರೇಕ್ ಶಬ್ದ. ಕ್ಷಣ ಮಾತ್ರದಲ್ಲಿ ಯಾವುದೋ ಭಾರಿ ವಸ್ತು ತನಗೆ ಬಂದು ಅಪ್ಪಳಿಸಿದಂಥ ಅನುಭವ. ನೆಲಕ್ಕೆ ಬಿದ್ದ ಮರುಕ್ಷಣದಲ್ಲಿ ಅರೆತೆರೆದ ಕಣ್ಣಿಗೆ ತೋರಿದ್ದು ದೂರದಲ್ಲಿ ಬಿದ್ದಿರುವ ಬೈಕ್ ಮತ್ತು ತುಂಡಾಗಿ ಬಿದ್ದಿರುವ ಗಾಲಿ ಕುರ್ಚಿ. ಮತ್ತೆ ತಲೆಸುತ್ತು. ಮತ್ತೆ ಮಂಪರು.

———————————————————————————————————————————————————————————————

ಹೊಸ ಬೆಳಗ್ಗೆ, ಮತ್ತೊಂದು ಕತ್ತಲೆಯಿಂದ ವಿಮುಕ್ತಿ . ಹೊಸ ದಿನ. ಹೊಸ ಹೊಸ ಸದ್ದುಗಳು. ಬಾಗಿಲ ಮೂಲಕ ತೋರುವ ಹೊರಗಿನ ಹೊಸ ಚಲಿಸುವ ಚಿತ್ರಗಳು. ಮಾತನಾಡಲು, ತನ್ನ ಭಾವನೆಗಳನ್ನು, ಬೇಡಿಕೆಗಳನ್ನು, ಆಸೆಗಳನ್ನು ವ್ಯಕ್ತ ಪಡಿಸಲು ಹೊಸ ಪ್ರಯತ್ನ. ಅಮ್ಮನ ಅಡಿಗೆಯ ಹೊಸ ಪರಿಮಳ. ದಿನ ದಿನವೂ ಹೊಸದೆನಿಸುವ ಹೊಸ ದಿನದ ಆರಂಭ. ನಿಜ ನನ್ನೆಲ್ಲ ದಿನಗಳು ಒಂದೇ ತೆರನಾದವು. ಆದರೆ ದಿನ ಬೆಳಗ್ಗಾದರೆ ಅದೇನೋ ಹುಮ್ಮಸ್ಸು. ಇವತ್ತು ಏನಾದರು ಬದಲಾಗಬಹುದು ತನ್ನ ಬಾಳಲ್ಲಿ ಎಂದು. ಎಲ್ಲರೂ ಮಾತನಾಡುತ್ತಾರೆ, ಸ್ವಲ್ಪ ಆವಶ್ಯಕ ವಿಷಯಗಳು, ಜಾಸ್ತಿ ಅನಾವಶ್ಯಕವಾದ ವಾಕ್ಯಗಳು. ಕೆಲವು ಆತ್ಮೀಯತೆಯ, ಹಲವು ಕೊಂಕು ಮಾತುಗಳು. ನನಗೆ ಆ ಸಾಮರ್ಥ್ಯವಿಲ್ಲ. ಏನೇ ಪ್ರಯತ್ನಿಸಿದರೂ ಬರೀ ಅಲ್ಪ ಸ್ವಲ್ಪ ಸ್ವರ ಹೊರಡುತ್ತದೆ ವಿನಃ ಶಬ್ದಗಳು ಹೊರ ಬರುವುದಿಲ್ಲ. ಕಾಲುಗಳಿಗೆ ನನ್ನ ದೇಹದ ಭಾರ ಹೊರುವ ಸಾಮರ್ಥ್ಯವಿಲ್ಲ. ಅಪ್ಪ ಅಮ್ಮನಿಗೆ ನನ್ನ ಸಾಕುವ ಸಾಮರ್ಥ್ಯವಿಲ್ಲ. ನನ್ನ ಕಾಲಿಗೆ ನಾನು ಹೊರೆ, ಅಪ್ಪ ಅಮ್ಮನಿಗೆ ನಾನು. ಆದರೆ ಇದರಲ್ಲಿ ನನ್ನ ತಪ್ಪು ಎಂದು ತೋರುವುದಿಲ್ಲ ನನಗೆ. ದೇವರನ್ನು ಬಯ್ಯಲು ಮನಸಿಲ್ಲ. ನೋಡದೆ ಇರುವವನನ್ನು, ಅಸ್ತಿತ್ವವನ್ನೇ ಸಾಬೀತು ಪಡಿಸದವನನ್ನು ಬಯ್ದು ಪ್ರಯೋಜನವಿಲ್ಲ. ಅಮ್ಮನಿಗೆ ನಾನು ಅಪ್ಪ ಮಾಡಿದ ಪಾಪದ ಫಲ. ಅಪ್ಪನಿಗೆ ನಾನು ಏನೂ ಆಗಿರದೆ ಇದ್ದವನು ಈಗ ತಾತ್ಕಾಲಿಕವಾಗಿ ಆದಾಯದ ಒಂದು ಮೂಲ. ನೋಡಿದವರು ಅವರವರ ವಿಚಾರಕ್ಕೆ ತಕ್ಕಂತೆ ಔಷಧಿ ಉಪಚಾರ ವಿವರಿಸಿ ಹೋಗುವರು. ಹಸಿದ ಹೊಟ್ಟೆ ತಣಿದ ಮೇಲೆಯೇ, ಔಷಧಿಗೆ ಜಾಗ ಅದರಲ್ಲಿ. ನನ್ನ ರೂಪ ಹೇಗಿದೆ ಎಂದು ನನಗೆ ಕೂಡ ತಿಳಿದಿಲ್ಲ ಸರಿಯಾಗಿ. ಎಲ್ಲೋ ಒಮ್ಮೊಮ್ಮೆ ನೋಡುವ ಪ್ರತಿಬಿಂಬದಲ್ಲಿ ತಿಳಿಯುತ್ತದೆ ತಾನು ಇತರರಂತಿಲ್ಲ ಎಂದು. ನನ್ನ ಮುಖ ನೋಡುವ ಜನ ಮತ್ತೆ ಮತ್ತೆ ಅದನ್ನು ಸಾಬೀತು ಪಡಿಸುತ್ತಾರೆ. ಆಗಾಗ ಮನೆಗೆ ಬರುವ ಚಿಕ್ಕಮ್ಮ ಯಾವಾಗೂ ಅಮ್ಮನನ್ನು ಸಮಾಧಾನಿಸುವಳು, ನೋಡು ನಿನ್ನ ಮಗನಿಗೆ ಏನಿಲ್ಲದಿದ್ದರೂ ಮುಖದಲ್ಲಿ ನಗುವಿದೆ ಎಂದು. ಅದನ್ನು ಕೇಳಿ ಅಮ್ಮ ಕೂಡ ವಿಷಾದದ ನಗು ನಗುತ್ತಾಳೆ. ನಕ್ಕಾಗ ಅಮ್ಮ ಚಂದ ತೋರುತ್ತಾಳೆ. ನಾನು ಕೂಡ ಮನಸ್ಸಿನಿಂದ ನಗುತ್ತೇನೆ. ಆದರೆ ಯಾರಿಗೂ ತಿಳಿಯುವುದಿಲ್ಲ. ಯಾಕೆಂದರೆ ನನ್ನ ಮುಖದಲ್ಲಿ ಯಾವಾಗಲು ನಗುವಿನ ಛಾಯೆಯಿರುತ್ತದೆ . ನನ್ನ ಲೋಕ ಈ ಮನೆಯೊಳಗೆಯೇ ಸೀಮಿತ. ಹೆಚ್ಚೆಂದರೆ ಬಾಗಿಲಲ್ಲಿ ಕೂತಾಗ ಹೊರಗಡೆ ಆಡುವ ಮಕ್ಕಳು ತೋರುತ್ತಾರೆ. ಅವರ ಆಟ ನೋಡುವುದರಲ್ಲೇ ಆಡಿದಂಥ ಸಂತೋಷ ಪಡೆಯುತ್ತೇನೆ.the-kindness-blog

ಕಳೆದ ಒಂದೆರಡು ವಾರದಿಂದ ನನ್ನ ದಿನಗಳು ಬದಲಾಗಿವೆ. ಒಂದು ದಿನ ಅಚಾನಕ್ಕಾಗಿ ಅಪ್ಪ, ಅಮ್ಮ ಕೆಲಸಕ್ಕೆ ಹೋದ ಸಮಯದಲ್ಲಿ ಒಂದು ಚಕ್ರವಿರುವ ಕುರ್ಚಿ ಮನೆಗೆ ತಂದ. ತಾನು ಅದನ್ನ ನೋಡುವುದರಲ್ಲಿ ಮಗ್ನನಾಗಿರುವಾಗಲೇ, ನನ್ನ ಎತ್ತಿ ಅದರ ಮೇಲಿರಿಸಿ ಮನೆಯಿಂದ ಹೊರಟೇ ಬಿಟ್ಟ. ಎಷ್ಟೋ ವರ್ಷಗಳ ನಂತರ ಹೊರ ಜಗತ್ತಿನ ಜೊತೆ ನನ್ನ ಮುಖಾಮುಖಿ ಆಗಿತ್ತು. ಎಲ್ಲ ಎಷ್ಟು ವಿಚಿತ್ರವಾಗಿದೆ. ದೊಡ್ಡ ದೊಡ್ಡ ಕಟ್ಟಡಗಳು, ವಾಹನ ಮುತ್ತಿದ ರಸ್ತೆಗಳು, ಅಲ್ಲಲ್ಲಿ ಹೆದರಿ ನಿಂತಂತಿರುವ ಗುಂಪು ಗುಂಪು ಜನಗಳು. ಎಲ್ಲರ ಮುಖದಲ್ಲೂ ಅವಸರ. ವಾಹನಗಳು ಜೀವ ಬಂದಂತೆ ಎಲ್ಲೆಡೆ ನುಗ್ಗುತ್ತಿವೆ, ಜೀವಂತ ಮನುಷ್ಯರು ನಿರ್ಜೀವ ಶವಗಳಂತೆ ಅವುಗಳ ಒಳಗೆ ಕೂತಿದ್ದಾರೆ. ಮನುಷ್ಯರ ಮಾತಿಗಿಂತ ಗಾಡಿಗಳ ಆರ್ಭಟ ಜಾಸ್ತಿಯಾಗಿದೆ. ಎಲ್ಲ ಗಾಡಿಗಳು ಗುಂಪಾಗಿ ನಿಂತಿರುವ ಕಡೆ ಅಪ್ಪ ನನ್ನನ್ನು ಕರೆದೊಯ್ದು ನಿಲ್ಲಿಸಿ, ಗಾಡಿಗಳ ಮುಂದೆ ಕೈ ಚಾಚ ತೊಡಗಿದ. ಹೊಳೆಯುವ ಸೂಟು ಬೂಟು ಧರಿಸಿದ ಮಂದಿ ತನ್ನೆಡೆ ಒಂದು ನೋಟ ಬೀರಿ ಅಪ್ಪನ ಕೈಗೆ ಚಿಲ್ಲರೆ ಹಾಕಿದ ಮೇಲೆ ತಿಳಿಯಿತು ಭಿಕ್ಷೆ ಬೇಡುವುದು ಅಂದರೆ ಇದೇನೇ ಅಂತ. ಅಮ್ಮ ಮನೆಯಲ್ಲಿ ಅಪ್ಪನಿಗೆ ಬೈಯುತ್ತಿದ್ದದ್ದು ಕೇಳಿದ್ದೆ, ನಿನ್ನ ಮದುವೆಯಾಗುವುದಕ್ಕಿಂತ ಭಿಕ್ಷೆ ಬೇಡಿ ಸಂಸಾರ ಮಾಡುವುದು ಚೆನ್ನ ಎಂದು. ಅಜ್ಜಿ ಹತ್ತಿರ ಭಿಕ್ಷೆ ಬೇಡುವುದು ಅಂದರೇನು ಎಂದು ಕೇಳಿದಾಗ ವಿವರಿಸಿ ಹೇಳಿದ್ದಳು. ಅಪ್ಪ ಅದನ್ನ ಕಾರ್ಯ ರೂಪಕ್ಕೆ ತಂದಿಳಿಸಿ ಬಿಟ್ಟಿದ್ದ. ಬೇಜಾರಿಲ್ಲ, ಆತನ ಎಲ್ಲ ಕಷ್ಟಗಳಿಗೂ ನಾನೇ ಕಾರಣ ಎಂಬ ಮುಖಭಾವ ಯಾವತ್ತು ಆತನ ಮುಖದಲ್ಲಿರುತ್ತದೆ. ಈ ರೂಪದಲ್ಲಾದರೂ ನಾನು ಆತನಿಗೆ ನೆರವಾದೆ ಅನ್ನುವ ನೆಮ್ಮದಿಯಾದರೂ ಇರಲಿ ನನಗೆ. ಇದೇ ಕಾರಣಕ್ಕಾದರೂ ಮನೆ ಹೊರಗಿನ ವಾಸ್ತವ ಪ್ರಪಂಚದ ಒಂದು ಮುಖವನ್ನಾದರೂ ತಾನು ನೋಡಬಹುದು.

ಇಂದು ಅಮ್ಮನ ಜೊತೆ ಜಗಳವಾಡಿ ಗಂಜಿ ಕೂಡ ಕುಡಿಯದೆ ಹೊರಟ ಅಪ್ಪನ ಮುಖ ಕಳೆಗುಂದಿದೆ. ಆಯಾಸ ಎದ್ದು ತೋರುತ್ತಿದೆ. ಬಂದು ಇನ್ನು ಅರ್ಧ ಗಂಟೆಯಾಗಿಲ್ಲ ಆಗಲೇ ಏದುಸಿರು ಬಿಡುತ್ತಿದ್ದಾನೆ. ಸ್ವಲ್ಪ ಹೊತ್ತು ನೆರಳಲ್ಲಿ ಕೂರುವ ಎಂದು ಅಲ್ಲೇ ಇದ್ದ ಮರದಡಿ ನನ್ನ ಕೂಡ ಕರೆದೊಯ್ದು ಆತ ಮರಕ್ಕೊರಗಿದ. ಆಗಲೇ ಆತನಿಗೆ ಮಂಪರು ನಿದ್ರೆ. ನಿದ್ರೆಯಲ್ಲಿ ಕೂಡ ಏನೋ ಬಡಬಡಿಸುತ್ತಿದ್ದಾನೆ. ತಾನು ಓಡಾಡುತ್ತಿರುವ ವಾಹನಗಳನ್ನೂ ನೋಡುತ್ತಾ ನನ್ನ ಕಡೆ ನೋಡಿ ತಮ್ಮೊಳಗೆ ಮಾತನಾಡುವವರು ಏನು ಮಾತನಾಡುತ್ತಿರಬಹುದು ಎಂದು ಯೋಚಿಸುತ್ತ ಸುಮ್ಮನೆ ಕೂತಿದ್ದೇನೆ. ಆಗಲೇ ಎಚ್ಚರವಾದ ಅಪ್ಪ ಏಳಲು ಕೂಡ ಕಷ್ಟ ಪಟ್ಟು ತನ್ನದೇ ಗಾಲಿ ಕುರ್ಚಿಯ ನೆರವಿಂದ ಅಂತೂ ಇಂತೂ ಎದ್ದು ನಿಂತ. ತಾನಲ್ಲದಿದ್ದರೂ ತನ್ನ ಗಾಲಿ ಕುರ್ಚಿಯಾದರೂ ಅಪ್ಪನ ನೆರವಿಗೆ ಬಂತಲ್ಲ ಎಂದು ಸಮಾಧಾನ ಪಡುತ್ತಿರುವಾಗಲೇ ತೋರಿದ್ದು ಫುಟ್ ಪಾತ್ ಮೇಲೆ ವೇಗವಾಗಿ ಬರುತ್ತಿರುವ ಬೈಕ್. ಅಪ್ಪನಿಗೆ ಸನ್ನೆಯ ಮೂಲಕ ಹೇಳಲು ಎಷ್ಟೇ ಪ್ರಯತ್ನಿಸಿದರೂ ಆತ ನೋಡುತ್ತಿಲ್ಲ. ಅಪ್ಪ ತನ್ನ ಗಾಲಿ ಕುರ್ಚಿಯನ್ನು ಮರದೆಡೆಯಿಂದ ಮುಂದೂಡುವುದು ಮತ್ತು ಬೈಕ್ ಬಂದು ಅಪ್ಪನಿಗೆ ಮತ್ತು ಗಾಲಿ ಕುರ್ಚಿಗೆ ಢಿಕ್ಕಿ ಹೊಡೆಯುವುದು ಕ್ಷಣ ಮಾತ್ರದಲ್ಲಿ ನಡೆದು ಹೋದವು. ನೆಲಕ್ಕುರುಳಿದ ತನ್ನ ಮುಚ್ಚುತ್ತಿರುವ ಕಣ್ಣುಗಳಿಗೆ ಕೊನೆಗೆ ತೋರಿದ್ದು ನೀಲ ಆಕಾಶ ಮತ್ತು ಅಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರುವ ಒಂಟಿ ಬಿಳಿ ಹಕ್ಕಿ. ತುಂಬಾ ದಿನಗಳ ನಂತರ ಮನಸ್ಸಿಗೆ ತುಂಬಾ ಹಿತವಾಯಿತು.

———————————————————————————————————————————————————————————————

tumblr_n0nf7mw0PC1sw0e4co1_500ದೀರ್ಘ ನಿದ್ರೆಯಿಂದ ಯಾರೋ ಹೊಡೆದೆಬ್ಬಿಸಿದ ಹಾಗಂತಾಗಿ ಎದ್ದು ನೋಡಲು ಸುತ್ತಲು ಕತ್ತಲೆ. ಹತ್ತಿರದಲ್ಲಿ ಒಂದು ಕನ್ನಡಿ ಮಾತ್ರ ಯಾವುದೊ ಬೆಳಕನ್ನು ಪ್ರತಿಫಲಿಸುವಂತೆ ಹೊಳೆಯುತ್ತಿದೆ. ಬೆಳಕು ಎಲ್ಲಿಂದಲೂ ಬರುತ್ತಿಲ್ಲ, ಪ್ರತಿಫಲನ ಎಲ್ಲಿಗೂ ಹೋಗುತ್ತಿಲ್ಲ. ಕನ್ನಡಿಯೆದುರು ಹೋಗಿ ನಿಂತವನಿಗೆ ತನ್ನ ಮುಖ ಕೂಡ ಸ್ಪಷ್ಟವಾಗಿ ತೋರುತ್ತಿಲ್ಲ. ಯಾರು ನಾನು? ಏನು ನನ್ನ ಅಸ್ತಿತ್ವ? ಸುಖದಲ್ಲೇ ಬೆಳೆದು ಜಗತ್ತಿನ ಬಗ್ಗೆ ವೈರಾಗ್ಯ ಬೆಳೆಸಿಕೊಂಡಿರುವ, ಆದರೂ ಅದರಲ್ಲೇ ಸಿಲುಕಿ ಒದ್ದಾಡುತ್ತಿರುವ ಯುವಕನೇ? ಬಡತನವನ್ನೇ ಜೀವನವನ್ನಾಗಿಸಿರುವ ಅದರಿಂದ ಹೊರಬರುವ ಯಾವ ಪ್ರಯತ್ನವನ್ನೂ ಮಾಡದೆ ಸದಾ ತನ್ನ ಸೋಲಿಗೆ ಇತರರನ್ನು ಹಳಿಯುವ ಆ ತಂದೆಯೇ? ಅಥವಾ ತನ್ನ ಯಾವ ತಪ್ಪು ಇಲ್ಲದೆ, ಜೀವನದಿದಂದ ವಿಮುಖವಾಗುವ ಎಲ್ಲ ಕಾರಣಗಳನ್ನು ಹೊಂದಿದ್ದರೂ ಜೀವನದೆಡೆ ಸಕಾರಾತ್ಮಕವಾದ ದೃಷ್ಟಿ ಹೊಂದಿರುವ ಅಂಗವಿಕಲ ಬಾಲಕನೆ? ಅಂಗವಿಕಲತೆ ತನ್ನ ದೇಹಕ್ಕಿದೆಯೋ ಅಥವಾ ಮನಸ್ಸಿಗೋ? ತನ್ನ ಮುಖ ಅವರೆಲ್ಲರ ಮುಖವನ್ನು ಹೋಲುತ್ತದೆಯೋ ಅಥವಾ ಅವರೆಲ್ಲರ ಮುಖದಲ್ಲಿ ತನ್ನ ಕಳೆಯಿದೆಯೋ?
ತಾನು ಹೊರ ಬಂದಿರುವುದು ಬರೀ ಕನಸಿನಿಂದವೇ ಅಥವಾ ಈ ಕ್ಷಣ ಯಾರದೋ ಕನಸಿನ ಒಂದು ಭಾಗವೇ?

7 Comments
error: ಕೃತಿಸ್ವಾಮ್ಯ ಸಂರಕ್ಷಿಸಲ್ಪಟ್ಟಿವೆ (Copyright Protected)